ಅರಸೀಕೆರೆ ನಗರಸಭೆ ಸದಸ್ಯರ ಖರೀದಿಗೆ ಬಿಜೆಪಿ ಪ್ರಯತ್ನಿಸುತ್ತಿದೆ. ನಮ್ಮ ಪಕ್ಷದ ಸದಸ್ಯರಿಗೆ ಹಣದ ಆಮಿಷಗಳನ್ನೊಡ್ಡಿ ಬಿಜೆಪಿ ನಾಯಕರು ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ. ಶಾಸಕರಿಂದ ಹಿಡಿದು ಗ್ರಾಮ ಪಂಚಾಯತ್ ಸದಸ್ಯರವರೆಗೆ ಬಿಜೆಪಿ ಕುದುರೆ ವ್ಯಾಪಾರದ ಸಂಪ್ರದಾಯವನ್ನು ನಡೆಸುತ್ತಿದೆ ಎಂದು ಮಾಜಿ ಸಚಿವ ಮತ್ತು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣನವರು ಇಂದು ಅರೋಪಿಸಿದ್ದಾರೆ.
ಹಾಸನದಲ್ಲಿ ಇಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದ್ದ ಅವರು ಬಿಜೆಪಿಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಬಿಜೆಪಿಗೆ ವಿಧಾನಸಭೆಯಲ್ಲಿ ಇರಲಿ ಅಥವಾ ನಗರಸಭೆಯಲ್ಲೇ ಇರಲಿ ನೇರವಾಗಿ ಅಧಿಕಾರ ಹಿಡಿದು ಗೊತ್ತಿಲ್ಲ. ಚುನಾಯಿತ ಪ್ರತಿನಿಧಿಗಳ ಖರಿದಿಯೇ ಬಿಜೆಪಿಯ ರಾಜಕೀಯ ಸಿದ್ಧಾಂತವಾಗಿದೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರು ಜೆಡಿಎಸ್ ಪಕ್ಷದ ನಗರ ಸಭೆ ಸದಸ್ಯರಿಗೆ 10 ಲಕ್ಷ ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿದ ಹೆಚ್.ಡಿ. ರೇವಣ್ಣ, ಸುದ್ದಿಗೊಷ್ಠಿಯಲ್ಲಿ 10 ಲಕ್ಷ ಹಣವನ್ನು ಸಹ ಪ್ರದರ್ಶಿಸಿ ಬಿಜೆಪಿ ವಿರುದ್ಧ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಗೆ ಸೇರಲು ನಿರಾಕರಿಸಿದ ಜೆಡಿಎಸ್ ಸದಸ್ಯರಿಗೆ ಕೊಲೆ ಬೆದರಿಕೆ ಹಾಗೂ ರಾಜಕೀಯ ಜೀವನವನ್ನು ಅಂತ್ಯಗೊಳಿಸುವ ಬೆದರಿಕೆಯನ್ನು ಬಿಜೆಪಿ ಹಾಕುತ್ತಿದೆ. ಈ ಕುರಿತು ಸಿಬಿಐ ತನಿಖೆಯಾಗಬೆಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಈ ಕುದುರೆ ವ್ಯಾಪಾರಕ್ಕೆ ಹೊಣೆಗಾರರು. ಯಡಿಯೂರಪ್ಪನವರಿಗೆ ನೈತಿಕತೆಯಿದ್ದರೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೆಚ್.ಡಿ.ರೇವಣ್ಣನವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಬಹುಮತವನ್ನು ಹೊಂದಿದೆ. ಮೀಸಲಾತಿಯ ಆಧಾರದಲ್ಲಿ ಬಿಜೆಪಿಯವರು ಅಧ್ಯಕ್ಷರಾಗಿದ್ದು, ಈಗಾಗಲೇ 7 ಜನ ಜೆಡಿಎಸ್ ಸದಸ್ಯರನ್ನು ಬಿಜೆಪಿ ಖರೀದಿಸಿದೆ ಎಂದು ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಇದನ್ನೂ ಓದಿ : ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಆರೋಪಿಗಳ ಬಂಧನ



ಬಿ.ಜೆ.ಪಿ.ಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಏಕೆಂದರೆ ಅವರದ್ದು, ಮೂಲಬೂತವಾಗಿ ವ್ಯಾಪಾರಿಗಳ ಪಕ್ಷ. ಆದ್ದರಿಂದ ಅವರು ಜನಪ್ರತಿನಿದಿಗಳನ್ನು ಸಹ ಸರಕಿನಂತೆ ಮಾರಾಟದ ವಸ್ತುವನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ.