ಲಖಿಂಪುರಖೇರಿ ಘಟನೆಯಲ್ಲಿ ಸಾವಿಗೀಡಾದ ಬಿಜೆಪಿ ಕಾರ್ಯಕರ್ತ ಶುಭಂ ಮಿಶ್ರಾ (ಚಿತ್ರಕೃಪೆ: ದಿ ವೈರ್‌, ಇಸ್ಮತ್‌ ಅರಾ)

“ನಾವು ಕೂಡ ರೈತರು, ಕಾಂಗ್ರೆಸ್ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಸ್ವಾಗತಿಸುತ್ತೇವೆ” ಎಂದು ಲಖಿಂಪುರ ಖೇರಿ ಘಟನೆಯಲ್ಲಿ ಮೃತಪಟ್ಟ ಬಿಜೆಪಿ ಕಾರ್ಯಕರ್ತನ ಕುಟುಂಬ ಹೇಳಿರುವುದಾಗಿ ‘ದಿ ವೈರ್‌’ ಜಾಲತಾಣದಲ್ಲಿ ಪತ್ರಕರ್ತೆ ಇಸ್ಮತ್‌ ಅರ ವರದಿ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತರಾದ ಶುಭಂ ಮಿಶ್ರಾ ಅವರ ಕುಟುಂಬವು, “ಕೆಲವು ಸ್ಥಳೀಯ ಬಿಜೆಪಿ ನಾಯಕರು ನಮ್ಮಲ್ಲಿಗೆ ಬಂದು ಧೈರ್ಯ ತುಂಬಿದ್ದರೂ, ಬಿಜೆಪಿಯ ಹಿರಿಯ ನಾಯಕರು ಯಾರೂ ಬಂದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದೆ.

ಅಕ್ಟೋಬರ್‌ 3ರಂದು ಪ್ರತಿಭಟನೆ ನಡೆಸಿ ಹಿಂತಿರುಗುತ್ತಿದ್ದ ರೈತರ ಮೇಲೆ ವಾಹನಗಳನ್ನು ಹತ್ತಿಸಿದಾಗ ಮೃತಪಟ್ಟವರ ಕುಟುಂಬಗಳನ್ನು ಅಕ್ಟೋಬರ್‌ 6ರಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಪಕ್ಷದ ನಾಯಕ ರಾಹುಲ್‌ ಗಾಂಧಿ ಭೇಟಿಯಾಗಿದ್ದರು. ಜೊತೆಗೆ ಘಟನೆಯಲ್ಲಿ ಅಸುನೀಗಿದ ಪತ್ರಕರ್ತ ರಮಣ್‌ ಕಶ್ಯಪ್‌ ಅವರ ಕುಟುಂಬವನ್ನೂ ಭೇಟಿಯಾಗಿದ್ದರು.

ಘಟನೆಯಲ್ಲಿ ಮೃತಪಟ್ಟ ಬಿಜೆಪಿ ಕಾರ್ಯಕರ್ತ ಶುಭಂ ಮಿಶ್ರಾ ಅವರ ಕುಟುಂಬವು, “ಪ್ರಿಯಾಂಕ ಹಾಗೂ ರಾಹುಲ್‌ ಅವರು ತಮ್ಮನ್ನೂ ಭೇಟಿಯಾಗುವುದನ್ನು ಸ್ವಾಗತಿಸಿದೆ” ಎಂದು ಒಂದು ದಿನದ ಬಳಿಕ ಹೇಳಿದೆ.

ಶುಭಂ ಮಿಶ್ರಾ ಅವರ ಒಂದು ವರ್ಷದ ಮಗುವಿನೊಂದಿಗೆ ಶುಭಂ ಮಿಶ್ರಾ ಅವರ ತಂದೆ ವಿಜಯ್‌ ಮಿಶ್ರಾ (ಚಿತ್ರಕೃಪೆ: ದಿ ವೈರ್‌, ಇಸ್ಮತ್‌ ಅರ)

“ಮೃತಪಟ್ಟ ರೈತರ ಕುಟುಂಬಗಳಿಗೆ ಧೈರ್ಯ ತುಂಬಲು ರಾಹುಲ್‌ ಹಾಗೂ ಪ್ರಿಯಾಂಕ ಆಗಮಿಸಿದ್ದರು. ನಾವು ಕೂಡ ರೈತರು. ನಮ್ಮ ಕುಟುಂಬದ ಸದಸ್ಯನನ್ನೂ ಈ ಘಟನೆಯಲ್ಲಿ ಕಳೆದುಕೊಂಡಿದ್ದೇವೆ. ನಮ್ಮ ಮನೆಗೆ ಅವರು ಭೇಟಿ ನೀಡುವುದಾದರೆ ಸಂತೋಷದಿಂದ ಸ್ವಾಗತಿಸುತ್ತೇವೆ” ಎಂದು ಶುಭಂ ಮಿಶ್ರಾ ಅವರ ತಂದೆ ವಿಜಯ್‌ ಮಿಶ್ರಾ ಹೇಳಿದ್ದಾರೆ ಎಂದು ‘ದಿ ವೈರ್‌’ ವರದಿ ಮಾಡಿದೆ.

ಇದನ್ನೂ ಓದಿರಿ: ಸಾಕ್ಷಿಯಿಲ್ಲದೆ ಒತ್ತಡದಿಂದ ಯಾರ ಮೇಲೂ ಕ್ರಮ ಕೈಗೊಳ್ಳುವುದಿಲ್ಲ-ಯೋಗಿ ಆದಿತ್ಯನಾಥ್

ಶುಭಂ ಮಿಶ್ರಾ ಅವರು ಲಖಿಂಪುರ್‌ ಖೇರಿ ಜಿಲ್ಲೆಯಲ್ಲಿ ಬಿಜೆಪಿ ಬೂತ್‌ ಮಟ್ಟದ ಅಧ್ಯಕ್ಷರಾಗಿದ್ದರು. ಕೇಸರಿ ಪಕ್ಷವಾದ ಬಿಜೆಪಿ ಶುಭಂ ಅವರನ್ನು ‘ಹರಕೆಯ ಕುರಿ’ (‘sacrificial goat’) ರೀತಿ ಬಳಸಿಕೊಂಡಿರಬಹುದು ಎಂದು ಕುಟುಂಬ ಹೇಳಿದೆ. “ಸ್ಥಳೀಯ ಬಿಜೆಪಿ ನಾಯಕರು ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಆದರೆ ಬಿಜೆಪಿಯ ಯಾವುದೇ ಹಿರಿಯ ನಾಯಕರು ಕುಟುಂಬವನ್ನು ಭೇಟಿಯಾಗಿಲ್ಲ” ಎಂದು ಹೇಳಿದೆ.

ಬಿಜೆಪಿಯನ್ನು ಬೇರು ಮಟ್ಟದಿಂದ ಕಟ್ಟಿದ ಸಾವಿರಾರು ಕಾರ್ಯಕರ್ತರಲ್ಲಿ ಮಿಶ್ರಾ ಕೂಡ ಒಬ್ಬರಾಗಿದ್ದರು. ಆದರೆ ಮಿಶ್ರಾ ಸಾವಿಗೆ ಬಿಜೆಪಿಯು ‘ಹುತಾತ್ಮ’ ಸ್ಥಾನವನ್ನು ನೀಡುವ ಅಧಿಕೃತ ಹೇಳಿಕೆಯನ್ನು ಪಕ್ಷ ಈವರೆಗೆ ನೀಡಿಲ್ಲ ಎಂದು ಮಿಶ್ರಾ ಕುಟುಂಬ ಹೇಳಿರುವುದಾಗಿ ದಿ ವೈರ್‌ ಇದಕ್ಕೂ ಮುಂಚೆ ವರದಿ ಮಾಡಿತ್ತು.

“ನಾವು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದೇವೆ, ಆದರೆ ಅವರು ಭೇಟಿ ನೀಡಿದ್ದರೆ ನಾವು ಅವರನ್ನು ದೂರವಿಡುತ್ತಿರಲಿಲ್ಲ” ಎಂದು ಕುಟುಂಬ ಹೇಳಿದ್ದು, “ನಾವು ಎಲ್ಲ ಕಡೆಯಿಂದಲೂ ದೂರವಾಗುತ್ತಿರುವ ಅನುಭವವಾಗುತ್ತಿದೆ. ಮಾಧ್ಯಮಗಳು ಕೂಡ ಮಿಶ್ರಾ ಅವರನ್ನು ‘ಖಳನಾಯಕ’ ಎಂದು ಬಿಂಬಿಸುತ್ತಿವೆ” ಎಂದು ಅವರು ಹೇಳಿರುವುದಾಗಿ ದಿ ವೈರ್‌ಗೆ ತಿಳಿಸಿದ್ದಾರೆ.

“ನಮ್ಮ ಬಗ್ಗೆ ಯಾರೂ ಮಾತನಾಡುತ್ತಿಲ್ಲ, ನಮ್ಮನ್ನು ಯಾರೂ ಗಮನಿಸುತ್ತಿಲ್ಲ. ರಾಹುಲ್ ಹಾಗೂ ಪ್ರಿಯಾಂಕ ಅವರು ಸಂತ್ರಸ್ತ ರೈತ ಕುಟುಂಬವನ್ನು ಭೇಟಿ ಮಾಡುವುದಾಗಿ ಹೇಳಿದರು, ನಾವು ರೈತರಲ್ಲವೇ? ಸಂತ್ರಸ್ತರನ್ನು ಭೇಟಿ ಮಾಡುವುದಾಗಿ ಅವರು ಹೇಳಿದರು. ನಾವೂ ಸಂತ್ರಸ್ತರಲ್ಲವೇ? ನಾವೂ ನಮ್ಮ ಮಗನನ್ನೂ ಕಳೆದುಕೊಂಡಿದ್ದೇವೆಯಲ್ಲವೇ?” ಎಂದು ವಿಜಯ ಮಿಶ್ರಾ ಕೇಳಿದ್ದಾರೆ.

ಶುಭಂ ಮಿಶ್ರಾ ಅವರ ಸ್ನೇಹಿತ ಪ್ರವೀಣ್‌ ಮಿಶ್ರಾ ಅವರು, “ಶುಭಂ ಒಳ್ಳೆಯ ಮನುಷ್ಯ. ಯಾವುದೇ ಜಾತಿ, ಧರ್ಮವನ್ನು ಲೆಕ್ಕಿಸದೆ ಕೋವಿಡ್‌ ಬಿಕ್ಕಟ್ಟಿನ ವೇಳೆ ಜನರಿಗೆ ಸಹಾಯ ಮಾಡಿದ್ದಾರೆ. ಹಿಂದೂ ಮುಸ್ಲಿಮರನೇಕರಿಗೆ ಪಡಿತರ ವಿತರಿಸಿದ್ದಾರೆ. ದುಃಖಕ್ಕೆ ಧರ್ಮ, ಜಾತಿ, ರಾಜಕೀಯವಿರುವುದಿಲ್ಲ” ಎಂದಿರುವುದ್ದಾರೆ.

“ಕಾಂಗ್ರೆಸ್‌ ಅಧಿಕಾರ ನಡೆಸುತ್ತಿರುವ ಪಂಜಾಬ್‌ ಮತ್ತು ಛತ್ತೀಸ್‌ಘಡ ಮುಖ್ಯಮಂತ್ರಿಗಳು (ಚರಣ್‌ಜಿತ್‌ ಸಿಂಗ್‌ ಹಾಗೂ ಭೂಪೇಶ್ ಭಾಗೇಲ್‌) ಮೃತ ರೈತ ಕುಟುಂಬಗಳಿಗೆ ಐವತ್ತು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದು, ನಮಗೂ ಪರಿಹಾರ ನೀಡಬೇಕು” ಎಂದು ಕುಟುಂಬ ಕೇಳಿಕೊಂಡಿರುವುದಾಗಿ ವರದಿ ಹೇಳಿದೆ.

“ಶುಭಂ ಅವರು ಹೆಂಡತಿ ಹಾಗೂ ಪುಟ್ಟ ಮಗಳನ್ನು ಅಗಲಿದ್ದಾರೆ. ನಮ್ಮ ಆರ್ಥಿಕ ಸ್ಥಿತಿ ಕೂಡ ಸುಭದ್ರವಾಗಿಲ್ಲ. ದುಃಖದಲ್ಲಿ ಯಾವುದೇ ಪಕ್ಷದ ರಾಜಕೀಯ ಇರಬಾರದು” ಎಂದು ವಿಶ್ರಾ ಅವರ ತಂದೆ ಹೇಳಿದ್ದಾರೆ.

ದಿ ವೈರ್‌ ವರದಿಗಾರ್ತಿ ವಿಜಯ್‌ಮಿಶ್ರಾ ಅವರನ್ನು ಮಾತನಾಡಿಸಿ ಹಿಂದಿರುಗುವಾಗ, “ನಮ್ಮ ದುಃಖವನ್ನು ಹಂಚಿಕೊಳ್ಳಲು ರಾಹುಲ್‌ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ನಾವು ಆಹ್ವಾನಿಸುತ್ತೇವೆ ಎಂಬುದನ್ನು ತಪ್ಪದೇ ಬರೆಯಿರಿ” ಎಂದು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೃಪೆ: ದಿ ವೈರ್‌

ಇದನ್ನೂ ಓದಿರಿ: ಲಖಿಂಪುರ್‌ ಖೇರಿ ಪ್ರಕರಣ: ಯುಪಿ ಸರ್ಕಾರದ ವಿರುದ್ಧ ಸುಪ್ರೀಂ ಮತ್ತೆ ಅತೃಪ್ತಿ

LEAVE A REPLY

Please enter your comment!
Please enter your name here