Homeಮುಖಪುಟಯುಪಿ ಚುನಾವಣೆ: ಬಿಜೆಪಿ ದಿಗ್ವಿಜಯದ ನಡುವೆ ಸೋತ 11 ಮಂದಿ ಸಚಿವರು!

ಯುಪಿ ಚುನಾವಣೆ: ಬಿಜೆಪಿ ದಿಗ್ವಿಜಯದ ನಡುವೆ ಸೋತ 11 ಮಂದಿ ಸಚಿವರು!

- Advertisement -
- Advertisement -

ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಅದ್ಭುತ ಬಹುಮತದೊಂದಿಗೆ ದಿಗ್ವಿಜಯ ಸಾಧಿಸಿದ ನಡುವೆ, ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಚಿವರಾಗಿದ್ದವರ ಪೈಕಿ 11 ಮಂದಿ ಸೋಲು ಕಂಡಿದ್ದಾರೆ.

ಹಿಂದಿನ ಸರ್ಕಾರದ ಒಟ್ಟು 47 ಸಚಿವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಸೋಲು ದೊಡ್ಡ ಆಘಾತ ನೀಡಿದರೆ, ಶಿಕ್ಷಣ, ಕಬ್ಬು ಮತ್ತು ಗ್ರಾಮೀಣಾಭಿವೃದ್ಧಿಯ ಉಸ್ತುವಾರಿ ಸಚಿವರು ಅನೇಕ ಪ್ರಮುಖ ನಾಯಕರು ಸೋಲಿನ ಕಹಿ ಅನುಭವಿಸಿದ್ದಾರೆ. ಸತೀಶ್ ಚಂದ್ರ ದ್ವಿವೇದಿ, ಸಂಗೀತಾ ಬಲ್ವಂತ್ ಬಿಂದ್, ಛತ್ರಪಾಲ್ ಗಂಗ್ವಾರ್, ಸುರೇಶ್ ರಾಣಾ ಮತ್ತು ರಾಜೇಂದ್ರ ಪ್ರತಾಪ್ ಸಿಂಗ್ ‘ಮೋತಿ ಸಿಂಗ್’ ಅವರೂ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.

ಸೋತ ಬಹುತೇಕ ಬಿಜೆಪಿ ಸಚಿವರು ಸಮಾಜವಾದಿ ಪಕ್ಷದ ಅಭ್ಯರ್ಥಿಗಳಿಂದ ಪರಾಭವಗೊಂಡಿದ್ದಾರೆ. ಮೌರ್ಯ ಅವರ ಸೋಲು ಬಿಜೆಪಿಯೊಳಗೆ ಚರ್ಚೆಗೆ ಗ್ರಾಸವಾಗಿದೆ. ಆದಿತ್ಯನಾಥ್ ಸರ್ಕಾರದಲ್ಲಿದ್ದ ಹಿಂದುಳಿದ ವರ್ಗಗಳ ಸಮುದಾಯದ ಬಹುದೊಡ್ಡ ನಾಯಕರಾದ ಕೇಶವ್ ಪ್ರಸಾದ್ ಮೌರ್ಯ, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷರೂ  ಹೌದು.

ಕೇಶವ್ ಪ್ರಸಾದ್ ಮೌರ್ಯ

ಕೌಶಂಬಿ ಜಿಲ್ಲೆಯ ಸಿರತು ಕ್ಷೇತ್ರದಲ್ಲಿ ಅಪ್ನಾ ದಳ (ಕಾಮರ್‌ವಾಡಿ) ನಾಯಕಿ ಡಾ. ಪಲ್ಲವಿ ಪಟೇಲ್‌ರಿಂದ ಮೌರ್ಯ ಸೋಲು ಕಂಡಿದ್ದಾರೆ. ಪಲ್ಲವಿ ಪಟೇಲ್ 7,337 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಪ್ನಾ ದಳವು ಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡಿದೆ.

ಕಬ್ಬು ಅಭಿವೃದ್ಧಿ ಮತ್ತು ಕಬ್ಬಿನ ಗಿರಣಿಗಳ ಕೈಗಾರಿಕಾ ಅಭಿವೃದ್ಧಿಯ ಕ್ಯಾಬಿನೆಟ್ ಸಚಿವ ಸುರೇಶ್ ಕುಮಾರ್ ರಾಣಾ ಅವರು ಠಾಣಾ ಭವನ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ಅಶ್ರಫ್ ಅಲಿ ಖಾನ್ ವಿರುದ್ಧ 10,806 ಮತಗಳ ಅಂತರದಿಂದ ಸುರೇಶ್‌ಕುಮಾರ್ ಸೋಲು ಕಂಡಿದ್ದಾರೆ. ಆರ್‌ಎಲ್‌ಡಿ ಪಕ್ಷವು ಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡಿದೆ.

ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ‘ಮೋತಿ ಸಿಂಗ್’ ಅವರು ಪ್ರತಾಪ್‌ಗಢದ ಪಟ್ಟಿ ಕ್ಷೇತ್ರದಲ್ಲಿ ಎಸ್‌ಪಿಯ ರಾಮ್ ಸಿಂಗ್ ವಿರುದ್ಧ 22,051 ಮತಗಳ ಅಂತರದಲ್ಲಿ ಸೋತಿದ್ದಾರೆ.

ಎಸ್‌ಪಿಯ ಹಿರಿಯ ನಾಯಕ, ಉತ್ತರ ಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್ ಮಾತಾ ಪ್ರಸಾದ್ ಪಾಂಡೆ ಅವರು ಬಿಜೆಪಿ ಸಚಿವ ಸತೀಶ್ ಚಂದ್ರ ದ್ವಿವೇದಿ ಅವರನ್ನು ಸಿದ್ಧಾರ್ಥನಗರ ವ್ಯಾಪ್ತಿಯಲ್ಲಿ ಬರುವ ಇಟ್ವಾ ಕ್ಷೇತ್ರದಲ್ಲಿ 1,662 ಮತಗಳ ಅಂತರದಿಂದ ಸೋಲಿಸಿದ್ದಾರೆ. ದ್ವಿವೇದಿ ಅವರು ಆದಿತ್ಯನಾಥ್ ಅವರ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣದ ರಾಜ್ಯ ಸಚಿವರಾಗಿದ್ದರು.

ಸಂಸದೀಯ ವ್ಯವಹಾರಗಳು, ಗ್ರಾಮೀಣಾಭಿವೃದ್ಧಿ ಮತ್ತು ಸಮಗ್ರ ಗ್ರಾಮಾಭಿವೃದ್ಧಿಯ ಕಿರಿಯ ಸಚಿವ ಆನಂದ್ ಸ್ವರೂಪ್ ಶುಕ್ಲಾ ಅವರು ಬಲ್ಲಿಯಾ ಜಿಲ್ಲೆಯ ಬೈರಿಯಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಎಸ್‌ಪಿ ಅಭ್ಯರ್ಥಿ ಜೈಪ್ರಕಾಶ್ ಅಂಚಲ್ ವಿರುದ್ಧ ಶುಕ್ಲಾ ಅವರು 12,951 ಮತಗಳಿಂದ ಸೋತಿದ್ದಾರೆ.

ಲೋಕೋಪಯೋಗಿ ಖಾತೆ ರಾಜ್ಯ ಸಚಿವರಾದ ಚಂದ್ರಿಕಾ ಪ್ರಸಾದ್ ಉಪಾಧ್ಯಾಯ ಅವರು ಚಿತ್ರಕೂಟ ಕ್ಷೇತ್ರದಲ್ಲಿ ಎಸ್‌ಪಿಯ ಅನಿಲ್ ಕುಮಾರ್ ವಿರುದ್ಧ 20,876 ಮತಗಳ ಅಂತರದಿಂದ ಸೋತಿದ್ದಾರೆ.

ಕಂದಾಯ ಖಾತೆಯ ರಾಜ್ಯ ಸಚಿವ ಛತ್ರಪಾಲ್ ಸಿಂಗ್ ಅವರು ಬರೇಲಿಯ ಬಹೇರಿ ಸ್ಥಾನವನ್ನು ಎಸ್‌ಪಿಯ ಅತೌರ್ ರೆಹಮಾನ್ ವಿರುದ್ಧ ಸೋಲು ಕಂಡಿದ್ದಾರೆ. ಸಿಂಗ್ ಅವರನ್ನು ರೆಹಮಾನ್ 3,355 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಿರಿಯ ಸಚಿವ ರಣವೇಂದ್ರ ಸಿಂಗ್ ಅವರು ಫತೇಪುರ್ ಜಿಲ್ಲೆಯ ಹುಸೈಂಗಂಜ್ ಕ್ಷೇತ್ರವನ್ನು ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಎಸ್‌ಪಿಯ ಉಷಾ ಮೌರ್ಯ ಅವರು 25,181 ಮತಗಳ ಅಂತರದಿಂದ ಗೆದ್ದಿದ್ದಾರೆ.

ಮತ್ತೊಬ್ಬ ಕಿರಿಯ ಸಚಿವರಾದ ಡಾ. ಸಂಗೀತಾ ಬಲವಂತ್ ಅವರು ಗಾಜಿಪುರ ಕ್ಷೇತ್ರದಿಂದ 1,692 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಸಂಗೀತಾ ಅವರು ಸಹಕಾರಿ ಖಾತೆಯ ರಾಜ್ಯ ಸಚಿವರಾಗಿದ್ದರು. ಎಸ್‌ಪಿಯ ಜೈ ಕಿಶನ್ ಸಾಹು ಅವರು ಗೆಲುವು ಸಾಧಿಸಿದ್ದಾರೆ.

ಕಿರಿಯ ಕೃಷಿ ಸಚಿವರಾದ ಲಖನ್ ಸಿಂಗ್ ರಜಪೂತ್ ಅವರು ದಿಬಿಯಾಪುರದಲ್ಲಿ ಎಸ್ಪಿಯ ಅಭ್ಯರ್ಥಿ ಪ್ರದೀಪ್ ಕುಮಾರ್ ಯಾದವ್ ವಿರುದ್ಧ ಸೋಲು ಕಂಡಿದ್ದಾರೆ. ರಜಪೂತ್ ಅವರು ಕೇವಲ 473 ಮತಗಳ ಅಂತರದಿಂದ ಪರಾಜಿತರಾಗಿದ್ದಾರೆ. ಕ್ರೀಡೆ, ಯುವಜನ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜ್ಯ ಸಚಿವ ಉಪೇಂದ್ರ ತಿವಾರಿ ಅವರು ಫೆಫ್ನಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಎಸ್ಪಿಯ ಸಂಗ್ರಾಮ್ ಸಿಂಗ್ ಅವರು 19,354 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಚುನಾವಣೆ ಒಂದು ತಿಂಗಳು ಬಾಕಿ ಇರುವಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್‌ಪಿಗೆ ಸೇರ್ಪಡೆಯಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಂ ಸಿಂಗ್ ಸೈನಿ ಸೋಲುಂಡು ಮುಖಭಂಗ ಅನುಭವಿಸಿದ್ದಾರೆ. ಮೌರ್ಯ ಮತ್ತು ಸೈನಿ ಅವರು ಕ್ರಮವಾಗಿ ಕುಶಿನಗರದ ಫಾಜಿಲ್‌ನಗರ, ಸಹರಾನ್‌ಪುರ ಜಿಲ್ಲೆಯ ನಾಕುರ್‌ನಿಂದ ಸ್ಪರ್ಧಿಸಿ ಸೋತಿದ್ದಾರೆ. ಒಬಿಸಿ ಸಮುದಾಯದ ನಾಯಕರಾಗಿರುವ ಮೌರ್ಯ ಅವರನ್ನು ಬಿಜೆಪಿ ಅಭ್ಯರ್ಥಿ ಸುರೇಂದ್ರ ಕುಮಾರ್ ಕುಶ್ವಾಹ ಅವರು ಫಾಜಿಲ್‌ನಗರದಲ್ಲಿ 45,580 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. ಆದಿತ್ಯನಾಥ್ ಅವರ ಸಂಪುಟದಲ್ಲಿ ಮೌರ್ಯ ಕಾರ್ಮಿಕ ಸಚಿವರಾಗಿದ್ದರು.

ಸೈನಿ ಕೂಡ ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಅವರು ಬಿಜೆಪಿಯ ಮುಖೇಶ್ ಚೌಧರಿ ವಿರುದ್ಧ 315 ಮತಗಳ ಅಂತರದಿಂದ ಪರಾಭವಗೊಂಡರು. ಸೈನಿ ಅವರು ಆಹಾರ ಭದ್ರತೆ ಮತ್ತು ಔಷಧ ನಿರ್ವಹಣೆಯ ಸಚಿವರಾಗಿದ್ದರು.


ಇದನ್ನೂ ಓದಿರಿ: ಈ ವಾರದ ಟಾಪ್‌ 10 ಸುದ್ದಿಗಳು ಇವು; ಮಿಸ್‌ ಮಾಡಿದ್ದರೆ ಈಗ ಓದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...