ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರಿಗೆ ಸಂಘ ಪರಿವಾರದ ಬೆಂಬಲಿಗರು ಆನ್‌ಲೈನ್‌ನಲ್ಲಿ ಸರಣಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ಕೆಲವರು ಪತ್ರಕರ್ತನ ಮೇಲೆ ಹಿಂಸಾಚಾರ ನಡೆಸಲು ಪ್ರಚೋದನೆ ನೀಡುತ್ತಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.
ಜುಬೇರ್ ಅವರ ವಿರುದ್ಧ ʼಅಖ್ಲಾಕ್ʼ ರೀತಿಯ ದಾಳಿ ಸೇರಿದಂತೆ ವಿವಿಧ ಬೆದರಿಕೆಗಳನ್ನು ಒಡ್ಡಲಾಗಿದೆ. ಝುಬೈರ್ ಕುಟುಂಬದ ಮಹಿಳೆಯರನ್ನು ನಿಂದಿಸಿದ ವ್ಯಕ್ತಿಯನ್ನು ಎದುರು ಹಾಕಿಕೊಂಡ ಬಳಿಕ ಜುಬೇರ್ ಅವರಿಗೆ ಈ ಬೆದರಿಕೆಗಳು ಬರಲು ಆರಂಭವಾಗಿವೆ.
ಇನ್ನೊಂದೆಡೆ, ಸುಪ್ರೀಂ ಕೋರ್ಟ್‌ನ ವಕೀಲ ಶಶಾಂಕ್ ಶೇಖರ್ ಝಾ ಅವರು ”ತಾನು ಜುಬೇರ್ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಟ್ಟೀಟ್ ಮಾಡಿದ್ದಾರೆ.
ಜುಬೈರ್ ವಿರುದ್ಧ ಬೆದರಿಕೆ ಹಾಕಿದವರಲ್ಲಿ ಬಲಪಂಥೀಯ ಅಂಕಣಕಾರ ಹರ್ಷಿಲ್ ಮೆಹ್ತಾ ಮತ್ತು ಮಾಜಿ ಒಪಿಂಡಿಯಾ ಸಂಪಾದಕ ಅಜೀತ್ ಭಾರ್ತಿ ಸೇರಿದ್ದಾರೆ.
”ಈ ಬಾರಿ ಅವರು (ಜುಬೈರ್) ಸಂಪೂರ್ಣವಾಗಿ ಸುನ್ನತಿಯಾಗುತ್ತಾರೆ, ಅವರಿಗೆ ಮೂತ್ರ ವಿಸರ್ಜನೆಗೆ ಪೈಪ್ ಅಗತ್ಯವಿದೆ” ಎಂದು ಅಜೀತ್ ಭಾರ್ತಿ ಟ್ವೀಟ್ ಮಾಡಿದ್ದಾರೆ. ಕೆಲವು ಬಳಕೆದಾರರು ಒಂಟಿ ತೋಳದ ದಾಳಿಗಳನ್ನು ಮತ್ತು “ಅಖ್ಲಾಕ್” ನಂತೆ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ಹೇಳಿದ್ದಾರೆ. 2015ರಲ್ಲಿ ಉತ್ತರ ಪ್ರದೇಶದ ದಾದ್ರಿ ಜಿಲ್ಲೆಯಲ್ಲಿ ದನದ ಮಾಂಸ ತಿಂದಿದ್ದಾನೆ ಎಂಬ ಶಂಕೆಯಿಂದ ಮೊಹಮ್ಮದ್ ಅಖ್ಲಾಕ್ ಅವರನ್ನು ಗುಂಪೊಂದು ಹೊಡೆದು ಕೊಂದಿತ್ತು.
ಇದನ್ನೂ ಓದಿ: ವಲಸಿಗರ ವಿಚಾರದಲ್ಲಿ ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ: ಸಿಎಂ ಸ್ಟಾಲಿನ್ ವಾಗ್ದಾಳಿ
ಈ ಬಗ್ಗೆ ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಪ್ರತೀಕ್ ಸಿನ್ಹಾ ಪ್ರತಿಕ್ರಿಯಿಸಿದ್ದು, ”ಇನ್ನೂ ನಾವು ನಮ್ಮ ವಕೀಲರೊಂದಿಗೆ ಸಮಾಲೋಚಿಸುತ್ತಿದ್ದೇವೆ ಮತ್ತು ಸರಿಯಾದ ಕಾನೂನು ಕ್ರಮವನ್ನು ಕಂಡುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
”ಈ ಹಿಂದೆ, ನನಗೆ ನಿಂದನೆಯ ಸುರಿಮಳೆ ಬಂದಾಗ ಅವುಗಳನ್ನು ನಿರ್ಲಕ್ಷಿಸಿ, ನಕ್ಕು ಸುಮ್ಮನಾಗುತ್ತಿದ್ದೆ. ಆದರೆ ಇತ್ತಿಚೆಗೆ ತಮಿಳುನಾಡಿಗೆ ಬಿಹಾರದಿಂದ ವಲಸೆ ಬಂದ ಕಾರ್ಮಿಕರ ಮೇಲೆ ಕೊಲೆ ದಾಳಿ ನಡೆದಿವೆ ಎನ್ನುವ ಸುಳ್ಳು ಸುದ್ದಿಯನ್ನು ಭೇದಿಸಿದ ಮೇಲೆ ನಿರಂತರವಾಗಿ “ದೈಹಿಕವಾಗಿ ಹಾನಿ ಮಾಡುವ ಮತ್ತು ನನ್ನನ್ನು ಮುಗಿಸುವ” ಕುರಿತಾದ ಟ್ವೀಟ್‌ಗಳೇ ಹೆಚ್ಚಾಗಿವೆ. ಈ ಹಿಂದೆ ತಮಿಳುನಾಡಿನಿಂದ ಬೆದರಿಕೆಗಳು ಬಂದಿದ್ದವು, ಆದರೆ ಈ ಬಾರಿ ಬೆದರಿಕೆಗಳು ಹೆಚ್ಚು ಸ್ಪಷ್ಟವಾಗಿವೆ” ಎಂದು ಜುಬೈರ್ ದಿ ವೈರ್‌ಗೆ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಪ್ರತಿಕ್ರಿಯಿಸಿದ್ದು, ”ಯಾವುದೇ ಜೀವ ಬೆದರಿಕೆ ಇರುವ ಬಗ್ಗೆ ನಮಗೆ ತಿಳಿದಿಲ್ಲ, ಅಂತಹ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಒಂದುವೇಳೆ ಜುಬೈರ್ ನಮ್ಮನ್ನು ಸಂಪರ್ಕಿಸಿದರೆ, ಪ್ರಕರಣದ ಆಧಾರದ ಮೇಲೆ ಭದ್ರತೆಯನ್ನು ನೀಡಲು ನಾವು ಪರಿಗಣಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಕೆಲ ವಾರಗಳಿಂದ ಬಲಪಂಥೀಯ ಸಾಮಾಜಿಕ ಮಾಧ್ಯಮ ಪುಟಗಳು, ಬಿಜೆಪಿ ನಾಯಕರು ಮತ್ತು ಕೆಲವು ಮುಖ್ಯವಾಹಿನಿಯ ಸುದ್ದಿ ವಾಹಿನಿಗಳು, ಬಿಹಾರದಿಂದ ವಲಸೆ ಬಂದಿರುವ ಕಾರ್ಮಿಕರನ್ನು ತಮಿಳುನಾಡಿನಲ್ಲಿ ಹತ್ಯೆ ಮಾಡಲಾಗುತ್ತಿದೆ ಎಂದು ತಪ್ಪಾಗಿ ಹೇಳಿದ್ದರು. ಕೆಲವು ನಕಲಿ ವಿಡಿಯೋಗಳನ್ನು ಹಂಚಿಕೊಳ್ಳಲಾಗಿತ್ತು.
ಆದರೆ, ಈ ಸುಳ್ಳು ಸುದ್ದಿಯನ್ನು ಭೇದಿಸಿದ ಸತ್ಯ-ಪರೀಕ್ಷಕ (ಫ್ಯಾಕ್ಟ್ ಚೆಕ್ಕರ್) ಜುಬೈರ್ ಅವರು, ತಮಿಳುನಾಡಿನ ವಲಸೆ ಕಾರ್ಮಿಕರ ಮೇಲೆ ದಾಳಿ ಮಾಡಲಾಗುತ್ತಿದೆ ಎನ್ನುವುದು ಸುಳ್ಳು ಸುದ್ದಿ ಮತ್ತು ಈ ಸುಳ್ಳು ಸುದ್ದಿ ಜೊತೆಗೆ ಹರಿದಾಡುತ್ತಿರುವ ವೀಡಿಯೊಗಳಿಗೂ ಸಂಬಂಧವಿಲ್ಲ ಎಂದು ವರದಿ ಮಾಡಿದ್ದರು.
ಇದೀಗ ಸುಳ್ಳು ಸುದ್ದಿ ಪ್ರಚಾರ ಮಾಡಿದ ಉತ್ತರ ಪ್ರದೇಶ ಬಿಜೆಪಿ ವಕ್ತಾರ ಪ್ರಶಾಂತ್ ಉಮ್ರಾವ್, ಹಿಂದಿ ಪತ್ರಿಕೆ ದೈನಿಕ್ ಭಾಸ್ಕರ್, ಬಲಪಂಥೀಯ ವೆಬ್‌ಸೈಟ್ ಆಪ್ಇಂಡಿಯಾದ ಸಂಪಾದಕ ನೂಪುರ್ ಶರ್ಮಾ ಮತ್ತು ಸಿಇಒ ರಾಹುಲ್ ರೌಶನ್ ಮತ್ತು ಕೆಲವು ಯೂಟ್ಯೂಬರ್‌ಗಳು ಮತ್ತು ಟ್ವಿಟರ್ ಹ್ಯಾಂಡಲ್‌ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.


