ಕೋಮು ಹಿಂಸೆಗೆ ಪ್ರಚೋದಿಸುವವರ ವಿರುದ್ದ ತಕ್ಷಣ ಕ್ರಮ ಕೈಗೊಳ್ಳಿ: ಗೃಹಸಚಿವರಿಗೆ ಸೂಚಿಸಿದ ಬಾಂಗ್ಲಾ ಪಿಎಂ | NaanuGauri

ಕೋಮು ಹಿಂಸೆಯನ್ನು ಪ್ರಚೋದಿಸುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ತನ್ನ ಗೃಹ ಸಚಿವರಿಗೆ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಮಂಗಳವಾರ ಸೂಚನೆ ನೀಡಿದ್ದಾರೆ. ಅವರು ದೇಶದ ಜನತೆಯೊಂದಿಗೆ ಸತ್ಯವನ್ನು ಪರಿಶೀಲಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಏನನ್ನೂ ನಂಬಬೇಡಿ ಎಂದು ವಿನಂತಿಸಿದ್ದಾರೆ.

ದುರ್ಗಾ ಪೂಜೆ ಆಚರಣೆಯ ಸಮಯ ಸಾಮಾಜಿಕ ಜಾಲತಾಣದಲ್ಲಿ ಧರ್ಮ ನಿಂದನೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಅಲ್ಲಿ ಕಳೆದ ಬುಧವಾರದಿಂದ ಕೋಮುಗಲಭೆ ಭುಗಿಲೆದ್ದಿತ್ತು. ಇದರ ನಂತರ ಹಿಂದೂ ದೇವಾಲಯಗಳ ಮೇಲೆ ದಾಳಿಗಳು ತೀವ್ರಗೊಂಡಿವೆ.

ಭಾನುವಾರ ತಡರಾತ್ರಿ, ಗುಂಪೊಂದು 66 ಮನೆಗಳಿಗೆ ಹಾನಿ ಮಾಡಿದ್ದು, ಕನಿಷ್ಠ 20 ಹಿಂದೂ ಧರ್ಮಿಯರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಬಾಂಗ್ಲಾದೇಶಕ್ಕಾಗಿ ಹೋರಾಡಿ ಜೈಲು ಸೇರಿದ್ದ ಪ್ರಧಾನಿ: RTI ಅಡಿಯಲ್ಲಿ ಮಾಹಿತಿ ಕೋರಿ ಅರ್ಜಿ

ಮಂಗಳವಾರ ನಡೆದ ವಾರದ ಕ್ಯಾಬಿನೆಟ್ ಸಭೆಯಲ್ಲಿ, ಕೋಮು ಹಿಂಸೆಯನ್ನು ಪ್ರಚೋದಿಸುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಪ್ರಧಾನ ಮಂತ್ರಿ ಹಸೀನಾ ಗೃಹ ಸಚಿವ ಅಸಾದುಝಮಾನ್ ಖಾನ್‌ಗೆ ಸೂಚಿಸಿದ್ದಾರೆ ಎಂದು ಕ್ಯಾಬಿನೆಟ್ ಕಾರ್ಯದರ್ಶಿ ಖಂಡ್ಕರ್ ಅನ್ವರುಲ್ ಇಸ್ಲಾಂ ಅವರು ಹೇಳಿದ್ದಾರೆ ಎಂದು ಡಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ತನ್ನ ಅಧಿಕೃತ ನಿವಾಸದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ಸೇರಿದ ಪ್ರಧಾನ ಮಂತ್ರಿ ಹಸೀನಾ, ದೇಶದ ಜನತೆ ಸತ್ಯವನ್ನು ಪರಿಶೀಲಿಸದೆ ಸಾಮಾಜಿಕ ಮಾಧ್ಯಮದಲ್ಲಿ ಏನನ್ನೂ ನಂಬಬೇಡಿ ಎಂದು ಮನವಿ ಮಾಡಿದರು.

ಜಾಗರೂಕರಾಗಿರಿ ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಗೃಹ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ ಎಂದು ಅನ್ವರುಲ್ ಇಸ್ಲಾಂ ಹೇಳಿದ್ದಾರೆ.

ದೇಶದ ಬೇರೆ ಬೇರೆ ಕಡೆ ನಡೆದ ಪ್ರತ್ಯೇಕ ದಾಳಿಯಲ್ಲಿ ಆರು ಹಿಂದೂಗಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಂತ್ರಸ್ತ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಪ್ರಧಾನಿ ಹಸೀನಾ ಘೋಷಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶ: ಮಕ್ಕಳ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ 17ರ ಯುವಕ ಸಾದತ್ ರಹಮಾನ್! 

ಈ ಮಧ್ಯೆ, ಆಡಳಿತಾರೂಢ ಅವಾಮಿ ಲೀಗ್ ಪಕ್ಷವು ‘ಸಾಮರಸ್ಯ ರ್‍ಯಾಲಿ’ಗಳನ್ನು ನಡೆಸುತ್ತಿದ್ದು, ಕೋಮುಗಲಭೆಗಳ ವಿರುದ್ಧ ಮಂಗಳವಾರ ದೇಶದಾದ್ಯಂತ ಶಾಂತಿ ಮೆರವಣಿಗೆಗಳನ್ನು ನಡೆಸುತ್ತಿದೆ.

“ಹಿಂದೂ ಸಹೋದರ ಸಹೋದರಿಯರೇ, ಭಯಪಡಬೇಡಿ. ಶೇಖ್ ಹಸೀನಾ ಮತ್ತು ಅವಾಮಿ ಲೀಗ್ ನಿಮ್ಮೊಂದಿಗಿದ್ದಾರೆ. ಶೇಖ್ ಹಸೀನಾ ಸರ್ಕಾರವು ಅಲ್ಪಸಂಖ್ಯಾತ ಸ್ನೇಹಿ ಸರ್ಕಾರವಾಗಿದೆ” ಎಂದು ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಒಬೈದುಲ್ ಖಾದರ್‌‌ ಅವರು ಪಕ್ಷದ ಕೇಂದ್ರ ಕಚೇರಿಯ ಮುಂದೆ ನಡೆದ ರ್‍ಯಾಲಿಯಲ್ಲಿ ಹೇಳಿದ್ದಾರೆ.

ಕೋಮುವಾದಿ ಶಕ್ತಿಗಳ ವಿರುದ್ಧ ಪ್ರತಿರೋಧವನ್ನು ಒಡ್ಡುವಂತೆ ಅವರು ತಮ್ಮ ಪಕ್ಷದ ಸದಸ್ಯರನ್ನು ಕೇಳಿದ್ದಾರೆ ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ. ಕೋಮುವಾದಿ ಶಕ್ತಿಗಳನ್ನು ಹೆಡೆಮುರಿ ಕಟ್ಟುವವರೆಗೂ ಆಡಳಿತ ಪಕ್ಷವು ಬೀದಿಯಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ. ದೇಶಾದ್ಯಂತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಈ ಕೋಮುವಾದಿಗಳಿಗೆ ಸರಿಯಾದ ಉತ್ತರ ನೀಡಲು ಸಿದ್ಧರಾಗಿದ್ದಾರೆ ಎಂದು ಒಬೈದುಲ್ ಖಾದರ್‌‌ ಹೇಳಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ.

ಇದನ್ನೂ ಓದಿ: ಬಾಂಗ್ಲಾದೇಶ: ಹಿಂದೂಗಳಿಗೆ ಸೇರಿದ 29 ಮನೆಗಳಿಗೆ ಬೆಂಕಿ, 66 ಮನೆಗಳು ಧ್ವಂಸ

LEAVE A REPLY

Please enter your comment!
Please enter your name here