ರಾಜ್ಯ ವಿಧಾನಮಂಡಲ ಅಂಗೀಕರಿಸಿದ ವಿಧೇಯಕಗಳ ಪೈಕಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ ಬದಲಿಗೆ ಮತಪತ್ರ ಬಳಕೆ ಕಡ್ಡಾಯಗೊಳಿಸುವ ‘2026ರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ’ ಹೊರತುಪಡಿಸಿ ಉಳಿದವುಗಳಿಗೆ ರಾಜ್ಯಪಾಲರು ಸಹಿ ಹಾಕಿರುವುದಾಗಿ ವರದಿಯಾಗಿದೆ.
ಮರ್ಯಾದೆಗೇಡು ಹತ್ಯೆ ತಡೆಯುವ ‘ಇವ ನಮ್ಮವ, ಇವ ನಮ್ಮವ’ ವಿಧೇಯಕ, ಶಿಕ್ಷಕರ ವರ್ಗಾವಣೆ ವೇಳೆ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಆದ್ಯತೆ ನೀಡುವ ವಿಧೇಯಕ, ಕರ್ನಾಟಕ ಪೊಲೀಸ್ ವಿಧೇಯಕ, ಮುನ್ಸಿಪಾಲಿಟಿ ಕಾನೂನು ತಿದ್ದುಪಡಿ ವಿಧೇಯಕ, ಕರ್ನಾಟಕ ಧನ ವಿನಿಯೋಗ ವಿಧೇಯಕ, ಶೈಕ್ಷಣಿಕ ಭೂಮಿಯನ್ನು ರಕ್ಷಿಸುವ ವಿಧೇಯಕ, ಕನಾಟಕ ವೃತ್ತಿ, ಕಸುಬು, ಅಜೀವಿಕೆಗಳು, ಉದ್ಯೋಗಗಳ ಮೇಲಿನ ತೆರಿಗೆ ವಿಧೇಯಕಗಳಿಗೆ ರಾಜ್ಯಪಾಲರ ಸಹಿ ಬಿದ್ದಿದೆ ಎಂದು ವರದಿಗಳು ಹೇಳಿವೆ.
ಚುನಾವಣೆಗಳಲ್ಲಿ ಮತಪತ್ರ ಬಳಸುವುದಕ್ಕೆ ಸಂಬಂಧಿಸಿದ ‘ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2026’ ರಾಜ್ಯಪಾಲರ ಪರಿಶೀಲನೆ ಹಂತದಲ್ಲಿದೆ ಎಂದಿವೆ.
ಗಮನಾರ್ಹವಾಗಿ, ಮರ್ಯಾದೆಗೇಡು ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ರೂಪಿಸಿದ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.


