Homeಅಂಕಣಗಳುಸಕಲೇಶಪುರದ ವಿಶೇಷ ಚೇತನ ಮಕ್ಕಳ ಶಾಲೆಯ ಬಗ್ಗೆ ಒಂದಿಷ್ಟು ಮಾತುಗಳು: ಪ್ರಸಾದ್ ರಕ್ಷಿದಿ

ಸಕಲೇಶಪುರದ ವಿಶೇಷ ಚೇತನ ಮಕ್ಕಳ ಶಾಲೆಯ ಬಗ್ಗೆ ಒಂದಿಷ್ಟು ಮಾತುಗಳು: ಪ್ರಸಾದ್ ರಕ್ಷಿದಿ

- Advertisement -

ಕಳೆದುಹೋದ ದಿನಗಳು ಭಾಗ -2, ಅಧ್ಯಾಯ- 3.

ಗಣಪಯ್ಯನವರ ಕಾಲದಲ್ಲೇ ಪ್ರಾರಂಭವಾದ ಬಾಲನಿಕೇತನ ಅನಾಥಾಶ್ರಮ ನಡೆದು ಬಂದಿತ್ತು. ಹಲವಾರು ಮಕ್ಕಳು ಅದರಿಂದ ಬದುಕು ಕಟ್ಟಿಕೊಂಡರು. ಆ ಕುಟುಂಬಗಳ ಹಲವರ ಮಕ್ಕಳು ಇಂದು ಶಿಕ್ಷಕರಾಗಿ, ಇಂಜಿನಿಯರ್ ಗಳಾಗಿ, ಹಲವಾರು ಬೇರೆ ಬೇರೆ ಉದ್ಯೋಗ, ಉದ್ಯಮಗಳಲ್ಲಿ ತೊಡಗಿಕೊಂಡು ಸಮಾಜದಲ್ಲಿ ಮನ್ನಣೆ ಗಳಿಸಿದ್ದಾರೆ.

ರವೀಂದ್ರನಾಥರು ರೋಟರಿ ಸಂಸ್ಥೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದರು. ಸಕಲೇಶಪುರದಲ್ಲಿ 1980 ರಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭವಾಯಿತು. ಈ ಶಾಲೆಯ ಸ್ಥಾಪನೆ ಮತ್ತು ಕಟ್ಟಡ ನಿರ್ಮಾಣ ಇವೆಲ್ಲದರಲ್ಲೂ ರವೀಂದ್ರನಾಥರ ನೆರವು ಮತ್ತು ಪರಿಶ್ರಮವಿತ್ತು. ಈ ಎಲ್ಲ ಕೆಲಸಗಳಲ್ಲಿ ರೋಟರಿ ಸಂಸ್ಥೆಯ ಎಂ.ಎನ್.ಶಿವಪ್ರಸಾದ್, ನಂದೀಶ್ ಬಾಳ್ಳು, ಬಾಳ್ಳು ಜಗನ್ನಾಥ್, ಮುಂತಾದವರೆಲ್ಲರೂ ಜೊತೆಗೂಡಿದ್ದರು. ಆಗ ದೆಹಲಿಯಲ್ಲಿದ್ದ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳಾಗಿದ್ದ ಬೈಕೆರೆ ನಾಗೇಶ್ ಅವರ ಸಹಕಾರವೂ ಪ್ರಮುಖವಾಗಿತ್ತು.

ಇವೆಲ್ಲದರ ಬಗ್ಗೆ ಅರಿವಿದ್ದ ಅಂದಿನ ಹಾಸನ ಜಿಲ್ಲಾಧಿಕಾರಿಗಳು ರವೀಂದ್ರನಾಥರಲ್ಲಿ “ನೀವು ಯಾಕೆ ಸಕಲೇಶಪುರದಲ್ಲಿ ಒಂದು ವಿಕಲ ಚೇತನ ಮಕ್ಕಳ ಶಾಲೆಯನ್ನು ಮಾಡಬಾರದು? ಹಾಗೇನಾದರೂ ಮಾಡಿದರೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಕೊಡಿಸುತ್ತೇನೆ” ಎಂದರಂತೆ.

ರೋಟರಿ ವಿಶೇಷ ಚೇತನ ಮಕ್ಕಳ ಶಾಲೆ

ಅದರಿಂತ ಉತ್ತೇಜಿತರಾದ ರವೀಂದ್ರನಾಥರು ಸಕಲೇಶಪುರ ನಗರದಲ್ಲಿ ತಮ್ಮ ತಂದೆ ಗಣಪಯ್ಯನವರ ಹೆಸರಿನಲ್ಲಿ ವಿಕಲಾಂಗ ಮಕ್ಕಳ ಶಾಲೆಯನ್ನು ಪ್ರಾರಂಭಿಸಿದರು. ಮೊದಲಿಗೆ ಸಕಲೇಶಪುರದ ಸುಭಾಷ್ ಮೈದಾನ ಹತ್ತಿರದ ಒಂದು ಕೊಠಡಿಯಲ್ಲಿ ಏಳು ಜನ ವಿದ್ಯಾರ್ಥಿಗಳು ಮತ್ತು ನಾಲ್ಕು ಜನ ಸಿಬ್ಬಂದಿಯೊಂದಿಗೆ ಶಾಲೆ ಪ್ರಾರಂಭವಾಯಿತು. ಕೆಲವು ಸಮಯದ ನಂತರ ಸಕಲೇಶಪುರದ ಅಂದಿನ ಉಪವಿಭಾಗಾಧಿಕಾರಿಗಳಾಗಿದ್ದ ವಂದಿತಾ ಶರ್ಮ ಅವರು ನಗರದ ಮಧ್ಯಬಾಗದಲ್ಲಿದ್ದ ತಾಲ್ಲೂಕು ಅಭಿವೃದ್ಧಿ ಮಂಡಳಿಗೆ ಸೇರಿದ್ದ ಕಟ್ಟಡವೊಂದನ್ನು ತಾತ್ಕಾಲಿಕವಾಗಿ ಕೊಟ್ಟರಲ್ಲದೆ ಮುಂದೆ ಕಟ್ಟಡವನ್ನು ಕಟ್ಟಿಕೊಳ್ಳಲು ಪಕ್ಕದ ಕೌಡಳ್ಳಿ ಗ್ರಾಮದಲ್ಲಿ ಸ್ಥಳವನ್ನೂ ಮಂಜೂರು ಮಾಡಿದರು. ವಂದಿತಾ ಶರ್ಮ ಈಗ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳಾಗಿದ್ದಾರೆ.

ಹೀಗೇ ಪ್ರಾರಂಭವಾದ “ಎನ್.ಕೆ.ಗಣಪಯ್ಯ ವಿಕಲಾಂಗ ಮಕ್ಕಳ ಪಾಠಶಾಲೆ” ಮೊದಲಿಗೆ ಎಲ್ಲ ವಿಕಲಾಂಗ ಮಕ್ಕಳಿಗೆಂದು ಪ್ರಾರಂಭವಾಯಿತಾದರೂ ನಂತರ ಬೇರೆ ರೀತಿಯ ಅಂಗವಿಕಲತೆಯ ಮಕ್ಕಳಿಗೆ ಸಾಮಾನ್ಯ ಶಾಲೆಗಳಲ್ಲಿಯೂ ವಿದ್ಯೆ ಕಲಿಯುವುದು ಸಾಧ್ಯವೆಂದರಿತು, ಈ ಶಾಲೆಯನ್ನು ವಿಶೇಷವಾಗಿ ಕಿವುಡು ಮತ್ತು ಮೂಕ ಮಕ್ಕಳಿಗೆಂದೇ ರೂಪಿಸಲಾಯಿತು.

ಆಗ ಈ ಶಾಲೆಗೆ ಬೇಕಾದ ರೂಪು ರೇಷೆ, ಅಲ್ಲಿನ ಮಕ್ಕಳ ತಪಾಸಣೆ ಹಾಗೂ ಶಿಕ್ಷಕರ ತರಭೇತಿಗೆ ಅನುಕೂಲ ಮಾಡಿಕೊಟ್ಟವರು ಮೈಸೂರಿನ ವಾಕ್ ಶ್ರವಣ ಸಂಸ್ಥೆಯ ಸಂಸ್ಥಾಪಕರೂ ಹೆಸರಾಂತ ರಂಗ ಕರ್ಮಿಗಳೂ ಆದ  ನ. ರತ್ನ. ಅವರು ಸ್ವತಃ ಸಕಲೇಶಪುರಕ್ಕೆ ಬಂದು ಇಲ್ಲಿನ ಕೆಲಸಗಳಿಗೆ ಮಾರ್ಗದರ್ಶನ ಮಾಡಿದರಲ್ಲದೆ ಹಾರ್ಲೆ ಎಸ್ಟೇಟಿಗೂ ಬಂದು ಉಳಿದಿದ್ದರು. ಆ ವಿವರಗಳನ್ನು ಸ್ವತಃ ರತ್ನ ಅವರೇ ಈ ಲೇಖಕನಲ್ಲಿ ಒಮ್ಮೆ ಹಂಚಿಕೊಂಡರು.

1988ರಲ್ಲಿ ಈ ಶಾಲೆಯನ್ನು ಕರ್ನಾಟಕದ ರಾಜ್ಯಪಾಲರಾಗಿದ್ದ ವೆಂಕಟಸುಬ್ಬಯ್ಯನವರು ಉದ್ಘಾಟಿಸಿದರು. ಆಗ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಡಿ.ದೇವೇಗೌಡರು ಅತಿಥಿಗಳಾಗಿದ್ದರು. ನಂತರ ಶಾಲೆಗೆ ಹಲವರು ಜನರ ಸಹಾಯ ಸಹಕಾರ ನಿರಂತರವಾಗಿ ದೊರೆತರೂ ಇಂದಿಗೂ ರವೀಂದ್ರನಾಥ ಮತ್ತು ಕುಟುಂಬದವರ ಪೋಷಕರಾಗಿಯೇ ಮುಂದುವರೆದಿದ್ದಾರೆ. ಆ ಸಮಯದಲ್ಲಿ ಕರ್ನಾಟಕದ ದೊಡ್ಡ ಕಾಫಿ ಬೆಳೆಗಾರ ಕಂಪನಿಗಳಲ್ಲಿ ಒಂದಾದ ಕಾಫಿ ಲ್ಯಾಂಡ್ಸ್ ಸಂಸ್ಥೆಯ ಆಡಳಿತ ಕಛೇರಿ ಸಕಲೇಶಪುರದಲ್ಲಿ ಇತ್ತು. ಕಾಫಿ ಲ್ಯಾಂಡ್ಸ್‌ನ ತೋಟಗಳನ್ನು ಟಾಟಾ ಸಮೂಹದ ಕನ್ಸಾಲಿಡೇಟೆಡ್ ಕಾಫಿ ಕಂಪನಿ ಖರೀದಿಸಿತು. ಆಗ ಕಾಫಿಲ್ಯಾಂಡ್‌ನ ಮ್ಯಾನೇಜರ್ ಆಗಿದ್ದ ವಿಠ್ಠಲ ರಾವ್ ರವೀಂದ್ರನಾಥರ ಉತ್ತಮ ಗೆಳೆಯರೂ ಹೌದು. ವಿಠ್ಠಲರಾವ್ ಅವರು ಆಸಕ್ತಿ ವಹಿಸಿ ಪ್ರಯತ್ನ ಮಾಡಿ ಕಾಫಿಲ್ಯಾಂಡ್ ಸಂಸ್ಥೆ ಮಾರಾಟವಾಗುವ ಸಂದರ್ಭದಲ್ಲಿ ಎನ್.ಕೆ,ಗಣಪಯ್ಯ ವಿಕಲಚೇತನ ಮಕ್ಕಳ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹದಿನೈದು ಲಕ್ಷ ರೂಪಾಯಿಗಳನ್ನು  ಕಾಫಿಲ್ಯಾಂಡ್ ಸಂಸ್ಥೆಯಿಂದ ಕೊಡಿಸಿದರು. ಅದರಿಂದಾಗಿ ಶಾಲೆಗೆ ಒಂದು ಸುಸಜ್ಜಿತ ಕಟ್ಟಡ ನಿರ್ಮಾಣವಾಯಿತು.

ನಂತರ ಶಾಲೆಯ ಹೆಸರು ಮೊದಲಿನಂತೆ ಮುಂದುವರೆದರೂ ಸಂಸ್ಥೆಯ ಹೆಸರನ್ನು Coffee Lands -Rotary Academy for the Physically handicapped ಎಂದು ಕರೆಯಲಾಯಿತು.

ವಿಶೇಷ ಚೇತನ ಶಾಲೆ ಪ್ರಾಂಶುಪಾಲರು ಮತ್ತು ಅಧ್ಯಾಪಕರು

ಇಂದು ಈ ಶಾಲೆಯಲ್ಲಿ ಕಲಿತ ನೂರಾರು ಮಕ್ಕಳು ಸ್ವಂತ ಬದುಕು ಕಟ್ಟಿಕೊಂಡಿದ್ದಾರೆ. ಬೇರೆ ಉದ್ಯೋಗಗಳಲ್ಲಿ ಇದ್ದಾರೆ. ಇಂಜಿಯರಿಂಗ್ ಪದವಿಯನ್ನೂ ಗಳಿಸಿದ್ದಾರೆ. ಚಿತ್ರಕಲಾವಿದರಾಗಿದ್ದಾರೆ. ಕೆಲವರು ಅಲ್ಲೇ ಶಿಕ್ಷಕರಾಗಿಯೂ ದುಡಿಯುತ್ತಿದ್ದಾರೆ.

ಇಂದು ಈ ಶಾಲೆಯಲ್ಲಿ ಸುಸಜ್ಜಿತವಾದ ಹಾಸ್ಟೆಲ್, ಅಡುಗೆ ಮನೆ, ಭೋಜನ ಗೃಹ, ತರಗತಿ ಕೊಠಡಿಗಳು, ಸಭಾಂಗಣ, ಪ್ರಯೋಗಶಾಲೆ ಪಾಠೋಪಕರಣಗಳು ಮತ್ತು ಪೀಠೋಪಕರಣಗಳು, ಹೀಗೆ ಎಲ್ಲ ಸೌಕರ್ಯಗಳಿವೆ. ತರಭೇತಾದ ನುರಿತ ಶಿಕ್ಷಕರಿದ್ದಾರೆ.

ಸದ್ಯದಲ್ಲಿ 84 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, ಒಟ್ಟು 17 ಮಂದಿ ಸಿಬ್ಬಂದಿ ಇದ್ದಾರೆ. ಇವೆಲ್ಲವೂ ಕೂಡಿ ಇಂದು ಈ ಶಾಲೆ ರಾಜ್ಯದಲ್ಲಿಯೇ ಉತ್ತಮ ಶಾಲೆಗಳಲ್ಲಿ ಒಂದೆನಿಸಿದೆ.

ಸಕಲೇಶಪುರದಲ್ಲಿ ಒಮ್ಮೆ ಈ ಶಾಲೆಯ ಸಹಾಯಾರ್ಥ ಚಲನಚಿತ್ರ ಪ್ರದರ್ಶನವೊಂದು ನಡೆಯಿತು. ರವೀಂದ್ರನಾಥರ ಹಿರಿಯ ಮಗ ಎನ್.ಆರ್.ಸುಧೀರ್ ಇದರ ಪ್ರಾಯೋಜಕರಾಗಿದ್ದರು. ಅಂದು ಪ್ರದರ್ಶನಕ್ಕಾಗಿ ಈ ಶಾಲೆಯ ಮಕ್ಕಳಿಗೆ ನಮ್ಮ ರಂಗತಂಡದ ಕೆಲವರು ಸೇರಿ ಒಂದು ನಾಟಕವನ್ನು ಕಲಿಸಿದೆವು. ನಾಟಕವನ್ನು ನಾನು ಬರೆದಿದ್ದೆ. ನಾಟಕದ ಹೆಸರು “ಮಾತು ಬೆಳ್ಳಿ ಮೌನ ಬಂಗಾರ”. ಮಾತು ಬಾರದ ಮಕ್ಕಳು ಈ ನಾಟಕವನ್ನು ಅದ್ಭುತವಾಗಿ ನಟಿಸಿದರು.

ನಂತರದ ದಿನಗಳಲ್ಲಿ ಈ ಶಾಲೆಯ ಶಿಕ್ಷಕರೊಬ್ಬರು ನಮ್ಮ ರಂಗ ತಂಡದಲ್ಲಿಯೂ ನಟಿಸಿದರು. ರಂಗಾಯಣದ ನಟ- ನಿರ್ದೇಶಕ ಹುಲುಗಪ್ಪ ಕಟ್ಟೀಮನಿಯವರ ನಿರ್ದೇಶನದ “ಅರಹಂತ” ನಾಟಕ. (ರಚನೆ: ರಂಗಾಯಣದವರೇ ಆದ ರಾಮನಾಥ ಅವರದು)

ರೋಟರಿ ಶಾಲೆ ಮತ್ತು ಬಯಲು ರಂಗ ಮಂದಿರ

ಈ ನಾಟಕ ಕರ್ನಾಟಕದಾದ್ಯಂತ ಹಲವು ಪ್ರದರ್ಶನಗಳನ್ನು ಕಂಡಿತು. ಇದೂ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಸಕಲೇಶಪುರದ ರೋಟರಿ ಸಂಸ್ಥೆ ನಮ್ಮೊಡನೆ, ರಂಗ ತರಭೇತಿಯಲ್ಲಿ, ರಂಗೋತ್ಸವಗಳಲ್ಲಿ ಭಾಗಿಯಾಗುತ್ತ  ಬಂದಿದೆ.

ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ನೀನಾಸಂ ತಿರುಗಾಟದ ನಾಟಕಗಳನ್ನು ಸಕಲೇಶಪುರದಲ್ಲಿ ಪ್ರದರ್ಶಿಸಲಾಗಿದೆ. ಕಿನ್ನರ ಮೇಳ ತುಮರಿ, ಜನಮನದಾಟ ಹೆಗ್ಗೋಡು ಮುಂತಾದ ರಂಗ ತಂಡಗಳ ಪ್ರದರ್ಶನವಲ್ಲದೆ ನಮ್ಮ ಜೈಕರ್ನಾಟಕ ಸಂಘವೂ ರೋಟರಿ ಶಾಲೆಯಲ್ಲಿ ರಂಗ ಪ್ರದರ್ಶನ ನೀಡಿದೆ. ರೋಟರಿ ಶಾಲೆಯ ಆವರಣದಲ್ಲಿ ಒಂದು ಬಯಲು ರಂಗ ಮಂದಿರವೂ ನಿರ್ಮಾಣವಾಗಿದೆ. ಈ ಎಲ್ಲ ಕೆಲಸಗಳಲ್ಲಿ ರೋಟರಿ ಸಂಸ್ಥೆಯ ಎನ್.ಎಂ.ಶಿವಪ್ರಸಾದ್, ಬಿಟ್ಟೇಶ್ವರ ಪ್ರಸನ್ನ, ಶಾಪ್ ಲಿಂಗರಾಜ್, ಡಾ.ಸುದರ್ಶನ್, ಎನ್.ಪಿ. ಮಲ್ಲೇಶ್ ಮುಂತಾದವರ ಕೊಡುಗೆ ದೊಡ್ಡದು.

ಈ ಹಿಂದೆ ಉಲ್ಲೇಖವಾಗಿರುವ, ದಾನಿಗಳಿಂದ ನಿರ್ಮಾಣವಾಗಿರುವ ಹಲವಾರು ಸಂಸ್ಥೆಗಳು ಮತ್ತು ಕಟ್ಟಡಗಳಲ್ಲದೆ ಮಂಜ್ರಾಬಾದ್ ವಲಯದಲ್ಲಿ ಇನ್ನೂ ಹಲವು ನಿರ್ಮಾಣಗಳು ಸಮಾಜಮುಖಿ ದಾನಿಗಳಿಂದ ಆಗಿವೆ. ಅವುಗಳಲ್ಲಿ ಸಕಲೇಶಪುರದ ಹಾಡ್ಯ ಸುಬ್ಬೇಗೌಡ ಪುರಭವನ, ಬಿ.ಎಸ್. ನಂಜಪ್ಪ- ರೋಟರಿ ಮಕ್ಕಳ ಗ್ರಂಥಾಲಯ, ನಂಜಮ್ಮ ಮಹಿಳಾ ಸಮಾಜ, ಬಾಳ್ಳುಪೇಟೆ ಸಿದ್ದಣ್ಣಯ್ಯ ಪ್ರೌಢಶಾಲೆ, ಎಸ್. ಆಲಪ್ಪ ಶೆಟ್ಟಿ ಸ್ಕೌಟ್ ಮತ್ತು ಗೈಡ್ ಕಟ್ಟಡ ಮುಂತಾದವು ಪ್ರಮುಖವಾದವು.

* ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು -31: ಕರ್ನಾಟಕ ಕಾಫಿ ಮತ್ತು ಗಣಪಯ್ಯನವರ ನಂಟು

ಪ್ರಸಾದ್ ರಕ್ಷಿದಿ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial