Homeಮುಖಪುಟಗೋವುಗಳನ್ನು ತಬ್ಬಿಕೊಳ್ಳಿ ಎನ್ನುವ ಸರ್ಕಾರ ಹೈನುಗಾರಿಕೆಯ ಕಷ್ಟ ಆಲಿಸುತ್ತಿದೆಯೇ?

ಗೋವುಗಳನ್ನು ತಬ್ಬಿಕೊಳ್ಳಿ ಎನ್ನುವ ಸರ್ಕಾರ ಹೈನುಗಾರಿಕೆಯ ಕಷ್ಟ ಆಲಿಸುತ್ತಿದೆಯೇ?

- Advertisement -
- Advertisement -

(2022ರ ಜೂನ್‌ ತಿಂಗಳಲ್ಲಿ ‘ನ್ಯಾಯಪಥ’ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿನ ಹಲವು ಅಂಶಗಳನ್ನು ಈ ವರದಿ ಒಳಗೊಂಡಿದೆ. ಜೊತೆಗೆ ಕೆಲವೊಂದು ವಿಷಯಗಳನ್ನು ಪರಿಷ್ಕರಿಸಲಾಗಿದೆ.)

ಪ್ರೇಮಿಗಳ ದಿನದಂದು ಗೋವುಗಳನ್ನು ಅಪ್ಪಿಕೊಳ್ಳಲು ಕೇಂದ್ರೀಯ ಪಶು ಕಲ್ಯಾಣ ಮಂಡಳಿ ಸೂಚಿಸಿದೆ. ಗೋವಿನ ಕುರಿತು ಭಾವುಕವಾಗಿಯೂ ಮಂಡಲಿ ಮನವಿ ಮಾಡಿದೆ.

“ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ನಮಗೆಲ್ಲರಿಗೂ ತಿಳಿದಿದೆ, ಗೋವು ನಮ್ಮ ಜೀವನವನ್ನು ಉಳಿಸಿಕೊಳ್ಳುತ್ತದೆ, ಸಂಪತ್ತು ಮತ್ತು ಜೀವವೈವಿಧ್ಯತೆಯನ್ನು ಪಶುಗಳು ಪ್ರತಿನಿಧಿಸುತ್ತವೆ. ತಾಯಿಯಂತೆ ಪೋಷಿಸುವ ಸ್ವಭಾವದಿಂದಾಗಿ, ಮನುಷ್ಯನ ಶ್ರೀಮಂತಿಕೆಗೆ ಎಲ್ಲವನ್ನೂ ನೀಡುವ ಕಾರಣದಿಂದಾಗಿ ಹಸುವನ್ನು ‘ಕಾಮಧೇನು’ ಮತ್ತು ‘ಗೋ ಮಾತಾ’ ಎಂದು ಕರೆಯಲಾಗುತ್ತದೆ. ಕಾಲಾನಂತರದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಬೆಳವಣಿಗೆಯಿಂದಾಗಿ ವೈದಿಕ ಸಂಪ್ರದಾಯಗಳು ಬಹುತೇಕ ಅಳಿವಿನ ಅಂಚಿನಲ್ಲಿವೆ. ಪಾಶ್ಚಿಮಾತ್ಯ ನಾಗರಿಕತೆಯ ಬೆರಗು ನಮ್ಮ ಭೌತಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಬಹುತೇಕ ಮರೆತುಹೋಗುವಂತೆ ಮಾಡಿದೆ” ಎಂದಿದೆ ಮಂಡಳಿ.

ಮುಂದುವರಿದು, “ಹಸುಗಳಿಂದಾಗುವ ಅಪಾರ ಪ್ರಯೋಜನದ ದೃಷ್ಟಿಯಿಂದ, ಹಸುವಿನ ಜೊತೆ ಅಪ್ಪಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆಯನ್ನು ತರುತ್ತದೆ. ಆದ್ದರಿಂದ ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷ ಹೆಚ್ಚಿಸುತ್ತದೆ. ಎಲ್ಲಾ ಗೋ ಪ್ರೇಮಿಗಳು ಫೆಬ್ರವರಿ 14ರಂದು ಕೌ ಹಗ್‌ ಡೇ (ಗೋವು ತಬ್ಬಿಕೊಳ್ಳುವ ದಿನ) ಆಚರಿಸಬಹುದು. ಗೋಮಾತೆಯ ಮಹತ್ವವನ್ನು ಗಮನದಲ್ಲಿಟ್ಟುಕೊಳ್ಳಿ. ಜೀವನವನ್ನು ಸಂತೋಷದಾಯಕವಾಗಿಸಿ. ಸಕಾರಾತ್ಮಕ ಶಕ್ತಿ ತುಂಬಿಕೊಳ್ಳಿ” ಎಂದು ಸಲಹೆಯನ್ನು ನೀಡಿದೆ.

ಆದರೆ ರೈತರ ಮುಂದೆ ಹೋಗಿ ಈ ವಿಚಾರಗಳನ್ನು ಹೇಳಿದರೆ ನಕ್ಕು ಸುಮ್ಮನಾಗಬಹುದು ಅಥವಾ ಇಂತಹ ಆಚರಣೆ ಮಾಡಲು ಕರೆ ನೀಡುವವರಿಗೆ ಮಂಗಳಾರತಿ ಎತ್ತಬಹುದು. ಏಕೆಂದರೆ ಹೈನುಗಾರಿಕೆ ಎದುರಿಸುತ್ತಿರುವ ಕಷ್ಟಗಳಿಗೆ ಈ ಸರ್ಕಾರಗಳು ಯಾವುದೇ ಪರಿಹಾರವನ್ನು ಕೈಗೊಳ್ಳದೆ ಕೇವಲ ಭಾವನಾತ್ಮಕವಾಗಿ ಮಾತನಾಡುತ್ತಿದೆ. ಗೋವನ್ನು ಅಪ್ಪುವುದಿರಲಿ, ಮುಂದೊಂದು ದಿನ ರೈತರು ಗೋವುಗಳನ್ನು ಸಾಕುವುದನ್ನೇ ನಿಲ್ಲಿಸಿದರೆ ಆಶ್ಚಯಪಡಬೇಕಿಲ್ಲ.

“ಒಬ್ಬ ವ್ಯಕ್ತಿಗೆ ನಾಲ್ಕು ಹಸು ತಂದುಕೊಟ್ಟರೆ ಒಂದು ವರ್ಷಕ್ಕೆ ಕಮ್ಮಿ ಎಂದರೂ ಎರಡು ಲಕ್ಷ ರೂಪಾಯಿ ಸಾಲಗಾರನಾಗುತ್ತಾನೆ” ಎನ್ನುತ್ತಾರೆ ಮದ್ದೂರಿನ ರೈತ ದಿವಾಕರ.

ಸುಮಾರು 25 ವರ್ಷಗಳಿಂದ ಹೈನುಗಾರಿಕೆಯನ್ನು ಮಾಡುತ್ತಿರುವ ದಿವಾಕರ ಅವರು ಓದಿದ್ದು 12ನೇ ತರಗತಿ. ಹೈನುಗಾರಿಕೆಯನ್ನು ಜೀವನೋಪಾಯವಾಗಿ ನೋಡಿದ ಅವರಲ್ಲಿ ಹೈನುಗಾರಿಕೆಯ ಕುರಿತು ಕೇಳಿದರೆ, “ದಯವಿಟ್ಟು ಹಸು ಮಾತ್ರ ಸಾಕಬೇಡಿ. ಯಾವ ಕೋರ್ಟ್ ಕೂಡ ನೀಡದ ಶಿಕ್ಷೆಯನ್ನು ಹೈನುಗಾರಿಕೆ ನಿಮಗೆ ನೀಡುತ್ತದೆ” ಎನ್ನುತ್ತಾರೆ.

ಹೈನುಗಾರಿಕೆಯ ಕಷ್ಟ ಸುಖವನ್ನು ದಿವಾಕರ್ ಅವರ ಮಾತುಗಳಲ್ಲೇ ಕೇಳಿ:

“25 ವರ್ಷಗಳಿಂದ ಹಸುಗಳನ್ನು ಸಾಕುತ್ತಿದ್ದೇನೆ. 2001-2002ರಲ್ಲಿ ಒಂದು ಲೀಟರ್ ಹಾಲಿಗೆ ಡೇರಿಯವರು 9 ರೂ. ಕೊಡುತ್ತಿದ್ದರು. ಪಾಕೇಟ್ ಹಾಲು 12 ರೂ.ಗೆ ಮಾರಿಕೊಳ್ಳುತ್ತಿದ್ದರು. ಅಂದು 1 ಲೀಟರ್ ಹಾಲನ್ನು ಹೋಟೆಲ್‌ಗೆ ಮಾರಿದರೆ 10 ರೂಪಾಯಿ ದೊರಕುತ್ತಿತ್ತು. 10 ರೂಪಾಯಿಗೆ ಮೂರೂವರೆ ಕೆ.ಜಿ. ಜೋಳದ ನುಚ್ಚು ಖರೀದಿಸಬಹುದಿತ್ತು. 1 ಕೆಜಿ ಹಿಂಡಿ ಬೆಲೆ 13 ರೂಪಾಯಿ ಇತ್ತು. 8 ರಿಂದ 12 ಸಾವಿರ ರೂಪಾಯಿಯೊಳಗೆ ಒಳ್ಳೆಯ ಹಸು ಸಿಗುತ್ತಿತ್ತು. ಇಂದಿನ ಪರಿಸ್ಥಿತಿ ನೋಡಿ. ಡೇರಿಯವರು 24ರಿಂದ 26 ರೂಪಾಯಿಯನ್ನು 1 ಲೀಟರ್ ಹಾಲಿಗೆ ಕೊಡುತ್ತಾರೆ. ಸಬ್ಸಿಡಿಯನ್ನು ಸರಿಯಾಗಿ ಕೊಟ್ಟರೆ 29 ರೂಪಾಯಿ ಸಿಗಬಹುದು. ಆದರೆ 1 ಲೀಟರ್ ಹಾಲು ಮಾರಿದರೆ ಒಂದು ಕೆ.ಜಿ. ಜೋಳದ ನುಚ್ಚು ಕೂಡ ಬರುವುದಿಲ್ಲ. ಗಮನಿಸಿ, ಮೊದಲು 1 ಲೀಟರ್ ಹಾಲು ಮಾರಿದರೆ ಮೂರೂವರೆ ಕೆ.ಜಿ. ಜೋಳದ ನುಚ್ಚು ಸಿಗುತ್ತಿತ್ತು. ಹಾಲು ಕೊಡಲಿ, ಕೊಡದಿರಲಿ ಒಂದು ಹಸುವಿಗೆ ಎರಡು ಕೆ.ಜಿ. ಹಿಂಡಿಯನ್ನು ಒಂದು ವೇಳೆಗೆ ಹಾಕಬೇಕು. ಒಂದು ಕೆ.ಜಿ. ಹಿಂಡಿಗೆ 30 ರೂ. ಅಂದರೂ 60 ರೂಪಾಯಿ ಆಗುತ್ತದೆ. ಎರಡು ಅವಧಿಗೆ 120 ರೂ. ನಾವೇ ಬೆಳೆದಿದ್ದ ಹುಲ್ಲಿದ್ದರೆ 50 ರೂಪಾಯಿ ಲೆಕ್ಕ ಹಾಕಿಕೊಳ್ಳಿ. ಅಂದರೆ ಒಂದು ಹಸುವಿಗೆ 170 ಖರ್ಚಾಗುತ್ತದೆ. ಆ ಹಸು ಸರಾಸರಿ 10 ಲೀಟರ್ ಹಾಲು ಕೊಡುತ್ತದೆ ಎಂದು ಲೆಕ್ಕ ಹಾಕೋಣ. ಆ ಹಾಲು ಮಾರಿದರೆ 240 ರೂಪಾಯಿ, 260 ರೂಪಾಯಿ ಡೇರಿಯವರು ಕೊಡುತ್ತಾರೆ. ಇದಕ್ಕಿಂತ ಕೂಲಿಗೆ ಹೋದರೂ ನೆಮ್ಮದಿಯಾಗಿ ಬದುಕಬಹುದು.”

“ನಮ್ಮ ಮನೆಯಲ್ಲಿ ಯಾರಾದರೂ ಸತ್ತಿದ್ದರೂ ಹಾಲು ಕರೆದು, ಡೇರಿಗೆ ಹಾಕಿ ನಂತರ ಅಂತ್ಯ ಸಂಸ್ಕಾರ ಮಾಡಬೇಕು. ಹಸು ಸಾಕುವ ಬದಲು ವಾರಕ್ಕೆ ಆರು ದಿನ ಗಾರೆ ಕೆಲಸಕ್ಕೆ ಹೋಗುವುದು ಉತ್ತಮ. ಒಂದು ದಿನಕ್ಕೆ 600 ರೂಪಾಯಿ ಸಿಗುತ್ತದೆ. ದಯವಿಟ್ಟು, ಯಾರೂ ಹಸು ಸಾಕಲು ಹೋಗಬೇಡಿ. ಅದರ ಬದಲು ಕುರಿ ಸಾಕಾಣಿಕೆ ಮಾಡಿ. ಇವತ್ತು ಜನ ಸತ್ತರೂ ಬಾಡು, ಹುಟ್ಟಿದರೂ ಬಾಡು ತಿಂತಾರೆ. ಮಾಂಸಕ್ಕೆ ಒಳ್ಳೆಯ ಬೇಡಿಕೆ ಇದೆ. 40,000 ರೂಪಾಯಿ ಕೊಟ್ಟು ಒಂದು ಹಸು ಖರೀದಿಸಿ, ಅದನ್ನು ಮಾರುವಾಗ ಕನಿಷ್ಠ 20,000 ರೂಪಾಯಿಯಾದರೂ ಸಾಬರಿಂದ ಸಿಗುತ್ತಿತ್ತು. ಆದರೆ ಇಂದು ಹಸು ಖರೀದಿಸಲು ಸಾಬರು ಮುಂದೆ ಬರುತ್ತಿಲ್ಲ. ಸರ್ಕಾರಕ್ಕೆ ಹೆದರುತ್ತಾರೆ. ಒಂದು ಕಾಲಕ್ಕೆ 13 ಹಸು ಸಾಕುತ್ತಿದ್ದ ನಾನು ಎಲ್ಲವನ್ನೂ ಮಾರಿ ಒಂದು ಹಸುವನ್ನು ಮಾತ್ರ ಈಗ ಉಳಿಸಿಕೊಂಡಿದ್ದೇನೆ.”

ಇದನ್ನೂ ಓದಿರಿ: ಮಾಂಸಾಹಾರ ವಿರೋಧಿಸಿ JNU ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ ABVP ದುಷ್ಕರ್ಮಿಗಳು

“ಪ್ಯೂರ್ ಕಡ್ಲೇಕಾಯಿ ಹಿಂಡಿ ಕೆ.ಜಿ.ಗೆ 55 ರೂಪಾಯಿ ಆಗಿದೆ. ಈಗ ಬರುತ್ತಿರುವ ಫೀಡ್ಸ್ ಕೂಡ ಕಲಬೆರಕೆಯಾಗಿದೆ. ತಮಿಳುನಾಡಿನಿಂದ ಮದ್ದೂರಿಗೆ ಬರುವ ಶಾಂತಿ ಫೀಡ್ಸ್‌ನಲ್ಲಿ ಮೊದಲೆಲ್ಲ ಜೋಳವನ್ನು ಕಾಣಬಹುದಿತ್ತು. ಈಗ ಹುಣಸೆ ಬೀಜವನ್ನೂ ಬಳಸಲಾಗುತ್ತಿದೆ. ಸಬ್ಸಿಡಿ ಅಂತ ಕೊಡುವ 5 ರೂಪಾಯಿಯನ್ನು ಲೆಕ್ಕ ಹಾಕಿಕೊಳ್ಳೋಣ. ಲೀಟರ್ ಹಾಲಿಗೆ 29 ರೂಪಾಯಿ ಪಡೆದು ಹಸುವನ್ನು ಸಾಕಲು ಸಾಧ್ಯವಿಲ್ಲ.”

ಇವು ದಿವಾಕರ್ ಅವರ ಮಾತುಗಳು. ಯಾವುದೇ ರೈತರನ್ನು ಮಾತನಾಡಿಸಿದರೂ ಇದೇ ಅನುಭವವನ್ನು ಹೇಳುತ್ತಾರೆ.

ಮಂಡ್ಯ ಜಿಲ್ಲೆಯ ಮತ್ತೊಬ್ಬ ರೈತ ಸಂತೋಷ್, “1 ಕೆ.ಜಿ. ಹಿಂಡಿ 60 ರೂಪಾಯಿ ಆಗಿದೆ. ರವೆ ಬೂಸಾ 30 ರೂ., ಕಡ್ಲೆ ಬೂಸಾ, ಗೋದಿ ಬೂಸಾ ಕೂಡ ಕೆ.ಜಿ.ಗೆ 30 ಆಗಿದೆ. ಫೀಡ್ಸ್ ಕೂಡ ಕೆ.ಜಿ.ಗೆ 30 ರೂ. ಆಗಿದೆ. ಸಬ್ಸಿಡಿ ಅಂತ ಇದೆ. ಹಾಲಿನಲ್ಲಿ ಫ್ಯಾಟ್ ಇದೆ ಎಂದು ನೆಪವೊಡ್ಡಿ ಅದನ್ನೂ ಸರಿಯಾದ ಸಮಯಕ್ಕೆ ಕೊಡುವುದಿಲ್ಲ. ಹಾಲು ಖರೀದಿಸುವಾಗ ’ಡಿಗ್ರಿ’ ಮಾನದಂಡವಿತ್ತು. ಈಗ ಫ್ಯಾಟ್ ಎಂಬ ಮಾನದಂಡವನ್ನು ಯಾರು ಸೇರಿಸಿದರೋ, ಯಾಕೆ ಸೇರಿಸಿದರೋ ಗೊತ್ತಿಲ್ಲ” ಎಂದರು.

“ಹಸು ಸಾಕಿದರೆ ಕನಿಷ್ಠ ದಿನಗೂಲಿಯೂ ಹುಟ್ಟುವುದಿಲ್ಲ. ನಾವೇ ಭತ್ತ, ರಾಗಿ ಬೆಳೆದರೆ ಹುಲ್ಲಿನ ವೆಚ್ಚ ತಗ್ಗಬಹುದು. ಹಾಲು ಖರೀದಿಸಿ ಕುಡಿಯುವವರು ದಷ್ಟಪುಷ್ಟವಾಗುತ್ತಿದ್ದಾರೆ. ಆದರೆ ಹಾಲು ಉತ್ಪಾದಕರು ಸೊರಗುತ್ತಿದ್ದಾರೆ. ಸಾಂಪ್ರದಾಯಕ ವೃತ್ತಿ ಎಂದು ರೈತರು ಮುಂದುವರಿಸುತ್ತಿದ್ದಾರೆಯೇ ಹೊರತು, ಇದರಿಂದ ಯಾವುದೇ ಲಾಭವಿಲ್ಲ. ಈಗಿನ ಹಸುಗಳು ಯಾವುದೇ ಕಾಯಿಲೆಗೆ ತಡೆಯುವುದಿಲ್ಲ. ಬೇಗನೇ ಸಾಯುವುದೇ ಹೆಚ್ಚು” ಎನ್ನುತ್ತಾರೆ ಸಂತೋಷ್.

ಚನ್ನರಾಯಪಟ್ಟಣ ತಾಲ್ಲೂಕು ವಡ್ಡರಹಳ್ಳಿ ಗ್ರಾಮದ ರೈತರಾದ ಲಕ್ಷ್ಮೇಗೌಡ ಅವರು ಮಾತನಾಡುತ್ತಾ, “ನಮ್ಮ ಮನೆಯಲ್ಲಿ ಎರಡು ಎಮ್ಮೆಗಳಿವೆ. ಆರ್ಥಿಕ ಸಮಸ್ಯೆ ತಲೆದೋರಿದೆ. ಮೇವಿನ ಕೊರತೆ ಉಂಟಾಗಿದೆ. ಹಾಲು ಕೊಡುವ ಎಮ್ಮೆಗಳಿವು. ಇವುಗಳನ್ನು ಮಾರಾಟ ಮಾಡಲು ಸಂತೆಗಳೇ ನಡೆಯುತ್ತಿಲ್ಲ. ಮೊದಲೆಲ್ಲ ಊರುಗಳಿಗೆ ಬಂದು ಹಸು, ಕರು, ಎಮ್ಮೆಗಳನ್ನು ಖರೀದಿಸುವವರಿದ್ದರು. ಆದರೆ ಅವರೂ ಈಗ ನಾಪತ್ತೆಯಾಗಿದ್ದಾರೆ. ಈ ಎಮ್ಮೆಗಳನ್ನು ಮಾರಲು ಸಾಧ್ಯವಾಗದೆ ಪರಿಪಾಟಲು ಬೀಳುತ್ತಿದ್ದೇನೆ” ಎಂದರು.

ಒಂದು ಹಸು ವರ್ಷಕ್ಕೆ ಗರಿಷ್ಠ 3,000 ಲೀಟರ್ ಹಾಲು ನೀಡಬಲ್ಲದು. ಅದರ ಮೌಲ್ಯ ಸುಮಾರು 90,000 ರೂ. ಎಂದುಕೊಳ್ಳೋಣ. ಗೊಬ್ಬರದಿಂದ ಸುಮಾರು 5,000 ರೂ. ಬರಬಹುದು. ಆದರೆ ಒಬ್ಬ ರೈತ ಮೇವು, ತನ್ನ ಕೂಲಿ, ಹಸುಗಳಿಗೆ ತಗುಲುವ ಔಷಧ, ನಿರ್ವಹಣಾ ವೆಚ್ಚ ಎಲ್ಲವನ್ನೂ ಸೇರಿಸಿದರೆ 90,000ಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಸಬ್ಸಿಡಿಯೂ ಸೇರಿ ಸಹಕಾರಿ ಸಂಘಗಳು ಪ್ರತಿ ಲೀಟರ್‌ಗೆ ಗರಿಷ್ಠ ರೂ 34 (ಕನಿಷ್ಠ ರೂ 27) ನೀಡುತ್ತಿರುವುದಾಗಿ ಹೇಳಿದರೂ ವಾಸ್ತವಗಳು ಬೇರೆಯೇ ಇದೆ ಎಂಬುದು ರೈತರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. 1 ಲೀಟರ್ ಹಾಲಿಗೆ ಕನಿಷ್ಠ 50 ರೂ.ಗಳನ್ನು ನೀಡಿದರೆ ಈಗಿನ ವೆಚ್ಚವನ್ನು ಸರಿದೂಗಿಸಬಹುದು ಎಂದು ರೈತರು ಲೆಕ್ಕ ಹಾಕುತ್ತಿದ್ದಾರೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಹಾಲಿನ ದರವನ್ನು ಹೆಚ್ಚಿಸದೆ ಇರುವುದೇ ಇದಕ್ಕೆಲ್ಲ ಮೂಲಕಾರಣ.

ಹೈನುಗಾರಿಕೆ ನೋವಿಗೆ ಮುಲಾಮು ಯಾವುದು?

“ಸಬ್ಸಿಡಿ ಹೆಚ್ಚಳ, ಗೋಹತ್ಯೆ ನಿಷೇಧ ಕಾಯ್ದೆಯ ರದ್ದು” ಹೈನುಗಾರಿಕೆಯ ಸಮಸ್ಯೆಗೆ ಪರಿಹಾರವಾಗಬಹುದು ಎನ್ನುತ್ತಾರೆ ರಾಜಕೀಯ ಹಾಗೂ ಆರ್ಥಿಕ ವಿಶ್ಲೇಷಕರಾದ ಶಿವಸುಂದರ್.

“ಮೊದಲಿನಂತೆ ಹುಲ್ಲುಗಾವಲುಗಳು ಇಂದು ಇಲ್ಲವಾಗಿವೆ. ಎಲ್ಲವೂ ಕೃಷಿ ಜಮೀನುಗಳಾಗಿ ಬದಲಾಗಿವೆ. ಜರ್ಸಿ ಹಸುಗಳನ್ನು ರೈತರು ಅವಲಂಬಿಸಿದ್ದಾರೆ. ಅವುಗಳು ಹೆಚ್ಚಿನ ಪ್ರಮಾಣದ ಹಾಲು ನೀಡಬೇಕೆಂದರೆ ಸರಿಯಾಗಿ ಹಿಂಡಿ, ಬೂಸಾವನ್ನು ಕೊಡಬೇಕಾಗುತ್ತದೆ. ಹಿಂಡಿ, ಬೂಸಾ ಬೆಲೆ ಗಗನಕ್ಕೇರಿದೆ. ಹುಲ್ಲನ್ನು ಬೆಳೆದು ಮಾರುವ ದೊಡ್ಡ ಉದ್ಯಮವೇ ಆರಂಭವಾಗಿದೆ. ಉತ್ಪಾದನಾ ವೆಚ್ಚ ಹಾಗೂ ರೈತನಿಗೆ ವಾಪಸ್ ದೊರಕುವ ಹಣವನ್ನು ಹೋಲಿಕೆ ಮಾಡಿದರೆ ಒಂದು ಲೀಟರ್ ಹಾಲಿಗೆ 50 ಪೈಸೆ ಹೆಚ್ಚಿಗೆ ಸಿಗಬಹುದೇನೋ. ಇದನ್ನೇ ನಂಬಿ ಜೀವನವನ್ನು ನಡೆಸುವುದು ಕಷ್ಟ. ಯಾಕೆಂದರೆ ಇತರ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಹಾಲು ಮಾರಾಟದಿಂದಲೇ ಜೀವನ ಸಾಗಬೇಕಾದರೆ ಕನಿಷ್ಠ ಹತ್ತು ರೂಪಾಯಿಯಾದರೂ ಬೆಲೆ ಹೆಚ್ಚಳ ಅಗತ್ಯವಿದೆ. ಆದರೆ ಖರೀದಿಸುವ ಗ್ರಾಹಕ ಅಷ್ಟು ಬೆಲೆಯನ್ನು ತೆರಲು ಸಿದ್ಧನಿಲ್ಲ. ಹೀಗಾಗಿ ಸರ್ಕಾರವೇ ಹೆಚ್ಚಿನ ಸಬ್ಸಿಡಿಯನ್ನು ಕೊಡಬೇಕು. ಗ್ರಾಹಕನ ಮೇಲೆ ಭಾರವನ್ನು ಹಾಕಿದರೆ ಮಾರುಕಟ್ಟೆ ಕುಸಿತ ಕಾಣುತ್ತದೆ. ಸರ್ಕಾರದ ಮಧ್ಯಪ್ರವೇಶವೇ ಈ ಬಿಕ್ಕಟ್ಟಿಗೆ ಪರಿಹಾರ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

“ಹಿಂಡಿ, ಬೂಸಾದ ಬೆಲೆ ಕಡಿಮೆ ಮಾಡಬೇಕು ಅಥವಾ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಮುಖ್ಯವಾಗಿ ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ರೈತರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಗೋವನ್ನು ಮಾತೆ ಎಂದು ಭಾವಿಸಿದರೂ ಅಂತಿಮವಾಗಿ ಅವುಗಳನ್ನು ಪೋಷಣೆ ಮಾಡಲೇಬೇಕು. ಮಕ್ಕಳ ಶಾಲಾ ಶುಲ್ಕ ಕಟ್ಟಲೂ ಪರದಾಡುವ ಪೋಷಕರು, ಒಂದು ಹಸುವಿಗೆ ದಿನಕ್ಕೆ 200 ರೂ. ಖರ್ಚು ಮಾಡಿ ಸುಖಾಸುಮ್ಮನೆ ಸಾಕುವುದು ಕಷ್ಟವಾಗುತ್ತದೆ. ಈ ಹಿಂದೆಲ್ಲ ಹಾಲು ಕೊಡದ ಹಸುವನ್ನು ಅರ್ಧ ಬೆಲೆಗೆ ಮಾರಿ, ಹಾಲು ಕೊಡುವ ಹಸು ಖರೀದಿಸಿ ಜೀವನ ಸಾಗಿಸಲಾಗುತ್ತಿತ್ತು. ಹಾಲು ಕೊಡದ ಹಸುವನ್ನು ಮಾಂಸಕ್ಕಲ್ಲದೆ ಮತ್ಯಾವುದಕ್ಕೂ ಯಾರೂ ಖರೀದಿಸುವುದಿಲ್ಲ. ಈಗ ಅದರ ಮೇಲೂ ದೊಡ್ಡ ಪೆಟ್ಟು ಬಿದ್ದಿದೆ. ಸಂಸ್ಕೃತಿ ಹೆಸರಲ್ಲಿ ಅಧ್ವಾನ ಮಾಡುತ್ತಿರುವವರಿಗೆ ಈ ಸಮಸ್ಯೆ ಅರಿವಾಗುವುದಿಲ್ಲ. ಹೀಗಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕೂಡಲೇ ರದ್ದು ಮಾಡಲೇಬೇಕಿದೆ” ಎಂದು ಆಗ್ರಹಿಸಿದರು.

ಸರ್ಕಾರ ಸಬ್ಸಿಡಿಯನ್ನು ರೈತರಿಗೆ ನೀಡುತ್ತಿಲ್ಲ: ಎಂ.ಎಸ್.ಶ್ರೀರಾಮ್

ಸಹಕಾರಿ ಕ್ಷೇತ್ರದ ಆಳ ಅಗಲ ತಿಳಿದಿರುವ ಐಐಎಂಬಿ ಪ್ರೊಫೆಸರ್ ಎಂ.ಎಸ್.ಶ್ರೀರಾಮ್ ಅವರು ಮಾತನಾಡಿ, “ಕೆಎಂಎಫ್ ಸರ್ಕಾರದ ಹಿಡಿತದಿಂದ ಹೊರಬರಬೇಕು. ಸಬ್ಸಿಡಿ ಮಾದರಿ ಬದಲಾಗಬೇಕು” ಎಂದರು.

ಇದನ್ನೂ ಓದಿ: ನಂದಿನಿ ಹಾಲಿನ ದರ ಲೀಟರ್‌ಗೆ 3 ರೂ. ಹೆಚ್ಚಿಸಲು ಹಾಲು ಒಕ್ಕೂಟಗಳ ಒತ್ತಾಯ

ಸಬ್ಸಿಡಿ ಕುರಿತು ವಿವರಿಸಿದ ಅವರು, “ರೈತರಿಗೆ ಸಹಾಯಧನ ನೀಡಲಾಗುತ್ತಿದೆ ಎಂದು ಮೇಲುನೋಟಕ್ಕೆ ಕಾಣುತ್ತಿದೆ. ಆದರೆ ಇದು ವಾಸ್ತವದಲ್ಲಿ ಗ್ರಾಹಕನಿಗೆ ನೀಡುತ್ತಿರುವ ಸಬ್ಸಿಡಿಯಾಗಿದೆ. ಸರ್ಕಾರದ ಸಹಾಯಧನದಿಂದ ಗ್ರಾಹಕನಿಗೆ ಕಡಿಮೆ ಬೆಲೆಯಲ್ಲಿ ಹಾಲು ದೊರಕುತ್ತಿದೆ ಹೊರತು ರೈತನಿಗೆ ಯಾವುದೇ ಅನುಕೂಲವಾಗಿಲ್ಲ. ಗ್ರಾಹಕ ಹೆಚ್ಚು ಬೆಲೆ ಕೊಟ್ಟು ಖರೀದಿಸಿದಾಗ ಮಾತ್ರ ರೈತನಿಗೆ ಸಬ್ಸಿಡಿಯ ಅನುಕೂಲವಾಗುತ್ತದೆ” ಎಂದು ವಿಶ್ಲೇಷಿಸಿದರು.

“ರೈತರಿಗೆ ಸಬ್ಸಿಡಿ ಕೊಡುತ್ತಿದ್ದಾರೆ ನಿಜ. ಆದರೆ ಗ್ರಾಹಕರಿಂದ ಹೆಚ್ಚಿನ ದರವನ್ನು ಪಡೆದಾಗ ಮಾತ್ರ ರೈತರಿಗೆ ನೀಡುತ್ತಿರುವ ಸಬ್ಸಿಡಿಗೆ ಬೆಲೆ ಬರುತ್ತದೆ. ಮಾರುಕಟ್ಟೆ ವೆಚ್ಚವೂ ರೈತನಿಗೆ ತಲುಪುತ್ತಿಲ್ಲ. ಉದಾಹರಣೆಗೆ ನಾವು ಲೀಟರ್ ಹಾಲಿಗೆ 50 ರೂ ನೀಡಬೇಕಿತ್ತು. ಆದರೆ ನಾವು ನೀಡುತ್ತಿರುವುದು 45 ರೂ. ಮಾತ್ರ. ಇಲ್ಲಿ ಗ್ರಾಹಕನಿಗೆ ಅನುಕೂಲವಾಯಿತೇ ಹೊರತು, ರೈತನಿಗಲ್ಲ. ರೈತಸ್ನೇಹಿ ಸರ್ಕಾರ ಎಂಬ ಹಣೆಪಟ್ಟಿಯ ನಿಜಸ್ಥಿತಿ ಇದು. ಮಧ್ಯಮ ವರ್ಗಕ್ಕೆ, ಮೇಲ್ಮಧ್ಯಮ ವರ್ಗಕ್ಕೆ ಸಬ್ಸಿಡಿ ಏಕೆ?” ಎಂದು ಪ್ರಶ್ನಿಸಿದರು.

ಇಷ್ಟೆಲ್ಲ ಕಷ್ಟಗಳನ್ನು ರೈತರು ಎದುರಿಸುತ್ತಿರುವಾಗ ಗೋವುಗಳನ್ನು ಅಪ್ಪಿರಿ, ಅವುಗಳು ನಮ್ಮ ತಾಯಿ ಎಂದೆಲ್ಲ ಭಾವುಕವಾಗಿ ಮಾತನಾಡುವುದು ಸರಿಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...