Homeಅಂಕಣಗಳುನರಮೇಧದ ನೆನಪಿಗೆ ಸುಣ್ಣ ಬಣ್ಣ ಬಳಿಯುತ್ತಿರುವುದೇಕೆ?

ನರಮೇಧದ ನೆನಪಿಗೆ ಸುಣ್ಣ ಬಣ್ಣ ಬಳಿಯುತ್ತಿರುವುದೇಕೆ?

- Advertisement -
- Advertisement -

2019ನೇ ಇಸವಿ ಜಲಿಯನ್‌ವಾಲಾಬಾಗ್ ನರಮೇಧದ ನೂರನೇ ವರ್ಷಕ್ಕೆ ಸಾಕ್ಷಿಯಾಗಿತ್ತು. ಜಲಿಯನ್‌ವಾಲಾಬಾಗ್ ನರಮೇಧ ಒಂದು ದಬ್ಬಾಳಿಕೆ ಸರ್ಕಾರ ಪ್ರಜೆಗಳ ಮೇಲೆ ನಡೆಸಬಹುದಾದ ದೌರ್ಜನ್ಯದ ನೂರಾರು ಕಥೆಗಳ ಸಂಕೇತ. ಈ ಕಾರಣದಿಂದಲೇ ಪಂಜಾಬಿನ ಅಮೃತಸರದಲ್ಲಿರುವ ಈ ಪ್ರದೇಶವನ್ನು, ಆ ಕಹಿ ನೆನಪಿನ ಭಾಗವಾಗಿಯೇ ಉಳಿಸಿಕೊಂಡು ಬರಲಾಗಿತ್ತು. ಆದರೆ ಈಗ ಏಕಾಏಕಿ ಆ ಪ್ರದೇಶದ ಚಹರೆಯನ್ನೇ ಬದಲಿಸಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ. ಇದಕ್ಕೆ ಮೊದಲು ಒಂಚೂರು ಇತಿಹಾಸದತ್ತ ಹೊರಳುನೋಟ ಬೀರುವುದು ಮುಖ್ಯವಾದೀತು.

ಮೊದಲನೇ ಮಹಾಯುದ್ಧದ ಅಂತ್ಯವಾಗುತ್ತಿದ್ದ ಸಮಯ. ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ದಿನೇ ದಿನೇ ಏರುತ್ತಿತ್ತು. ಅನಿಬೆಸಂಟ್ ಮುಂದಾಳತ್ವದ ಹೋಮ್‌ರೂಲ್ ಚಳವಳಿ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಸಮಯ. ವಿಶ್ವಯುದ್ಧದ ಸಮಯದಲ್ಲಿ ಬ್ರಿಟನ್ ತನ್ನ ಯುದ್ಧಕ್ಕೆ ಬೇಕಾದವರನ್ನ ಸೇರಿಸಿಕೊಳ್ಳಲು ಹಾಗೂ ಯುದ್ಧಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಡಿಫೆನ್ಸ್ ಆಫ್ ಇಂಡಿಯಾ ಆಕ್ಟ್‌ಅನ್ನು ಜಾರಿಗೆ ತಂದಿತ್ತು. ಇಂತಹ ಕರಾಳ ಕಾಯ್ದೆಗಳು ಅಂದಿನ ಬ್ರಿಟಿಷ್ ಸರ್ಕಾರಕ್ಕೆ ಭಾರತದ ಜನರ ಮೇಲೆ ದಬ್ಬಾಳಿಕೆ ನಡೆಸಲು, ದೌರ್ಜನ್ಯವೆಸಗಲು ಫ್ರೀ ಹ್ಯಾಂಡ್ ನೀಡಿತ್ತು.

ಮೊದಲ ಮಹಾಯುದ್ಧ ಅಂತ್ಯ ಕಾಣುತ್ತಿದ್ದರಿಂದ ಹಾಗು ಡಿಫೆನ್ಸ್ ಆಫ್ ಇಂಡಿಯಾ ಆಕ್ಟ್ ಕೊನೆಗಾಣಬೇಕಿದ್ದರಿಂದ, ಬ್ರಿಟಿಷ್ ಸರ್ಕಾರ ಅದಕ್ಕೂ ಕರಾಳವಾದ ರೌಲತ್ ಕಾಯ್ದೆಯನ್ನು ಮಾರ್ಚ್ 1919ರಲ್ಲಿ ಜಾರಿ ಮಾಡುತ್ತದೆ. ದೇಶದ್ರೋಹವನ್ನು ನಿಗ್ರಹಿಸಲು ಜಾರಿ ಮಾಡಿದ ಈ ಕಾಯ್ದೆ ಎಷ್ಟು ಕಠೋರವಾಗಿತ್ತೆಂದರೆ, ಕ್ರಾಂತಿಕಾರಿಗಳು ಮತ್ತು ಅನಾರ್ಕಿಸ್ಟ್‌ಗಳು ಎಂದು ಯಾರನ್ನಾದರೂ ಗುರುತು ಮಾಡಿ, ಅವರು ಬ್ರಿಟಿಷ್ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ, ವಿಚಾರಣೆಯಿಲ್ಲದೆ ಬಂಧಿಸಿ ಜಾಮೀನಿಲ್ಲದೆ ಜೈಲಿನಲ್ಲಿ ಇಡಬಹುದಾಗಿತ್ತು. ಅವರ ಹಿಂದಿನ ಕೃತ್ಯಗಳ ಆಧಾರದ ಮೇಲೆ ಅಥವಾ ಅವರ ಹಿಂದಿನ ಸಹಚರ್ಯದ ಪ್ಯಾಟರ್ನ್‌ಗಳನ್ನು ಆಧರಿಸಿ ಶಿಕ್ಷೆ ನೀಡುವ ಅಧಿಕಾರ ಆ ಕಾನೂನಿನಲ್ಲಿ ಇತ್ತು. ರಿಲೇಟ್ ಮಾಡಿಕೊಳ್ಳುವುದಕ್ಕೆ ಅನುವಾಗಲು ಹೇಳಬಹುದಾದರೆ, ಇಂದು ನಮ್ಮ ದೇಶದಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಸೆಡಿಶನ್, ಯುಎಪಿಎ ಅಂತಹ ಕರಾಳ ಕಾನೂನುಗಳ ಪೂರ್ವಜ ಅದಾಗಿತ್ತು. ರಾಜಕೀಯ ವಿರೋಧಿಗಳಾದ ಯಾರ ಮೇಲಾದರೂ ಆರೋಪ ಹೊರಿಸಿ ದಮನ ಮಾಡುವಂತಹ ಕಾನೂನು ಅದಾಗಿತ್ತು. ಒಂದು ಪ್ರಭುತ್ವ ಅಥವಾ ಆಡಳಿತ ವ್ಯವಸ್ಥೆ ದಮನಕಾರಿಯಾಗಲು ಯಾವೆಲ್ಲಾ ಕಾನೂನು-ಕಾಯ್ದೆಗಳನ್ನು ತನ್ನ ಪ್ರಜೆಗಳ ಮೇಲೆಯೇ ಒಡ್ಡಬಹುದು ಎಂಬುದನ್ನು ರೌಲತ್ ಕಾಯ್ದೆ ಸದಾ ನೆನಪಿಸುತ್ತಿರುತ್ತದೆ.

ಈ ರೌಲತ್ ಕಾಯ್ದೆಯ ವಿರುದ್ಧ 1919ರ ಏಪ್ರಿಲ್‌ನಲ್ಲಿ ಭಾರತದ ಹಲವೆಡೆಗಳಲ್ಲಿ ಪ್ರತಿಭಟನೆಗಳಾಗುತ್ತವೆ. ಸತ್ಯಾಗ್ರಹದ ಮಾದರಿಯ ಈ ಪ್ರತಿಭಟನೆಗಳು ಸರ್ವೇಸಾಮಾನ್ಯವಾಗಿ ಶಾಂತಿಸ್ವರೂಪದವಾಗಿದ್ದವು. ಎಲ್ಲೋ ಕೆಲವೆಡೆ ಬ್ರಿಟಿಷ್ ಅಧಿಕಾರಿಗಳ ದಬ್ಬಾಳಿಕೆಯನ್ನು ವಿರೋಧಿಸಿ ನಡೆದ ವಿರಳ ಹಿಂಸಾತ್ಮಕ ಘಟನೆಗಳನ್ನು ಹೊರತುಪಡಿಸಿದರೆ ಅಂದಿನ ಸರ್ಕಾರದ ವಿರುದ್ಧ ಹಿಂಸೆಯನ್ನು ಪ್ರಚೋದಿಸುವ ಪ್ರತಿಭಟನೆಗಳು ಅವಾಗಿರಲಿಲ್ಲ ಎಂಬುದನ್ನು ಹಲವರು ದಾಖಲಿಸಿದ್ದಾರೆ. ಪಂಜಾಬ್‌ನಲ್ಲಿ ಇದೇ ಕಾರಣಕ್ಕೆ ಏಪ್ರಿಲ್ 10ರಂದು ಉದ್ವಿಗ್ನತೆ ಏರ್ಪಟ್ಟಿರುತ್ತದೆ. ಹಾಲ್ ಗೇಟ್ ಬ್ರಿಜ್ ಪ್ರದೇಶದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದವರ ಮೇಲೆ ಬ್ರಿಟಿಷ್ ಅಧಿಕಾರಿಗಳು ಗುಂಡು ಹಾರಿಸಿ ಹಲವರ ಸಾವಿಗೆ ಮತ್ತು ಗಾಯಗಳಿಗೆ ಕಾರಣರಾಗಿರುತ್ತಾರೆ.

ಈ ದೌರ್ಜನ್ಯ ಹಾಗೂ ರೌಲತ್ ಕಾಯ್ದೆಯ ವಿರುದ್ಧ ಪ್ರತಿಭಟಿಸಲು ಏಪ್ರಿಲ್ 13ರಂದು ಜಲಿಯನ್‌ವಾಲಾಬಾಗ್‌ನಲ್ಲಿ ಸುಮಾರು 2000ಕ್ಕೂ ಹೆಚ್ಚು ಸಾಮಾನ್ಯ ಜನ ಶಾಂತಿಯುತ ರೀತಿಯಲ್ಲಿ ನೆರೆದಿರುತ್ತಾರೆ. ಆಗ ಜನರಲ್ ಡೈಯರ್ ಏಕಾಏಕಿ ಶಸ್ತ್ರಸಜ್ಜಿತ ಪಡೆಯೊಂದಿಗೆ ಅಲ್ಲಿಗೆ ಬಂದು ನಿಶ್ಯಸ್ತ್ರರಾಗಿದ್ದ ಮತ್ತು ಶಾಂತಿಯುತ ಸಭೆ ನಡೆಸಿದ್ದ ಜನರ ಮೇಲೆ ಗುಂಡು ಹಾರಿಸಲು ಆದೇಶ ನೀಡುತ್ತಾನೆ. ಬಹಳ ಕಿರಿದಾಗಿದ್ದ ಪ್ರವೇಶ ಮಾರ್ಗದಿಂದ ತಪ್ಪಿಸಿಕೊಳ್ಳಲು ಕೂಡ ಅವಕಾಶ ನೀಡದೆ ಸಾವಿರಾರು ಜನರನ್ನು ಕೊಲ್ಲಲಾಗುತ್ತದೆ. ನಂತರ ಈ ಪ್ರಕರಣವನ್ನು ತನಿಖೆ ಮಾಡುವಂತೆ ನಾಟಕವಾಡಿ, ಬ್ರಿಟಿಷ್ ಸರ್ಕಾರದ ಮತ್ತು ಜನರಲ್ ಡೈಯರ್‌ನ ತಪ್ಪುಗಳನ್ನು ಮಾಫಿ ಮಾಡಲಾಗುತ್ತದೆ. ಭಾರತೀಯ ಜನರಿಗೆ ಆದ ಗಾಯಕ್ಕೆ ಉಪ್ಪು ಸವರಲಾಗುತ್ತದೆ. ತನಿಖೆ ಮಾಡಿದ ಹಂಟರ್ ಕಮಿಟಿ ಸೂಚಿಸಿದ ಮೃತಪಟ್ಟವರ ಸಂಖ್ಯೆಗಿಂತ ಹತ್ತಾರು ಪಟ್ಟು ಹೆಚ್ಚು ಜನರನ್ನು ಹತ್ಯೆ ಮಾಡಿದ್ದು ತಿಳಿದುಬರುತ್ತದೆ.

ಈ ದೌರ್ಜನ್ಯವನ್ನು ಅಂದು ಬಯಲಿಗೆಳೆದಿದ್ದು ಬ್ರಿಟಿಷ್ ಪ್ರಜೆ ಮತ್ತು ಪತ್ರಕರ್ತ ಬಿ.ಜಿ.ಹಾರ್ನಿಮನ್!

ಈ ಘಟನೆ ನಡೆದ ಮೇಲೆ ಇದನ್ನು ವರದಿ ಮಾಡದಂತೆ ಅಂದು ಪ್ರಚಲಿತವಾಗಿದ್ದ ಪ್ರೆಸ್ ಆಕ್ಟ್ ತಡೆ ಒಡ್ಡಿರುತ್ತದೆ. ಇಂತಹ ಸನ್ನಿವೇಶದಲ್ಲಿಯೂ ಅಂದು ಬಾಂಬೆ ಕ್ರಾನಿಕಲ್ ಪತ್ರಿಕೆಯ ಸಂಪಾದಕರಾಗಿದ್ದ ಬೆಂಜಮಿನ್ ಗಯ್ ಹಾರ್ನಿಮನ್, ಈ ನರಮೇಧವನ್ನು ಖಂಡಿಸಿ ವರದಿಯನ್ನು ಪ್ರಕಟಿಸಿತ್ತಾರೆ. ಇದರಿಂದ ಮುಂದೆ, ವರದಿ ಬರೆದ ವರದಿಗಾರನಿಗೆ ಎರಡು ವರ್ಷ ಶಿಕ್ಷೆಯಾಗುತ್ತದೆ. ಪತ್ರಿಕೆಯನ್ನು ನಿಲ್ಲಿಸಲಾಗುತ್ತದೆ. ಹಾರ್ನಿಮನ್ ಅವರನ್ನು ಬ್ರಿಟನ್‌ಗೆ ಗಡಿಪಾರು ಮಾಡಲಾಗುತ್ತದೆ.

ಹೀಗಿದ್ದೂ, ಹಾರ್ನಿಮನ್ ಅವರು ಈ ನರಮೇಧದ ಮತ್ತು ನಂತರ ನಡೆದ ಹಲವು ದಮನಿಸುವ ಘಟನೆಗಳ ಫೋಟೋಗಳನ್ನು ಕದ್ದು ಬ್ರಿಟನ್‌ಗೆ ತೆಗೆದುಕೊಂಡು ಹೋಗಿ, ಅಲ್ಲಿ ಈ ಘಟನೆಯ ಬಗ್ಗೆ ಡೈಲಿ ಹೆರಾಲ್ಡ್ ಪತ್ರಿಕೆಗೆ ಸುದೀರ್ಘ ವರದಿ ಮಾಡುತ್ತಾರೆ. 1920ರಲ್ಲಿ ’ಅಮೃತಸರ ಅಂಡ್ ಅವರ್ ಡ್ಯೂಟಿ ಟು ಇಂಡಿಯಾ’ ಎಂಬ ಪುಸ್ತಕ ಬರೆದು ಅದರಲ್ಲಿ ಬ್ರಿಟಿಷರ ದಮನಕಾರಿ ನೀತಿಗಳ ಬಗ್ಗೆ ವಿವರವಾಗಿ ಬರೆಯುವುದಲ್ಲದೆ, ಜಲಿಯನ್‌ವಾಲಾಬಾಗ್ ನರಮೇಧದ ಬಗ್ಗೆ ವಿವರಗಳನ್ನು ಕಟ್ಟಿಕೊಟ್ಟು ’ಡೈಯರಾರ್ಚಿ’ಯನ್ನು ಖಂಡಿಸುತ್ತಾರೆ. ಬ್ರಿಟಿಷ್ ಜನರ ಕರ್ತವ್ಯ ಏನು ಎಂಬದನ್ನೂ ನೆನಪಿಸುತ್ತಾರೆ.

ಬಿ.ಜಿ.ಹಾರ್ನಿಮನ್

ಇದೇ ಪುಸ್ತಕದಲ್ಲಿ ನರಮೇಧದ ನಂತರ ಹಂಟರ್ ಕಮಿಟಿಯ ಮುಂದೆ ವಿಚಾರಣೆಯಲ್ಲಿ ಭಾಗವಹಿಸುವ ಜನರಲ್ ಡೈಯರ್ ಮಾತುಗಳನ್ನು ಲೇಖಕ ಹಾರ್ನಿಮನ್ ದಾಖಲಿಸುತ್ತಾರೆ. “ಸಾಧ್ಯವಿತ್ತು, ಗುಂಡು ಹಾರಿಸದೆ ಗುಂಪನ್ನು ಚದುರಿಸಬಹುದಿತ್ತು. ಆದರೆ ಅವರು ಹಿಂದಿರುಗಿ ಬಂದು, ನನ್ನನ್ನು ನೋಡಿ ನಕ್ಕು ನಾನು ಮೂರ್ಖನಂತೆ ಕಾಣುವಂತೆ ಮಾಡುತ್ತಿದ್ದರು” ಎಂದಿದ್ದನಂತೆ ಆತ. ಯಾವುದೇ ಸರ್ಕಾರದಲ್ಲಿ ಅಧಿಕಾರಿಗಳ-ಆಳುವವರ ದರ್ಪವನ್ನು ಸದಾ ನೆನಪಿಸುವ ಮತ್ತು ಎಚ್ಚರಿಸುವ ಘಟನೆ ಜನರಲ್ ಡೈಯರ್ ನಡೆಸಿದ ಜಲಿಯನ್‌ವಾಲಾಬಾಗ್ ಹತ್ಯಾಕಾಂಡ.

ಪ್ರತಿಭಟಿಸಿ ನೈಟ್‌ಹುಡ್ ಹಿಂದಿರುಗಿಸಿದ್ದ ರಬೀಂದ್ರನಾಥ ಟ್ಯಾಗೋರ್

ಹಂಟರ್ ಕಮಿಟಿಯ ಎದುರು ಸುಮಾರು 500 ಜನರನ್ನು ಹತ್ಯೆ ಮಾಡಿದ್ದಾಗಿ ಹಾಗೂ ಅದರ ಮೂರು ಪಟ್ಟು ಜನರನ್ನು ಗಾಯಗೊಳಿಸಿದ್ದಾಗಿ ಜನರಲ್ ಡೈಯರ್ ಒಪ್ಪಿಕೊಳ್ಳುತ್ತಾನೆ. ಆದರೆ ಇದರ ಬಗ್ಗೆ ತನಿಖೆ ಮಾಡಿದ ಅನಧಿಕೃತ ಏಜೆನ್ಸಿಗಳು ಇದರ ಎಷ್ಟೋ ಪಟ್ಟು ಹೆಚ್ಚು ಜನರು ಹತ್ಯೆಯಾಗಿರುವ ಬಗ್ಗೆ ಅಧ್ಯಯನ ಮಾಡಿದ್ದನ್ನು ಹಾರ್ನಿಮನ್ ತಮ್ಮ ಪುಸ್ತಕದಲ್ಲಿ ದಾಖಲಿಸುತ್ತಾರೆ.

ಈ ನರಮೇಧ ಅಂದಿನ ರಾಜಕೀಯ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾತ್ರ ಅಘಾತವನ್ನುಂಟುಮಾಡಲಿಲ್ಲ. ಬದಲಿಗೆ ಇಡೀ ದೇಶವೇ ಶೋಕದಲ್ಲಿ ಮುಳುಗುವಂತೆ ಮಾಡಿತ್ತು. ನೊಬೆಲ್ ಪ್ರಶಸ್ತಿ (ಸಾಹಿತ್ಯಕ್ಕೆ) ಪಡೆದ ಮೊದಲ ಭಾರತೀಯ ಎಂದು ಹೆಸರುವಾಸಿಯಾಗಿದ್ದ ಖ್ಯಾತ ಕವಿ ರಬೀಂದ್ರನಾಥ ಟ್ಯಾಗೋರ್, ಈ ನರಮೇಧವನ್ನು ಪ್ರತಿಭಟಿಸಿ, ಬ್ರಿಟಿಷ್ ಸರ್ಕಾರ ತಮಗೆ ನೀಡಿದ್ದ ’ನೈಟ್‌ಹುಡ್’ ಗೌರವವನ್ನು ಹಿಂದಿರುಗಿಸಿದ್ದು ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿಯುವ ನೆನಪು. ಇಂದಿಗೂ ವಿಶ್ವದಾದ್ಯಂತ ಸರ್ವಾಧಿಕಾರಿ ಧೋರಣೆಯ ಸರ್ಕಾರಗಳು ತನ್ನ ಪ್ರಜೆಗಳ ವಿರುದ್ಧವೇ ದಮನಕಾರಿ ನಡೆಗಳಿಗೆ ಮುಂದಾದಾಗ ಕಲಾವಿದರ, ಸಾಂಸ್ಕೃತಿಕ ವಕ್ತಾರರ ಜವಾಬ್ದಾರಿ ಏನಿರಬೇಕು ಎಂಬುದನ್ನು ಟ್ಯಾಗೋರ್ ಅವರ ಈ ನಡೆ ಎಚ್ಚರಿಸುತ್ತಿರುತ್ತದೆ.

ಅಂದಿನ ಭಾರತದ ವೈಸರಾಯ್ ಲಾರ್ಡ್ ಚೆಲ್ಮ್ಸ್‌ಫರ್ಡ್‌ಗೆ ಪತ್ರ ಬರೆದಿದ್ದ ಟ್ಯಾಗೋರ್ ಅವರು “ಜಲಿಯನ್‌ವಾಲಾಬಾಗ್ ದುರಂತ, ಭಾರತದಲ್ಲಿ ಬ್ರಿಟಿಷ್ ಸರ್ಕಾರದ ಪ್ರಜೆಗಳಾಗಿ ನಮ್ಮ ಅಸಹಾಯಕತೆಯನ್ನು ನಮ್ಮ ಮನಸ್ಸುಗಳಿಗೆ ಬಹಿರಂಗಗೊಳಿಸಿದೆ” ಎಂದದ್ದಲ್ಲದೆ ಈ ಘಟನೆ “ಇತ್ತೀಚಿನ ಮತ್ತು ಎಲ್ಲೋ ಅಜ್ಞಾತದಲ್ಲಿರುವ ಕೆಲವನ್ನು ಹೊರತುಪಡಿಸಿದರೆ, ನಾಗರಿಕ ಸರ್ಕಾರಗಳ ಇತಿಹಾಸದಲ್ಲಿಯೇ ಇಂತಹ ಇನ್ನೊಂದು ಘಟನೆ ನಡೆದಿರಲಿಲ್ಲ… ಉಸಿರು ಕಟ್ಟಿಸುವ ಮೌನದ ನಡುವೆ ಇದು ಭಾರತದ ಮೂಲೆ ಮೂಲೆಗೆ ತಲುಪುತ್ತಿದೆ” ಎಂದಿದ್ದರು.

ಈ ನೆನಪುಗಳು ಸದಾ ಜಾಗೃತವಾಗಿ ಏಕಿರಬೇಕು ಎಂಬುದಕ್ಕೆ ಹರ್ಯಾಣದಲ್ಲಿ ರೈತರ ಚಳವಳಿ ನಡೆಯುವಾಗ, ’ರೈತರ ಮೇಲೆ ಲಾಠಿ ಚಾರ್ಜ್ ಮಾಡಿ, ಬೇಕಿದ್ದರೆ ಬುರುಡೆ ಹೊಡೆಯಿರಿ’ ಎಂದು ಹೇಳಿಕೆ ಕೊಟ್ಟ ಐಎಎಸ್ ಅಧಿಕಾರಿಯ ಮಾತುಗಳನ್ನು ನೆನಪಿಸಿಕೊಳ್ಳಬೇಕು. ಹಾಗೆಯೇ ಇತ್ತೀಚೆಗೆ ಜಾಮೀನು ವಿಚಾರಣೆಗೆ ಬಂದ ದೆಹಲಿ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಪ್ರಕರಣವನ್ನು ನೋಡಿದರೆ ಇಂತಹ ’ವಸಾಹತುಶಾಹಿ ಕಾನೂನುಗಳ’ ವಾಸ್ತವವು ಬಿಚ್ಚಿಕೊಳ್ಳುತ್ತದೆ. ಯುಎಪಿಎ ಅಡಿಯಲ್ಲಿ ಬಂಧಿಸಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಬಹುತೇಕ ಸಿನಿಮೀಯವಾದವು, ಕಟ್ಟುಕಥೆಗಳು ಮತ್ತು ಮೀಡಿಯಾ ಟ್ರಯಲ್ ಇಂದ ಪ್ರೇರೇಪಿತವಾದವು ಎಂದು ಅವರ ಪರ ವಕೀಲ ಕೋರ್ಟ್‌ನಲ್ಲಿ ವಾದಿಸಿದ್ದರು. ಒಂದು ಪ್ರಭುತ್ವ ತನ್ನದೇ ಪ್ರಜೆಗಳ ಮೇಲೆ ಎಷ್ಟು ಕಠೋರವಾಗಬಲ್ಲದು ಎಂಬುದಕ್ಕೆ ಇತಿಹಾಸದಲ್ಲಿ ನಡೆದ ಹಲವು ಪ್ರಕರಣಗಳು ಎಚ್ಚರಿಸುತ್ತವೆ. ಆದುದರಿಂದ ಜಲಿಯನ್‌ವಾಲಾಬಾಗ್ ಘಟನೆಗಳು ನಡೆದ ಪ್ರದೇಶಗಳ ಚಹರೆಯನ್ನು ಆ ಸ್ಮೃತಿಗಳ ಜೊತೆಗೆ ಉಳಿಸಿಕೊಳ್ಳುವುದು ಮುಖ್ಯ.

ಆದರೆ ಇತ್ತೀಚೆಗೆ ಜಲಿಯನ್‌ವಾಲಾಬಾಗ್ ನರಮೇಧವನ್ನು ಮರೆಸುವಂತೆ ಆ ಪ್ರದೇಶವನ್ನು ಸುಂದರಗೊಳಿಸಿರುವ ವಿಡಿಯೋ ಅಂತರ್ಜಾಲದಲ್ಲಿ ಬಿಡುಗಡೆಯಾಗಿದೆ. ಯಾವ ಕಿರಿದಾದ ಪ್ರವೇಶದ ಹಾದಿಯಲ್ಲಿ ಜನರಲ್ ಡೈಯರ್ ನಡೆದು ಬಂದು ಗುಂಡಿನ ಸುರಿಮಳೆಗೈದನೋ, ಆ ಪ್ರದೇಶದ ಎರಡೂ ಬದಿಯ ಗೋಡೆಗಳಲ್ಲಿ ಸಂಬಂಧವಿಲ್ಲದ ಮ್ಯೂರಲ್ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ನೆಲಹಾಸನ್ನು ಹೊಳೆಯುವಂತೆ ಮಾಡಲಾಗಿದೆ. ಪ್ರವಾಸೋದ್ಯಮದ ಆಕರ್ಷಣೆಗೆ ಮಾಡಲಾಗಿರುವ ಈ ನವೀನೀಕರಣ, ಅಂದಿನ ದೌರ್ಜನ್ಯವನ್ನು ಮರೆಸುವ ಇರಾದೆ ಹೊಂದಿರಬಾರದಿತ್ತು. ಜರ್ಮನಿಯಂತಹ ದೇಶದಲ್ಲಿ ಹೋಲೋಕಾಸ್ಟ್ ದೌರ್ಜನ್ಯಗಳನ್ನು ನೆನಪಿಸುವಂತೆಯೇ ಅಲ್ಲಿನ ಸ್ಮಾರಕಗಳನ್ನು, ಪ್ರದೇಶಗಳನ್ನು ಉಳಿಸಿಕೊಳ್ಳಲಾಗಿದೆ. ಆ ಎಚ್ಚರ ನಮ್ಮ ದೇಶದಲ್ಲಿ ನಡೆದಿರುವ ಹತ್ಯಾಕಾಂಡಗಳು, ದೌರ್ಜನ್ಯಗಳ ಘಟನೆಗಳ ನೆನಪುಗಳ ಬಗ್ಗೆ ಇರಿಸಿಕೊಳ್ಳಬೇಕಿದೆ. ಅಂತಹ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು ಮುಂದಿನ ಪೀಳಿಗೆಯ ಎದೆಯಲ್ಲಿ ಮಾನವೀಯತೆಯ ಎಚ್ಚರವನ್ನು ಉಳಿಸುವಂತಹ ರೀತಿಯಲ್ಲಿ ಅಭಿವೃದ್ಧಿಗೊಂಡು ಉಳಿದುಕೊಳ್ಳಬೇಕಿದೆ.

– ಗುರುಪ್ರಸಾದ್ ಡಿ ಎನ್


ಇದನ್ನೂ ಓದಿ: ಬಡ – ಮಧ್ಯಮ ವರ್ಗವನ್ನು ಮತ್ತಷ್ಟು ಹಿಂಡಲಿರುವ ನ್ಯಾಷನಲ್ ಮಾನಿಟೈಸೇಶನ್ ಪೈಪ್‌ಲೈನ್ – NMP…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...