Homeಅಂಕಣಗಳು80 ರ ದಶಕದಲ್ಲಿ ನಾವು ರಾತ್ರಿ ಶಾಲೆ ಆರಂಭಿಸಿದ್ದು ಹೀಗೆ: ಪ್ರಸಾದ್ ರಕ್ಷಿದಿ

80 ರ ದಶಕದಲ್ಲಿ ನಾವು ರಾತ್ರಿ ಶಾಲೆ ಆರಂಭಿಸಿದ್ದು ಹೀಗೆ: ಪ್ರಸಾದ್ ರಕ್ಷಿದಿ

ದೇಶದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟ ಪ್ರಾರಂಭವಾಗಿತ್ತು. ಗಣಪಯ್ಯನವರು ಬಂಧಿತರಾಗಿ ಬೆಂಗಳೂರು ಜೈಲು ಸೇರಿದ್ದರು..

- Advertisement -
- Advertisement -

ಕಳೆದು ಹೋದ ದಿನಗಳು -14

ನಾನು ಕೆಲಸಕ್ಕೇನೋ ಸೇರಿಯಾಗಿತ್ತು. ಎಷ್ಟು ದಿನ ಇಲ್ಲಿರುವೆನೋ ಎಂದು ನನಗೇ ನಿರ್ಧಾರವಿರಲಿಲ್ಲ. ನನಗೆ ನಾನೇನಾದರೂ ಸ್ವತಂತ್ರವಾಗಿ ಮಾಡಬೇಕು. ಹಾಗೆಯೇ ಒಂದಿಷ್ಟು ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಆಸೆಯಿತ್ತು. ಆದರೆ ಹೇಗೆ? ಗೊತ್ತಿರಲಿಲ್ಲ. ನಮ್ಮ ಮನೆಯ ಪರಿಸ್ಥಿತಿ ಅದಕ್ಕೆ ಅನುಕೂಲವಿರಲಿಲ್ಲ. ಮನೆಯಲ್ಲಿ ಅಪ್ಪ, ಅಮ್ಮ, ಅಕ್ಕ ಮತ್ತು ನಾನು. ಹೆಚ್ಚೂ ಕಡಿಮೆ ಮನೆಯ ನಿರ್ವಹಣೆಯ ಜವಾಬ್ದಾರಿ ನನ್ನ ಮೇಲೆ ಇತ್ತು. ನಾನು ಕೆಲಸಕ್ಕೆ ಸೇರಿದ ಕೆಲವೇ ಸಮಯದಲ್ಲಿ ಅಪ್ಪ ನಿವೃತ್ತಿಯಾದರು. ಆದರೆ ಅವರನ್ನು ಸಲಹೆಗಾರರನ್ನಾಗಿ ತಾತ್ಕಾಲಿಕ ಸೇವೆಯಲ್ಲಿ ಮುಂದುವರೆಸಿದ್ದರು.

ಪೂರ್ಣಿಮಾ ಎಸ್ಟೇಟ್‌ನ ಯಾವ ಕೆಲಸಗಾರರೂ ನನಗೆ ಹೊಸಬರಲ್ಲ, ಹೆಚ್ಚಿನವರು ನನ್ನನ್ನು ಬಾಲ್ಯದಿಂದ ಕಂಡವರು. ಮತ್ತು ಇನ್ನುಳಿದವರು ಅವರ ಮಕ್ಕಳು ಅವರಲ್ಲಿ ಕೆಲವರು ನನ್ನ ಆಟದ ಗೆಳೆಯರು. ಆದ್ದರಿಂದ ಅವರಿಗೆ ನಾನೊಬ್ಬ ಹೊರಗಿನವನೆಂಬ ಭಾವನೆ ಇರಲೇ ಇಲ್ಲ. ನನಗೋ ಅವರ ಪ್ರತಿಯೊಬ್ಬರ ಮನೆಯೂ ಒಳ ಹೊಕ್ಕು ತಿರುಗಾಡುವ ಸಲುಗೆ.

ಕೆಲಸಕ್ಕೆ ಸೇರಿದ ಕೆಲವೇ ಸಮಯದಲ್ಲಿ ಯುವಕರಿಗೆ ಮತ್ತು ಮಕ್ಕಳಿಗಾಗಿ ರಾತ್ರಿ ಶಾಲೆಯೊಂದನ್ನು ಪ್ರಾರಂಭಿಸಿದೆ.

ದೇಶದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟ ಪ್ರಾರಂಭವಾಗಿತ್ತು. ಗಣಪಯ್ಯನವರು ಬಂಧಿತರಾಗಿ ಬೆಂಗಳೂರು ಜೈಲು ಸೇರಿದ್ದರು. ಅಲ್ಲಿ ಎಲ್.ಕೆ. ಅದ್ವಾನಿ, ರಾಮಕೃಷ್ಣ ಹೆಗಡೆ ಮುಂತಾದವರು ಇವರ ಜೊತೆಗಾರರಾಗಿದ್ದರು.

ನನ್ನ ರಾತ್ರಿ ಶಾಲೆಯ ಜೊತೆಗಾರ, ಗೆಳೆಯ ಉಗ್ಗಪ್ಪ ಕೂಡಾ ಚಳುವಳಿಯಲ್ಲಿ ಭಾಗವಹಿಸಿ ಜೈಲುಸೇರಿದ. ಈತ ಮುಂದೆ ನಮ್ಮ ರಂಗ ತಂಡದ ಖಾಯಂ ನಟನೂ ಆದ. (ಇವರ ಮಗಳು ಈಗ ಚಲನಚಿತ್ರಗಳಲ್ಲೂ ಹೆಸರು ಗಳಿಸುತ್ತಿರುವ ರಂಗ ಕಲಾವಿದೆ ಬಿಂದು ಶ್ರೀ ರಕ್ಷಿದಿ) ನಾನು ಶಾಲೆ ಕಲಿತ ಹಾನುಬಾಳು ಶಾಲೆಯ ನನ್ನ ಅನೇಕ ಸಹಪಾಠಿಗಳು ಜೈಲು ಸೇರಿದರು. ಅವರೆಲ್ಲರಿಗೂ ದೇವಾಲದ ಕೆರೆಯ ಡಿ.ಎಸ್. ಲೋಕೇಶ ಗೌಡರು ನಾಯಕರಾಗಿದ್ದರು. ಡಿ,ಎಸ್. ಲೋಕೇಶಗೌಡರು ಆರಂಭದಲ್ಲಿ ಆರ್.ಎಸ್.ಎಸ್. ಕಾರ್ಯಕರ್ತರಾಗಿ ಬೆಳೆದವರು. ಆದರೆ ಮುಂದೆ ತುಂಬ ಓದಿಕೊಂಡಿದ್ದರು. ಮತ್ತು ನಂತರದ ದಿನಗಳಲ್ಲಿ ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದರು. ಆ ಕಾಲದಲ್ಲಿ ನಮಗೆಲ್ಲರಿಗೂ ಆಕರ್ಷಣೆಯ ಯುವ ನಾಯಕ.

ಕಾರ್ಮಿಕ ಮಿತ್ರ ಸಂಘ ರಕ್ಷಿದಿಯ ನಾಟಕದ ಕರೆಯೋಲೆ

ನಾನು ಕೆಲವು ಭೂಗತ ಪತ್ರಿಕೆಗಳಿಗೆ ವರದಿಗಾರನಾಗಿ ಕೆಲಸ ಮಾಡಿದೆ. ಅವುಗಳನ್ನು ಹಂಚುವ ಕೆಲಸ ಮಾಡುತ್ತಿದ್ದೆ. ಚಳುವಳಿಯಲ್ಲಿ ಬಂಧಿತರಾಗಿ ಜೈಲುಸೇರಿದ ಬಡ ಯುವಕರ ಮನೆಗಳಿಗೆ ರವೀಂದ್ರನಾಥರು ಗುಟ್ಟಾಗಿ ಹಣ ಸಹಾಯ ಮಾಡುತ್ತಿದ್ದರು.

ನಮ್ಮ ರಾತ್ರಿ ಶಾಲೆ ಚೆನ್ನಾಗಿ ನಡೆಯುತ್ತಿತ್ತು.

ದೇಶಾದ್ಯಂತ ಇಂದಿರಾ ವಿರೋಧ ಭುಗಿಲೆದ್ದಂತೆ ಭಾಸವಾಗುತ್ತಿತ್ತು. ಆದರೆ ಪ್ಲಾಂಟೇಷನ್ ವಲಯದಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. 60ರ ದಶಕಕ್ಕೆ ಹೋಲಿಸಿದರೆ ಕೂಲಿ ಕಾರ್ಮಿಕರ ಪರಿಸ್ಥಿತಿ ಖಂಡಿತವಾಗಿಯೂ ಸಾಕಷ್ಟು ಸುಧಾರಿಸಿತ್ತು. ಗಣಪಯ್ಯ ಮತ್ತು ರವೀಂದ್ರನಾಥರವಂತವರ ಕೆಲಸಗಳ ಬಗ್ಗೆ ನೂರಾರು ಕಾರ್ಮಿಕರಿಗೆ ಕೃತಜ್ಞತಾ ಭಾವನೆ ಇದ್ದರೂ ಅದು ವೈಯಕ್ತಿಕ ನೆಲೆಯಲ್ಲಿ ಇತ್ತೇ ವಿನಃ ರಾಜಕೀಯ ಪ್ರಜ್ಞೆಯಿಂದ ಕೂಡಿದ್ದಾಗಿರಲಿಲ್ಲ. ಕೂಲಿ ಕಾರ್ಮಿಕರಲ್ಲಿ ಹೆಚ್ಚಿನವರು ಇಂದಿರಾ ತಮ್ಮ ಅನ್ನದಾತೆಯೆಂದೇ ನಂಬಿದ್ದರು. ದೇವರಾಜ ಅರಸರು ಕರ್ನಾಟಕದಲ್ಲಿ ತಂದ ಜನಪರ ಕೆಲಸಗಳು ಇಂದಿರಾ ಪರವಾದ ಅಲೆಯನ್ನೇ ಸೃಷ್ಟಿ ಮಾಡಿದ್ದವು.

ಇನ್ನು ಪ್ಲಾಂಟರುಗಳಲ್ಲಿಯೂ ಅಷ್ಟೇ ಕಾಫಿಗೆ ರಷ್ಯಾದ ಮಾರುಕಟ್ಟೆ ದೊರೆತದ್ದರಿಂದ ಕಾಫಿ ಬೋರ್ಡ್ ಕಾಫಿ ಬೆಳೆಗೆ ಒಳ್ಳೆಯ ಬೆಲೆ ನೀಡಲಾರಂಭಿಸಿತ್ತು. ಇದು ಬೆಳೆಗಾರರಲ್ಲಿ ಕೂಡಾ ಇಂದಿರಾ ಗಾಂಧಿ ಆಡಳಿತದ ಬಗ್ಗೆ ಭರವಸೆಯನ್ನು ಮೂಡಿಸಿತ್ತು. ಹಾಗಾಗಿ ಗಣಪಯ್ಯನವರ ಬಗ್ಗೆ ಅಪಾರ ಗೌರವ ಇದ್ದವರೂ ಕೂಡಾ ಗಣಪಯ್ಯನವರು ಇಂದಿರಾ ವಿರೋಧ ಮಾಡಬಾರದಿತ್ತು ಎಂಬ ಭಾವನೆಯಲ್ಲಿ ಇದ್ದರು.

ಇವೆಲ್ಲವೂ ಮುಂದೆ 1977ರ ಚುನಾವಣೆಯಲ್ಲಿ ವ್ಯಕ್ತವಾಯಿತು.

ತುರ್ತು ಸ್ಥಿತಿ ಮುಗಿದು ಜೈಲಿನಲ್ಲಿದ್ದವರು ಹೊರಬಂದಿದ್ದರು. ಚುನಾವಣೆಯ ಘೋಷಣೆಯಾಯಿತು. ಹಲವಾರು ವಿರೋಧ ಪಕ್ಷಗಳು ಒಗ್ಗೂಡಿ ಜನತಾ ಪಕ್ಷ ರಚನೆಯಾಗಿತ್ತು. ಗಣಪಯ್ಯ ಜನತಾ ಪಕ್ಷದ ಕರ್ನಾಟಕ ರಾಜ್ಯದ ಉಪಾಧ್ಯಕ್ಷರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದರು.

ಗಣಪಯ್ಯ ಮತ್ತದೇ ಉತ್ಸಾಹದಿಂದ ಚುನಾವಣೆಯಲ್ಲಿ ಹೋರಾಟಕ್ಕಿಳಿದರು. ಆ ಬಾರಿ ಗಣಪಯ್ಯನವರ ಆಪ್ತರಾದ ಸಿ.ಎಂ.ಪೂಣಚ್ಚನವರು ಕೂಡಾ ಜನತಾಪಕ್ಷದಲ್ಲಿ ಇದ್ದರು.

ನಾನು ಕೆಲವು ದಿನಗಳ ಮಟ್ಟಿಗೆ ರಜೆ ಹಾಕಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಹಾಸನ ಜಿಲ್ಲೆ ಎರಡೂ ಕಡೆಗಳಲ್ಲಿ ಪ್ರಚಾರಕ್ಕೆ ಹೋದೆ. ಹಾಸನ ಜಿಲ್ಲೆಯಲ್ಲಿ ಪ್ರಚಾರದಲ್ಲಿ ನಮ್ಮ ಉಗ್ಗಪ್ಪನೂ ನಾನೂ ಜೊತೆಯಾಗಿದ್ದೆವು. ತಮಾಷೆಯ ಸಂಗತಿಯೆಂದರೆ ನಮ್ಮಿಬ್ಬರಿಗೂ ಇನ್ನೂ ಮತದಾನದ ಹಕ್ಕು ಬಂದಿರಲಿಲ್ಲ. ಆಗ ಮತದಾನಕ್ಕೆ 21 ವರ್ಷವಾಗಬೇಕಿತ್ತು. ಜನತಾ ಪಕ್ಷ ಶ್ರೀಮಂತರ ಪಕ್ಷವೆಂಬ ಭಾವನೆಯೇ ಸಾರ್ವತ್ರಿಕವಾಗಿ ಕಂಡು ಬರುತ್ತಿತ್ತು.  ಚುನಾವಣೆ ಮುಗಿದಾಗ ತುರ್ತುಪರಿಸ್ಥಿತಿ ಅತಿರೇಕಗಳೂ ಸೇರಿದಂತೆ ಹಲವಾರು ಕಾರಣಗಳಿಂದ ಉತ್ತರ ಭಾರತದಲ್ಲಿ ಇಂದಿರಾ ಕಾಂಗ್ರೆಸ್ ಸಂಪೂರ್ಣವಾಗಿ ಸೋತು, ಜನತಾಪಕ್ಷ ಅಧಿಕಾರಕ್ಕೆ ಬಂದಿತು.

ಆದರೆ ಕರ್ನಾಟಕದಲ್ಲಿ ಜನತಾಪಕ್ಷಕ್ಕೆ ಕೇವಲ ಎರಡು ಸ್ಥಾನಗಳು ಬಂದಿದ್ದವು. ಹಾಸನ ಜಿಲ್ಲೆಯಲ್ಲಿ ಎಸ್.ನಂಜೇಶಗೌಡರು ಸಣ್ಣ ಬಹುಮತದಲ್ಲಿ ಗೆದ್ದಿದ್ದರು. ಗಣಪಯ್ಯನವರ ಶ್ರಮಕ್ಕೆ ಗೌರವ ಸಿಕ್ಕಿತ್ತು.

ತುರ್ತುಪರಿಸ್ಥಿತಿ ಯಲ್ಲಿ ಚಳುವಳಿ ಮಾಡಿ ಜೈಲು ಸೇರಿದ ನಮ್ಮ ರಂಗ ತಂಡದ ಸಂಗಾತಿ ಉಗ್ಗಪ್ಪ ಶೆಟ್ಟರ ಸಂಸಾರ

ಮಂಗಳೂರು ವಿಭಾಗದಲ್ಲಿ ಪೂಣಚ್ಚನವರು ಪ್ರಚಾರ ಮಾಡಿದ್ದರು. ಅಲ್ಲಿ ಜನಾರ್ದನ ಪೂಜಾರಿಯವರು ಎ.ಕೆ. ಸುಬ್ಬಯ್ಯನವರ ವಿರುದ್ಧ ಗೆದ್ದಿದ್ದರು, ಫಲಿತಾಂಶ ತಿಳಿದಾಗ ಪೂಣಚ್ಚ, “ನನ್ನ ಕ್ಷೇತ್ರದಲ್ಲಿ ಸೋತದ್ದು ಬೇಸರದ ಸಂಗತಿ ಅದರೆ ಗಣಪಯ್ಯ ನವರ ಶ್ರಮ ಸಾರ್ಥಕವಾಗಿದೆ, ಸಂತೋಷವಾಗಿದೆ” ಎಂದರು.

1977ರ ಚುನಾವಣೆಯ ಫಲಿತಾಂಶ ದೇಶದಲ್ಲಿ ಅನೇಕ ತರದ ಬದಲಾವಣೆಗಳಿಗೆ ನಾಂದಿಯಾಗಿತ್ತು. ಕೆಲವರು ಗಣಪಯ್ಯನವರು ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ ಎಂದು ಹೇಳುತ್ತಿದ್ದರು. ಗಣಪಯ್ಯ ಇದಾವುದನ್ನೂ ಯೋಚನೆ ಮಾಡಿದಂತಿರಲಿಲ್ಲ ಇನ್ನಷ್ಟು ಹುರುಪಿನಿಂದ ಜನಪರ ಕೆಲಸಗಳಲ್ಲಿ ತೊಡಗಿಕೊಂಡರು.

ಗಣಪಯ್ಯ ಭಾರತ ರೈತ ಒಕ್ಕೂಟ (Farmers Federation of India)ದ ಕಾರ್ಯದರ್ಶಿಯಾದರು. ಕೃಷಿ ಸಾಧನೆಯ ಮೂಲಕವೇ ಅವರು ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾಗಿ ನೇಮಕಗೊಂಡರು.

ಸಿ.ಎಂ.ಪೂಣಚ್ಚನವರು ಮಧ್ಯಪ್ರದೇಶದ ರಾಜ್ಯಪಾಲರಾಗಿ ನಿಯುಕ್ತರಾದರು.

ಪೂರ್ಣಿಮಾ ಎಸ್ಟೇಟಿನಲ್ಲಿ ನಮ್ಮ ರಾತ್ರಿ ಶಾಲೆ ಮುಂದುವರೆದಿತ್ತು. ಅದಕ್ಕೊಂದು ವ್ಯವಸ್ಥಿತ ರೂಪ ಕೊಡಲು  ಎಲ್ಲ ಕೆಲಸಗಾರರೂ ಸೇರಿ ಕಾರ್ಮಿಕ ಮಿತ್ರ ಸಂಘ ರಕ್ಷಿದಿ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡೆವು. ಅದೇ ಮುಂದೆ ನಮ್ಮೂರಿನ ರಂಗ ಚಟುವಟಿಕೆಗಳಿಗೆ, ಜೈಕರ್ನಾಟಕ ಸಂಘದ ಸ್ಥಾಪನೆಗೆ ಕಾರಣವಾಯಿತು.

1978ರಲ್ಲಿ ನಮ್ಮ ಕಾರ್ಮಿಕ ಮಿತ್ರಸಂಘದ ಪ್ರಥಮ ರಂಗ ಪ್ರಯೋಗ ನಡೆಯಿತು. ನಾಟಕ ಕೆ.ಗುಂಡಣ್ಣನವರ “ರಿಹರ್ಸಲ್ ಗಡಿಬಿಡಿ” ನಮ್ಮ ಶಾಲೆ ನವ ಸಾಕ್ಷರರೇ ನಟರು.

ತುರ್ತು ಪರಿಸ್ಥಿತಿಯಲ್ಲಿ ಸುಳ್ಯದ ಸುಮನಸಾ ವಿಚಾರವೇದಿಕೆ ಪ್ರಕಟಿಸುತ್ತಿದ್ದ ಅಜ್ಞಾತ ಪರ್ವ ಕೈಬರಹದ ಪತ್ರಿಕೆ

ನಾಟಕ ಪ್ರದರ್ಶನಕ್ಕೆ ಗಣಪಯ್ಯ ಬಂದಿದ್ದರು. ನಾಟಕ ನೋಡಿ ಖುಷಿ ಪಟ್ಟು ಬಹುಮಾನಗಳನ್ನು ಕೊಟ್ಟರಲ್ಲದೆ ನಾಟಕದ ಖರ್ಚನ್ನು ತೋಟದಿಂದ ಕೊಡಿಸಿದರು.

ನಮ್ಮ ರಾತ್ರಿ ಶಾಲೆ ಬೇಸಗೆಯಲ್ಲಿ ನಡೆಯುತ್ತಿದ್ದುದು ತೋಟದ ಕಾಫಿ ಕಣದ ಬಳಿ. ಅಲ್ಲಿ ಕತ್ತಲಾಗುವ ತನಕ ಬೇರೆ ಏನಾದರೂ ಆಟ ಆಡುತ್ತಿದ್ದೆವು. ಕಣದಲ್ಲಿ ಫುಟ್ ಬಾಲ್, ವಾಲಿಬಾಲ್, ಕಬ್ಬಡ್ಡಿ, ಲಗೋರಿ, ಹೀಗೆ ಏನಾದರೊಂದು ಇರುತ್ತಿತ್ತು. ನಂತರ ಪಾಠ.

ಹಾರ್ಲೆಯಲ್ಲಿ ನಿಂತು ಹೋದ ಶಾಲೆ ಮತ್ತು ಪ್ರಾರಂಭವಾಗಿತ್ತು. ಅಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆಂದು ಪ್ರತ್ಯೇಕ ವಿಭಾಗವಿತ್ತು. ಪುರುಷರಿಗೆ ಜಯರಾಮ ಶೆಟ್ಟಿ ಎಂಬವರು ಶಿಕ್ಷಕರಾಗಿದ್ದರು. ಅವರು ಈಗಲೂ ಸೇವೆಯಲ್ಲಿದ್ದು ಹಾರ್ಲೆ ಗುಂಪಿನಲ್ಲಿದ್ದ ಶ್ರೀನಿವಾಸ ಎಸ್ಟೇಟನ್ನು ನೋಡಿಕೊಳ್ಳುತ್ತಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಕಮಲಾ ಎಂಬುವರು ಶಿಕ್ಷಕಿಯಾಗಿದ್ದರು. ಕಮಲಾ ಅವರು ಬರುವ ಮುಂಚೆ ಕೆಲಕಾಲ ಕಾವೇರಿ ಎಂಬಾಕೆ ಶಿಕ್ಷಕಿಯಾಗಿದ್ದರು. ಅವರು ವಿವಾಹವಾಗಿ ಹೋದ ನಂತರ ಗಣಪಯ್ಯನವರ ಕಛೇರಿಯಲ್ಲಿ ಟೈಪಿಸ್ಟ್ ಆಗಿ ಬಂದ ಕಮಲಾ ಗಣಪಯ್ಯನವರ ಎಲ್ಲ ಪತ್ರವ್ಯವಹಾರಗಳನ್ನು ನೋಡಿಕೊಳ್ಳುತ್ತ ಆಪ್ತ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.

ನಂತರದ ದಿನಗಳಲ್ಲಿ ಅವರು ಎಸ್ಟೇಟಿನ ಸೇವೆಗೆ ಸೇರಿ ಕಛೇರಿಯಲ್ಲಿ ದುಡಿದರು. ಸಹೋದ್ಯೋಗಿ ನಾರಾಯಣ ಭಟ್ ಎಂಬವರನ್ನು ವಿವಾಹವಾಗಿ ಕಮಲಾ ಭಟ್ ಆಗಿ ಇಲ್ಲೇ ನೆಲೆಸಿದರು.

ಈಗ ದಂಪತಿಗಳು ಪುತ್ತೂರಿನ ಬಳಿ ಸ್ವಂತ ಜಮೀನಿನಲ್ಲಿ ನೆಲೆಸಿದ್ದಾರೆ.

ಹಾರ್ಲೆಯಲ್ಲಿಯೂ ಯುವಕರು ಪ್ರತಿದಿನ ಕಬ್ಬಡ್ಡಿ, ವಾಲಿಬಾಲ್ ಇತ್ಯಾದಿಗಳನ್ನು ಆಡುತ್ತಿದ್ದರು. ರವೀಂದ್ರನಾಥರೂ ಒಳ್ಳೆಯ ಕ್ರೀಡಾಪಟು. ಒಳ್ಳೆಯ ಕ್ರಿಕೆಟ್ ಆಟಗಾರ ಕೂಡಾ. ಸಕಲೇಶಪುರದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಇವರ ಕೊಡುಗೆ ಹಿರಿದಾದುದು. ಸಂಜೆ ತೋಟದ ಕೆಲಸಗಾರರ ಜೊತೆ ಸೇರಿ ಅವರೂ ಆಟವಾಡುತ್ತಿದ್ದರು.

ನಾವು ಕೆಲವು ಸಲ ಸಂಜೆ ಕಬ್ಬಡ್ಡಿ ಆಡಲು ತೋಟದ ಒಳಗಿನ ಒಳದಾರಿಯಲ್ಲಿ ನಾಲ್ಕು ಕಿ.ಮೀ. ನಡೆದು  ಹಾರ್ಲೆಗೆ ಹೋಗುತ್ತಿದ್ದವು.

ಹಾರ್ಲೆಯಲ್ಲಿ ಕೆಲಕಾಲ ಶಾಲೆ ಬಂಗಲೆಯ ಪಕ್ಕದ ಲಾರಿ ಶೆಡ್ ನಲ್ಲಿ ನಡೆಯುತ್ತಿತ್ತು, ನಂತರ ಅದಕ್ಕಾಗಿಯೇ ಒಂದು ಕಟ್ಟಡವನ್ನು ಕಟ್ಟಿಸಿದರು. ಅದಕ್ಕೆ ‘ಜ್ಞಾನ ಮಂದಿರ’ ವೆಂದು ಹೆಸರಿಟ್ಟರು.

ಹಾರ್ಲೆಯಲ್ಲಿ ಗಣಪತಿ ಉತ್ಸವ

ಆ ಕಟ್ಟಡದಲ್ಲಿ ನಂತರ ಹಲವಾರು ಸಭೆಗಳು ನಡೆಯುತ್ತಿದ್ದವು, ಅದರಲ್ಲಿ ರಾಜಕೀಯ ಸಭೆಗಳೂ ಇದ್ದವು, ರೈತರ ಸಭೆಗಳೂ ಇದ್ದವು. ತೋಟ ಕಾರ್ಮಿಕರ ಸಭೆಗಳೂ ನಡೆಯುತ್ತಿದ್ದವು. ಜಯರಾಮ ಶೆಟ್ಟರು ಶಿಕ್ಷಕರಾಗಿದ್ದಾಗಲೇ ಕೆಲಗಾರರನ್ನು ಒಗ್ಗೂಡಿಸಿ ಗಣಪತಿ ಕೂರಿಸಿ ಹಬ್ಬ ಮಾಡುವುದನ್ನು ಪ್ರಾರಂಭಿಸಿದ್ದರು. ಅದು ಜ್ಞಾನಮಂದಿರಕ್ಕೆ ವರ್ಗಾವಣೆಯಾಗಿ ಹಲವು ವರ್ಷಗಳ ಕಾಲ ಮುಂದುವರೆಯಿತು.

ಕೆಲವು ಸಲ ಗಣಪತಿ ಹಬ್ಬದಲ್ಲಿ ಹರಿಕಥೆಯನ್ನೂ ನಡೆಸುತ್ತಿದ್ದರು. ಮ್ಯಾನೇಜರ್ ವಾಸುದೇವರಾವ್ ಉಡುಪಿಯಿಂದ ಪ್ರಸಿದ್ಧ ಹರಿಕಥೆ ದಾಸ ಭದ್ರಗಿರಿ ಕೇಶವದಾಸರನ್ನು ಕರೆಸುತ್ತಿದ್ದರು. ನಾವೆಲ್ಲರೂ ಆಗ ಹರಿಕಥೆ ಕೇಳಲು ಹೋಗುತ್ತಿದ್ದವು. ಆಗ ಹರಿಕಥೆಗೆ ತಬಲಾ ಸಾಥ್ ನೀಡಲು ಬರುತ್ತಿದ್ದವರು. ಮುಂದೆ ಮೈಸೂರು ರಂಗಾಯಣದಲ್ಲಿ ಸಂಗೀತ ಪ್ರಶಿಕ್ಷಕರಾದ  ಖ್ಯಾತ ಸಂಗೀತಗಾರ ಶ್ರೀನಿವಾಸ ಭಟ್ (ಚೀನಿ).

ಶ್ರೀನಿವಾಸ ಭಟ್ ಮತ್ತು ನನ್ನ ಸ್ನೇಹವಾದದ್ದು ಆಗ ನಡೆದ ಒಂದು ತಮಾಷೆಯ ಪ್ರಸಂಗದಿಂದ.

ಆ ಕಾಲದಲ್ಲಿ ಯುವಕರು ಬೆಲ್ ಬಾಟಂ ಪ್ಯಾಂಟ್ ಧರಿಸಿ ಹಿಪ್ಪೀ ಸ್ಟೈಲ್ ಎಂದು ಉದ್ದ ಕೂದಲು ಬಿಡುವುದು ಫ್ಯಾಷನ್ ಆಗಿತ್ತು. ನಾನೂ ಹಾಗೆಯೇ ಇದ್ದೆ. ಹರಿಕತೆಗೆ ಬಂದ ತಬಲಾ ವಾದಕ ಚೀನಿಯೂ ಹಾಗೇ ಇದ್ದರು. ಹರಿಕತೆ ಪ್ರಾರಂಭವಾಗುವಾಗ ಅವರು ತಬಲಾ ಹಿಡಿದು ವೇದಿಕೆ ಬಲಭಾಗದಲ್ಲಿದ್ದರು. ಶ್ರುತಿಗಾಗಿ ಹಾರ್ಮೋನಿಯಂ ಇತ್ತು, ಅಂದು ಇನ್ನೊಬ್ಬ ಸಹಾಯಕ ಇರಲಿಲ್ಲ. ಏನೂ ಕೆಲಸವಿಲ್ಲದೆ ತಿರುಗುತ್ತ ಇದ್ದ ನನ್ನನ್ನು ಕರೆದು ಹಾರ್ಮೋನಿಯಂ ಶ್ರುತಿ ಹಿಡಿದು ನನ್ನ ಕೈಗೆ ಕೊಟ್ಟರು. ನನಗೆ ಪೇಟಿ ಹಿಡಿದು ತಿದಿ ಒತ್ತುವ ಕೆಲಸ ಸಿಕ್ಕಿತು.

ನಾನು ವೇದಿಕೆ ಬಲಭಾಗದಲ್ಲಿ ಕುಳಿತೆ, ಹೀಗೆ ವೇದಿಕೆ ಎರಡೂ ಭಾಗಗಳಲ್ಲಿ ಎರಡು ಹಿಪ್ಪಿಗಳು ಸ್ಥಾಪನೆಯಾಗಿ ನೋಡುವವರ ಕಣ್ಣಿಗೂ ಕೋಟಿ ಚೆನ್ನಯರಂತೆ ಕಂಡಿರಬಹುದು.

ಇದು ಹರಿಕಥೆ ದಾಸರ ಗಮನಕ್ಕೂ ಬಂತು. ಅವರು ನಂತರ ಕತೆಯ ಉದ್ದಕ್ಕೂ ಕಥೆ ಉಪಕತೆಗಳಲ್ಲಿ ಉದ್ದಕೂದಲಿನವರನ್ನು ಒಂದೇ ಸಮನೆ ತಮಾಷೆ ಮಾಡತೊಡಗಿದರು. ಅದು ಅರ್ಥವಾಗಿ ಜನರೂ ನಮ್ಮನ್ನು ನೋಡಿ ನಗಲಾರಂಭಿಸಿದರು. ಹೇಗೋ ಹರಿಕಥೆ ಮುಗಿಯಿತು. ಆದರೆ ಆ ನೆನಪಿನಲ್ಲೇ ನಾವಿಬ್ಬರೂ ಗೆಳೆಯರಾದೆವು. ಅದು ಇಂದಿಗೂ ಮುಂದುವರೆದಿದೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -5: ಗಣಪಯ್ಯ ಎಂಬ ಅನ್ನದಾತ, ಉದ್ಯೋಗದಾತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...