ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಅವರು, ರಾಜ್ಯದಲ್ಲಿ ತಮ್ಮ ಪಕ್ಷದ ಘಟಕಗಳನ್ನು ವಿಸರ್ಜಿಸುವ ಕುರಿತ ಘೋಷಣೆ ಮಾಡಿದ್ದಾರೆ.
ಜಯಂತ್ ಚೌಧರಿ ಅವರ ಘೋಷಣೆಯನ್ನು ಸೋಮವಾರ ತನ್ನ ಟ್ವಿಟರ್‌ನಲ್ಲಿ ಪ್ರಕಟಿಸಿರುವ ಆರ್‌ಎಲ್‌ಡಿ, “ರಾಷ್ಟ್ರೀಯ ಲೋಕದಳದ ರಾಷ್ಟ್ರೀಯ ಅಧ್ಯಕ್ಷ ಚೌಧರಿ ಜಯಂತ್ ಸಿಂಗ್ ಅವರ ಸೂಚನೆಯಂತೆ ರಾಜ್ಯ, ಪ್ರಾದೇಶಿಕ ಮತ್ತು ಜಿಲ್ಲಾ ಘಟಕಗಳು ಮತ್ತು ಎಲ್ಲಾ ಮುಂಚೂಣಿಯ ಘಟಕಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗುತ್ತಿದೆ” ಎಂದು ಟ್ವೀಟ್ ಮಾಡಿದೆ. ಆದರೆ ಈ ನಿರ್ಧಾರಕ್ಕೆ ಪಕ್ಷವು ಯಾವುದೆ ಕಾರಣವನ್ನು ಬಹಿರಂಗಪಡಿಸಿಲ್ಲ.
राष्ट्रीय लोकदल के राष्ट्रीय अध्यक्ष चौधरी जयंत सिंह जी के निर्देशानुसार राष्ट्रीय लोकदल उत्तर प्रदेश के प्रदेश, क्षेत्रीय और जिला व सभी फ्रंटल संगठनों को तत्काल प्रभाव से भंग किया जाता है।
— Rashtriya Lok Dal (@RLDparty) March 14, 2022
ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 111 ಸ್ಥಾನಗಳನ್ನು ಗೆದ್ದರೆ ಆರ್‌ಎಲ್‌ಡಿ ಎಂಟು ಸ್ಥಾನಗಳನ್ನು ಗೆದ್ದಿದೆ. ರಾಜ್ಯದಲ್ಲಿ ಜಯಂತ್ ಚೌಧರಿ ಅವರ ಪಕ್ಷದ ಮತ ಗಳಿಕೆ 2.8%9 ಆಗಿದ್ದರೆ, ಎಸ್‌ಪಿ 32.1% ರಷ್ಟು ಮತಗಳನ್ನು ದಾಖಲಿಸಿದೆ.
ರಾಜ್ಯದ ಚುನಾವಣೆಗೆ ಮುನ್ನ ಜಯಂತ್ ಅವರು ಬಿಜೆಪಿ ಮೈತ್ರಿಕೂಟಕ್ಕೆ ಸೇರುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಗಿ ಹೇಳಿದ್ದರು. “ನಾವು ಪಲ್ಟಿಯಾಗುವ ನಾಣ್ಯ ಅಲ್ಲ. ಬಿಜೆಪಿಯವರು ನಮ್ಮನ್ನು ಹಗುರವಾಗಿ ಪರಿಗಣಿಸಬಾರದು. ನಾವು ನಮ್ಮ ನಿರ್ಧಾರವನ್ನು ಬದಲಾಯಿಸುವುದಿಲ್ಲ. ಲಖಿಂಪುರ ಖೇರಿಯಲ್ಲಿ ಘಟನೆ ನಡೆದಾಗ ಅವರು ಎಲ್ಲಿದ್ದರು? ಜನರ ಮೇಲೆ ಲಾಠಿಚಾರ್ಜ್ ಮಾಡಿದಾಗ ಮತ್ತು ಹತ್ರಾಸ್‌ಗೆ ಹೋಗುವುದನ್ನು ತಡೆದಾಗ ಅವರು ಎಲ್ಲಿದ್ದರು?” ಎಂದು ಅವರು ಲಖಿಂಪುರದಲ್ಲಿ ರೈತರ ಹತ್ಯೆ ಮತ್ತು ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ ಜಯಂತ್ ಕೇಳಿದ್ದರು.
ಜಾಟ್ ಸಮುದಾಯದ ನಾಯಕರಾಗಿರುವ ಜಯಂತ್ ಚೌದರಿ ಈ ಹಿಂದೆ ರೈತರ ಪ್ರತಿಭಟನೆಯ ಬಗ್ಗೆ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಂದಾಜಿನ ಪ್ರಕಾರ ಜಾಟ್‌ಗಳು ರಾಜ್ಯದ ಜನಸಂಖ್ಯೆಯ 10% ಕ್ಕಿಂತ ಹೆಚ್ಚಿದ್ದಾರೆ. ಪಶ್ಚಿಮ ಯುಪಿ RLD ಯ ಭದ್ರಕೋಟೆ ಎಂದು ನಂಬಲಾಗಿದೆ.
ಕಳೆದ ವಾರ ಅಖಿಲೇಶ್ ಯಾದವ್ ಅವರು ಈ ಬಾರಿಯ ರಾಜ್ಯ ಚುನಾವಣಾ ಫಲಿತಾಂಶಗಳು ಬಿಜೆಪಿಯ ಸ್ಥಾನಗಳನ್ನು ಕಡಿಮೆ ಮಾಡಬಹುದು ಎಂದು ಸಾಬೀತುಪಡಿಸಿದೆ ಎಂದು ಹೇಳಿದ್ದರು. ಕಳೆದ ಬಾರಿ ಮಿತ್ರಪಕ್ಷಗಳೊಂದಿಗೆ 325 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈಗ 273ಕ್ಕೆ ಇಳಿದಿದೆ.
ಇದನ್ನೂ ಓದಿ: ಯುಪಿ ಚುನಾವಣೆ: ಬಿಜೆಪಿ ದಿಗ್ವಿಜಯದ ನಡುವೆ ಸೋತ 11 ಮಂದಿ ಸಚಿವರು!


