ಟಿವಿ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಾಲ್ವರು ಅಪರಾಧಿಗಳಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸೌಮ್ಯಾ ತಾಯಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಫೆಬ್ರವರಿ 12ರಂದು ದೆಹಲಿ ಹೈಕೋರ್ಟ್ ಪ್ರಕರಣದ ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಸಿಂಗ್ ಮಲಿಕ್ ಮತ್ತು ಅಜಯ್ ಕುಮಾರ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದೆ. ಶಿಕ್ಷೆ ವಜಾಗೊಳಿಸುವಂತೆ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಪರಾಧಿಗಳು 14 ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂಬುವುದನ್ನು ಗಣನೆಗೆ ತೆಗೆದುಕೊಂಡಿತ್ತು. ಬಿಡುಗಡೆ ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ದೆಹಲಿ ಪೊಲೀಸರಿಗೆ ಜನವರಿ 23ರಂದು ಸೂಚಿಸಿತ್ತು.
ಪ್ರಮುಖ ಇಂಗ್ಲಿಷ್ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯ ವಿಶ್ವನಾಥನ್ ಅವರು ಸೆಪ್ಟೆಂಬರ್ 30, 2008ರ ಮುಂಜಾನೆ ದಕ್ಷಿಣ ದೆಹಲಿಯ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ ಕೆಲಸ ಮುಗಿಸಿ ತಮ್ಮ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಸೌಮ್ಯಾ ಅವರ ತಾಯಿ ಮಾಧವಿ ವಿಶ್ವನಾಥನ್ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರ ಸುಪ್ರೀಂಕೋರ್ಟ್ ಪೀಠವು ಆಲಿಸುವ ಸಾಧ್ಯತೆಯಿದೆ.
ವಿಶೇಷ ನ್ಯಾಯಾಲಯವು ನವೆಂಬರ್ 26, 2023ರಂದು ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಮಲಿಕ್ ಮತ್ತು ಅಜಯ್ ಕುಮಾರ್ ಅವರಿಗೆ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 (ಕೊಲೆ) ಮತ್ತು ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಯ (MCOCA) ಸೆಕ್ಷನ್ 3(1)(i) (ಐ) ರಡಿಯಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತ್ತು. ಐದನೇ ಅಪರಾಧಿ ಅಜಯ್ ಸೇಥಿಗೆ ಐಪಿಸಿಯ ಸೆಕ್ಷನ್ 411ರಡಿಯಲ್ಲಿ ಮೂರು ವರ್ಷಗಳ ಸರಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ರವಿ ಕಪೂರ್ ಪರ ವಕೀಲರು, ಅವರು ಕಳೆದ 14 ವರ್ಷ 9 ತಿಂಗಳುಗಳಿಂದ ಬಂಧನದಲ್ಲಿದ್ದಾರೆ ಮತ್ತು ಮೇಲ್ಮನವಿ ಬಾಕಿ ಇರುವಾಗ ಅವರ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಶುಕ್ಲಾ, ಮಲಿಕ್ ಮತ್ತು ಅಜಯ್ ಕುಮಾರ್ ಅವರನ್ನು ಪ್ರತಿನಿಧಿಸಿದ ವಕೀಲ ಅಮಿತ್ ಕುಮಾರ್ ಕೂಡ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರ್ಟ್ ಮೊರೆ ಹೋಗಿದ್ದರು.
ಇದನ್ನು ಓದಿ: ಕೇಜ್ರಿವಾಲ್ ‘ಅಂಗಾಂಗ ವೈಫಲ್ಯಗೊಳಿಸಿ ನಿಧಾನವಾಗಿ ಸಾವಿಗೆ ತಳ್ಳಲು ಸಂಚು ರೂಪಿಸಲಾಗುತ್ತಿದೆ’: ಎಎಪಿ


