2021ರ ಸಾಲಿನ ಜ್ಞಾನಪೀಠ ಪ್ರಶಸ್ತಿಯು ಕೊಂಕಣಿ ಭಾಷೆಯ ಖ್ಯಾತ ಲೇಖಕ ದಾಮೋದರ ಮೌಜೋರವರಿಗೆ ಲಭಿಸಿದ್ದು ನಮಗೆಲ್ಲ ಗೊತ್ತಿದೆ. 1944 ರಲ್ಲಿ ಗೋವಾದಲ್ಲಿ ಜನಿಸಿದ ದಾಮೋದರ ಮೌಜೋ ಅವರು ತಮ್ಮ ಸಣ್ಣ ಕತೆಗಳು ಮತ್ತು ಕಾದಂಬರಿಗಳಿಗೆ ಪ್ರಸಿದ್ಧರು. ಜಾತಿ, ಮತ, ಲಿಂಗ ಇತ್ಯಾದಿಗಳು ಮಾನವ ಸಂಬಂಧಗಳಲ್ಲಿ ತಂದೊಡ್ಡುವ ಬಿರುಕುಗಳನ್ನು ಅವರು ದಿಟ್ಟವಾಗಿ ಮತ್ತು ವ್ಯಂಗ್ಯವಾಗಿ ಅಭಿವ್ಯಕ್ತಿಸಿದ್ದಾರೆ. ಜಿ.ಎನ್ ದೇವಿ, ಎಂ.ಎಂ ಕಲಬುರ್ಗಿ ಮೊದಲಾದವರೊಡನೆ ಕೆಲಸ ಮಾಡಿದ ಮೌಜೋ ಅವರು ತಮ್ಮ ಕ್ರಿಯಾಶೀಲತೆಗೂ ಹೆಸರಾದವರು. ಆ ಮೂಲಕ ಕೊಂಕಣಿ ಭಾಷೆಗೆ ಎರಡನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ ಅವರದು. ಅಷ್ಟು ಮಾತ್ರವಲ್ಲದೆ ಅವರು ಶೋಷಿತರು, ತಳಸಮುದಾಯಗಳು ಪರವಾಗಿ ಮತ್ತು ಕೋಮುವಾದದ ವಿರುದ್ಧದ ಸ್ಪಷ್ಟ ನಿಲುವುಗಳಿಂದಾಗಿ ಸನಾತನಾ ಸಂಸ್ಥೆಯ ಹಿಟ್ ಲಿಸ್ಟ್‌ನಲ್ಲಿದ್ದರು ಎಂಬ ಅಂಶ ತಿಳಿದುಬಂದಿದೆ.
ಬಲಪಂಥೀಯ ತೀವ್ರವಾದಿಗಳ ವಿರುದ್ಧ ಮೌಜೋರವರು ಧೈರ್ಯದಿಂದ ಮಾತನಾಡಲು ಎಂದಿಗೂ ಹಿಂಜರಿದಿರಲಿಲ್ಲ. 2015ರಲ್ಲಿ ವಿಚಾರವಾದಿ ಎಂ.ಎಂ ಕಲಬುರ್ಗಿ ಅವರ ಹತ್ಯೆಯ ನಂತರ ಮೌಜೋರವರು ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ದಿಟ್ಟ ನಿಲುವು ತೆಗೆದುಕೊಂಡಿದ್ದರು. ಸಾಹಿತ್ಯ ಅಕಾಡೆಮಿ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ, “ಸಾಹಿತಿ, ಬರಹಗಾರರು, ಚಿಂತಕರು ಏಕ ಸಂಸ್ಕೃತಿಯ ಗೂಂಡಾಗಿರಿ ಮತ್ತು ಮಾರಲ್ ಪೊಲೀಸಿಂಗ್ ಅನ್ನು ತಡೆಯಲು ಒಗ್ಗಟ್ಟಾಗಿ ನಿಲ್ಲಬೇಕು” ಎಂದು ಆಗ್ರಹಿಸಿದ್ದರು. ಹಲವು ಸನಾತನಾವಾದಿಗ ಬೆದರಿಕೆಗಳ ನಡುವೆಯೂ ಜನವರಿ 2016 ರಲ್ಲಿ ಗುಜರಾತ್‌ನ ದಂಡಿಯಲ್ಲಿ ನಡೆದ ಸೆಮಿನಾರ್‌ನಲ್ಲಿ ಅವರ ಭಾಷಣವದಲ್ಲಿ ಅವರು ಬಲಪಂಥೀಯ ಉಗ್ರಗಾಮಿಗಳನ್ನು ಕಟು ಪದಗಳಲ್ಲಿ ಟೀಕಿಸಿದ್ದರು. ಅಲ್ಲದೆ 2019 ರ ಲೋಕಸಭಾ ಚುನಾವಣೆಯ ಮುನ್ನಾದಿನದಂದು “ಫ್ಯಾಸಿಸ್ಟ್ ಆಡಳಿತವನ್ನು ಸೋಲಿಸಿ” ಎಂದು ನಾಗರಿಕರಿಗೆ ಮನವಿ ಮಾಡಿದ್ದರು.
ಹಾಗಾಗಿಯೇ ಸಾಹಿತಿ, ಚಿಂತಕರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಹತ್ಯೆಗೈಯಲು ಬಲಪಂಥೀಯ ಉಗ್ರಗಾಗಮಿಗಳು ಸಿದ್ದಪಡಿಸಿದ್ದ ಲಿಸ್ಟ್‌ನಲ್ಲಿ ದಾಮೋದರ ಮೌಜೋರವರ ಹೆಸರು ಸಹ ಇತ್ತು. ಕರ್ನಾಟಕದಲ್ಲಿ ಕೋಮುವಾದಿಗಳಿಗೆ ಸಿಂಹ ಸ್ವಪ್ನವಾಗಿದ್ದ, ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ ಕರ್ನಾಟಕ ಎಸ್‌ಐಟಿ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳದ ತನಿಖೆಯಲ್ಲಿ ಮೌಜೋರವರ ಹೆಸರು ಸಹ ಇರುವುದು ಬಹಿರಂಗವಾಗಿತ್ತು. ಅವರೊಂದಿಗೆ ದಿವಗಂತ ಗಿರೀಶ್ ಕಾರ್ನಾಡ್, ವಿಚಾರವಾದಿ ಕೆ.ಎಸ್ ಭಗವಾನ್, ಪತ್ರಕರ್ತ ನಿಖಿಲ್ ವಾಗ್ಲೆ ಸೇರಿದಂತೆ ಇತರರ ಹೆಸರುಗಳಿದ್ದವು.
2013 ರ ಆಗಸ್ಟ್ 20 ರಂದು ಪುಣೆಯಲ್ಲಿ ನರೇಂದ್ರ ದಾಭೋಲ್ಕರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಗೋವಿಂದ ಪನ್ಸಾರೆ ಅವರನ್ನು ಫೆಬ್ರವರಿ 16, 2015 ರಂದು ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಗುಂಡಿಕ್ಕಲಾಯಿತು, ಇದಾಗಿ ನಾಲ್ಕು ದಿನಗಳ ನಂತರ ಅವರು ನಿಧನರಾದರು. ಸಂಶೋಧಕ ಎಂ.ಎಂ. ಕಲ್ಬುರ್ಗಿ ಅವರನ್ನು ಆಗಸ್ಟ್ 30, 2015 ರಂದು ಧಾರವಾಡದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.
ಈ ಮೂರು ಪ್ರಕರಣಗಳಿಗೂ, ಸೆಪ್ಟಂಬರ್ 05, 2017ರಂದು ಬೆಂಗಳೂರಿನಲ್ಲಿ ಹತ್ಯೆಗೀಡಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೂ ಸಂಬಂಧವಿದೆ. ಈ ಹತ್ಯೆಗಳ ಹಿಂದೆ ಬಲಪಂಥೀಯ ಸನಾತನಾ ಸಂಸ್ಥೆಯ ಕೈವಾಡವಿದೆ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ. ಈ ಸಂಬಂಧ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿನ 30ಕ್ಕೂ ಹೆಚ್ಚು ಸನಾತನಾ ಸಂಸ್ಥೆಯ ಸದಸ್ಯರನ್ನು ಬಂಧಿಸಲಾಗಿದೆ.
ಆ ಸಂದರ್ಭದಲ್ಲಿ ಎಲ್ಲಾ ಹೋರಾಟಗಾರರಂತೆ ಮೌಜೋರವರಿಗೆ ಇಷ್ಟವಿಲ್ಲದಿದ್ದರೂ ಪೊಲೀಸ್ ರಕ್ಷಣೆ ನೀಡಲಾಗಿತ್ತು. ಆದರೆ ದಾಮೋದರ ಮೌಜೋರವರು ಧೈರ್ಯವಾಗಿ ಮಾತನಾಡುವುದನ್ನು ನಿಲ್ಲಿಸಿರಲಿಲ್ಲ. ಅವರು ಪತ್ರಕರ್ತ ನಿಖಿಲ್ ವಾಗ್ಲೆ ಜೊತೆಗಿನ ಸಂದರ್ಶನವೊಂದರಲ್ಲಿ “ಭಾರತ ಸರ್ಕಾರವು ಸಿಮಿ [ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ] ಅಥವಾ ಝಾಕಿರ್ ನಾಯ್ಕ್ ಅವರ ಸಂಘಟನೆಗಳನ್ನು ನಿಷೇಧಿಸಲು ಸಾಧ್ಯವಾದರೆ, ಹಿಂದುತ್ವದ ಉಗ್ರಗಾಮಿ ಗುಂಪುಗಳನ್ನು ನಿಷೇಧಿಸಲು ಏಕೆ ಸಾಧ್ಯವಿಲ್ಲ? ನಿಷೇಧ ಮಾಡದಂತೆ ತಡೆಯುತ್ತಿರುವವರಾದರೂ ಯಾರು? ಈ ಸಂಘಟನೆಗಳು ಹಿಂದೂ ಗುಂಪು ಎಂಬ ಕಾರಣಕ್ಕಾಗಿ ನಿರ್ಭಯವಾಗಿ ಕುಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಹೇಳಿದ್ದರು.
ಮೌಝೋರವರು 1980ರಲ್ಲಿಯೇ ‘ಕಾರ್ಮೆಲಿನ್’ ಎಂಬ ಕಾದಂಬರಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಮನೆಗೆಲಸದ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಬರೆದಿದ್ದಾರೆ. ಅವರ ‘ದಿ ಬರ್ಗರ್’ ಎಂಬ ಕಥೇಯಲ್ಲಿ ದನದ ಮಾಂಸದ ಪ್ರಸ್ತಾಪ ಬರುತ್ತದೆ. ಇನ್ನೊಂದು ಕಥೆಯಲ್ಲಿ ಗೋರಕ್ಷಕರು ದಲಿತ ಯುವಕರನ್ನು ಹೇಗೆ ಬೆದರಿಸಿದರು ಎಂಬುದನ್ನು ವಿವರಿಸಿದ್ದಾರೆ. ಅಂದರೆ ಬಹುತೇಕ ಈ ವಿಚಾರಗಳು ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಬರುವ ಮುನ್ನವೇ ಅವರು ತಮ್ಮ ಸಾಹಿತ್ಯಗಳಲ್ಲಿ ಉಲ್ಲೇಖಿಸಿದ್ದಾರೆ. ಅವರು ಇಂದಿಗೂ ಬಲಪಂಥೀಯ ತೀವ್ರವಾದಗಳ ಅಪಾಯಗಳ ಕುರಿತು ಮಾತನಾಡುತ್ತಲೇ ಇದ್ದಾರೆ.
ಮಾಹಿತಿ ಕೃಪೆ: ನ್ಯೂಸ್ ಕ್ಲಿಕ್
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಕರ್ನಾಟಕ ವಿಶೇಷ ತನಿಖಾ ದಳ (SIT) ಭೇದಿಸಿದ್ದಾದರೂ ಹೇಗೆ?
ಭಾಗ -2: ಗೌರಿ ಹತ್ಯೆಯ ತನಿಖೆಯ ಜಾಡು ಹಿಡಿದು ಹೊರಟಾಗ ಸಿಕ್ಕ ಸತ್ಯಗಳು… ಭಾಗ-2
ಭಾಗ -3: ಗೌರಿ ಹತ್ಯೆಯ ತನಿಖೆ ನಡೆದದ್ದು ಹೇಗೆ? ಈಗ ಎಲ್ಲಿಯವರೆಗೂ ಬಂದಿದೆ? ಕೊನೆಯ ಭಾಗ ಓದಿ


