Homeಸಾಹಿತ್ಯ-ಸಂಸ್ಕೃತಿಕಥೆಅವಕಾಶಗಳ ಬಾಲ ಕೈ ಬಿಟ್ಟಾಗ

ಅವಕಾಶಗಳ ಬಾಲ ಕೈ ಬಿಟ್ಟಾಗ

- Advertisement -
- Advertisement -

ಇಪ್ಪತ್ತೈದು ವಯಸ್ಸಿನ ಸ್ಫುರದ್ರೂಪಿ ಯುವಕ. ಪಕ್ಕದೂರಿನ ರೈತನೊಬ್ಬನ ಮಗಳ ಮೇಲೆ ಅವನಿಗೆ ಒಲವಾಯಿತು. ಆಕೆಯನ್ನೇ ಮದುವೆಯಾಗಬೇಕೆಂದು ನಿರ್ಧರಿಸಿಕೊಂಡ. ಸೀದಾ ಆ ಹುಡುಗಿಯ ಅಪ್ಪನ ಮುಂದೆ ಬಂದು ನಿಂತ.
`ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ. ಅವಳನ್ನು ಮದುವೆಯಾಗುತ್ತೇನೆ. ದಯವಿಟ್ಟು ಅಪ್ಪಣೆ ಕೊಡಿ’ ಹುಡುಗ ಪ್ರಾಮಾಣಿಕವಾಗಿ ತನ್ನ ಮನದಾಸೆಯನ್ನು ಹುಡುಗಿಯ ಅಪ್ಪನೆದುರು ಬಿಚ್ಚಿಟ್ಟ.
ರೈತ, ಹುಡುಗನನ್ನು ಒಮ್ಮೆ ದಿಟ್ಟಿಸಿ ನೋಡಿದ. ಸಿರಿವಂತಿಕೆಯ ಲಕ್ಷಣಗಳು ಅವನ ದೇಹದಿಂದ ಚಿಮ್ಮಿ ಬರುತ್ತಿದ್ದವು.
ಒಂದು ನಿರ್ಧಾರಿತ ಧ್ವನಿಯಲ್ಲಿ ರೈತ ನುಡಿದ, `ನಿನಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ನನಗೆ ಯಾವ ಅಭ್ಯಂತರವೂ ಇಲ್ಲ. ಆದರೆ ನಾನು ಒಂದು ಸ್ಪರ್ಧೆ ಇಡುವೆ. ಅದರಲ್ಲಿ ನೀನು ಗೆದ್ದರೆ ಮಾತ್ರ ಮದುವೆಯ ಪ್ರಸ್ತಾಪ. ಇಲ್ಲದಿದ್ದರೆ ನೀನು ಖಾಲಿ ಕೈಯಲ್ಲಿ ವಾಪಾಸ್ ಹೋಗಬೇಕು’.
ವಯಸ್ಸಿನ ಹುಮ್ಮಸ್ಸು, ಪ್ರೀತಿಯ ನಶೆಯಲ್ಲಿದ್ದ ಹುಡುಗ `ಸರಿ, ನಾನು ಸಿದ್ಧ. ಏನು ನಿಮ್ಮ ಸ್ಪರ್ಧೆ?’ ಪ್ರಶ್ನಿಸಿಯೇಬಿಟ್ಟ.
`ಏನಿಲ್ಲ, ನೀನು ಆ ಮೈದಾನದ ಮಧ್ಯದಲ್ಲಿ ನಿಂತಿರು. ನಾನು ನನ್ನ ಬಳಿಯಿರುವ ಮೂರು ಗೂಳಿಗಳನ್ನು ಒಂದಾದ ಮೇಲೆ ಒಂದರಂತೆ ಮೈದಾನದೊಳಕ್ಕೆ ಬಿಡುತ್ತೇನೆ. ಮೂರರಲ್ಲಿ ಯಾವುದಾದರು ಒಂದು ಗೂಳಿಯ ಬಾಲವನ್ನು ನೀನು ಹಿಡಿದರೂ ನಿನಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡ್ತೀನಿ.’
`ಅಷ್ಟೇ ತಾನೆ, ನಾನು ಸಿದ್ಧ!’ ಹುಡುಗ ಒಂದೇ ಉಸುರಿಗೆ ಸಮ್ಮತಿಯಿತ್ತ.
ಮೈದಾನದ ನಡುವೆ ಹುಡುಗ ಮೊದಲ ಗೂಳಿಗಾಗಿ ಕಾದು ನಿಂತ. ರೈತ ತನ್ನ ಕೊಟ್ಟಿಗೆಯಿಂದ ಒಂದು ಗೂಳಿಯನ್ನು ಮೈದಾನದತ್ತ ನುಗ್ಗಿಸಿದ. ಅದು ದಷ್ಟಪುಷ್ಟವಾಗಿದ್ದ ಗೂಳಿ. ಕಟ್ಟುಮಸ್ತಾದ ಐದಾರು ಪೈಲ್ವಾನರನ್ನು ಒಂದೇ ಏಟಿಗೆ ಎತ್ತಿ ಬಿಸಾಡಬಲ್ಲ ರೋಷದಿಂದ ನುಗ್ಗಿ ಬರುತ್ತಿತ್ತು.
ಹುಡುಗ ಯೋಚನೆ ಮಾಡಿದ, `ಈ ಗೂಳಿ ಭಯಂಕರ ತಾಕತ್ತಿನಲ್ಲಿದೆ. ಇದರ ಬಾಲ ಹಿಡಿಯಲು ಹೋದರೆ ಅಪಾಯ ಕಟ್ಟಿಟ್ಟಬುತ್ತಿ. ಇದನ್ನು ಸುಮ್ಮನೇ ಬಿಟ್ಟುಬಿಡೋಣ. ಎರಡನೇ ಗೂಳಿಯ ಬಾಲ ಹಿಡಿದರಾಯ್ತು. ಹೇಗೂ ಒಂದು ಗೂಳಿಯ ಬಾಲವನ್ನು ತಾನೇ ನಾನು ಹಿಡಿಯಬೇಕಿರುವುದು. ಮನಸ್ಸಿನ ಆಲೋಚನೆಯನ್ನು ಪ್ರತಿಫಲಿಸುವಂತೆ ಆತ ಪಕ್ಕಕ್ಕೆ ಸರಿದು ಗೂಳಿ ಓಡಿಹೋಗಲು ಅನುವು ಮಾಡಿಕೊಟ್ಟ.
ಈಗಾತ ಎರಡನೇ ಗೂಳಿಯ ನಿರೀಕ್ಷೆಯಲ್ಲಿದ್ದಾನೆ. ಕೊಟ್ಟಿಗೆ ತೆರೆಯಿತು, ಎರಡನೇ ಗೂಳಿ ಮೈದಾನದತ್ತ ದೌಡಾಯಿಸಿತು. ಅದು ಮೊದಲನೆಯದ್ದಕ್ಕಿಂತ ಬಲಿಷ್ಠವಾಗಿದೆ. ಅದರ ಓಟಕ್ಕೆ ನೆಲವೇ ನಡುಗಿಹೋಗುತ್ತಿದೆ. ಹುಡುಗನ ಮನಸ್ಸು ಮತ್ತೆ ಆಲೋಚಿಸಿತು `ಈ ಗೂಳಿಯ ಸಹವಾಸವೂ ಬೇಡ. ಇದೂ ಹೋಗಲಿ. ಮೂರನೇ ಗೂಳಿಯ ಬಾಲವನ್ನು ಹಿಡಿದರಾಯಿತು.’
ಎರಡನೇ ಗೂಳಿಯೂ ಅನಾಯಾಸವಾಗಿ ಸಾಗಿಹೋಯಿತು. ಈಗ ಕಡೆಯ, ಮೂರನೇ ಗೂಳಿಯ ನಿರೀಕ್ಷೆಯಲ್ಲಿ ಹುಡುಗನಿದ್ದಾನೆ. ಇದು ಅವನ ಕೊನೆಯ ಅವಕಾಶ. ಕೊಟ್ಟಿಗೆಯ ಬಾಗಿಲು ತೆರೆಯಿತು. ಮೂರನೇ ಗೂಳಿಯೂ ಹೊರಬಂತು. ಅದನ್ನು ನೋಡುತ್ತಿದ್ದಂತೆ ಹುಡುಗನ ಮುಖದಲ್ಲಿ ಖುಷಿ ದಟ್ಟೈಸಿತು. ಯಾಕೆಂದರೆ ಅದು ಬಡಕಲು ದೇಹದ ನರಪೇತಲ ಗೂಳಿ! ಸುಲಭವಾಗಿ ಅದರ ಬಾಲ ಹಿಡಿಯಬಹುದೆಂದು ಹುಡುಗ ಲೆಕ್ಕಾಚಾರ ಹಾಕಿದ. ಗೂಳಿ ಹತ್ತಿರ ಬರುತ್ತಿದ್ದಂತೆಯೇ ಅದರ ಮೇಲೆ ನೆಗೆಯಲು ಸನ್ನದ್ಧನಾದ. ಬಾಲ ಹಿಡಿಯಬೇಕೆಂದರೆ ಗೂಳಿ ಕೊಂಚ ಮುಂದಕ್ಕೆ ಹೋಗಬೇಕು, ಆಗ ಹಿಂದಿನಿಂದ ನೆಗೆದು ಬಾಲ ಹಿಡಿಯಬಹುದೆಂಬ ತಂತ್ರ ರೂಪಿಸಿಕೊಂಡ. ಅದರಂತೆ ಆ ಗೂಳಿ ತನ್ನನ್ನು ಪಾರು ಮಾಡಿಕೊಂಡು ಹೋಗುತ್ತಿದ್ದಂತೆಯೇ ಎರಡೂ ತೋಳುಗಳಿಗೆ ಬಲತುಂಬಿಕೊಂಡು, ಅಂಗೈಗಳನ್ನು ಬಿಗಿತಕ್ಕೆ ಅಣಿಮಾಡಿಕೊಂಡು ಗೂಳಿಯ ಮೇಲೆ ಹಾರಿದ.
ಹುಡುಗನಿಗೆ ಅಚ್ಚರಿ… ಆ ಗೂಳಿಗೆ ಬಾಲವೇ ಇರಲಿಲ್ಲ! ಪ್ರಶ್ನಾರ್ಥಕ ಮೊಗದೊಂದಿಗೆ ರೈತನತ್ತ ನೋಡಿದ. ರೈತ ತನ್ನ ಮೊದಲೆರಡು ಗೂಳಿಗಳ ಕಡೆ ನೋಡಿ ಮುಗುಳ್ನಕ್ಕ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...