Homeಕರ್ನಾಟಕಜಾತಿಗಣತಿಗೆ ಸರ್ಕಾರಗಳು ಹಿಂಜರಿಯುತ್ತಿರುವುದೇಕೆ? ಕರ್ನಾಟಕದ ವರದಿ ಬಿಡುಗಡೆಯಾಗಿಲ್ಲವೇಕೆ?

ಜಾತಿಗಣತಿಗೆ ಸರ್ಕಾರಗಳು ಹಿಂಜರಿಯುತ್ತಿರುವುದೇಕೆ? ಕರ್ನಾಟಕದ ವರದಿ ಬಿಡುಗಡೆಯಾಗಿಲ್ಲವೇಕೆ?

- Advertisement -
- Advertisement -

1991ರ ನಂತರ ಪ್ರತಿ ಹತ್ತು ವರ್ಷಗಳಿಗೊಮ್ಮೆ ದೇಶಾದ್ಯಂತ ನಡೆಯುವ ಜನಗಣತಿ ಹತ್ತಿರ ಬರುತ್ತಿದ್ದಂತೆ ಅದರೊಟ್ಟಿಗೆ ಜಾತಿಗಣತಿ ಸಹ ನಡೆಸಬೇಕೆಂಬ ಹಕ್ಕೊತ್ತಾಯ ಕೇಳಿಬರುತ್ತದೆ. ಈ ಬಾರಿ ಅದು ಬಹು ದೊಡ್ಡ ದನಿಯಲ್ಲಿಯೇ ಕೇಳಿಬಂದಿದೆ. ಬಿಹಾರ, ಉತ್ತರಪ್ರದೇಶ ಮತ್ತು ಕರ್ನಾಟಕದಲ್ಲಿ ಈ ಚರ್ಚೆ ಬಿರುಸಿನಿಂದ ಸಾಗಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ರವರು ತಮ್ಮ ರಾಜ್ಯದ ಹತ್ತು ಪಕ್ಷಗಳ ಮುಖಂಡರ ನಿಯೋಗದೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ 2021ರ ಜನಗಣತಿಯೊಂದಿಗೆ ಜಾತಿಗಣತಿಯನ್ನು ಸಹ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ನಡೆದಿರುವ ಜಾತಿಗಣತಿಯ ವರದಿ ಬಿಡುಗಡೆ ಮಾಡಬೇಕೆಂಬ ಚರ್ಚೆ ಮುನ್ನಲೆಗೆ ಬಂದಿದೆ. ಆದರೆ ಇದೇ ಸಂದರ್ಭದಲ್ಲಿ ಕೆಲವರು ಜಾತಿಗಣತಿ ಮಾಡಬಾರದು, ಇದು ಸಮಾಜದಲ್ಲಿ ಇರುವ ಜಾತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ವಾದಿಸಿದ್ದಾರೆ. ಈ ಕುರಿತು ವರದಿ ಇಲ್ಲಿದೆ.

ಜಾತಿಗಣತಿಯ ಹಿನ್ನೆಲೆ

ಸಾವಿರಾರು ಜಾತಿಗಳಿಂದ ಕೂಡಿರುವ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 1931ರ ಜನಗಣತಿಯೊಂದಿಗೆ ಜಾತಿಗಣತಿಯೂ ನಡೆದಿತ್ತು. ಅದಾಗಿ 90 ವರ್ಷ ಕಳೆದರೂ ದೇಶಾದ್ಯಂತ ಜಾತಿ ಗಣತಿ ನಡೆದೇ ಇಲ್ಲ. 1991ರ ನಂತರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಬಿಸಿ ಮೀಸಲಾತಿ ಜಾರಿಯಾದ ನಂತರ ಜಾತಿಗಣತಿ ನಡೆಯಬೇಕೆಂದು ದೊಡ್ಡ ಒತ್ತಾಯಗಳು ಕೇಳಿಬಂದಿದ್ದರಿಂದ 2003-04ರಲ್ಲಿ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಜಾತಿಗಣತಿಯ ಪೈಲೆಟ್ ಪ್ರಾಜೆಕ್ಟ್ ನಡೆಸಲು 21.5 ಕೋಟಿ ರೂ ಬಿಡುಗಡೆ ಮಾಡಿತ್ತು. ಆಗ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದರು. ಆಗ ಕರ್ನಾಟಕ ಸರ್ಕಾರ 1.5 ಕೋಟಿ ನೀಡಿತ್ತು. ಆದರೆ ಆಗಿನ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಅದು ನಡೆಯಲಿಲ್ಲ. ನಂತರ ಮನಮೋಹನ್ ಸಿಂಗ್ ನೇತೃತ್ವದಲ್ಲಿ 2011ರ ನಂತರ ಪ್ರತ್ಯೇಕವಾಗಿ ಜಾತಿಗಣತಿ ನಡೆಸಲು ಮುಂದಾದರೂ ಅದು ಕೂಡ ನಡೆಯದೇ ನೆನೆಗುದ್ದಿಗೆ ಬಿದಿತು.

2013ರಲ್ಲಿ ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಯಾದಾಗ ಜಾತಿಗಣತಿಗಾಗಿ ಬಜೆಟ್‌ನಲ್ಲಿ 187 ಕೋಟಿ ರೂ ಬಿಡುಗಡೆ ಮಾಡಿದ್ದರು. ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ 2015ರ ಏಪ್ರಿಲ್-ಮೇ ತಿಂಗಳಿನಲ್ಲಿ 162 ಕೋಟಿ ರೂ ಖರ್ಚಿನಲ್ಲಿ ಜಾತಿಗಣತಿ ನಡೆದಿದ್ದು, ಸಮೀಕ್ಷಾ ವರದಿ ಸಿದ್ಧವಾಗಿದೆ. ಆದರೆ ಆ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗವು ಇದುವರೆಗೂ ಸರ್ಕಾರಕ್ಕೆ ಸಲ್ಲಿಸಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಈ ನಾಲ್ವರು ಸಿಎಂಗಳು ಸಹ ವರದಿ ಸ್ವೀಕರಿಸದ ಕಾರಣ ಅದು ಆಯೋಗದ ಬಳಿಯೇ ಉಳಿದುಕೊಂಡಿದೆ. ಜಾತಿಗಣತಿ ನಡೆಸಬಾರದು, ಈಗ ನಡೆಸಿರುವುದು ಅಸಿಂಧು ಎಂದು ಕೆಲವರು ಈ ಹಿಂದೆ ಹೈಕೋರ್ಟ್‌ನಲ್ಲಿ ರಿಟ್ ಪಿಟಿಷನ್ ಹಾಕಿದ್ದರು. ಆದರೆ, ’ಜಾತಿಗಣತಿ ನಡೆಸುವುದು ಸಂವಿಧಾನದ ಆಶಯಗಳಿಗೆ ಪೂರಕವಾಗಿದೆ. ಹಾಗಾಗಿ ಕರ್ನಾಟಕದಲ್ಲಿ ನಡೆದಿರುವ ಜಾತಿಗಣತಿ ವರದಿಯನ್ನು ಆಯೋಗವು ಸರ್ಕಾರಕ್ಕೆ ಸಲ್ಲಿಸಲು ನಿರ್ದೇಶನ ನೀಡಬೇಕೆಂದು’ ಹಿರಿಯ ವಕೀಲರಾದ ಸಿ.ಎಸ್ ದ್ವಾರಕನಾಥ್‌ರವರ ಮೂಲಕ ’ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು’ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅದು ಸೆಪ್ಟಂಬರ್ 13ರಂದು ವಿಚಾರಣೆಗೆ ಬರಲಿದೆ. ’ವರದಿ ವಿಷಯ ಕೋರ್ಟ್ ಮುಂದಿರುವುದರಿಂದ ಅದನ್ನು ಸರ್ಕಾರಕ್ಕೆ ಸಲ್ಲಿಸಲು ಆಗುತ್ತಿಲ್ಲ. ಕೋರ್ಟ್ ಯಾವ ಆದೇಶ ನೀಡುತ್ತದೆ ಅದನ್ನು ನಾವು ಪಾಲಿಸುತ್ತೇವೆ’ ಎಂದು ಈಗಿನ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆಯವರು ಹೇಳುತ್ತಿದ್ದಾರೆ.

ಜಾತಿಗಣತಿ ಏಕೆ ಬೇಕು?

ಮೀಸಲಾತಿ ಹಂಚಿಕೆಯಾಚೆಗೂ ಜಾತಿಗಣತಿಗೆ ಮಹತ್ವವಿದೆ. ಏಕೆಂದರೆ ಭಾರತದಲ್ಲಿ ದನಿಯೇ ಇಲ್ಲದ ಸಾವಿರಾರು ಸಣ್ಣ ಸಣ್ಣ ಸಂಖ್ಯೆಯಲ್ಲಿರುವ ಜಾತಿಗಳಿವೆ. ಸರ್ಕಾರದ ಯೋಜನೆಗಳು ನಿಜವಾಗಿಯೂ ಇವರನ್ನು ತಲುಪುತ್ತಿವೆಯೇ ಎಂಬ ಬಗ್ಗೆ ಗೊಂದಲಗಳಿವೆ. ದೊಡ್ಡ ಸಂಖ್ಯೆಯಲ್ಲಿರುವ ಜನರ ಸಮಸ್ಯೆಗಳು ಅವರ ಜಾತಿ ಕಾರಣಕ್ಕಾದರೂ ಸಮಾಜದಲ್ಲಿ ಚರ್ಚೆಗೆ ಬರುತ್ತಿವೆ. ಆದರೆ ಸಣ್ಣ ಸಂಖ್ಯೆಯ ಜಾತಿಗಳ ಕಥೆಯೇನು? ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳನ್ನು, ಆದಿವಾಸಿಗಳನ್ನು ನಾವು ಗುರುತಿಸಿದ್ದೇವೆಯೇ ಎಂಬ ಪ್ರಶ್ನೆ ಕೂಡ ಇದೆ. ಪ್ರಜಾಪ್ರಭುತ್ವ ರಾಷ್ಟ್ರವೊಂದು ತನ್ನ ನೀತಿ ನಿರೂಪಣೆಯಲ್ಲಿ ಇವರಿಗೆ ಸರಿಯಾದ ಪ್ರಾತಿನಿಧ್ಯ ನೀಡಬೇಕಾದರೆ ಅವರ ಗಣತಿ ಅಗತ್ಯವಿದೆ.

ಇನ್ನು ಬಹಳಷ್ಟು ರಾಜ್ಯಗಳಲ್ಲಿ ಹಲವಾರು ಜಾತಿಗಳು ತಮಗೂ ಮೀಸಲಾತಿ ಕಲ್ಪಿಸಬೇಕೆಂದು, ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ತೀವ್ರ ರೀತಿಯ ಹೋರಾಟಕ್ಕಿಳಿದಿವೆ. ಆದರೆ ಸುಪ್ರೀಂ ಕೋರ್ಟ್ 1992ರ ಇಂದ್ರಸಹಾನಿ ಪ್ರಕರಣದ ತೀರ್ಪಿನಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದು ಎಂಬ ಷರತ್ತನ್ನು ಹಾಕಿದೆ. ಜೊತೆಗೆ ವಿಶೇಷ ಸಂದರ್ಭದಲ್ಲಿ ಮಾತ್ರ ಈ ನಿಯಮವನ್ನು ಮೀರಬಹುದು ಎಂದು ಸುಪ್ರೀಂ ಹೇಳಿದೆ. ಈ ವಿಶೇಷ ಸಂದರ್ಭದ ಕಾರಣ ನೀಡಿ ಈಗಾಗಲೇ ದೇಶದ 9 ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಿರುವ ಉದಾಹರಣೆಗಳಿವೆ. ಆದರೆ ಕಳೆದ 90 ವರ್ಷಗಳಿಂದ ಜಾತಿಗಣತಿ ನಡೆಯದ, ನಿಖರವಾದ ಜಾತಿವಾರು ಡೇಟಾ ಇಲ್ಲದ ಕಾರಣ, ವಿಶೇಷ ಸಂದರ್ಭವನ್ನು ನಿರೂಪಿಸಿ ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಹಲವು ರಾಜ್ಯಗಳಿಗೆ ಇಂದಿಗೂ ಸಾಧ್ಯವಾಗಿಲ್ಲ. ಅಂದರೆ ’ನಮ್ಮ ರಾಜ್ಯಗಳಲ್ಲಿ ಹಲವು ಜಾತಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಮತ್ತು ಸಮಾಜದಲ್ಲಿ ಇವರ ಪ್ರಾತಿನಿಧ್ಯ ಅತಿ ಕಡಿಮೆ ಇದೆ ಎಂದು ತೋರಿಸಲು’ ರಾಜ್ಯಗಳಿಗೆ ಜಾತಿಗಣತಿ ಡೇಟಾ ಅತ್ಯಗತ್ಯವಾಗಿದೆ. ಹಾಗಾಗಿ ಜಾತಿಗಣತಿ ನಡೆಯಬೇಕೆಂಬ ಬಹುದೊಡ್ಡ ಕೂಗು ಎದ್ದಿದೆ.

ಜಾತಿಗಣತಿ ನಡೆಸಲು ಹಿಂದೇಟು ಏಕೆ?

ಆರ್ಥಶಾಸ್ತ್ರಜ್ಞ ಥಾಮಸ್ ಪಿಕೆಟಿಯವರ ಶಿಷ್ಯರಾದ ನಿತಿನ್ ಕುಮಾರ್ ಭಾರತಿಯವರು “ಭಾರತದಲ್ಲಿ ಸಂಪತ್ತಿನ ಅಸಮಾನ ಹಂಚಿಕೆ- ವರ್ಗ ಮತ್ತು ಜಾತಿ” ಎಂಬ ಸಂಶೋಧನ ಪ್ರಬಂಧವೊಂದನ್ನು ರಚಿಸಿದ್ದಾರೆ. ಅದರಂತೆ ಇಂದಿಗೂ ದೇಶದಲ್ಲಿ ದಲಿತರು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡಲ್ಲಿಯೂ ಅತಿ ಕಡಿಮೆ ಸಂಪತ್ತಿನ ಮಾಲೀಕತ್ವ ಹೊಂದಿದ್ದಾರೆ. ಕಳೆದ ಒಂದು ದಶಕದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ ತೃಪ್ತಿದಾಯಕವಾಗಿಲ್ಲ. ಆದರೆ ಇಂದಿಗೂ ಮುಂದುವರಿದ ಜಾತಿಗಳು ಅತಿಯಾದ ಪ್ರಾತಿನಿಧ್ಯವನ್ನ ಹೊಂದಿವೆ. ಇಂತಹ ಸಂದರ್ಭದಲ್ಲಿ ಜಾತಿಗಣತಿ ನಡೆದಿದ್ದೆ ಆದಲ್ಲಿ ಎಲ್ಲಾ ಜಾತಿಗಳಲ್ಲಿ ಎಷ್ಟು ಜನರಿದ್ದಾರೆ? ಅವರ ಶೈಕ್ಷಣಿಕ ಸಾಧನೆಯೆಷ್ಟು? ಆರ್ಥಿಕವಾಗಿ ಯಾವ ಸ್ಥಿತಿಯಲ್ಲಿದ್ದಾರೆ? ಎಷ್ಟು ಜನ ಉದ್ಯೋಗದಲ್ಲಿದ್ದಾರೆ? ಎಂಬೆಲ್ಲಾ ವಿವರಗಳು ಬಹಿರಂಗಗೊಳ್ಳುತ್ತವೆ. ಅವು ಖಂಡಿತವಾಗಿ ಬಲಾಢ್ಯ ಜಾತಿಗಳು ಈಗ ಸಾರ್ವಜನಿಕವಾಗಿ ಬಿಂಬಿಸುತ್ತಿರುವ ಅಂಕಿಸಂಖ್ಯೆಗಳಿಗೆ ತದ್ವಿರುದ್ಧವಾಗಿರುತ್ತವೆ ಎಂಬ ಅಭಿಪ್ರಾಯವಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕವಾಗಿ ದುರ್ಬಲವಾದ ಮೇಲ್ಜಾತಿಗಳಿಗೆ 10% ಮೀಸಲಾತಿ ಜಾರಿಗೆ ತಂದಿದ್ದಾರೆ. ಜಾತಿಗಣತಿ ನಡೆದರೆ ಇದಕ್ಕೆ ದೊಡ್ಡ ಪ್ರತಿರೋಧ ಬರುತ್ತದೆ ಎಂಬ ಭಯವಿದೆ. ಈ ಪಟ್ಟಭದ್ರ ಹಿತಾಸಕ್ತಿಗಳೇ ಅಂದರೆ ಮುಖ್ಯವಾಗಿ ಮೇಲ್ಜಾತಿಗಳು ಈ ಜಾತಿಗಣತಿ ನಡೆಸಲು ಅವಕಾಶ ನೀಡುತ್ತಿಲ್ಲ.

ಬಿಹಾರ-ಯುಪಿಯಲ್ಲಿ ದನಿ ಜೋರೇಕೆ?

ಬಿಹಾರದ ಮುಖ್ಯ ರಾಜಕೀಯವೇ ಒಬಿಸಿ ರಾಜಕೀಯವಾಗಿದೆ. ಅಲ್ಲಿನ ಸಿಎಂ ನಿತೀಶ್ ಕುಮಾರ್‌ರವರ ಜೆಡಿಯು ಮತ್ತು ವಿಪಕ್ಷ ತೇಜಸ್ವಿ ಯಾದವ್‌ರವರ ಆರ್‌ಜೆಡಿ ಎರಡೂ ಸಹ ಒಬಿಸಿ ಸಮುದಾಯಗಳನ್ನು ಪ್ರತಿನಿಧಿಸುವ ಪಕ್ಷಗಳಾಗಿವೆ. ಆಶ್ಚರ್ಯವೆಂದರೆ ಅವರ ಜಾತಿಗಣತಿಯ ಬೇಡಿಕೆಗೆ ಅಲ್ಲಿನ ಬಿಜೆಪಿ ಮತ್ತು ಕಾಂಗ್ರೆಸ್ ಸಹ ಕೈಜೋಡಿಸಿವೆ. ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಈ ಬಗ್ಗೆ ಮಾತನಾಡುತ್ತಿಲ್ಲ. ಉತ್ತರ ಪ್ರದೇಶದಲ್ಲಿನ ಸಮಾಜವಾದಿ ಪಕ್ಷ ಒಬಿಸಿ ಮತ್ತು ಮುಸ್ಲಿಮರನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಅವರಿಗೆ ಜಾತಿಗಣತಿ ನಡೆಯುವುದು ಅಗತ್ಯವಾಗಿದೆ. ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯುವ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಜಾತಿಗಣತಿ ನಡೆಸಬೇಕೆಂದು ಈ ಪಕ್ಷಗಳು ಹಲವು ಪ್ರಾದೇಶಿಕ ಪಕ್ಷಗಳ ಜೊತೆಸೇರಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ತಂದಿವೆ.

’ಈ ದೇಶದಲ್ಲಿ ಮೀಸಲಾತಿ ಪರವಾಗಿರುವವರು, ಅದು ಇನ್ನು ಹೆಚ್ಚಾಗಬೇಕೆನ್ನುವರು ಮತ್ತು ಮೀಸಲಾತಿ ವಿರೋಧಿಸುವವರು ಎಲ್ಲರೂ ಜಾತಿಗಣತಿಯನ್ನು ಬೆಂಬಲಿಸಬೇಕಿದೆ. ಏಕೆಂದರೆ ಆಗ ಮಾತ್ರ ಸಾಕ್ಷ್ಯ ಹೊರಬರಲು ಸಾಧ್ಯ. ಆನಂತರ ಅಂಕಿಅಂಶಗಳ ಸಾಕ್ಷ್ಯದೊಂದಿಗೆ ತಮ್ಮ ವಾದ ಮುಂದಿಡಬಹುದು. ಭಾರತದಲ್ಲಿ ಇಂದಿಗೂ ಅತಿಹೆಚ್ಚು ಸವಲತ್ತು ಪಡೆದುಕೊಂಡ ವರ್ಗವೆಂದರೆ ಅದು ಹಿಂದೂ ಮೇಲ್ಜಾತಿಗಳು. ಶೇ.20 ರಷ್ಟಿರುವ ಅವರು ದೇಶದ ಶೇ.80 ರಷ್ಟು ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆದಿದ್ದಾರೆ ಎಂದು ನಾನು ಜವಾಬ್ದಾರಿಯಿಂದ
ಹೇಳುತ್ತೇನೆ. ಹಾಗಾಗಿಯೇ ಅವರು ತಮ್ಮ ಈ ಅನುಕೂಲತೆ ಬಯಲಾಗುತ್ತದೆ ಎಂಬ ಭಯದಿಂದ ಜಾತಿಗಣತಿ ಮಾಡಲು ಬಿಡುತ್ತಿಲ್ಲ’ ಎಂದು ಯೋಗೇಂದ್ರ ಯಾದವ್ ಹೇಳುವುದರಲ್ಲಿ ಸತ್ಯವಿದೆ. ಹಾಗಾಗಿ ಜಾತಿಗಣತಿ ನಡೆಯಲೇಬೇಕಿದೆ.

ಮುತ್ತುರಾಜು

ಕೆಲವು ಅಭಿಪ್ರಾಯಗಳು

ದೇಶಾದ್ಯಂತ ಜಾತಿಗಣತಿ ನಡೆಯಬೇಕೆಂಬ ಕೂಗೆದ್ದಿರುವುದು ಬಹಳ ಒಳ್ಳೆಯದು ಮತ್ತು ನಾನು ಇದನ್ನು ಸ್ವಾಗತಿಸುತ್ತೇನೆ. ರಾಜ್ಯಗಳು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ವಾದಿಸಿದ ಕೂಡಲೇ ಎಲ್ಲಾ ಕೋರ್ಟ್‌ಗಳು ಅದನ್ನು ಪುಷ್ಠೀಕರಿಸಲು ನಿಮ್ಮ ಬಳಿ ಯಾವ ಡೇಟಾ ಇದೆ ಎಂದು ಕೇಳುತ್ತಿವೆ. ಇದಕ್ಕೆ ನಾವು ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ದೇಶಾದ್ಯಂತ ಜಾತಿಗಣತಿ ನಡೆಯಬೇಕು. ಮತ್ತು ಜಾತಿಗಣತಿ ಕರ್ನಾಟಕದಲ್ಲಿ ಈಗಾಗಲೇ ನಡೆದಿರುವುದರಿಂದ ಅದರ ವರದಿ ಸಲ್ಲಿಸುವಂತೆ ಒತ್ತಾಯಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸ ನನಗಿದೆ.

– ಸಿ.ಎಸ್ ದ್ವಾರಕನಾಥ್, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರು ಮತ್ತು ಕಾಂಗ್ರೆಸ್ ಮುಖಂಡರು

ಜಾತಿಗಣತಿ ಆಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ 1931ರಲ್ಲಿ ಕೊನೆಯದಾಗಿ ನಡೆದ ಜಾತಿಗಣತಿಯ ಅಂಕಿಅಂಶಗಳನ್ನೇ ಇಟ್ಟುಕೊಂಡು ತಳಸಮುದಾಯಗಳಿಗೆ, ದಲಿತ ಸಮುದಾಯಗಳಿಗೆ ಮೀಸಲಾತಿ ಜಾರಿಯಾಗುತ್ತಿದೆ ಮಾತ್ರವಲ್ಲ ಅದೇ ಆಧಾರದಲ್ಲಿ ಕೆಲ ರಾಜ್ಯಗಳಲ್ಲಿ SCSP-TSP ಯೋಜನೆಗಳಿಗೆ ಅನುದಾನ ನೀಡಲಾಗುತ್ತದೆ. ಆದರೆ ಈ 90 ವರ್ಷಗಳಲ್ಲಿ ಎಸ್‌ಸಿ, ಎಸ್‌ಟಿ ಜನಾಂಗದ ಜನಸಂಖ್ಯೆ ಬಹಳ ಹೆಚ್ಚಾಗಿದೆ ಮತ್ತು ಮೇಲ್ಜಾತಿಗಳ ಜನಸಂಖ್ಯೆ ಕಡಿಮೆಯಾಗಿದೆ ಎಂಬುದನ್ನು fertility rate ಸ್ಪಷ್ಟಪಡಿಸಿದೆ. (2018ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಅದು ST 2.5%, SC 2.3%, OBC 2.2% ಇದ್ದರೆ ಮೇಲ್ಜಾತಿಗಳದ್ದು 1.9% ಇದೆ) ಆದರೆ ಎಸ್‌ಸಿ, ಎಸ್‌ಟಿಗಳಿಗೆ ಮೀಸಲಾತಿ ಮಾತ್ರ ಅಷ್ಟೇ ಇದೆ.

ಇನ್ನು ಎಸ್‌ಸಿ ಮತ್ತು ಎಸ್‌ಟಿ ಜಾತಿಗಣತಿ ಮಾತ್ರ ಮಾಡುತ್ತೇವೆ, ಉಳಿದ ಜಾತಿಗಳನ್ನು ಮಾಡುವುದಿಲ್ಲ ಎಂದು ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ. ಈಗಾಗಲೇ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಬಡವರಿಗೆ 10% ಮೀಸಲಾತಿ ಜಾರಿಯಾಗಿದೆ. ಜಾತಿಗಣತಿ ನಡೆದರೆ ಮೇಲ್ಜಾತಿಯಲ್ಲಿನ ಬಡವರ ಸಂಖ್ಯೆ ಸಿಕ್ಕಿಬಿಡುತ್ತದೆ. ಆಗ ಈ ಮೀಸಲಾತಿ ಕಡಿಮೆ ಮಾಡಬೇಕಾಗುತ್ತದೆ ಎಂಬ ಅಳಕು ಬಿಜೆಪಿಯವರದ್ದು. ಹಾಗಾಗಿ ಅವರು ಇದನ್ನು ಮಾಡುತ್ತಿಲ್ಲ.

ಸಣ್ಣ ಸಣ್ಣ ಸಂಖ್ಯೆಯ ನೂರಾರು ಆದಿವಾಸಿ ಸಮುದಾಯಗಳಿವೆ. 1931ರ ಜನಗಣತಿಯಲ್ಲಿಯೂ ಇವರನ್ನು ಸಮರ್ಪಕವಾಗಿ ಪರಿಗಣಿಸಿಲ್ಲ. ಆ ಜನರ ಜನಗಣತಿ ನಡೆದು ಅವರಿಗೆ ಹಕ್ಕುಗಳು ದಕ್ಕಬೇಕಿವೆ. ಅವರ ಬಗ್ಗೆ ದೇಶದ ಹಲವರಿಗೆ ಗೊತ್ತೇ ಇಲ್ಲ. ಹಾಗಾಗಿ ಮೇಲ್ಜಾತಿಯೂ ಸೇರಿದಂತೆ ಈಗ ಅಂದಾಜಿಸುತ್ತಿರುವ 138 ಕೋಟಿ ಜನರ ಜಾತಿಗಣತಿ ನಡೆಯಲೇಬೇಕು ಮತ್ತು ಆ ಆಧಾರದಲ್ಲಿ ಈಗ ನೀಡುತ್ತಿರುವ 10% ಮೀಸಲಾತಿಯೂ
ಸೇರಿದಂತೆ ಎಲ್ಲಾ ಮೀಸಲಾತಿಯ ಮರುವರ್ಗೀಕರಣ ಆಗಬೇಕು.

– ವಿಕಾಸ್ ಆರ್ ಮೌರ್ಯ, ಲೇಖಕರು

ಜಾತಿಗಳು ಇದ್ದೆ ಇರುವುದು ನಮಗೆ ಗೊತ್ತು. ಇಂದು ನಮ್ಮ ಎಲ್ಲಾ ಸಾಮಾಜಿಕ, ಆರ್ಥಿಕ, ರಾಜಕೀಯ ಚಟುವಟಿಕೆಗಳಲ್ಲಿ ಜಾತಿ ಬೆರೆತುಹೋಗಿದೆ. ಇಂತಹ ಮುಖ್ಯ ಅಂಶವನ್ನು ಗಣತಿ ಮಾಡುವಾಗ ಪರಿಣಿಸದಿದ್ದರೆ ಹೇಗೆ? ಕೆಲವರು ನಮಗೆ ಜಾತಿ ಬೇಡ, ನಾವು ಜಾತಿಬಾಹಿರ ಎಂಬ ಕಾರಣದಿಂದ ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ಇದರ ಹಿಂದೆ ಸಾರ್ವಜನಿಕ ಸೌಲಭ್ಯಗಳು ತಮಗೆ ಮಾತ್ರ ಸಿಗುವಂತೆ ನೋಡಿಕೊಳ್ಳುವ ಹುನ್ನಾರವಿದೆ. ಕರ್ನಾಟಕದಲ್ಲಿ 2015ರಲ್ಲಿ ನಡೆದಿರುವ ಜಾತಿಗಣತಿಯ ವರದಿ ಸೋರಿಕೆಯಾಗಿದೆ. ಅದರ ಪ್ರಕಾರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದವರು ಹೆಚ್ಚಿದ್ದಾರೆ ಎಂಬ ನಂಬಿಕೆಯನ್ನು ಸುಳ್ಳು ಮಾಡಿ ಪರಿಶಿಷ್ಟ ಜಾತಿಯ ಸಮುದಾಯದವರು ಹೆಚ್ಚಿದ್ದಾರೆ ಎಂಬ ಅಂಶ ಹೊರಹಾಕಿದೆ. ಹಾಗಾಗಿ ಈಗ ಜನಗಣತಿಯೊಂದಿಗೆ ಜಾತಿಗಣತಿ ಮಾಡಿದರೆ ಸಮಗ್ರ ಚಿತ್ರಣ ಸಿಗಲು ಸಾಧ್ಯ. ಆದರೆ ಯಾರಾದರೂ ಜಾತಿಗಣತಿ ಬೇಡ ಎನ್ನುತ್ತಿದ್ದಾರೆ ಎಂದರೆ ಅವರದು ಸ್ವಹಿತಾಸಕ್ತಿ ಇದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು.

– ಪ್ರೊ. ವಲೇರಿಯನ್ ರೋಡ್ರಿಗಸ್, ರಾಜಕೀಯ ತಜ್ಞರು

ಸಾಮಾಜಿಕ ಅಸಮಾನತೆ ಜೊತೆಗೆ ಆರ್ಥಿಕ ಅಸಮಾನತೆ ಹೋಗಲಾಡಿಸಲು ಜಾತಿಗಣತಿ ಬೇಕೇಬೇಕು. ಏಕೆಂದರೆ ಈ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಎಲ್ಲಾ ನೀತಿಗಳು ಕೇವಲ ಮುಂದುವರಿದ ಜಾತಿಗಳಾದ ಬ್ರಾಹ್ಮಣರು, ಬನಿಯಾಗಳ ಪರವಾಗಿದ್ದವು. ಆನಂತರ ಒಂದಷ್ಟು ಒಬಿಸಿ ಜಾತಿಗಳಾದ ಲಿಂಗಾಯತರು, ರೆಡ್ಡಿಗಳು, ಕಮ್ಮಾಗಳು, ಠಾಕೂರ್‌ಗಳಿಗಷ್ಟೆ ಸೌಲಭ್ಯಗಳು ದೊರಕುವಂತೆ ನಮ್ಮ ಆರ್ಥಿಕ ವ್ಯವಸ್ಥೆಯನ್ನು ರೂಪಿಸಲಾಗಿದೆ. ದೇಶದ ಸಂಪತ್ತಿನ ಸೃಷ್ಟಿಯಲ್ಲಿ ಎಲ್ಲಾ ಸಮುದಾಯಗಳ ಪಾಲಿದ್ದರೂ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿಲ್ಲ. ಇದನ್ನು ಸಾಧ್ಯವಾಗಿಸಲು ಜಾತಿಗಣತಿ ಅಗತ್ಯವಾಗಿ ಬೇಕು.

– ನಾಗೇಗೌಡ ಕೀಲಾರ ಶಿವಲಿಂಗಯ್ಯ, ಚಿಂತಕರು, ಪ್ರಾಧ್ಯಪಕರು

ಜಾತಿಗಣತಿ ಮಾಡುವ ಧೈರ್ಯ ಯಾರಿಗೂ ಇದ್ದಂತಿಲ್ಲ. ಏಕೆಂದರೆ ಅದನ್ನು ಜಾರಿಗೊಳಿಸಿದರೆ ಉಂಟಾಗುವ
ಸಾಧಕ-ಬಾಧಕಗಳನ್ನು ಊಹಿಸಲಿಕ್ಕೆ ಸಾಧ್ಯವಾಗದಷ್ಟು ಸಂಕೀರ್ಣವಾಗಿದೆ ಪರಿಸ್ಥಿತಿ. ಕರ್ನಾಟಕದಲ್ಲಿ ಮಾಡಿರುವ ಜಾತಿಗಣತಿ ವರದಿ ಒಂದು ವೇಳೆ ಬಿಡುಗಡೆಯಾದರೂ ಅದು ವಿಶ್ವಾಸಾರ್ಹವಲ್ಲ, ಅದನ್ನು ನಾವು ನಂಬುವುದಿಲ್ಲ ಎಂಬ ದೊಡ್ಡ ಕೂಗು ಕೇಳಿಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾರಿಗೆ ಅದರಿಂದ ರಾಜಕೀಯವಾಗಿ ತೊಂದರೆಯಾಗಲಿದೆಯೋ ಅವರು ಖಂಡಿತ ಅದನ್ನು ವಿರೋಧಿಸುತ್ತಾರೆ. ಇನ್ನೊಂದು ಕಡೆ ಮೋದಿ ಸರ್ಕಾರವು ತನ್ನ ಸುಳ್ಳುಗಳ ಮೂಲಕ ಡೇಟಾಗಳು, ಅಂಕಿ-ಸಂಖ್ಯೆಗಳ ಬಗೆಗೆ ಜನರಿಗೆ ನಂಬಿಕೆ ಹೋಗುವಂತೆ ಮಾಡಿಬಿಟ್ಟಿದೆ. ಜಿಡಿಪಿಯಿಂದ ಶುರುಮಾಡಿ ಎಲ್ಲಾ ಡೇಟಾಗಳನ್ನು ಅದು ತಿರುಚಿದೆ. ಇಂತಹ ಸಂದರ್ಭದಲ್ಲಿ ಜನಗಣತಿ ಜೇನುಗೂಡಿಗೆ ಕೈ ಹಾಕುವ ಸಾಹಸ. ಹಾಗಾಗಿ ಬಹಳ ಎಚ್ಚರಿಕೆಯೊಂದಿಗೆ ಮತ್ತು ಸೂಕ್ತ ಪೂರ್ವತಯಾರಿಯೊಂದಿಗೆ ಸ್ವಾತಂತ್ರ್ಯ ನಂತರದ ಮೊದಲ ಮತ್ತು ಕೊನೆಯ ಜಾತಿಗಣತಿಯೊಂದು ನಡೆದುಬಿಡಲಿ. ಆ ಮೂಲಕ ಎಲ್ಲಾ ಜಾತಿಗಳು ಸಮಾನ ಹಂತದಲ್ಲಿ ಬೆಳೆಯಲು ಅನುಕೂಲವಾಗಲಿ.

ಎ.ನಾರಾಯಣ, ಅಂಕಣಕಾರರು, ಪ್ರಾಧ್ಯಾಪಕರು, ಅಜೀಂ ಪ್ರೇಮ್‌ಜಿ ವಿವಿ, ಬೆಂಗಳೂರು.


ಇದನ್ನೂ ಓದಿ: ಜಾತಿ ಆಧಾರಿತ ಜನಗಣತಿಯಿಂದ ವಿವಿಧ ವರ್ಗದವರಿಗೆ ಕಲ್ಯಾಣ ಯೋಜನೆ ಜಾರಿಗೆ ಸಹಾಯ: ತೇಜಸ್ವಿ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಜಾತಿ ಜನಗಣತಿ ನಮ್ಮ ದೇಶದ ಅಮುಲಾಗ್ರ ಅಭಿವೃದ್ಧಿಗೆ ಇಂದು ಅತ್ಯವಶ್ಯಕ ಮತ್ತು ಅನಿವಾರ್ಯ ಪ್ರಕ್ರಿಯೆಯಾಗಿದೆ
    ಮೇಲ್ವರ್ಗ ಹಾಗು ಕೆನೆ ಪದರದ ವರ್ಗಕ್ಕೆ ಇದು ಕೆಟ್ಟದ್ದೇನೂ ಮಾಡುವುದಿಲ್ಲ
    ಈ ಪ್ರಕ್ರಿಯೆ ನಮ್ಮಲ್ಲಿ ಇರುವ ಎಲ್ಲಾ ಜನಾಂಗಗಳ ವಸ್ತುನಿಷ್ಠ ಮಾಹಿತಿಯನ್ನು ಕೊಡುತ್ತಾದೆಯೇ ಹೊರತು, ಈ ಜನಾಂಗಗಳ ಅಭಿವೃದ್ಧಿಗೆ ತೋದಕಂತು ಆಗುವುದಿಲ್ಲ
    ಹಿಂದುಳಿದ ವರ್ಗಗಳಲ್ಲಿನ ಮುಂದುವರಿದ ಜಾತಿಗಳಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದೇ ಹೊರತು, ತೀರಾ ದೊಡ್ಡ ಆವಘದದ ಸಾಧ್ಯತೇಯಂತೂ ಇಲ್ಲ
    ಸಾಮಾಜಿಕ ನ್ಯಾಯದ ನಿಜವಾದ ಅನುಷ್ಠಾನ ಕ್ಕೆ ಜಾತಿ ಜನಗಣತಿ ಮೊದಲ ಹೆಜ್ಜೆ

    ??

  2. Sc,st ಪಂಗಡಗಳಲ್ಲಿ ಒಂದುಸಲ ಮೀಸಲಾತಿ ಪಡೆದು ಮೇಲೆ ಬಂದವರು(comparatively) ಮತ್ತೆ ಮೀಸಲಾತಿ ಸವಲತ್ತು ಪಡೆಯದಂತೆ ಕಟ್ಡುಪಾಡುಗಳಾಗಬೇಕು.
    ಒಂದೂ ಸಲವೂ ಮೀಸಲಾತಿ ಪಡೆಯದ ಬಡ sc,st ಗಳಿಗೆ ನ್ಯಾಯ ದೊರಕಿಸಲು ಇದು ಆಗಬೇಕಾದ ಕೆಲಸ.

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...