ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಗೆ ಪ್ರವೇಶಾತಿಗೆ ಜೆಇಇ ಮೇನ್ಸ್‌ಗೆ ತಯಾರಿ ನಡೆಸಲು ರಾಜಸ್ಥಾನದ ಕೋಟಾಕ್ಕೆ ಆಗಮಿಸಿದ್ದ 18 ವರ್ಷದ ಬಾಲಕ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಕೋಟಾದಲ್ಲಿ ಈ ಬಾರಿ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದು ಈ ತಿಂಗಳ ನಾಲ್ಕನೇ ಪ್ರಕರಣವಾಗಿದೆ ಎಂದು Business Today ವರದಿ ಮಾಡಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಬಿಹಾರದ ಗಯಾದ ವಾಲ್ಮೀಕಿ ಜಂಗಿದ್ ಎಂದು ಗುರುತಿಸಲಾದ ಬಾಲಕ ಕಳೆದ ವರ್ಷದಿಂದ ಕೋಟಾದ ಮಹಾವೀರ್ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಜೆಇಇ ಮೇನ್ಸ್ ಪರೀಕ್ಷೆಗೆ ತಯಾರಿ ನಡೆಸಲು ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಓದುತ್ತಿದ್ದ. ನಿನ್ನೆ ಬಾಲಕ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಹಾವೀರ್ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಪರಂಜೀತ್ ಪಟೇಲ್ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದ್ದು, ಬಳಿಕ ಕೊಠಡಿಯಿಂದ ಮೃತದೇಹವನ್ನು ಹೊರತೆಗೆದು ಪೋಷಕರು ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಠಡಿಯಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಮತ್ತು ವಿದ್ಯಾರ್ಥಿಯ ಸಾವಿನ ಹಿಂದಿನ ಕಾರಣದ ಬಗ್ಗೆ ಇನ್ನು ತನಿಖೆ ಮಾಡಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಮತ್ತೊಬ್ಬ ವಿದ್ಯಾರ್ಥಿ ಮನೀಶ್ ಪ್ರಜಾಪತ್ ಆತ್ಮಹತ್ಯೆ ಮಾಡಿಕೊಂಡಿದ್ದರು.ಉತ್ತರ ಪ್ರದೇಶದ ಅಜಂಗಢ ಮೂಲದ ಈ ಬಾಲಕ ಕೋಟಾದ ಖಾಸಗಿ ಕೋಚಿಂಗ್ ಸಂಸ್ಥೆಯಲ್ಲಿ ಜೆಇಇಗೆ ತಯಾರಿ ನಡೆಸುತ್ತಿದ್ದ. ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷಣ ಕೇಂದ್ರದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ದೇಶದ ಗಮನ ಸೆಳೆದಿವೆ. ಜೈಪುರದಲ್ಲಿ ನಡೆದ ರಾಜ್ಯ ಮಟ್ಟದ ‘ಯುವ ಮಹಾಪಂಚಾಯತ್’ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಈ ಕುರಿತು ಮಾತನಾಡಿ ಕೋಟಾದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಎಂಟು ತಿಂಗಳಲ್ಲಿ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಆತಂಕಕಾರಿಯಾಗಿದೆ.ಪೋಷಕರು ತಮ್ಮ ಮಕ್ಕಳ ಮೇಲೆ ಒತ್ತಡ ಹೇರಬೇಡಿ ಎಂದು ಪೋಷಕರನ್ನು ಅಶೋಕ್ ಗೆಹ್ಲೋಟ್ ಆಗ್ರಹಿಸಿದ್ದಾರೆ.
ಕೋಟಾದಲ್ಲಿ ಕಳೆದ ಎಂಟು ತಿಂಗಳಲ್ಲಿ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಕಳವಳಕಾರಿ ಸಂಗತಿಯಾಗಿದೆ.ನಾನೇ ಬಾಲ್ಯದಲ್ಲಿ ವೈದ್ಯನಾಗಬೇಕೆಂದು ಬಯಸಿದ್ದೆ, ರಾತ್ರಿ 2-3ರವರೆಗೆ ಓದುತ್ತಿದ್ದೆ, ಆದರೆ ಯಶಸ್ವಿಯಾಗಲಿಲ್ಲ. ಧೈರ್ಯ ಕಳೆದುಕೊಳ್ಳಲಿಲ್ಲ, ನನ್ನ ಹಾದಿ ಬದಲಿಸಿ ಸಮಾಜಸೇವಕನಾದೆ, ರಾಜಕೀಯ ಪ್ರವೇಶಿಸಿ ಇಂದು ನಿಮ್ಮ ಮುಂದೆ ಇದ್ದೇನೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.


