Homeಮುಖಪುಟರಂಗೇರಿದ ಉಪಸಮರ: ಎಚ್‌ಡಿಕೆ- ಡಿ.ಕೆ.ಶಿವಕುಮಾರ್‌ ವಾಕ್ಸಮರ

ರಂಗೇರಿದ ಉಪಸಮರ: ಎಚ್‌ಡಿಕೆ- ಡಿ.ಕೆ.ಶಿವಕುಮಾರ್‌ ವಾಕ್ಸಮರ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಚ್‌ಡಿಕೆ ಅವರ ಸರಣಿ ಟ್ವೀಟ್ ಬಳಿಕ ಡಿ.ಕೆ.ಶಿವಕುಮಾರ್‌ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

- Advertisement -
- Advertisement -

ಹಾನಗಲ್‌, ಸಿಂಧಗಿ ಉಪಚುನಾವಣೆ ರಂಗೇರಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‌ ನಡುವೆ ವಾಕ್ಸಮರ ತಾರಕ್ಕೇರುತ್ತಿದೆ. ತಾವು ನಿಧನರಾಗುವುದಕ್ಕೆ ಹದಿನೈದು ದಿನ ಮೊದಲು ಸಿಂಧಗಿ ಶಾಸಕ ಎಂ.ಸಿ.ಮನಗೂಳಿ ಅವರು ತಮ್ಮ ಮನೆಗೆ ಬಂದು ಮಕ್ಕಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಕೇಳಿದ್ದರು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಚ್‌ಡಿಕೆ ಅವರ ಸರಣಿ ಟ್ವೀಟ್ ಬಳಿಕ ಡಿ.ಕೆ.ಶಿವಕುಮಾರ್‌ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಎಚ್‌ಡಿಕೆ ತಿರುಗೇಟು

“ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕು. ವ್ಯಕ್ತಿ ಇಲ್ಲವಾದ ಮೇಲೆ ಅವರ ವಿಚಾರದಲ್ಲಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದು ರಾಜಕೀಯವಾಗಿ, ವೈಯಕ್ತಿಕವಾಗಿ ʼಅನೈತಿಕʼ ಎಂಬುದು ನನ್ನ ಅಭಿಪ್ರಾಯ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ʼಅಪ್ಪಟ ಸುಳ್ಳುʼ ಹೇಳುವ ಮೂಲಕ ದಿವಂಗತ ನಾಯಕ ಎಂಸಿ ಮನಗೂಳಿ ಅವರಿಗೆ ಅಪಚಾರ ಮಾಡಿದ್ದಾರೆ” ಎಂದು ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

“ತಾವು ನಿಧನರಾಗುವುದಕ್ಕೆ 15 ದಿನ ಮೊದಲು ಮನಗೂಳಿ ಅವರು ತಮ್ಮ ಪುತ್ರ ಅಶೋಕ್ ಅವರನ್ನು ಕರೆದುಕೊಂಡು ನಮ್ಮ ಮನೆಗೆ ಬಂದಿದ್ದರು. ನನಗೆ ವಯಸ್ಸಾಗಿದೆ, ಆರೋಗ್ಯ ಸರಿ ಇಲ್ಲ. ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ, ಅಶೋಕನನ್ನು ನಿಮ್ಮ ಹಾಗೂ ಸಿದ್ದರಾಮಯ್ಯ ಮಡಿಲಿಗೆ ಹಾಕುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ! ಸುಳ್ಳುಗಳನ್ನು ಸೃಷ್ಟಿ ಮಾಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎನ್ನುವುದಕ್ಕೆ ಇದಕ್ಕಿಂತ ಅತ್ಯುತ್ತಮ ಉದಾಹರಣೆ ಬೇರೆ ಇಲ್ಲ. ಸತ್ಯ ಏನೆಂದರೆ; ಕೋವಿಡ್ ಸೋಂಕಿತರಾಗಿದ್ದ ಮನಗೂಳಿ ಅವರನ್ನು ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ನಾವೇ ಸೇರಿಸಿದ್ದೆವು. 19 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದರು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: RSS ಶಾಖೆಗೆ ಬನ್ನಿ ಎಂದಿದ್ದ ಸಿ.ಟಿ.ರವಿಗೆ ಎಚ್.ಡಿ. ಕುಮಾರಸ್ವಾಮಿ ತಿರುಗೇಟು

ಜನವರಿ 9ರಂದು ಮನಗೂಳಿ ಅವರು ಅಪೊಲೋ ಆಸ್ಪತ್ರೆಗೆ ದಾಖಲಾಗಿ, ಜನವರಿ 28ರಂದು ಅಲ್ಲಿಯೇ ನಿಧನರಾದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನಗೂಳಿ ಅವರನ್ನು ನಾನೂ ಸೇರಿ ಅವರ ಮಕ್ಕಳೂ ನೋಡಲಾಗಲಿಲ್ಲ. ಅದಕ್ಕೂ ಮೊದಲು ಅವರು ಒಂದೂವರೆ ತಿಂಗಳು ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹಾಗಾದರೆ, ಮನಗೂಳಿ ಅವರು ಡಿ.ಕೆ.ಶಿವಕುಮಾರ್ ಅವರ ಮನೆಗೆ ಹೋಗಿದ್ದು ಯಾವಾಗ? ಮಕ್ಕಳನ್ನು ಮಡಿಲಿಗೆ ಹಾಕಿಕೊಳ್ಳಿ ಎಂದಿದ್ದು ಎಂದು? ಅವರ ʼಹಸಿಸುಳ್ಳುಗಳು ಅಸಹ್ಯ ಹುಟ್ಟಿಸುವಂತಿವೆʼ. ನಮ್ಮ ಪಕ್ಷದ ಅಭ್ಯರ್ಥಿಯಾಗಬೇಕಿದ್ದ ಅಶೋಕ್ ಮನಗೂಳಿ ಅವರನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಲ್ಲದೆ, ಈಗ ಸುಳ್ಳುಗಳ ಸರಮಾಲೆ ಹಣೆಯುತ್ತಾ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ದೂರಿದ್ದಾರೆ.

ಸಿಂಧಗಿ ಜನತೆಗೆ ಯಾಮಾರಿಸುವ ಪ್ರಯತ್ನ ಬೇಡ. ಅಭ್ಯರ್ಥಿಗೆ ದಿಕ್ಕಿಲ್ಲದ ಕಾಂಗ್ರೆಸ್ ಪಕ್ಷದ ನಾಯಕರು ಈಗ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ನಮ್ಮ ಪಕ್ಷ ಹಾಗೂ ಮಾನ್ಯ ದೇವೇಗೌಡರ ಬಗ್ಗೆ ಅಚಲ ನಿಷ್ಠೆ ಹೊಂದಿದ್ದ ದಿವಂಗತ ಮನಗೂಳಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಬೇಡ’ ಎಂದು ಎಚ್‌ಡಿಕೆ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್‌ ಸಮರ್ಥನೆ

ಎಚ್‌.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್‌, “ಎಂ.ಸಿ. ಮನಗೂಳಿ ಅವರು ನಮ್ಮನ್ನು ಬಂದು ಭೇಟಿ ಮಾಡಿದ್ದು ಸತ್ಯ. ಈ ವಿಚಾರದಲ್ಲಿ ಸುಳ್ಳು ಹೇಳುವ ಅಗತ್ಯ ನನಗಿಲ್ಲ. ಬೇರೆ ಪಕ್ಷಗಳ ಅಭ್ಯರ್ಥಿಯನ್ನು ಹೈಜಾಕ್ ಮಾಡುವ ಸ್ಥಿತಿ ಕಾಂಗ್ರೆಸ್‌ಗೆ ಬಂದಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಬೇಡ ಎನ್ನುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

‘ಅಶೋಕ್ ಅವರು ನಮ್ಮ ಅಭ್ಯರ್ಥಿ. ಎಂ.ಸಿ. ಮನಗೂಳಿ ಅವರು ಬಂದು ನನ್ನನ್ನು ಭೇಟಿ ಮಾಡಿ ಮಾತನಾಡಿದ ವಿಚಾರವನ್ನು ಬಹಿರಂಗವಾಗಿ ಹೇಳಿದ್ದೇನೆ. ನಾನು ಮಾತ್ರವಲ್ಲ ಸಿದ್ದರಾಮಯ್ಯ ಕೂಡ ಈ ಪ್ರಸ್ತಾಪಿಸಿದ್ದಾರೆ. ನಾವು ಈ ವಿಚಾರದಲ್ಲಿ ಯಾಕೆ ಸುಳ್ಳು ಹೇಳಬೇಕು? 15 ದಿನಗಳ ಹಿಂದೆ ಭೇಟಿ ಮಾಡಿದ್ದರು ಅಂದರೆ ಕ್ಯಾಲೆಂಡರ್ ತೆಗೆದುಕೊಂಡು ಲೆಕ್ಕಹಾಕಿ ಹೇಳಿಲ್ಲ. ಅವರು ಸಾಯುವ ಸ್ವಲ್ಪ ದಿನಗಳ ಮೊದಲು ಭೇಟಿ ಮಾಡಿದ್ದರು. ತಮ್ಮ ಪಕ್ಷದಲ್ಲಿದ್ದವರು ಕಾಂಗ್ರೆಸ್‌ಗೆ ಹೋಗಿದ್ದಾರಲ್ಲ ಎಂಬ ನೋವು ಕುಮಾರಣ್ಣ ಅವರಿಗಿದೆ.‌ ಆ ನೋವಿನಿಂದ ಮಾತನಾಡಿದ್ದಾರೆ. ಅದಕ್ಕೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ. ನಾವು ಯಾರನ್ನೂ ಹೈಜಾಕ್ ಮಾಡುವುದಿಲ್ಲ. ನಮ್ಮಲ್ಲಿ ಸಾಕಷ್ಟು ಸಂಖ್ಯಾಬಲ ಇದೆ. ನಮ್ಮ ಪಕ್ಷಕ್ಕೆ ಸ್ವ ಇಚ್ಛೆಯಿಂದ ಬರುವವರನ್ನು ನಾವು ಬೇಡ ಎನ್ನುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

‘ರಾಜಕಾರಣ ನಿಂತ ನೀರಲ್ಲ ಎಂದು ಕುಮಾರಣ್ಣ ಅವರೇ ಹೇಳಿದ್ದಾರೆ. ಕೆಲವರು ಬಿಜೆಪಿಗೆ ಹೋಗಲು ಸಿದ್ಧರಿರುತ್ತಾರೆ. 17 ಜನ ಸಂಸದರು ಗೆದ್ದು, ದೇವೇಗೌಡರು ದೇಶದ ಪ್ರಧಾನಿ ಆದಾಗ, ನಾವು ಅವರನ್ನು ಹೈಜಾಕ್ ಮಾಡಿ ಕರೆದುಕೊಂಡು ಬಂದಿದ್ದೆವಾ? ಒಂದಲ್ಲಾ ಒಂದು ಕಾರಣದಿಂದ ಬರುವವರು ಬರುತ್ತಾರೆ. ಈ ಹಿಂದೆ ಅನೇಕ ನಾಯಕರು ಕೂಡ ಅವರ ಜತೆ ರಾಜಕೀಯ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್‌ಗೆ ಬಂದಿದ್ದರು. ಅದೇ ರೀತಿ ಮನಗೂಳಿ ಅವರು ಸಾಯುವ ಮುನ್ನ ನನ್ನನ್ನು ಭೇಟಿ ಮಾಡಿದ್ದು ನಿಜ. ಆಗ ಅವರ ಪುತ್ರ ಅಶೋಕ್ ಅವರು ಇದ್ದದ್ದೂ ನಿಜ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿರಿ: ಬಿಜೆಪಿ ನಾಯಕರ ಕಾರು ಪಕ್ಕದಲ್ಲಿ ಹೋಗುವಾಗ ರೆಕಾರ್ಡ್ ಮಾಡಿಕೊಳ್ಳಿ: ಡಿ.ಕೆ.ಶಿವಕುಮಾರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...