ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ನಡೆದ ಭಾರತೀಯ ಜನತಾ ಯುವಮೋರ್ಚ (ಬಿಜೆವೈಎಂ) ರ್‍ಯಾಲಿಯಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆಯಲ್ಲಿ ಭಾಗಿಯಾದ ಆರೋಪದಲ್ಲಿ ಗುರುತಿಸಲಾದ 51 ವ್ಯಕ್ತಿಗಳು ಸೇರಿದಂತೆ 12,000ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಬಿಜೆಪಿ ಜಾರ್ಖಂಡ್ ಘಟಕದ ಅಧ್ಯಕ್ಷ ಬಾಬುಲಾಲ್ ಮರಾಂಡಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಮರ್ ಕುಮಾರ್ ಬೌರಿ, ಕೇಂದ್ರ ಸಚಿವ ಸಂಜಯ್ ಸೇಠ್ ಮತ್ತು ಕೇಂದ್ರದ ಮಾಜಿ ಸಚಿವ ಅರ್ಜುನ್ ಮುಂಡಾ ಸೇರಿದಂತೆ ಕೆಲವು ಪ್ರಮುಖ ಬಿಜೆಪಿ ನಾಯಕರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು ತಿಳಿದು ಬಂದಿದೆ.
ರಾಂಚಿಯ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಚಂದನ್ ಕುಮಾರ್ ಸಿನ್ಹಾ , “ಮ್ಯಾಜಿಸ್ಟ್ರೇಟ್ ಹೇಳಿಕೆಯ ಮೇರೆಗೆ ರಾಂಚಿಯ ಲಾಲ್‌ಪುರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಂತಹವರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
51 ಗುರುತಿಸಿದ ವ್ಯಕ್ತಿಗಳು ಸೇರಿದಂತೆ 12,000 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಲಾಲ್‌ಪುರ ಪೊಲೀಸ್ ಠಾಣೆ ಪ್ರಭಾರಿ ರೂಪೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ನಡುವೆ, ಶುಕ್ರವಾರದ ರ್‍ಯಾಲಿಯಲ್ಲಿ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಪೊಲೀಸ್ ಕ್ರಮವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ಪೊಲೀಸ್ ಠಾಣೆಗಳ ಎದುರು ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಹೇಮಂತ್ ಸೊರೇನ್ ಸರ್ಕಾರದಿಂದ “ಅನ್ಯಾಯ” ಮತ್ತು “ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲತೆ” ವಿರುದ್ಧ ರಾಂಚಿಯಲ್ಲಿ ನಡೆದ ಪ್ರತಿಭಟನಾ ರ್‍ಯಾಲಿಯಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದ ಕಾರಣಕ್ಕೆ ಪೊಲೀಸರು ಮತ್ತು ಬಿಜೆಪಿ ಯುವ ಘಟಕದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಬಿಜೆವೈಎಂ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದರು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ.
ಜಿಲ್ಲಾಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ರ ಸೆಕ್ಷನ್ 163 ಅನ್ನು ಜಾರಿಗೊಳಿಸಿದೆ. ರಾಂಚಿಯ ಮೊರಬಾಡಿ ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ 11 ರಿಂದ ಸಾರ್ವಜನಿಕ ಸಭೆಗಳು, ರ್ಯಾಲಿಗಳು, ಧರಣಿಗಳು, ಪ್ರದರ್ಶನಗಳು ಮತ್ತು ಸಭೆಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ : ಮೇಲಾಧಿಕಾರಿಗಳು, ಪತ್ರಕರ್ತನಿಂದ ಕಿರುಕುಳ ಆರೋಪ : ದಲಿತ ಪೊಲೀಸ್ ಕಾನ್‌ಸ್ಟೇಬಲ್ ಆತ್ಮಹತ್ಯೆ


