ಪತ್ರಕರ್ತ ಆಕಾರ್ ಪಟೇಲ್ ಅವರ ಖಾತೆಯನ್ನು ಟ್ವಿಟ್ಟರ್ ಭಾರತದಲ್ಲಿ ನಿರ್ಬಂಧಿಸಿದೆ. ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡ್‌ರನ್ನು ಪೊಲೀಸರು ಹತ್ಯೆಗೈದ ವಿರುದ್ಧ ಅಮೆರಿಕದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗಳನ್ನು ಭಾರತದ ತಳಸಮುದಾಯದ ಗುಂಪುಗಳು ಸಹ ಅನುಕರಿಸಬೇಕು ಎಂದು ಅವರು ಕರೆ ನೀಡಿದ್ದರು. ಆನಂತರ ಅವರ ಮೇಲೆ ಎಫ್‌ಐಆರ್ ದಾಖಲಾಗಿದ್ದಲ್ಲದೇ ಈಗ ಅವರ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಲಾಗಿದೆ.
ಆಕಾರ್ ಪಟೇಲ್‌ಗೆ ನೀಡಿದ ನೋಟಿಸ್‌ನಲ್ಲಿ, ಅವರ ಖಾತೆಯು ಭಾರತೀಯ ಕಾನೂನುಗಳನ್ನು ಉಲ್ಲಂಘಿಸಿದೆ. ಅದಕ್ಕಾಗಿ ಭಾರತದ ಬಳಕೆದಾರರಿಗಾಗಿ ನಿರ್ಬಂಧಿಸಲಾಗುವುದು, ಆದರೆ ಭಾರತದ ಹೊರಗೆ ಅದು ಕಾರ್ಯನಿರ್ವಹಿಸುತ್ತಿದೆ ಎಂದು ಟ್ವಿಟ್ಟರ್ ಇಂಡಿಯಾ ಹೇಳಿದೆ.

ತಮ್ಮ ವಿರುದ್ಧದ ಆರೋಪಗಳ ಬಗ್ಗೆ ತಮಗೆ ಮಾಹಿತಿ ನೀಡಿಲ್ಲ ಮತ್ತು ಯಾರು ಈ ಕ್ರಮ ಕೈಗೊಂಡಿದ್ದಾರೆ ನನಗೆ ಗೊತ್ತಿಲ್ಲ ಎಂದು ಆಕಾರ್ ಪಟೇಲ್ ತಿಳಿಸಿದ್ದಾರೆ. “ಈ ಪರಿಸ್ಥಿತಿಯಲ್ಲಿ ಕಾನೂನು ನೆರವು ಪಡೆಯಲು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮಗಳು ಪಾರದರ್ಶಕವಾಗಿರಬೇಕು, ಒಬ್ಬ ವ್ಯಕ್ತಿಯ ಖಾತೆಯನ್ನು ಏಕೆ ನಿರ್ಬಂಧಿಸಲಾಗಿದೆ ಎಂದು ಕನಿಷ್ಟ ತಿಳಿಸಬೇಕು. ಆದರೆ ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಡುವ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಮಾಜಿ ಮುಖ್ಯಸ್ಥರಾದ ಆಕಾರ್ ಪಟೇಲ್ ಫ್ಲಾಯ್ಡ್ ಸಾವಿನ ವಿರುದ್ಧದ ಪ್ರತಿಭಟನೆಯ ಕೆಲವು ವಿಡಿಯೋ ತುಣುಕುಗಳನ್ನು ಪೋಸ್ಟ್ ಮಾಡಿದ್ದರು. ತಮ್ಮ ಟ್ವೀಟ್‌ಗಳಲ್ಲಿ, ನಮಗೂ ಇಂತದೇ ಪ್ರತಿಭಟನೆಗಳು ಬೇಕು. ದಲಿತ, ಮುಸ್ಲಿಂ, ಆದಿವಾಸಿ, ಬಡವ ಹಾಗೂ ಮಹಿಳೆಯರ ಕಡೆಯಿಂದ, ಆಗ ವಿಶ್ವ ಗಮನಿಸುತ್ತದೆ. ಎಂದಿದ್ದರು.
ಆಕಾರ್ ಅವರ ಟ್ವೀಟಿಗೆ ಸ್ವಯಂ ಪ್ರೇರಿತ ದೂರು ದಾಖಲಿಸಿರುವ ಜೆಸಿ ನಗರದ ಪೊಲೀಸರು, ಅಮೆರಿಕಾದಲ್ಲಿ ನಡೆದ ರೀತಿಯ ಪ್ರತಿಭಟನೆ ಮಾಡುವಂತೆ ಕರೆ ಕೊಟ್ಟಿರುವ ಅವರು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಅಮೇರಿಕಾದ ರೀತಿಯಲ್ಲಿ ಪ್ರತಿಭಟನೆ ಮಾಡಬೇಕು’ ಎಂದ ಲೇಖಕ ಆಕಾರ್ ಪಟೇಲ್ ವಿರುದ್ದ FIR


