ಇತ್ತೀಚೆಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಘಟಿಸಿದ ಅಮಾನವೀಯ ಅತ್ಯಾಚಾರದ ಹಿನ್ನೆಲೆಯಲ್ಲಿ ‘ಇನ್ನು ಮುಂದೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಸಂಜೆ 6:30ರ ನಂತರ ಹೆಣ್ಣು ಮಕ್ಕಳು ಏಕಾಂಗಿಯಾಗಿ ತಿರುಗಾಡುವುದನ್ನು, ಕೂರುವುದನ್ನು ನಿಷೇಧಿಸಲಾಗಿದೆ’ ಎಂಬ ವಿವಿಯ ವಿವಾದಾತ್ಮಕ ಸುತ್ತೋಲೆ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬಂದಿದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಗುರುತರ ಜವಾಬ್ದಾರಿ ನಿರ್ವಹಿಸುವಲ್ಲಿ ಸರ್ಕಾರ, ಗೃಹ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ತಮ್ಮ ಅದಕ್ಷತನವನ್ನು ಮುಚ್ಚಿಕೊಳ್ಳಲು ಹೆಣ್ಣು ಮಕ್ಕಳನ್ನು ಹೊಣೆ ಮಾಡಲಾಗುತ್ತಿದೆ. ಅವರ ಹೊರಬರಬಾರದು, ಇಂಥದ್ದೆ ಬಟ್ಟೆ ಧರಿಸಬೇಕು ಎಂಬ ನಿಯಮಗಳನ್ನು ಹೇರುವ ಮೂಲಕ ಸಂತ್ರಸ್ತರನ್ನೆ ಬಲಿಪಶು ಮಾಡಲು ಹುನ್ನಾರ ನಡೆಸಲಾಗುತ್ತಿದೆ ಎಂದು ಕಿಡಿಕಾರಲಾಗಿದೆ.

ಸರ್ಕಾರ ಮತ್ತು ವಿವಿಗಳು ಮಹಿಳೆಯರ ಓಡಾಡವನ್ನು ನಿರ್ಬಂಧಿಸುತ್ತಿವೆ. ಮುಂದೆ ಅವರು ಮನೆಯಿಂದಲೇ ಹೊರಬರಬಾರದು ಎಂದು ದಿಗ್ಬಂಧನ ವಿಧಿಸುತ್ತವೆ. ಈ ಮೂಲಕ ಪುರುಷಾಧಿಪತ್ಯ ಆಡಳಿತ ಎಗ್ಗಿಲ್ಲದೆ ನಡೆಯುತ್ತದೆ ಎಂದು ಪ್ರಗತಿಪರ ಚಿಂತಕರು ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿ ಅತ್ಯಾಚಾರವೆಸಗಿದ ಗಂಡಸು ಜಾತಿಯ ಮೇಲೆ ಯಾವುದೇ ನಿರ್ಬಂಧ ವಿಧಿಸದೇ ಅತ್ಯಾಚಾರಕ್ಕೆ ಒಳಗಾದ ಮಹಿಳಾ ಸಮುದಾಯದ ಮೇಲೆ ನಿರ್ಬಂಧ ವಿಧಿಸುವುದು ಯಾವ ನ್ಯಾಯ ಎಂಬ ಪ್ರಶ್ನೆ ಎದ್ದಿದೆ.

7.30ಗೆ ಆಕೆ ಹೊರಗೆ ಹೋಗಿದ್ದಕ್ಕೆ ರೇಪ್ ಆಯ್ತು, ಹಾಗಾಗಿ 6.30 ರ ಮೇಲೆ ಯಾವ ಹೆಣ್ಮಕ್ಳೂ ಹೊರಗೇ ಬರಕೂಡದು!
ವಾವ್! ಎಷ್ಟು ಸುಲಭವಾಗಿ ಅದ್ಭುತ ಪರಿಹಾರ ಕಂಡುಕೊಳ್ಳಲಾಯ್ತು! ಆಮೇಲೆ 5.30ಕ್ಕೆ 2.30ಕ್ಕೆ, 10.30ಕ್ಕೆ ರೇಪ್ ಆದಾಗ ಹಾಗೇ ಸಮಯ ಕುಗ್ಗಿಸುತ್ತಾ ಬನ್ನಿ.
ಯಾಕೆ ಅವರು ಕಾಲೇಜಿಗೆ, ಯೂನಿವರ್ಸಿಟಿಗೆ ಬರಬೇಕು? ಬೇಡ ಅಂದು ಬಿಡಿ. ಆಮೇಲೆ ಬೀದಿಗೆ ಬರೋದೂ ಬೇಡ ಅನ್ನಿ.
ಆಮೇಲೆ ಮನೆಗಳಲ್ಲೇ ರೇಪ್ ಆಗುತ್ತಲ್ಲ, ಆಗ ಭೂಮಿ ಮೇಲೆ ಎಲ್ಲ ಹೆಣ್ಣುಗಳೂ ಸತ್ತುಬಿಡಿ ಅಂತನ್ನಿ!
ಒಟ್ಟಲ್ಲಿ ರೇಪ್ ಮಾಡೋರು ಆರಾಮಾಗಿ ಸುತ್ತಾಡ್ತಾ ಇರ್ಲಿ, ಅವರಿಗೆ ತೊಂದರೆ ಆಗಬಾರದಷ್ಟೇ.
ಅಂದಹಾಗೆ #ತಾಲಿಬಾನ್ ಅಂದ್ರೆ ಏನು? ಎಲ್ಲಿದೆ ಅದು? ಎಂದು ಚಿಂತಕಿ ವಿ.ಕೆ ಸಂಜ್ಯೋತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನವು ಭಾರತದ ಪ್ರಜೆಗಳಿಗೆಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿರುವಾಗ ಮಹಿಳೆಯರಿಗೆ ಮಾತ್ರವೇ ಮಿತಿಗಳನ್ನು ಹೇರುತ್ತಿರುವವರು ಯಾರು ಮತ್ತು ಯಾಕೆ? ಮಹಿಳೆಯರು ಇಲ್ಲಿ ಎರಡನೆಯ ದರ್ಜೆಯ ಪ್ರಜೆಗಳೇ? ಎಂದೂ ಅವರು ಪ್ರಶ್ನಿಸಿದ್ದಾರೆ.

ಹೆಣ್ಣುಮಕ್ಕಳನ್ನ ಗರ್ಭದಲ್ಲೇ ಕೊಂದುಬಿಡೋಣ; ಆಗ ಅತ್ಯಾಚಾರ ಮಾಡೋಕೆ ಆಗಲ್ಲ. ಏನಂತೀರಿ ಮಾನ್ಯ ಕುಲಪತಿಗಳೇ ಹಾಗು ಖಾಕಿ ಪುಂಡರೇ?
ಇದೂ ವಿಶ್ವವಿದ್ಯಾನಿಲಯ, ಇವರು ಮಕ್ಕಳಿಗೆ ಪಾಠ ಮಾಡ್ತಾರಂತೆ. ಥೂ!
ಒಂದು ವೇಳೆ ಅತ್ಯಾಚಾರ ಮಧ್ಯಾಹ್ನ 1 ಘಂಟೆಗೆ ಆಯ್ತು ಅಂತ ಇಟ್ಕೊಳಿ ಆಗ ಹೆಣ್ಣುಮಕ್ಕಳು 1 ಘಂಟೆ ಮೇಲೆ ಒಬ್ಬರೇ ಓಡಾಡುವ ಹಾಗಿಲ್ವಾ? ಎಂದು ವಿವೇಕ್‌ರವರು ಪ್ರಶ್ನಿಸಿದ್ದಾರೆ.

ಅತ್ಯಾಚಾರ ಮಾಡುವ ಅತ್ಯಾಚಾರಿಗಳಿಗೆ ನಿಭಂದನೆಯನ್ನು ಹಾಕುವುದನ್ನು ಬಿಟ್ಟು ಇನ್ನೂ ಹೆಣ್ಣು ಮಕ್ಕಳನ್ನೆ ಬಂಧಿಸುವ ಈ ವ್ಯವಸ್ಥೆಯ ಬಗ್ಗೆ ಎನು ಹೇಳ ಬೇಕೊ? ನಾಚಿಕೆಗೇಡು… ಹೆಣ್ಣು ಮಕ್ಕಳ ಮೇಲೆ ನಿರ್ಬಂಧ ಹಾಕುವುದನ್ನು ಬಿಟ್ಟು ಹೆಣ್ಣು ಮಕ್ಕಳು ನಿರ್ಭಿತಿಯಿಂದ ಓಡಾಡುವ ವಾತವರಣ ನಿರ್ಮಾಣ ಮಾಡಿ ತೋರಿಸಿ ನಿಮ್ಮ ಯೋಗ್ಯತೆಗೆ… ಎಂದು ಪೂರ್ಣಿಮಾರವರು ಸವಾಲು ಹಾಕಿದ್ದಾರೆ.

ಸಂಜೆ ಆರೂವರೆ ನಂತರ ಹೆಣ್ಣುಮಕ್ಕಳು ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಓಡಾಡುವುದನ್ನು ನಿಷೇಧಿಸುವ ಬದಲು ಪೂರ್ತಿಯಾಗಿ ಶಿಕ್ಷಣದಿಂದಲೇ ಹೆಣ್ಣುಮಕ್ಕಳನ್ನೇ ನಿಷೇಧಿಸಿಬಿಡಿ. ನಮ್ಮಲ್ಲೂ ತಾಲಿಬಾನ್ ಮಾದರಿ ಆಡಳಿತವಿದೆ ಎಂದು ಎದೆ ತಟ್ಟಿಕೊಂಡು ಹೇಳುತ್ತೇವೆ. ಥೂ, ನಿಮ್ಮ ಯೋಗ್ಯತೆಗಿಷ್ಟು ಎಂದು ಪತ್ರಕರ್ತ ದಿನೇಶ್ ಕುಮಾರ್ ದಿನೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕಿಯಾಗಿದ್ದಾಗಲೂ, ಯುವತಿಯಾಗಿದ್ದಾಗಲೂ, ವೃದ್ದೆಯಾಗಿದ್ದಾಗಲೂ ಮನೆಗಳಲ್ಲಿದ್ದಾಗಲೂ ತಾನೇ ಸ್ವತಂತ್ರವಾಗಿ ಸ್ತ್ರೀಯು ಯಾವ ಕಾರ್ಯವನ್ನೂ ಮಾಡಬಾರದು. ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಮನುಸ್ಮೃತಿ ಹೇಳುತ್ತದೆ.

ಭಾರತದ ಯಾವುದೇ ನಾಗರೀಕರಿಗೆ ಜಾತಿ, ವರ್ಗ, ಧರ್ಮ, ಲಿಂಗ, ಜನಾಂಗದ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ಭಾರತದ ಸಂವಿಧಾನದ ವಿಧಿ 15 ಹೇಳುತ್ತದೆ.

ಯುವತಿಯರು ಸಂಜೆ 6:30 ರ ನಂತರ ವಿಶ್ವವಿದ್ಯಾಲಯದ ಅವರಣದಲ್ಲಿ ಏಕಾಂಗಿಯಾಗಿ ಸಂಚರಿಸಬಾರದು ಎಂದು ಮೈಸೂರು ವಿಶ್ವವಿದ್ಯಾಲಯ ಸುತ್ತೋಲೆ ಹೊರಡಿಸಿದೆ.

ಈಗ ಹೇಳಿ.. ಮೈಸೂರು ವಿವಿ ಯಾವುದನ್ನು ಪಾಲಿಸುತ್ತಿದೆ ಎಂದು ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಪ್ರಶ್ನಿಸಿದೆ.

ಈ ಕುರಿತು ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವ ಶಿವಪ್ಪ ರಾಮಕೃಷ್ಣರವರನ್ನು ನಾನುಗೌರಿ.ಕಾಂ ಸಂಪರ್ಕಿಸಿತು. ಅವರು, “ನಾವು ಸುರಕ್ಷತಾ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಬರೆದಿದ್ದೇವೆ. ಆ ರೀತಿಯ ಯಾವ ನಿಬಂಧನೆಗಳು ಹಾಕುವ ಉದ್ದೇಶ ನಮಗಿಲ್ಲ” ಎಂದರು. ಆದರೆ ನಿಮ್ಮ ಸುತ್ತೋಲೆ ನೇರವಾಗಿ ಹೆಣ್ಣು ಮಕ್ಕಳ ವಿರುದ್ಧವಿದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ಕೊಡುತ್ತಿದೆಯಲ್ಲ ಎಂದು ಪ್ರಶ್ನಿಸಿದಾದ ಅದನ್ನು ತಿದ್ದುಕೊಳ್ಳುತ್ತೇವೆ. ಅದನ್ನು ವಾಪಸ್ ಪಡೆದು ಮತ್ತೊಂದು ಸುತ್ತೋಲೆ ಹೊರಡಿಸುತ್ತೇವೆ ಎಂದರು.

ಒಟ್ಟಿನಲ್ಲಿ ಅತ್ಯಾಚಾರದಂತಹ ಅಪರಾಧಗಳ ಹಿಂದಿನ ಕಾರಣಗಳನ್ನು ಅರಿಯುವಲ್ಲಿ ಸರ್ಕಾರಗಳು ಮತ್ತು ನಮ್ಮ ವಿಶ್ವವಿದ್ಯಾನಿಲಯಗಳು ಸಂಪೂರ್ಣ ವಿಫಲವಾಗಿವೆ ಎಂಬುದು ಈ ಘಟನೆಯಿಂದ ಮತ್ತೆ ಸಾಬೀತಾಗಿದೆ. ಪ್ರಜ್ಞಾಂವಂತ ವಲಯದಿಂದ ಬಂದ ತೀವ್ರ ಆಕ್ರೋಶಕ್ಕೆ ಸರ್ಕಾರ ಮತ್ತು ವಿವಿಗಳು ಪಾಠ ಕಲಿಯಬೇಕಿದೆ.


ಇದನ್ನೂ ಓದಿ: ತುಮಕೂರು: ದನ ಮೇಯಿಸಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರ, ಕೊಲೆ- ತನಿಖೆಗೆ ತಂಡ ರಚನೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮುತ್ತುರಾಜು
+ posts

LEAVE A REPLY

Please enter your comment!
Please enter your name here