ಕೊಡಗಿನ ಸೋಮವಾರ ಪೇಟೆ ತಾಲ್ಲೂಕು ಮುಖ್ಯವಾಗಿ ಅರೇಬಿಕಾ ತಳಿಯ ಕಾಫಿ ಬೆಳೆಗೆ ಬಹಳ ಒಳ್ಳೆಯ ಪ್ರದೇಶ. ಇಲ್ಲಿ ಅತ್ಯುತ್ತಮ ಕಾಫಿ ತೋಟಗಳಿವೆ. ಸಾಕಮ್ಮನವರ ಕಾಫಿ ಎಸ್ಟೇಟ್ ಆ ಕಾಲದಲ್ಲಿ ಕೊಡಗಿಗೇ ಅತಿ ದೊಡ್ಡ ಎಸ್ಟೇಟ್ ಆಗಿತ್ತು. ಅದರ ಒಂದು ವಿಭಾಗಕ್ಕೆ ಭೂತನಕಾಡು ಎಸ್ಟೇಟ್ ಎಂದು ಹೆಸರಿತ್ತು.

ಸಾಕಮ್ಮನವರ ತೋಟದ ನಂತರ, ವಿಸ್ತೀರ್ಣ ದಲ್ಲಿ ಎರಡನೆ ಸ್ಥಾನ ದೊಡ್ಡ ಕಾಫಿ ಬೆಳೆಗಾರ ಹಾಗೂ ಸಾಮಾಜಿಕ ಸೇವಕ ಮಂಜುನಾಥಯ್ಯನವರ ಗುಂಡುಕುಟ್ಟಿ ಕಾಫಿ ಎಸ್ಟೇಟ್ ಗೆ ಇತ್ತು. ಆ ಎಸ್ಟೇಟ್ ಕೂಡಾ ಕೊಡಗಿನ ಸೋಮವಾರ ಪೇಟೆ ತಾಲ್ಲೂಕಿನ ಮಾದಾಪುರದ ಬಳಿಯೇ ಇದೆ. ನಂತರ ಟಾಟಾರವರ ಕನ್ಸಾಲಿಡೇಟೆಡ್ ಕಾಫಿ, ಮುಂತಾದವೆಲ್ಲ ದೊಡ್ಡ ರೀತಿಯಲ್ಲಿ ಕೊಡಗಿಗೆ ಬಂದವು.

ಸಾಕಮ್ಮನವರು ಕೂಡಾ ಬಡತನದ ಹಿನ್ನೆಲೆಯಿಂದ ಬಂದವರು. ಮೂಲತಃ ತುಮಕೂರು ಜಿಲ್ಲೆಯ ಬಿದರೆ ಎಂಬ ಊರಿನವರು. ಅವರದ್ದು ಕೆಳಮದ್ಯಮ ವರ್ಗದ ನೇಕಾರರ ಕುಟುಂಬ. 1880 ರಲ್ಲಿ ಜನಿಸಿದ ಅವರು ಬೆಳೆದದ್ದು ಬೆಂಗಳೂರಿನಲ್ಲಿ. ಬಡತನವಿದ್ದರೂ ಅವರ ತಂದೆ ಅವರನ್ನು ಆಗಿನ ಮೆಟ್ರಿಕ್ಯುಲೇಷನ್ ವರೆಗೆ ಓದಿಸಿದ್ದರು. ಆ ಕಾಲದಲ್ಲಿ ಅವರ ಜನಾಂಗದಲ್ಲಿ ಕೆಲವು  ಹಬ್ಬಗಳ ಸಂದರ್ಭದಲ್ಲಿ ಹೆಣ್ಣುಮಕ್ಕಳು ತಮ್ಮ ಜಾತಿಯ ಬಂಧುಗಳ ಮನೆ‌ ಮನೆಗಳಲ್ಲಿ ಹೋಗಿ ದೇವರನಾಮಗಳನ್ನು ಹಾಡುವ ಸಂಪ್ರದಾಯವಿತ್ತಂತೆ. ಅಂಥ ಒಂದು ಸಂದರ್ಭದಲ್ಲಿ ಸಾಕಮ್ಮ ತಮ್ಮ ಗೆಳತಿರೊಂದಿಗೆ ಹಾಡಲು ಹೋಗಿದ್ದಾಗ ಅವರನ್ನು ಅಂದಿನ ಕೊಡಗಿನ ಅತಿದೊಡ್ಡ ಕಾಫಿ ಪ್ಲಾಂಟರ್ ಆಗಿದ್ದ ದೊಡ್ಡ ಮನೆ ಚಿಕ್ಕಬಸಪ್ಪನವರು ನೋಡಿದರಂತೆ. ಚಿಕ್ಕಬಸಪ್ಪನವರಿಗಾಗಲೇ ಎರಡು ಮದುವೆಯಾಗಿ ಮಕ್ಕಳಿರಲಿಲ್ಲ. ಮೂರನೆಯವರಾಗಿ ಹದಿನಾರು ವರ್ಷದ ಸಾಕಮ್ಮನವರನ್ನು ಮದುವೆಯಾದರು. ಆಗಿನ‌ ಸಂದರ್ಭಗಳು ಹೇಗಿತ್ತೋ ಅಂತೂ‌ ಸಾಕಮ್ಮ ಚಿಕ್ಕಬಸಪ್ಪನವರ ಮೂರನೆಯ ಪತ್ನಿಯಾಗಿ ಕೊಡಗಿಗೆ ಬಂದರು.

ಮದುವೆಯಾಗಿ ಎರಡೇ ವರ್ಷದಲ್ಲಿ ಚಿಕ್ಕಬಸಪ್ಪನವರು ತೀರಿಕೊಂಡರು. ಕೆಲವೇ ಸಮಯದಲ್ಲಿ ಚಿಕ್ಕಬಸಪ್ಪನವರ ಮೊದಲಿನ ಪತ್ನಿಯರೂ ತೀರಿಕೊಂಡರು. ಇಡೀ ಆಸ್ತಿಯ ಹಕ್ಕು‌ ಮತ್ತು ಜವಾಬ್ದಾರಿ ಎಳೆಯ ವಯಸ್ಸಿನ ಸಾಕಮ್ಮನವರದ್ದಾಯಿತು. (ನನಗೆ ಈ ವಿವರಗಳನ್ನು ನೀಡಿದವರು ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು, ಸಾಕಮ್ಮನವರು ಅವರಿಗೆ ಸಂಬಂಧದಲ್ಲಿ ಚಿಕ್ಕಮ್ಮನಾಗಬೇಕು.)

ಸ್ವಲ್ಪ ವಿದ್ಯೆ ಕಲಿತಿದ್ದ ಸಾಕಮ್ಮ ಸುಮ್ಮನೆ ಕೂರಲಿಲ್ಲ. ಧೈರ್ಯದಿಂದ ಕೊಡಗಿನಲ್ಲಿ ಕಾಫಿ ಕೃಷಿಯನ್ನು ಮುಂದುವರೆಸಿದರು. ಕೆಲವು ಕಾಲದ ನಂತರ, 1920 ರ ವೇಳೆಗೆ ಅವರು ಬೆಂಗಳೂರಿನ ಬಸವನಗುಡಿಯಲ್ಲಿ ಕಾಫಿ ಕ್ಯೂರಿಂಗ್ ವರ್ಕ್ಸ್ ಮತ್ತು ಕಾಫಿ ಪುಡಿ ಉದ್ಯಮ ಪ್ರಾರಂಭಿಸಿದರು. ಅದು ಯಶಸ್ವಿಯಾಗಿ ಬೆಳೆಯಿತು. ಹೀಗೆ ಸಾಕಮ್ಮಾಸ್ ಕಾಫಿ ವರ್ಕ್ಸ್ ಸ್ಥಾಪನೆಯಾಗಿ, ಸಾಕಮ್ಮ ಕರ್ನಾಟಕದ ಪ್ರಥಮ ಮಹಿಳಾ ಉದ್ಯಮಿ ಎಂಬ ಮನ್ನಣೆಗೆ ಪಾತ್ರರಾದರು.

ಸಾಕಮ್ಮನವರಿಗೆ ಬೆಂಗಳೂರು ವಲಯದಲ್ಲಿ “ಕಾಫಿಪುಡಿ ಸಾಕಮ್ಮ” ಎಂಬ‌ ಹೆಸರು ಅಂಟಿಕೊಂಡಿತು. ಮುಂದೆ ಅವರು  ಮೈಸೂರು ಸರ್ಕಾರದ ಹಲವು ಕೈಗಾರಿಕಾ ಮತ್ತು ನೀರಾವರಿ ಯೋಜನೆಗಳಿಗೂ ಸಹಾಯ ಮಾಡಿ ಬೆಂಬಲವಾಗಿ ನಿಂತರು.

ಮಕ್ಕಳಿಲ್ಲದ ಸಾಕಮ್ಮ ಹಲವು ಮಕ್ಕಳಿಗೆ ವಿದ್ಯೆ ನೀಡಿದ್ದಲ್ಲದೆ, ಬೆಂಗಳೂರಿನಲ್ಲಿ ನೇಕಾರ ಜನಾಂಗದ‌ ಮಕ್ಕಳಿಗಾಗಿ ವಿದ್ಯಾರ್ಥಿನಿಲಯ, ಸಮುದಾಯ ಭವನ ಇತ್ಯಾದಿಗಳನ್ನು ಕಟ್ಟಿಸಿದರು.

ಅನೇಕ ಕಡೆಗಳಲ್ಲಿ ಜನರು ಸಾಕಮ್ಮನವರು ಹಲವಾರು ಮಕ್ಕಳನ್ನು ತಂದು ಸಾಕಿದ್ದರಿಂದ ಅವರಿಗೆ ಸಾಕಮ್ಮನೆಂಬ ಹೆಸರು ಬಂದಿತೆಂದು ತಿಳಿದುಕೊಂಡಿದ್ದರು!

ಗಾಂಧೀಜಿ ಕೊಡಗಿಗೆ ಬರುವ ಸಂದರ್ಭದಲ್ಲಿ ಅವರು ಸಾಕಮ್ಮನವರ ಮನೆಯಲ್ಲಿ ಉಳಿದುಕೊಳ್ಳುವುದೆಂದು ನಿರ್ಧಾರವಾಗಿತ್ತಂತೆ. ಇದನ್ನು ತಿಳಿದ ಬ್ರಿಟಿಷ್ ಸರ್ಕಾರದವರು ಗಾಂಧಿಯನ್ನು ನಿಮ್ಮಲ್ಲಿಗೆ ಬರಮಾಡಿಕೊಂಡರೆ ನಾವು ನಿಮ್ಮ ಕಾಫಿಯನ್ನು‌ ಕೊಳ್ಳುವುದಿಲ್ಲ ಎಂದು ಬೆದರಿಕೆ ಹಾಕಿದರಂತೆ. ಇದರಿಂದ ಸಾಕಮ್ಮ ಹಿಂಜರಿದರೆಂದು ಹೇಳುತ್ತಾರೆ.

ಆದರೆ ಆ ಕೂಡಲೇ ಪಕ್ಕದ ಬೇಳೂರಿನ ಗುರಪ್ಪನವರು ತಮ್ಮ ಮನೆಯಲ್ಲಿ ಗಾಂಧೀಜಿ, ಮಹದೇವ ದೇಸಾಯಿ, ಮತ್ತಿತರ ಜನರು ವಾಸ್ತವ್ಯದ ಅನುಕೂಲ ಮಾಡಿಕೊಟ್ಟರು. ಈ ಗುರಪ್ಪನವರು‌ ಮುಂದೆ ಕರ್ನಾಟಕದ ಬಿಜೆಪಿಯ ಪ್ರಮುಖ ನಾಯಕರಾದ ಬಿ.ಬಿ. ಶಿವಪ್ಪನವರ ಸಹೋದರ.

ಅಲ್ಲಿಂದ ನಂತರ ಗಾಂಧೀಜಿ, ಗುಂಡುಕುಟ್ಟಿ ಮಂಜುನಾಥಯ್ಯನವರಲ್ಲಿಗೆ ಹೋದರು. ಆ ಸಂದರ್ಭದಲ್ಲಿ ಗಾಂಧೀಜಿ ಬೇಳೂರಿನ ಗುರಪ್ಪನವರಲ್ಲಿ ಉಳಿದುಕೊಂಡದ್ದನ್ನು ಗುಟ್ಟಾಗಿಯೇ ಇಟ್ಟ ಕಾರಣ ಆ ವಿಚಾರ ಸರ್ಕಾರಿ ದಾಖಲೆಗಳಲ್ಲಿ ದಾಖಲಾಗದೆ ಉಳಿಯಿತು.

ಸಾಕಮ್ಮನವರಿಗೆ ಮುಂದೆ ಮೈಸೂರಿನ ಮಹಾರಾಜರು “ಲೋಕಸೇವಾ ಪಾರಾಯಣೆ” ಎಂಬ ಬಿರುದನ್ನು ನೀಡಿದರು.  ಅವರು ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾದರು. ಆ ಸಭೆಗೆ ಆಯ್ಕೆಯಾದ ಪ್ರಥಮ ಮಹಿಳಾ ಸದಸ್ಯೆ ಎಂಬ ಗೌರವ ಸಾಕಮ್ಮನವರದು.

ನಂತರದ ದಿನಗಳಲ್ಲಿ ಬ್ರಿಟಿಷ್ ಸರ್ಕಾರವೂ ಅವರಿಗೆ “ಕೈಸರ್ ಎ ಹಿಂದ್” ಎಂಬ ಬಿರುದನ್ನು ನೀಡಿತು.

ಗಾಂಧೀಜಿಯನ್ನು ತಮ್ಮ ಮನೆಯಲ್ಲಿ ಉಳಿಸಿಕೊಂಡಿದ್ದರೆ ಸಾಕಮ್ಮನವರಿಗೆ ಇವೆಲ್ಲ ಸಿಗುತ್ತಿತ್ತೋ ಇಲ್ಲವೋ ಊಹೆಗೆ ಬಿಟ್ಟ ವಿಚಾರ.

ಗುಂಡುಕುಟ್ಟಿ ಮಂಜುನಾಥಯ್ಯ ಕೂಡಾ ಸಾಹಿತ್ಯ ಪ್ರೇಮಿ, ಶಿವರಾಮ ಕಾರಂತರು ಅವರ ಎರಡು ಕಾದಂಬರಿಗಳನ್ನು ಮಂಜುನಾಥಯ್ಯನವರ ಮನೆಯಲ್ಲಿ ಉಳಿದುಕೊಂಡು ಬರೆದಿದ್ದಾರೆ.

ಆ ಸಮಯದಲ್ಲಿ ಕತೆಗಾರ್ತಿ ಕೊಡಗಿನ ಗೌರಮ್ಮನವರ ಪತಿ ಬಿ.ಟಿ.ಗೋಪಾಲಕೃಷ್ಣ, ಗುಂಡು ಕುಟ್ಟಿ ಎಸ್ಟೇಟ್ ನ ಮ್ಯಾನೇಜರ್ ಆಗಿದ್ದರು.

ಗಾಂಧೀಜಿ ಗುಂಡುಕುಟ್ಟಿಗೆ ಬಂದಾಗ ಗಣಪಯ್ಯ ಪತ್ನಿ ದೇವಮ್ಮನವರೊಂದಿಗೆ ಗಾಂಧಿಯವರನ್ನು ಭೇಟಿಮಾಡಿದರು. ತಮ್ಮಲ್ಲಿದ್ದ ಅಲ್ಪ ಸ್ವಲ್ಪ ಚಿನ್ನವನ್ನು ಗಾಂಧೀಜಿಗೆ ದಾನ ಮಾಡಿದರು.

ನಂತರ ಈ ದಂಪತಿಗಳ ಉಡುಗೆ ಖಾದಿಯಾಯಿತು. ಅಷ್ಟೇ ಅಲ್ಲದೆ ಕೊನೆಯವರೆಗೂ ಗಾಂಧೀಜಿಗೆ ಕೊಟ್ಟ ಮಾತಿನಂತೆ ಚಿನ್ನದ ಆಭರಣ ಧರಿಸುವುದನ್ನು ತ್ಯಜಿಸಿದ್ದರು.

ಗಣಪಯ್ಯನವರ ಮೇಲೆ ಗಾಂಧಿ ಪ್ರಭಾವ ಹರಳುಗಟ್ಟುತ್ತಾ ಹೋಯಿತು. ಇದಕ್ಕೆ ಕೊಡಗಿಗೆ ಗಾಂಧಿ ಬಂದಾಗ ನಡೆದ ಘಟನೆ ಮತ್ತು ಮುಂದಿನ ದಿನಗಳು ಕಾರಣವಾಗಿರಬೇಕು. ಗಣಪಯ್ಯ ದಂಪತಿಗಳು ಗುಂಡುಕುಟ್ಟಿ ಮಂಜುನಾಥಯ್ಯ ನವರ ಮನೆಯಲ್ಲಿ ಗಾಂಧೀಜಿಯನ್ನು ಭೇಟಿಯಾದಾಗ ಗಣಪಯ್ಯನವರ ಪತ್ನಿ ದೇವಮ್ಮನವರು ತಮ್ಮಲ್ಲಿದ್ದ ಚಿನ್ನವನ್ನು ದಾನ ಮಾಡುವ ಸಂದರ್ಭದಲ್ಲಿ ಗಾಂಧೀಜಿ ಗಣಪಯ್ಯನವರನ್ನು ಕರೆದು ಈ ದಾನಕ್ಕೆ ನಿಮ್ಮ ಆಕ್ಷೇಪವಿದೆಯೆ ಎಂದು ಪ್ರಶ್ನಿಸಿದರು.

ಆಗ ಗಣಪಯ್ಯ. “ಅದು ಅವಳ ಆಸ್ತಿ, ಅದಕ್ಕೆ ಅವಳೇ ಹಕ್ಕುದಾರಳು ಮತ್ತು ಜವಾಬ್ದಾರಳು. ಅದರ ತೀರ್ಮಾನವೂ ಅವಳದ್ದೇ ನನ್ನನ್ನು ಕೇಳಬೇಕಾದ ಅಗತ್ಯವೇ ಇಲ್ಲ”ಎಂದರಂತೆ.

ಗಾಂಧೀಜಿ ಈ ವಿಚಾರವನ್ನು ತಮ್ಮ “ಹರಿಜನ್” ಪತ್ರಿಕೆಯಲ್ಲಿ ಬರೆದು ದಾಖಲಿಸಿದ್ದಾರೆ.

ಗಣಪಯ್ಯನವರಿಗೆ ಮೂವರು‌ ಮಕ್ಕಳು. ಹಿರಿಯ ಮಗಳು ಸರೋಜ, ಮಗ ರವೀಂದ್ರನಾಥ, ಮೂರನೆಯವರು ಮಗಳು ಸರಳಾ.

ಗಾಂಧಿ ವೈಚಾರಿಕತೆಯ ಅನುಯಾಯಿಯಾಗತೊಡಗಿದ್ದ ಗಣಪಯ್ಯನವರಿಗೆ ತಮ್ಮ ಮಕ್ಕಳಿಗೆ ಶಾಂತಿನಿಕೇತನದಲ್ಲಿ ವಿದ್ಯಾಭ್ಯಾಸ ಮಾಡಿಸಬೇಕೆಂದು ಆಸೆಯಿತ್ತು.

ಅದಕ್ಕಾಗಿ ವಿಚಾರಿಸಿದಾಗ ಅದು ತಮ್ಮ ಅಂದಿನ ಆರ್ಥಿಕ ಶಕ್ತಿಗೆ ಮೀರಿದ್ದೆಂದು ತಿಳಿದು ಸುಮ್ಮನಾದರು. ಆಗ ಅವರಿಗೆ ಮಂಗಳೂರಿನ ಗೆಳೆಯರೊಬ್ಬರು ಹರಿದ್ವಾರದಲ್ಲಿ ಒಂದು ಗುರುಕುಲವಿದೆ. ಅದು ಗಂಡು ಮಕ್ಕಳಿಗೆ ಮಾತ್ರ, ಹಾಗೆಯೇ ಹೆಣ್ಣುಮಕ್ಕಳಿಗಾಗಿ ಡೆಹ್ರಾಡೂನ್ ನಲ್ಲಿ ಒಂದಿದೆ ಎರಡೂ ಕಡೆ ಭಾರತೀಯ ವಿದ್ಯಾಭ್ಯಾಸ ಕ್ರಮವಿದೆ ಎಂದು ವಿವರ ನೀಡಿದರು.

ಅಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಸಾಧ್ಯವಿತ್ತು. ಮಕ್ಕಳಿಗೆ ಆರು ವರ್ಷವಾಗುತ್ತಲೇ ಅಲ್ಲಿಗೆ ಸೇರಿಸಬೇಕಿತ್ತು.

ಗಣಪಯ್ಯನವರು ಕ್ರಮಾನುಗತವಾಗಿ ಆರು ವರ್ಷ ತುಂಬುವವೇಳೆಗೆ ಮಗನನ್ನು ಹರಿದ್ವಾರಕ್ಜೂ ಹೆಣ್ಣುಮಕ್ಕಳನ್ನು ಡೆಹ್ರಾಡೂನ್ ಗೂ ಕಳುಹಿಸಿದರು.

ಅಲ್ಲಿ ಗುರುಕುಲ ಪದ್ಧತಿಯಲ್ಲಿ ವಿದ್ಯಾಭ್ಯಾಸ. ಸರಳ ಜೀವನ, ಹೆಚ್ಚಿನ‌‌ ಸೌಲಭ್ಯಗಳಿಲ್ಲ. ಸ್ವಾವಲಂಬನೆ ಕಡ್ಡಾಯವಾಗಿತ್ತು. ಸಂಸ್ಕೃತ, ಹಿಂದಿ, ಇಂಗ್ಲಿಷ್ ನಲ್ಲಿ ಬೋಧನೆ.

ರವೀಂದ್ರನಾಥ ಅವರು ಅಲ್ಲಿ ಹದಿನಾರು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿ ಸಂಸ್ಕೃತ ಮತ್ತು ವೈದ್ಯಕೀಯ ಕಲಿತು. ಡಾ.ಎನ್.ಜಿ.ರವೀಂದ್ರನಾಥ ಆದರು.

ಗಣಪಯ್ಯನವರು ಶಾಲೆಯ ಮೂಲಕ ಕಲಿತದ್ದು ಕಡಿಮೆ. ಬಡತನ ಅವರ ವಿದ್ಯೆಯನ್ನು ಮೊಟಕುಗೊಳಿಸಿತ್ತು. ಆದರೆ ಅವರಿಗೆ ಬದುಕೇ ವಿಶ್ವವಿದ್ಯಾಲಯವಾಯಿತು. ಅವರು ಸ್ವಾಧ್ಯಾಯಿಯಾದರು. ಸುಮಾರು ನಾಲ್ಕು ದಶಕಗಳ ಕಾಲ ಕೊಡಗಿನ ರಾಜಕೀಯ -ಸಾಂಸ್ಕೃತಿಕ ಘಟನೆಗಳಿಗೂ ಗಣಪಯ್ಯ‌ ಸಾಕ್ಷಿಯಾಗಿದ್ದರು.

ಸಾಕಮ್ಮನವರ ತೋಟದಲ್ಲಿ ಸಣ್ಣ ಚಾಕರಿಗೆ ಸೇರಿದ ಗಣಪಯ್ಯನವರಿಗೆ ನಿಧಾನವಾಗಿ ಜವಾಬ್ದಾರಿಗಳು ಹೆಚ್ಚಿ ಹಂತ ಹಂತವಾಗಿ ಮೇಲೇರಿ ‌ಮೂರು ಸಾವಿರ ಎಕರೆಗಳಷ್ಟು ದೊಡ್ಡ ಎಸ್ಟೇಟ್ ನ ಮ್ಯಾನೇಜರ್ ಹುದ್ದೆ ತಲುಪಿದರು. ಅದರಿಂದಾಗಿ ಅವರಿಗೆ ಅನೇಕ ಕಾಫಿ ಬೆಳೆಗಾರರ, ಎಸ್ಟೇಟ್ ಮ್ಯಾನೇಜರ್ ಗಳ ಸಮಾಜದ ಹಲವು ಸ್ತರಗಳ ಜನರ ಪರಿಚಯವಿತ್ತು. ಗುಂಡುಕುಟ್ಟಿ ಮಂಜುನಾಥಯ್ಯ ಅವರಂತಹವರ ಒಡನಾಟ ಈ ಎಲ್ಲವೂ ಸೇರಿದ ಅನುಭವಗಳು ಅವರ ರಾಜಕೀಯ  ಮತ್ತು ಸಾಮಾಜಿಕ ಒಲವುಗಳನ್ನು‌ ಬೆಳೆಸಿರಬೇಕು.

ನಂತರದ ದಿನಗಳಲ್ಲಿ ಅವರು ಕೊಡಗಿನಲ್ಲಿ ಭೂತನ ಕಾಡು ಗಣಪಯ್ಯ ಎಂದೇ ಪ್ರಸಿದ್ದರಾದರು.

ಗಣಪಯ್ಯ ಸಾಕಮ್ಮನವರ ತೋಟದಲ್ಲಿ ಮ್ಯಾನೇಜರ್ ಆಗಿದ್ದಾಗಿನ ಒಂದು ವಿಶೇಷ ಪ್ರಸಂಗ ಇದೆ… ಅದು ಹೀಗಿದೆ

ಮುಂದಿನ ದಿನಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದ ಗುಂಡುರಾವ್ ಅವರ ತಂದೆ ರಾಮರಾವ್ ಅವರು ಕುಶಾಲನಗರದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾಗಿದ್ದರು. ಅವರು ಗಣಪಯ್ಯನವರಿಗೂ ಪರಿಚಿತರು.

ಒಮ್ಮೆ ರಾಮರಾವ್ ಅವರು ಗಣಪಯ್ಯನವರಲ್ಲಿ “ನನ್ನ ಮಗ ಅಲ್ಲಿ ಇಲ್ಲಿ ಅಲಿತಾ ಇದ್ದಾನೆ, ಏನೂ ಕೆಲಸ ಇಲ್ಲ. ಯಾವುದಾದರೂ ಎಸ್ಟೇಟ್ ನಲ್ಲಿ ಕೆಲಸ ಇದ್ದರೆ ಕೊಡಿಸಿ” ಎಂದು ಕೇಳಿದರಂತೆ.

ಇದು ಗಣಪಯ್ಯನವರ ಮನಸ್ಸಿನಲ್ಲಿ ಇತ್ತು. ಒಂದು ದಿನ ಗಣಪಯ್ಯ ಕಾರಿನಲ್ಲಿ ಸೋಮವಾರಪೇಟೆಯ ಕಡೆಗೆ ಹೋಗುತ್ತಿರುವಾಗ ಗುಂಡುರಾವ್ ದಾರಿಯಲ್ಲಿ ನಡೆದು ಹೋಗುತ್ತಿದ್ದರಂತೆ, ಅವರಿಗಾಗ ಇಪ್ಪತ್ತರ ಒಳಗಿನ ವಯಸ್ಸು. ಗಣಪಯ್ಯನವರ ಕಾರು ನಿಲ್ಲಿಸಿ ಗುಂಡುರಾವ್ ಅವರನ್ನು ಕೂರಿಸಿಕೊಂಡರು.

“ನಿಮ್ಮ ತಂದೆ ಹೇಳಿದ್ದಾರೆ, ಇಲ್ಲೇ ಹತ್ತಿರದಲ್ಲಿ ಕರ್ನಲ್ ಬಸಪ್ಪ ನವರ ತೋಟದಲ್ಲಿ ಒಂದು ರೈಟರ್ ಕೆಲಸ ಇದೆ ಬಾ ಹೋಗೋಣ, ಕೊಡಿಸುತ್ತೇನೆ” ಎಂದರಂತೆ.

ಗುಂಡುರಾವ್ ಸ್ವಲ್ಪ ಹೊತ್ತು ಏನೂ ಮಾತಾಡದೆ ಸುಮ್ಮನಿದ್ದು ನಂತರ, “ಗಣಪಯ್ಯನವರೆ ನನಗೆ ಅದರಲ್ಲಿ ಆಸಕ್ತಿ ಇಲ್ಲ. ನಾನು ರಾಜಕೀಯದಲ್ಲಿ ಮುಂದುವರಿಯಬೇಕು ಅಂತಿದ್ದೇನೆ, ನನಗೆ ಅದು ಬೇಡ” ಎಂದರಂತೆ.

ಗಣಪಯ್ಯನವರಿಗೆ ಸಿಟ್ಟು ಬಂದರೂ ತಡೆದುಕೊಂಡು ಸುಮ್ಮನಾಗಿ. “ಸರಿ ಹೋಗು” ಎಂದು ಅಲ್ಲಿಯೇ ಕಾರಿನಿಂದ ಇಳಿಸಿ ಹೋದರಂತೆ!

ಗುಂಡುರಾವ್

ಹಲವು ವರ್ಷಗಳ ನಂತರ ಗುಂಡುರಾವ್ ರಾಜ್ಯದ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗಿದ್ದಾಗಲೇ ಗಣಪಯ್ಯನವರ ಹಾರ್ಲೆ ಎಸ್ಟೇಟ್ ಗೆ ಬಂದು ಅತಿಥಿಯಾಗಿ ಉಳಿದರು. ಆ ಸಂದರ್ಭದಲ್ಲಿ ಈ ವಿಚಾರವನ್ನು ಸ್ವತಃ ಗುಂಡುರಾವ್ ಅವರೇ ತಮ್ಮ ಭಾಷಣದಲ್ಲೇ ಹೇಳಿದರು!

ಅವರು ವೇದಿಕೆಯ ಮೇಲೆಯೇ “ಗಣಪಯ್ಯನವರು ಹೇಳಿದಂತೆ ನಾನು ರೈಟರ್ ಕೆಲಸಕ್ಕೆ ಹೋಗಿದ್ದರೆ, ಹೆಚ್ಚೆಂದರೆ ಎಸ್ಟೇಟ್ ಮ್ಯಾನೇಜರ್ ಆಗ್ತಿದ್ದೆ. ಹೋಗದೆ ಇದ್ದುದರಿಂದ ಸ್ಟೇಟ್ ಗೆ ಮುಖ್ಯಮಂತ್ರಿಯಾದೆ” ಎಂದು ತಮ್ಮದೇ ಶೈಲಿಯಲ್ಲಿ ಹೇಳಿ ನಕ್ಕರು. ಮುಂದೆ ಗುಂಡುರಾವ್ ಅವರು ಗಣಪಯ್ಯನವರು ಕೇಳಿದ ಕೆಲವು ಸಾಮಾಜಿಕ ಕೆಲಸಗಳನ್ನು ಮಾಡಿಕೊಟ್ಟರು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ; ಕಳೆದುಹೋದ ದಿನಗಳು -1: ಜಿಲ್ಲಾ ಕಲೆಕ್ಟರ್‌ರ ಪತ್ನಿಯ ಮಧ್ಯಾಹ್ನದ ನಿದ್ದೆಗಾಗಿ ಬಡವರ ಅನ್ನಕ್ಕೆ ಕಲ್ಲು

LEAVE A REPLY

Please enter your comment!
Please enter your name here