ಕಮಲಾ ಹ್ಯಾರಿಸ್ ಕಮ್ಯೂನಿಷ್ಟ್ ಆಗಿದ್ದು, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಚುನಾವಣೆಯಲ್ಲಿ ಗೆದ್ದರೆ, ಕಮಲಾ ಒಂದು ತಿಂಗಳಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕಾದಲ್ಲಿ ನವೆಂಬರ್ 3 ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕಾದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿದ್ದಾರೆ.
ಇದನ್ನೂ ಓದಿ: ಜನಾಂಗೀಯ ದಾಳಿಯನ್ನು ಹಿಮ್ಮೆಟ್ಟಿಸುವ ಹೋರಾಟಕ್ಕೆ ಸಿದ್ದಳಾಗಿದ್ದೇನೆ: ಕಮಲಾ ಹ್ಯಾರಿಸ್
ಡೆಮಾಕ್ರಟಿಕ್ ಪಕ್ಷದ ಕಮಲಾ ಮತ್ತು ಅವರ ಪ್ರತಿಸ್ಪರ್ಧಿಯಾದ ರಿಪಬ್ಲಿಕನ್ ಪಕ್ಷದ ಮೈಕ್ ಪೆನ್ಸ್ ಜೊತೆ ಬುಧವಾರ ಚರ್ಚೆಯಲ್ಲಿ ಮುಖಾಮುಖಿಯಾಗಿದ್ದರು. ಅಮೆರಿಕಾದ ಆಡಳಿತ ಪಕ್ಷವಾದ ರಿಪಬ್ಲಿಕನ್ ಸರ್ಕಾರ ಕೊರೊನಾ ಸೋಂಕನ್ನು ನಿರ್ವಹಿಸಿದ ರೀತಿ, ದೇಶದ ನಿರುದ್ಯೋಗ ಸಮಸ್ಯೆ, ಚೀನಾದೊಂದಿಗಿನ ಸಂಬಂಧ, ದೇಶದಲ್ಲಿ ಹೊಗೆಯಾಡುತ್ತಿರುವ ಜನಾಂಗೀಯ ಆಕ್ರೋಶ ಹಾಗೂ ಹವಾಮಾನ ಬದಲಾವಣೆಗಳ ಕುರಿತು ಕಮಲಾ ಹ್ಯಾರಿಸ್ ತೀವ್ರ ವಾಗ್ದಾಳಿ ನಡೆಸಿದ್ದರು.

ಇದಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಕಮಲಾ ಹ್ಯಾರಿಸ್ ಅವರನ್ನು ಪ್ರಶಂಸಿಸಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿದ ಟ್ರಂಪ್, ”ಕಮಲಾ ಒಬ್ಬ ಕಮ್ಯುನಿಸ್ಟ್. ಜೋ ಬೈಡನ್ ಅಧ್ಯಕ್ಷರಾಗಿ ಆಯ್ಕೆಯಾದರೆ ನಾವು ಕಮ್ಯುನಿಸ್ಟ್‌ವೊಬ್ಬರನ್ನು ಪಡೆಯಲಿದ್ದೇವೆ, ಜೊ ಬೈಡನ್ ಆಧ್ಯಕ್ಷರಾಗಿ ಎರಡು ತಿಂಗಳೂ ಉಳಿಯುವುದಿಲ್ಲ ಎಂದು ನನ್ನ ಅಭಿಪ್ರಾಯ” ಎಂದು ಹೇಳಿದ್ದಾರೆ.
”ಕಮಲಾ ಹ್ಯಾರಿಸ್ ಸಮಾಜವಾದಿ ಅಲ್ಲ. ಸಮಾಜವಾದವನ್ನು ಮೀರಿದವರು. ಅವರ ಚಿಂತನೆಗಳನ್ನು ಒಮ್ಮೆ ಗಮನಿಸಿ. ಕೊಲೆಗಾರರು, ಅತ್ಯಾಚಾರಿಗಳು ನಮ್ಮ ದೇಶಕ್ಕೆ ಬಂದು ಸೇರಿಕೊಳ್ಳಲು ಅವರು ಗಡಿಗಳನ್ನು ತೆರೆಯಲಿದ್ದಾರೆ” ಎಂದು ಟ್ರಂಪ್ ತೀಕ್ಷ್ಣವಾಗಿ ದಾಳಿ ಮಾಡಿದ್ದಾರೆ.
ಈ ಹಿಂದೆ ಕಮಲಾ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿಯ ಕುರಿತು, “ಅವರು ಸುಳ್ಳಿನಲ್ಲಿ, ಮೋಸದಲ್ಲಿ ತೊಡಗಲಿದ್ದಾರೆ. ಅವರು ಅಮೆರಿಕಾದ ಜನರ ಮೇಲೆ ಪರಿಣಾಮ ಬೀರುವ ನೈಜ ಸಮಸ್ಯೆಗಳಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದರು.
ಇದನ್ನೂ ಓದಿ: ಕೊರೊನಾ ಬಗ್ಗೆ ತಪ್ಪು ಮಾಹಿತಿ: ಟ್ರಂಪ್ ಟ್ವೀಟ್ ಅನ್ನು ನಿರ್ಬಂಧಿಸಿದ ಟ್ವಿಟ್ಟರ್


