ವರದಕ್ಷಿಣಿ ಕಿರುಕುಳದಿಂದ ಗೃಹಿಣಿ ಸಾವು, ವರದಕ್ಷಿಣೆ ದೌರ್ಜನ್ಯಕ್ಕೆ ನವ ವಧು ಬಲಿ, ವರದಕ್ಷಿಣಿ ನೀಡಲಿಲ್ಲ ಎಂದು ಮದುವೆ ನಿಲ್ಲಿಸಿದ ವರನ ಕುಟುಂಬ… ಇಂತಹ ಸುದ್ದಿಗಳು ಸುಮಾರು 10- 15 ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗುತ್ತಿದ್ದವು. ಆದರೆ, ಈಗ ಈ ಪ್ರಕರಣಗಳು ಪತ್ರಿಕೆಯಲ್ಲಿ ಪುಟ್ಟ ಕಾಲಂ ಸುದ್ದಿಯಾಗಿವೆ. ಜನರ ಮನಸ್ಸಿನಲ್ಲಿಯು ಅವುಗಳಿಗೆ ಜಾಗವಿಲ್ಲ.

ಹಾಗಾದರೆ, ವರದಕ್ಷಿಣೆ ಕಿರುಕುಳ ಪ್ರಕರಣಗಳು ಕಡಿಮೆಯಾಗಿವೆಯೇ..? ಈಗ ವರದಕ್ಷಿಣೆ ಪದ್ದತಿ ಜಾರಿಯಿಲ್ಲವೇ, ಸರ್ಕಾರದ ಕಾನೂನಿಗೆ ಜನ ಹೆದರಿಕೊಂಡರೇ ಎಂದು ಭಾವಿಸಿದರೆ ಖಂಡಿತ ನಾವು ದಡ್ಡರಾಗುತ್ತೇವೆ. ಇಂದಿಗೂ ದೇಶದಲ್ಲಿ ಒಂದು ವರ್ಷಕ್ಕೆ ಸುಮಾರು 8,000 ಮಂದಿ ವರದಕ್ಷಿಣೆ ಪದ್ದತಿಗೆ ಬಲಿಯಾಗುತ್ತಿದ್ದಾರೆ. ಇದು ಕೇವಲ ಅಧಿಕೃತವಾಗಿ ವರದಿಯಾಗಿರುವುದು. ಆದರೆ ದಾಖಲಾಗದ ಸಾವಿರಾರು ಪ್ರಕರಣಗಳ ಅಂಕಿ-ಅಂಶಗಳು ಲಭ್ಯವಾಗುವುದಿಲ್ಲ.

ಆತಂಕಕಾರಿ ವಿಷಯವೆಂದರೆ, 1930 ರಲ್ಲಿ 40% ಮದುವೆಗಳಲ್ಲಿ ವರದಕ್ಷಿಣಿ ನೀಡಲಾಗುತ್ತಿತ್ತು. ಆದರೆ 2000 ರಲ್ಲಿ ದೇಶದಲ್ಲಿ ನಡೆಯುವ ಶೇ.90 ರಷ್ಟು ಮದುವೆಗಳಲ್ಲಿ ವಧುವಿನ ಕಡೆಯವರು ವರನಿಗೆ ವರದಕ್ಷಿಣೆ ನೀಡುತ್ತಿದ್ದಾರೆ. ಈ ವರದಕ್ಷಿಣಿಯಿಂದ ಉಂಟಾಗುವ ಅನಾಹುತಗಳು ಬರಿ ಸಾವು, ದೌರ್ಜನ್ಯವಲ್ಲ. ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಶುಗಳ ಹತ್ಯೆಗೆ ಕಾರಣವಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಅದು ಭ್ರಷ್ಟತೆಯನ್ನು ಬೆಂಬಲಿಸಿದಂತೆ..

1980 ರಲ್ಲಿ ಅಂತರರಾಷ್ಟೀಯವಾಗಿ ಚಿನ್ನದ ಬೆಲೆ ಹೆಚ್ಚಳವಾದಾಗ, ಭಾರತದಲ್ಲಿಯೂ ಚಿನ್ನದ ಬೆಲೆ ಹೆಚ್ಚಳವಾಗಿದೆ. ಇದೆ ನೇರ ಪರಿಣಾಮ ಬೀರಿದ್ದು, ಹೆಣ್ಣುಮಕ್ಕಳ ಮೇಲೆ. ಸಂಶೋಧನೆಯೊಂದರ ಪ್ರಕಾರ ಈ ಸಮಯದಲ್ಲಿ ಹೆಚ್ಚು ಹೆಣ್ಣು ಶಿಶುಗಳ, ಭ್ರೂಣಗಳ ಹತ್ಯೆಗೆ ಕಾರಣವಾಗಿತ್ತು ಎಂದು ತಿಳಿಸಿದೆ. ಏಕೆಂದರೆ ವರದಕ್ಷಿಣೆ ಕೇವಲ ಒಬ್ಬ ಮಹಿಳೆಯ ಮೇಲೆ ಅಲ್ಲ. ಒಂದು ಕುಟುಂಬದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಗಂಡು ಮಗು ಹುಟ್ಟಿದ್ದರೆ ಹಣವನ್ನು ವ್ಯವಹಾರದಲ್ಲಿ ತೊಡಗಿಸಲು ಬಳಸಲಾಗುತ್ತದೆ. ಅದೇ ಹೆಣ್ಣು ಜನಿಸಿದರೇ ವರದಕ್ಷಿಣಿಗಾಗಿ ಹಣವನ್ನು ಉಳಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳನ್ನು ಬೇಡ ಎನ್ನುವ ದೊಡ್ಡ ವರ್ಗವಿದೆ.

ವರದಕ್ಷಿಣಿ ಪದ್ಧತಿ ಕೇವಲ ಭಾರತದಲ್ಲಿ ಮಾತ್ರ ಅಸ್ಥಿತ್ವದಲ್ಲಿರಲಿಲ್ಲ. ಯೂರೋಪಿಯನ್ ದೇಶಗಳಲ್ಲಿಯೂ ಇತ್ತು. 1661 ರಲ್ಲಿ ಪೋರ್ಚುಗಲ್‌ನಲ್ಲಿ ನಡೆದ ಒಂದು ರಾಜವಂಶಸ್ಥರ ಮದುವೆಯಲ್ಲಿ ಬಾಂಬೆಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ವರದಿಯಾಗಿದೆ. ಆರ್ಥಿಕತೆ ಮುಂದುವರೆದಂತೆ, ಅಭಿವೃದ್ಧಿ ಕಾಣುತ್ತಿದ್ದಂತೆ ಯುರೋಪಿಯನ್ ದೇಶಗಳಲ್ಲಿ ವರದಕ್ಷಿಣಿ ಕಡಿಮೆಯಾಯಿತು. ಆದರೆ ಭಾರತದಲ್ಲಿ ಆರ್ಥಿಕತೆ ಮುಂದುವರೆದಂತೆ ವರದಕ್ಷಿಣೆ ಪದ್ಧತಿಯ ಹೆಚ್ಚಳಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಚಾಲ್ತಿಯಲ್ಲಿರುವ ವಿವಾಹ ವ್ಯವಸ್ಥೆ ಸುಧಾರಿಸಬೇಕು: ವರದಕ್ಷಿಣೆ ಹತ್ಯೆಗಳ ಬಗ್ಗೆ ಪಿಣರಾಯಿ ವಿಜಯನ್‌

ವರದಕ್ಷಿಣೆಯ ಹಿನ್ನಲೆ

ಆರಂಭದಲ್ಲಿ ಮದುವೆ ಸಂದರ್ಭದಲ್ಲಿ ವಧುವಿಗೆ ಉಡುಗೊರೆ ನೀಡಲಾಗುತ್ತಿತ್ತು. ವರದಕ್ಷಿಣೆ ಎನ್ನುವುದು ಬಳಕೆಗೆ ಬಂದಿದ್ದು, ಕನ್ಯಾಧನ್, ಸ್ತ್ರೀಧನ್ ಮತ್ತು ಹಿಂದೂ ಪರಿವಾರದಲ್ಲಿ ಮದುವೆಯ ಸಮಯದಲ್ಲಿ ಹೆಣ್ಣಿಗೆ ನೀಡುತ್ತಿದ್ದ ದಾನಗಳಿಂದ. ಆ ಸಮಯದಲ್ಲಿ ಮಹಿಳೆಗೆ ಪೋಷಕರ ಆಸ್ತಿಯಲ್ಲಿ ಹಕ್ಕಿರಲಿಲ್ಲ. ಆದರೆ ಈಗ ಅದು ಬದಲಾಗಿವೆ. ಹೆಣ್ಣು ಮಗಳಿಗಾಗಿ ನೀಡುತ್ತಿದ್ದ ಉಡುಗೊರೆ, ಈಗ ಗಂಡಿಗೆ ನೀಡಲಾಗುತ್ತಿದೆ. ಮದುವೆ ಗಂಡಿನ ಮಾರ್ಕೆಟ್ ವ್ಯಾಲ್ಯೂ ಮೇಲೆ ವರದಕ್ಷಿಣೆ ನಿರ್ಧಾರಿತವಾಗುತ್ತಿದೆ, ಗಂಡಿನ ಮಾರುಕಟ್ಟೆ ಬೆಲೆ ಆ ಗಂಡಿನ ಜಾತಿ, ಶಿಕ್ಷಣ, ಉದ್ಯೋಗ ಮತ್ತು ಸಂಬಳದ ಮೇಲೆ ವರದಕ್ಷಿಣೆಯ ಪ್ರಮಾಣ ಅವಲಂಭಿಸಿರುತ್ತದೆ.

19ನೇ ಶತಮಾನದಲ್ಲಿ ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ವಧುದಕ್ಷಿಣೆ ಪದ್ಧತಿ ಇತ್ತು. ಅದು ಬಡವರ ಮನೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಂಡಾಗ ಆ ಮನೆಯಲ್ಲಿ ದುಡಿಯುವ ಕೈಗಳು ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ನೀಡಲಾಗುತ್ತಿತ್ತು. ಆದರೆ ಈ ವಧುದಕ್ಷಿಣೆ ತೀರಾ ತೀರಾ ಅಪರೂಪವಾಗಿದೆ. ಆದರೆ ವರದಕ್ಷಿಣೆ ಪದ್ದತಿಯಲ್ಲಿ ಬದಲಾವಣೆ ಭಾರಿ ಪ್ರಮಾಣದಲ್ಲಿದೆ.  ಆರ್ಥಿಕತೆ ಅಭಿವೃದ್ಧಿಯಾಗುತ್ತಿದ್ದಂತೆ ವರದಕ್ಷಿಣೆ ಕೂಡ ಕಡಿಮೆಯಾಗಲಿದೆ ಎನ್ನುವ ಆಲೋಚನೆ ಭಾರತದಲ್ಲಿ ಉಲ್ಟಾ ಆಗಿದೆ.

ಹಾಗಾದರೇ ಭಾರತದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದು ಏಕೆ..?

ದೇಶದಲ್ಲಿ ವರದಕ್ಷಿಣಿ ಪದ್ಧತಿ ಹೆಚ್ಚಾಗಲು ಹಲವಾರು ಜನ ತಮ್ಮ ಸಿದ್ದಾಂತಗಳನ್ನು ಮಂಡಿಸಿದ್ದಾರೆ. ನಾವು ಪ್ರಮುಖವಾಗಿ 3 ಸಿದ್ಧಾಂತಗಳನ್ನು ನೋಡಬಹುದು.

1. ಭಾರತದ ಹಿರಿಯ ಸಮಾಜವಾದಿ ಎಂ.ಎನ್ ಶ್ರೀನಿವಾಸ್ ಅವರ theory of sanskritisation (ಸಂಸ್ಕೃತೀಕರಣ) ಸಿದ್ದಾಂತ

ಈ ಸಿದ್ದಾಂತದ ಪ್ರಕಾರ, ಕೆಳವರ್ಗದ ಜನರು ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಲು ಮೇಲ್ಜಾತಿಯ ಜನರ ಪದ್ಧತಿ, ಆಚಾರ ವಿಚಾರಗಳನ್ನು ನಕಲು ಮಾಡುತ್ತಾರೆ. ಇದನ್ನು ಸಂಸ್ಕೃತೀಕರಣ ಎನ್ನಲಾಗುತ್ತದೆ. ಈ ವರದಕ್ಷಿಣೆ ಪದ್ಧತಿ ಕೂಡ ಮೇಲ್ಜಾತಿಯಲ್ಲಿದ್ದು, ಈ ಮೂಲಕ ಕೆಳ ವರ್ಗದವರಲ್ಲೂ ಬಂದಿದೆ ಎಂದು ತಮ್ಮ ಸಿದ್ಧಾಂತದಲ್ಲಿ ಹೇಳಿದ್ದಾರೆ. ಆದರೆ ಈ ಸಿದ್ಧಾಂತಯನ್ನು ತಜ್ಞರಾದ ಗೌರವ್ ಚಿಪ್ಲುಂಕರ್‌ ಮತ್ತು ಜೆಪ್ರೀ ಒಪ್ಪುವುದಿಲ್ಲ. ಏಕೆಂದರೆ ಈ ವರದಕ್ಷಿಣೆ ಗ್ರಾಫ್‌ನಲ್ಲಿರುವ ಸತತ ಏರಿಕೆಯನ್ನು ಈ ಸಿದ್ಧಾಂತ ವಿವರಿಸುವುದಿಲ್ಲ ಎಂದಿದ್ದಾರೆ. ವರದಕ್ಷಿಣೆ ಗ್ರಾಫ್‌ನಲ್ಲಿ ಎಲ್ಲಾ ಜಾತಿಗಳಲ್ಲೂ ವರದಕ್ಷಿಣೆ ಪದ್ಧತಿ ಇರುವುದು ಕಾಣಿಸುತ್ತದೆ.

Prevalence and evolution of dowry in India

2. ಸಿವಾನ್ ಆಂಡ್ರೂಸನ್‌ ಅವರ ಆರ್ಥಿಕತೆಯ ಅಭಿವೃದ್ದಿ (Economic development theory) ಸಿದ್ದಾಂತ

ಭಾರತದಲ್ಲಿ ವರದಕ್ಷಿಣೆ ಹೆಚ್ಚಾಗಲು ಆರ್ಥಿಕ ಅಭಿವೃದ್ಧಿ ಕಾರಣ ಎಂದು ಶಿವಾನ್ ಆಂಡ್ರೂಸನ್‌ ಅವರ ಆರ್ಥಿಕತೆಯ ಅಭಿವೃದ್ದಿ ಸಿದ್ದಾಂತ ತಿಳಿಸುತ್ತದೆ. ಹಿಂದೂ ಸಮುದಾಯದ ಕುಟುಂಬ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ತಮಗಿಂತ ಹೆಚ್ಚು ಮೇಲ್ವರ್ಗದವರಿಗೆ ನೀಡಲು ಬಯಸುತ್ತಾರೆ. ಆರ್ಥಿಕ ಅಭಿವೃದ್ಧಿಯಿಂದಾಗಿ ಕೆಳವರ್ಗದವರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದು, ಅವರು ಕೂಡ ಮೇಲ್ಜಾತಿಯವರಿಗೆ ಪ್ರತಿಸ್ಪರ್ಧಿಗಳಾಗಿದ್ದಾರೆ ಹಾಗಾಗಿ ವರದಕ್ಷಿಣಿ ಹೆಚ್ಚುತ್ತದೆ. ಇದರಿಂದ ಗ್ರಾಫ್ ಕೂಡ ಹೆಚ್ಚಾಗಿದೆ ಎಂದು ಆಂಡ್ರೂಸನ್ ಗ್ರಹಿಸುತ್ತಾರೆ. ಆದರೆ, ಇದು ಪೇಪರ್‌ನಲ್ಲಿ ಓದಲು ಚೆನ್ನಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಮತ್ತು ಹಲವು ಸಂಶೋಧನೆಗಳು ಹೇಳುವುದೆಂದರೆ, ಜನ ತಮ್ಮದೆ ಜಾತಿಯೊಳಗಡೆ ಮದುವೆ ಮಾಡಲು ಬಯಸುತ್ತಾರೆ ಹೊರತು ಮೇಲ್ಜಾತಿ ಅಥವಾ ಬೇರೆ ಜಾತಿಯವರೊಂದಿಗೆ ಅಲ್ಲ ಎಂಬುದಾಗಿದೆ.

೩. ವರನ ಅರ್ಹತೆ ( theory Groom quality)

ಈ ಸಿದ್ದಾಂತದ ಪ್ರಕಾರ ಹಲವು ವರ್ಷಗಳಿಂದ ವರನ ಅರ್ಹತೆಗಳು ಹೆಚ್ಚಾಗುತ್ತಿವೆ. ಹೀಗಾಗಿ ವರದಕ್ಷಿಣೆ ನೀಡುವುದು ಅನಿವಾರ್ಯ ಎನ್ನುವಂತಾಗಿದೆ. ದೇಶ ಸ್ವತಂತ್ರ ಪಡೆದ ಬಳಿಕ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚು ಬದಲಾವಣೆಯಾಗಿದೆ. ಶಿಕ್ಷಣಕ್ಕೆ ಹಣ ಹೂಡುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಶಿಕ್ಷಣ ಪಡೆದು, ಒಳ್ಳೆ ಕೆಲಸ ಪಡೆದ ಪುರುಷರನ ಅರ್ಹತೆ ಕೂಡ ಹೆಚ್ಚಾಯಿತು. ಇದರಿಂದ ಆತನ ಮಾರುಕಟ್ಟೆ ವ್ಯಾಲ್ಯೂ ಕೂಡ ಹೆಚ್ಚಾಯಿತು. ಈಗ ಮಹಿಳೆಯರು ವಿದ್ಯಾವಂತರಾಗುತ್ತಿದ್ದಾರೆ. ಆಗ ಇಬ್ಬರ ನಡುವೆ ಸಮಾನತೆ ಬಂದಾಗ ಮಹಿಳೆಯ ಅರ್ಹತೆಯನ್ನು ಹೆಚ್ಚಿಸಲು ಕೂಡ ವರದಕ್ಷಿಣೆ ನೀಡಲಾಗುತ್ತಿದೆ ಎಂದು ವರದಕ್ಷಿಣೆ ಹೆಚ್ಚಳದ ಬಗ್ಗೆ ಸಂಶೋಧನೆ ನಡೆಸಿರುವ ತಜ್ಞ ಗೌರವ್ ಚಿಪ್ಲುಂಕರ್‌ ಹೇಳುತ್ತಾರೆ.

ಭಾರತದಲ್ಲಿ ಶಿಕ್ಷಣ ಕ್ರಾಂತಿಯಾಗಿದೆ. ಮಹಿಳೆಯರು ಪುರುಷರು ಶೈಕ್ಷಣಿಕವಾಗಿ ಮುಂದಿದ್ದಾರೆ ಎಂದ ಮಾತ್ರಕ್ಕೆ ಮಹಿಳೆಯರು ಕೆಲಸಕ್ಕೆ ಹೋಗುತ್ತಿದ್ದಾರೆ ಎಂಬ ಅರ್ಥವಲ್ಲ. ಅಂದರೆ ವೇತನ ಪಡೆಯುವ ಕೆಲಸಕ್ಕೆ ಆಕೆ ಹೋಗುವುದು ಈಗಲೂ ಕಡಿಮೆ.

ಇದನ್ನೂ ಓದಿ: ಇಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ? ಜಾತಿ ಬಗ್ಗೆ ಮಾತನಾಡಬಾರದೇ?: ಸತೀಶ್ ನಿನಾಸಂ

ಬೇರೆ ದೇಶಗಳಿಗೆ ಹೋಲಿಸಿದರೇ ಭಾರತದಲ್ಲಿ ಮಹಿಳೆಯರು ವೇತನ ಪಡೆಯುವ ಕೆಲಸಕ್ಕೆ ಹೋಗುವುದು ಕಡಿಮೆ. ಹೆಚ್ಚಾಗಿ ಮನೆಯ ಕೆಲಸಗಳಲ್ಲಿಯೇ ತೊಡಗಿಸಿಕೊಂಡಿರುತ್ತಾರೆ. ಮನೆಯ ಪೂರ್ತಿ ಜವಾಬ್ದಾರಿ ಆಕೆಯ ಮೇಲಿರುವುದರಿಂದ ಆಕೆ ಹೊರಗಡೆ ಹೋಗಿ ದುಡಿಯುವುದು ಕಡಿಮೆಯಾಗುತ್ತದೆ.  2014 ರ ಎನ್‌ಎಸ್‌ಎಸ್‌ ವರದಿಯಂತೆ ದೇಶದ 60 ರಿಂದ 64% ರಷ್ಟು ಮಹಿಳೆಯರು ಮನೆ ಕೆಲಸಗಳನ್ನು ಮಾಡಬೇಕಿರುತ್ತದೆ. ಏಕೆಂದರೆ ಮನೆಯಲ್ಲಿ ಯಾರು ಆ ಕೆಲಸಗಳನ್ನು ಮಾಡಲು ಸಿದ್ಧರಿರುವುದಿಲ್ಲ. ಜೊತೆಗೆ ಸಮಾಜದ ಹಲವು ವರ್ಗಗಳಲ್ಲಿ ಉತ್ತಮ ಮನೆಯ ಹೆಣ್ಣು ಮಕ್ಕಳು ಹೊರಗಡೆ ದುಡಿಯಲು ಹೋಗಬಾರದು ಎಂಬ ಭಾವನೆಯಿದೆ.

ಭಾರತದಲ್ಲಿ ಕಾನೂನಿನ ಮೂಲಕ ವರದಕ್ಷಿಣೆ ನಿಷೇಧ ಮಾಡುವುದರಿಂದ ಇದು ಕೊನೆಗೊಳ್ಳುವುದಿಲ್ಲ. ಈಗಾಗಲೇ ದೇಶದಲ್ಲಿ ಹಲವು ಕಠಿಣ ಕಾನೂನುಗಳಿವೆ. ಆದರೆ ವರದಕ್ಷಿಣಿ ನೀಡುವುದು-ಪಡೆಯುವುದು ಕಡಿಮೆಯಾಗಿಲ್ಲ. ಕಡಿಮೆಯಾಗಲು ಮೊದಲು ನಾವು ಪುರುಷರಷ್ಟೇ ಮಹಿಳೆಯರಿಗೂ ಸಮಾನವಾದ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ನೀಡಬೇಕು. ಆರ್ಥಿಕವಾಗಿ ಮಹಿಳೆಯರನ್ನು ಸಬಲಗೊಳಿಸಬೇಕು. ಜೊತೆಗೆ ಸಮಾಜದ ಚಿಂತನೆಗಳನ್ನು ಬದಲಿಸಬೇಕಿದೆ.

ಕೇವಲ ಕಾನೂನಿನಿಂದ, ಜೈಲಿಗೆ ಹಾಕುವುದರಿಂದ ಇಡು ಕಡಿಮೆಯಾಗುವುದಾಗಿದ್ದರೇ ಇಷ್ಟೋತ್ತಿಗೆ ಈ ಪದ್ದತಿ ಬುಡ ಸಮೇತ ನಾಶವಾಗಬೇಕಿತ್ತು. ಆದರೆ ಇನ್ನೂ ಬೆಳೆಯುತ್ತೇ ಇದೆ. ಅಂದರೆ ಅದಕ್ಕೆ ಮೂಲ ಕಾರಣ ಸಮಾಜದಲ್ಲಿ ಜಾಗೃತಿ ಮೂಡಿಸುವುದಾಗಿದೆ. ಈಗ ವರದಕ್ಷಿಣೆ ನೀಡುವುದು ಗೌರವದ ಸಂಕೇತವಾಗಿಬಿಟ್ಟಿದೆ. ಈ ಮನಸ್ಥಿತಿಯನ್ನು ಬದಲಿಸಬೇಕಿದೆ. ಇದು ಧೀರ್ಘ ಸಮಯ ತೆಗೆದುಕೊಳ್ಳುತ್ತದೆಯಾದರೂ ಈಗಿನಿಂದಲೇ ಆರಂಭಿಸಬೇಕಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ, ಅತಿ ಸಣ್ಣ ಕೈಗಾರಿಕೆಗಳನ್ನು ಬೆಳಸಬೇಕಿದೆ. ಉತ್ತಮವಾದ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕಿದೆ. ಏಕೆಂದರೆ, ಉತ್ತಮ ರಸ್ತೆಗಳನ್ನು ನಿರ್ಮಿಸುವುದರಿಂದ ಶೇಕಡಾ 50 ರಷ್ಟು ಮಹಿಳೆಯರು ಹೊರ ಬಂದು ಕೆಲಸ ಮಾಡಲು ಸಾಧ್ಯ ಎಂಬುದನ್ನು ಸರ್ವೆಯೊಂದು ಬಹಿರಂಗಪಡಿಸಿದೆ.

ಕೇರಳದಲ್ಲಿ ಇತ್ತಿಚೆಗೆ ಮೂವರು ಯುವತಿಯರು ವರದಕ್ಷಿಣಿಗೆ ಬಲಿಯಾದ ಬಳಿಕ ಪ್ರಕರಣಗಳ ವಿಚಾರಣೆಗೆ, ತನಿಖೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶೇಷ ತನಿಖಾ ದಳ ರಚಿಸಿದ್ದಾರೆ. ’ಲಿಂಗಸಮಾನತೆಯನ್ನು ಮಕ್ಕಳ ಮನಸ್ಸಿನಲ್ಲಿ ಇಳಿಸುವ ಸಲುವಾಗಿ ಕೇರಳದ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗುತ್ತದೆ. ಮಹಿಳೆಯರಿಗೆ ಅಗೌರವ ತೋರುವ ಪದಗಳು ಮತ್ತು ನುಡಿಗಟ್ಟುಗಳನ್ನು ತೆಗೆದುಹಾಕಲಾಗುತ್ತದೆ. ಶಾಲಾ-ಕಾಲೇಜುಗಳನ್ನು ಲಿಂಗಸಮಾನತೆಯ ಮತ್ತು ಸಮಾನ ಹಕ್ಕುಗಳ ತಾಣಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

’ಒಂದು ಸಮಾಜವಾಗಿ, ನಾವು ಚಾಲ್ತಿಯಲ್ಲಿರುವ ವಿವಾಹ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ಮದುವೆಯು ಕುಟುಂಬದ ಸಾಮಾಜಿಕ ಸ್ಥಾನಮಾನ ಮತ್ತು ಸಂಪತ್ತಿನ ಆಡಂಬರದ ಪ್ರದರ್ಶನವಾಗಿರಬಾರದು. ಅನಾಗರಿಕ ವರದಕ್ಷಿಣೆ ಪದ್ಧತಿಯು ನಮ್ಮ ಹೆಣ್ಣುಮಕ್ಕಳನ್ನು ಸರಕುಗಳಂತೆ ಪರಿಗಣಿಸುತ್ತದೆ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ನಾವು ಅವರನ್ನು ಮಾನವರಂತೆ ಉತ್ತಮವಾಗಿ ಪರಿಗಣಿಸಬೇಕು” ಎಂದಿದ್ದಾರೆ.

ಇದನ್ನೂ ಓದಿ: ಬೀದಿಬದಿಯಲ್ಲಿ ಚಿಪ್ಸ್, ಬಿಸ್ಕತ್ ಮಾರಾಟ ಮಾಡುತ್ತಿರುವ, ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದ ಅಂತರರಾಷ್ಟ್ರೀಯ ಮಹಿಳಾ ಕ್ರೀಡಾಪಟು!

“ಮಹಿಳೆಯರು ಕೀಳಲ್ಲ, ಅವರಿಗೆ ಸಮಾನ ಹಕ್ಕುಗಳಿವೆ ಎಂಬ ಸತ್ಯವನ್ನು ಪುರುಷರು-ಮಹಿಳೆಯರು ಒಪ್ಪಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವ ಸಂಘಟನೆಗಳು ಜಾಗೃತಿ ಅಭಿಯಾನವನ್ನು ಪ್ರಾರಂಭಿಸಬೇಕಾಗಿದೆ. ಅಂತಹ ಪ್ರಗತಿಪರ ವರ್ತನೆಗಳನ್ನು ತಮ್ಮ ಮಕ್ಕಳಲ್ಲಿ ಬೆಳೆಸಲು ಪೋಷಕರು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಮಾಡಬೇಕು. ನಾವು ಹೊಸ ಸಂಸ್ಕೃತಿಯನ್ನು ಪೋಷಿಸಬೇಕು” ಎಂದು ಅವರು ಹೇಳಿದ್ದಾರೆ.

ನಾನುಗೌರಿ.ಕಾಂ ಜೊತೆ ಗೆ ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಹೈಕೋರ್ಟ್ ವಕೀಲೆ ರಾಜಲಕ್ಷ್ಮೀ ಅಂಕಲಗಿ, “ವರದಕ್ಷಿಣೆ ನೀಡುವುದು ಇಂದು ಗೌರವದ ಸಂಕೇತವಾಗಿದೆ. ಸಾಫ್ಟ್‌ವೇರ್‌ ಜಾಬ್, ಅಮೆರಿಕಾದ ಗಂಡು ಹೀಗೆ ಹಲವು ಆಯಾಮಗಳಲ್ಲಿ ವರದಕ್ಷಿಣೆ ಪಡೆಯುತ್ತಾರೆ. ವರದಕ್ಷಿಣೆಯನ್ನು ಪ್ರಚುರ ಪಡಿಸುವ ಸಮುದಾಯಗಳು ಇವೆ. ಮೊದಲು ಮುಸ್ಲಿಂ ಸಮುದಾಯದಲ್ಲಿ ಈ ಮೊದಲು ವರದಕ್ಷಿಣೆ ಎಂಬುದು ಇರಲಿಲ್ಲ. ಅಲ್ಲಿ ’ಮೆಹೆರ್‌’ ಎನ್ನುವ ಪದ್ಧತಿ ಇತ್ತು. ವಧುಗೆ ಹಣ ನೀಡಿ ಮದುವೆಯಾಗುತ್ತಿದ್ದರು. ಇಷ್ಟು ದಿನ ವರದಕ್ಷಿಣೆ ಪದ್ಧತಿ ಇಲ್ಲದ ಸಮುದಾಯಗಳಿಗೂ ಈ ಪದ್ಧತಿ ಹರಡಿದೆ” ಎನ್ನುತ್ತಾರೆ.

’ಇನ್ನು ಸಂಬಳ, ಆರ್ಥಿಕ ಸ್ಥಿತಿಗತಿಗಳು ಹೆಚ್ಚಾದಂತೆ ಪ್ರದರ್ಶನ ಕೂಡ ಹೆಚ್ಚಾಗುತ್ತದೆ. ಅದು ಮದುವೆಗಳಲ್ಲಿ ಕಾಣಿಸುತ್ತದೆ. ಈ ಪ್ರದರ್ಶನಗಳು ಹೆಚ್ಚಾಗಿ ಪಿಡುಗಾಗಿ ಮಾರ್ಪಡಾಗುತ್ತದೆ. ಇಂದು ಹೆಣ್ಣು ಮಕ್ಕಳು ವಿದ್ಯಾವಂತರಾಗಿದ್ದಾರೆ, ದುಡಿಯುತ್ತಾರೆ ಆದರೆ ಅವರಿಗೆ ತಮ್ಮ ಹಣವನ್ನು ಹೇಗೆ ಬಳಸಬೇಕು ಎಂಬುದನ್ನು ತಂದೆ ಅಥವಾ ಗಂಡ ನಿರ್ಧರಿಸುತ್ತಾರೆ. ಆರ್ಥಿಕವಾಗಿ ಸದೃಢವಾಗುವ ಜೊತೆಗೆ ಎಂಪವರ್‌ಮೆಂಟ್‌ ಕೂಡ ಮುಖ್ಯ. ಆಗ ಮಹಿಳೆ ವರದಕ್ಷಿಣೆ ವಿರುದ್ಧ ಮಾತನಾಡುತ್ತಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

’ವರದಕ್ಷಿಣೆ ಪಡೆಯುವವರ ಜೊತೆಗೆ ವರದಕ್ಷಿಣೆ ಕೊಡುವವರ ವಿರುದ್ಧವು ಕ್ರಮ ಜಾರಿಯಾಗಬೇಕು. ಅವರ ಬಗ್ಗೆ ಸಹಾನೂಭೂತಿ ಬಿಟ್ಟು ಕ್ರಮ ಜರುಗಿಸಿಬೇಕು. ಹೆಣ್ಣು ಒಂದು ಜವಾಬ್ದಾರಿಯಾಗಬಾರದು. ತಂದೆ- ತಾಯಿಗೆ ಶಿಕ್ಷಣ ಬೇಕು. ಹೆಣ್ಣು ಮಕ್ಕಳು ಮತ್ತು ಆಕೆಯ ಪೋಷಕರು ಎಚ್ಚೆತ್ತುಕೊಳ್ಳಬೇಕು. ಮಾಧ್ಯಮ ಅದರಲ್ಲೂ ಅತ್ತೆ-ಸೊಸೆ ಜಗಳ ಬಿಟ್ಟು ಧಾರಾವಾಹಿಗಳು ಬದಲಾಗಬೇಕು. ಸಂಘ ಸಂಸ್ಥೆಗಳ ಜೊತೆ ಸೇರಿ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಬಹಳಷ್ಟು ಕೆಲಸ ಮಾಡಬೇಕಿದೆ’ ಎಂದು ವಕೀಲೆ ರಾಜಲಕ್ಷ್ಮೀ ಅಂಕಲಗಿ ಹೇಳುತ್ತಾರೆ.

ಅಯ್ಯೊ ಅದು ದೊಡ್ಡ ಪಿಡುಗು ಅದನ್ನು ಬಗೆಹರಿಸಲು ಬರುವುದಿಲ್ಲ ಎಂಬ ಸಿನಿಕತನವನ್ನು ಎಲ್ಲರೂ ಬಿಡಬೇಕಿದೆ. ‘ಸಾವಿರ ಮೈಲಿಯ ಪಯಣಕೂ ಕೂಡ ಒಂದೇ ಹೆಜ್ಜೆಯ ಆರಂಭ’ ಎನ್ನುವಂತೆ ಮೊದಲು ಪ್ರತಿಯೊಬ್ಬರು ವರದಕ್ಷಿಣೆ ಪಡೆಯಬಾರದು ಮತ್ತು ತೆಗೆದುಕೊಳ್ಳಬಾರದು ಪ್ರತಿಜ್ಞೆ ಮಾಡಬೇಕಿದೆ. ಇಲ್ಲಿಂದ ಆರಂಭವಾಗಿ ಮಹಿಳೆಯರು ಸಹ ತನ್ನಂತೆಯೇ ಎಲ್ಲಾ ಹಕ್ಕುಗಳನ್ನು ಹೊಂದಿರುವ ಸಹಜೀವಿ ಎಂದು ಸಮಾಜ ಭಾವಿಸುವಂತೆ ಮಾಡುವತ್ತ ಹೆಜ್ಜೆ ಇಟ್ಟಲ್ಲಿ ವರದಕ್ಷಿಣೆ ರೀತಿಯ ನೂರಾರು ಅನಿಷ್ಠಗಳು ಕಣ್ಮರೆಯಾಗಲು ಸಾಧ್ಯ.. ಅದು ನಮ್ಮಿಂದಲೇ ಆರಂಭವಾಗಲಿ ಎಂದು ಎಲ್ಲರೂ ತೀರ್ಮಾನಿಸುತ್ತಾರೆ ಎಂಬ ಆಶಯ ನಮ್ಮದು.

  • ಮಮತ ಎಂ

ಇದನ್ನೂ ಓದಿ: ಗೌರಿ ಕಾರ್ನರ್: ಸೋಮಾಲಿಯಾದ ಅರಣ್ಯ ರಕ್ಷಿಸಿದ ಫಾತಿಮಾ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here