ಸಮ ಸಮಾಜದ ನಿರ್ಮಾಣಕ್ಕಾಗಿ ಜೀವನವಿಡೀ ಸೇವೆ ಸಲ್ಲಿಸಿದ ಗದುಗಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ ಮೂರನೇ ವರ್ಷದ ಸ್ಮರಣೆ ಅಂಗವಾಗಿ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಪ್ರಶಸ್ತಿ ಪ್ರದಾನ, ಸಂಮಾನ ಗ್ರಂಥಗಳ ಬಿಡುಗಡೆ ಸಮಾರಂಭವನ್ನು ಅಕ್ಟೋಬರ್ 16ರಂದು ಹಮ್ಮಿಕೊಳ್ಳಲಾಗಿದ್ದು, ಜಸ್ಟೀಸ್ ಎಚ್.ಎನ್.ನಾಗಮೋಹನ ದಾಸ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 16ರಂದು ಗದಗದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಶಿವಾನುಭವ ಮಂಟಪದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿ ಫಲಕದೊಂದಿಗೆ 5 ಲಕ್ಷ ರೂ. ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ.
2014ರವರೆಗೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿಯಾಗಿರುವ ಜಸ್ಟೀಸ್ ದಾಸ್ ಅವರು, ನ್ಯಾಯದಾನ ಪರಿಕಲ್ಪನೆಗೆ ಹೊಸ ವಿಶ್ಲೇಷಣೆಗಳನ್ನು ಬರೆದವರು.
ಸಾಮಾಜಿಕ ನ್ಯಾಯದ ಬಹುದೊಡ್ಡ ದನಿಯಾಗಿರುವ ಜಸ್ಟೀಸ್ ದಾಸ್ ಹಲವು ಕೃತಿಗಳನ್ನು ಬರೆದಿದ್ದಾರೆ. ‘ಕರ್ನಾಟಕದಲ್ಲಿ ನ್ಯಾಯಾಂಗ’, ‘ಅಸ್ಪೃಶ್ಯತೆ ಮತ್ತು ಕಾನೂನು’, ‘ಅರಿವು ಬೆಳಕು’, ‘ಮಹಿಳಾ ಅಸಮಾನತೆ’, ‘ಡಾ.ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನು’, ‘ಜಾಗತಿಕ ಧುರೀಣ ಅಂಬೇಡ್ಕರ್’, ‘ಮಾಧ್ಯಮದ ದಿಕ್ಕು ಎತ್ತ?’, ‘ಸಂವಿಧಾನ ಓದು’ ಕೃತಿಗಳು ಜನರಿಗೆ ಹೊಸ ದಿಕ್ಕು ತೋರಿವೆ.
‘ಸಂವಿಧಾನ ಓದು’ ಕೃತಿಯಂತೂ ಈ ದುರಿತ ಕಾಲದ ಹೊಸ ಬೆಳಕಾಗಿ, ದಾರಿ ದೀಪವಾಗಿ ತೋರಿ, ಒಂದು ಚಳವಳಿಯೇ ಆಗಿ ಮಾರ್ಪಾಡಾಯಿತು. ಸಂವಿಧಾನದ ಕುರಿತು ಜನಮಾನಸದಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಜಸ್ಟೀಸ್ ದಾಸ್ ಅವರು ಅವಿರತವಾಗಿ ಶ್ರಮಿಸುತ್ತಿದ್ದಾರೆ.
ವಿದ್ಯಾರ್ಥಿ ದಿಸೆಯಿಂದಲೂ ಮುಂಚೂಣಿ ನಾಯಕರಾಗಿದ್ದವರು ಜಸ್ಟೀಸ್ ದಾಸ್. ಯುವಜನ ಸಂಘಟನೆಯ ರಾಜ್ಯಾಧ್ಯಕ್ಷರಾಗಿ, ವಕೀಲರ ವೇದಿಕೆಯ ಕಾರ್ಯದರ್ಶಿಯಾಗಿ, ವಕೀಲರ ಸಂಘದ ಮಹಾಕಾರ್ಯದರ್ಶಿಯಾಗಿ, ಅಖಿಲ ಭಾರತ ವಕೀಲರ ಸಂಘದ ಸಂಚಾಲಕರಾಗಿ, ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾಗಿ, ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜಾತಿ ಅಸಮಾನತೆ, ಲಿಂಗ ಅಸಮಾನತೆ, ಕೋಮುವಾದದ ವಿರುದ್ಧ ಸದಾ ಎಚ್ಚರದ ಕಣ್ಣಾಗಿರುವ ಜಸ್ಟೀಸ್ ದಾಸ್, ಸಾಮಾಜಿಕ ನ್ಯಾಯಕ್ಕಾಗಿ ಎಚ್ಚರದ ಕಣ್ಣಾಗಿದ್ದಾರೆ.
ಇದನ್ನೂ ಓದಿರಿ: ತಾಂಜೇನಿಯಾ ಲೇಖಕ ಅಬ್ದುಲ್ ರಜಾಕ್ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ-2021


