ನಸ್ಟಾಸಿಯ ಪಿಲಿಪೊವ್ನ ತನ್ನನ್ನು ತಾನೆ ವಿನಾಶದೆಡೆಗೆ ತಳ್ಳಿಕೊಳ್ಳುವುದರಲ್ಲಿ ಸಾಕಷ್ಟು ಸಮರ್ಥಳಾಗಿದ್ದಳು, ಸೈಬೀರಿಯಾಗೆ ಕಳುಹಿಸಬಹುದಂತಹ ಯಾವುದಾದರೂ ಅಪರಾಧ ಎಸಗುವುದರಲ್ಲೂ ಕೂಡ; ದ್ವೇಷ ಮತ್ತು ತಿರಸ್ಕಾರವನ್ನು ಬೆಳೆಸಿಕೊಂಡಿದ್ದ ಒಬ್ಬ ಮನುಷ್ಯನನ್ನು ಘಾಸಿಗೊಳಿಸುವುದರಿಂದ ಉಂಟಾಗುವ ಆನಂದವನ್ನ ಅನುಭವಿಸುವುದಕ್ಕೋಸ್ಕರವಷ್ಟೇ ಅದನ್ನವಳು ಸಾಧಿಸಲು ಶಕ್ತಳಾಗಿದ್ದಳು. ಅವಳು ಈ ಪ್ರಪಂಚದಲ್ಲಿ ಯಾವುದನ್ನೂ ಮೌಲ್ಯಾಧಾರಿತವಾಗಿ ನೋಡುವುದಿಲ್ಲ- ತನ್ನನ್ನು ಕೂಡ- ಅನ್ನುವ ಅವಳ ಸ್ವಭಾವವನ್ನ ಅರಿತುಕೊಳ್ಳುವಷ್ಟು ಒಳನೋಟ ಅವನಲ್ಲಿತ್ತು. ಕೆಲವು ವಿಷಯಗಳಲ್ಲಿ ತಾನು ಹೇಡಿ ಅನ್ನುವುದನ್ನ ಮುಚ್ಚಿಡಲು ಅವನೆಂದೂ ಪ್ರಯತ್ನಿಸಿರಲಿಲ್ಲ. ಉದಾಹರಣೆಗೆ, ಚರ್ಚ್‌ನ ಟೇಬಲ್ ಮೇಲೆ ಅವನನ್ನು ಇರಿದು ಕೊಲ್ಲಲಾಗುತ್ತದೆ ಎಂದೋ, ಅಥವಾ ಸಾರ್ವಜನಿಕವಾಗಿ ಅವಮಾನ ಮಾಡಲಾಗುತ್ತದೆ ಎಂದೋ ಹೇಳಿದರೆ ಸಾಕಿತ್ತು, ಸಂಶಯವಿಲ್ಲದೇ ಹೆದರಿಬಿಡುತ್ತಿದ್ದ; ಅದು ತನಗೆ ಘಾಸಿಯಾಗುತ್ತದೆ ಅಥವಾ ಕೊಲ್ಲಲ್ಪಪಡುತ್ತೇನೆ ಅಥವಾ ಅವಮಾನಿತನಾಗುತ್ತೇನೆ ಎನ್ನುವ ಕಾರಣಕ್ಕಿಂತ ಹೆಚ್ಚಾಗಿ ಸಮಾಜದ ದೃಷ್ಟಿಯಲ್ಲಿ ತಾನು ಹಾಸ್ಯಾಸ್ಪದ ವ್ಯಕ್ತಿಯಾಗುತ್ತೇನೆ ಎನ್ನುವ ಕಾರಣದಿಂದ.
ನಸ್ಟಾಸಿಯ ಅವನನ್ನು ನಿಖರವಾಗಿ ಅರ್ಥಮಾಡಿಕೊಂಡಿದ್ದು ಹೇಗೆ ಮತ್ತು ಯಾವಾಗ ಆತನನ್ನು ಗಾಯಗೊಳಿಸಬಹುದು ಎನ್ನುವುದನ್ನ ಕೂಡ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾಳೆ ಎನ್ನುವುದು ಅವನಿಗೆ ಸ್ಪಷ್ಟವಾಗಿ ತಿಳಿದಿತ್ತು; ಆದದ್ದರಿಂದ, ಅವನ ಮದುವೆ ಇನ್ನೂ ಭ್ರೂಣಾವಸ್ಥೆಯಲ್ಲಿದ್ದ ಕಾರಣದಿಂದ, ಟೋಟ್ಸ್ಕಿ ಅವಳನ್ನು ಸಮಾಧಾನ ಪಡಿಸುವುದಕ್ಕೋಸ್ಕರವಷ್ಟೇ ತನ್ನ ಮದುವೆಯನ್ನ ರದ್ದುಗೊಳಿಸಿದ. ನಂತರ ನಸ್ಟಾಸಿಯ ಫಿಲಿಪೊವ್ನ ತಡವಾಗಿಯಾದರೂ ಕುತೂಹಲಕರವೆಂಬಂತೆ ಬದಲಾಗಿದ್ದ ಕಾರಣದಿಂದ ಈ ಅವನ ನಿರ್ಧಾರಕ್ಕೆ ಬಲ ಸಿಕ್ಕಿತ್ತು. ಅವಳು ಕೆಲವು ವರ್ಷಗಳ ಹಿಂದಿದ್ದ ರೀತಿಯ ಹುಡುಗಿಗೆ ಹೋಲಿಸಿದರೆ ಅವಳೀಗ ಭೌತಿಕವಾಗಿ ಎಷ್ಟು ವಿಭಿನ್ನವಾಗಿದ್ದಾಳೆ ಎನ್ನುವುದನ್ನ ಊಹಿಸುವುದೂ ಕಷ್ಟಕರ. ಆಗವಳು ಮುದ್ದಾಗಿದ್ದಳು… ಆದರೆ ಈಗ! ಟೋಟ್ಸ್ಕಿ ತಾನೆಂತಹ ಕುರುಡನಾಗಿದ್ದೆ ಅನ್ನುವದನ್ನ ಯೋಚಿಸಿ ಕೋಪದಿಂದಲೇ ನಗಲು ಶುರುಮಾಡಿದ. ಸರಿದು ಹೋದ ದಿನಗಳಲ್ಲಿ ತಾನು ಯಾವ ರೀತಿಯಲ್ಲಿ ಅವಳ ಸುಂದರ ಕಣ್ಣುಗಳ ಕಡೆಗೆ ನೋಡುತ್ತಿದ್ದೆ ಎಂದು ಅವನು ನೆನಪಿಸಿಕೊಂಡ, ಆಗಲೂ ಕೂಡ ಅವನು ಆ ಕಣ್ಣುಗಳಲ್ಲಿನ ನಿಗೂಢವಾದ ಆಳದ ಬಗ್ಗೆ ಬೆರಗುಗೊಳ್ಳುತ್ತಿದ್ದ, ಅವುಗಳ ಕುತೂಹಲಭರಿತ ನೋಟ, ಯಾವುದೋ ಅಜ್ಞಾತವಾದ ಒಗಟಿಗೆ ಉತ್ತರ ಕೇಳುತ್ತಿರುವಂತಿತ್ತು. ಅವಳ ಮುಖಕಾಂತಿ ಕೂಡ ಬದಲಾಗಿತ್ತು. ಅವಳೀಗ ವಿಪರೀತವಾಗಿ ಬಿಳಿಚಿಕೊಂಡಿದ್ದಳು, ಆದರೆ ಕುತೂಹಲಕರವಾದ ರೀತಿಯಲ್ಲಿ ಅವಳ ಮುಖಕಾಂತಿಯಲ್ಲಿನ ಈ ಬದಲಾವಣೆ ಅವಳಿಗೆ ಇನ್ನೂ ಹೆಚ್ಚು ಸೌಂದರ್ಯವನ್ನ ತಂದುಕೊಟ್ಟಿತ್ತು. ಪ್ರಪಂಚದ ಎಲ್ಲಾ ಪುರುಷರಂತೆಯೇ, ಟೋಟ್ಸ್ಕಿ ಕೂಡ ಈ ರೀತಿಯಲ್ಲಿ ಅಗ್ಗವಾಗಿ ಪಡೆದ ಹೆಣ್ಣಿನ ಬಗ್ಗೆ ತಿರಸ್ಕಾರದ ಮನೋಭಾವ ಹೊಂದಿದ್ದ, ಆದರೆ ಅವನು ಇತ್ತೀಚಿನ ವರ್ಷಗಳಲ್ಲಿ ಇದರ ಬಗ್ಗೆ ಬೇರೆಯ ರೀತಿಯಲ್ಲಿಯೇ ಯೋಚಿಸಲು ಶುರುಮಾಡಿದ. ಕಳೆದ ವಸಂತ ಕಾಲದ ನಂತರದ ಸಮಯದಿಂದೀಚೆಗೆ ಅವನಿಗೆ ಅನಿಸಿದ್ದು ನಸ್ಟಾಸಿಯಳಿಗೆ ಒಂದು ಒಳ್ಳೆಯ ಜೋಡಿಯನ್ನ ಹುಡುಕಿ ಮದುವೆ ಮಾಡಬೇಕೆಂದು; ಉದಾಹರಣೆಗೆ, ಬೇರೆ ಪ್ರಾಂತ್ಯದಲ್ಲಿ ಸರ್ಕಾರಿ ಕೆಲಸದಲ್ಲಿರುವ ಒಬ್ಬ ಗೌರವಾನ್ವಿತ ಮತ್ತು ವಿಚಾರವಂತ ಯುವಕನನ್ನು ಹುಡುಕಿ ಅವಳಿಗೆ ಮದುವೆ ಮಾಡಬೇಕೆಂದು ಯೋಚಿಸಿದ. ಈಗ ನಸ್ಟಾಸಿಯ ಈ ಪ್ರಸ್ತಾವನೆಗೆ ಅತ್ಯಂತ ದ್ವೇಷಪೂರಿತವಾಗಿ ನಕ್ಕುಬಿಟ್ಟಳು!
ಏನೇ ಆದರೂ, ಟೋಟ್ಸ್ಕಿಗೆ ಅನಿಸಿದ್ದು ಅವಳನ್ನ ಬೇರೇ ರೀತಿಯಲ್ಲಿಯೇ ಉಪಯೋಗಿಸಿಕೊಳ್ಳಬಹುದು ಎಂದು; ಅವಳನ್ನು ಸೆಂಟ್ ಪೀಟರ್ಸ್‌ಬರ್ಗಿಗೆ ಕಳುಹಿಸಿ, ತನ್ನ ಶ್ರೀಮಂತಿಕೆ ಅನುಮತಿಸುವಷ್ಟು ಅಲ್ಲಿ ಅವಳಿಗೆ ಎಲ್ಲಾ ರೀತಿಯ ಸುಖಸಂತೋಷವನ್ನ ತಂದುಕೊಡುವ ಐಶಾರಾಮಿ ಸೌಲಭ್ಯಗಳನ್ನು ಒದಗಿಸಬೇಕೆಂದು ಅವನು ನಿರ್ಧರಿಸಿದ್ದ. ಈ ರೀತಿ ಮಾಡುವುದರಿಂದ ಕೆಲವು ವಲಯಗಳಲ್ಲಿ ಅವನಿಗೆ ವೈಭವದ ಮನ್ನಣೆಯೂ ಸಿಗಬಹುದೆಂದು ಯೋಚಿಸಿದ.
ಈ ಪೀಟರ್ಸ್‌ಬರ್ಗಿನಲ್ಲಿನ ಐದು ವರ್ಷಗಳ ಜೀವನ ಬಹಳ ಬೇಗನೆ ಕಳೆದು ಹೋಗಿ ಬಿಟ್ಟಿತು; ಮಾಮೂಲಿನಂತೆ ಈ ಸಮಯದಲ್ಲಿ ಬೇಕಾದಷ್ಟು ಸಂಗತಿಗಳು ನಡೆದುಹೋದವು. ಟೋಟ್ಸ್ಕಿಯ ಸ್ಥಾನ ಈಗ ಬಹಳ ಅಹಿತಕರವಾಗಿತ್ತು; ಒಮ್ಮೆ ಅಧೈರ್ಯಗೊಂಡು ಅಳ್ಳಾಡಿಹೋದನಂತರ, ಅವನಿಗೆ ಪುನಃ ನಿಶ್ಚಿಂತೆಯಿಂದಿರುವುದು ಸಾಧ್ಯವೇ ಆಗಲಿಲ್ಲ. ಅವನು ಭಯಪಡುತ್ತಿದ್ದ, ಯಾವ ಕಾರಣಕ್ಕೆಂದು ಅವನಿಗೇ ತಿಳಿಯುತ್ತಿರಲಿಲ್ಲ, ಆದರೆ ಅವನು ಸುಮ್ಮನೆ ಕಾರಣವಿಲ್ಲದೇ ನಸ್ಟಾಸಿಯಾ ಫಿಲಿಪೊವ್ನಳ ಬಗ್ಗೆ ಹೆದರುತ್ತಿದ್ದ. ಮೊದಲ ಎರಡು ವರ್ಷಗಳಷ್ಟು ಕಾಲ ಅವನು ಅನುಮಾನಿಸಿದ್ದು ನಸ್ಟಾಸಿಯ ಫಿಲಿಪೊವ್ನಳೇ ತನ್ನನ್ನು ಮದುವೆಯಾಗಲು ಇಚ್ಛಿಸುತ್ತಿದ್ದಾಳೆ ಎಂದು ಮತ್ತು ಅವಳ ಒಣ ಹೆಮ್ಮೆ ಅದನ್ನ ಅವನಿಗೆ ನಿವೇದಿಸುವುದನ್ನ ತಡೆಯುತ್ತಿದೆಯೆಂದು. ಅವನೇ ಖುದ್ದಾಗಿ ಮದುವೆಯ ಪ್ರಸ್ತಾವನೆಯನ್ನ ವಿನಯಪೂರ್ವಕವಾಗಿ ಅವಳ ಮುಂದೆ ಮಾಡಲೆಂದು ಕಾಯುತ್ತಿದ್ದಾಳೆ ಎಂದು ಅವನು ಅಂದುಕೊಂಡ. ಇವೆಲ್ಲವೂ ಸತ್ಯಕ್ಕೆ ಬಹಳ ದೂರ ಎಂಬುದನ್ನ ಅವನು ಕಂಡುಕೊಂಡಾಗ, ಅವನಿಗೆ ಸಂತೋಷಕರವಾದ ವಿಸ್ಮಯ ಉಂಟಾಗದೇ ಇದ್ದರೂ ಅದು ಅವನ ಒಳಿತಿಗಾಗಿತ್ತು; ಅವನೇ ಏನಾದರೂ ಈ ಪ್ರಸ್ತಾವನೆಯನ್ನ ಅವಳ ಮುಂದೆ ಇಟ್ಟರೆ ಕೂಡ ಅವಳು ಅದನ್ನ ತಿರಸ್ಕರಿಸಿಬಿಡುತ್ತಾಳೆ ಅನ್ನುವುದೂ ಕೂಡ ಅವನ ಅರಿವಿಗೆ ಬಂದಿತು. ಅವನಿಗೆ ಈ ರೀತಿಯ ಪರಿಸ್ಥಿತಿಯ ಅರಿವು ಅರ್ಥವಾದದ್ದಾಗಿದೆ; ಅವನು ಕೊನೆಗೂ ತೀರ್ಮಾನವೊಂದಕ್ಕೆ ಬರಲು ಪ್ರೇರೇಪಿತನಾದದ್ದು ಹೆಮ್ಮೆಯ ಕಾರಣಕ್ಕಾಗಿ, ಘಾಸಿಗೊಂಡ ಮತ್ತು ಕಲ್ಪನಾಲೋಕದಲ್ಲಿದ್ದ ಹೆಣ್ಣಿನ ಹೆಮ್ಮೆಯಿಂದ, ಮತ್ತದು ಯಾವ ಮಟ್ಟಕೆ ಹೋಯಿತೆಂದರೆ, ಈವರೆಗೂ ತಲುಪಲಾಗದಂತಹ ವೈಭವವನ್ನ ತಲುಪುವ ಪ್ರಯತ್ನ ಮಾಡುವುದರ ಬದಲಾಗಿ, ಸುಮ್ಮನೆ ಕುಳಿತು ತನ್ನ ತಿರಸ್ಕಾರ ಮತ್ತು ದ್ವೇಷವನ್ನ ಏಕಾಂಗಿಯಾಗಿ ಪೋಷಿಸುವುದು ಅದರ ಆದ್ಯತೆಯಾಗಿತ್ತು. ಅವಳನ್ನು ಯಾವುದೇ ರೀತಿಯ ಆಮಿಷಗಳಿಂದ ಭೇದಿಸುವುದು ಅಸಾಧ್ಯವಾಗಿತ್ತು ಮತ್ತು ಅವಳಿಗೆ ಯಾವುದೇ ಕಾರಣಕ್ಕೂ ಲಂಚ ಕೊಡುವುದಂತೂ ಆಗದ ಮಾತಾಗಿತ್ತು ಎಂಬುದು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಿತ್ತು.
ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-1)
ಕೊನೆಗೂ ಟೋಟ್ಸ್ಕಿ ಅವಳ ಸಂಕೋಲೆಯಿಂದ ತಪ್ಪಿಸಿಕೊಂಡು ಸ್ವತಂತ್ರನಾಗಲು ಕುತಂತ್ರದ ಮಾರ್ಗಕ್ಕೆ ಶರಣಾದ. ಅವಳು ಯಾರಿಗಾದರೂ ತನ್ನ ಹೃದಯವನ್ನ ಅರ್ಪಿಸುವಂತೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡಿದ. ಅವನು ಪ್ರಿನ್ಸ್‌ಗಳನ್ನು, ಅಶ್ವಾರೋಹಿಗಳನ್ನ, ರಾಯಭಾರ ಕಚೆರಿಗಳ ಕಾರ್ಯದರ್ಶಿಗಳನ್ನ, ಕವಿಗಳನ್ನ, ಕಾದಂಬರಿಕಾರರನ್ನ ಮತ್ತು ಸಮಾಜವಾದಿಗಳನ್ನ ಕೂಡ ಮನೆಗೆ ಆಮಂತ್ರಿಸಲು ಪ್ರಾರಂಭಿಸಿದ; ಆದರೆ ಅವರುಗಳಲ್ಲಿ ಯಾರೊಬ್ಬನಿಂದಲೂ ಕೂಡ ನಸ್ಟಾಸಿಯ ಪ್ರಭಾವಿತಳಾಗಲಿಲ್ಲ. ಬಹುಶಃ ಅವಳಲ್ಲಿ ಹೃದಯದ ಜಾಗದಲ್ಲಿ ಕಲ್ಲನ್ನ ಇರಿಸಲಾಗಿದೆ, ಅವಳಲ್ಲಿನ ಭಾವನೆಗಳು ಮತ್ತು ವಾತ್ಸಲ್ಯ ಇಂಗಿ ಹೋಗಿ ಶಾಶ್ವತವಾಗಿ ಚದುರಿಹೋಗಿಬಿಟ್ಟಿವೆ ಅನ್ನುವ ರೀತಿ.
ಅವಳು ಸಂಪೂರ್ಣವಾಗಿ ಏಕಾಂಗಿಯಾಗಿಯೇ ಬದುಕುತ್ತಿದ್ದಳು; ಅವಳು ಬಹಳವಾಗಿ ಓದುತ್ತಿದ್ದಳು, ಅಭ್ಯಸಿಸುತ್ತಿದ್ದಳು ,ಅವಳಿಗೆ ಸಂಗೀತವೆಂದರೆ ಪಂಚಪ್ರಾಣ. ಅವಳ ಪ್ರಮುಖವಾದ ಪರಿಚಯಸ್ಥರೆಂದರೆ ಬೇರೆಬೇರೆ ವರ್ಗಗಳ ಬಡ ಹೆಂಗಸರುಗಳು, ಒಂದಿಬ್ಬರು ನಟಿಯರು ಮತ್ತು ಬಡ ಶಾಲೆಯ ಪ್ರಾಧ್ಯಾಪಕನೊಬ್ಬನ ಕುಟುಂಬ. ಈ ಜನಗಳ ದೃಷ್ಟಿಯಲ್ಲಿ ಅವಳು ಪ್ರೀತಿಪಾತ್ರಳಾಗಿದ್ದಳು.
ಕೆಲವು ವೇಳೆ ಅವಳು ನಾಲ್ಕೈದು ಜನ ಸ್ನೇಹಿತರನ್ನ ಸಂಜೆಯ ವೇಳೆ ಮನೆಗೆ ಆಮಂತ್ರಿಸಿ ಭೇಟಿಯಾಗುತ್ತಿದ್ದಳು. ಟೋಟ್ಸ್ಕಿ ಪದೇಪದೇ ಅವಳ ಮನೆಗೆ ಬರುತ್ತಿದ್ದ. ಇತ್ತೀಚೆಗೆ ಅವಳ ಬಳಗಕ್ಕೆ ಜನರಲ್ ಎಪಾಂಚಿನ್ ಬಹಳ ಪ್ರಯಾಸದಿಂದ ತನ್ನನ್ನು ತಾನೇ ಪರಿಚಯಿಸಿಕೊಂಡ. ಗಾನಿಯ ಕೂಡ ಅವಳ ಪರಿಚಯದವನಾದ, ಬೇರೆಯವರೆಂದರೆ ಫರ್ಡಿಶೆಂಕೊ, ಅವನು ಕೆಟ್ಟ ಹಿನ್ನೆಲೆಯಿಂದ ಬೆಳೆದುಬಂದ ಗುಮಾಸ್ತ, ತಾನು ಬಹಳ ಹಾಸ್ಯಮಯ ವ್ಯಕ್ತಿಯೆಂದು ಅಂದುಕೊಂಡು ಅತಿಯಾಗಿ ಕುಡಿಯುತ್ತಿದ್ದ ಪ್ಟಿಟ್ಸಿನ್, ಒಬ್ಬ ಲೇವಾದೇವಿ ಮಾಡುವ ವ್ಯಕ್ತಿ, ಅವನು ಬಹಳ ನಯವಾದ ಶಿಷ್ಟಾಚಾರವನ್ನ ರೂಢಿಸಿಕೊಂಡವನು ಹಾಗೂ ಬಡತನದಿಂದ ಮೇಲೆ ಬಂದವನು. ವಾಸ್ತವವಾಗಿ ಇಡೀ ನಗರದಲ್ಲೆಲ್ಲಾ ನಸ್ಟಾಸಿಯ ಫಿಲಿಪೊವ್ನಳ ಸೌಂದರ್ಯ ಹೆಸರುವಾಸಿಯಾಗಿತ್ತು; ಆದರೆ ಒಬ್ಬ ಮನುಷ್ಯನೂ ಅವಳ ಬಗ್ಗೆಗಿನ ಅವನದೇ ಆದ ಮೆಚ್ಚುಗೆಯ ಹೆಗ್ಗಳಿಕೆಯನ್ನಲ್ಲದೇ ಬೇರೇನನ್ನೂ ಕೊಚ್ಚಿಕೊಳ್ಳಲಾಗುತ್ತಿರಲಿಲ್ಲ; ಅವಳ ಈ ಪ್ರಖ್ಯಾತಿ, ಅವಳ ಬುದ್ಧಿಶಕ್ತಿ, ಸಂಸ್ಕೃತಿ, ಬೆಡಗು ಮತ್ತು ವೈಯ್ಯಾರ, ಎಲ್ಲವೂ ಟೋಟ್ಸ್ಕಿಯು ಈಗ ತಯಾರುಮಾಡಿದ್ದ ಯೋಜನೆಯನ್ನ ದೃಢಪಡಿಸಿದವು.
ಇದೇ ಸಮಯದಲ್ಲಿ ಜನರಲ್ ಎಪಾಂಚಿನ್ ಇಡೀ ಈ ಕಥಾನಕದಲ್ಲಿ ಬಹಳ ಪ್ರ್ರಮುಖವಾದ ಪಾತ್ರವನ್ನ ವಹಿಸಲು ಪ್ರಾರಂಭಿಸಿದ್ದು.
ಟೋಟ್ಸ್ಕಿ ಜನರಲ್‌ನನ್ನು ಸಂಪರ್ಕಿಸಿ ಜನರಲ್‌ನ ಹೆಣ್ಣುಮಕ್ಕಳಲ್ಲಿ ಒಬ್ಬಳ ಜೊತೆ ತನ್ನ ವಿವಾಹದ ವಿಷಯದಲ್ಲಿ ಸ್ನೇಹಪರವಾದ ಸಲಹೆಯನ್ನ ಕೇಳಿದ ಸಂದರ್ಭದಲ್ಲಿ ತನ್ನ ವಿಷಯವನ್ನೆಲ್ಲಾ ಸಂಪೂರ್ಣವಾಗಿ ಮತ್ತು ಮುಚ್ಚುಮರೆಯಿಲ್ಲದೇ ಬಿಚ್ಚಿಟ್ಟ. ಅವನು ತನ್ನ ಸ್ವಾತಂತ್ರ್ಯವನ್ನ ವಾಪಸ್ಸು ಗಳಿಸಿಕೊಳ್ಳುವುದಕ್ಕೆ ಯಾವುದಕ್ಕೂ ಹಿಂಜರಿಯುವುದಿಲ್ಲ ಅಂತ ಹೇಳಿದ; ನಸ್ಟಾಸಿಯ ಭವಿಷ್ಯದಲ್ಲಿ ಅವನನ್ನು ಸಂಪೂರ್ಣವಾಗಿ ಬಿಟ್ಟು ಹೊರಟುಹೋಗುತ್ತೇನೆ ಎಂದು ಹೇಳಿದರೂ ಕೂಡ; ಅವನು ಅವಳನ್ನು (ಅವನು ಹೇಳಿದ್ದು) ನಂಬುವುದಿಲ್ಲ ಮತ್ತು ಅವಳಲ್ಲಿ ಭರವಸೆ ಇಡುವುದಿಲ್ಲ ಎಂದು ಕೂಡ ಹೇಳಿಕೊಂಡ; ಬರೀ ಮಾತುಗಳು ಅವನಿಗೆ ಈಗ ಸಾಲದಾಗಿದೆ; ಅವನಿಗೆ ಅದು ಯಾವುದಾದರೂ ರೀತಿಯಲ್ಲಿ ದೃಢವಾಗಬೇಕಿತ್ತು, ಆದ್ದರಿಂದ ಅವನು ಮತ್ತು ಜನರಲ್, ಯಾವ ರೀತಿಯ ಪ್ರಯತ್ನದಿಂದ ಅವಳ ಹೃದಯ ಪರಿಣಾಮಕಾರಿಯಾಗಿ ಬದಲಾವಣೆಯಾಗುತ್ತದೆ ಅನ್ನುವುದನ್ನ ಪರಿಶೀಲಿಸಬೇಕು ಎಂದು ನಿರ್ಧರಿಸಿದರು. ನಸ್ಟಾಸಿಯಾಳ ಮನೆಗೆ ಎಪಾಂಚಿನ್‌ನ ಜೊತೆಯಲ್ಲಿ ಒಂದು ದಿನ ಹೋದ ತಕ್ಷಣವೇ ಟೋಟ್ಸ್ಕಿ ಸಹಿಸಿಕೊಳ್ಳಲಾಗದಂತಹ ಹಿಂಸೆಯನ್ನ ಅನುಭವಿಸುತ್ತಿದ್ದಂತಹ ತನ್ನ ಪರಿಸ್ಥಿತಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ. ಎಲ್ಲ ಬೆಳವಣಿಗೆಗಳಿಗೆ ಕಾರಣಕರ್ತ ಮತ್ತು ತಪ್ಪಿತಸ್ತ ತಾನೇ ಎಂದು ಅವನು ಒಪ್ಪಿಕೊಂಡ. ಅವಳ ಜೊತೆಗೆ ಎಸಗಿದ ಮೂಲ ಅಪರಾಧಗಳಿಗೆ ಪಶ್ಚಾತ್ತಾಪ ಪಡದೇ ಇದ್ದುದನ್ನು ಮಾತಿನ ಭರದಲ್ಲಿ ಬಿನ್ನವಿಸಿಕೊಂಡ; ಇದಕ್ಕೆ ಕಾರಣ ತಾನೊಬ್ಬ ಅತಿಯಾದ ಇಂದ್ರಿಯಾಸಕ್ತಿಯುಳ್ಳ ಮನುಷ್ಯ, ಅದು ತನ್ನಲ್ಲಿ ಆನುವಂಶಿಕವಾಗಿ ಬಂದಿದ್ದು, ಅಳಿಸಲಸಾಧ್ಯವಾದದ್ದಾಗಿದೆ, ಈ ವಿಷಯದಲ್ಲಿ ತನ್ನ ಮೇಲೆ ತನಗೇ ಯಾವುದೇ ರೀತಿಯ ನಿಯಂತ್ರಣಾ ಶಕ್ತಿ ಇಲ್ಲದಿರುವುದು; ಆದರೆ ಈಗ ಗಂಭೀರವಾಗಿ ಕೊನೆಗೂ ಮದುವೆಯಾಗಲು ನಿಶ್ಚಯಿಸಿದೆ, ತಾನೊಬ್ಬ ಪ್ರತಿಷ್ಠಿತ ಹೆಣ್ಣೊಂದನ್ನು ಮದುವೆಯಾಗುವುದರ ಬಗ್ಗೆಗಿನ ಭವಿಷ್ಯ ಈಗ ಅವಳ ಮೇಲೆ ಅವಲಂಬಿತವಾಗಿದೆ; ಅದೆಲ್ಲವನ್ನೂ ಸಾಕಾರಗೊಳಿಸಲು ಅವಳ ಹೃದಯದ ಉದಾರತೆಗೆ ಬಿಟ್ಟಿದ್ದೇನೆ ಎಂದು ಹೇಳಿದ.

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.


