Homeಚಳವಳಿಉತ್ತರದಾದ್ಯಂತ ಪ್ರಶ್ನೆ ಕೇಳುತ್ತಿರುವ ರೈತರು

ಉತ್ತರದಾದ್ಯಂತ ಪ್ರಶ್ನೆ ಕೇಳುತ್ತಿರುವ ರೈತರು

- Advertisement -
- Advertisement -

ಉತ್ತರ ಭಾರತದ ರೈತರು ಗ್ರಾಮ ಬಂದ್ ಪ್ರತಿಭಟನೆಯ ಹೋರಾಟ ಆರಂಭಿಸಿದ್ದಾರೆ. ತಮ್ಮ ಯಾವುದೇ ಉತ್ಪನ್ನವನ್ನೂ ಮಂಡಿಗಳಿಗೆ ಕಳಿಸುವುದಿಲ್ಲ; ಇಲ್ಲೇ ಕೊಳೆಯಲಿ ಪರವಾಗಿಲ್ಲ ಎಂಬ ವಿನೂತನ ಪ್ರತಿಭಟನೆ ಇದು. ಹಾಲು, ತರಕಾರಿ, ಹಣ್ಣುಗಳ ಪೂರೈಕೆ ನಗರಗಳಿಗೆ ಬಂದ್ ಆದಾಗಲೇ ನಗರಿಗರಿಗೆ ರೈತರ ಕಷ್ಟ ಗೊತ್ತಾಗುವುದು.
ಈ ಪ್ರತಿಭಟನೆ ಉತ್ತರ ಭಾರತದಲ್ಲಿ, ಅದರಲ್ಲೂ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‍ಗಢ, ಮಹಾರಾಷ್ಟ್ರ ಮತ್ತು ಪಂಜಾಬುಗಳಲ್ಲಿ ತೀವ್ರ ಸ್ವರೂಪ ಪಡೆದಿದೆ. ಈ ಹೋರಾಟ ಭಾಜಪ ಆಳ್ವಿಕೆಯ ರಾಜ್ಯಗಳಲ್ಲಿ ತೀವ್ರವಾಗಿದೆ ಎನ್ನುವುದು ಕಾಕತಾಳೀಯ ಅಲ್ಲ; ಹಾಗೆಂದು ಅದು ರಾಜಕೀಯ ಕುತಂತ್ರದ ಆಟವೂ ಅಲ್ಲ. ಈ ರಾಜ್ಯಗಳ ಸರಕಾರಗಳು ರೈತರ ಬಗ್ಗೆ ಸತತವಾಗಿ ತಾತ್ಸಾರದ ಧೋರಣೆ ತಳೆದ ಕಾರಣ ರೈತರ ಬೇಗುದಿ ಹೆಚ್ಚಿದೆ. ಈ ಹೋರಾಟ ಏಕಾಏಕಿ ಹುಟ್ಟಿಕೊಂಡದ್ದೂ ಅಲ್ಲ, ಯಾವುದೋ ಭಾವನಾತಕ ಕಾರಣಕ್ಕೇ ಭುಗಿಲೆದ್ದ ಪ್ರತಿಭಟನೆಯೂ ಅಲ್ಲ. ಇದು ಭೂಕಂಪದ ಮೊದಲಿನ ಸರಣಿ ಗುರುಗಾಟದ ಹಾಗೆ; ಕಳೆದ ಕೆಲವು ವರ್ಷಗಳಿಂದ ಅಲ್ಲಿಇಲ್ಲಿ ವ್ಯಕ್ತವಾಗುತ್ತಲೇ ಇದೆ.
ಕಳೆದ ವರ್ಷ ಮಧ್ಯಪ್ರದೇಶದ ಮಾಂಡ್‍ಸೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಪೋಲೀಸರು ಗೋಲೀಬಾರ್ ಮಾಡಿ ಆರು ರೈತರ ಜೀವ ಹೋಗಿತ್ತು. ಈ ದಮನದ ನೆನಪು ರೈತರಲ್ಲಿ ಇನ್ನೂ ಹಸಿಯಾಗಿದೆ. ಈ ಗೋಲೀಬಾರಿನ ಬಳಿಕ ಸರ್ಕಾರ ಅಷ್ಟಿಷ್ಟು ಕ್ರಮ ಕೈಗೊಂಡರೂ ಮತ್ತೆ ರೈತ ನಿರ್ಲಕ್ಷದ ಜಾಡಿಗೆ ಮರಳಿದೆ. ಈ ಬಾರಿಯ ಗ್ರಾಮ ಬಂದ್ ಹೋರಾಟದ ಭಾಗವಾಗಿ ಮಾಂಡ್‍ಸೂರಿನಲ್ಲಿ ಇದೇ ಜೂನ್ ಆರರಂದು, ಗೋಲೀಬಾರಿನಲ್ಲಿ ಹುತಾತ್ಮರಾದ ರೈತರನ್ನು ಸ್ಮರಿಸುವ ಹುತಾತ್ಮ ದಿನಾಚರಣೆಯೂ ನಡೆಯಲಿದೆ. ಸಾವಿರಾರು ರೈತರು ಸೇರಲಿದ್ದಾರೆ.
ಈ ಹೋರಾಟಕ್ಕೆ ಇನ್ನೊಂದು ಆಯಾಮವಿದೆ. ಇಷ್ಟು ದಿನ ಆಯಾ ರಾಜ್ಯ ಅಥವಾ ಸಂದರ್ಭಗಳಲ್ಲಿ ಬೇಗುದಿ ಅನುಭವಿಸಿದ ರೈತರು ಬೀದಿಗಿಳಿದಾಗ ಉಳಿದ ಸಂಘಟನೆಗಳು ಅದಕ್ಕೆ ಬೆಂಬಲ ನೀಡಿ ಹೋರಾಟದ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದರು. ಕಳೆದ ವರ್ಷದ ಮಧ್ಯಪ್ರದೇಶದ ರೈತ ಹೋರಾಟವಿರಬಹುದು, ಭೂ ಸ್ವಾಧೀನದ ವಿರುದ್ಧ ರಾಜಸ್ತಾನದಲ್ಲಿ ಭುಗಿಲೆದ್ದ ಹೋರಾಟ ಇರಬಹುದು. ಆದರೆ ಈ ಬಾರಿ ಕಳೆದ ಎರಡು ವರ್ಷಗಳಿಂದ ಸಮಾಲೊಚನೆ ನಡೆಸಿ ಸುಮಾರು 150 ರೈತಪರ ಸಂಘಟನೆಗಳ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರೂಪುತಳೆದಿದೆ. ಕಳೆದ ವರ್ಷದ ಜುಲೈನಲ್ಲಿ ಈ ಸಮಿತಿಗೊಂದು ಸಾಂಸ್ಥಿಕ ಸ್ವರೂಪವೂ ದೊರಕಿತು. ಕೃಷಿಕ್ ಮುಕ್ತಿ ಸಂಗ್ರಾಮ ಸಮಿತಿ, ಅಖಿಲ ಭಾರತ ಕಿಸಾನ್ ಸಭಾ, ಆಶಾ, ಕರ್ನಾಟಕ ರಾಜ್ಯ ರೈತ ಸಂಘ, ಜನ ಚಳವಳಿಯ ರಾಷ್ಟ್ರೀಯ ಒಕ್ಕೂಟ, ಸ್ವರಾಜ್ ಅಭಿಯಾನ್ ಸೇರಿ ದೇಶದ ಸುಮಾರು 150 ಮುಖ್ಯ ರೈತಪರ/ ಜನಪರ ಹೋರಾಟಗಳು ಸಂಘಟನೆಗಳು ಈ ಸಮಿತಿಯ ಭಾಗವಾಗಿವೆ.
ನಮ್ಮದೆರಡೇ ಬೇಡಿಕೆಗಳು
ಕೃಷಿ ಬಿಕ್ಕಟ್ಟಿನ ಎಲ್ಲಾ ಸಮಸ್ಯೆಗಳ ವಿವರ ಈ ಎರಡು ಮೂಲಗಳಲ್ಲಿ ಹುದುಗಿದೆ ಎಂಬ ಸ್ಪಷ್ಟತೆಯನ್ನು ಈ ಸಮನ್ವಯ ಸಮಿತಿ ಅನಾವರಣಗೊಳಿಸಿದೆ. ಈ ಸಮನ್ವಯ ಸಮಿತಿ ಎರಡು ಸ್ಥೂಲ ಬೇಡಿಕೆಗಲನ್ನು ಮುಂದಿಟ್ಟಿದೆ. ಬೆಳೆಗೆ ಲಾಭದಾಯಕ ಬೆಲೆ ಮತ್ತು ಋಣಮುಕ್ತ ರೈತ. ಬೆಳೆಗೆ ಲಾಭದಾಯಕ ಬೆಲೆ ನೀಡಿದರೆ ಸಾಲ ಮನ್ನಾದಂಥಾ ಬೇಡಿಕೆಗಳೇ ಅಸಂಗತವಾಗುತ್ತದೆ ಎಂಬ ನಿಲುವನ್ನು ಬಹುತೇಕ ಆರ್ಥಿಕ ತಜ್ಞರಷ್ಟೇ ಅಲ್ಲ, ರೈತ ನಾಯಕರೂ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವೇ ನೇಮಿಸಿದ ಸ್ವಾಮಿನಾಥನ್ ಸಮಿತಿ ಈ ಕುರಿತ ಶಿಫಾರಸ್ಸುಗಳನ್ನು ಪ್ರಕಟಗೊಳಿಸಿದ್ದು ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸದೇ ನುಣುಚಿಕೊಳ್ಳುತ್ತಿದೆ. ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯದಲ್ಲಿ ‘ಈ ಶಿಫಾರಸ್ಸನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ; ಅದು ಬೆಲೆ ಏರಿಕೆಗೆ ಕಾರಣವಾಗುತ್ತದೆ’ ಎಂದು ಅಫಿಡವಿಟ್ ಸಲ್ಲಿಸಿದ್ದ ಮೋದಿ ಈ ವರ್ಷ ರೈತ ಅಸಹನೆಯ ಬಿಸಿ ತಟ್ಟಿದ್ದರಿಂದ ಸ್ವಾಮಿನಾಥನ್ ಶಿಫಾರಸು ಜಾರಿ ಮಾಡುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಆದರೆ ಮೋದಿ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯ ಚೌಕಟ್ಟು ಪೂರಾ ಲೊಳಲೊಟ್ಟೆ. ಸರ್ಕಾರ ಉತ್ಪಾದನಾ ವೆಚ್ಚ + 50% ಎಂಬ ಸೂತ್ರ ಮುಂದಿಟ್ಟಿರುವುದರಲ್ಲಿ ಭೂಮಿಯ ಬಂಡವಾಳದ ವೆಚ್ಚ ಮತ್ತಿತರ ಪರೋಕ್ಷ ವೆಚ್ಚಗಳು ಸೇರಿಲ್ಲ. ಅಷ್ಟೇಕೆ ಉತ್ಪಾದನಾ ವೆಚ್ಚವನ್ನು ಸರ್ಕಾರ ಲೆಕ್ಕ ಹಾಕಿದ್ದೇ ಅವಾಸ್ತವವಾಗಿದೆ. ಕುಗ್ಗಿದ ಉತ್ಪಾದನಾ ವೆಚ್ಚವನ್ನು ತಾನೇ ತೀರ್ಮಾನಿಸಿ ಅದರ ಆಧಾರದ ಮೇಲೆ ತಾನೇ ಬೆಲೆ ಘೋಷಿಸುವ ಸರ್ಕಾರದ ಅಡ್ಡ ಕಸುಬಿತನ ರೈತ ಮುಖಂಡರಿಗೆ ಅರ್ಥವಾಗಿದೆ.
ಈ ರೀತಿ ಅತಾರ್ಕಿಕವಾದ ಕನಿಷ್ಠ ಬೆಂಬಲ ಬೆಲೆಯೂ ರೈತರಿಗೆ ದಕ್ಕುತ್ತಿಲ್ಲ ಎಂಬುದನ್ನು ಸಾಬೀತುಪಡಿಸಲು ಈ ಸಮಿತಿಯು ದೇಶದ ಬಹುತೇಕ ಮಾರುಕಟ್ಟೆಗಳಿಗೆ ಹೋಗಿ ಅಧ್ಯಯನ ನಡೆಸಿದೆ. ಎಲ್ಲಾ ಕಡೆ ಒಂದೇ ಚಿತ್ರಣ. ಕನಿಷ್ಠ ಬೆಂಬಲ ಬೆಲೆ ಎನ್ನುವುದೇ ದೊಡ್ಡ ಮೋಸ. ಆದ್ದರಿಂದಲೇ ಲಾಭದಾಯಕ ಬೆಲೆ ಕುರಿತಂತೆ ನಿಷ್ಕರ್ಷೆಗೆ ಬರಲು ಕಾನೂನು ರೂಪಿಸಲೂ ಈ ಸಮಿತಿ ಒತ್ತಾಯಿಸುತ್ತಿದೆ. ಬೆಲೆ ಕುಸಿತದ ಸಮಯದಲ್ಲಿ ಸರ್ಕಾರದ ಮಧ್ಯಪ್ರವೇಶ, ಮಾರುಕಟ್ಟೆ ಬೆಲೆ ಮತ್ತು ಸರ್ಕಾರದ ಬೆಲೆಯ ಮಧ್ಯೆಯ ವ್ಯತ್ಯಾಸವನ್ನು ರೈತರಿಗೆ ಸಬ್ಸಿಡಿ ರೂಪದಲ್ಲಿ ನೀಡುವುದು ಎಲ್ಲಾ ಈ ಬೇಡಿಕೆಗಳಲ್ಲಿ ಸೇರಿದೆ.
ಈ ಸಮಿತಿ ಗಹನವಾಗಿ ಯೋಚಿಸಿರುವ ಇನ್ನೊಂದು ಆಯಾಮ ಸಾಲದ್ದು. ಋಣಮುಕ್ತ ರೈತ ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿರುವ ಸಮಿತಿ, ರೈತ ಸಂಕುಲ ಯಾವುದೇ ಋಣ ಬಾಧೆಯಿಂದ ನರಳದಂತೆ ಮಾಡುವ ಮಾರ್ಗೋಪಾಯಗಳನ್ನು ಸರ್ಕಾರ ರಚಿಸಬೇಕು ಎಂದು ಒತ್ತಾಯಿಸಿದೆ. ಮುಖ್ಯ ಅಂಶವೆಂದರೆ ಈ ಬೇಡಿಕೆ ಯಾಕೆ ಎಂಬುದಷ್ಟೇ ಅಲ್ಲ, ಇದನ್ನು ಹೇಗೆ ಮಾಡಬಹುದು ಎಂಬು ಅನುಷ್ಠಾನ ಯೊಗ್ಯ ಸಲಹೆಗಳೂ ಈ ಸಮಿತಿಯಲ್ಲಿದೆ. ಸರ್ಕಾರಗಳು ನುಣುಚಿಕೊಳ್ಳಲು ಸಾದ್ಯವೇ ಇಲ್ಲ!
ಹಾಗಿದ್ದರೆ ಸರ್ಕಾರಗಳು ಯಾಕೆ ನುಣುಚಿಕೊಳ್ಳುತ್ತಿವೆ?
ಈ ಚಳವಳಿ ಉತ್ತರಭಾರತದಲ್ಲಿ ಪ್ರಖರವಾಗಿ ಬೆಳೆಯುತ್ತಿರುವುದರ ಹಿಂದೆ ಭಾಜಪದ ರಾಜಕೀಯ ಹಿತಾಸಕ್ತಿಗಳ ಜನದ್ರೋಹ ಇದೆ. ಗ್ರಾಮೀಣ ವರ್ಗವನ್ನು ಭಾವುಕ ವಿಷಯಗಳ ಮೂಲಕ ಹಾದಿ ತಪ್ಪಿಸುತ್ತಾ ಆಡಳಿತದ ತಣ್ಣನೆ ಆಟದಲ್ಲಿ ಕಾರ್ಪೋರೇಟ್ ಹಿತಾಸಕ್ತಿಗೆ ಮಣೆ ಹಾಕುವ ಕೆಲಸ ಭಾಜಪ ಕಾಂಗ್ರೆಸ್ಸಿಗಿಂತಲೂ ತೀವ್ರವಾಗಿ ಮಾಡುತ್ತಿದೆ. ಕಾರ್ಪೋರೇಟ್ ಕುಳಗಳ ಕೆಟ್ಟ ಸಾಲಗಳನ್ನು ನಿರಂತರವಾಗಿ ಮನ್ನಾ ಮಾಡುತ್ತಾ ಬಂದಿರುವ ಈ ಸರ್ಕಾರ ಆ ನಷ್ಟ ತುಂಬಿಸಲು ಬ್ಯಾಂಕುಗಳಿಗೆ ಬಜೆಟ್ ಅನುದಾನ ಬೇರೆ ನೀಡುತ್ತಿದೆ. ಅರ್ಥಾತ್ ಕಾರ್ಪೋರೇಟ್ ನಷ್ಟವನ್ನು ನೇರಾ ನೇರಾ ಸರ್ಕಾರ ತುಂಬಿ ಕೊಡುತ್ತಿದೆ; ಅದೂ ನಮ್ಮ ತೆರಿಗೆ ಮೂಲಕ.
ಈ ಕಳ್ಳಾಟಕ್ಕೆ ಶಾಶ್ವತ ಕೊನೆ ಹೇಳಲು ಈ ಸಂಯುಕ್ತ ಸಮನ್ವಯ ಸಮಿತಿಯ ನೇತೃತ್ವದ ರೈತ ಹೋರಾಟ ನಿರ್ಧರಿಸಿದಂತಿದೆ. ಭಾಜಪ ತನ್ನ ಭಾವನಾತ್ಮಕ ಕೋಮು ಧ್ರುವೀಕರಣದ ಮೂಲಕ ಹುಲುಸು ಬೆಲೆ ಪಡೆದಿರುವ ರಾಜ್ಯಗಳಲ್ಲೇ ಈ ಭೂಕಂಪದ ಅದುರುವಿಕೆ ತೀವ್ರವಾಗುತ್ತಿದೆ. ಮೊದಲೇ ಅಭಿವೃದ್ಧಿ ಕುಂಠಿತವಾಗಿರುವ ಈ ರಾಜ್ಯಗಳಲ್ಲಿ ರೈತ ನಿರ್ಲಕ್ಷ್ಯವೂ ಸೇರಿಕೊಂಡರೆ ಅಧಿಕಾರಸ್ಥ ಪಕ್ಷಕ್ಕೆ ಅದಕ್ಕಿಂತ ದೊಡ್ಡ ಅಪಾಯದ ಸೂಚನೆ ಇಲ್ಲ. ದಕ್ಷಿಣದ ರಾಜ್ಯಗಳಲ್ಲಿ ಅದೂ ಕರ್ನಾಟಕದಲ್ಲಿ ಸ್ಥಳೀಯ ಮಂಥನದ ಸಂಕ್ರಮಣ ಸ್ಥಿತಿಯಲ್ಲಿ ಉತ್ತರದಷ್ಟು ತೀವ್ರ ಹೋರಾಟ ತಕ್ಷಣಕ್ಕೆ ಹೊಮ್ಮದು. ಆದರೆ ಈ ಚಳವಳಿ ರೈತ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಪಡೆವ ಸ್ಪಷ್ಠತೆಯೊಂದಿಗೆ ಹೊರಟಿರುವ ಕಾರಣ ಈ ವರ್ಷ ಅಭೂತಪೂರ್ವ ಚಳವಳಿ ಎಲ್ಲೆಡೆ ಭುಗಿಲೇಳಲಿದೆ. ಕರ್ನಾಟಕವೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

– ಕೆ.ಪಿ.ಸುರೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...