Homeಕರ್ನಾಟಕಯುವ ಜನವಾಹಿನಿಯ ಸಮ್ಮಿಲನ! : ನಿಖಿಲ್ ಕೋಲ್ಪೆಯವರ ಜನವಾಹಿನಿಯ ನೆನಪುಗಳು..

ಯುವ ಜನವಾಹಿನಿಯ ಸಮ್ಮಿಲನ! : ನಿಖಿಲ್ ಕೋಲ್ಪೆಯವರ ಜನವಾಹಿನಿಯ ನೆನಪುಗಳು..

- Advertisement -
- Advertisement -

ಜನವಾಹಿನಿಯ ನೆನಪುಗಳು: ಭಾಗ-5

ಕೃಪೆ: ’ಆರ್ಸೋ’ ಕೊಂಕಣಿ ಪತ್ರಿಕೆ

ಕನ್ನಡ ಮುದ್ರಣದ ಹೊಸ ಶಕೆಯನ್ನು ಆರಂಭಿಸಿದ್ದು ಬಾಸೆಲ್ ಮಿಷನ್. ಕನ್ನಡ, ತುಳು ಭಾಷೆಗಳಲ್ಲಿ ಕ್ರೈಸ್ತ ಸ್ತೋತ್ರಗಳು, ಮೊದಲ ಪದಕೋಶಗಳು, ವ್ಯಾಕರಣ ಗ್ರಂಥಗಳು ಮತ್ತು ಮೊದಲ ಕನ್ನಡ ಪತ್ರಿಕೆ ’ಮಂಗಳೂರ ಸಮಾಚಾರ’ವನ್ನು ಪ್ರಕಟಿಸಿದ್ದು ಕೂಡಾ ಬಾಸೆಲ್ ಮಿಷನ್ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವಂತದ್ದು. ರೆವರೆಂಡ್ ಕಿಟ್ಟೆಲ್ ಅವರ ಕನ್ನಡ ನಿಘಂಟಿನ ಬಗ್ಗೆ ಗೊತ್ತಿಲ್ಲದವರು ಕಡಿಮೆ.

ಮಂಗಳೂರಿನ ಬಲ್ಮಠದಲ್ಲಿ ಅಶೋಕವರ್ಧನ ಅವರ ’ಅತ್ರಿ ಬುಕ್ ಸೆಂಟರ್’ ಇತ್ತು. ಎಲ್ಲಾ ಪುಸ್ತಕ ಪ್ರೇಮಿಗಳಿಗೆ ಅದು ದೇವಾಲಯ. ಈಗದು ’ನವಕರ್ನಾಟಕ’ವಾಗಿದೆ. ಇದರ ಹಿಂಭಾಗದಲ್ಲಿ ಎತ್ತರದ ಕಟ್ಟಡಗಳ ಸಾಲುಗಳ ಹಿಂದೆ ಮೂರು ನಾಲ್ಕು ಕಡೆ ಪ್ರವೇಶ ಇರುವ ಒಂದು ಅತ್ಯಂತ ವಿಶಾಲವಾದ ಬಾಸೆಲ್ ಮಿಷನ್ ಕಂಪೌಂಡ್ ಇದೆ ಎಂದು ಅನೇಕರಿಗೆ ತಲೆಗೇ ಹೋಗದು. ಅನೇಕ ಶಿಕ್ಷಣ ಸಂಸ್ಥೆಗಳು ಅಲ್ಲಿ ಕಾರ್ಯಾಚರಿಸುತ್ತಿವೆ. ಕನ್ನಡದ ಮಟ್ಟಿಗೆ ಐತಿಹಾಸಿಕವಾದ ಕೆಲವು ಸಭಾಂಗಣಗಳಲ್ಲಿ ಒಂದರಲ್ಲಿ ’ಜನವಾಹಿನಿ’ಯ ಸಂದರ್ಶನ ಮತ್ತು ತರಬೇತಿ ಪ್ರಕ್ರಿಯೆ ನಡೆಯಿತೆಂಬುದು ವಿಶೇಷ.

ಒಂದು ಬೆಳಿಗ್ಗೆ ಅಲ್ಲಿ ಕಾಲೇಜು ವಿದ್ಯಾರ್ಥಿಗಳಂತೆ ಕಾಣುವ ನೂರಾರು ವಿದ್ಯಾರ್ಥಿಗಳು ನೆರೆದಿದ್ದರು. ನಾವು ಸಂಪಾದಕೀಯ ಕೋರ್ ಗ್ರೂಪಿಗೆ ಸಂಭ್ರಮ! ನಮ್ಮದೇ ಪಾರುಪತ್ಯ. ನಮ್ಮದೇ ನಾಯಕತ್ವದಲ್ಲಿ ಪತ್ರಿಕಾ ರಂಗದಲ್ಲಿ ಹೊಸದೇನನ್ನಾದರೂ ಮಾಡಲು ಹೊರಟಿದ್ದ ಯುವ ಶಕ್ತಿ! ನಾವು ಅವರನ್ನು ಗಮನಿಸುತ್ತಾ, ಸಲಹೆ ಸೂಚನೆಗಳನ್ನು ಕೊಡುತ್ತಾ ಓಡಾಡುತ್ತಿದ್ದೆವು. ವಿದ್ವಾಂಸ ಮತ್ತು ಒಂದು ರೀತಿಯಲ್ಲಿ ಕ್ರಾಂತಿಕಾರಿ ಪಾದ್ರಿ ಎಂದೇ ಗುರುತಿಸಲಾಗುತ್ತಿದ್ದ ವಿಲಿಯಂ ದಸಿಲ್ವಾ ಅವರ ಗಂಭೀರ ವ್ಯಕ್ತಿತ್ವಕ್ಕೆ ನಾವೇ ಒಂದು ರೀತಿಯ ಗೌರವ ತುಂಬಿದ ಭಾವದಿಂದ ಇದ್ದೆವು. ಹೀಗಿರುವಾಗ ಈ ಯುವಜನರು ಭಯಾತಂಕದಿಂದ ಇದ್ದದ್ದರಲ್ಲಿ ಅಚ್ಚರಿಯೇನಿರಲಿಲ್ಲ.

ಒಳಗೆ ಅವರು, ಆಡಳಿತ ನಿರ್ದೇಶಕ ಸ್ಯಾಮ್ಯುಯೆಲ್ ಸಿಕ್ವೇರಾ ಮತ್ತು ಸಂಪಾದಕ ಬಾಲಕೃಷ್ಣ ಗಟ್ಟಿ ಇದ್ದರು. ಆಗ ಮೊದಲು ಒಳಗೆ ನಾವು ಹುರಿದುಂಬಿಸಿ ಕಳಿಸಿದ್ದು ಒಳ್ಳೆಯ ಕ್ರಿಕೆಟಿಗನಾಗಿದ್ದ, ಚಿಕ್ಕ ದೇಹದ ಹುಡುಗ ಗಿರೀಶ್ ಬಜ್ಪೆಯನ್ನು- ಅದೂ ಓಪನಿಂಗ್ ಬ್ಯಾಟ್ಸ್‌ಮನ್ ಎಂದು ಛೇಡಿಸಿ!

ಮೂಲತಃ ಈ ಹುಡುಗ ಪಳಗಿದ್ದುದು ಡಿಟಿಪಿಯಲ್ಲಿ. ಹಿಂದೆ ನಾನು ಕೆಲಸ ಮಾಡುತ್ತಿದ್ದ ’ಕರಾವಳಿ ಅಲೆ’ ಸಂಜೆ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸ್ವಲ್ಪ ಇದ್ದವರು. ಸ್ವಲ್ಪ ಹೊತ್ತಿನಲ್ಲಿ ಅವರು ಹೊರಗೆ ಬಂದು ಬಾಯಗಲ ನಗುತ್ತಾ ಹೆಬ್ಬೆರಳು ಮೇಲೆತ್ತಿದಾಗ ನಮ್ಮಗೆಲ್ಲಾ ಖುಶಿ- ಸಂಪಾದಕೀಯ ವಿಭಾಗದ ಎರಡನೇ ತಂಡದ ಮೊದಲ ಆಯ್ಕೆ ನಡೆದಿತ್ತು. ಕೆಲವರು ಏನಾಯಿತು, ಏನು ಕೇಳಿದರು ಎಂದು ಉಳಿದವರು ವಿಚಾರಿಸುತ್ತಿದ್ದರು.

ವಾಸ್ತವಿಕವಾಗಿ ಒಳಗಿನ ಸಂದರ್ಶನ ಮನಃಶಾಸ್ತ್ರೀಯವಾಗಿ ನಡೆಯುತ್ತಿತ್ತೆಂದು ನಮಗೆ ಗೊತ್ತಿತ್ತು. ಅತ್ಯಂತ ಮೇಲ್ಮಟ್ಟದ ಬುದ್ಧಿವಂತಿಕೆಯ ಸಂದರ್ಶಕರು ಒಣಜ್ಞಾನಕ್ಕಿಂತ, ವಿದ್ಯಾರ್ಹತೆಗಿಂತ, ಅಭ್ಯರ್ಥಿಗಳ ವೈಚಾರಿಕ ನಿಲುವು, ಆಸಕ್ತಿ, ಮನೋಭಾವ, ವೃತ್ತಿನಿಷ್ಟೆ, ಕಲಿಯುವ ಗುಣ ಇತ್ಯಾದಿಗಳನ್ನು ಅಳೆಯುತ್ತಿದ್ದರು. ಬಹುಶಃ ಹೆಚ್ಚಿನ ನಿರ್ಧಾರ ಅಗುತ್ತಿದ್ದುದು ನೀವು ಇತ್ತೀಚೆಗೆ ಓದಿದ ಪುಸ್ತಕಗಳು ಯಾವುವು ಎಂಬ ಪ್ರಶ್ನೆಯಲ್ಲಿ! ಸಿಕ್ವೇರಾ ಮತ್ತು ದಸಿಲ್ವಾ ಇಬ್ಬರೂ ಮಹಾನ್ ಪುಸ್ತಕಗಳ ಸಂಗ್ರಹವನ್ನೇ ಇಟ್ಟುಕೊಂಡಿದ್ದರು. ಈ ಕುರಿತು ಮುಂದೆ ಪ್ರತ್ಯೇಕವಾಗಿ ಬರೆಯುತ್ತೇನೆ.

ಆ ದಿನವೇ ಎಲ್ಲರ ಸಂದರ್ಶನ ಮುಗಿಯಿತು. ಮೊದಲೇ ಒಂದು ರೀತಿಯ ಸೋಸುವಿಕೆ ನಡೆದಿದ್ದುದರಿಂದ ಬಹುತೇಕ ಎಲ್ಲರೂ ಆಯ್ಕೆಯಾಗಿದ್ದರು. ಇವರೆಲ್ಲರೂ ಮುಂದೆ ಹೇಗೆ ಬೆಳೆದರು, ಹೇಗೆ ಕಲಿತರು, ಮುಂದೆ ಏನಾದರು ಇತ್ಯಾದಿಗಳ ಕುರಿತೇ ಮುಂದೆ ಬರೆಯುವೆ.

ಸಂದರ್ಶನ ನಡೆದ ತಕ್ಷಣದಿಂದಲೇ ಪ್ರಾಥಮಿಕ ತರಬೇತಿ ಆರಂಭವಾಯಿತು. ಇದಕ್ಕೇ ಓರಿಯೆಂಟೇಶನ್ ಕ್ಯಾಂಪ್ ಎಂದೇ ಕರೆಯಬಹುದೇನೋ?! ’ಜನವಾಹಿನಿ’ ಅತ್ಯಂತ ಹೆಚ್ಚು ಮಹತ್ವ ಕೊಟ್ಟದ್ದು ಜಾತ್ಯತೀತ, ಪ್ರಜಾಪ್ರಭುತ್ವವಾದಿ ಸಂವಿಧಾನ ಬದ್ಧತೆ, ಜನಸಂಸ್ಕೃತಿಗೆ. ಈ ಕುರಿತು ಪತ್ರಕರ್ತರ ನಿಲುವು ಮತ್ತು ವಿಚಾರಗಳಲ್ಲಿ ಸ್ಪಷ್ಟತೆ ಇರಬೇಕು ಎಂಬುದೇ ಈ ತರಬೇತಿಯ ಉದ್ದೇಶ. ವಿಲಿಯಂ ದಸಿಲ್ವ ಮತ್ತು ಸಿಕ್ವೇರಾ ಅವರ ಜೊತೆಗೆ, ನಾವು ಕೋರ್ ಗ್ರೂಪಿನವರು ಸೇರಿಕೊಂಡು, ಹೊಸದಾಗಿ ಸೇರಿಕೊಂಡವರ ಕುರಿತು ಚರ್ಚೆ ನಡೆಸುವುದು, ಪ್ರಶ್ನೆಗಳನ್ನು ಎತ್ತುವುದು, ಸಂಶಯಗಳನ್ನು ನಿವಾರಿಸುವುದು ಇತ್ಯಾದಿಗಳ ಮೂಲಕ ಕಲಿಯುವುದು. ಇದೇ ತರಬೇತಿ ವಿಧಾನ. ಆಗ ನಾವು ಮುಟ್ಟದ ವಿಷಯಗಳಿಲ್ಲ. ರಾಜಕೀಯ ತತ್ವಗಳು, ಜಾತ್ಯತೀತತೆ, ಸಾಮಾಜಿಕ ಅಸಮಾನತೆ, ಧಾರ್ಮಿಕತೆ, ನಂಬಿಕೆ ಮತ್ತು ಮೂಢನಂಬಿಕೆ, ಸಾಮಾಜಿಕ ಆರೋಗ್ಯ ಮತ್ತು ಅನಾರೋಗ್ಯ, ಸರಕಾರಿ ಆಡಳಿತ ವ್ಯವಸ್ಥೆ, ಅಧಿಕಾರ ವಿಕೇಂದ್ರೀಕರಣ, ಜನರ ಸಮಸ್ಯೆಗಳು…ಹೀಗೆ ನಮ್ಮ ಚರ್ಚೆ ಸಾಗುತ್ತಿತ್ತು! ಪ್ರತಿಯೊಬ್ಬರೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ವಿಷಯಗಳನ್ನು ಹೀರಿಕೊಂಡರು. ಬಹುಶಃ ಹೀಗೊಂದು ರೀತಿಯ ವಿಶಾಲ ಮತ್ತು ದೀರ್ಘ ತರಬೇತಿ ಕನ್ನಡದ ಯಾವೊಂದು ಪತ್ರಿಕೆಯ ಆರಂಭಕ್ಕೆ ಮುನ್ನ ನಡೆದಿರಲಾರದೇನೋ! ಈ ಕಲಿಯುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಿತು.

ವಿಚಾರಗಳನ್ನು ಹೊಂದುವುದು ಒಂದು ವಿಷಯ. ಅದನ್ನು ಪತ್ರಿಕೆಗೆ ಇಳಿಸುವುದು ಮತ್ತು ಪತ್ರಿಕೆಯನ್ನು ನಡೆಸುವುದು ಬೇರೆಯೇ ವಿಷಯ. ಅದಕ್ಕೆ ತಾಂತ್ರಿಕ ತರಬೇತಿ ಮತ್ತು ಅಪಾರ ಶಿಸ್ತು ಮತ್ತು ಕಾರ್ಯವಿಧಾನಗಳ ತಿಳುವಳಿಕೆ ಬೇಕು. ಅದಕ್ಕಾಗಿ ಪತ್ರಿಕೆಯ ನೂತನ ಕಚೇರಿಗೆ ಬರುವಂತೆ ಎಲ್ಲರಿಗೂ ಹೇಳಲಾಯಿತು. ಪತ್ರಿಕೆ ಹೊರಬರುವ ಮೊದಲೇ ಎಲ್ಲರೂ ಸಂಬಳದ ಪಟ್ಟಿಯಲ್ಲಿ ಸೇರಿದ್ದರು. ಆ ಕುತೂಹಲಕಾರಿ ವಿವರಗಳನ್ನು ಮುಂದೆ ಹೇಳುವೆ!
*****

‘ಜನವಾಹಿನಿ’ ಮತ್ತು ಪುಸ್ತಕ ಪ್ರೇಮ

’ಜನವಾಹಿನಿ’ಯಲ್ಲಿದ್ದ ಅನೇಕರು ಪುಸ್ತಕ ಪ್ರೇಮಿಗಳು. ಅದಕ್ಕಾಗಿಯೇ ಒಂದು ಲೈಬ್ರರಿ ಸ್ಥಾಪಿಸಲಾಯಿತು. ಎನ್.ಎ.ಎಂ. ಇಸ್ಮಾಯಿಲ್ ಅಂತೂ ಆಗ ಅರ್ಧ ಸಂಬಳವನ್ನೇ ವೈಯಕ್ತಿಕವಾಗಿ ಪುಸ್ತಕ ಖರೀದಿಗೇ ಬಳಸುತ್ತಿದ್ದರು. ಎಲ್ಲಾ ಪತ್ರಿಕೆಗಳು ಬರುತ್ತಿದ್ದವು- ಮಂಗಳೂರಿನ ಕಾರ್‌ಸ್ಟ್ರೀಟ್‌ನ ಅಂಗಡಿಯಲ್ಲಿ ಮಾತ್ರ ಸಿಗುತ್ತಿದ್ದ ಟೆಲಿಗ್ರಾಫ್, ಸ್ಟೇಟ್ಸ್‌ಮನ್ ಮುಂತಾದ ಪತ್ರಿಕೆಗಳು ಕೂಡ.

ದಸಿಲ್ವಾ ಅವರು ಆಗ ಮಂಗಳೂರಿನ ಅರ್ಯಸಮಾಜ ರಸ್ತೆಯಲ್ಲಿ ಒಂದು ಫ್ಲ್ಯಾಟ್ ಹೊಂದಿದ್ದರು. ಅಪರೂಪದ ಪುಸ್ತಕಗಳ ಭಂಡಾರವೇ ಅಲ್ಲಿತ್ತು. ನೀವು ಯಾವ ಹೊತ್ತಿಗೆ ಬೇಕಾದರೂ ಅಲ್ಲಿಗೆ ಬಂದು ಓದಬಹುದು ಎಂದು ಹೇಳಿದ್ದರು. ಅವರು ಜರ್ಮನಿಗೆ ಹೋದರೂ, ಅವರ ಪುಸ್ತಕಗಳನ್ನು ಓದುವ ಭಾಗ್ಯ ನಮಗೆ ಇರುತ್ತಿತ್ತು.

ಸ್ಯಾಮುಯೆಲ್ ಸಿಕ್ವೇರಾ ಅವರಂತೂ ಹೊಸಹೊಸ ಪುಸ್ತಕಗಳನ್ನು ತಂದು, ಓದಿ ಎಂದು ಅವರಾಗಿಯೇ ನಮ್ಮ ಕೈಗೆ ಕೊಡುತ್ತಿದ್ದರು. ಎಡ್ವರ್ಡ್ ಸೈದ್ ಅವರ ‘ಮೆನ್ಯುಫ್ಯಾಕ್ಚರಿಂಗ್ ಕನ್ಸೆಂಟ್’, ಸ್ಯಾಮುಯೆಲ್ ಪಿ. ಹಂಟಿಂಗ್ಟನ್ ಅವರ ‘ಕ್ಲ್ಯಾಷ್ ಆಫ್ ಸಿವಿಲೈಸೇಷನ್ಸ್’ ಮುಂತಾದ ಮಹತ್ವದ ಪುಸ್ತಕಗಳನ್ನು ನಾನು ಓದಿದ್ದು ‘ಜನವಾಹಿನಿ’ಯಲ್ಲಿರುವಾಗಲೇ!

ಒಂದು ದಿನ ನಾನು ಜೆಫ್ರಿ ಅರ್ಚರ್ ಅವರ ‘ದಿ ಫೋರ್ತ್ ಎಸ್ಟೇಟ್’ ಎಂಬ ಕಾದಂಬರಿಯನ್ನು ಅತ್ರಿ ಬುಕ್ ಸೆಂಟರಿನಲ್ಲಿ ಕೊಂಡಿದ್ದೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕತೆಯದು. ಅದು ನನ್ನ ಕೈಯಲ್ಲಿದ್ದಾಗ ಸಿಕ್ವೇರಾ ಅವರ ಕಣ್ಣಿಗೆ ಬಿತ್ತು. ಎಲ್ಲಿಂದ. ಕೊಂಡದ್ದು ಎಂದೆ! ಈ ಸಂಬಳದಲ್ಲಿ ಯಾಕೆ ನೀವೇ ಹಣಕೊಟ್ಟು ಪುಸ್ತಕ ಕೊಳ್ಳುತ್ತೀರಿ?! ಒಳ್ಳೆಯ ಪುಸ್ತಕ ಇದ್ದರೆ ಕೊಂಡು ಬಿಲ್ ಕೊಡಿ. ಪುಸ್ತಕ ಲೈಬ್ರರಿಯಲ್ಲಿ ಇಡಿ. ಬೇರೆಯವರೂ ಓದಲಿ ಎಂದರು. ಸಂಸ್ಥೆಯಿಂದ ನನಗೆ ಹಣ ಪಾವತಿ ಆಯಿತು!

ಓದುವುದಕ್ಕೆ ನಮಗೆ ಸಿಗುತ್ತಿದ್ದ ಪ್ರೋತ್ಸಾಹಕ್ಕೆ ಇದೊಂದು ಉದಾಹರಣೆ. ನಮಗೆ ಅದೊಂದು ಕಾಲೇಜಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...