Homeಮುಖಪುಟಇದು ಎಲ್ಲಾ ಮೇಲ್ಜಾತಿ ಜನರೂ ಪ್ರತಿಕ್ರಿಯಿಸಲೇಬೇಕಾದ ಸಮಯ, ಮಾಧ್ಯಮಗಳಲ್ಲಿರುವ ಮೇಲ್ಜಾತಿಯವರನ್ನೂ ಒಳಗೊಂಡು

ಇದು ಎಲ್ಲಾ ಮೇಲ್ಜಾತಿ ಜನರೂ ಪ್ರತಿಕ್ರಿಯಿಸಲೇಬೇಕಾದ ಸಮಯ, ಮಾಧ್ಯಮಗಳಲ್ಲಿರುವ ಮೇಲ್ಜಾತಿಯವರನ್ನೂ ಒಳಗೊಂಡು

ನಮ್ಮ ಮಾಧ್ಯಮಗಳು ನಾಗರಿಕ ಸಮಾಜದ ಭಾಗವಾಗಿವೆಯೇ? ಅವರ ಕಣ್ಣಿಗೆ ಇದೊಂದು ದೊಡ್ಡ ಪ್ರಕರಣವಾಗಿ ಕಾಣುತ್ತಿಲ್ಲ, ಇದಕ್ಕೆ ಕಾರಣ ಮಾಧ್ಯಮಗಳಲ್ಲಿ ಮೇಲ್ಜಾತಿ ಹಿನ್ನೆಲೆಯ ಮತ್ತು ಮೇಲ್ಜಾತಿ ಮನಸ್ಥಿತಿಯ ಜನರೇ ಹೆಚ್ಚಿರುವುದು ಆಗಿರಬಹುದು.

- Advertisement -
- Advertisement -

ಮನುಷ್ಯರು, ಮನುಷ್ಯತ್ವದ ಅಂಶವೇನಾದರೂ ಇದ್ದರೆ, ಪ್ರತಿಕ್ರಿಯಿಸಬೇಕಾದ ಘಟನೆಯಿದು ಎಂದೇ ಬರೆಯಬೇಕಿತ್ತು. ಆದರೆ ನಿರ್ದಿಷ್ಟವಾದ ಕಾರಣಕ್ಕಾಗಿ ಮೇಲ್ಜಾತಿ ಜನರು ಪ್ರತಿಕ್ರಿಯಿಸಬೇಕು ಎಂದು ಬರೆದಿದ್ದೇನೆ. ಹೈದ್ರಾಬಾದ್‌ನ ಅತ್ಯಾಚಾರ ಮತ್ತು ಕೊಲೆಯ ಘಟನೆಯಂತಹವು ಸಂಭವಿಸಿದಾಗ ಮೇಲ್ಜಾತಿಯ ಕುಟುಂಬಗಳಿಗೆ ಸೇರಿದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಾಗ ಮಾತ್ರ ಮಾಧ್ಯಮಗಳು ಮತ್ತು ಸಮಾಜದ ಕೆಲವು ವಲಯಗಳು ಪ್ರತಿಕ್ರಿಯಿಸುತ್ತವೆ. ಆದರೆ ದಮನಿತ ಸಮುದಾಯಗಳಿಗೆ ಸೇರಿದ ಹೆಣ್ಣುಮಕ್ಕಳ ಮೇಲೆ ಈ ರೀತಿಯ ಅಥವಾ ಇದಕ್ಕಿಂತ ಭೀಕರವಾದ ಘಟನೆಗಳು ನಡೆದಾಗ ಅವರೆಲ್ಲರೂ ಮೌನವಾಗಿರುತ್ತಾರೇಕೆ? ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಾರೆ.

ಚಿತ್ರಕೃಪೆ: ಎನ್‌ಡಿಟಿವಿ

ಆ ಸಂದರ್ಭ ನಿಜಕ್ಕೂ ತಳಮಳವನ್ನುಂಟು ಮಾಡುತ್ತದೆ. ಏಕೆಂದರೆ, ಆಗಲೂ ಒಬ್ಬ ಶೋಷಿತ ವ್ಯಕ್ತಿ (ಮಹಿಳೆಯಾಗಿರುವ ಕಾರಣದಿಂದ ಯಾವ ಜಾತಿ, ವರ್ಗಕ್ಕೆ ಸೇರಿದ್ದರೂ ಶೋಷಿತಳೇ) ತೀವ್ರ ಸ್ವರೂಪದ ದೌರ್ಜನ್ಯಕ್ಕೊಳಗಾಗಿರುತ್ತಾರೆ. ಕೆಲವೊಮ್ಮೆ ಕೊಲ್ಲಲ್ಪಟ್ಟಿರುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ಇದಕ್ಕೇಕೆ ಇಷ್ಟೊಂದು ಪ್ರತಿಕ್ರಿಯಿಸುತ್ತೀರಿ ಎಂದು ಕೇಳುವುದು ಸತ್ತ ವ್ಯಕ್ತಿಗೆ ಅಪಮಾನ ಮಾಡಿದಂತೆ ಅನಿಸುತ್ತಿರುತ್ತದೆ.

ಇದನ್ನೂ ಓದಿ: ಹತ್ರಾಸ್ ಗ್ಯಾಂಗ್ ರೇಪ್ ಕೇಸ್: ಸಾಮಾಜಿಕ ಮಾಧ್ಯಮಗಳಲ್ಲಿ ಸ್ಫೋಟಗೊಂಡ ಆಕ್ರೋಶ

ಆದರೆ, ಈಗ ನಮ್ಮ ಒಬ್ಬ ಸೋದರಿ ಕೊಲ್ಲಲ್ಪಟ್ಟಿದ್ದಾಳೆ. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಭೀಕರವಾಗಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದಾಳೆ. ಆಕೆ ಅತ್ಯಂತ ಶೋಷಿತ ದಲಿತ ಸಮುದಾಯಕ್ಕೆ ಸೇರಿದ್ದರಿಂದಲೂ ಈ ಅತ್ಯಾಚಾರ ಮತ್ತು ಕೊಲೆ ನಡೆದಿದೆ. ಇದಾದ ನಂತರ ಎನ್‌ಕೌಂಟರ್‌ಗಳ ಮಾತಿರಲಿ (ಈ ಪ್ರಕರಣದ ಆರೋಪಿಗಳನ್ನೂ ಎನ್‌ಕೌಂಟರ್ ಮಾಡಬಾರದು, ಅವರಿಗೂ ಸಹಜ ನ್ಯಾಯಪ್ರಕ್ರಿಯೆಯೇ ನಡೆಯಬೇಕು, ಆ ಮಾತು ಬೇರೆ) ಪ್ರಕರಣದ ಬಲಿಪಶುವಿನ ಕುಟುಂಬದ ಮೇಲೆ ವ್ಯವಸ್ಥೆಯ ದೌರ್ಜನ್ಯ ಮುಂದುವರೆದಿದೆ. ಆ ಕುಟುಂಬದ ಕುಡಿಯ ಅಂತ್ಯಸಂಸ್ಕಾರವೂ ಗೌರವಯುತವಾಗಿ ನಡೆದಿಲ್ಲ. ಇವೆಲ್ಲಕ್ಕೂ ಕಾರಣ ಆಕೆ ದಲಿತ ಸಮುದಾಯಕ್ಕೆ ಸೇರಿದವಳು ಎಂಬುದಲ್ಲದೇ ಬೇರಿನ್ಯಾವ ಕಾರಣವಿದೆ?

ಕುಟುಂಬಸ್ಥರು ಮತ್ತು ಗ್ರಾಮಸ್ಥರು ಗೋಗರೆಯುತ್ತಿರುವುದು. ಚಿತ್ರಕೃಪೆ: ಎನ್‌ಡಿಟಿವಿ

ಅಂದ ಮೇಲೆ ಮನುಷ್ಯತ್ವ ಇರುವವರು, ಮಹಿಳೆಯರ ಮೇಲಿನ ಅತ್ಯಾಚಾರಗಳ ವಿರುದ್ಧ ಆಕ್ರೋಶಗೊಳ್ಳುವವರು ಈ ಸಂದರ್ಭದಲ್ಲಿ ಇನ್ನೂ ಗಟ್ಟಿಯಾಗಿ ದನಿಯೆತ್ತಬೇಕಿದೆ. ಈ ವಿಚಾರದಲ್ಲಿ ದೇಶಾದ್ಯಂತ ಇತರ ಪ್ರಕರಣಗಳಲ್ಲಿ ನಡೆದಂತಹದ್ದೇ ಅಥವಾ ಇನ್ನೂ ತೀವ್ರವಾದ – ಪ್ರತಿಭಟನೆಗಳು ನಡೆಯಬೇಕು. ಹಿಂದೆ ಆದಂತೆಯೇ ಮಹಿಳೆಯರ ಮೇಲಿನ, ದಲಿತ ಸಮುದಾಯದ ಮೇಲಿನ ದೌರ್ಜನ್ಯಗಳ ಕಾರಣಗಳ ಮೂಲದ ಶೋಧನೆ ನಡೆಯಬೇಕು ಹಾಗೂ ಎಲ್ಲಾ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ತಡೆಗೆ ಕ್ರಮಗಳ ಕುರಿತ ಚರ್ಚೆ ಇನ್ನೊಮ್ಮೆ ಮುನ್ನೆಲೆಗೆ ಬರಬೇಕು. ವಿಶೇಷವಾಗಿ ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ತಡೆಗೂ ಪ್ರಯತ್ನ ಆಗಬೇಕು.

ಈ ವಿಚಾರದಲ್ಲಿ ಮೇಲ್ಜಾತಿ ಹಿನ್ನೆಲೆಯವರು ಪ್ರಬಲವಾದ ದನಿಯನ್ನು ಹೊರಡಿಸದಿದ್ದರೆ ಅವರೂ ತಪ್ಪಿನಲ್ಲಿ ಭಾಗಿಯಾದಂತೆಯೇ ಆಗುತ್ತದೆ. ಇನ್ನೊಮ್ಮೆ ಮೇಲ್ಜಾತಿ ಅಥವಾ ಸ್ಥಿತಿವಂತ ಕುಟುಂಬಗಳ ಹೆಣ್ಣುಮಕ್ಕಳ ವಿಚಾರದಲ್ಲಿ ಮಾತ್ರ ದನಿಯೆತ್ತಿದರೆ ಅದಕ್ಕೂ ಒಂದು ಕಳಂಕ ಇದ್ದೇ ಇರುತ್ತದೆ. ಹಾಗೂ ನೀವು ಇಂತಹ ಸಂದರ್ಭದಲ್ಲಿ ಮಾತ್ರ ಏಕೆ ಗಟ್ಟಿದನಿ ಎತ್ತುತ್ತಿದ್ದೀರಿ? ಎಂಬ ಪ್ರಶ್ನೆ ಎದುರಾದರೆ ಆ ಪ್ರಶ್ನೆಗೆ ನೈತಿಕಬಲವೂ ಇರುತ್ತದೆ.

ಇದನ್ನೂ ಓದಿ: ದಲಿತ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರದ ಈ ಅಂಕಿ-ಅಂಶಗಳನ್ನು ನೋಡಿ: ನೀವೇ ಪ್ರಶ್ನಿಸಿಕೊಳ್ಳಿ

ಇದನ್ನು ದಲಿತ ಹೆಣ್ಣುಮಗಳ ಅತ್ಯಾಚಾರ ಮತ್ತು ಕೊಲೆಯೆಂಬ ಹಿನ್ನೆಲೆಯಲ್ಲಿ ನೋಡಬಾರದು, ಇದನ್ನೂ ಒಂದು ಮಹಿಳೆಯ ಮೇಲಾದ ದೌರ್ಜನ್ಯವೆಂಬಷ್ಟೇ ನೋಡಬೇಕು ಎಂಬ ವಾದ ಸಾಮಾನ್ಯವಾಗಿ ಬರುತ್ತದೆ. ಅವರು ಈ ಘಟನೆಯ ವಿಚಾರದಲ್ಲಿ ಒಂದು ಮೂಲಭೂತ ಸಂಗತಿಯನ್ನು ಮರೆಯುತ್ತಾರೆ. ಮಹಿಳೆಯಾದ ಕಾರಣಕ್ಕೆ ಅತ್ಯಾಚಾರ ಮತ್ತು ಕೊಲೆ ಆಗುತ್ತದೆಂಬುದು ನಿಜವೇ. ಆದರೆ ಅದನ್ನು ಹೊರತುಪಡಿಸಿದರೆ ಸ್ಥಿತಿವಂತ ಕುಟುಂಬದವರಿಗೆ ಆಗುವ ನೋವುಗಳಿಗೆ ಸಮಾಜದ ಆಯಕಟ್ಟಿನ ಜಾಗದಲ್ಲಿರುವವರು ಪ್ರತಿಕ್ರಿಯಿಸುವ ಬಗೆಯೇ ಬೇರೆ.

ಕುಟುಂಬದವರನ್ನು ಬಂಧನದಲ್ಲಿಟ್ಟಿರುವುದು. ಚಿತ್ರ ಕೃಪೆ: ಎನ್‌ಡಿಟಿವಿ

ಈ ಪ್ರಕರಣವನ್ನೇ ನೋಡಿ: ಸಾಮಾನ್ಯವಾಗಿ ಯಾರಾದರೂ ಬಲಿಪಶುವಾಗಿದ್ದರೆ ಅವರ ಕುಟುಂಬದ ಸದಸ್ಯರ ಜೊತೆ ಪೊಲೀಸರು ಹೇಗೆ ವರ್ತಿಸುತ್ತಾರೆ? ಅದರಲ್ಲೂ ಸಾಕಷ್ಟು ಸುದ್ದಿಯಾದ ಪ್ರಕರಣವಾಗಿದ್ದರೆ ಪೊಲೀಸರೇ ಎಲ್ಲಾ ವ್ಯವಸ್ಥೆಯನ್ನು ಆ ಕುಟುಂಬದವರು ಹೇಗೆ ಹೇಳುತ್ತಾರೋ ಹಾಗೆ ಮಾಡುತ್ತಾರೆ. ಇಲ್ಲಿ, ಕುಟುಂಬದ ಜನರಿಗೆ ಗೊತ್ತೇ ಇಲ್ಲದಂತೆ ತಾವೇ ಎತ್ತಿಕೊಂಡು ಹೋಗಿ ಶವವನ್ನು ಸುಟ್ಟು ಹಾಕಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಯುಪಿ ದಲಿತ ಯುವತಿ ಆಸ್ಪತ್ರೆಯಲ್ಲಿ ಸಾವು

ಇದು ಕಾನೂನು ಸುವ್ಯವಸ್ಥೆಯ ಸಮಸ್ಯೆ ಆಗುತ್ತದೆಂಬ ಕಾರಣಕ್ಕೆ ಹೀಗೆ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಸಮರ್ಥಿಸಿಕೊಳ್ಳಬಹುದು. ಅಂದರೆ ದಲಿತ ಸಮುದಾಯಕ್ಕೆ ಸೇರಿದ ಕುಟುಂಬವೊಂದು ತನ್ನ ಮಗಳ ಹತ್ಯೆಗೆ ಸಿಟ್ಟು ತೋರ್ಪಡಿಸಿ ಶೋಕ ವ್ಯಕ್ತಪಡಿಸಲೂ ಅವಕಾಶವಿರುವುದಿಲ್ಲ. ಅದನ್ನು ಕಾನೂನು ಸುವ್ಯವಸ್ಥೆಯ ಸಮಸ್ಯೆ ಎಂದು ಭಾವಿಸಲಾಗುತ್ತದೆ. ಮೇಲ್ಜಾತಿಯವರಾಗಿದ್ದರೆ, ಅವರ ಪರವಾಗಿ ಕಾನೂನುಬಾಹಿರವಾಗಿ ಪ್ರತೀಕಾರ ತೆಗೆದುಕೊಳ್ಳಲು ಸ್ವತಃ ಪೊಲೀಸ್ ಅಧಿಕಾರಿಗಳೇ ಸಿದ್ಧವಾಗಿರುತ್ತಾರೆ. ಇದು ದೇಶದ ವಾಸ್ತವ ಪರಿಸ್ಥಿತಿ. ಹೀಗಿರುವಾಗ ನಮ್ಮೆಲ್ಲರ ಪ್ರತಿಭಟನೆಯ ಅಗತ್ಯ ಹೆಚ್ಚಿರುವುದು ದುರ್ಬಲ ಸಮುದಾಯದವರಿಗೆ ಅಲ್ಲವೇ? ಅದರಲ್ಲಿ ಎಲ್ಲಾ ಜಾತಿಯ ಹೆಣ್ಣುಮಕ್ಕಳೂ ಬರುತ್ತಾರೆ. ಹೆಚ್ಚು ದುರ್ಬಲರಾದವರ ಪರವಾಗಿ ಹೆಚ್ಚು ಪ್ರಬಲವಾದ ದನಿಯೆತ್ತುವುದು ನಾಗರಿಕ ಸಮಾಜದ ಲಕ್ಷಣವಾಗಿರುತ್ತದೆ.

ಆದರೆ ನಮ್ಮ ಮಾಧ್ಯಮಗಳು ನಾಗರಿಕ ಸಮಾಜದ ಭಾಗವಾಗಿವೆಯೇ ಎಂಬ ಪ್ರಶ್ನೆ ಬರುತ್ತದೆ. ಅವರ ಕಣ್ಣಿಗೆ ಇದೊಂದು ದೊಡ್ಡ ಪ್ರಕರಣವಾಗಿ ಕಾಣುತ್ತಿಲ್ಲ. ಈ ಮಾಧ್ಯಮಗಳಲ್ಲಿ ಮೇಲ್ಜಾತಿ ಹಿನ್ನೆಲೆಯ ಮತ್ತು ಮೇಲ್ಜಾತಿ ಮನಸ್ಥಿತಿಯ ಜನರೇ ಹೆಚ್ಚಿರುವುದು ಇದಕ್ಕೆ ಕಾರಣವಿರಬಹುದು. ಈ ಘಟನೆಯು ಅವರಿಗೆ ನೋವುಂಟು ಮಾಡದಿರುವುದಕ್ಕೆ, ಘಟನೆಯಲ್ಲಿ ಬಲಿಯಾದವರೊಂದಿಗೆ ತಮ್ಮನ್ನು ಸಮೀಕರಿಸಿಕೊಂಡು ನೋಡಲಾಗದಿರುವುದಕ್ಕೆ ಅದೇ ಕಾರಣವಿರಬಹುದು. ಆದರೆ ಕನಿಷ್ಠ ಒಂದು ಪ್ರಜಾತಾಂತ್ರಿಕ ಪ್ರಜ್ಞೆಯಾದರೂ ಕೆಲಸ ಮಾಡಬೇಕಲ್ಲವೇ? ಅದೂ ಇಲ್ಲದಿದ್ದರೆ ಅದನ್ನು ಜರ್ನಲಿಸಂ ಎಂದು ಏಕೆ ಕರೆಯಲಾಗದು. ಈ ಸಂದರ್ಭದಲ್ಲಿ ದೇಶದ ಎಲ್ಲಾ ಮಾಧ್ಯಮ ಸಂಸ್ಥೆಗಳು ಈ ಘಟನೆಯನ್ನು ಹೆಚ್ಚೆಚ್ಚು ಪ್ರಚಾರಕ್ಕೆ ತರಲು ಶ್ರಮಿಸಿದಲ್ಲಿ ಅವರ ಪಾಪದಲ್ಲಿ ಸ್ವಲ್ಪವಾದರೂ ಕಡಿಮೆಯಾಗಬಹುದೇನೋ.

ಕೊನೆಯದಾಗಿ, ಈ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಬೇಕಾದ್ದು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವಿದೆಯೆಂಬ ಕಾರಣಕ್ಕಾಗಿರಬಾರದು. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇನೆ, ಗೂಂಡಾರಾಜ್‌ಗೆ ಅಂತ್ಯ ಹಾಡಿದ್ದೇನೆಂಬುದು ಬೊಗಳೆಯೆಂಬುದು ನಿಜ; ಅದಕ್ಕಾಗಿ ಖಂಡಿಸಬೇಕು. ಆದರೆ ಅದು ಬಿಜೆಪಿ ಮತ್ತು ಆರೆಸ್ಸೆಸ್ ಸರ್ಕಾರ ಎಂಬ ಏಕೈಕ ಕಾರಣಕ್ಕೆ ತೀವ್ರವಾಗಿ ವಿರೋಧಿಸಿದರೆ ಅದೂ ತಪ್ಪೇ. ಯಾವುದೇ ಸರ್ಕಾರವಿದ್ದರೂ ಇದರ ಹೊಣೆಗಾರಿಕೆಯನ್ನು ಅದು ಹೊರಬೇಕಾಗುತ್ತದೆ. ಆ ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರದ ವೈಫಲ್ಯವನ್ನು ಖಂಡಿಸಬೇಕು.

ಎಲ್ಲಾ ಹೆಣ್ಣುಮಕ್ಕಳ ಮತ್ತು ಎಲ್ಲಾ ಶೋಷಿತ ಸಮುದಾಯಗಳ ಪರವಾಗಿ ದೇಶದ ಎಲ್ಲಾ ಜನರೂ ದನಿಯೆತ್ತಲಿ. ಮೇಲ್ಜಾತಿಗಳಿಗೆ ಸೇರಿದ ಜನರು ಇನ್ನೂ ಗಟ್ಟಿಯಾದ ದನಿಯಲ್ಲಿ ಮಾತಾಡಲಿ. ಹತ್ರಾಸ್‌ನ ಈ ಘಟನೆಯು ದೇಶದ ಕಣ್ಣು, ಹೃದಯವನ್ನು ತೆರೆಸಲಿ.

– ವಾಸು.ಎಚ್.ವಿ

ವಿಡಿಯೋ ನೋಡಿ: 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...