Homeಮುಖಪುಟಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಭಾಗ-2

ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಭಾಗ-2

- Advertisement -
- Advertisement -

ಬೃಹದಾರಣ್ಯಕ ಉಪನಿಷತ್ತಿನ ಒಂದು ಶ್ಲೋಕವನ್ನು (5) ಸ್ವಾಮಿ ಮಾಧವಾನಂದ ಅವರು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಅದು ಸರಿಸುಮಾರು ಹೀಗಿದೆ: “ಆತ ಸಂತುಷ್ಟನಾಗಿರಲಿಲ್ಲ. ಒಬ್ಬಂಟಿಯಾಗಿದ್ದಾಗ ಜನ ಸಂತುಷ್ಟರಾಗಿರುವುದಿಲ್ಲ. ಆತ ಒಬ್ಬ ಸಂಗಾತಿಯನ್ನು ಬಯಸಿದ. ಆತ ಒಬ್ಬ ಮನುಷ್ಯ ಹಾಗೂ ಹೆಂಡತಿ ಪರಸ್ಪರ ಅಪ್ಪಿಕೊಂಡಿರುವಷ್ಟು ವಿಶಾಲನಾದ. ಆತ ಈ ದೇಹವನ್ನೇ ಎರಡು ಭಾಗಗಳನ್ನಾಗಿ ಮಾಡಿದ. ಅದರಿಂದ ಗಂಡ ಮತ್ತು ಹೆಂಡತಿಯರ ಉತ್ಪತ್ತಿಯಾಯಿತು. ಆದುದರಿಂದ ಇಬ್ಭಾಗ ಮಾಡಿದ ಬಟಾಣಿ ಕಾಳಿನ ಅರ್ಧದಂತೆ ಈ ದೇಹ ಒಂದರ ಅರ್ಧಭಾಗವಾಗಿರುತ್ತದೆ ಎಂದು ಯಾಜ್ಞವಲ್ಕ್ಯ ಹೇಳುತ್ತಾನೆ. ಆದುದರಿಂದ ಈ ಅವಕಾಶ ಹೆಂಡತಿಯಿಂದ ಕೂಡಿದೆ. ಅವನು ಅವಳೊಂದಿಗೆ ಕೂಡಿಕೊಂಡ. ಅದರಿಂದಾಗಿ ಮಾನವರ ಉತ್ಪತ್ತಿಯಾಯಿತು.”

ಮುಂದಿನ ಶ್ಲೋಕದಲ್ಲಿ ತನ್ನನ್ನು ವಿರಾಜನ ಮಗಳೆಂದೇ ಭಾವಿಸಿದ; ಆದರೆ ಸೃಷ್ಟಿಯ ಪಸರಿಸುವಿಕೆಯಲ್ಲಿ ಸಹಕರಿಸಿದ ಶತರೂಪೆ ವಿರಾಜನೊಂದಿಗಿನ ತನ್ನ ಒಂದುಗೂಡುವಿಕೆಯನ್ನು ಪ್ರಶ್ನಿಸುತ್ತಾಳೆ (6). ಅವಳು ಹೇಳಿದುದನ್ನು ಸ್ವಾಮಿ ಮಾಧವಾನಂದ ಅವರು ಹೀಗೆ ಬರೆಯುತ್ತಾರೆ: “ತನ್ನಿಂದಲೇ ಉತ್ಪತ್ತಿ ಮಾಡಿದ ನಂತರ ಆತ ಹೇಗೆ ನನ್ನೊಡನೆ ಕೂಡಿಕೊಂಡ? ಸರಿ, ನಾನೀಗ ಬಚ್ಚಿಟ್ಟುಕೊಳ್ಳುತ್ತೇನೆ. ಅವಳು ಹಸು ಆದಳು, ಆತ ಗೂಳಿಯಾಗಿ ಅವಳೊಂದಿಗೆ ಕೂಡಿಕೊಂಡ. ಇದರಿಂದಾಗಿ ಹಸುಗಳು ಉತ್ಪನ್ನವಾದವು. ಅವಳು ಹೆಣ್ಣು ಕುದುರೆಯಾದಳು, ಆತ ಗಂಡು ಕುದುರೆಯಾಗಿ, ಅವಳು ಹಣ್ಣು ಕತ್ತೆಯಾದಳು, ಅವನು ಗಂಡು ಕತ್ತೆಯಾಗಿ ಅವಳೊಂದಿಗೆ ಕೂಡಿಕೊಂಡ. ಇದರಿಂದ ಒಂದು ಗೊರಸಿನ ಪ್ರಾಣಿಗಳು ಉತ್ಪತ್ತಿಯಾದವು. ಅವಳು ಮೇಕೆಯಾದಳು, ಅವನು ಹೋತನಾದ, ಅವಳು ಕುರಿಯಾದಳು, ಅವನು ಟಗರಾಗಿ ಅವಳೊಂದಿಗೆ ಕೂಡಿಕೊಂಡ. ಇದರಿಂದಾಗಿ ಮೇಕೆಗಳು, ಹೋತಗಳೂ ಉತ್ಪತ್ತಿಯಾದವು. ಹೀಗೆ ಆತ ಕೊನೆಯಲ್ಲಿರುವ ಇರುವೆಗಳವರೆಗೂ ಜೋಡಿಯಾಗಿ ಅಸ್ತಿತ್ವದಲ್ಲಿರುವ ಎಲ್ಲವನ್ನೂ ಪ್ರಾಯೋಜಿಸಿದ”

ಶತಪಥ ಬ್ರಾಹ್ಮಣದ 1.7.4ರ 1ರಿಂದ 4ನೆಯ ಶ್ಲೋಕಗಳು ಹೇಳಿದುದನ್ನು (7) ಕನ್ನಡದಲ್ಲಿ ಹೀಗೆ ಹೇಳಬಹುದು: “ಪ್ರಜಾಪತಿಯು ತನ್ನವಳೇ ಮಗಳ ಬಗ್ಗೆ ಭಾವೋದ್ವೇಗವನ್ನು ಕಲ್ಪಿಸಿಕೊಂಡ. ನಾನು ಅವಳೊಂದಿಗೆ ಕೂಡಬಹುದೇ ಎಂದು ಯೋಚಿಸುತ್ತ ಆತ ಅವಳೊಂದಿಗೆ ಕೂಡಿದ. ಇದು ದೇವತೆಗಳ ದೃಷ್ಟಿಯಲ್ಲಿ ಖಂಡಿತವಾಗಿಯೂ ಪಾಪಕರ್ಮವಾಗಿತ್ತು. ’ತನ್ನವಳೇ ಆದ ಮಗಳ ಬಗ್ಗೆ ಹೀಗೆ ವರ್ತಿಸುವವನು ಪಾಪವನ್ನು ಮಾಡುತ್ತಾನೆ’ ಎಂದು ಅವರು ಯೋಚಿಸಿದರು. ಆಗ ದೇವತೆಗಳು ಪಶುಗಳ ಮೇಲೆ ನಿಯಂತ್ರಣ ಹೊಂದಿದ ರುದ್ರನನ್ನು ಕುರಿತು ’ತನ್ನವಳೇ ಮಗಳಾದ ನಮ್ಮ ಸಹೋದರಿಯೊಂದಿಗೆ ಹೀಗೆ ನಡೆದುಕೊಳ್ಳುವ ಈತ ಖಂಡಿತವಾಗಿಯೂ ಪಾಪವನ್ನು ಎಸಗುತ್ತಾನೆ. ಅವನನ್ನು ಇರಿ’ ಎಂದರು. ರುದ್ರನು ಗುರಿಯಿಟ್ಟು ಅವನನ್ನು ಇರಿದನು. ಅವನ ಅರ್ಧ ಬೀಜ ಭೂಮಿಯ ಮೇಲೆ ಬಿದ್ದಿತು. ಇದು ಹೀಗೆ ಘಟಿಸಿತು.”

ಈ ಘಟನೆಯ ಬಗ್ಗೆ ಐತರೇಯ ಬ್ರಾಹ್ಮಣ (13.8) ಹೀಗೆ (8) ಹೇಳುತ್ತದೆ: “ಪ್ರಜಾಪತಿ ತನ್ನವಳೇ ಆದ ಮಗಳ ಬಗ್ಗೆ ಕಾಮ ಭಾವನೆ ಹೊಂದಿದ ಹಾಗೂ ಅವಳೊಂದಿಗೆ ಕೂಡಲು ಬಯಸಿದ್ದ. ಆಗ ಇಬ್ಬರೂ ಜಿಂಕೆಗಳ ರೂಪ ಧರಿಸಿಕೊಂಡು ಕೂಡಿಕೊಂಡರು. ಇದನ್ನು ನೋಡಿದ ದೇವತೆಗಳು, ನಿಷಿದ್ಧವಾದ ಯೌನ ಸಂಬಂಧವನ್ನು ಹೊಂದಿದ್ದಕ್ಕಾಗಿ ಪ್ರಜಾಪತಿಯನ್ನು ಶಿಕ್ಷಿಸಬಯಸಿದರು. ಆದರೆ ತಮ್ಮಲ್ಲಿ ಯಾರೂ ಪ್ರಜಾಪತಿಯನ್ನು ಶಿಕ್ಷಿಸುವ ಶಕ್ತಿಯನ್ನು ಹೊಂದಿರಲಿಲ್ಲ ಎಂಬುದನ್ನು ಅರಿತರು. ಆಗ ಅವರು ತಮ್ಮ ಎಲ್ಲ ಭಯಭೀತ ರೂಪಗಳನ್ನು ಒಟ್ಟುಗೂಡಿಸಿ ರುದ್ರನನ್ನು ರೂಪಿಸಿದರು ಮತ್ತು ಅವನಿಗೆ ಪ್ರಜಾಪತಿಯನ್ನು ಇರಿಯಬೇಕೆಂದು ಹೇಳಿದರು ಹಾಗೂ ಆತ ಹಾಗೆಯೇ ಮಾಡಿದ.”

ಮತ್ಸ್ಯ ಪುರಾಣದ 3.32, 34, 43 ಹಾಗೂ 44- ಈ ಶ್ಲೋಕಗಳು ಹೀಗೆ ಹೇಳುತ್ತವೆ (9): “ಅವಳಿಗೆ ಸರಸ್ವತೀ, ಗಾಯತ್ರೀ ಹಾಗೂ ಬ್ರಹ್ಮಾಣೀ ಎಂಬ ಹೆಸರುಗಳೂ ಇದ್ದವು. ತನ್ನದೇ ದೇಹದಿಂದ ಹುಟ್ಟಿದ ಅವಳನ್ನು ತನ್ನ ಮಗಳೆಂದೇ ಭಾವಿಸಿದ. ಆದರೆ ಅವಳ ಬಗ್ಗೆ ಆತ ವಿಷಯಾನುಸಕ್ತಿ ಹೊಂದಿರುವುದನ್ನು ನೋಡಿದ ವಶಿಷ್ಠ ಮತ್ತು ಇತರ ಋಷಿಗಳು, ’ಆತ ನಮ್ಮ ಸಹೋದರಿಯ ಬಗ್ಗೆ ಹೀಗೆ ಹೇಳಲು ಹೇಗೆ ಸಾಧ್ಯ ಎಂದರು. ಆದರೆ ಬ್ರಹ್ಮನಿಗೆ ಅವಳನ್ನು ದಿಟ್ಟಿಸುವುದನ್ನು ಬಿಟ್ಟು ಬೇರೆ ಯಾವ ಯೋಚನೆಯೂ ಬರಲಿಲ್ಲ. ಕಾಮವಾಸನೆಯಿಂದ ಕಚ್ಚಿದವನಾಗಿದ್ದ ಆತ, ಸಾಮಾನ್ಯ ಮನುಷ್ಯರ ಹಾಗೆ ಅವಳೊಡನೆ 100 ದೇವ-ವರ್ಷಗಳವರೆಗೆ ತನ್ನ ಕಮಲ-ಅರಮನೆಯೊಳಗೆ ಸುಖಿಸಿದ. ಬಹಳ ಸಮಯ ಕಳೆದ ನಂತರ ಅವಳು ಒಂದು ಮಗುವಿಗೆ ಜನ್ಮ ಕೊಟ್ಟಳು. ಅವನನ್ನೇ ಮನು ಎನ್ನಲಾಯಿತು.”

ಸ್ಕಂದ ಪುರಾಣದ ಬ್ರಹ್ಮ ಖಂಡದೊಳಗಿನ ಸೇತು ಖಂಡದ 40ನೆಯ ಅಧ್ಯಾಯದ 6ರಿಂದ 12 ಶ್ಲೋಕಗಳು ಇದೇ ಕಥೆಯನ್ನು ಒಂದು ವ್ಯತ್ಯಾಸದೊಂದಿಗೆ ಹೇಳುತ್ತವೆ. ಇಲ್ಲಿ ರುದ್ರನ ಬದಲಿಗೆ ಶಿವನೇ ಬ್ರಹ್ಮನನ್ನು ಇರಿಯುತ್ತಾನೆ (10): “ಪರಮೇಷ್ಠಿ ಬ್ರಹ್ಮ ನಿಷಿದ್ಧ ಕೃತ್ಯದಲ್ಲಿ ತೊಡಗಿರುವುದನ್ನು ನೋಡಿದ ಶಿವನು ತನ್ನ ಪಿನಾಕವನ್ನು ತೆಗೆದುಕೊಂಡು ಒಬ್ಬ ಬೇಟೆಗಾರನ ರೂಪ ಧರಿಸಿ ಬಂದು ತನ್ನ ಬಿಲ್ಲಿಗೆ ಒಂದು ಬಾಣವನ್ನು ಏರಿಸಿ ತನ್ನ ಕಿವಿಯವರೆಗೂ ಪ್ರತ್ಯಂಚೆಯನ್ನು ಎಳೆದು ತನ್ನ ಮೊನಚಾದ ಬಾಣದಿಂದ ಬ್ರಹ್ಮನನ್ನು ಚುಚ್ಚಿದ. ತ್ರಿಪುರಾಂತಕನ ಬಾಣದಿಂದ ಆಘಾತನಾದ ಬ್ರಹ್ಮನು ಭೂಮಿಯ ಮೇಲೆ ಬಿದ್ದುಹೋದನು.”

ಇದನ್ನೂ ಓದಿ: ಅಂದಿನಿಂದ ಇಂದಿನವರೆಗೆ ಮುಂದುವರಿಯುತ್ತಿರುವ ನರಬಲಿ; ಸನಾತನ ಧರ್ಮದ ಕುರುಹುಗಳು

ಶಿವ ಪುರಾಣದ ವಾಯವೀಯ ಸಂಹಿತೆಯ ಪೂರ್ವ ಭಾಗದ 17ನೆಯ ಅಧ್ಯಾಯದ 1ರಿಂದ 4ನೆಯ ಶ್ಲೋಕಗಳು ಈ ಘಟನೆಯನ್ನು ವಿವರಿಸುತ್ತವೆ (11): “ಈಶ್ವರನಿಂದ ಪರಮ ಮತ್ತು ಅನಂತ ಶಕ್ತಿಯನ್ನು ಪಡೆದು ಸಂಭೋಗದ ಮೂಲಕ ಸೃಷ್ಟಿಯ ಪ್ರಕ್ರಿಯೆಯನ್ನು ಪ್ರಾರಂಭಿಸುವ ಉದ್ದೇಶದಿಂದ ಬ್ರಹ್ಮನು ಒಂದರ್ಧದಲ್ಲಿ ಒಬ್ಬ ಪುರುಷನಾಗಿಯೂ ಇನ್ನರ್ಧದಲ್ಲಿ ಸ್ತ್ರೀಯಾಗಿಯೂ ರೂಪುಗೊಂಡನು. ಸ್ತ್ರೀ-ಅರ್ಧದಿಂದ ಶತರೂಪಾ ಹುಟ್ಟಿದಳು. ಪುರುಷನ ಅರ್ಧ ಸ್ವಯಂಭುವ ಮನು ಎಂಬ ವಿರಾಜನನ್ನು ಹುಟ್ಟಿಸಿತು. ಘೋರ ತಪಸ್ಸನ್ನು ಮಾಡಿ ಆ ಸೌಮ್ಯವಾದ ಶತರೂಪೆ ಮನುವನ್ನು ತನ್ನ ಪತಿಯಾಗಿ ಪಡೆದುಕೊಂಡಳು. ಶತರೂಪೆ ಅವನಿಗೆ ಪ್ರಿಯವೃತ ಮತ್ತು ಉತ್ತಾನಪಾದ ಎಂಬ ಎರಡು ಮಕ್ಕಳನ್ನು ಹೆತ್ತಳು. ಹಾಗೆಯೇ ಅವಳು ಆಕುತಿ ಮತ್ತು ಪ್ರಸೂತಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಹೆತ್ತಳು. ಇವರಿಂದಾಗಿ ಎಲ್ಲಾ ಸೃಷ್ಟಿಯ ನಿರ್ಮಾಣವಾಯಿತು”. ಬೈಬಲ್ಲಿನಲ್ಲಿ ಇದಕ್ಕೆ ಸಮಾನಾಂತರವಾದ ಕಥೆ ಇದೆ. ಅದರಲ್ಲಿ ಆಡಮ್ ಮತ್ತು ಈವರು ಇಬ್ಬರು ಗಂಡು ಮಕ್ಕಳಿಗೂ ಇಬ್ಬರು ಹೆಣ್ಣು ಮಕ್ಕಳಿಗೂ ಜನ್ಮ ಕೊಡುತ್ತಾರೆ ಹಾಗೂ ಅವರಿಂದ ಎಲ್ಲಾ ಮಾನವಕುಲ ಉತ್ಪತ್ತಿಯಾಗುತ್ತದೆ.

ಯಾದವ ಕುಲದಲ್ಲಿ ತಂದೆಯೊಬ್ಬ ತನ್ನ ಮಗಳೊಂದಿಗೆ ಮದುವೆ ಮಾಡಿಕೊಂಡ ಒಂದು ಉದಾಹರಣೆಯನ್ನು ಮತ್ಸ್ಯ ಪುರಾಣದಿಂದ ಡಾ. ಅಂಬೇಡ್ಕರ್ ಕೊಡುತ್ತಾರೆ: “ಕೃಷ್ಣನ ಪೂರ್ವಜ ರಾಜ ತೈತ್ತಿರಿ ತನ್ನ ಮಗಳನ್ನೇ ಮದುವೆಯಾಗಿ ನಳನೆಂಬ ಮಗುವಿಗೆ ತಂದೆಯಾಗುತ್ತಾನೆ.” (12)

ವರಾಹಮಿಹಿರ ತನ್ನ ಬೃಹತ್ಸಂಹಿತೆಯಲ್ಲಿ (74.20) (13), “ಬ್ರಹ್ಮನಿಂದ ಹಿಡಿದು ಹುಳುಗಳವರೆಗೆ, ಜೋಡಿಗಳು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. ಈ ವಿಷಯದಲ್ಲಿ ನಾಚಿಕೆಪಡಬೇಕಾದದ್ದು ಏನು? ಇದಕ್ಕಾಗಿ ಅಲ್ಲವೇ ಸರ್ವೋಚ್ಚ ಶಿವ ಕೂಡ ನಾಲ್ಕು ಮುಖಗಳನ್ನು ರಚಿಸಿಕೊಂಡ” ಎನ್ನುತ್ತಾನೆ. ಶಿವ ನಾಲ್ಕು ಮುಖ ಪಡೆದ ಬಗ್ಗೆ ಒಂದು ಸಲ ಅಪ್ಸರೆ ತಿಲೋತ್ತಮೆ ಶಿವ-ಪಾರ್ವತಿಯರನ್ನು ಸುತ್ತಿ ಬಳಸಿ ಹೋಗುತ್ತಿದ್ದಾಗ ಪಾರ್ವತಿಯಿಂದ ಭಯವಿದ್ದರೂ ತಿಲೋತ್ತಮೆಯ ಸೌಂದರ್ಯವನ್ನು ನೋಡಲು ಶಿವ ನಾಲ್ಕು ಮುಖಗಳನ್ನು ಸೃಷ್ಟಿಸಿಕೊಂಡನು ಎಂದು ಹೇಳಲಾಗುತ್ತದೆ.

(ಮೂಲ ಪಠ್ಯಗಳು)

(5) “ಸ ವ ನೈವ ರೆಮೆ ತಸ್ಮಾದೇಕಾಕೀ ನ ರಮತೆ ಸ ದ್ವಿತೀಯಮೈಚ್ಛತ್, ಸ ಹೈತಾವಾನಾಸ ಯಥಾ ಸ್ತ್ರೀಪುಮಾಂಸೌ ಸಂಪರಿಷ್ವಕ್ತೌ, ಸ ಇಮಮೇವಾತ್ಮಾನಂ ದ್ವೇಧಾಪಾತಯತ, ತತಃ ಪತಿಶ್ಚ ಪತ್ನೀ ಚಾಭವತಾಮ್ ತಸ್ಮಾತಿದಮರ್ಧಬೃಗಲಮಿವ ಸ್ವ ಸ್ವಃ ಇತಿ ಹ ಸ್ಮಾಹ ಯಾಜ್ಞವಲ್ಕ್ಯಃ ತಸ್ಮಾದಯಮಾಕಾಶಃ ಸ್ತ್ರೀಯಾ ಪೂರ್ಯತ ಎವ, ತಾಂ ಸಮಭವತ ತತೊ ಮನುಷ್ಯಾ ಅಜಾಯನ್ತ”.

(6) “ಸಾ ಹೇಯಮೀಕ್ಷಾಂ ಚಕ್ರೆ, ಕಥಂ ನು ಮಾತ್ಮಾನ ಎವ ಜನಯಿತ್ವಾ ಸಂಭವತಿ? ಹನ್ತ ತಿರೋಸಾನತಿ; ಸಾ ಗೌರಭವತ್, ಋಷಭ ಇತರಃ; ತಾಂ ಸಮೇವಾಭವತ್, ತತೊ ಗಾವೋಜಾಯನ್ತ; ವಡವೇತರಾಭವತ್, ಅಶ್ವವೃಷಃ ಇತರಃ, ಗರ್ಧಭೀತರಾ, ಗರ್ದಭ ಇತರಃ, ತಾಂ ಸಮೇವಾಭವತ್, ತತ ಎಕಶಫಮಜಾಯತ; ಅಜೇತರಾಭವತ್, ವಸ್ತ ಇತರಃ, ಅವಿರಿತರಾ, ಮೇಷ ಇತರಃ, ತಾಂ ಸಮೇವಾಭವತ್, ತತೋಜಾವಯೋಜಾಯನ್ತ; ಎಕಮೇವ ಯದಿದಂ ಕಿಂಚ ಮಿಥುನಂ ಆ ಪಿಪೀಲಿಕಾಭ್ಯಃ, ತತ್ಸರ್ವಮಸೃಜತ್.

(7) ಪ್ರಜಾಪತಿರ್ಹ ವೈ ಸ್ವಮ್ ದುಹಿತರಮಭಿದಧೌ, ಓಸಮಮ್ ವಾ ಮಿಥುನ್ಯೇನಯ ಸ್ಯಾಮಿತಿ ತಾಮ್ ಸಮ್ಬಭುವ. ತದ್ವೈ ದೇವಾನಾಮಾಗ ಆಸ. ಯಾ ಇತ್ಥಮ್ ಸ್ವಮ್ ದುಹಿತರಮಸ್ಮಾಕಮ್ ಸ್ವಸಾರಮ್ ಕರೋತಿತಿ. ತೆ ಹ ದೇವಾ ಉಚುಃ ಯೊ ಯಮ ದೇವಾಃ ಪಶುನಾಮಿಸ್ತೆ ತಿಸಮ್ಧಮ್ ವಾ ಅಯಮ್ ಚರತಿ ಯ ಇತ್ಥಮ್ ಸ್ವಮ್ ದುಹಿತರಮಾಸ್ಮಕಮ್ ಸ್ವಸಾರಮ್ಕರೋತಿ ವಿಧ್ಯೇಮಮಿತಿ ತಮ ರುದ್ರೌ ಭ್ಯಾಯತ್ಯಾ ವೊವ್ಯಾಧ ತಸ್ಯ ಸಾಮಿ ರೇತಃ ಪ್ರಚಸ್ಕಂದ ತಥೆನ್ನುನಮ್ ತದಾಸ”.

(8) ಪ್ರಜಾಪ್ರತುರ್ವೈ ಸ್ವಾಂ ದುಹಿತರಮ ಭ್ಯದ್ಧ್ಯಾಯದ್ಧಿವಮಿತ್ಯನ್ಯ ಆಹುರುಷಸಮಿತ್ಯನ್ಯೆ ತಾಮೃಶ್ಯೊಭೂತ್ವಾ ರೋಹಿತಂ ಭೂತಾಮಭೈತ್ತಮ್ ದೆವಾ ಅಪಶ್ಯನ್ನಕೃತಮ್ ವೈ ಪ್ರಜಾಪತಿಃ ಕರೋತೀತಿ ತೆ ತಮೈಚ್ಛನ್ಯ ಮಾರಿಷ್ಯತ್ಯೇತಮನ್ಯೋನ್ಯಿಸ್ಮನ್ನಾವೋಂದಂಸ್ತೆಷಾಮ್ ಯಾ ಏವ ಘೋರತಮಾಸ್ತನ್ವ ಆಸಂಸ್ತಾ ಏಕಧಾ ಸಮಭರಂಸ್ತಾಃ ಸಂಭೃತಾ ಏಷ ದೇವೋಭವತ್ತಸ್ಯ ತದ್ಭೂತವನ್ನಮ ಭವತಿ ವೈ ಸ ಯೋತ್ಸೈಯ ತದೇವಮ್ ನಾಮ ವೇದ.

(9) ಸರಸ್ವತ್ಯಥಗಾಯತ್ರೀ ಬ್ರಹ್ಮಾಣೀಚಪರಂತಪ, ತತಃ ಸ್ವದೇಹಸಮ್ಭೂತಾಮಾತ್ಮಜಾ-ಮಿತ್ಯಕಲ್ಪಯತ್. (3.32) ತಥೋ ವಶಿಷ್ಠಪ್ರಮುಖಾಃ ಭಗಿನೀಮಿತಿ ಚುಕ್ರುಶುಃ. ಬ್ರಹ್ಮಾನಕಿಂಚಿದ್ಧೃಶೆ ತನ್ಮುಖಾಲೋಕನಾದ್ದ್ಯತೆ, (3,34). ಉಪಯೆಮೆಸವಿಶ್ವಾತ್ಮಾ ಶತರೂಪಾಮನಿಂದಿತಾಮ್. ಸಂಬಭೂವ ತಯಾ ಸಾರ್ಧಮತಿಕಾಮಾತುರೋವಿಭುಃ. ಸಲಜ್ಜಾಂಚಕಮೆ ದೇವಃ ಕಮಲೋದರಮಂದಿರೆ. (3.43) ಯಾವದಬ್ದಶತಂ ದಿವ್ಯಂ ಯಥಾನ್ಯಃ ಪ್ರಾಕೃತೋಜನಃ. ತತಃ ಕಾಲೇನ ಮಹತಾ ತಸ್ಯಾ ಪುತ್ರೋಭವನ್ಮನುಃ.

(10) “ಪ್ರಜಾಪತಿಃ ಪುರಾ ವಿಪ್ರಾಃ ಸ್ವಾಂ ವೈ ದುಹಿತರಂ ಮುದಾ, ವಾಂನಾನ್ಮೀಂ ಕಾಮುಕೋ ಭೂತ್ವಾ ಸ್ಪೃಹಯಾಮಾಸ ಮೋಹನಃ (6) ಅಥ ಪ್ರಜಾಪತೆಃ ಪುತ್ರೀ ಸ್ವಸ್ಮಿನ್ಬೈ ತಸ್ಯ ಕಾಮಿತಾಮ್, ವಿಲೋಕ್ಯ ಲಜ್ಜಿತಾ ಭೂತ್ವಾ ರೋಹೀದ್ರೂಪ ದಧಾರ ಸಾ (7) ಬ್ರಹ್ಮಾಪಿ ಹರಿಣೋ ಭೂತ್ವಾ ತಯಾ ರನ್ತುಮನಾಸ್ತದಾ, ಗಚ್ಛತೀಮನುಯಾತಿಸ್ಮ ಹರಿಣೀರೂಪಧಾರಿಣೀಮ್. (8) ತಂ ದೃಷ್ಟ್ವಾ ದೇವತಾಃ ಸವಾಃ ಪುತ್ರೀಗಮನ ಸಾದರಮ್. ಕರೋತ್ಯಕಾಯಂ ಬ್ರಹ್ಮಾಯಂ ಪುತ್ರೀಗಮನಲಕ್ಷಣಮ್ (9) ಇತಿ ನಿಂದತಿ ತಂ ವಿಪ್ರಾಃ ಸ್ರಷ್ಟ್ರಾರಂ ಜಗತಾಂ ಪತಿಮ್, ನಿಷಿದ್ಧಕೃತ್ಯನಿರತಂ ತಂ ದೃಷ್ಟ್ವಾ ಪರಮೇಷ್ಠಿನಮ್ (10) ಹರಃ ಪಿನಾಕಮಾದಾಯ ವ್ಯಾಧರೂಪಧರಃ ಪ್ರಭುಃ. ಆಕರ್ಣಪೂರ್ಣ ಕೃಷ್ಟೇನ ಪಿನಾಕಧನುಷಾ ಶರಮ್ (11) ಸಂಯೋಜ್ಯ ವೇಧಸಂ ತೇನ ವಿವ್ಯಾಧ ನಿಶಿತೇನ ಸಃ. ತ್ರಿಪುರಾಂತಕ ಬಾಣೇನ ವಿದ್ಧ್ವೋಸೌ ನ್ಯಪತದ್‌ಭುವಿ(12).

(11) ಎವಂ ಲಬ್ಧ್ವಾ ಪರಾಂ ಶಕ್ತಿಮೀಶ್ವರಾದೇವ, ಶಾಶ್ವತೀಂ, ಮೈಥುನಪ್ರಭವಾಂ ಸೃಷ್ಟಿಂ ಕರ್ತುಕಾಮಃ ಪ್ರಜಾಪತಿ. ಸ್ವಯಮಪ್ಯದ್‌ಭುತೋ ನಾರೀ ಚಾರ್ಧೇನ ಪುರುಷೋ ಭವತ್, ಯಾರ್ಧೇನ ನಾರೀ ಸಾ ತಸ್ಮಾಚ್ಛತರೂಪಾ ವ್ಯಜಾಯತ. ವಿರಾಜಮಸೃಜದ್ಬ್ರಹ್ಮಾ ಸೋರ್ಧನ ಪುರುಷೋ ಭವತ್. ಸ ವೈ ಸ್ವಾಯಂಭುವಃ ಪೂವಂ ಪುರುಷೋ ಮನುರುಚ್ಯತೆ, ಸಾ ದೇವೀ ಶತರೂಪಾ ತು ತಪಃ ಕೃತ್ವಾ ಸುದುಶ್ಚರಮ್, ಭರ್ತಾರಂ ದೀಪ್ತಯಶಸಂ ಮನುಮೇವಾನ್ವಪಧ್ಯತ.

(12) ಡಾ.ಬಾಬಾಸಾಹೇಬ ಅಂಬೇಡ್ಕರ್ ರೈಟಿಂಗ್ಸ್ ಎಂಡ್ ಸ್ಪೀಚಿಸ್. ಸಂಪುಟ. 4. ಪುಟ. 304.

(13) “ಆಬ್ರಹ್ಮಕೀಟಾನ್ತಮಿದಂ ನಿಬದ್ಧಂ ಪುಂಸ್ತ್ರೀಪ್ರಯೋಗೇಣ ಜಗತ್ ಸಮಸ್ತಮ್, ವ್ರೀಡಾತ್ರ ಕಾ ಯತ್ರ ಚತುರ್ಮುಖತ್ವಮೀಶೋಪಿ ಲೋಭಾದ್ಗಮಿತೋ ಯುವತ್ಯಾ”

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...