ಚಲಿಸುತ್ತಿರುವ ರೈಲಿನಲ್ಲಿ ಅರೆಬೆತ್ತಲೆಯಾಗಿ ಓಡಾಡಿ ಸುದ್ದಿಯಾಗಿದ್ದ ಜೆಡಿಯು ಶಾಸಕ ಗೋಪಾಲ್ ಮಂಡಲ್ ವಿರುದ್ದ, ಅವರ ಸಹ ಪ್ರಯಾಣಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೇವಲ ಒಳಉಡುಪಿನಲ್ಲಿ ನಡೆದಾಡಿರುವುದನ್ನು ಆಕ್ಷೇಪಿಸಿದ್ದ ಸಹ ಪ್ರಯಾಣಿಕನ ಜೊತೆಗೆ ಜೆಡಿಯು ಶಾಸಕ ಅನುಚಿತವಾಗಿ ವರ್ತಿಸಿದ್ದು ಮಾತ್ರವಲ್ಲದೆ, ಅವರ ಚಿನ್ನದ ಉಂಗುರ ಮತ್ತು ಸರವನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಗುರುವಾರದಂದು ಬಿಹಾರ ಆಡಳಿತ ಪಕ್ಷವಾಗಿರುವ ಜೆಡಿಯುನ ಶಾಸಕರಾದ ನರೇಂದ್ರ ಕುಮಾರ್ ನೀರಜ್ ಅಲಿಯಾಸ್ ಗೋಪಾಲ್ ಮಂಡಲ್ ಅವರು ರೈಲಿನಲ್ಲಿ ಕೇವಲ ಒಳಉಡುಪಿನಲ್ಲಿ ಓಡಾಡಿರುವ ಘಟನೆ ಸುದ್ದಿಯಾಗಿತ್ತು. ಘಟನೆಯು ಕ್ಯಾಮಾರಾದಲ್ಲಿ ಸೆರೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗುವಂತೆ ನಡೆದುಕೊಂಡ ಬಗ್ಗೆ ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂಓದಿ: ಬಿಹಾರ: ರೈಲಿನೊಳಗೆ ಒಳಉಡುಪಿನಲ್ಲಿ ಓಡಾಡಿದ ಜೆಡಿಯು ಶಾಸಕ!
ಸಹ-ಪ್ರಯಾಣಿಕ ಪ್ರಹ್ಲಾದ್ ಪಾಸ್ವಾನ್ ಎಂಬವರು ಶಾಸಕನ ವಿರುದ್ದ ದೆಹಲಿಯ ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಅವರು, “ಎಂಎಲ್‌ಎ ಅವರು ರೈಲಿನ ಕೋಚ್‌ನಲ್ಲಿ ಒಳ ಉಡುಪಿನಲ್ಲಿ ತಿರುಗಾಡುತ್ತಿದ್ದರು. ಈ ಸಮಯದಲ್ಲಿ ಅವರು ಮದ್ಯಪಾನ ಮಾಡಿದ್ದರು. ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾಗ, ಎಂಎಲ್‌ಎ ನನ್ನ ಚಿನ್ನದ ಉಂಗುರ ಮತ್ತು ಸರವನ್ನು ಕಸಿದುಕೊಂಡು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು” ಎಂದು ತಿಳಿಸಿದ್ದಾರೆ.
ಶಾಸಕರಾಗಿರುವ ಗೋಪಾಲ್ ಮಂಡಲ್ ಅವರು ಪಾಟ್ನಾದಿಂದ ದೆಹಲಿಗೆ ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್‌ನ ಎ -1 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಪಾಟ್ನಾದಿಂದ ಹೊರಟ ತಕ್ಷಣ, ಅವರು ತನ್ನ ಒಳ ಉಡುಪುಗಳಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದ್ದು, ಇದರ ವಿರುದ್ದ ಸಹ ಪ್ರಯಾಣಿಕರು ಪ್ರತಿಭಟಿಸಿದ ನಂತರವೂ, ಅವರು ಅದೇ ಉಡುಪಿನಲ್ಲಿ ಶೌಚಾಲಯದ ಕಡೆಗೆ ನಡೆಯುತ್ತಿದ್ದರು ಎಂದು ವರದಿಯಾಗಿದೆ.
ಆದರೆ ಶಾಸಕ ತನ್ನ ನಡೆಯನ್ನು ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ. ರೈಲು ಹತ್ತಿದ ಕೆಲವೇ ನಿಮಿಷಗಳಲ್ಲಿ ತಾನು ಅನಾರೋಗ್ಯಕ್ಕೆ ಒಳಗಾದ ಕಾರಣ ತನಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಹೇಳಿದ್ದಾರೆ.
“ನಾನು ರೈಲು ಹತ್ತಿದ ತಕ್ಷಣ, ಬೇದಿ ಪ್ರಾರಂಭವಾಗಿತ್ತು. ಹಾಗಾಗಿ ನಾನು ನನ್ನ ಕುರ್ತಾ ಪೈಜಾಮಾವನ್ನು ತೆಗೆದು ಟವಲ್ ಅನ್ನು ನನ್ನ ಭುಜದ ಮೇಲೆ ಹಾಕಿಕೊಂಡೆ. ಅದನ್ನು ನನ್ನ ಸೊಂಟಕ್ಕೆ ಸುತ್ತಲು ನನಗೆ ಸಮಯವಿರಲಿಲ್ಲ. ಹಾಗಾಗಿ ನಾನು ಒಳ ಉಡುಪುಗಳನ್ನು ಮಾತ್ರ ಧರಿಸಿ ಓಡಾಡಿದ್ದೆ” ಎಂದು ಮಂಡಲ್ ಹೇಳಿದ್ದಾರೆ.
ಇದನ್ನೂಓದಿ: ಬಲವಂತವಾಗಿ 68 ಹುಡುಗಿಯರ ಒಳವಸ್ತ್ರ ತೆಗೆಸಿ ಅವಮಾನ ಮಾಡಿದ ಪ್ರಾಂಶುಪಾಲೆ: ಗುಜರಾತಿನ ಕಾಲೇಜಿನಲ್ಲೊಂದು ಆಘಾತಕಾರಿ ಘಟನೆ


