ಕಳೆದುಹೋದ ದಿನಗಳು- 11
1971 ರನಂತರ ಗಣಪಯ್ಯನವರಿಗೆ ರಾಜಕಾರಣದಲ್ಲಿ ಭ್ರಮನಿರಸನವಾದಂತಿತ್ತು. ಅದರಿಂದ ವಿಮುಖರಾಗದೆ ಮುಂದುವರೆದಿದ್ದರೂ ಕೃಷಿಯಲ್ಲಿ ಹೆಚ್ಚು ತೊಡಗಿಕೊಂಡರು. ಕಾಫಿ ಕೃಷಿ, ನನ್ನ ತಿಳುವಳಿಕೆಯಂತೆ ಅತ್ಯಂತ ವೈಜ್ಞಾನಿಕವಾಗಿ ನಿರೂಪಿಸಲ್ಪಟ್ಟ ಪ್ಲಾಂಟೇಷನ್ ಕೃಷಿ. ಇದಕ್ಕೆ ಬ್ರಿಟಿಷರು ಕಾರಣ. ಆದ್ದರಿಂದಲೇ ಇಂದಿಗೂ ಕಾಫಿತೋಟಗಳಲ್ಲಿ ಪ್ರತಿದಿನ ಮಳೆ ಮಾಪನದಿಂದ ಹಿಡಿದು ಕೃಷಿ ಸಂಬಂಧಿ ಎಲ್ಲಾ ಚಟುವಟಿಕೆಗಳೂ ಹೆಚ್ಚು ವೈಜ್ಞಾನಿಕವಾಗಿ ಮುಂದುವರೆದಿದೆ. ಇಂದಿಗೂ ಯಾವುದೇ ಹೊಸ ಆವಿಷ್ಕಾರಗಳು ಬರಲಿ ಕಾಫಿ ಬೆಳೆಗಾರರರು ಅದರ ಪ್ರಾಯೋಗಿಕ ಅಧ್ಯಯನ ಮತ್ತು ಅಳವಡಿಕೆಯಲ್ಲಿ ಮುಂಚೂಣಿಯಲ್ಲೇ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪರಿಸರ ಮತ್ತು ಹವಾಮಾನಗಳಲ್ಲಿ ಆದ ದೊಡ್ಡ ಬದಲಾವಣೆ, ಮತ್ತು ದಶಕಗಳಿಂದ ನೆಲಕಚ್ಚಿನಿಂತ ಬೆಲೆ, ಹಾಗೂ ಇತರ ಸಂಘಟನಾತ್ಮಕ ಸಂಕಷ್ಟಗಳಿಂದ ಬೆಳೆಗಾರರು ಬಸವಳಿದಿದ್ದಾರೆ ವಿನಃ ಹೊರಗಿನವರು ಕಂಡಂತೆ ಐಷಾರಾಮೀ ಜೀವನದಿಂದ ಅಲ್ಲ. ಹೊರಗಿನವರಿಗೆ ಕಾಫೀ ಬೆಳೆಗಾರರ ಬಗ್ಗೆ ಇಂದಿಗೂ ಐಷಾರಾಮೀ ದೊರೆಗಳು ಎಂಬ ಭಾವನೆ ಇದೆ. ಅದಕ್ಕೆ ಕಾರಣ ಅವರ ಜೀವನ ಶೈಲಿ ಅಷ್ಟೇ.
ಕಾಫಿ ಬೆಳೆಯಲ್ಲಿ, ತೋಟ ಮಾಡುವಾಗ, ಗಿಡ ನೆಡಲು ಸಾಲು ಮಾಡುವಾಗ, ಗುಂಡಿ ತೆಗೆಯುವಾಗ, ಮುಚ್ಚುವಾಗ, ಗಿಡ ನೆಡುವಾಗ, ನಂತರದ ಕೃಷಿ ಚಟುವಟಿಕೆಗಳು ಎಲ್ಲವೂ ಕ್ರಮಬದ್ಧವಾಗಿ ನಿರ್ದೇಶಿಸಲ್ಪಟ್ಟಿವೆ. ಹಾಗೇ ಕಾಫಿಗಿಡಗಳ ಪ್ರತಿಯೊಂದು ಭಾಗವನ್ನೂ ವಿಶಿಷ್ಟವಾಗಿ ಹೆಸರಿಸಲ್ಪಟ್ಟಿದೆ.
ಒಂದು ಕಾಫಿ ಗಿಡವನ್ನು ಚಿಗುರು ಬಿಡಿಸುವಾಗ (Pruning ಮಾಡುವಾಗ) ಗಿಡ ಚಿಗುರುಗಳಲ್ಲಿ ಮತ್ತು ಕವಲುಗಳಲ್ಲಿ ಕಂಬ ಚಿಗುರು ಅಥವಾ ಕಂಬಗುಡಿ, ಏಣಿಕಾಲು, ಅರ್ಧಡಿ ರೆಕ್ಕೆ, ನೂಲು ರೆಕ್ಕೆ, ಗಂಡು ರೆಕ್ಕೆ, ಅಡಿರೆಕ್ಕೆ, ಜೋಲು ರೆಕ್ಕೆ, ಬಂದಣಿಕೆ, ಕುದುರೆಮುಖ, ಮುಂತಾದ ಹೆಸರುಗಳಿವೆ.
ಗಿಡಗಳ ಸಾಲುಗಳಿಗೂ ಉದ್ದ ಸಾಲು, ಅಡ್ಡಸಾಲು, ಕೊರೆಸಾಲು, ನಿಜಸಾಲು ಎಂಬ ವ್ಯತ್ಯಾಸಗಳಿವೆ. ಗಿಡನೆಡುವ ಗುಂಡಿಗಳಿಗೆ ಸೇರುಗುಂಡಿ, ಟಿನ್ ಗುಂಡಿ, ದಸಿ ಗುಂಡಿ ಎಂಬ ಪದ್ಧತಿಗಳಿವೆ ತೋಟದಲ್ಲಿ.
ನೀರಿನ ಮತ್ತ ಶೈತ್ಯದ ಪ್ರಮಾಣ ನಿಯಂತ್ರಿಸಲು, ಉದ್ದಚರಂಡಿ, ಅಡ್ಡ ಚರಂಡಿ, ಸ್ಟಂಪ್ ರಾಟ್ ಗುಂಡಿ, ಕತ್ತರಿ ಗುಂಡಿ, ತೊಟ್ಳುಗುಂಡಿ ಎಂಬ ಕ್ರಮಗಳಿವೆ. ತೋಟದ ನೆರಳು ನಿಯಂತ್ರದಲ್ಲಿಯೂ ಹಲವು ವಿಧಗಳಿದ್ದು, ಅದಕ್ಕೆಂದೇ ವಿವಿಧ ಹೆಸರುಗಳಿವೆ.
ಹೊಸ ಮತ್ತು ಹಳೆಯ ತೋಟಗಳಲ್ಲಿ ಮಾಡುವ ಅಗತೆಯಲ್ಲಿ ಕಾಡಗತೆ, ಮುಚ್ಚಗತೆ, ಕೊಚ್ಚಗತೆ, ಸುತ್ತಗತೆ, ಗುಣಿಸೇವೆ, ಧೂಳಗತೆ ಮುಂತಾದ ಅಗತೆಯ ಕ್ರಮಗಳಿವೆ.
ಇದರಿಂದಾಗಿ ತೋಟದ ಉಸ್ತುವಾರಿ ಮತ್ತು ಕೆಲಸವನ್ನು ನಿರ್ದೇಶಿಸುವ ಕ್ರಮ ಸುಲಭವಾಗುತ್ತದೆ.
ಕೃಷಿಯಲ್ಲಿ ಗಣಪಯ್ಯವರ ಅನುಭವ ಅಪಾರವಾದದ್ದಷ್ಟೇ ಅಲ್ಲ ಕೃಷಿ ವಿಧಾನಗಳೂ ಅವರ ಪರಿಸರ ಪ್ರಜ್ಞೆಯ ದ್ಯೋತಕವೂ ಆಗಿತ್ತು.
ಹೊಸ ತೋಟ ಮಾಡುವಾಗ ಕಾಫಿ ಗಿಡನೆಡಲು ಗುಂಡಿ ತೆಗೆದ ನಂತರ ಅದೇ ಸಾಲಿನಲ್ಲಿ ಮುಂದಕ್ಕೆ ಇನ್ನೊಂದು ಗುಂಡಿಯ ತನಕ ಮೇಲ್ಮಣ್ಣನ್ನು ಹೆರೆದು ಗುಂಡಿಗೆ ತುಂಬಿಸಿ ಇಡುವುದು ಕ್ರಮ. ಇದಕ್ಕೆ ‘ಬೀದಿ ಹೆರೆದು ಮುಚ್ಚುವುದು’ ಎಂದು ಹೆಸರು. ಹಳೆಯ ತೋಟವಾದರೆ ಗುಂಡಿಯ ಸುತ್ತ ಹೆರೆದು ಮುಚ್ಚುವುದು. ತುಂಬಿದ ಮಣ್ಣು ಗುಂಡಿ ತುಂಬಿ ಮೇಲೆ ಗುಪ್ಪೆಯಂತೆ ಇರಬೇಕು. ಇದು ಮಳೆನೀರು ಗುಂಡಿಗೆ ತುಂಬದಂತೆ ಇದು ತಡೆಯುತ್ತದೆ. ಕೆಲವು ದಿನಗಳ ನಂತರ ಮಳೆ ಸ್ವಲ್ಪ ಕಡಿಮೆಯಾಗಿ ಹದ ಮಳೆ ಇರುವಾಗ ಗಿಡ ನೆಡುವುದು. ಆಗ ಈ ಗುಪ್ಪೆ ಮಣ್ಣನ್ನು ಎಳೆದು ಮಟ್ಟ ಮಾಡಿ ನಂತರ ಗಿಡನೆಡುತ್ತಾರೆ.
ಹಾಗೆ ಮಟ್ಟಮಾಡುವಾಗೆಲ್ಲ ಗಣಪಯ್ಯ “ಹೆಚ್ಚಿನ ಮಣ್ಣನ್ನು ಗುಂಡಿಯ ಮೇಲಕ್ಕೆ ತಳ್ಳಿ. ಕೆಳಗೆಳೆಯಬೇಡಿ, ನೀವು ಮಣ್ಣನ್ನು ಒಂದು ಅಡಿ ಮೇಲಕ್ಕೆ ತಳ್ಳಿದಿರೆಂದರೆ ಅರಬ್ಬೀ ಸಮುದ್ರದಿಂದ ಒಂದಡಿ ದೂರ ತಳ್ಳಿದಿರಿ ಅಂತ ತಿಳ್ಕೊಳಿ. ನಮ್ಮ ಕೃಷಿಯಿಂದಾಗಿ ಕೋಟಿಗಟ್ಟಲೆ ಟನ್ ಮಣ್ಣು ಅರಬ್ಬೀ ಸಮುದ್ರ ಸೇರ್ತಾ ಇದೆ ಅದನ್ನ ಕಡಿಮೆ ಮಾಡ್ಬೇಕು” ಎನ್ನುವರು.
ಬೆಳೆಗಾರರ ಸಂಘಟನೆಗಳಾದ, ದಕ್ಷಿಣಭಾರತ ಪ್ಲಾಂಟರ್ಸ್ ಒಕ್ಕೂಟ (UPASI) ಕರ್ನಾಟಕ ಬೆಳೆಗಾರರ ಸಂಘ (KPA) ನಂತರದ ದಿನಗಳಲ್ಲಿ ಹಾಸನ ಜಿಲ್ಲಾ ಬೆಳೆಗಾರರ ಸಂಘ (HDPA). ಮುಂತಾದವುಗಳ ವತಿಯಿಂದ ಕಾರ್ಮಿಕ ಕ್ರೀಡಾ ಕೂಟಗಳು ನಡೆಯುತ್ತಿದ್ದವು, ಹಾರ್ಲೆ ಸಮೂಹದ ಕಾರ್ಮಿಕರು ಇದರಲ್ಲೆಲ್ಲ ಭಾಗವಹಿಸತೊಡಗಿದರು. ಕೆಲವು ಸಲ ಚಾಂಪಿಯನ್ ಶಿಪ್ ಕೂಡಾ ಪಡೆದರು. ಆದರೆ ನಂತರದ ವರ್ಷಗಳಲ್ಲಿ ಕೆಲವು ತೋಟಗಳವರು ಇದನ್ನು ಪ್ರತಿಷ್ಟೆಯ ಪ್ರಶ್ನೆಯಾಗಿಸಿಕೊಂಡು ಹೊರಗಿನ ಕ್ರೀಡಾ ಪಟುಗಳನ್ನು ಕರೆದು ತಂದು ಆಡಿಸಿ ಬಹುಮಾನ ಗಳಿಸಲು ಪ್ರಾರಂಭಿಸಿದರು. ಇದರಿಂದ ತೋಟ ಕಾರ್ಮಿಕರ ಉನ್ನತಿಯ ಉದ್ದೇಶವೇ ವಿಫಲವಾಯಿತು. ಇದರಿಂದ ಮುಂದೆ ಹಾರ್ಲೆ ಎಸ್ಟೇಟ್ ಭಾಗವಹಿಸಲು ಹಿಂಜರಿಯಿತು. ಈಗ ಈ ಕ್ರೀಡಾಕೂಟಗಳೇ ನಿಂತುಹೋಗಿವೆ.
ಗಣಪಯ್ಯನವರ ಇನ್ನೊಂದು ಆಸಕ್ತಿಯ ವಿಷಯ ಹೂದೋಟದ ನಿರ್ಮಾಣ. ಇದಕ್ಕೂ ಅವರು ಆಯ್ಕೆ ಮಾಡಿಕೊಂಡದ್ದು ತಮ್ಮ ಮನೆಯ ಅಂಗಳವನ್ನಲ್ಲ. ತಮ್ಮ ತೋಟದ ಪಕ್ಕದ ಎತ್ತರದ ಗುಡ್ಡದ ಬೆಂಬಳೆ ಎಂಬ ಪ್ರದೇಶವನ್ನು. ಅಲ್ಲಿ ಒಂದು ದೊಡ್ಡಈಜು ಕೊಳವನ್ನು ನಿರ್ಮಾಣ ಮಾಡಿ ಇವರ ತೋಟದ ಒಂದು ಕೆರೆಯಿಂದ ಸುಮಾರು ಮುನ್ನೂರು ಅಡಿ ಮೇಲಕ್ಕೆ ನೀರನ್ನು ಪಂಪ್ ಮಾಡಿ ನೀರು ತುಂಬಿಸಬೇಕಿತ್ತು. ಹೀಗೆ ತುಂಬಿದ ನೀರನ್ನು ಖಾಲಿ ಮಾಡುವಾಗ ಅದು ನೀರಾವರಿಗೆ ಬಳಕೆಯಾಗುತ್ತಿತ್ತು. ಹೀಗೆ ನೀರು ತುಂಬಲು ಐವತ್ತು ಹೆಚ್.ಪಿ.ಯ ಪಂಪ್ ಬಳಕೆಯಾಗುತ್ತಿತ್ತು. ಆ ಈಜುಕೊಳದ ಸುತ್ತ ಉದ್ಯಾನವನ, ಸ್ನಾನದ ಕೊಠಡಿಗಳು, ಶೌಚಾಲಯ ನಿರ್ಮಾಣವಾದವು.

ಇದು ಮುಂದೆ ‘ಹಾರ್ಲೆ ಪಾರ್ಕ್’ ಎಂದು ಪ್ರಖ್ಯಾತವಾಯಿತು. ಇಲ್ಲಿ ನಿಂತರೆ ಕೆಳಗೆ ಕುಂಬರಡಿ ಗ್ರಾಮ. ಸುತ್ತ ಪಶ್ಚಿಮ ಘಟ್ಟದ ಬೆಟ್ಟಸಾಲು. ಪೂರ್ವದಲ್ಲಿ ಮಂಜ್ರಾಬಾದ್ ಕೋಟೆ, ದಕ್ಷಿಣಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ, ಪಕ್ಕದಲ್ಲೇ ಪಶ್ಚಿಮದಲ್ಲಿಎತ್ತಿನ ಹೊಳೆ ಹುಟ್ಟುವ ಮೂರ್ಕಣ್ಣು ಗುಡ್ಡಸಾಲು, ಕಾಡುಮನೆ ಟೀ ಎಸ್ಟೇಟ್, ಜೇನುಕಲ್ಲು ಗುಡ್ಡ, ಮೂಡಿಗೆರೆಯ ಕಿರುಗುಂದ ಗವಿಗುಡ್ಡ. ಉತ್ತರದಲ್ಲಿ ಚಿಕ್ಕಮಗಳೂರಿನ ಮುಳ್ಳುಯ್ಯನ ಗಿರಿ ಸಾಲು ಎಲ್ಲವೂ ಕಾಣಿಸುತ್ತದೆ.
ಇದನ್ನು ಸುಸ್ಥಿತಿಯಲ್ಲಿಡಲು ಇಬ್ಬರು ಖಾಯಂ ಕೆಲಸಗಾರರು ಇರುತ್ತಿದ್ದರು, ಪಂಪಿನ ವಿದ್ಯುತ್ ಬಿಲ್ ಎಲ್ಲವೂ ಇವರ ಸ್ವಂತ ಖರ್ಚಿನಿಂದ. ಇಷ್ಟೆಲ್ಲ ಖರ್ಚು ಮಾಡಿ ನಿರ್ಮಾಣ ಮಾಡಿದ ಇದನ್ನು ಗಣಪಯ್ಯ ತಮ್ಮ ಖಾಸಗಿ ಉದ್ಯಾನವನವನ್ನಾಗಿ ಇಟ್ಟುಕೊಳ್ಳಲಿಲ್ಲ. ಪಾರ್ಕನ್ನು ಸಾರ್ವಜನಿಕ ಬಳಕೆಗೆ ತೆರೆದಿಟ್ಟರು. ನಂತರ ಈ ಸ್ಥಳ ವರ್ಷವಿಡೀ ಹಾಸನ ಜಿಲ್ಲೆಯ ಜನರಿಗೆ ವಿಹಾರ ಸ್ಥಳವಾಯಿತು. ಯಾರಿಗೂ ಯಾವುದೇ ಶುಲ್ಕವಿಲ್ಲ ಎಲ್ಲವೂ ಉಚಿತ.
ಹಾರ್ಲೆ ಮತ್ತು ಸುತ್ತಮುತ್ತ ಸಿನಿಮಾ ಶೂಟಿಂಗ್ ನಡೆಯತೊಡಗಿತು. ರಾಜ್ ಕುಮಾರ್, ದಿನೇಶ್ ಅವರಿಂದ ಹಿಡಿದು ರವಿಚಂದ್ರನ್ ತನಕ, ಹಲವಾರು ಜನರ ಚಿತ್ರಗಳು ಇಲ್ಲಿ ಚಿತ್ರೀಕರಣವಾಗಿವೆ. ಹಿಂದಿ, ತಮಿಳು, ತೆಲುಗು ಚಿತ್ರಗಳ ಚಿತ್ರೀಕರಣ ನಡೆದಿದೆ. ನೂರಾರು ಖ್ಯಾತ ನಾಮರ ಸಿನಿಮಾಗಳು ಇಲ್ಲಿ ಚಿತ್ರಿಸಲ್ಪಟ್ಟಿವೆ.
ಮುಂದೆ ಸಕಲೇಶಪುರದಲ್ಲಿ ಬಾಲನಿಕೇತನ ಎಂಬ ಅನಾಥಾಶ್ರಮ ಪ್ರಾರಂಭಿಸಿದ ನಂತರ ಸಿನಿಮಾ ಶೂಟಿಂಗಿಗೆ ಬಂದವರಿಗೆ ಮಾತ್ರ ಶುಲ್ಕ ನಿಗದಿ ಮಾಡಿ ಆ ಹಣವನ್ನು ಬಾಲನಿಕೇತನಕ್ಕೆ ಬಳಸತೊಡಗಿದರು.
ಪರಿಸರಕ್ಕೆ ಗಣಪಯ್ಯನ ಮತ್ತೊಂದು ಕೊಡುಗೆ ಗಿಡನೆಡುವುದು. ಪ್ರತಿವರ್ಷ ಸಾವಿರಾರು ಗಿಡಗಳನ್ನು ಮಾಡಿ ಬರಿಯ ತಮ್ಮ ತೋಟದಲ್ಲಿ ಮಾತ್ರವಲ್ಲ ನೂರಾರು ಜನ ರೈತರಿಗೆ ಗಿಡಗಳನ್ನು ನೆಡಲು ಕೊಡುವರು. ಅರಣ್ಯ ಇಲಾಖೆ ಗಿಡಗಳನ್ನು ಬೆಳೆಯಲು ಪ್ರಾರಂಭಿಸಿದ ನಂತರ ಸಕಲೇಶಪುರದ ಅರಣ್ಯ ಇಲಾಖೆ ನರ್ಸರಿಗಳಲ್ಲಿ ಗಣಪಯ್ಯನವರ ಕೋಟಾ ಎಂದೇ ಕೆಲವು ಸಾವಿರ ಗಿಡಗಳು ತಯಾರಾಗುತ್ತಿದ್ದವು. ಅವುಗಳನ್ನು ತಮ್ಮ ಟ್ರಾಕ್ಟರ್ ನಲ್ಲಿ ಸಾಗಿಸಿ ಹಂಚುತ್ತಿದ್ದರು. ಇದರ ಅರಿವಿಲ್ಲದವರು ಗಣಪಯ್ಯ ಇಲಾಖೆಯ ನರ್ಸರಿ ಲಕ್ಷಗಟ್ಟಲೆ ಗಿಡಗಳನ್ನು ಸಾಗಿಸಿ ಸ್ವಂತಕ್ಕೆ ಬಳಸಿದ್ದಾರೆ ಎಂದು ಪತ್ರಿಕೆಯಲ್ಲಿ ಬರೆದರು. ಗಣಪಯ್ಯ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸದಲ್ಲಿ ಮುಂದುವರೆದರು. ರೈತರ ಜಮೀನಿನಲ್ಲಿ ಸರ್ಕಾರಿ ಸ್ಥಳದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ ಭೂಹೀನ ಕಾರ್ಮಿಕರ ಮನೆಗಳಲ್ಲಿ ನೆಡಲು ಬಳಕೆಯಾಗುತ್ತಿದ್ದವು.
ಗಣಪಯ್ಯ ಯಾವಾಗಲೂ ತಮ್ಮ ಭಾಷಣದಲ್ಲಿ ಹೇಳುತ್ತಿದ್ದ ಮಾತೆಂದರೆ,
“ನೂರು ಒಳ್ಳೆಯ ಕೆಲಸಗಳು, ಒಬ್ಬ ಒಳ್ಳೆಯ ಮಗನಿಗೆ ಸಮ, ನೂರುಜನ ಒಳ್ಳೆಯ ಮಕ್ಕಳು ಒಂದು ವೃಕ್ಷಕ್ಕೆ ಸಮ. (ಉಪನಿಷತ್) ಆದ್ದರಿಂದ ನಿಮ್ಮ ಕೈಲಾದಷ್ಟು ಗಿಡಗಳನ್ನು ನೆಡಿ, ಅದು ಪುಣ್ಯದ ಕೆಲಸ. ನಿಮಗೆ ಸ್ವಂತ ನೆಲವಿಲ್ಲದ್ದರೆ ಏನಾಯಿತು ಸರ್ಕಾರಿ ಸ್ಥಳದಲ್ಲೇ ನೆಡಿ” ಎಂದು.
- ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)
ಇದನ್ನೂ ಓದಿ: ಕಳೆದುಹೋದ ದಿನಗಳು – 6: ತೋಟದ ಕೂಲಿಗಳ ಕಣ್ಣೀರಿಗೆ ಮಿಡಿದ ಕೆಲ ಜನಪರ ಮಾಲೀಕರಿವರು


