Homeನ್ಯಾಯ ಪಥಸರಳ, ಸಜ್ಜನಿಕೆಯ ದಿಟ್ಟ ಹೋರಾಟಗಾರ ದೊರೆಸ್ವಾಮಿಯವರು ನಮಗೆಲ್ಲಾ ಮಾದರಿ

ಸರಳ, ಸಜ್ಜನಿಕೆಯ ದಿಟ್ಟ ಹೋರಾಟಗಾರ ದೊರೆಸ್ವಾಮಿಯವರು ನಮಗೆಲ್ಲಾ ಮಾದರಿ

- Advertisement -
- Advertisement -

ದೊರೆಸ್ವಾಮಿಯವರ ಒಡನಾಡಿಗಳಾಗಿದ್ದ, ಹಿರಿಯ ವಕೀಲರಾಗಿರುವ ಶೇಷಾದ್ರಿಯವರು ಹೇಳುತ್ತಿದ್ದ ಒಂದು ಘಟನೆ ನನಗೆ ಇಂದಿಗೂ ಆಶ್ಚರ್ಯವನ್ನುಂಟುಮಾಡುತ್ತದೆ. ಸುಮಾರು 50-60 ವರ್ಷಗಳ ಹಿಂದೆ ದೊರೆಸ್ವಾಮಿಯವರು ಬೆಂಗಳೂರಿನ ಹನುಮಂತನಗರದಲ್ಲಿ ವಾಸಿಸುತ್ತಿದ್ದರು. ಅಲ್ಲಿಂದ ಅವರು ಮಾರುಕಟ್ಟೆ ಬಳಿ ಇರುವ ಗಾಳಿ ಆಂಜನೇಯ ಸ್ವಾಮಿ ದೇವಾಲಯದವರೆಗೆ ನಡೆದುಕೊಂಡು ಬಂದರು. ಅಂದು ಅಲ್ಲಿರುವ ಖಾದಿ ಗ್ರಾಮೋದ್ಯೋಗ ಮಳಿಗೆಯಲ್ಲಿ ಸಬ್ಸಿಡಿ ದರದಲ್ಲಿ ಖಾದಿ ಬಟ್ಟೆಗಳನ್ನು ಮಾರುತ್ತಿದ್ದರು. ದೊರೆಸ್ವಾಮಿಯವರು ಒಂದು ಜುಬ್ಬಾ, ಒಂದು ಪಂಚೆ ಮತ್ತು ಟವೆಲ್ ಒಂದನ್ನು ಆಯ್ಕೆ ಮಾಡಿ ಎಷ್ಟು ಹಣ ಎಂದು ಕೇಳುತ್ತಾರೆ. ಅಂಗಡಿಯಾತ ಬೆಲೆ ಹೇಳಿ, ’ಸರ್ ಹಿಂದಿನ ಸಾರಿ ನೀವು ಹಣ ಕೊಡುವುದು ಮರೆತಿದ್ದೀರಿ’ ಎಂದನಂತೆ. ಆಗ ದೊರೆಸ್ವಾಮಿಯವರು ತಮ್ಮಲ್ಲಿದ್ದ ಹಣ ನೀಡಿ, ಹಿಂದಿನ ಸಾಲ ಪೂರ್ತಿ ತೀರಿಸಿದ ನಂತರವೇ ಹೊಸದನ್ನು ಖರೀದಿಸುತ್ತೇನೆ ಎಂದು ಹೇಳಿ ಬರಿಗೈನಲ್ಲಿ ವಾಪಸ್ ಹೋದರಂತೆ. ಇದೊಂದು ಉದಾಹರಣೆ ಸಾಕು ಅವರ ಪ್ರಾಮಾಣಿಕತೆ ಮತ್ತು ಸರಳ ಜೀವನವನ್ನು ತಿಳಿಯಲು.

ದೊರೆಸ್ವಾಮಿಯವರು ಸ್ವಾತಂತ್ರ್ಯ ಹೋರಾಟಗಾರರು, ಸರಳ ಸಜ್ಜನಿಕೆಗೆ ಬಹಳ ಹೆಸರುವಾಸಿಯಾದವರು. ದೇಶಪ್ರೇಮ, ಜನರ ಬಗ್ಗೆ ಕಾಳಜಿ, ಜನಸಾಮಾನ್ಯರ ಕಷ್ಟನಷ್ಟಗಳಿಗೆ ಸ್ಪಂದಿಸುವ ಗುಣ ಅವರದ್ದು. ಜನರ ಸಮಸ್ಯೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ತರುವುದಕ್ಕಾಗಿ, ಕೃಷಿಕರು, ಕಾರ್ಮಿಕರು ಮತ್ತು ಹಿಂದುಳಿದವರ ಸಾಮಾಜಿಕ ನ್ಯಾಯಕ್ಕಾಗಿ ತಾವು ನಿಧನರಾಗುವವರೆಗೂ ದಣಿವರಿಯದೇ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡ ಹಿರಿಯ ಜೀವ ಅದು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ 14 ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ದರು. ನಂತರ ಇಂದಿರಾ ಗಾಂಧಿಯವರು ಹೇರಿದ್ದ ತುರ್ತುಪರಿಸ್ಥಿತಿ ವಿರೋಧಿಸಿ ಹೋರಾಟ ಮಾಡಿದ್ದಕ್ಕಾಗಿ 4 ತಿಂಗಳು ಜೈಲಿನಲ್ಲಿರಬೇಕಾಗಿತ್ತು. ಅವರು ತ್ಯಾಗಮಯಿ, ಸಮಾಜದ ಬಗ್ಗೆ ಬದ್ಧತೆ, ಕಾಳಜಿಯ ಮನೋಭಾವ ರೂಢಿಸಿಕೊಂಡಿದ್ದರು. ದೇಶದ ಬಗ್ಗೆ ಮತ್ತು ದೇಶದಲ್ಲಿನ ಜನರ ಬಗ್ಗೆ ಸದಾ ಚಿಂತಿಸುತ್ತಿದ್ದರು. ದೇಶದ ಆಗು ಹೋಗುಗಳ ಬಗ್ಗೆ ಬಹಳ ತೀಕ್ಷ್ಣವಾಗಿ ಪರಿವೀಕ್ಷಣೆ ಮಾಡುತ್ತಿದ್ದರು. ಜನರ ಸ್ವಾತಂತ್ರ್ಯ ಸಂರಕ್ಷಣೆಯ ಬಗ್ಗೆ ಚಿಂತನೆ ಮಾಡುತ್ತಿದ್ದರು. ದೇಶದ ರೈತರು, ಬಡವರು, ದಲಿತರು, ಮಹಿಳೆಯರು ಸೇರಿದಂತೆ ತುಳಿತಕ್ಕೊಳಗಾದವರ ಪರವಾಗಿ ಅವರು ನಿರಂತರವಾಗಿ ದನಿಯೆತ್ತುತ್ತಿದ್ದರು ಮತ್ತು ಅದಕ್ಕಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದರು.

ಅವರ ವ್ಯಕ್ತಿತ್ವ, ನಿಸ್ವಾರ್ಥ ಜೀವನದ ಕುರಿತು ಯುವಜನರು, ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು ಮತ್ತು ರಾಜಕಾರಣಿಗಳು ಹೆಚ್ಚು ತಿಳಿದುಕೊಂಡು ಅವರಂತೆ ನಡೆದುಕೊಳ್ಳಬೇಕಿದೆ. ಆದರೆ ನಮ್ಮ ದೇಶದ ಜನ ಗಾಂಧಿಯವರನ್ನೇ ಮರೆತುಬಿಟ್ಟಿದ್ದು, ದೊರೆಸ್ವಾಮಿಯವರನ್ನು ಎಷ್ಟು ನೆನಪಿಟ್ಟುಕೊಳ್ಳುತ್ತಾರೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ಆದರೆ ದೊರೆಸ್ವಾಮಿಯವರಂತ ಪ್ರಾಮಾಣಿಕ ವ್ಯಕ್ತಿಗಳು ಇದ್ದಿದ್ದರಿಂದಲೇ ಈ ಸಮಾಜ ಇಷ್ಟಾದರೂ ಸಹ್ಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಅವರು ಜೆ.ಪಿ ನಗರದ ಮನೆಯಲ್ಲಿರುವಾಗ ನಾನು ಅವರ ಆರೋಗ್ಯ ವಿಚಾರಿಸಲು ಎರಡು ಬಾರಿ ಹೋಗಿದ್ದೆ. ಅವರು ತಮ್ಮ ಜೀವಮಾನವಿಡಿ ಸ್ವಂತ ಮನೆ ಮಾಡಲಿಲ್ಲ. ಬಾಡಿಗೆ ಮನೆಯಲ್ಲಿಯೇ
ಅರ್ಥಪೂರ್ಣವಾಗಿ ಬದುಕಿದರು. ಅವರನ್ನು ಸಾಮಾಜಿಕ ಕಾರ್ಯಕರ್ತರು ಬಹಳ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು. ನಮ್ಮಂಥವರು ಅವರನ್ನು ನೋಡಲು ಹೋದರೆ ಬಹಳ ಗೌರವದಿಂದ ಸತ್ಕರಿಸುತ್ತಿದ್ದರು. ಮನುಷ್ಯ ಮನುಷ್ಯನಾಗಿ ಹೇಗೆ ಬದುಕಬೇಕು ಎಂಬುದನ್ನು ಅವರು ನಮಗೆ ಕಲಿಸಿದರು. ನಾನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯಾಗಿ ಅವರನ್ನು ನೋಡಿದಾಗ, ಅವರ ರೀತಿಯೇ ಬದುಕಬೇಕು, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು, ಅವರ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಎಷ್ಟೋ ಸಲ ನನಗೆ ಅನ್ನಿಸಿದೆ. ಅವರ ತುಂಬು ಜೀವನವನ್ನು ನೋಡಿ ಸಂತಸವಾಗಿದೆ. ಈ ವರ್ಷ ಏಪ್ರಿಲ್ 10ನೇ ತಾರೀಖು ಅವರ 104ನೇ ಜನ್ಮದಿನದ ಸಂದರ್ಭದಲ್ಲಿ ಅವರ ಹೋರಾಟದ ಕುರಿತ ವೆಬಿನಾರ್‌ನಲ್ಲಿ ನಾನು ಮಾತನಾಡಿದೆ. ಅದರಿಂದ ಧನ್ಯಭಾವ ಅನುಭವಿಸಿದೆ. ಅವರು ಇನ್ನೊಂದು ದಶಕ ಬದುಕಿರುತ್ತಾರೆ ಎಂದುಕೊಂಡಿದ್ದೆ. ಅವರ ಆಶಯಗಳಾದ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ, ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆ ಉಳಿಯುತ್ತದೆ. ಪ್ರಜಾಪ್ರಭುತ್ವ ಬೆಳೆಯುತ್ತದೆ. ನಾಗರಿಕ ಸಮಾಜ ಇನ್ನೂ ಉತ್ಕೃಷ್ಟ ರೀತಿಯಲ್ಲಿ ನಡೆದುಕೊಳ್ಳುತ್ತದೆ ಎಂಬುದನ್ನು ನೋಡಿ ಅವರು ಸಂತಸ ಪಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರು ನಮ್ಮನ್ನೆಲ್ಲಾ ಅಗಲಿಹೋಗಿದ್ದಾರೆ.

ಬೆಂಗಳೂರಿನ ಜಯದೇವ ಆಸ್ಪತ್ರೆಯ ಡಾ.ಸಿಎನ್ ಮಂಜುನಾಥ್ ಅವರನ್ನು ಈ ಸಂದರ್ಭದಲ್ಲಿ ನಾವು ನೆನೆಯಬೇಕು. ಏಕೆಂದರೆ ದೊರೆಸ್ವಾಮಿಯವರಿಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೂ ಸಹ ಮಂಜುನಾಥ್ ಅವರು ಬಹಳ ಮುತುವರ್ಜಿಯಿಂದ ನೋಡಿಕೊಂಡಿದ್ದಾರೆ. ಮಾರ್ಚ್ ತಿಂಗಳಲ್ಲಿ ನಾನು ದೊರೆಸ್ವಾಮಿಯವರನ್ನು ಭೇಟಿ ಮಾಡಿದಾಗ ಅವರು ಕೆಮ್ಮುತ್ತಿದ್ದರು. ಏಕೆಂದು ಕೇಳಿದಾಗಿ, ’ನನ್ನ ಶ್ವಾಸಕೋಶ ಚೆನ್ನಾಗಿದೆ. ಆದರೆ ಮೂಗಿನಲ್ಲಿ ಏನೋ ಸಮಸ್ಯೆಯಾಗಿ ಕೆಮ್ಮುತ್ತಿದ್ದೇನೆ’ ಅಂದರು. ಆಗ ನಾನು ವಿಕ್ರಮ್ ಆಸ್ಪತ್ರೆಯ ಇಎನ್‌ಟಿ ತಜ್ಞರಾದ ಡಾ.ಶ್ರೀನಿವಾಸ್ ಅವರಿಗೆ ಫೋನ್ ಮಾಡಿದೆ. ಸ್ವಾತಂತ್ರ್ಯ ಹೋರಾಟಗಾರರು, ಹಿರಿಯರು, ಮಾರ್ಗದರ್ಶಕರು, ನಮ್ಮ ಆಸ್ತಿ, ನಮ್ಮ ದೇಶದ ಸಂಪತ್ತು ಇವರು, ಇವರನ್ನು ನೀವು ಮುತುವರ್ಜಿಯಿಂದ ನೋಡಬೇಕು ಎಂದು ಕೇಳಿಕೊಂಡೆ. ಅವರು ಸಂತೋಷದಿಂದ ಒಪ್ಪಿ ಕರೆದುಕೊಂಡು ಬರಲು ಹೇಳಿದರು. ಆದರೆ ಅಂತಹ ದೊಡ್ಡ ಆಸ್ಪತ್ರೆಗೆ ನಾನು ಹೋಗಲಾರೆ ಎಂದು ದೊರೆಸ್ವಾಮಿಯವರು ಹೋಗಲೇ ಇಲ್ಲ. ತಮ್ಮ ಸರಳತೆಯನ್ನು ಬಿಟ್ಟುಕೊಡಲು ದೊರೆಸ್ವಾಮಿಯವರು ತಯಾರಿರಲಿಲ್ಲ.

ದೊರೆಸ್ವಾಮಿಯವರಿಗೆ ನಾವು ಪ್ರತಿ ಕ್ಷಣ ಶ್ರದ್ಧಾಂಜಲಿಯನ್ನು ಸಲ್ಲಿಸಬೇಕಾಗಿದೆ. ಸಂಸದೀಯ ಪ್ರಜಾಪ್ರಭುತ್ವ ಮಾತ್ರವಲ್ಲದೆ ಜನರ ಪ್ರಜಾಪ್ರಭುತ್ವವನ್ನು ಕಟ್ಟಲಿಕ್ಕೆ ಅವರ ಹಾದಿಯಲ್ಲಿ ನಾವು ಮುಂದೆ ಹೋಗಬೇಕಾಗಿದೆ. ಆಗ ಮಾತ್ರ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನಿಸುತ್ತದೆ.

ಕಳೆದ ವರ್ಷ ಕೆಲ ಬೇಜವಾಬ್ದಾರಿ ರಾಜಕಾರಣಿಗಳು, ಜನಪ್ರತಿನಿಧಿಗಳು ದೊರೆಸ್ವಾಮಿಯವರ ಬಗ್ಗೆ ಕ್ಷುಲ್ಲಕ ಮಾತುಗಳನ್ನಾಡಿದ್ದು ನನಗೆ ತೀವ್ರ ಖೇದವೆನಿಸಿದೆ. ದೊರೆಸ್ವಾಮಿಯವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಟೀಕೆ ಟಿಪ್ಪಣಿ ಮಾಡಿದಾಗ ಅದನ್ನು ಸಹಿಸಲಾಗದೆ, ಸಹಿಷ್ಣುತೆ ಇಲ್ಲದವರು ಮಾತುಗಳನ್ನಾಡಿದರು. ಮೇರು ವ್ಯಕ್ತಿತ್ವಕ್ಕೆ ಈ ರೀತಿ ನಡೆದುಕೊಂಡಿದ್ದು ಇಡೀ ಕರ್ನಾಟಕ ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ನಾನು ಭಾವಿಸುತ್ತೇನೆ. ಈಗಲಾದರೂ ಅವರು ಅದನ್ನು ಯೋಚಿಸಿ, ತಮ್ಮ ಹೇಳಿಕೆ ತಪ್ಪಾಯಿತು ಎಂದು ಹೇಳುತ್ತಾರೆ ಎಂದು ನಾನು ಭಾವಿಸಿದ್ದೇನೆ.

ಜಸ್ಟಿಸ್ ವಿ. ಗೋಪಾಲಗೌಡ
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು. ಒರಿಸ್ಸಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....