ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಭಾನುವಾರ ನಡೆದ ಹತ್ಯಾಕಾಂಡದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವಿಗೆ ಪ್ರತಿರೋಧ ವ್ಯಕ್ತಪಡಿಸಲು ರೈತ ಸಂಘಟನೆಗಳು ಅಕ್ಟೋಬರ್ 18 ರಂದು ‘ರೈಲ್ ರೋಕೋ’ ಮತ್ತು ಅಕ್ಟೋಬರ್ 26 ರಂದು ಲಖನೌದಲ್ಲಿ ಮಹಾಪಂಚಾಯತ್ ನಡೆಸಲಿವೆ.
ಕೇಂದ್ರ ಗೃಹ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು. ಎಫ್‌ಐಆರ್‌ನಲ್ಲಿ ಕೊಲೆ ಆರೋಪಿ ಎಂದು ಹೆಸರಿಸಲಾಗಿರುವ ಅವರ ಮಗ ಆಶಿಶ್ ಮಿಶ್ರಾರನ್ನು ಬಂಧಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕರು ಒತ್ತಾಯಿಸಿದ್ದಾರೆ.
“ದೇಶದಾದ್ಯಂತದ ರೈತರು ಅಕ್ಟೋಬರ್ 12 ರಂದು ಲಖಿಂಪುರ್ ಖೇರಿಯನ್ನು ತಲುಪುತ್ತಾರೆ. ಎಲ್ಲಾ ಸಂಘ ಸಂಸ್ಥೆಗಳಿಗೂ ಸಂಸ್ಥೆಗಳು ತಮ್ಮ ನಗರಗಳಲ್ಲಿ ರಾತ್ರಿ 8 ಗಂಟೆಗೆ (ಅಕ್ಟೋಬರ್ 12 ರಂದು) ಕ್ಯಾಂಡಲ್ ಮಾರ್ಚ್ ಕೈಗೊಳ್ಳುವಂತೆ ನಾವು ವಿನಂತಿಸುತ್ತೇವೆ” ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಲಖಿಂಪುರ್ ಖೇರಿ ಹತ್ಯಾಕಾಂಡದಲ್ಲಿ ಮೃತಪಟ್ಟ ರೈತರ ಚಿತಾಭಸ್ಮದೊಂದಿಗೆ ರೈತರು ಪ್ರತಿ ರಾಜ್ಯಕ್ಕೆ ಹೋಗುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾಲೇಜ್ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ‘ಗೂಂಡಾ ಸಂಘಟನೆ’ಗಳಿಗೆ ಹಕ್ಕಿಲ್ಲ: ಅಲೋಶಿಯಸ್ ಬೆಂಬಲಕ್ಕೆ ನಿಂತ ಜನಪರ ಸಂಘಟನೆಗಳು
“ಅಕ್ಟೋಬರ್ 18 ರಂದು ನಾವು ದೇಶಾದ್ಯಂತ ‘ರೈಲ್ ರೋಕೋ’ ನಡೆಸುತ್ತೇವೆ. ಅ.26 ರಂದು ಲಕ್ನೋದಲ್ಲಿ ಬೃಹತ್ ಕಿಸಾನ್ ಮಹಾಪಂಚಾಯತ್ ನಡೆಯಲಿದೆ” ಎಂದು ಘೋಷಿಸಿದ್ದಾರೆ.
ಲಖಿಂಪುರ್ ಖೇರಿ ಹತ್ಯಾಕಾಂಡ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ಕಡೆಗಳಿಂದ ಒತ್ತಡ ಹೆಚ್ಚಾದ ಕಾರಣದಿಂದಾಗ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ, ಶನಿವಾರ ಉತ್ತರ ಪ್ರದೇಶ ಪೊಲೀಸರ ಅಪರಾಧ ವಿಭಾಗದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಿಗೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಬಹಿರಂಗ ಬೆದರಿಕೆ ಹಾಕಿದ್ದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು, ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಹೆಲಿಪ್ಯಾಡ್ ಅನ್ನು ಆಕ್ರಮಿಸಿಕೊಂಡಿದ್ದರು. ಈ ವೇಳೆ ಪ್ರತಿಭಟನೆ ನಡೆಸಿ ವಾಪಸ್ ತೆರಳುತ್ತಿದ್ದ ರೈತರ ಮೇಲೆ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ರೈತರ ಮೇಲೆ ಕಾರು ಹರಿಸಿ ನಾಲ್ವರ ರೈತರ ಹತ್ಯೆಗೆ ಕಾರಣರಾಗಿದ್ದಾರೆ ಎಂದು ರೈತರು ಆರೋಪಿಸಿದ್ದರು.
ರೈತರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆಶಿಶ್ ಮಿಶ್ರಾ ಮತ್ತು 15 ರಿಂದ 20 ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಗಲಭೆ ಇತ್ಯಾದಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ನಾವು ಕೂಡ ರೈತರು, ಪ್ರಿಯಾಂಕ, ರಾಹುಲ್ ಅವರನ್ನು ಸ್ವಾಗತಿಸುತ್ತೇವೆ: ಬಿಜೆಪಿ ಕಾರ್ಯಕರ್ತನ ಕುಟುಂಬ