ಕರ್ನಾಟಕ ರಣಧೀರ ಪಡೆಯ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಗಿದ್ದು, “ನವೆಂಬರ್ 1 ನೇ ದಿನವನ್ನು ಇನ್ನುಮುಂದೆ “ಕನ್ನಡ ಕಂಕಣ ದಿನ”ವನ್ನಾಗಿ ಆಚರಿಸಲಾಗುತ್ತದೆ. ಈ ಮೂಲಕ ಕನ್ನಡದ ಕೆಲಸಗಳನ್ನು ರಾಜ್ಯದಾದ್ಯಂತ ಮಾಡಲಾಗುತ್ತದೆ” ಎಂದು ರಣಧೀರ ಪಡೆಯ ಭೈರಪ್ಪ ಹರೀಶ್ ಕುಮಾರ್ ಹೇಳಿದರು.
ಇಂದು ಬೆಂಗಳೂರಿನ ಆನಂದರಾವ್ ವೃತ್ತದಲ್ಲಿ ಧ್ವಜಾರೋಹಣ ಮಾಡಿ, ಎಲ್ಲರಿಗೂ ಕಂಕಣ ಕಟ್ಟುವ ಮೂಲಕ ಕನ್ನಡ ಭಾಷೆ, ಸಂಸ್ಕೃತಿಯನ್ನು ಯುವಪೀಳಿಗೆಗೆ ತಲುಪಿಸಿ ತಮ್ಮ ಸಂಘಟನೆಯ ಕೆಲಸವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿರುವ, ವರ್ಷಪೂರ್ತಿ ಸಕ್ರಿಯವಾಗಿ ಕ್ರಿಯಾತ್ಮಕ ಕಾರ್ಯಕ್ರಮಗಳು ಮತ್ತು ಹೋರಾಟಗಳನ್ನು ಮಾಡಿಕೊಂಡುಬರುತ್ತಿರುವ ಕರ್ನಾಟಕ ರಣಧೀರ ಪಡೆ, ಈ ಬಾರಿ ಇಂತಹ ವಿಶೇಷ ಕಾರ್ಯಕ್ರಮವೊಂದನ್ನು ಮಾಡುವುದರ ಮೂಲಕ ರಾಜ್ಯ ಮಾತ್ರವಲ್ಲದೇ ಸಾಗರವನ್ನೂ ದಾಟಿ ವಿದೇಶಗಳಲ್ಲೂ ಬೆಂಬಲ ಪಡೆದಿದೆ. ಈ ಮೂಲಕ ಅಲ್ಲಿಯೂ ಕನ್ನಡ ಕಂಕಣ ದಿನವನ್ನು ಆಚರಿಸಲಾಗಿದೆ.
ಇದನ್ನೂ ಓದಿ:ರಾಜ್ಯೋತ್ಸವದ ಕುರಿತು ಕನ್ನಡದಲ್ಲಿ ಟ್ವೀಟ್ ಮಾಡಿ ಪ್ರಶಂಸೆ ಮತ್ತು ಟ್ರೋಲ್‌ಗೊಳಗಾದ ಪ್ರಧಾನಿ ಮೋದಿ…

ಇದನ್ನೂ ಓದಿ: ಕನ್ನಡ ಧ್ವಜಾರೋಹಣವಿಲ್ಲದೇ ಕನ್ನಡ ರಾಜ್ಯೋತ್ಸವ: ಸರ್ಕಾರದ ವಿರುದ್ಧ ಕಿಡಿ ಕಾರಿದ ನೆಟ್ಟಿಗರು
ಕೊರೊನಾ ಸಂದರ್ಭದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಕನ್ನಡಹಬ್ಬವನ್ನು ಆಚರಿಸಲು ಸಾಧ್ಯವಿಲ್ಲ. ಹಾಗಾಗಿ ಕನ್ನಡಾಭಿಮಾನಿಗಳು ಎಲ್ಲಿದ್ದಾರೋ ಅಲ್ಲಿಂದಲೇ ಕಂಕಣ ಕಟ್ಟಿಕೊಂಡು ಈ ಹಬ್ಬವನ್ನು ಆಚರಿಸಿ ಕನ್ನಡದ ಕೆಲಸಗಳನ್ನು ಮಾಡಲು ಕಂಕಣ ಕಟ್ಟಿಕೊಳ್ಳುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.
“ನಾವು ಕನ್ನಡಕ್ಕಾಗಿ ವರ್ಷಪೂರ್ತಿ ಹೋರಾಟಗಳನ್ನು ಮಾಡುತ್ತಲೇ ಇರುತ್ತೇವೆ. ಆದರೆ ಈ ದಿನದಂದು ಕನ್ನಡ ರಾಜ್ಯೋತ್ಸವವನ್ನು ಮನೆಮನೆಯ ಹಬ್ಬವಾಗಿ ಆಚರಿಸಬೇಕು ಎಂದು ಕೇಳಿಕೊಳ್ಳುತ್ತೇವೆ. ಈ ಮೂಲಕ ನಿಮ್ಮ ಮನೆಯ ಜನ ಮತ್ತು ಮುಂದಿನ ಪೀಳಿಗೆಗೆ ಕನ್ನಡದ ಕಂಪನ್ನು ವಿಸ್ತರಿಸಿ. ಕನ್ನಡಕ್ಕಾಗಿ ಕಂಕಣ ತೊಡಿ” ಎಂದು ಹರೀಶ್ ಕುಮಾರ್ ಹೇಳಿದರು.
“ಈ ವರ್ಷ ಸುಮಾರು 1 ಲಕ್ಷ ಕಂಕಣಗಳನ್ನು ತಯರಿಸಲಾಗಿದೆ. ಇದನ್ನು ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವ ಕನ್ನಡಪ್ರೇಮಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ. ಇಡೀ ತಿಂಗಳು ಈ ಹಬ್ಬವನ್ನು ವಿಜೃಂಭಣೆಯಿಂದ ಎಲ್ಲರೂ ಆಚರಿಸೋಣ. ಈ ವರ್ಷ ಶಾಲಾ ಕಾಲೇಜುಗಳಿಲ್ಲ. ಹಾಗಾಗಿ ಮುಂದಿನ ವರ್ಷದಿಂದ ಈ ಕಂಕಣ ದಿನವನ್ನು ಶಾಲಾ ಕಾಲೇಜುಗಳಿಗೂ ವಿಸ್ತರಿಸಿ, ಅಲ್ಲಿಯೂ ಆಚರಿಸಲಾಗುವುದು. ಇದು ಹೀಗೆಯೇ ಪ್ರತಿವರ್ಷವೂ ವಿಭಿನ್ನವಾಗಿ ಆಚರಣೆಯಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವದಂದು ಜಾಗತಿಕ ಲಿಂಗಾಯತ ಮಹಾಸಭಾದ ಸಾಗರೋತ್ತರ ಶಾಖೆ ಪ್ರಾರಂಭ


