Homeಮುಖಪುಟಪುನೀತ್ ರಾಜಕುಮಾರ್ 'ನಮ್ಮ ಅಪ್ಪು' ಆದದ್ದು..: ಕೆ.ಫಣಿರಾಜ್

ಪುನೀತ್ ರಾಜಕುಮಾರ್ ‘ನಮ್ಮ ಅಪ್ಪು’ ಆದದ್ದು..: ಕೆ.ಫಣಿರಾಜ್

ಯಾವುದೇ ಪ್ರಸಿದ್ಧ ವ್ಯಕ್ತಿಯನ್ನು ನಾವು ವೈಚಾರಿಕವಾಗಿ ಮೆಚ್ಚಬಹುದು; ಅವರ ವೈಚಾರಿಕತೆಯನ್ನು ಬದುಕಿನ ದರುಶನದ ಅರಿವಾಗಿ ಹಚ್ಚಿಕೊಳ್ಳಬಹುದು; ಆದರೆ ‘ಅಭಿಮಾನಿ’ಯಾಗುವುದು ಭಾವನಾತ್ಮಕವಾಗಿ ಆ ವ್ಯಕ್ತಿಯ ಜೊತೆ ಮಾನಸಿಕ ನೆಂಟಸ್ತಿಕೆ ಬೆಳೆದಾಗ ಮಾತ್ರವೇ.

- Advertisement -
- Advertisement -

“ತೆರೆಯ ಮೇಲೆ ಕಾಣುವುದು ನಿತ್ಯ ಜೀವನದ ಸಾಮಾನ್ಯ ದೃಶ್ಯಗಳೇ. ನೋಡುವವರು ತಮ್ಮ ಭಾವಗಳನ್ನು ತೆರೆದು, ತೆರೆಯ ಮೇಲಿನ ಸಾಮಾನ್ಯ ಬದುಕಿನ ದೃಶ್ಯಗಳನ್ನು ತಮ್ಮ ಕಿನ್ನರ ಲೋಕದ ಚಿತ್ರಗಳಂತೆ ಕಂಡಾಗ ಅದು ಅಸಲಿ ಸಿನೆಮಾ ಕಲೆ”. – ಸ್ಲೋವಾಜ್ ಜಿಜೆಕ್, ‘ಪರ್ವಟ್ಸ್ ಗೈಡ್ ಟು ಸಿನೆಮಾ’

ಯಾವುದೇ ಪ್ರಸಿದ್ಧ ವ್ಯಕ್ತಿಯನ್ನು ನಾವು ವೈಚಾರಿಕವಾಗಿ ಮೆಚ್ಚಬಹುದು; ಅವರ ವೈಚಾರಿಕತೆಯನ್ನು ಬದುಕಿನ ದರುಶನದ ಅರಿವಾಗಿ ಹಚ್ಚಿಕೊಳ್ಳಬಹುದು; ಆದರೆ ‘ಅಭಿಮಾನಿ’ಯಾಗುವುದು ಭಾವನಾತ್ಮಕವಾಗಿ ಆ ವ್ಯಕ್ತಿಯ ಜೊತೆ ಮಾನಸಿಕ ನೆಂಟಸ್ತಿಕೆ ಬೆಳೆದಾಗ ಮಾತ್ರವೇ. ಸಿನೆಮಾರಂಗದ ಖ್ಯಾತರ ‘ಅಭಿಮಾನಿ’ಯಾಗಲು ಸಾಮಾಜಿಕವಾಗಿ ಹಲವು ಕಾರಣಗಳಿರುತ್ತವೆ. ಒಂದು ಕಾಲದ ಸಮಾಜದಲ್ಲಿ ಬದುಕುವ ನಮ್ಮಲ್ಲಿ ಯಾರಿಗೂ ಹೇಳಲಾಗದ, ಈಡೇರಿಸಿಕೊಳ್ಳಲು ಸಾಧ್ಯವಾಗಿರದ ಎಷ್ಟೋ ಬಯಕೆಗಳು ಇರುತ್ತವೆ; ಅವು ನಮ್ಮ ಮನಸ್ಸಿನ ಆಳದಲ್ಲಿರುವ ಉಗ್ರಾಣದಲ್ಲಿ ಹುದುಗಿಬಿಟ್ಟಿರುತ್ತವೆ. ಸಿನಿಮಾ ಪರದೆಯ ಮೇಲಿನ ಚಿತ್ರಗಳ ಪಾತ್ರಗಳಲ್ಲಿ ಅಂಥ ಬಯಕೆಗಳಿಗೆ ಭಾವನಾತ್ಮಕ ನಂಟು ಸಿಕ್ಕರೆ, ನಮ್ಮದೇ ಕನಸುಗಳು ತೆರೆಯ ಮೇಲೆ ಮಾಂತ್ರಿಕವಾಗಿ ಬಿಂಬಿತವಾಗತೊಡಗುತ್ತವೆ. ತೆರೆಯ ಮೇಲಿನ ಪಾತ್ರಗಳು ನಮ್ಮ ವಾಸ್ತವದ ಸಂಬಂಧಿಗಳಾಗಿ ಮನಸ್ಸಿಗೆ ಸಮಾಧಾನ ಉಂಟಾಗತೊಡಗುತ್ತದೆ; ಸತತವಾಗಿ ಅಂಥ ಮುದ ನೀಡುವ ಪಾತ್ರಧಾರಿಯ ಬಗ್ಗೆ ಅಭಿಮಾನ ಹುಟ್ಟಿಬಿಡುತ್ತದೆ. ಇದು ಸಮಾಜದಲ್ಲಿ ಬದುಕುವ ಜನರ ಭಾವನೆಯ ವಾಸ್ತವ; ಅಂತಾಗಿ ಸಾಮಾಜಿಕ ವಾಸ್ತವ.
ಚಿಕ್ಕಂದಿನಿಂದಲೇ ಸಿನೆಮಾಗಳನ್ನು ನೋಡಿ, ಕಥನಗಳನ್ನು ದೈನಂದಿನ ಭಾಗವೆಂಬಂತೆ ಭಾವಿಸುವ ನಮ್ಮ ಮನೆಯ ಹೆಂಗಸರ ಸೆರಗಲ್ಲಿ ಬದುಕಿದ ನನಗೆ ಖ್ಯಾತ ನಟರ ’ಅಭಿಮಾನಿ’ಯಾಗುವುದು ಭಾವ ಜೀವನದ ಭಾಗ. ’ಅಭಿಮಾನ’ ಎಂಬುದು ಯಾವ ಬಗೆಯ ಸಮಾಜ ಮನೋಸ್ಥಿತಿ ಎನ್ನುವುದೂ ಅಷ್ಟೇ ಸೋಜಿಗ. ಅಣ್ಣಾವ್ರು (ಡಾ.ರಾಜಕುಮಾರ್) ಜಾತಿ ಮತಗಳ ಎಲ್ಲೆಗಳನ್ನು ಮೀರಿ ಕರ್ನಾಟಕದ ಎಷ್ಟು ಸಂಸಾರಗಳಲ್ಲಿ ‘ರಾಜಿ/ರಾಜಣ್ಣ/ರಾಜಪ್ಪ ಎಂದು ಬಾಯ್ತುಂಬ ಕರೆಸಿಕೊಳ್ಳುವ ನಂಟನಾಗಿದ್ದರು ಎಂದು ನೆನೆದರೆ ಅಚ್ಚರಿಯಾಗುತ್ತದೆ. ನಮಗೆ ಅವರ ಪರಿಚಯವಿದ್ದದ್ದು ತೆರೆಯ ಮೇಲೆ ಬಿಂಬಿತವಾಗುತ್ತಿದ್ದ ಅವರ ಪಾತ್ರ ಹಾಗು ಪತ್ರಿಕೆಗಳಲ್ಲಿ ಮುದ್ರಿತವಾಗುತ್ತಿದ್ದ ಅವರ ಸರಳ ಸಜ್ಜನ ಜೀವನದ ಕಥನಗಳ ಮೂಲಕ ಮಾತ್ರವೇ. ಆದರೂ, ಪರದೆಯ ಮೇಲೆ ಅವರ ಪಾತ್ರವು ಮರಣ ಹೊಂದಿದರೆ, ನನ್ನ ಅಮ್ಮ-ಅತ್ತೆಯಂದಿರು ಟಾಕೀಸಲ್ಲೇ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡುತ್ತಿದ್ದರು! ಇವರು ಬಹಳ ಸೌಮ್ಯ ಸ್ವಭಾವದವರಾಗಿದ್ದರೂ, ಯಾರಾದರೂ, ಅಣ್ನವ್ರ ಬದುಕಿನ ಬಗೆಗಿನ ಗುಸು ಗುಸು ಸುದ್ದಿ ಎತ್ತಿ ಕೊಂಕಾಡಿದರೆ, ಅವರು ಆಡಿದವರ ಮನೆಯ ಗಂಡಸರ ಚರಿತ್ರೆಯನ್ನೇ ಬಿಚ್ಚಿ ಜಗಳಕ್ಕೆ ಇಳಿದುಬಿಡುವರು! ಆವರ ಸಹಜ ಜೀವನದಲ್ಲಿ ಸಿಕ್ಕದೇ, ಮನಸ್ಸಿನಾಳದಲ್ಲಿ ಹುದುಗಿರುವ ಸಂಸಾರದ ಗಂಡಸರೆಲ್ಲರ ಬೆಚ್ಚಗಿನ ಪ್ರೀತಿಯ ಬಿಂಬ ಆಕೃತಿಯೇ ಅವರ ‘ರಾಜಿ’ ಆಗಿದ್ದ. ಅದು ಭ್ರಮಾತ್ಮಕ ನಂಟು ಎಂದು ಅವರಿಗೆ ಗೊತ್ತಿದ್ದರೂ, ಇಲ್ಲದಿರಬಹುದಾದ ಸಹಜ ನಂಟಿಗೆ ಅದು ಭಾವನಾತ್ಮಕ ಆಸರೆ ಆಗಿತ್ತು. ‘ಅಭಿಮಾನಿ’ಯ ಈ ಸಮಾಜಶಾಸ್ತ್ರ, ಚಿಕ್ಕಂದಿನಿಂದಲೇ ನಮ್ಮೆಲ್ಲರಿಗೂ ರೂಢಿಯಾಗಿದ್ದರೆ, ಅದು ನಮ್ಮ ಸಮಾಜದ ಸ್ಥಿತಿಯ ಬಿಂಬವೂ ಹೌದು.

ನನ್ನ ಹದಿಹರೆಯದವರೆಗೂ ’ಅಣ್ಣ’ ಅವರ ಅಭಿಮಾನಿಯಾಗಿದ್ದ ನಾನು ಯೌವ್ವನ ಕಾಲದಲ್ಲಿ ಶಂಕರ್ ನಾಗ್ ಅಭಿಮಾನಿಯಾದೆ. ಆ ನಂತರ, ಭಿನ್ನ ಬಗೆಯ ಕಲಾತ್ಮಕ, ಜಾಗತಿಕ ಸಿನೆಮಾಗಳ ಪರಿಚಯವಾಗುತ್ತಾ, ಸಿನೆಮಾದ ಕುರಿತ ಭಾವನಾತ್ಮಕತೆ ಕಡಿಮೆಯಾಗಿ ಬೌದ್ಧಿಕತೆ ಕಡೆ ಮನ ವಾಲಿತು. ಇಷ್ಟಾಗಿಯೂ ನಡು ವಯಸ್ಸಿನಲ್ಲಿ ಅಪ್ಪುವಿನ ಬಗ್ಗೆ ಅಭಿಮಾನ ಶುರುವಾಯ್ತು! ತೀರಬಾರದ ವಯಸ್ಸಲ್ಲಿ ಅಪ್ಪು ತೀರಿರುವಾಗ, ಅಪ್ಪುವಿನ ಜೊತೆಗೆ ಕುದುರಿದ ಭಾವನಾತ್ಮಕ ಸಂಬಂಧದ ಬಗ್ಗೆ ವೇದನೆಯಲ್ಲಿ ಯೋಚಿಸುವಂತೆ ಮಾಡುತ್ತಿದೆ.

ಅಪ್ಪು ಬಾಲಕನಾಗಿರುವಾಗಲೇ, ಅಣ್ಣಾವ್ರ ಸಿನೆಮಾಗಳಲ್ಲಿ ಮುದ್ದಾಗಿ ಕಾಣಿಸಿಕೊಳ್ಳುವ ಮೂಲಕ, ಅಣ್ಣಾವ್ರ ಮಗನಾಗಿ ಮನದಲ್ಲಿ ಛಾಪಾಗಿಬಿಟ್ಟಿದ್ದ. ಆತ ‘ಚಲಿಸುವ ಮೋಡಗಳು’ ಸಿನೆಮಾದಲ್ಲಿ ಚೂಟಿಯಾದ ಅನಾಥ ಹುಡುಗನಾಗಿ ಕಾಣಿಸಿಕೊಂಡಾಗಲೇ, ನಮಗೆ ಆತ ‘ಅಣ್ಣಾವ್ರ ಮಗ’ ಎನ್ನುವುದಕ್ಕಿಂತ, ಕಷ್ಟದ ಬದುಕಿಂದ ಬರುವ ಜಿಗುಟು ಜಾಣ್ಮೆಯ (ಸ್ಟ್ರೀಟ್ ಸ್ಮಾರ್ಟ್) ಕಣ್ಮಣಿಯಾಗಿ ಕಾಣತೊಡಗಿದ್ದ. ‘ಭಾಗ್ಯವಂತ’ದಲ್ಲಿ ಮಾಡಿದ ಪಾತ್ರವು, ಬರೀ ಕಣ್ಣೀರು ತರಿಸುವ ಮೆಲೋಡ್ರಾಮವಾಗದೆ, ಅಂಥ ಸಂಸಾರಗಳಲ್ಲಿ ಬದುಕುವ ಮಕ್ಕಳ ಜೀವಭಾವವನ್ನು ಬೆಚ್ಚಗೆ ಹಚ್ಚಿಕೊಳ್ಳುವ ಹಾಗೆ ನಿಭಾಯಿಸಿ, ನಮ್ಮ ಮನದಲ್ಲಿ ಮೊಳಕೆ ಒಡೆಯತೊಡಗಿದ. ‘ಎರಡು ನಕ್ಷತ್ರಗಳಲ್ಲಂತೂ ಆತ, ಮುಗ್ಧತೆ-ಸ್ಟ್ರೀಟ್ ಸ್ಮಾರ್ಟ್‌ತನಗಳನ್ನು ಹೊಸೆದು, ಜನಮನದಲ್ಲಿ ಬೇರಿಳಿಸುವ ಹೊಸ ನಾಯಕನೊಬ್ಬನ ನಿರೀಕ್ಷೆ ಹುಟ್ಟಿಸಿದ. ’ಬೆಟ್ಟದ ಹೂ’ ಸಿನೆಮಾದ ಮೂಲಕ ಆತ ಸ್ವತಂತ್ರ ನಾಯಕನ ಪ್ರತಿಭೆ ಪ್ರಕಟಿಸಿ ಬೆರಗು ಹುಟ್ಟಿಸಿಬಿಟ್ಟ. ‘ಪ್ರೇಮದ ಕಾಣಿಕೆ’ಯಿಂದ ‘ಬೆಟ್ಟದ ಹೂ’ನವರೆಗೆ ಅಪ್ಪುವಿನ ಪಾತ್ರಾವಳಿಗಳನ್ನು ಈಗ ತಿರುಗಿ ನೋಡಿದರೆ, ಆತ ಕರ್ನಾಟಕದ ಸಾಮಾನ್ಯ ಸಂಸಾರಗಳಲ್ಲಿ ಮಕ್ಕಳು ಬೆಳೆವ ಸಹಜ ಚಿತ್ರಾವಳಿಗಳ ಬಿಂಬವಾಗಿರುವುದೂ ಕಾಣುತ್ತದೆ; ಹಾಗೆಯೇ, ನಿತ್ಯದ ಬವಣೆಗಳ ನಡುವೆ ಮಕ್ಕಳ ಬಗ್ಗೆ ನಾವು ತೋರುವ ಪ್ರೀತಿ-ಸಿಡುಕಗಳಿಗೆ, ಅವು ತೋರುವ ಮುಖಭಾವದ ಒಂದು ಪ್ರತಿಮೆಯಾಗಿ ಅಪ್ಪುವಿನ ಮುಖದ ಬಿಂಬವು ಕಟ್ಟಿಕೊಂಡುಬಿಡುತ್ತದೆ! ಹಾಗೇ ಕಂಡರೆ, ಅಣ್ಣಾವ್ರ ಅಭಿಮಾನಿಗಳಾಗಿದ್ದ ನಮ್ಮಂಥವರಿಗೆ, ಅವರ ಮುದ್ದಿನ ಕೂಸಾಗಿದ್ದ ಅಪ್ಪು, ‘ಬೆಟ್ಟದ ಹೂ’ ಬರೋ ಹೊತ್ತಿಗೆ ‘ನಮ್ಮ ಮಕ್ಕಳೂ ಹೀಗೆ ಮುಗ್ಧವಾಗಿ, ಆದ್ರೇ ಜಿಗುಟು ಜಾಣಜಾಣೆಯರಾಗಿ ಇರಬಾರದೇ’ ಎಂಬ ಆಸೆಯ ಬೇರನ್ನು ಮನದಾಳದಲ್ಲಿ ಬಿಟ್ಟಿರಬೇಕು.

ಯೌವ್ವನದ ಆತನ ಮೊದಲ ಸಿನೆಮಾಗಳು, ಆತನ ಬಾಲ್ಯದ ಪಾತ್ರ ಚಿತ್ರಗಳಿಗೆ ಅಷ್ಟೇನೂ ಹೊಂದುತ್ತಿರಲಿಲ್ಲವಾಗಿ, ಅಭಿಮಾನ ಉಕ್ಕಿರಲಿಲ್ಲ. ಆದರೆ, 2007ರಲ್ಲಿ ಬಂದ ‘ಅರಸು’ ಚಿತ್ರದ ಪಾತ್ರದಲ್ಲಿ ಬಾಲಕ ಅಪ್ಪುವಿನ ಲಯ ಕಾಣತೊಡಗಿತು; ಐಷಾರಾಮದ ಉಡಾಫೆ ಶ್ರೀಮಂತ ಯುವಕನೊಬ್ಬ ಬಡತನಕ್ಕೆ ಬಿದ್ದು ಮನುಷ್ಯರ ಲೋಕ ಕಾಣುವ ಪಾತ್ರದಲ್ಲಿ ಅಪ್ಪು ಆಪ್ತನೆನಿಸಿದ. ’ಮಿಲನ’ದಲ್ಲಿ ಮಧ್ಯಮ ವರ್ಗದ ಸಂಸಾರಗಳ ಸಾಂಪ್ರ್ರದಾಯಿಕ ಆದರ್ಶವಾದ ‘ಕುಟುಂಬ ನಿಶ್ಚಯಿಸುವ ಮದುವೆ’ಯಾಗಿ, ಕಟ್ಟಿಕೊಂಡ ಹೆಂಡತಿಗೆ ಇದು ಇಷ್ಟವಿಲ್ಲದ ಮದುವೆ ಎಂದು ತಿಳಿದು, ವಿಷಮ ಸಂಬಂಧದ ಗೋಜಲಿನಿಂದ ನಾಜೂಕಾಗಿ ಹೆಣ್ಣನ್ನು ಬಿಡಿಸುವ ತೊಳಲಾಟದಲ್ಲಿ ಸಂಬಂಧಗಳ ಪದರುಗಳನ್ನು ಕಲಿಯುವ ಸೂಕ್ಷ್ಮ ಸಂವೇದನೆಯ ಯುವಕನ ಪಾತ್ರದಲ್ಲಿ ಅಪ್ಪು ನಮ್ಮ ಭಾವನೆಯ ಎಳೆಗಳ ಜೊತೆ ಹೆಣೆದುಕೊಳ್ಳತೊಡಗಿದ. ಜಾಣನೂ, ಸ್ಥಿತಿವಂತನೂ ಆದ ಯುವಕನು, ರೂಢಿಗತ ಯಶಸ್ಸಿನ ಬದುಕಿನ ದಾರಿಗಳಾವು ರುಚಿಸದೇ, ಕಾಣದ ಗುರಿ ಬೆಂಬತ್ತುವ ಅಲೆಮಾರಿತನದಲ್ಲಿ, ಕೊನೆಗೂ ತಾನು ಹುಡುಕುತ್ತಿರುವುದು ಪ್ರೀತಿಯ ಆಳ ತೋರುವ ಪ್ರಿಯಳ ಸಂಬಂಧವೆಂದು ಅರಿಯುವ ‘ಪರಮಾತ್ಮದ ಪಾತ್ರವಂತೂ ನನ್ನ ಎದೆಗೆ ನಾಟಿತು. ಬದುಕಿಗೆ ಆಧಾರ ಕೊಡುವ ಯಾವ ದುಡಿಮೆಯೂ ಇರದೆ, ಜಿಗುಟು ಜಾಣತನದಲ್ಲಿ ಬದುಕಿನಲ್ಲಿ ಎದುರಾದ ಕರಾಳತೆಗಳನ್ನು ನಿತ್ಯ ಸಹಜ ಲವಲವಿಕೆಯಲ್ಲಿ ಎದುರಿಸಿ ಮಣಿಸುವ ತಳವರ್ಗದ ಯುವಕನ ’ಜಾಕಿ’ ಪಾತ್ರದೊಂದಿಗೆ ನನ್ನಲ್ಲಿ ಅಪ್ಪುವಿನ ಕುರಿತ ಅಭಿಮಾನ ಎರಕ ಹೊಯ್ದುಬಿಟ್ಟಿತ್ತು. ಚುರುಕಾದ, ಮುದ ನೀಡುವ ವ್ಯಕ್ತಿತ್ವದ ಯುವಕ, ಆಯಕಟ್ಟಿನ ಜಾಗದಲ್ಲಿ ಕೂತಾಗ, ಯಾವ ಕೇಡಿಗೂ ಹೇಸದ ಭ್ರಷ್ಟ ಸಮಾಜವು ಎದುರಿಗೆ ತೆರೆದಾಗ, ಅದನ್ನು ಎದುರಿಸುವ ಧೀಮಂತಿಕೆ ಪಡೆಯುತ್ತಾ ನಾಯಕನಾಗುವ, ಗಟ್ಟಿ ಚಿತ್ರಕತೆ-ಪ್ರತಿಭಾವಂತ ನಿರ್ದೇಶನವಿರುವ ’ಪೃಥ್ವಿ ಮತ್ತು ’ಮೈತ್ರಿ ಸಿನೆಮಾಗಳಲ್ಲಿನ ಅಪ್ಪುವಿನ ಪಾತ್ರವನ್ನು ಯಾರೂ ಅಭಿಮಾನಿಯಾಗದೇ ಮೆಚ್ಚಬಹುದಾಗಿದ್ದವು. ಹೀಗೆ, ನಮ್ಮ ಮನೆಯ ಮುದ್ದಿನ ಬಾಲಕ ಅಪ್ಪು ಯುವಕನಾಗಿ ಬೆಳೆದಿರುವಂತೆ ಮನಸ್ಸು ತಟ್ಟತೊಡಗಿದವು. ಒಮ್ಮೆಲೇ ಆತನಲ್ಲಿ ತುಂಟಾಟ, ಹುಡುಗಾಟ, ಸಂಸಾರದ ಗೋಜಲು, ಮನುಷ್ಯ ಸಂಬಂಧಗಳ ತುಡಿತಗಳಲ್ಲಿ ಸಿಲುಕಿರುವ ನಮ್ಮ ಮನೆಗಳ ಯುವಕನನ್ನು ನಾವು ಕಾಣತೊಡಗಿದೆವು. ’ಅಯ್ಯೋ! ಇಷ್ಟು ದಿನ ಎಲ್ಲೋಗಿದ್ದೆ!’ ಎಂದು ಕೇಳುವಂತೆ ಮಾಡುವ ಭಾವನೆಗಳನ್ನು ನಮ್ಮಲ್ಲಿ ಅಪ್ಪು ಚೋದಿಸತೊಡಗಿದ. ಹದಿನಾರು ಹಲ್ಲು ಕಾಣುವಂಥ ಆಕರ್ಷಕ ನಗುವಿನ ಮೂಲಕ ಬಾಲಕ ಅಪ್ಪು ನಮ್ಮ ಮನೆಯಲ್ಲೇ ಇದ್ದ, ನಾವು ಗಮನಿಸಿರಲಿಲ್ಲ ಎನಿಸುವಂತೆ ಮಾಡತೊಡಗಿದ.

ಕಿರುತೆರೆಯ ರಿಯಾಲಿಟಿ ಷೋಗಳಲ್ಲಿ, ಯಶಸ್ವಿ ನಾಯಕನ ಗತ್ತು ಗಾಂಭೀರ್ಯವಿಲ್ಲದೆ, ಎದುಗಿರುವ ಸಾಮಾನ್ಯ ಜನರ ಜೊತೆ ಆತ ಅಗಾಧವಾದ ಕುತೂಹಲ, ತುಂಟತನ ಮತ್ತು ಬಿಚ್ಚು ಹೃದಯದಿಂದ ಮಾತನಾಡುವ ಪರಿ ಕಂಡಾಗ, ಅದು ರಂಗಿನ ಲೋಕದ ಕಪಟ ಅನಿಸದಂತಹ ಆಕೃತಿಯಾಗಿ ಆತ ನಮ್ಮಲ್ಲಿ ಬೆಳೆಯತೊಡಗಿದ. ’ಅದೆಲ್ಲಾ ಹಣ ಗಳಿಸುವ ಜಾಹಿರಾತು ತೋರಿಕೆ’ ಎಂದು ಕಟುವಾಡಿದರೆ, ’ನಾವೇ ಹೊಟ್ಟೆಪಾಡಿಗೆ ಲೋಕಜೀತ ಮಾಡೋರು! ಈ ನಮ್ಮ ಹುಡ್ಗನ ಬಗ್ಗೆ ಯಾಕೆ ಕಟುವಾಡಬೇಕು?’ ಎಂದು ಹೊಟ್ಟೆಗೆ ಹಾಕಿಕೊಳ್ಳುವಷ್ಟು ಭಾವನಾತ್ಮಕ ಸಖ್ಯವನ್ನು, ನಾವು ಎಂದೂ ಕಾಣದ, ಮೈಮುಟ್ಟದ, ತೆರೆಯ ಬಿಂಬ ಕಟ್ಟಿಕೊಡತೊಡಗಿತು. ಜಾಗತಿಕ ವ್ಯಾಪಾರ ಜಾಲದ ಮಾಯಾ ಬಲೆಯಲ್ಲಿ ಬಿದ್ದು, ಅತ್ತ ಸುಖದ ವಾಂಛೆ ಇತ್ತ ಬುಡ ಭದ್ರವಿಲ್ಲದ ಬದುಕಿನ ಬೆಂಕಿ-ನೀರಿನಾಟದಲ್ಲಿರುವ ನಮಗೆ, ಅಪ್ಪುವಿನ ತೆರೆಯ ಬಿಂಬವು ಆಪ್ತವಾಗತೊಡಗಿತು.

ಆತ ಮಾಡಿದ ಸಮಾಜಸೇವೆ, ತೋರಿದ ಸಾಮಾಜಿಕ ಬದ್ಧತೆಗಳ ಬಗ್ಗೆ ಏನೂ ಗೊತ್ತಿರದೆಯೂ, ನಾವು ತೆರೆಯ ಮೇಲಿನ ಬಿಂಬದ ಜೊತೆ ಭಾವನಾತ್ಮಕ ಗುರುತು ಹಚ್ಚಿಕೊಳ್ಳೋದು, ನಮ್ಮ ಮನದ ಉಗ್ರಾಣದಲ್ಲಿ ಹುದುಗಿರುವ ಅಭಿಲಾಷೆಗಳ ತುಡಿತವಾಗಿದ್ದರೆ, ಅಪ್ಪು ನಮ್ಮನ್ನು ಹಾಗೇ ತಟ್ಟಿ ನಿರ್ಗಮಿಸಿರುವನು. ಅವನನ್ನು ಕಳೆದುಕೊಂಡು ನಿಜಕ್ಕೂ ದುಃಖವಾಗಿದೆ ಎಂದರೆ, ಆ ಮಟ್ಟಿಗೆ ಅಪ್ಪು ನಮ್ಮ ಸ್ಥಿತಿಗತಿಯನ್ನು ತಟ್ಟಿ ತೋರಿ ಹೋಗಿರುವನು.
ಪುನೀತ್ ರಾಜಕುಮಾರ್ ‘ನಮ್ಮ ಅಪ್ಪು’ ಆದದ್ದು ಹೀಗೆ. ಇದೂ ವಾಸ್ತವ.

  • ಕೆ.ಫಣಿರಾಜ್

(ಇಂಜಿನಿಯರಿಂಗ್ ಮೇಷ್ಟ್ರು, ಚಳುವಳಿಗಳ ಸಖ, ಸಿನೆಮಾ ಅಧ್ಯಯನ-ಮಾತುಕತೆ ಇಷ್ಟದ ಕೆಲಸ.)


ಇದನ್ನೂ ಓದಿ: ಅಪ್ಪು ನುಡಿನಮನ; ಮಿಂಚಿ ಮರೆಯಾದ ಜನಮನದ ಹುಡುಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...