Homeಅಂಕಣಗಳುಕಳೆದುಹೋದ ದಿನಗಳು800 ಎಕರೆ ತೋಟದ ಮಾಲೀಕ ಗಣಪಯ್ಯನವರು ನೌಕರರೊಟ್ಟಿಗೆ, ದಲಿತರೊಟ್ಟಿಗೆ ಕೂತು ಉಣ್ಣುತ್ತಿದ್ದರು...

800 ಎಕರೆ ತೋಟದ ಮಾಲೀಕ ಗಣಪಯ್ಯನವರು ನೌಕರರೊಟ್ಟಿಗೆ, ದಲಿತರೊಟ್ಟಿಗೆ ಕೂತು ಉಣ್ಣುತ್ತಿದ್ದರು…

- Advertisement -
- Advertisement -

ಕಳೆದುಹೋದ ದಿನಗಳು – 10

1971ರ ಮಹಾಚುನಾವಣೆ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿತ್ತು. ಸಮಾಜವಾದಿ ಸಮಾಜದ ಕನಸನ್ನು ಮುಂದಿಟ್ಟು ಇಂದಿರಾ ಗಾಂಧಿ ಚುನಾವಣಾ ಆಖಾಡಕ್ಕಿಳಿದಿದ್ದರು. “ಗರೀಬಿ ಹಠಾವೋ” ಎಲ್ಲ ಬಡವರನ್ನೂ ಮತ್ತು “ಸಮಾಜ್ ಕೋ ಬದಲ್ ಡಾಲೋ” ಘೋಷಣೆ ಯುವಕರನ್ನು ಸಾರಾ ಸಗಟಾಗಿ ಆಕರ್ಷಿಸಿತ್ತು.

1969ರಲ್ಲಿ ನಡೆದ ಬ್ಯಾಂಕ್ ರಾಷ್ಟ್ರೀಕರಣವನ್ನು ಎಡಪಕ್ಷಗಳು ಹೊರತು ಪಡಿಸಿ ಉಳಿದ ಹೆಚ್ಚಿನ ಎಲ್ಲಾ  ರಾಜಕೀಯ ಪಕ್ಷಗಳು ವಿರೋಧಿಸಿದ್ದವು. ಕಾಂಗ್ರೆಸ್‌ನೊಳಗೇ ವಿರೋಧವಿತ್ತು. ಮುಖ್ಯವಾಗಿ ವಿತ್ತ ಮಂತ್ರಿ ಮೊರಾರ್ಜಿಯವರೇ ವಿರೋಧವಿದ್ದರು. ಆದರೆ ಶ್ರೀಸಾಮಾನ್ಯರಿಗೆ, ಸಣ್ಣ ಮತ್ತು ಮಧ್ಯಮ ರೈತರಿಗೆ ಕೇವಲ ಎರಡೇ ವರ್ಷದಲ್ಲಿ ಹಿಂದೆಲ್ಲ ಕೆಲವರು ಪ್ರಭಾವಿಗಳಿಗೆ ಮಾತ್ರ ಇದ್ದ ಬ್ಯಾಂಕ್ಯುಗಳು ತಮಗೂ ಬಾಗಿಲು ತೆರೆದುಕೊಂಡ ಅನುಭವ ಆಗತೊಡಗಿತ್ತು.

ಭಾರತದ ಚುನಾವಣೆಯಲ್ಲಿ ಪ್ರಥಮ ಬಾರಿಗೆ (?) ಇಂದಿರಾ ಗಾಂಧಿ ಹೆಲಿಕಾಪ್ಟರ್‌ನಲ್ಲಿ ಸುತ್ತುತ್ತಾ ಬಿರುಸಿನ ಪ್ರಚಾರದಲ್ಲಿದ್ದರು. ಹೆಲಿಕಾಪ್ಟರ್ ಕೂಡಾ ಒಂದು ದೊಡ್ಡ ಆಕರ್ಷಣೆಯಾಗಿ ಇಂದಿರಾ ಸಭೆಗಳಿಗೆ ಲಕ್ಷಾಂತರ ಜನ ಸೇರುತ್ತಿದ್ದರು.

ಚುನಾವಣೆ ಮುಗಿದಾಗ ಎಡ ಮತ್ತ ದ್ರಾವಿಡ ಪಕ್ಷಗಳು ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ನೆಲಕಚ್ಚಿದ್ದವು.  ಇಂದಿರಾ ಕಾಂಗ್ರೆಸ್ ಒಂದೇ 352 ಸ್ಥಾನ ಗೆದ್ದಿತ್ತು. ಹಿರಿಯರ ಸಂಸ್ಥಾ ಕಾಂಗ್ರೆಸ್‌ಗೆ ಕೇವಲ 16 ಸ್ಥಾನವೂ, ಹಿಂದಿನ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಿದ್ದ ಸ್ವತಂತ್ರ ಪಾರ್ಟಿಗೆ 8 ಸ್ಥಾನವೂ ಸಿಕ್ಕಿತ್ತು.

ಇಂದಿರಾ ಗಾಂಧಿ, 1971 ರ ಚುನಾವಣಾ ಪ್ರಚಾರದಲ್ಲಿ

ಗಾಳಿಬೀಸಿದತ್ತ ತೂರಿಕೊಳ್ಳುವವರು ಆಗಲೂ ಇದ್ದರು. ಬಹಳ ಬೇಗ ಸ್ವತಂತ್ರ ಪಾರ್ಟಿಯಿಂದಲೂ ಇಂದಿರಾ ಕಾಂಗ್ರೆಸ್‌ನತ್ತ ವಲಸೆ ಪ್ರಾರಂಭವಾಯಿತು.

ಸಿ.ಎಂ. ಪೂಣಚ್ಚ ಹೆಚ್ಚೂ ಕಡಿಮೆ ರಾಜಕೀಯದಿಂದ ದೂರವಾದರೆ, ಗಣಪಯ್ಯ ಮಾತ್ರ ವಿಚಲಿತರಾಗಲಿಲ್ಲ.

ಅವರು, ಇಂದಿರಾ ಸರ್ಕಾರದ ವಿರುದ್ಧದ ಹೋರಾಟವನ್ನು ಮುಂದುವರೆಸಿದರು.

ನಂತರದ ದಿನಗಳಲ್ಲಿ ಗಣಪಯ್ಯ ಹೆಚ್ಚು ರೈತ ಸಂಘಟನೆ, ಕೃಷಿಸಂಬಂಧಿ ಕೆಲಸಗಳಲ್ಲಿ ತೊಡಗಿಕೊಂಡರು.

ಗಣಪಯ್ಯನವರ ಇನ್ನೊಂದು ಕೊಡುಗೆಯೆಂದರೆ ಈ ಪ್ರದೇಶದ ಕಾಫಿ ಮತ್ತು ಏಲಕ್ಕಿ ಕೃಷಿಯ ವಿಸ್ತರಣೆ ಮತ್ತು ಅಭಿವೃದ್ಧಿಯಲ್ಲಿ ಮಹತ್ತರವಾದ ಕೆಲಸ ಮಾಡಿದ್ದು. ಹಲವಾರು ಬಾರಿ ರೈತರನ್ನು ಸಂಘಟಿಸಿ ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರಕ್ಕೆ ಬೇರೆ ಬೇರೆ ಕಡೆಯ ಏಲಕ್ಕಿ ಮತ್ತು ಇತರ ಸಂಶೋಧನಾ ಕೇಂದ್ರಗಳಿಗೆ ಕರೆದೊಯ್ಯತ್ತಿದ್ದರು. ಸಕಲೇಶಪುರ ನಗರದಲ್ಲಿ ಮತ್ತು ಹಲವಾರು ಸಲ ಹಾರ್ಲೆ ಎಸ್ಟೇಟಿನಲ್ಲಿಯೇ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಭೆಗಳು ನಡೆಯುತ್ತಿದ್ದವು. ಇವೆಲ್ಲದರ ಖರ್ಚುವೆಚ್ಚಗಳೂ ಅವರದ್ದೇ. ಬೇರೆಯವರಲ್ಲಿ ಹಣ ಪಡೆದುಕೊಳ್ಳುವುದು ಅವರ ಸ್ವಭಾವದಲ್ಲಿಯೇ ಇರಲಿಲ್ಲ.  ಅವರ ಎಲ್ಲಾ ಸಾಮಾಜಿಕ ಕೆಲಸ ಕಾರ್ಯಗಳಿಗೂ ಬಹುಪಾಲು ಇವರ ಸ್ವಂತ ಹಣವನ್ನೇ ಬಳಸುತ್ತಿದ್ದರು. ಈ ವಿಚಾರದಲ್ಲಿ ಪತ್ನಿ ದೇವಮ್ಮನವರ ತಕರಾರು, ಎಚ್ಚರಿಕೆಯ ನುಡಿಗಳು ಆಗಾಗ ಇರುತ್ತಿದ್ದರೂ ಗಣಪಯ್ಯ ಅದನ್ನು ಗಂಭೀರವಾಗಿ ಪರಿಗಣಿಸಿದಂತೆ ತೋರುತ್ತಿರಲಿಲ್ಲ!

ಇದರೊಂದಿಗೆ ಇನ್ನೊಂದು ಸಂಗತಿಯೆಂದರೆ ಹಾರ್ಲೆಯ ಸುತ್ತಲಿನ ಹಲವು ಸಣ್ಣ ಕಾಫಿ ಕೃಷಿಕರ, ಜಮೀನನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಅದನ್ನು ಕಾಫಿ ಕೃಷಿಯಲ್ಲಿ ಚೆನ್ನಾಗಿ ಅಭಿವೃದ್ಧಿ ಮಾಡಿ ಮತ್ತೆ ಅವರಿಗೆ ಬಿಟ್ಟುಕೊಟ್ಟದ್ದು.

ಪ್ರಥಮ ಬಾರಿಗೆ ಗಣಪಯ್ಯ ಪಕ್ಕದ ಗಾಣದ ಹೊಳೆ ಸುಬ್ಬೇಗೌಡರ ಜಮೀನನ್ನು ಈ ರೀತಿ ಮಾಡಲು ಹೊರಟಾಗ ಬೇರೆಯವರು ಟೀಕೆ ಮಾಡಿದ್ದೇ ಹೆಚ್ಚು. ಸುಬ್ಬೇಗೌಡರಲ್ಲಿಯೇ “ಇನ್ನು ಬಿಡಿ ನಿಮ್ ತೋಟ ಗಣಪಯ್ಯನ ಪಾಲಾಯ್ತು” ಎಂದು ಧೈರ್ಯ ಕೆಡಿಸುವವರೂ ಇದ್ದರು. ಆದರೆ ಸುಬ್ಬೇಗೌಡರಾಗಲೀ ಗಣಪಯ್ಯನವರಾಗಲೀ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸ ಮುಂದುವರೆಸಿದರು.

ಮುಂದಿನ ದಿನಗಳಲ್ಲಿ ಈ ರೀತಿ ಟೀಕೆ ಮಾಡಿದ ಕೆಲವರೇ ಗಣಪಯ್ಯನವರಲ್ಲಿ ತಮ್ಮ ಜಮೀನನನ್ನೂ “ಹಾಗೇ ಕೃಷಿ ಮಾಡಿಕೊಡಿ” ಎಂದು ಕೇಳಿಕೊಂಡು ಬಂದರು!

ಈ ರೀತಿ ನೇರವಾಗಿ ತೋಟವನ್ನು ಅಭಿವೃದ್ಧಿ ಮಾಡಿದ್ದು ಮಾತ್ರವಲ್ಲ ಹಲವಾರು ಜನರಿಗೆ, ಹಲವು ತರಹದ ಸಹಾಯ ಮಾಡುತ್ತಿದ್ದರು. ಗೊಬ್ಬರ ತರಿಸಿಕೊಡುವುದು, ಇವರ ತೋಟದ ಕಾಫಿ ಲೋಡು ಮಂಗಳೂರಿಗೆ ಹೋಗಿ ವಾಪಸ್ ಬರುವಾಗ ಬಾಸೆಲ್ ಮಿಷನ್ ಹಂಚುಗಳನ್ನು ತರಿಸಿ ತೋಟದಲ್ಲಿಟ್ಟು ಲಾಭ ನಷ್ಟವಿಲ್ಲದೆ ಸುತ್ತಲಿನ ಜನರಿಗೆ ಮನೆಕಟ್ಟಿಕೊಳ್ಳುವ ಸಮಯದಲ್ಲಿ ಕೊಡುವುದು ಇತ್ಯಾದಿ ನಡೆದೇ ಇತ್ತು. ಈ ರೀತಿ ವಸ್ತುಗಳನ್ನು ಪಡೆದವರು ಎಷ್ಟೋ ಸಲ ಹಣ ಕೊಡದೆ ಇದ್ದುದೂ ಇದೆ. ರೀತಿ ಸಹಾಯ ಪಡೆದವರು ಮತ್ತು ಅವರ ಕುಟುಂಬದವರು ಇಂದಿಗೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಈ ಎಲ್ಲ ಕೆಲಸಗಳಿಂದ ಒಟ್ಟಾರೆಯಾಗಿ ಇಡೀ ಪ್ರದೇಶವೇ ಕೃಷಿ ಲವಲವಿಕೆ ಕಂಡಿತು. ಆಗ ಕೃಷಿ ಅಭಿವುದ್ಧಿಯನ್ನು ಕಂಡ ನೂರಾರು ಕುಂಟುಂಬಗಳು ಇಂದು ಒಳ್ಳೆಯ ಬೆಳೆಗಾರರಾಗಿ ಅವರ ಮಕ್ಕಳು ವಿದ್ಯಾವಂತರಾಗಿ  ಉನ್ನತ ಸ್ಥಾನದಲ್ಲಿದ್ದಾರೆ.

ಹಾರ್ಲೆಯ ರಾತ್ರಿ ಶಾಲೆಯ ಪ್ರಥಮ ಶಿಕ್ಷಕ ಪುರುಷೋತ್ತಮ ದಂಪತಿ ಜೊತೆ ನಾನು

ಆಗ ಬೆಳ್ಳೇಕೆರೆಯಲ್ಲಿ ಒಂದು ಕೃಷಿಕರ ಸಹಕಾರಿ ಸಂಘವಿತ್ತು. ಅದರ ಕಾರ್ಯದರ್ಶಿಯಾಗಿ ಊರ ಶಾನುಭೋಗರೂ ಆದ ಅನಂತ ಸುಬ್ಬರಾಯರು ಕೆಲಸ ಮಾಡುತ್ತಿದ್ದರು. ಆಗಿನ ಕಾಲದಲ್ಲಿ ಸಹಕಾರಿ ಸಂಘದಲ್ಲಿ ಹೆಚ್ಚಿನ ವ್ಯವಹಾರವೇನೂ ಇಲ್ಲ. ಸಣ್ಣ ಕಾಫಿ ಬೆಳೆಗಾರರಲ್ಲಿ ರಸಗೊಬ್ಬರದ ಬಳಕೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ದೊಡ್ಡ ಬೆಳೆಗಾರರು ಕಾಫೀ ಕ್ಯೂರಿಂಗ್ ಕಂಪೆನಿಗಳಿಂದಲೋ, ಇಲ್ಲವೇ ದೊಡ್ಡ ವರ್ತಕರಿಂದಲೋ  ಪಡೆಯುತ್ತಿದ್ದರು. ಅವರಲ್ಲಿ ಸಾಲವೂ ಸಿಗುತ್ತಿತ್ತು. ಅನಂತ ಸುಬ್ಬರಾಯರು ಗಣಪಯ್ಯನವರಲ್ಲಿ ನೀವು ನಮ್ಮಲ್ಲಿ ಗೊಬ್ಬರ ಕೊಂಡರೆ ಸಂಘಕ್ಕೆ ಸಹಾಯ ವಾಗುತ್ತದೆ ಎಂದರಂತೆ. ನಂತರ ಗಣಪಯ್ಯ ಬೇರೆ ಕಡೆ ರಸಗೊಬ್ಬರ ಕೊಳ್ಳುವುದು ನಿಲ್ಲಿಸಿ, ಹಾರ್ಲೆ ತೋಟಗಳಿಗೆ ಬೇಕಾದ ಎಲ್ಲಾ ರಸಗೊಬ್ಬರವನ್ನೂ ಬೆಳ್ಳೇಕೆರೆಯ ಸಹಕಾರಿ ಸಂಘದಿಂದ ಕೊಂಡರು. ಅಲ್ಲಿ ಸಾಲ ದೊರೆಯುತ್ತಿರಲಿಲ್ಲ. ಆದರೆ ಸ್ಥಳೀಯ ಸಹಕಾರಿ ಸಂಸ್ಥೆಗೆ ಸಹಾಯ ಮಾಡುವುದು ಅವರ ಉದ್ದೇಶವಾಗಿತ್ತು.

ಆ ಕಾಲದಲ್ಲೇ ಗಣಪಯ್ಯ ಕೂಲಿ ಕಾರ್ಮಿಕರಿಗಾಗಿ ಒಂದು ರಾತ್ರಿ ಶಾಲೆಯನ್ನು ತೆರೆದಿದ್ದರು. ಸಾಕಮ್ಮನವರ ತೋಟದಲ್ಲಿ ಇದ್ದಾಗ  ಗಣಪಯ್ಯನ ಸಹೋದ್ಯೋಗಿಯಾಗಿ ಮುತ್ತಣ್ಣ ಎಂಬವರಿದ್ದರು. ಅವರಾಗ ಸಾಕಮ್ಮ ತೋಟದ ಡಿಸ್ಪೆಂಸರಿಯಲ್ಲಿ ಕಂಪೌಂಡರ್ ಆಗಿದ್ದರಂತೆ. ಅವರ ಮಗ ಪುರುಷೋತ್ತಮ ಅವರು ಹಾರ್ಲೆಯಲ್ಲಿ ನೌಕರರಾಗಿದ್ದರು. ಅವರು ರಾತ್ರಿ ಶಾಲೆಯ ಶಿಕ್ಷಕರು. ಆದರೆ ಆ ಕಾಲದಲ್ಲಿ ವಿದ್ಯೆ ಹೇಳಿಕೊಡುವವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರು. ಇನ್ನು ಕೂಲಿ ಕಾರ್ಮಿಕರು ಅಕ್ಷರ ಕಲಿಯುವುದಿರಲಿ ಹಾಗೊಂದು ಕನಸೂ ಕಂಡವರಲ್ಲ. ಬಹಳ ಕಷ್ಟದ ಕಾಲವದು. ಹೊಟ್ಟೆಯ ಸಮಸ್ಯೆಯೇ ದೊಡ್ಡದು. ಜೊತೆಗೆ ಕುಡಿತ. ಸಂಜೆವರೆಗೆ ದುಡಿದು, ಹೇಗೋ ಒತ್ತಾಯಕ್ಕೆ ಕೆಲವರು ಶಾಲೆಗೆ ಬಂದು ಕೂತು, ಕುಡಿದಿದ್ದರಿಂದ ಅಲ್ಲೇ ತೂಕಡಿಸಿ ಅಡ್ಡ ಮಲಗುವ ಸ್ಥಿತಿಯಲ್ಲಿರುತ್ತಿದ್ದರು! ಹೇಗೋ ಸ್ವಲ್ಪ ಸಮಯ ನಡೆದು ಆ ಶಾಲೆ ನಿಂತುಹೋಗಿತ್ತು.

ಹಾರ್ಲೆ ಬಂಗಲೆಗೆ ಬಂದು ಹೋಗುವವರು ಹೆಚ್ಚಾದಂತೆಲ್ಲ ಮಧ್ಯಾಹ್ನದ ಊಟಕ್ಕೆ ಹಲವರಿರುತ್ತಿದ್ದರು. ಗಣಪಯ್ಯನವರು, ಮತ್ತು ಅವರ ಮನೆಯವರೇ ಕುಳಿತು ಉಂಡ ದಿನ ಇಲ್ಲವೇ ಇಲ್ಲವೇನೋ. ಹಾಗೆ ಬರುವವರಲ್ಲಿ ಹಲವರಿಗೆ ಕೆಳಗೆ ಕುಳಿತು ಊಟ ಮಾಡಲು ಆಗುತ್ತಿರಲಿಲ್ಲ. ಆದ್ದರಿಂದ ಒಂದು ಊಟದ ಮೇಜನ್ನು ಮಾಡಿಸಿದರು. ಅದು ಹದಿಮೂರು ಜನರು ಒಮ್ಮೆಗೆ ಊಟಕ್ಕೆ ಕೂರಬಲ್ಲ ದೊಡ್ಡ ಮೇಜು.

ಎರಡೂ ಬದಿಯಲ್ಲಿ ಆರಾರು ಜನರು, ಅಧ್ಯಕ್ಷ ಸ್ಥಾನದಲ್ಲಿ ಗಣಪಯ್ಯ.

ಮನೆಗೆ ಯಾರೇ ಬರಲಿ. ಜೊತೆಯಲ್ಲಿಯೇ ಊಟ. ಬಂದವರು ವಾಹನಗಳಲ್ಲಿ ಬಂದಿದ್ದರೆ ಅವರ ಡ್ರೈವರ್‌ಗಳನ್ನು ತಾವೇ ಹೋಗಿ ಕರೆಯುವರು. ಅವರಿಗೆ ಜೊತೆಯಲ್ಲೇ ಊಟ, ಅವರಾಗಲಿ ಅವರ ಮಾಲಿಕರಾಗಲಿ ಹಿಂಜರಿದರೆ ಇದು ನನ್ನ ಕ್ರಮ ಇಲ್ಲಿ ಹಾಗೇ ಎನ್ನುವರು. ಎಲ್ಲರನ್ನೂ ಕೂರಿಸಿ ಒಂದು ಸುತ್ತು ತಾವೇ ಎಲ್ಲರಿಗೂ ಬಡಿಸಿ, ನಂತರ ತಾವು ಊಟಕ್ಕೆ ಕೂರುವುದು ಗಣಪಯ್ಯನವರ ಪದ್ಧತಿ. ಇದನ್ನವರು ಕೊನೆಯವರೆಗೂ ಪಾಲಿಸಿದರು. ಇಂದಿಗೂ, ತಮ್ಮ ನೌಕರರ ಜೊತೆ ಊಟ ಮಾಡುವುದಿರಲಿ ತಮ್ಮೆದರು ಕೂರಲೂ ಬಿಡದ ಮಾಲಿಕರು ಇದ್ದಾರೆ.

ಯಾವುದೇ ವಿಶೇಷ ಸಮಾರಂಭಗಳಲ್ಲಿ ಒಟ್ಟಿಗೆ ಊಟ ಮಾಡುವಾಗ ಕಾರ್ಮಿಕರು ಮಾಲಿಕರು ಒಟ್ಟಿಗೆ ಕುಳಿತು ಊಟಮಾಡುವುದು ಹಾರ್ಲೆಯ ಪರಂಪರೆಯೇ ಆಯಿತು. ದಲಿತರ ಜೊತೆ ಊಟಮಾಡುವುದು ಸಹ. ಅವರ ಮನೆಗೆ ಹೋಗುವುದನ್ನು ಗಣಪಯ್ಯ  ತಮ್ಮ ಜೀವನದಲ್ಲಿ ಸಹಜವಾಗಿ ಅಳವಡಿಸಿಕೊಂಡರೇ ವಿನಃ ಅದು ಅವರು ರಾಜಕಾರಣದ ಗಿಮಿಕ್ ಆಗಲೀ, ಪ್ರಚಾರ ತಂತ್ರವಾಗಲೀ ಆಗಿರಲಿಲ್ಲ.

ಬೆಳ್ಳೇಕೆರೆಯ ಕ್ಯಾಮನಹಳ್ಳಿ ಕೃಷಿಕರ ಸೇವಾಸಹಕಾರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಅನಂತ ಸುಬ್ಬರಾಯರು

ಗಣಪಯ್ಯನವರ “ಬಂಗಲೆ”ಯಲ್ಲಿ ಹೆಚ್ಚಿಗೆ ಕೊಠಡಿಗಳೇ ಇರಲಿಲ್ಲ. ಬಂಗಲೆಯ ಎದುರಿಗೆ ಒಂದು ಅಗಲ ಕಿರಿದಾದ ಜಗುಲಿ ಅದರ ಒಂದು ತುದಿಗೆ ಗಣಪಯ್ಯನವರ ಆಫೀಸು, ಇನ್ನೊಂದು ತುದಿಗೆ ಎಸ್ಟೇಟ್ ಮ್ಯಾನೇಜರ್ ರವರ ಆಫೀಸು, ಈ ಎರಡೂ ಆಫೀಸುಗಳೂ ಎಷ್ಟು ದೊಡ್ಡವೆಂದರೆ ಹೆಚ್ಚೆಂದರೆ ಮೂರು ಜನರು ಕೂರಬಹುದಿತ್ತು ! ಜಗುಲಿಯಿಂದ ಒಳಗೆ ಒಂದು ಹಾಲ್  ಅದರಲ್ಲಿ ಎಲ್ಲ ಬ್ರಿಟಿಷ್ ಬಂಗಲೆಗಳಂತೆ ಮಳೆಗಾಲ ಬೆಂಕಿ ಹಾಕಲು ಒಂದು ಚಿಮಣಿಯಿತ್ತು. ಬಂದ ಅತಿಥಿಗಳೆಲ್ಲರ ಭೇಟಿ ಅಲ್ಲೇ. ಅದರ ಆಚೀಚೆ ಎರಡು ವಾಸದ ಕೊಠಡಿಗಳು, ಮ್ಯಾನೇಜರ್ ಆಫೀಸಿನ ಪಕ್ಕದಲ್ಲಿ ಒಂದು ಸಾಧಾರಣ ಗಾತ್ರದ ಹಾಲ್ ಅದರ ಅರ್ಧಬಾಗ ಎಸ್ಟೇಟ್ ನ ಡಿಸ್ಪೆನ್ಸರಿ ಮತ್ತು ಉಳಿದ ಅರ್ಧ ಭಾಗ ಮನೆಯ ಉಗ್ರಾಣ, ಅದರಿಂದಾಚೆ ಅಡುಗೆ ಕೋಣೆ. ಇಡೀ ಮನೆ ಇಷ್ಟೇ.

ಡಿಸ್ಪೆನ್ಸರಿ ಕೊಠಡಿಯೇ ಊಟದ ಕೊಠಡಿಯೂ ಆಗಿ  ಪರಿವರ್ತನೆ ಆಗಿ ದೊಡ್ಡ ಮೇಜು ಅಲ್ಲೇ ಸ್ಥಾಪನೆಯಾಗಿತ್ತು.

ಕಾರ್ಮಿಕರ ಆರೋಗ್ಯ ತಪಾಸಣೆಗೆ ವಾರಕ್ಕೊಮ್ಮೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಿಂದ ವೈದ್ಯರು ಬರುತ್ತಿದ್ದರು. ಕಾರ್ಮಿಕರ ತಪಾಸಣೆ, ಚಿಕಿತ್ಸೆಯೂ ಅದೇ ಕೊಠಡಿಯಲ್ಲಿ. ಕಾರ್ಮಿಕರ ಮಕ್ಕಳಿಗೆ ಕೊಡಲೆಂದು ತರಿಸುತ್ತಿದ್ದ ಬೆಲ್ಲ, ಶೇಂಗಾ ಬೀಜವೂ ಅಲ್ಲೇ, ಮಾಲಿಕರ ಊಟವೂ ಅಲ್ಲೇ. ಇದೆಲ್ಲ ನಡೆಯುತ್ತಿದ್ದ ಕಾಲದಲ್ಲಿಯೇ ಗಣಪಯ್ಯ ಸ್ವತಃ ಎಂಟು ನೂರು ಎಕರೆಗೂ ಹೆಚ್ಚು ತೋಟದ ಮಾಲಿಕರು!

ವೈದ್ಯರು ಹೇಳಿದಂತೆ ಬೇಕಾದ ಔಷಧಿಗಳನ್ನು ತರಿಸಿ ಅಲ್ಲೇ ಇಡಲಾಗುತ್ತಿತ್ತು. ಜೊತೆಗೆ ತುರ್ತು ಸಂದರ್ಭಕ್ಕೆಂದು ಕೆಲವು ಮಾತ್ರೆ ಔಷಧಿಗಳಿರುತ್ತಿದ್ದವು. ಕೆಲಸಗಾರರು ಔಷಧಿಗಳನ್ನು ಅಲ್ಲೇ ಬಂದು ಸೇವಿಸಬೇಕು. ಸರಿಯಾಗಿ ಸೇವಿಸುತ್ತಾನೆಂದು ನಂಬಿಕೆಯಿದ್ದವರಿಗೆ ಮಾತ್ರ ಮನೆಗೆ ಒಯ್ಯಲು ಕೊಡುವರು.

ವೈದ್ಯರು ಯಾರಿಗಾದರೂ ಇಂಜಕ್ಷನ್ ಕೊಟ್ಟು ಮುಂದುವರಿಸಲು ಹೇಳಿದರೆ ಮ್ಯಾನೇಜರ್ ವಾಸುದೇವ ರಾವ್  ಇಂಜಕ್ಷನ್ ಕೊಡುವರು. ಅವರೋ ಮೊದಲೇ ಉಗ್ರಮೂರ್ತಿಯೆಂದು ಹೆಸರಾದವರು. ರೋಗಿಗಳು ಅವರಲ್ಲಿಗೆ ಹೆದರಿ ಹೆದರಿಯೇ ಇಂಜಕ್ಷನ್ ಪಡೆಯಲು ಹೋಗುವರು. ಆಗ ಅವರು “ಸರಿ ನಿಂತ್ಕೋ ಅಲ್ಲಾಡಿದರೆ ಬಡುದು ಬಿಡ್ತೇನೆ ಎಂದು ಹೆದರಿಸಿಯೇ ಇಂಜಕ್ಷನ್ ಚುಚ್ಚುವರು!”.

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು- 2: ಕರ್ನಾಟಕದ ಪ್ರಥಮ ಮಹಿಳಾ ಉದ್ಯಮಿ ಸಾಕಮ್ಮ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...