ಫಾದರ್ ಸ್ಟ್ಯಾನ್ ಅವರು 5ನೇ ಜೂನ್ 2021ರಂದು ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಅಸುನೀಗಿದರು. ತಮ್ಮ ಸಾವಿನ ಬಗ್ಗೆ ಅವರೇ ಮುನ್ಸೂಚನೆ ನೀಡಿದ್ದರು. ಫಾದರ್ ಸ್ಟ್ಯಾನ್ ಸ್ವಾಮಿ ಅವರ ಆರೋಗ್ಯ ನಿರಂತರವಾಗಿ ಕುಸಿಯುತ್ತಿರುವಾಗ ಭಾರತ ಪ್ರಭುತ್ವದ ಸಂಸ್ಥೆಗಳು ಮೂಕಪ್ರೇಕ್ಷಕರಾಗಿದ್ದವು ಹಾಗೂ ’ತನ್ನವರೊಂದಿಗೆ ಇರಬೇಕೆಂಬ’ ಎಂಬ ಅವರ ಕೊನೆಯ ಇಚ್ಛೆಗೆ ಕಿವುಡಾಗಿದ್ದವು.
ಜೀವಿಸುವ ಹಕ್ಕು ಮತ್ತು ಘನತೆಯಿಂದ ಸಾಯುವ ಹಕ್ಕು ಈ ಎರಡನ್ನೂ ಕಾಪಾಡುವಲ್ಲಿ ಭಾರತ ಪ್ರಭುತ್ವ ವಿಫಲವಾಗಿರುವ ಹಿನ್ನೆಲೆಯಲ್ಲಿ ಫಾದರ್ ಸ್ಟ್ಯಾನ್ ಅವರಿಗೆ ನ್ಯಾಯ ಎಂದು ಹೇಳಿದರೆ ಅದರ ಅರ್ಥವಾದರೂ ಏನು?
ಫಾದರ್ ಸ್ಟ್ಯಾನ್ ಅವರ ಸಾವಿಗೆ ಕಾರಣವಾದ ಸಂಗತಿಗಳ ತಿಳಿವಳಿಕೆಯ ಬಗ್ಗೆ ವಿಚಾರಣೆ ನಡೆಸುವುದು ಅತ್ಯಗತ್ಯ. ಆದರೆ ಫಾದರ್ ಸ್ಟ್ಯಾನ್ ಅವರಿಗೆ ನ್ಯಾಯದ ಪ್ರಶ್ನೆ ಬಂದಾಗ ಆ ವಿಚಾರಣೆಗಿಂತ ವಿಶಾಲವಾದ, ಇವೆಲ್ಲವುಗಳ ಹೊರಗಿರುವ ಪ್ರಶ್ನೆಗಳನ್ನು ಅದು ಒಳಗೊಳ್ಳುತ್ತದೆ. ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದ, ಬಂಧನದ 8 ತಿಂಗಳ ನಂತರ ಅಸುನೀಗಿದ 83 ವರ್ಷ ವಯಸ್ಸಿನ ವ್ಯಕ್ತಿಯನ್ನು ಬಂಧಿಸುವ ನಿರ್ಣಯವು ತಪ್ಪು ಎಂಬುದನ್ನು ಸರಕಾರ ಮೊದಲು ಒಪ್ಪಿಕೊಳ್ಳುವ ರೂಪ ಅದು ತಳೆಯಬೇಕು. ಇಂತಹ ದುರದೃಷ್ಟಕರವಾದ ಪರಿಣಾಮಗಳುಳ್ಳ ಅಮಾನವೀಯ ಕೆಲಸಕ್ಕೆ ಸರಕಾರ ಕ್ಷಮೆ ಕೇಳಬೇಕು.
ಅದರೊಂದಿಗೆ, ಫಾದರ್ ಸ್ಟ್ಯಾನ್ ಅವರ ಜೀವನದ ಹಕ್ಕನ್ನು ರಕ್ಷಿಸಲು ವಿಫಲವಾಗಿದ್ದಕ್ಕೆ, ಆ ವೈಫಲ್ಯವನ್ನು ನ್ಯಾಯಾಂಗವು ದೃಢೀಕರಿಸಿಕೊಳ್ಳುವ ಅವಶ್ಯಕತೆ ಇದೆ. ಈ ಹಿಂದೆ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ತಪ್ಪುಗಳಾಗಿವೆ ಎಂಬುದನ್ನು ಒಪ್ಪಿ ದೃಢೀಕರಿಸಲು ಸರ್ವೋಚ್ಚ ನ್ಯಾಯಾಲಯವೇ ಹಿಂಜರಿಕೆ ತೋರಿಲ್ಲ. ಇಲ್ಲಿ ನಾವು ’ಪುಟ್ಟಸ್ವಾಮಿ ವರ್ಸಸ್ ಯುನಿಯನ್ ಆಫ್ ಇಂಡಿಯಾ’ ದ ತೀರ್ಪನ್ನು ಗಮನಿಸಬೇಕು; ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯವು ’ಒಬ್ಬ ವ್ಯಕ್ತಿಯ ಘನತೆ ಹಾಗೂ ಸ್ವಾತಂತ್ರಗಳು ಮತ್ತು ಹಕ್ಕುಗಳನ್ನು ಮೇಲ್‌ಸ್ತರದಲ್ಲಿ’ ಇರಿಸುವ ’ಒಂದು ತತ್ವಸಿದ್ಧಾಂತ (ಡಾಕ್ಟ್ರೀನ್)ದ ವಿಕಸನ’ದಲ್ಲಿ ಮೂರು ನ್ಯಾಯಾಂಗದ ತೀರ್ಪುಗಳಲ್ಲಿ ’ಹೊಂದಿಕೆಯಾಗದ ಅಂಶಗಳು’ (discordant notes) ಇದ್ದವು ಎಂದು ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡಿದೆ.

ಆ ನಿರ್ಣಯಗಳು ಇಂತಿವೆ; ತುರ್ತುಪರಿಸ್ಥಿತಿಯಲ್ಲಿ ಎಡಿಎಂ ಜಬಲ್ಪುರ್‌ನಲ್ಲಿ ಹೇಬಿಯಸ್ ಕಾರ್ಪಸ್ ಹಕ್ಕುಗಳ ನಿರಾಕರಣೆ, ಸುರೇಶ್‌ಕುಮಾರ್ ಕೌಶಲ್ ಪ್ರಕರಣದಲ್ಲಿ ಎಲ್‌ಜಿಬಿಟಿ ಸಮುದಾಯಕ್ಕೆ ತನ್ನ ಹಕ್ಕುಗಳನ್ನು ನಿರಾಕರಿಸಿರುವುದು ಹಾಗೂ ಎ.ಕೆ. ಗೋಪಾಲನ್ ಪ್ರಕರಣದಲ್ಲಿ ಆರ್ಟಿಕಲ್ 21ನೇ ಅಡಿಯಲ್ಲಿ ಬರುವ ಜೀವನದ ಹಕ್ಕಿನ ವಿಷಯದಲ್ಲಿ ಬಂಧನ ತಡೆಗಟ್ಟುವ ಕಾನೂನುಗಳು ಅನುಗುಣವಾಗಿ ಇರಲಿಲ್ಲ ಎಂದು ಹೇಳಿದ್ದು. ಅತ್ಯಂತ ಗಂಭೀರ ತಪ್ಪುಗಳು ಆದಾಗ ಕ್ಷಮಾಪಣೆಯ ಭಾಷೆಯನ್ನು ಬಳಸುವಲ್ಲಿಯೂ ಸರ್ವೋಚ್ಚ ನ್ಯಾಯಾಲಯ ಹಿಂಜರಿಕೆ ತೋರಿಲ್ಲ. ನವತೇಜ್ ಸಿಂಗ್ ಜೋಹರ್ ವರ್ಸಸ್ ಯುನಿಯನ್ ಆಫ್ ಇಂಡಿಯಾದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿದ್ದೇನೆಂದರೆ, ’ಶತಮಾನಗಳಿಂದ ಅನುಭವಿಸಿದ ಬಹಿಷ್ಕಾರ ಮತ್ತು ಕಳಂಕಕ್ಕೆ ಯಾವುದೇ ಪರಿಹಾರ ನೀಡುವಲ್ಲಿ ವಿಳಂಬವಾಗಿರುವುದರಿಂದ ಎಲ್‌ಜಿಬಿಟಿ ಸಮುದಾಯಕ್ಕೆ ಮತ್ತು ಅವರ ಕುಟುಂಬಗಳಿಗೆ ಇತಿಹಾಸವು ಕ್ಷಮೆ ಯಾಚಿಸಬೇಕಿದೆ’ ಎಂದು.
ಫಾದರ್ ಸ್ಟ್ಯಾನ್ ಅವರ ಬೇಲ್ ಅರ್ಜಿಯನ್ನು ಪರಿಶೀಲಿಸಿದ ಒಬ್ಬ ನ್ಯಾಯಾಧೀಶರ ಹೇಳಿದರೆಂಬ ಮಾತುಗಳ ವರದಿಯಲ್ಲಿ ಒಂದಿಷ್ಟು ಆತ್ಮಾವಲೋಕನ ಇದೆ ಎನ್ನುವ ಸೂಚನೆ ಕಾಣಿಸಿಕೊಂಡಿದೆ; ಅವರ ಜಾಮೀನು ಅರ್ಜಿಯನ್ನು ಪರಿಶೀಲಿಸಿದ ಜಸ್ಟಿಸ್ ಶಿಂಧೆ ಅವರು ಹೀಗೆ ಹೇಳಿದ್ದಾರೆ ಎಂದು ವರದಿಯಾಗಿದೆ: ’ಅವರು ಫಾದರ್ ಸ್ಟ್ಯಾನ್ ಸ್ವಾಮಿ ಅವರ ಅಂತ್ಯಕ್ರಿಯೆಯನ್ನು ಆನ್‌ಲೈನ್ ಮೂಲಕ ವೀಕ್ಷಿಸಿದ್ದು, ಸಮಾಜಕ್ಕೆ ದಿವಂಗತ ಸ್ಟ್ಯಾನ್ ಸ್ವಾಮಿ ಅವರ ಕೊಡುಗೆಯನ್ನು ಗುರುತಿಸಿ ಮಾಡಿದ ಎಲ್ಲ ಭಾಷಣಗಳು ಘನತೆಯುಳ್ಳವಾಗಿದ್ದವು.’ ಆದರೆ
ಕ್ಷಮಾಪಣೆಯು ಇಂತಹ ಮಾತುಗಳನ್ನು ಮೀರಿ ಮುಂದೆ ಹೋಗಬೇಕಿದೆ ಹಾಗೂ ಅದಕ್ಕೆ ಕನಿಷ್ಠ ಎರಡು ಆಯಾಮಗಳು ಇರಬೇಕಿವೆ; ಮೊದಲನೆಯದಾಗಿ, ತಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಳ್ಳುವ ಮತ್ತು ಫಾದರ್ ಸ್ಟ್ಯಾನ್ ಅವರಿಗೆ ಆದ ಅನ್ಯಾಯ ಇತರರಿಗೆ ಆಗುವುದಿಲ್ಲ ಎಂಬುದನ್ನು ಖಾತ್ರಿಪಡಿಸುವುದರ ಬಗ್ಗೆ ಬದ್ಧತೆ ಇರಬೇಕು. ಇಲ್ಲಿ ಆಗಿರುವ ನ್ಯಾಯಾಂಗದ ದೋಷವೇನೆಂದರೆ, ಫಾದರ್ ಸ್ಟ್ಯಾನ್ ಅವರ ಬಂಧನ ಕೇವಲ ಅವರ ವೈಯಕ್ತಿಕ ಸ್ವಾತಂತ್ರದ ಹಕ್ಕಿನ ಉಲ್ಲಂಘನೆಯಷ್ಟೇ ಅಲ್ಲದೇ, ಜೀವನದ ಹಕ್ಕಿನ ಉಲ್ಲಂಘನೆ ಮತ್ತು ಅವರಿಗಿದ್ದ ಘನತೆಯಿಂದ ಸಾಯುವ ಹಕ್ಕನ್ನು ನಿರಾಕರಿಸದೇ ಇರುವುದನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ವಿಫಲವಾದದ್ದು.

’ಮರುಕಳಿಸದೆ ಇರುವ’ ಪ್ರಮುಖ ನ್ಯಾಯ ತತ್ವವನ್ನು ಒಳಗೊಂಡು ಸಾಕಾರಗೊಳಿಸಬೇಕು. ಹಾಗಿದ್ದಲ್ಲಿ, ಇನ್ನು ಮುಂದೆ ಎಲ್ಲಾ ವೃದ್ಧ ವ್ಯಕ್ತಿಗಳ ಬಂಧನವನ್ನು ಕೊನೆಯ ಅಸ್ತ್ರವನ್ನಾಗಿ ಬಳಸುವುದು ಅತಿಮುಖ್ಯವಾಗಿದೆ ಹಾಗೂ ಬಂಧನ ಮಾಡಲೇಬೇಕಾದಲ್ಲಿ ಅದು ಗೃಹಬಂಧನವಾಗಿರಬೇಕು. ಗೃಹಬಂಧನ ಮಾತ್ರ ಅವರ ಆರೋಗ್ಯದ ಹಕ್ಕು, ಅವರ ಜೀವನದ ಹಕ್ಕು ಮತ್ತು ಅದರೊಂದಿಗೆ ವೃದ್ಧರು ಘನತೆಯಿಂದ ಸಾಯುವ ಹಕ್ಕನ್ನು ರಕ್ಷಿಸಬಲ್ಲದು, ಅದರಿಂದ ಸಂವಿಧಾನದ ಮೌಲ್ಯಗಳನ್ನೂ ರಕ್ಷಿಸಿದಂತಾಗುತ್ತದೆ.
ಈಗ ಬಂಧನದ ಮೂಲ ಪ್ರಶ್ನೆಗೆ ಮರಳುವ; ಫಿರ್ಯಾದಿಯ (ಪ್ರಾಸಿಕ್ಯೂಷನ್) ಪ್ರಕರಣವು ಊಹೆಗಳ ಮೇಲೆಯೇ ಆದಾರಿಸಲಾಗಿತ್ತು. ಯುಎಪಿಎನಲ್ಲಿ ವ್ಯಾಖ್ಯಾನಿಸಿದಂತೆ ಯಾವುದೇ ’ಭಯೋತ್ಪಾದನೆಯ ಕೃತ್ಯ’ದಲ್ಲಿ ಫಾದರ್ ಸ್ಟ್ಯಾನ್ ಅವರು ಭಾಗಿಯಾಗಿದ್ದಾರೆ ಎನ್ನಲು ಯಾವುದೇ ಸಾಕ್ಷ್ಯಾಧಾರಗಳು ಇರಲಿಲ್ಲ. ವಾಸ್ತವದಲ್ಲಿ ಪ್ರಭುತ್ವ ಮಾಡಿದ್ದೇನೆಂದರೆ, ಆದಿವಾಸಿ ಜನರ ಹಕ್ಕುಗಳ ಬಗ್ಗೆ ಇರುವ ಸಂವಿಧಾನಾತ್ಮಕ ಕಾಳಜಿಗಳನ್ನೇ ಭಯೋತ್ಪಾದನೆ ಎಂದು ಚಿತ್ರಿಸಲು ಪ್ರಯತ್ನಿಸಿತು. ಇದು ಫಾದರ್ ಸ್ಟ್ಯಾನ್ ಅವರ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆ ತಂದಿದೆ ಹಾಗೂ ಸಂವಿಧಾನಾತ್ಮಕ ಕಾಳಜಿಗಳನ್ನು ಎತ್ತಿಹಿಡಿದ ಕಾರಣಕ್ಕೆ ’ಅಪರಾಧ’ದ ಗ್ರಹಿಕೆಯನ್ನು ಸೃಷ್ಟಿಸಲಾಯಿತು. ಇದನ್ನು ಬಿಕೆ-16ನ (ಭೀಮಾ ಕೊರೆಗಾಂವನಲ್ಲಿ ಬಂಧಿತ 16 ಜನರು) ನ್ಯಾಯಯುತ ಹಾಗೂ ತ್ವರಿತ ವಿಚಾರಣೆಯಿಂದ ಸರಿಪಡಿಸಬೇಕು. ವಿಚಾರಣೆಯು ಒಂದು ತೀರ್ಮಾನಕ್ಕೆ ಬಂದನಂತರ, ನ್ಯಾಯಾಲಯದ ತೀರ್ಪೇ ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿದ್ದ ಫಾದರ್ ಸ್ಟ್ಯಾನ್ ಅವರ ಘನತೆಯನ್ನು ಮರುಸ್ಥಾಪಿಸುವಲ್ಲಿ ಸಹಕಾರಿಯಾಗಬಹುದು.
ಬಾಲಗೋಪಾಲ್ ಅವರ ಪ್ರಕಾರ, ಈ ಸಮಕಾಲೀನ ಸಮಯದಲ್ಲಿ ಜಾಗತೀಕರಣದ ವ್ಯತಿರಿಕ್ತ ಪರಿಣಾಮವೇನೆಂದರೆ, ಬಡಜನರ ಕಾಳಜಿಗಳನ್ನು ನ್ಯಾಯಸಮ್ಮತವಲ್ಲ ಎಂಬಂತೆ ಮಾಡಿರುವುದು. ಒಕ್ಕಲೆಬ್ಬಿಸಿಕೊಂಡ, ಸಮಾಜದಿಂದ ಹೊರದಬ್ಬಲ್ಪಟ್ಟ ಜನರ ಬಗ್ಗೆ ಇದ್ದ ಅವರ ಕಾಳಜಿಯು ಜಾಗತೀಕರಣವು ಪ್ರಚಾರಕ್ಕೆ ತಂದ ಮೌಲ್ಯಗಳ ಟೀಕೆಯನ್ನು ಪ್ರತಿನಿಧಿಸಿದ್ದಷ್ಟೇ ಅಲ್ಲದೇ, ಭ್ರಾತೃತ್ವದ ಸಂವಿಧಾನಾತ್ಮಕ ಮೌಲ್ಯಗಳನ್ನು ಸಕ್ರಿಯವಾಗಿ ಎತ್ತಿಹಿಡಿಯುವುದನ್ನೂ ಮಾಡಿತ್ತು. ’ನೀರು, ಅರಣ್ಯ ಮತ್ತು ನೆಲ’ದ ಮೇಲೆ ಅವರ ಸಮುದಾಯದ ಹಿಡಿತ ಇರಬೇಕೆನ್ನುವ ಸಂವಿಧಾನಾತ್ಮಕ ನಿಲುವನ್ನು ಪ್ರತಿಪಾದಿಸುವ ಆದಿವಾಸಿಗಳ ಹೋರಾಟದೊಂದಿಗೆ ಗಟ್ಟಿಯಾಗಿ ನಿಂತಿದ್ದರು.
ಆದಿವಾಸಿಗಳ ಕಾಳಜಿ, ಸಮಸ್ಯೆಗಳಿಗೆ ಸಂವಿಧಾನ ಪಠ್ಯ ಪರಿಹಾರ ನೀಡಬೇಕು ಎಂಬುದು ಫಾದರ್ ಸ್ಟ್ಯಾನ್ ಅವರ ಜೀವನ ಕೆಲಸದ ಗುರಿಯಾಗಿತ್ತು. ಫಾದರ್ ಸ್ಟ್ಯಾನ್ ಅವರು ಎತ್ತಿಹಿಡಿದ ಸಂವಿಧಾನ, ’ಸೇತುವೆಗಳ ಕೆಳಗೆ ಮಲಗುವುದನ್ನು, ಬೀದಿಯಲ್ಲಿ ಭಿಕ್ಷೆ ಬೇಡುವುದನ್ನು ಮತ್ತು ಬ್ರೆಡ್ ಕದಿಯುವುದನ್ನು ಶ್ರೀಮಂತರು ಮತ್ತು ಬಡವರಿಬ್ಬರಿಗೂ ಸಮಾನವಾಗಿ ನಿರ್ಬಂಧಿಸುವ,’ ಒಂದು ರೀತಿಯ ಸಪ್ಪೆ ಸಮಾನತೆಯನ್ನು ಪ್ರತಿಪಾದಿಸುವ ’ಲಿಬರಲ್’ ಸಂವಿಧಾನವಾಗಿರಲಿಲ್ಲ, ಅದರ ಬದಲಿಗೆ ಸಾಮಾಜಿಕ ಬದಲಾವಣೆಯನ್ನು ಉತ್ತೇಜಿಸುವ ಮತ್ತು ಹುಟ್ಟುಹಾಕುವ ’ಪರಿವರ್ತನಾವಾದಿ ಸಂವಿಧಾನ’ವಾಗಿತ್ತು, ಅದನ್ನು ಎತ್ತಿಹಿಡಿಯುವ ಕೆಲಸವನ್ನು ಅವರು ಮಾಡಿದರು.

ಆದಿವಾಸಿ ದೃಷ್ಟಿಕೋನದಿಂದ ನೋಡಿದರೆ, ಒಂದು ಪರಿವರ್ತನಾವಾದಿ ಸಂವಿಧಾನವು ಕೇಳವುದೇನೆಂದರೆ, ಅದು ಸಂವಿಧಾನದ 5 ಹಾಗೂ 6ನೆಯ ಶಡ್ಯೂಲ್‌ಗಳನ್ನೆರಡನ್ನೂ ಉದ್ದೇಶಿಸಿ ಸಂವಿಧಾನವನ್ನು ವ್ಯಾಖ್ಯಾನಿಸಿಕೊಳ್ಳಬೇಕಾಗುತ್ತದೆ ಹಾಗೂ ಅದರೊಂದಿಗೆ ಆದಿವಾಸಿ ಪ್ರದೇಶಗಳಲ್ಲಿ ಅವರ ’ಸಾಂಸ್ಕೃತಿಕ ಗುರುತು ಮತ್ತು ಸಮುದಾಯದ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸುವ ಹಕ್ಕನ್ನು’ ರಕ್ಷಿಸುವ ಗ್ರಾಮಸಭೆಗಳನ್ನು ಸಶಕ್ತಗೊಳಿಸುವ ಪರಿಶಿಷ್ಟ ಪ್ರದೇಶ ಕಾಯಿದೆಗೆ ಪಂಚಾಯತಿ ವಿಸ್ತರಣೆಯ ಶಾಸನಗಳನ್ನೂ ಒಳಗೊಂಡಿರಬೇಕಿರುತ್ತದೆ.
ಸಮತಾ ವರ್ಸಸ್ ಸ್ಟೇಟ್ ಆಫ್ ಆಂಧ್ರಪ್ರದೇಶ ಪ್ರಕರಣದಲ್ಲಿ ಇಂತಹ ಪರಿವರ್ತನಾವಾದಿ ನಿಲುವನ್ನು ಸರ್ವೋಚ್ಚ ನ್ಯಾಯಾಲಯವು ಸಾಕಾರಗೊಳಿಸುತ್ತದೆ:
’ಹಾಗಾಗಿ, 5 ಮತ್ತು 6ನೆಯ ಶೆಡ್ಯೂಲ್‌ಗಳು ಸಂವಿಧಾನದ ಅವಿಭಾಜ್ಯ ಯೋಜನೆಗಳಾಗಿದ್ದು, ಅವುಗಳು ಗುರಿ, ತತ್ವ ಮತು ಆತಂಕ ಇರುವುದು, ಆದಿವಾಸಿಗಳನ್ನು ಶೋಷಣೆಯಿಂದ ರಕ್ಷಿಸುವುದು ಮತ್ತು ನಮ್ಮ ರಾಜಕೀಯ ಭಾರತದಲ್ಲಿ ಆ ವ್ಯಕ್ತಿಯ ಸ್ವಾತಂತ್ರ, ಸಮಾನತೆ, ಭ್ರಾತೃತ್ವ ಮತ್ತು ಘನತೆಯೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ವಿಸ್ತರಿಸಲು ಅವರ ಆರ್ಥಿಕ ಸಬಲೀಕರಣಕ್ಕಾಗಿ ಅವರ ಭೂಮಿಯ ಸಹಜ ಒಡೆತನವನ್ನು ರಕ್ಷಿಸುವುದು’.
ನಮ್ಮ ಸಂವಿಧಾನಕ್ಕೆ ನಿರ್ದಿಷ್ಟವಾಗಿ ಇದೇ ಪರಿವರ್ತನಾವಾದಿ ನಿಲುವನ್ನು ಮುಂದುವರೆಸುವುದೇ ಫಾದರ್ ಸ್ಟ್ಯಾನ್ ಅವರ ವಿಷನ್‌ಗೆ ಸೂಕ್ತವಾದ ಶ್ರದ್ಧಾಂಜಲಿ ಸಲ್ಲಿಸಿದಂತೆ ಏಕೆಂದರೆ ಅವರು ಮೂಲಭೂತವಾಗಿ ನೀರು, ನೆಲ ಮತ್ತು ಅರಣ್ಯಗಳ ಮೇಲೆ ಆದಿವಾಸಿ ಜನರಿಗಿರುವ ಸಾಮೂಹಿಕ ಹಕ್ಕುಗಳನ್ನು ಖಾತ್ರಿಪಡಿಸುವುದಕ್ಕಾಗಿ ಹೋರಾಡಿದರು. ಅವರ ಬಂಧನಕ್ಕೆ ಮುನ್ನ ಅವರು ಅನ್ಯಾಯವಾಗಿ ಬಂಧನಕ್ಕೊಳಗಾಗಿರುವ ಸಾವಿರಾರು ಆದಿವಾಸಿ ಜನರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡುತ್ತಿದ್ದರು ಮತ್ತು ಅವರ ಪರವಾಗಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿದ್ದರು. ಆ ಅರ್ಜಿಯು(ಪಿಐಎಲ್) ಈ ವಿಷಯನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬಹುದಾಗಿತ್ತು.
ಅವರ ಜೀವನವನ್ನು ನೆನಪಿಸಿಕೊಳ್ಳುವುದು ಎಂದರೆ, ಅವರ ಬದ್ಧತೆಗಳನ್ನು ಇನ್ನಷ್ಟು ವ್ಯಾಪಕವಾದ ಸಾಮಾಜಿಕ ಮತ್ತು ರಾಜಕೀಯ ಕಾಳಜಿಗಳನ್ನಾಗಿಸುವುದು. ಸಂವಿಧಾನವು ಅವರಿಗೆ ನೀಡಿರುವ ಭರವಸೆಯನ್ನು ಪೂರ್ಣಗೊಳಿಸುತ್ತ ಅವರ ಹೋರಾಟಗಳ ನೆಲೆಯ ಮೇಲೆ ಎಲ್ಲರನ್ನೂ ಒಳಗೊಂಡ ಸಾರ್ವಜನಿಕ ಸಂಸ್ಕೃತಿಯನ್ನು ಸೃಷ್ಟಿಸುವುದಾಗಿದೆ. ಅಸಂಖ್ಯಾತ ಸಾರ್ವಜನಿಕ ಸಭೆಗಳು, ಪ್ರತಿಭಟನೆಗಳು, ಪುಸ್ತಕಗಳು, ಸಿನೆಮಾಗಳು, ಶಾಲಾಕಾಲೇಜುಗಳ ಪಠ್ಯಗಳಲ್ಲಿ ಮಾಡುವ ಬದಲಾವಣೆಗಳು – ಈ ಕೆಲಸಗಳಿಂದ ಕಟ್ಟುವ ಸಾರ್ವಜನಿಕ ಸ್ಮೃತಿಗೆ ಫಾದರ್ ಸ್ಟ್ಯಾನ್ ಅವರ ಕಾಳಜಿಗಳನ್ನು ಉದ್ದೇಶಿಸುವಂತೆ ಮಾಡಬೇಕು. ಫಾದರ್ ಸ್ಟ್ಯಾನ್ ಅವರಿಗೆ ನ್ಯಾಯ ದೊರಕಿಸುವಲ್ಲಿ ಅದು ಸರಿಯಾದ ಮೊದಲ ಹೆಜ್ಜೆಯಾದೀತು.

ಅರವಿಂದ್ ನಾರಾಯಣ್
ಅರವಿಂದ್ ನಾರಾಯಣ್ ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮು ಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.
ಕನ್ನಡಕ್ಕೆ: ರಾಜಶೇಖರ ಅಕ್ಕಿ
ಇದನ್ನೂ ಓದಿ: ಸ್ಟ್ಯಾನ್ ಸ್ವಾಮಿ ನಿಧನಕ್ಕೆ ಕಾರಣರಾದವರನ್ನು ಇತಿಹಾಸ ಕ್ಷಮಿಸುವುದಿಲ್ಲ


