Homeಕರ್ನಾಟಕಜಿಟಿಜಿಟಿ ಮಳೆಯ ನಡುವೆ ಮುಗಿಲು ಮುಟ್ಟಿದ ಜೈಭೀಮ್ ಘೋಷಣೆ: ಒಳಮೀಸಲಾತಿಗಾಗಿ ಹರಿದು ಬಂತು ಭೀಮಸಾಗರ

ಜಿಟಿಜಿಟಿ ಮಳೆಯ ನಡುವೆ ಮುಗಿಲು ಮುಟ್ಟಿದ ಜೈಭೀಮ್ ಘೋಷಣೆ: ಒಳಮೀಸಲಾತಿಗಾಗಿ ಹರಿದು ಬಂತು ಭೀಮಸಾಗರ

- Advertisement -
- Advertisement -

ಅದು ಮೂವತ್ತು ವರ್ಷಗಳ ಕೂಗು. ಸರ್ಕಾರಗಳು ಬಂದವು, ಸರ್ಕಾರಗಳು ಹೋದವು. ಪಕ್ಷಗಳು ಅಧಿಕಾರ ಪಡೆದವು, ಅಧಿಕಾರ ಕಳೆದುಕೊಂಡವು. ಕೊಟ್ಟ ಭರವಸೆಯನ್ನು ಯಾವ ಸರ್ಕಾರವೂ ಈಡೇರಿಸಲೇ ಇಲ್ಲ. ಜಸ್ಟೀಸ್‌ ಎ.ಜೆ.ಸದಾಶಿವ ಆಯೋಗದ ವರದಿ ಮಾತ್ರ ವಿಧಾನಸೌಧದಲ್ಲಿ ಧೂಳು ಹಿಡಿಯುತ್ತಿದೆ. ಅದನ್ನು ಕನಿಷ್ಠ ಸೌಜನ್ಯಕ್ಕಾದರೂ ತೆರೆದು ನೋಡಲಿಲ್ಲ. ಈಗ ಮತ್ತೆ ದಲಿತರು ಬೀದಿಗಿಳಿದಿದ್ದಾರೆ.

ಜನಸಂಖ್ಯೆಗನುಗುಣವಾಗಿ ಒಳಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಮತ್ತೆ ಹೋರಾಟದ ಕಾವು ಪಡೆದಿದೆ. ಸಾರ್ವಜನಿಕವಾಗಿ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ- ಜಸ್ಟೀಸ್ ಎ.ಜೆ.ಸದಾಶಿವ ಆಯೋಗವು ಪರಿಶಿಷ್ಟ ಜಾತಿಯಲ್ಲಿನ 101 ಉಪಪಂಗಡಗಳನ್ನು 4 ಗುಂಪುಗಳಾಗಿ ವರ್ಗೀಕರಿಸಿ, ಶೇ.15ರ ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಿದೆ. ಅದರಂತೆ ಶೇ. 33.4ರಷ್ಟಿರುವ ಎಡಗೈ(ಮಾದಿಗ) ಸಮುದಾಯಕ್ಕೆ ಶೇ. 6ರಷ್ಟು, ಶೇ. 32ರಷ್ಟಿರುವ ಬಲಗೈ (ಹೊಲೆಯ) ಸಮುದಾಯಕ್ಕೆ ಶೇ. 5ರಷ್ಟು, ಶೇ. 23.64ರಷ್ಟಿರುವ ಸ್ಪೃಶ್ಯ ಪರಿಶಿಷ್ಟರಿಗೆ ಶೇ. 3ರಷ್ಟು ಹಾಗೂ ಇತರೆ ಪರಿಶಿಷ್ಟರಿಗೆ ಶೇ. 1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ ಎನ್ನಲಾಗುತ್ತಿದೆ. ಈ ವರದಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕೆಂಬ ಕೂಗು ಮತ್ತೆ ಶುರುವಾಗಿದೆ.

ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಭಾನುವಾರ (ಡಿಸೆಂಬರ್‌ 11) ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಿದೆ. ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪಕ, ಹೋರಾಟಗಾರ ಹರಿಹರದ ಪ್ರೊ.ಬಿ. ಕೃಷ್ಣಪ್ಪ ಸ್ಮಾರಕದಿಂದ ಆರಂಭವಾದ ಪಾದಯಾತ್ರೆ ರಾಜಧಾನಿಯನ್ನು ತಲುಪಿದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ದಲಿತರು ಇಂದು ಜಮಾಯಿಸಿದ್ದರು.

ಕಳೆದೆರಡು ದಿನಗಳಿಂದಲೂ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಹಾಗೂ ಕಪ್ಪು ಸುರಿದ ಮೋಡ ಆವರಿಸಿದ್ದರೂ ಹೋರಾಟಗಾರರು ಯಾವುದಕ್ಕೂ ಅಂಜದೆ ಫ್ರೀಡಂ ಪಾರ್ಕ್‌ಗೆ ಬಂದು ಸೇರಿದರು. ಜೈ ಭೀಮ್‌ ಘೋಷಣೆ ಮೊಳಗಿತು. ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ಬಾಬು ಜಗಜೀವನರಾಮ್‌, ಪ್ರೊ.ಬಿ.ಕೃಷ್ಣಪ್ಪ ಅವರ ಭಾವಚಿತ್ರಗಳನ್ನು ಒಳಗೊಂಡ ನೀಲಿ ಭಾವುಟಗಳನ್ನು ಹಿಡಿದ ದಲಿತ ಶಕ್ತಿ ಸಾಗೋರೋಪಾದಿಯಲ್ಲಿ ಹರಿದುಬಂತು. ಸಂಚಾರಿ ವೇದಿಕೆಯನ್ನು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಮುಖ್ಯರಸ್ತೆಯ ಉದ್ದಕ್ಕೂ ಭೀಮ ಶಕ್ತಿ ಮೊಳಗಿತು.

ರಾಜ್ಯದ ಮೂಲೆಮೂಲೆಗಳಿಂದ ಬಂದ ಒಳಮೀಸಲಾತಿ ಹೋರಾಟಗಾರರು, ಸುರಿವ ಮಳೆಯಲ್ಲೇ ನಿಂತು ಹೋರಾಟಗಾರರ ಮಾತುಗಳನ್ನು ಆಲಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಭಟನಾ ಸ್ಥಳದಲ್ಲಿ ಇಂಟರ್‌ನೆಟ್ ನಿರ್ಬಂಧ ಹೇರಲಾಗಿತ್ತು.

ಹೋರಾಟಗಾರರು ಕಾಂಗ್ರೆಸ್, ಜೆಡಿಎಸ್‌, ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಮೂವತ್ತು ವರ್ಷಗಳ ನೋವು, ಮಾತುಗಳ ಮೂಲಕ ಬೆಂಕಿಯುಂಡೆಯಾಗಿ ಹೊರಬಿದ್ದವು. ಮುಂದಿನ ಚುನಾವಣೆಯಲ್ಲಿ ಈ ಮೂರು ಪಕ್ಷಗಳಿಗೆ ದಲಿತರು ಪಾಠ ಕಲಿಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದರು.

ಪಾದಯಾತ್ರೆಯ ನೇತೃತ್ವ ವಹಿಸಿದ್ದ ದಲಿತ ಮುಖಂಡರಾದ ಅಂಬಣ್ಣ ಅರೋಲಿಕರ್‌ ಹಾಡಿನ ಮೂಲಕ ರಾಜಕೀಯ ಪಕ್ಷಗಳನ್ನು ಟೀಕಿಸಿದರು. ಮೂರು ಪಕ್ಷಗಳ ನಾಯಕರುಗಳ ವಿರುದ್ಧ ಹಾಡಿನ ಮೂಲಕವೇ ವಾಗ್ದಾಳಿ ನಡೆಸಿದರು. “ನಾವು ಯಾವ ಪಕ್ಷದ ಪರವೂ ಇಲ್ಲ. ವಿರೋಧವೂ ಇಲ್ಲ. ನೋಟಿಗೆ ವೋಟು ಹಾಕುವುದಿಲ್ಲ. ಸದಾಶಿವ ಆಯೋಗದ ವರದಿಗೆ ವೋಟು ಹಾಕುತ್ತೇವೆ” ಎಂದು ಗುಡುಗಿದರು.

ದಲಿತ ಹೋರಾಟಗಾರ ವೆಂಕಟಗಿರಿಯಯ್ಯ ಮಾತನಾಡಿ, “ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ದಲಿತರು ಹೋರಾಟ ಮಾಡಿದರು. ಒಳಮೀಸಲಾತಿಗಾಗಿ ಆಯೋಗವನ್ನು ರಚನೆ ಮಾಡುವ ತೀರ್ಮಾನ ಮಾಡಲಾಯಿತು. ಸದಾಶಿವ ಆಯೋಗವು ನೀಡಿರುವ ವರದಿಯು ವೈಜ್ಞಾನಿಕವಾಗಿದೆ. ನಮ್ಮ ಪಾಲನ್ನು ಹಂಚಿಕೊಳ್ಳುವುದಕ್ಕೆ ಯಾರಿಂದಲೂ ಭಿಕ್ಷೆ ಬೇಡಬೇಕಿಲ್ಲ. ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಈಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಇವರಿಗೆ ಈ ಜನರ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಇದ್ದದ್ದೇ ನಿಜವಾದರೆ, ಒಳಮೀಸಲಾತಿ ಜಾರಿಗೆ ಕ್ರಮವಹಿಸಲಿ. ಆದರೆ ಈ ಮನುವಾದಿ ಪಕ್ಷಗಳು, ದಲಿತರನ್ನು ಒಡೆದು ಆಳಲು ಬಯಸುತ್ತಿವೆ” ಎಂದು ಆಕ್ರೋಶ ಹೊರಹಾಕಿದರು.

ದಲಿತ ಮುಖಂಡರಾದ ಮೋಹನ್ ರಾಜ್ ಮಾತನಾಡಿ, “ಒಳಮೀಸಲಾತಿ ಜಾರಿ ಜೊತೆಗೆ, ಪಿಟಿಸಿಎಲ್‌ ಕಾಯ್ದೆಯನ್ನು ಬಲಪಡಿಸಬೇಕು. ಲಿಂಗಾಯತ ಬೇಡ ಜಂಗಮರು ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪಡೆಯುತ್ತಿರುವುದನ್ನು ಸರ್ಕಾರ ಕೂಡಲೇ ತಡೆಯಬೇಕು” ಎಂದು ಆಗ್ರಹಿಸಿದರು.

ಹೋರಾಟಗಾರರ ಬಂಧನ; ಆಕ್ರೋಶ

ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಗಮಿಸಬೇಕೆಂದು ಹೋರಾಟಗಾರರು ಪಟ್ಟು ಹಿಡಿದರು. ಇಳಿಸಂಜೆಯವರೆಗೆ ತಾಳ್ಮೆ ವಹಿಸಿದ್ದ ದಲಿತರು ಅಂತಿಮವಾಗಿ ಅರೆಬೆತ್ತಲೆ ಮೆರವಣಿಗೆ ಮೂಲಕ ಸಿಎಂ ನಿವಾಸದತ್ತ ಹೊರಟಿದ್ದರು. ಆಗ ಪೊಲೀಸರು ಒಳಮೀಸಲಾತಿ ಹೋರಾಟಗಾರರನ್ನು ಬಂಧಿಸಿದ್ದಾರೆ. ಪೊಲೀಸ್ ನೂಕಾಟದಲ್ಲಿ ಹಿರಿಯ ಹೋರಾಟಗಾರ ಕರಿಯಪ್ಪ ಗುಡಿಮನಿಯವರ ತಲೆಗೆ ಪೆಟ್ಟಾಗಿದೆ. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿರುವ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿರಿ: ದಲಿತ ಮಹಿಳೆಗೆ ಥಳಿಸಿದ ಸಚಿವ ಸೋಮಣ್ಣರನ್ನು ಸಂಧಾನಕ್ಕೆ ಕಳಿಸ್ತೀರಾ? ಒಳಮೀಸಲಾತಿ ಹೋರಾಟಗಾರರ ಆಕ್ರೋಶ

ಕರಿಯಪ್ಪ ಗುಡಿಮನಿಯವರು ಪ್ರತಿಕ್ರಿಯಿಸಿ, “ಕೊಟ್ಟ ಮಾತು ತಪ್ಪಿದೆ ಬಿಜೆಪಿ ಸರ್ಕಾರ. ಸದಾಶಿವ ವರದಿ ಜಾರಿಗೆ ತರುತ್ತೇವೆ ಎಂದು ನಮ್ಮವರ ನಂಬಿಸಿ ಈಗ ಬೆನ್ನಿಗೆ ಚೂರಿ ಹಾಕಿದೆ. 10 ವರ್ಷದ ಹಿಂದೆ ಇದೇ ದಿನ ಬೆಳಗಾವಿಯಲ್ಲಿ ನಮ್ಮ ಮೇಲೆ ಲಾಠಿ ಛಾರ್ಜ್ ಮಾಡಲಾಗಿತ್ತು. ಇವತ್ತು ಮತ್ತೆ ನಮ್ಮ ಮೇಲೆ ದಾಳಿ ಮಾಡಿ ನಮ್ಮ ದನಿಯನ್ನು ತುಳಿಯಲು ನೋಡುತ್ತಿದೆ. ನನ್ನ ತಲೆಗೆ ಪಟ್ಟಾಗಿದೆ. ಆಸ್ಪತ್ರೆಯಲ್ಲಿದ್ದೇನೆ. ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ. ಹೋರಾಟ ನಿಲ್ಲಬಾರದು. ಸಮುದಾಯ ಸೋಲಬಾರದು. ನಾಳೆ ಇನ್ನೂ ಬಿರುಸಿನ ಹೋರಾಟ ನಡೆಯಲಿದೆ. ಎಲ್ಲಾ ಬಂಧುಗಳು ಗೆಲ್ಲುವ ಹೋರಾಟಕ್ಕೆ ಸಿದ್ಧರಾಗೋಣ” ಎಂದು ಕರೆ ನೀಡಿದ್ದಾರೆ.

ಅಂಬಣ್ಣ ಅರೋಲಿಕರ್‌ ಮಾತನಾಡಿ, “ಸಹಜ ಆಶಯವನ್ನು ಸರ್ಕಾರ ಗಾಳಿಗೆ ತೂರಿದೆ. ಚಳಿ, ಗಾಳಿ, ಮಳೆಯನ್ನು ಲೆಕ್ಕಿಸದೆ ಭೀಮ ಸೈನಿಕರು ರಸ್ತೆಯಲ್ಲಿದ್ದರು. ಮುಖ್ಯಮಂತ್ರಿಯವರು ಕನಿಷ್ಠ ಸೌಜನ್ಯದಿಂದ ನಮ್ಮೊಂದಿಗೆ ಮಾತನಾಡಬೇಕಿತ್ತು. ನಾವೇನು ಭಯೋತ್ಪಾದಕರಾ? ಭಾರತದ ನಿವಾಸಿಗಳಲ್ಲವಾ? ಪ್ರಜಾಪ್ರಭುತ್ವದ ಹಾದಿಯಲ್ಲಿ ನಾವು ನಡೆಯುತ್ತಿಲ್ಲವಾ? ನೀವು ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುತ್ತೀರಿ. ಮುಂದಿನ ಚುನಾವಣೆಯಲ್ಲಿ ಸೋಲುತ್ತೀರಿ, ಮೂಲೆಗುಂಪಾಗುತ್ತೀರಿ” ಎಂದು ಎಚ್ಚರಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...