ಜನವಾಹಿನಿಯ ನೆನಪುಗಳು: 8
–ನಿಖಿಲ್ ಕೋಲ್ಪೆ
ಕೃಪೆ: ’ಆರ್ಸೋ’ ಕೊಂಕಣಿ ಪತ್ರಿಕೆ
ಪತ್ರಿಕೆ ಹೊರತರಲು ನಮ್ಮ ಎಲ್ಲಾ ತಯಾರಿಗಳು ಮುಗಿದಿದ್ದವು. ಆಗ ಅದು ನಮ್ಮ ಎಲ್ಲಾ ವಿಭಾಗಗಳ ಕನಸಿನ ಪತ್ರಿಕೆಯಾಗಿತ್ತು. ಸ್ಟ್ಯಾನ್ಲಿ ಸಿಕ್ವೇರಾರವರು ಪ್ರಸರಣ ವಿಭಾಗದ ಮುಖ್ಯಸ್ಥರಾಗಿ ತಮ್ಮೆಲ್ಲಾ ಕೆಲಸಗಳನ್ನು ಮುಗಿಸಿಬಿಟ್ಟಿದ್ದರು. ಕರಾವಳಿ ಮತ್ತು ಮಲೆನಾಡಿನ ಎಲ್ಲಾ ಭಾಗಗಳಲ್ಲಿ, ಪ್ರಮುಖ ಪಟ್ಟಣಗಳಲ್ಲಿ ನಮ್ಮ ಏಜೆಂಟರುಗಳನ್ನು- ಅಂದರೆ ಸ್ಥಳೀಯವಾಗಿ ಮತ್ತು ಒಳ ಪ್ರದೇಶಗಳಿಗೆ ಪತ್ರಿಕೆ ಹಂಚುವವರನ್ನು ನೇಮಿಸಬೇಕಿತ್ತು. ಇದೇನೂ ಸುಲಭದ ಕೆಲಸವಾಗಿರಲಿಲ್ಲ. (ಒಂದು ಉದಾಹರಣೆಗಾಗಿ ಬಾಕ್ಸ್ ನೋಡಿ)
ಸ್ಥಾಪಿತ ಪತ್ರಿಕೆಗಳ ಏಜೆಂಟರು ಹೊಸ ಪತ್ರಿಕೆಯ ವಿತರಣೆ ಮಾಡಲು ಒಪ್ಪಲಿಲ್ಲ. ಅವರಿಗೆ ಧಣಿಗಳನ್ನು ಕೋಪಪಡಿಸಲು ಭಯ. ಹೊಸಬರಿಗೆ ಹೊಸ ಪತ್ರಿಕೆಯನ್ನು ವಿತರಿಸಲು ಸಾಧ್ಯವೇ ಎಂಬ ಸಂಶಯ. ಕೆಲವರು ‘ಜನವಾಹಿನಿ’ ಪತ್ರಿಕೆ ಮೇಲಿನ ಅಭಿಮಾನದಿಂದ ಹೊಸದಾಗಿ ಮುಂದೆ ಬಂದರು. ಒಂದು ವಿತರಣಾ ಜಾಲ ಸಿದ್ಧವಾಗಿತ್ತು. ವಿತರಣೆಗೆ ವಾಹನ ವ್ಯವಸ್ಥೆಗಳು ಆಗಿದ್ದವು. ಇದೊಂದು ಮಹಾ ತಲೆಬಿಸಿ ಕೆಲಸ ಎಂದು ಬೇರೆ ಹೇಳಬೇಕಾಗಿಲ್ಲ! ಅದೇ ರೀತಿ ಜಾಹೀರಾತು ವಿಭಾಗದಲ್ಲಿ ಎನ್.ವಿ. ಪೌಲೋಸ್ ರವರ ಕೆಲಸವೂ ಸುಲಭದ್ದಾಗಿರಲಿಲ್ಲ! ಹಿತೈಷಿಗಳು ಶುಭ ಹಾರೈಕೆಯ ಜಾಹೀರಾತು ನೀಡಬಹುದಷ್ಟೆ! ಅದು ಸಾಕಾದೀತೆ? ಪ್ರಸಾರದ ಆಧಾರದಲ್ಲಿ ಜಾಹೀರಾತುಗಳು ಬರಬೇಕು.
ಮತ್ತೆ ಬೇರೆ ಬೇರೆ ವಿಭಾಗಗಳಲ್ಲಿ ಇದ್ದವರು ಸಿದ್ಧವಾಗಿಯೇ ಇದ್ದರು. ಒಂದು ನಿಶ್ಶಸ್ತ್ರ ಸೈನಿಕರ ಪಡೆ ಸಿದ್ಧವಾಗಿತ್ತು. ಇದೀಗ ಈ ಇಪ್ಪತ್ತು ವರ್ಷಗಳ ಬಳಿಕ ಆ ಎಲ್ಲರನ್ನೂ ನೆನಪಿಸಲು ನಾನು ಅಶಕ್ತ. ಕೆಲವರ ಮುಖ ನೆನಪಿದ್ದರೆ ಕೆಲವರ ಹೆಸರು ನೆನಪಿದೆ. ಕೆಲವು ನೆನಪುಗಳು ಕಲಸುಮೇಲೋಗರ!
ಅಂತೂ ಇಂತೂ ಬಹುತೇಕ ಎಲ್ಲರೂ ಕೇವಲ ಉದ್ಯೋಗ ಎಂಬ ಕಾರಣಕ್ಕೆ ಒಟ್ಟು ಸೇರಿರಲಿಲ್ಲ. ಜೀವನ ನಿರ್ವಹಣೆ ಒಂದು ನೆಪವಾಗಿತ್ತು. ಮುದ್ರಣ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದವರು- ಅವರ ಹೆಸರನ್ನು ಹಿಂದೊಮ್ಮೆ ಬರೆದಿದ್ದೆ- ಮಾರ್ಷಲ್ ಪಿಂಟೋ! ಜೊತೆಗೆ ಹರೀಶ ಮುಂತಾದವರು ಮುಖ್ಯ ಪ್ರಿಂಟರ್ ಗಳಾಗಿದ್ದರು. ಸಿಬ್ಬಂದಿಗಳಲ್ಲಿ ಕೆಲವರನ್ನು ನೆನಪಿಸುವೆ.
ಜಾಹೀರಾತು/ಪ್ರಸರಣ ವಿಭಾಗಗಳಲ್ಲಿ ವಿಲ್ಫ್ರೆಡ್, ಸುಧಾಕರ ಪೂಜಾರಿ, ನನ್ನ ತಮ್ಮ ಅನಿಲ್ ಕೋಲ್ಪೆ, ಸತೀಶ ಮಂಜೇಶ್ವರ, ಸಿಂಥಿಯಾ, ಸಂಗೀತಾ, ಜಗನ್ ಪವಾರ್ ಬೇಕಲ್, ಸುಧಾನಂದ, ಡೊನಾಲ್ಡ್ ಪಿರೇರಾ ಮುಂತಾದವರಿದ್ದರು. ಎಚ್‌ಆರ್‌ಡಿಯಲ್ಲಿ ರೋನಿ ಎಂಬವರಿದ್ದರು. ಕೆಲವರ ಮುಖ ನೆನಪಿಗೆ ಬರುತ್ತಿದೆಯಾದರೂ ಎರಡು ದಶಕಗಳ ಬಳಿಕ ಏಕಾಏಕಿಯಾಗಿ ಹೆಸರು ನೆನಪಿಗೆ ಬರುತ್ತಿಲ್ಲ. ತಾಂತ್ರಿಕ ವಿಭಾಗದಲ್ಲಿ ಇದ್ದವರಲ್ಲಿ ಆಗ್ನೆಲ್ ಮತ್ತು ಸಂತೋಷ್ ನೆನಪಿಗೆ ಬರುತ್ತಿದ್ದಾರೆ. ಇವರಲ್ಲಿ ಇನ್ನೊಬ್ಬರು ನನಗೆ ಆಗಾಗ ತಮ್ಮ ಕೈನೆಟಿಕ್ ಕೊಡುತ್ತಿದ್ದವರ ಹೆಸರು ಈಗ ಪಕ್ಕನೇ ನೆನಪಿಗೆ ಬರುತ್ತಿಲ್ಲ. ರಿಸೆಪ್ಷನ್‍ನಲ್ಲಿ ಇದ್ದವರು ಕ್ಲಾರಾ ಮತ್ತು ಮೈಸೂರಿನ ಅಲೆಕ್ಸ್. ಈ ಅಲೆಕ್ಸ್ ಮುಂದೆ ಹೆಚ್ಚಿನವರು ಪತ್ರಿಕೆ ಬಿಟ್ಟ ಬಳಿಕ ಅದರ ಕೊನೆಯ ದಿನಗಳಲ್ಲಿ ಪತ್ರಿಕೆ ಮುನ್ನಡೆಸಲು ತುಂಬಾ ನೆರವಾಗಿದ್ದರು ಎಂದು ಕೇಳಿದ್ದೇನೆ. ಈ ಬಗೆಗಿನ ವಿವರಗಳು ನನಗೆ ಗೊತ್ತಿಲ್ಲ.
ಹಿಂದೆ ಹೇಳಿದಂತೆ ನಾವು ಕೆಲವು ಆವೃತ್ತಿಗಳನ್ನು ಯೋಜಿಸಿದ್ದೆವು. ಅದಕ್ಕೆ ತಕ್ಕಂತೆ ಕೆಲವು ವಿಭಾಗಗಳನ್ನು ಮಾಡಲಾಯಿತು. ಕ್ರೀಡಾ ವಿಭಾಗಕ್ಕೆ ‘ಮುಂಗಾರು’ ಪತ್ರಿಕೆಯ ಕಾಲದಿಂದಲೂ ಅದೇ ವಿಭಾಗದಲ್ಲಿದ್ದ ಅನುಭವಿ ಬಿ.ಬಿ. ಶೆಟ್ಟಿಗಾರ್ ಮುಖ್ಯಸ್ಥರು. ಜೊತೆಗೆ ಇದ್ದವರು ರಾಜೇಶ್ ಮುಲ್ಕಿ ಮತ್ತು ವಿಜಯ್. ಬಿ.ಬಿ. ಶೆಟ್ಟಿಗಾರ್ ‘ಮುಂಗಾರು’ ಪತ್ರಿಕೆಯಲ್ಲಿ ನನ್ನ ಸಹೋದ್ಯೋಗಿ. ಇದನ್ನು ಬರೆಯುವ ಹೊತ್ತಿಗೆ ‘ವಾರ್ತಾ ಭಾರತಿ’ ಪತ್ರಿಕೆಯ ಉಡುಪಿ ಬ್ಯೂರೋ ಮುಖ್ಯಸ್ಥರಾಗಿರುವ ಅವರ ವೈಚಾರಿಕತೆಯನ್ನು ಪೂರ್ಣ ಪ್ರಮಾಣದಲ್ಲಿ ಯಾರೂ ಈ ತನಕ ಗುರುತಿಸಿಲ್ಲ.

ಮ್ಯಾಗಜಿನ್ ಮತ್ತು ಸಂಪಾದಕೀಯ ಪುಟ ನೋಡಿಕೊಳ್ಳಲು ಒಂದು ಪ್ರತ್ಯೇಕ ವಿಭಾಗ ರಚಿಸಲಾಗಿತ್ತು. ಇದರಲ್ಲಿ ಪ್ರಮೋದ್, ಹಮೀದ್, ಇಸ್ಮಾಯಿಲ್, ನಾನು, ವಿಲ್ಫ್ರೆಡ್ ಡಿ’ಸೋಜಾ, ಪೃಥ್ವಿರಾಜ್ ಮುಂತಾದವರು ಇದ್ದೆವು. ಇವರಲ್ಲಿ ಪ್ರಮೋದ್‍ರದ್ದು ವಿಶಿಷ್ಟ ಮತ್ತು ಒಂದು ರೀತಿಯ ಅಸಂಪ್ರದಾಯಿಕ ವ್ಯಕ್ತಿತ್ವ. ಪೃಥ್ವಿರಾಜ್ ಸಾಹಿತ್ಯ, ಯಕ್ಷಗಾನ ಇತ್ಯಾದಿಯಾಗಿ ಆಸಕ್ತಿಯಿದ್ದ ಯುವ ಪ್ರತಿಭೆ. ಸಂಪಾದಕೀಯ ಪುಟದ ಬದಿಯ ಪುಟವನ್ನು (op-ed) ಪ್ರತೀ ದಿನ ಲೇಖನಗಳಿಗೆ ಮೀಸಲಿಡಲಾಗಿತ್ತು. ಇವುಗಳ ಕತೆಯನ್ನೇ ಮುಂದೆ ಪ್ರತ್ಯೇಕವಾಗಿ ಬರೆಯುವೆ. ಈ ವಿಭಾಗಕ್ಕೆಂದೇ ಇಬ್ಬರು ಹುಡುಗಿಯರನ್ನು ಪುಟ ವಿನ್ಯಾಸಕ್ಕೆಂದು ನೇಮಕ ಮಾಡಲಾಗಿತ್ತು. ಇವರಿಬ್ಬರೂ ಬರಹಗಾರರು ಅಲ್ಲದಿದ್ದರೂ ಅತ್ಯಂತ ನಿಷ್ಠಾವಂತ ದಣಿವರಿಯದ ನಗುಮುಖದ ಕೆಲಸಗಾರರು. ಒಬ್ಬರ ಹೆಸರು ಶಕುಂತಲಾ. ಇನ್ನೊಬ್ಬರು ರಂಜಿನಿ. ಉಳಿದ ಸಿಬ್ಬಂದಿಗಳೂ ಅವರವರ ಆಸಕ್ತಿಗಳಿಗೆ ಅನುಗುಣವಾಗಿ ಬರೆಯಬಹುದಾಗಿತ್ತು.
ಗ್ರಾಮೀಣ ವಿಭಾಗದಲ್ಲಿ ಇದ್ದವರೆಂದರೆ ಮುಖ್ಯಸ್ಥ್ರರಾಗಿ ವಿಲ್ಫ್ರೆಡ್ ಡಿ’ಸೋಜಾ, ಕೇಶವ ಕುಂದರ್, ಬಿ.ಎಮ್. ಬಶೀರ್, ಕುಸುಮಾ, ನಾರ್ಸಿನ್ ಡಿಸೋಜಾ, ಪುಷ್ಪಲತಾ ಶಿಮ್ಲಡ್ಕ, ಝೀಟಾ, ರೇವತಿ, ಸತ್ಯವತಿ, ರಾಜೇಶ್ ನಾಯ್ಕ್, ಅನುಜಯ ಕುಮಟೇಕರ್, ರೇಖಾ, ಶ್ವೇತಾ ಟಿ.ಪಿ. ಮುಂತಾದವರು.
ರಾಜ್ಯ/ದೇಶ/ಅಂತರ್ರಾಷ್ಟ್ರೀಯ ಸುದ್ದಿಗಳ- ಮುಖ್ಯವಾಗಿ ಮುಖಪುಟದ ಸುದ್ದಿಗಳ ಹೊಣೆಗಾರಿಕೆ ನನ್ನ ಮೇಲೆ ಬಿದ್ದಿತ್ತು. ಜನರಲ್ ಡೆಸ್ಕ್ ಎಂದು ಕರೆಯಲಾಗುವ ಈ ವಿಭಾಗದಲ್ಲಿ ಇದ್ದವರು- ಸುಖೇಶ್, ಮೇರಿ ಜೋಸೆಫ್, ಜಿನ್ನಪ್ಪ, ಜಗದೀಶ ಮಣಿಯಾಣಿ, ಐರಿನ್ ರೆಬೆಲ್ಲೊ, ಲವೀನಾ, ರೋಹಿಣಿ, ಚಿಕ್ಕರಸ್, ಅಶೋಕ್ ಕಲ್ಲಡ್ಕ ಮುಂತಾದವರು.
ವರದಿಗಾರರಲ್ಲಿ ಮಂಗಳೂರು ನಗರ ಕಛೇರಿಯಲ್ಲಿ ರವೀಂದ್ರ ಶೆಟ್ಟಿ, ಜ್ಯೋತಿ ಇರ್ವತ್ತೂರು, ಪುಷ್ಪರಾಜ ಬಿ.ಎನ್. ಮತ್ತು ಸುನಿಲ್ ಕುಲಾಸೊ ಇದ್ದರು. ಇವರಲ್ಲಿ ಸುನಿಲ್ ಕುಲಾಸೊ ಅವರು ನಮ್ಮ ನಿರ್ದೇಶಕರಲ್ಲಿ ಒಬ್ಬರ ತಮ್ಮ. ತುಂಬಾ ಅನುಕೂಲವಂತರು. ಅತ್ಯಂತ ಸರಳ, ವಿನಯಶೀಲ ಮನುಷ್ಯ. ಪತ್ರಿಕೋದ್ಯಮದಲ್ಲಿ ಅನುಭವ ಅಷ್ಟಾಗಿ ಇಲ್ಲದಿದ್ದರೂ, ನಮಗೆ ನೆರವಾಗಲು ಬಂದವರು. ಅತ್ಯಾಧುನಿಕ (ಆ ಕಾಲಕ್ಕೆ) ಕ್ಯಾಮೆರಾ ಹೊಂದಿದ್ದ ಅವರು ಪತ್ರಿಕೆಗಾಗಿ ಅದನ್ನು ಬಳಸುತ್ತಿದ್ದರು. ಜ್ಯೋತಿ ಇರ್ವತ್ತೂರು ಅವರ ಬಳಿಯೂ ಅತ್ಯುತ್ತಮ ಕ್ಯಾಮೆರಾ ಇತ್ತು. ನಂತರ ಇಸ್ಮಾಯಿಲ್ ಕೂಡಾ ಅಲ್ಲಿಗೆ ಮುಖ್ಯಸ್ಥರಾಗಿ ಹೋದರು.
ಉಳಿದಂತೆ ಎಲ್ಲಾ ಮೊದಲಿನ ವರದಿಗಾರರ ನೆನಪಿಲ್ಲವಾದರೂ, ಉತ್ತರ ಕನ್ನಡದ ನಾಗರಾಜ ಹರಪನಹಳ್ಳಿ, ಟಿ.ಬಿ. ಹರಿಕಾಂತ, ಉಡುಪಿಯ ಗುರುರಾಜ ಮಾರ್ಪಳ್ಳಿ (ಇವರು ಮೊದಲು ಮ್ಯಾಗಜಿನ್ ಡೆಸ್ಕ್‌ನಲ್ಲಿ ಇದ್ದರು), ಶಿ.ಜು. ಪಾಶ, ರಾಮಸ್ವಾಮಿ, ಕಾರ್ಕಳದ ಶೇಖರ ಅಜೆಕಾರು, ಪ್ರಕಾಶ್ ಮಂಜೇಶ್ವರ, ರಮೇಶ್ ಕುಟ್ಟಪ್ಪ, ಮೇಘ ಪಾಲೆತ್ತಾಡಿ (ಇವರ ಅಣ್ಣ ಚಂದ್ರಶೇಖರ ಪಾಲೆತ್ತಾಡಿ- ನನ್ನ ಗೆಳೆಯರು ಮತ್ತು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯ ಸಂಪಾದಕರು) ಮುಂತಾದ ಹಲವರಿದ್ದರು. ಬೆಂಗಳೂರು ಆವೃತ್ತಿ ಪ್ರಕಟವಾದಾಗ ಅನ್ನೂ ಹಲವು ಗೆಳೆಯರು ಸೇರಿಕೊಂಡರು. ಅದನ್ನು ಪ್ರತ್ಯೇಕ ಬರೆಯುವೆ. ಯಾರ ಹೆಸರನ್ನಾದರೂ ಮರೆತಿದ್ದರೆ ಕ್ಷಮೆ ಯಾಚಿಸುವೆ.
ಇಲ್ಲಿ ಇಬ್ಬರನ್ನು ಪ್ರತ್ಯೇಕವಾಗಿ ನೆನಪಿಸುವೆ- ಒಬ್ಬರು ಗಿರೀಶ್ ಬಜ್ಪೆ, ಇನ್ನೊಬ್ಬರು ಮಹಮ್ಮದ್ ಶಮಿ. ಇವರು ನನ್ನದೇ ಜನರಲ್ ಡೆಸ್ಕ್‌ನಲ್ಲಿ ಇದ್ದರು. ಗಿರೀಶ್ ಬಗ್ಗೆ ಹಿಂದೆಯೇ ಬರೆದಿದ್ದೆ. ನನ್ನ ಕಿರಿಯ ಗೆಳೆಯನಾಗಿ ಯಾವತ್ತೂ ‘ಮುಖಪುಟ’ ಮಾಡುತ್ತಾ ಜೊತೆಗೆ ಹಲವು ಕಾಲ ಕಳೆಯುತ್ತಾ ಬೆಳೆದವರು. ಹಲವರು ಮರೆತಾಗ ಇವತ್ತೂ ನೆನಪಿಟ್ಟ ಮನುಷ್ಯ. ‘ಜನವಾಹಿನಿ’ಯ ಬಳಿಕ ಬಿ.ಎಂ. ಬಶೀರ್ ಜೊತೆ ‘ವಾರ್ತಾಭಾರತಿ’ಗೆ ಹೋಗಿ, ನಂತರ ಸೌದಿಯಲ್ಲಿ ಕೆಲಸ ಮಾಡಿ, ಈಗ ಉದ್ಯಮಿಯಾಗಿದ್ದಾರೆ. ಈ ಶಮಿ ಬಗ್ಗೆ ಯಾಕೆ ನೆನಪಿದೆ ಎಂದರೆ, ಒಂದು ದಿನ ಮಧ್ಯ ರಾತ್ರಿ ಎಲ್ಲರ ಕರ್ತವ್ಯ ಮುಗಿದ ಮೇಲೆ ಕೊನೆಯ ಕ್ಷಣದಲ್ಲಿ ಯೋಜಿಸಲಾಗಿದ್ದ ಹೊಸ ವರ್ಷದ ನಾಲ್ಕು ಪುಟಗಳ ಪುರವಣಿಯನ್ನು ಬೆಳಗಾಗುವುದರ ಒಳಗೆ ಯಾವುದೇ ಸಿದ್ಧತೆ ಇಲ್ಲದೆ ‘ಇನ್‍ಸ್ಟಂಟ್ ಕಾಫಿ’ಯಂತೆ ಮಾಡಿದವರು ನಾವು- ಶಮಿ, ಗಿರೀಶ್ ಮತ್ತು ನಾನು!
ಈ ವಿಭಾಗಗಳ ಕಾರ್ಯಾಚರಣೆಗ ಮತ್ತು ಈ ಗೆಳೆಯರ ಬಗ್ಗೆ ಮುಂದೆ ಬರೆಯುವೆ.
ಕೋಮುವಾದ-ವ್ಯವಹಾರದ ವ್ಯಭಿಚಾರ!
ಒಂದು ದಿನ ನಾನು ವಿಲ್ಫ್ರೆಡ್, ಇಸ್ಮಾಯಿಲ್, ನನ್ನೂರಿನ ಕೂಸಣ್ಣನ ಬಾಡಿಗೆ ಕಾರಿನಲ್ಲಿ ನಮ್ಮ ಪ್ರಸರಣ ವಿಭಾಗದ ಮುಖ್ಯಸ್ಥ ಸ್ಟ್ಯಾನ್ಲಿ ಜೊತೆಗೆ ನಮ್ಮ ‘ಯಕ್ಷಗಾನ ತಿರುಗಾಟ’ ಮಾಡಲು ಹೊರಟು ಬಂಟ್ವಾಳ ತಾಲೂಕಿನ ಮಾಣಿ ತಲುಪಿದೆವು. ಅಲ್ಲಿ ರಾಷ್ಟ್ರೀಯ ಹೆದ್ದಾರಿ ಕವಲೊಡೆಯುತ್ತದೆ. ಒಂದು ಬೆಂಗಳೂರಿಗೆ ಸಾಗಿದರೆ ಇನ್ನೊಂದು ಪುತ್ತೂರು ಮೂಲಕ ಸುಳ್ಯ-ಮಡಿಕೇರಿ ಮೂಲಕ ಮೈಸೂರಿಗೆ. ಪ್ರಸರಣ ದೃಷ್ಟಿಯಿಂದ ಇದು ಮುಖ್ಯ ಕೇಂದ್ರ. ಇಲ್ಲಿ ಒಬ್ಬರು ಅಂಗಡಿ/ಹೋಟೆಲ್ ಇರುವ ಮೇಲ್ಜಾತಿ ವರ್ತಕರು. ಅವರು ಕರಾವಳಿ ‘ಮಹಾನ್’ ಪತ್ರಿಕೆಯ ವಿತರಕರು. ನಾನು ‘ಮುಂಗಾರು’ ಪತ್ರಿಕೆಯಲ್ಲಿ ಇದ್ದಾಗಿನಿಂದ ಪರಿಚಯ. ಆದರೆ ಅವರನ್ನು ಸಂಪರ್ಕಿಸಿದಾಗ ಅವರು ಈ ‘ಬಣ್ಣದ’ ಪತ್ರಿಕೆಯನ್ನು ವಿತರಿಸಲು ನಿರಾಕರಿಸಿದರು!
ಕಾರಣ- ‘ಕ್ರಿಶ್ಚಿಯನ್’ ಪತ್ರಿಕೆ ಎಂಬುದು! ಅವರು ‘ಜಾತ್ಯತೀತ’ ಉದರವಾಣಿಯ ಪರವಾಗಿದ್ದರು. ನಾವವರಿಗೆ ಸವಾಲಾಗಿದ್ದೆವು. ಅವರು ಬ್ಲ್ಯಾಕ್‍ಮೇಲ್ ಪತ್ರಿಕೆಗಳ ಮಾರಾಟವನ್ನೂ ಮಾಡುತ್ತಿದ್ದರು. ಅವರ ಮುಖ್ಯ ಆದಾಯ ಪತ್ರಿಕೆಗಳ ಮಾರಾಟದಿಂದ ನಡೆಯುತ್ತಿತ್ತು. ಆದರೂ, ಅವರು ನಮ್ಮನ್ನು ‘ಅವಮಾನಿಸಿ’ ಕಳುಹಿಸಿದರು. ಎದೆಗೆಡದ ನಾವು ನೂರು ಹೆಜ್ಜೆ ಹೆದ್ದಾರಿ ದಾಟಿ ಒಂದು ಅಂಗಡಿ ತಲುಪಿದೆವು. ಅದು ಒಬ್ಬ ಮುಸ್ಲಿಮರದ್ದಾಗಿತ್ತು. ಅವರು ಆದರದಿಂದ ನಮ್ಮನ್ನು ಬರಮಾಡಿಕೊಂಡರು. ಅವರೇ ಆ ಭಾಗದಲ್ಲಿ ನಮ್ಮ ಪತ್ರಿಕೆಯನ್ನು ಪ್ರಸರಣ ಮಾಡುವಲ್ಲಿ ಮುಂದೆ ಮುಖ್ಯ ಪಾತ್ರವಹಿಸಿದರು. ಅವರ ಹೆಸರು ನೆನಪಿಲ್ಲ.
ಕೋಮುವಾದ ಮತ್ತು ವ್ಯವಹಾರದ ನಡುವಿನ ವ್ಯಭಿಚಾರವನ್ನು ಇಲ್ಲಿ ಗಮನಿಸಿ! ಇದೇ ಕರಾವಳಿಯ ಸಮಸ್ಯೆಗೆ ಮೂಲ!


