Homeಕರ್ನಾಟಕನಾರಾಯಣ ಗುರುಗಳಿಗಾದ ಅವಮಾನ ಮುಚ್ಚಿಹಾಕಲು ಹಿಜಾಬ್ ವಿವಾದ ಸೃಷ್ಟಿ: ಸಂಘ ಪರಿವಾರದ ಮಾಜಿ ನಾಯಕ ಸುನಿಲ್...

ನಾರಾಯಣ ಗುರುಗಳಿಗಾದ ಅವಮಾನ ಮುಚ್ಚಿಹಾಕಲು ಹಿಜಾಬ್ ವಿವಾದ ಸೃಷ್ಟಿ: ಸಂಘ ಪರಿವಾರದ ಮಾಜಿ ನಾಯಕ ಸುನಿಲ್ ಬಜಿಲಕೇರಿ

- Advertisement -
- Advertisement -

ಒಂದು ವರ್ಷ ಇರುವಾಗ ‘ಹಿಜಾಬ್-ಕೇಸರಿ ಶಾಲು’ ಎಂಬ ರೀತಿಯ ಅಜೆಂಡಾ ಕರಾವಳಿಯಲ್ಲಿ ಜಾರಿಯಾಗುತ್ತದೆ. ಕಾಂಗ್ರೆಸ್ ಸರ್ಕಾರ ಇದ್ದರೆ ಹಿಂದೂ ಕಾರ್ಯಕರ್ತರು ಕೊಲೆಯಾಗುತ್ತಾರೆ. ಈಗ ಬಿಜೆಪಿ ಸರ್ಕಾರವಿದೆ. ಕಾರ್ಯಕರ್ತರನ್ನು ಕೊಲೆ ಮಾಡಲು ಆಗಲ್ಲ. ಕಾಂಗ್ರೆಸ್ ಸರ್ಕಾರವಿದ್ದರೆ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಹಬ್ಬಿಸಬಹುದಿತ್ತು. ಈಗ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಹೇಳಲಾಗದು ಎಂದು ಸಂಘಪರಿವಾರದ ಮಾಜಿ ನಾಯಕ, ಹಿಂದುತ್ವದಿಂದ ಬಂಧುತ್ವದೆಡೆಗೆ ಅಭಿಯಾನದ ರುವಾರಿ ಸುನಿಲ್ ಬಜಿಲಕೇರಿ ಹೇಳಿದರು.

ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ನಾರಾಯಣ ಗುರುಗಳ ವಿವಾದ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತು. ಕರಾವಳಿಯಲ್ಲಿ ಎಲ್ಲ ಕಡೆಯಲ್ಲಿ ಬಿಲ್ಲವ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಬಿಲ್ಲವರು ಬಿಜೆಪಿಯ ಪರವಾಗಿದ್ದರು. ಆದರೆ ನಾರಾಯಣ ಗುರುಗಳಿಗೆ ಆದ ಅವಮಾನದಿಂದಾಗಿ ಸಮುದಾಯಕ್ಕೆ ಇರಿಸುಮುರುಸಾಗಿತ್ತು. ಮತಬ್ಯಾಂಕಿಗೆ ದೊಡ್ಡ ಪೆಟ್ಟು ಬಿದ್ದಿತ್ತು. ಪ್ರತಿ ಕ್ಷೇತ್ರದಲ್ಲಿ ಕನಿಷ್ಠ ಹತ್ತು ಸಾವಿರ ಮತಗಳು ಬಿಜೆಪಿಯಿಂದ ಹೊರಹೋದರೆ ಬಿಜೆಪಿಗೆ ನಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಹಿಜಾಬ್‌ನಂತಹ ಪ್ರಕರಣಗಳನ್ನು ಮುಂದೆ ತರುತ್ತದೆ” ಎಂದು ಎಚ್ಚರಿಸಿದರು.

ಇದನ್ನೂ ಓದಿ: ಹಿಜಾಬ್‌‌‌: ವಿದ್ಯಾರ್ಥಿನಿಯರ ಪರವಾಗಿ ಧ್ವನಿ ಎತ್ತಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಮೊದಲು ನಾವೆಲ್ಲ ಶಾಲೆಗೆ ಹೋಗುವಾಗ ಹಿಜಾಬ್ ಧರಿಸಿ ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಗೆ ಬರುತ್ತಿದ್ದರು. ಆಗ ಯಾವುದೇ ವಿವಾದ ಇರಲಿಲ್ಲ. ಈಗಿನ ವಿವಾದದ ಹಿಂದೆ ಎಸ್‌ಡಿಪಿಐ ಕೂಡ ಇದೆ. ಎಸ್‌ಡಿಪಿಐ ಬಿಜೆಪಿಯ ‘ಬಿ ಟೀಮ್’ ಥರ. ಪ್ರತಿ ಚುನಾವಣೆಯ ಸಂದರ್ಭದಲ್ಲೂ ಎಸ್‌ಡಿಪಿಐ ಬ್ಯಾನ್ ಮಾಡ್ತೀವಿ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಬ್ಯಾನ್ ಮಾಡುವುದಿಲ್ಲ. ಯಾಕೆಂದರೆ ಮತ ಧ್ರುವೀಕರಣವಾಗುವುದು ಎಸ್‌ಡಿಪಿಐನಿಂದ. ಕಾಂಗ್ರೆಸ್ ಮತಗಳು ಒಡೆದು ಹೋಗುವುದು ಎಸ್‌ಡಿಪಿಐನಿಂದ. ಹೀಗಾಗಿ ಬಿಜೆಪಿಯವರು ಇಂಥದ್ದಕ್ಕೆಲ್ಲ ಕೈ ಹಾಕುತ್ತಾರೆ. ಕಾಂಗ್ರೆಸ್ ಕೂಡ ದೊಡ್ಡ ಮಟ್ಟದಲ್ಲಿ ವಿರೋಧ ಮಾಡುತ್ತಿಲ್ಲ. ಸುಮ್ಮನೆ ಕುಳಿತು ನೋಡುತ್ತಿದೆ ಎಂದು ತಿಳಿಸಿದರು.

ಎಂಎಲ್‌ಎ, ಎಂಪಿಗಳ ಮಕ್ಕಳು ಕಲಿಯುವ ಶಾಲೆಗಳಲ್ಲಿ ಇದೆಲ್ಲ ನಡೆಯುವುದಿಲ್ಲ. ಬಡವರ ಮಕ್ಕಳು, ಹಿಂದುಳಿದವರ ಮಕ್ಕಳು ಓದುವಂತಹ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಗೊಂದಲಗಳನ್ನು ಎಬ್ಬಿಸುತ್ತಾರೆ. ಎಂಎಲ್‌ಎ ಮಕ್ಕಳು ಯಾರಾದರೂ ಕೇಸರಿ ಶಾಲು ಹಾಕಿಕೊಂಡು ಶಾಲೆಗೆ ಬಂದಿದ್ದು ನೀವು ನೋಡಿದ್ದೀರಾ? ಯಾರೂ ಬರಲ್ಲ. ಈ ಬಡವರ ಮಕ್ಕಳು ಹೊಡೆಸಿಕೊಂಡು ಸಾಯಬೇಕಷ್ಟೇ ಎಂದು ಆತಂಕ ವ್ಯಕ್ತಪಡಿಸಿದರು.

ಶಾಲೆಗೆ ಹೋಗುವುದು, ಶಿಕ್ಷಣ ಪಡೆಯುವುದು ಎಲ್ಲರ ಹಕ್ಕು. ಮೂರು ಸಾವಿರ ವರ್ಷಗಳಿಂದ ಮೇಲ್ವರ್ಗದವರ ದಬ್ಬಾಳಿಕೆ ನಡೆಯುತ್ತಾ ಬಂದಿತ್ತು. ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೀಸಲಾತಿಯನ್ನು ಜಾರಿ ಮಾಡಿತು. ಮೀಸಲಾತಿಯನ್ನು ಏಕಾಏಕಿ ತೆಗೆಯಲು ಸಾಧ್ಯವಿಲ್ಲ. ಹಿಂದುಳಿದ ವರ್ಗಗಳಲ್ಲಿ ಹಿಂದುತ್ವದ ಭಾವನೆಗಳನ್ನು ಜೋರಾಗಿ ಹಚ್ಚಿ ಮುಂದಿನ ದಿನಗಳಲ್ಲಿ ಇವರು ಮೀಸಲಾತಿ ತೆಗೆದು ಹಾಕಿದರೂ ಯಾರೂ ಮಾತನಾಡಬಾರದು ಎಂಬ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಹಿಜಾಬ್ ವಿವಾದ: ಕಠಿಣ ನಿಲುವು ತಳೆಯದ ಬೊಮ್ಮಾಯಿ ಸರ್ಕಾರ

ಕರಾವಳಿಯಲ್ಲಿ ಕಡಲ್ಕೊರೆತ ತಡೆಯಲು ಸಾವಿರಾರು ಕೋಟಿ ರೂ.ಗಳನ್ನು ನೀಡುತ್ತಿದ್ದಾರೆ. ಆದರೆ ಯೋಜನೆ ವಿಫಲವಾಗುತ್ತಿದೆ. ಅದರ ಬಗ್ಗೆ ಇವರು ಹೋರಾಟ ಮಾಡಲ್ಲ. ಕರಾವಳಿ ಜನರು ಉದ್ಯೋಗಕ್ಕಾಗಿ ಧ್ವನಿ ಎತ್ತಿದ್ದಾರೆ. ದೊಡ್ಡ ದೊಡ್ಡ ಇಂಡಸ್ಟ್ರಿಗಳು ಈ ಭಾಗದಲ್ಲಿವೆ. ಆದರೆ ಇಲ್ಲಿನ ಜನರಿಗೆ ಉದ್ಯೋಗ ಸಿಗುವುದಿಲ್ಲ. ಉತ್ತರ ಪ್ರದೇಶ, ಬಿಹಾರದವರಿಗೆ ಕೆಲಸ ಕೊಡುತ್ತಾರೆ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವುದಾಗಿ ಚುನಾವಣಾ ಸಂದರ್ಭದಲ್ಲಿ ಇವರು ಹೇಳುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಅದನ್ನೂ ಮಾಡಲ್ಲ. ಈ ವರದಿ ಜಾರಿಯಾದರೆ ಶೇ. ೪೦ರಷ್ಟು ಮೀಸಲಾತಿ ಕರಾವಳಿಯವರಿಗೆ ಸಿಗುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಯಕರ್ತರು ಸಾವಿರಾರು ಫೇಕ್ ಅಕೌಂಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುತ್ತಾರೆ. ನಮ್ಮ ಮುಖಚರ್ಯೆಯನ್ನೇ ಹೋಲುವ ಶ್ರೀಲಂಕಾ, ಬಂಗ್ಲಾದೇಶದವರ ಫೋಟೋಗಳನ್ನು ಪ್ರೊಫೈಲ್‌ನಲ್ಲಿ ಹಾಕಿಕೊಳ್ಳುತ್ತಾರೆ. ನಾನೇನಾದರೂ ಬಿಲ್ಲವನಾಗಿದ್ದರೆ ಬಿಲ್ಲವರ ಡುಬ್ಲಿಕೇಟ್ ಅಕೌಂಟ್ ಮಾಡಿ, ಅದರಲ್ಲೇ ಕಮೆಂಟ್ ಮಾಡ್ತಾರೆ. ಜಿಎಸ್‌ಬಿಯಾಗಿದ್ದರೆ ಜಿಎಸ್‌ಬಿ ಹೆಸರಲ್ಲೇ ಫೇಕ್ ಅಕೌಂಟ್ ಮಾಡಿ ಅದರಲ್ಲೇ ಕಮೆಂಟ್ ಮಾಡುತ್ತಾರೆ. ಇನ್ನೆರಡು ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೃಷ್ಟಿಯಾಗುತ್ತವೆ ಎಂದು ಎಚ್ಚರ ನೀಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರವಿದ್ದಾಗ ಪ್ರಧಾನಿ ಮೋದಿಯವರೇ ಬಂದು ಶೇ. ೧೦ರಷ್ಟು ಭ್ರಷ್ಟಾಚಾರ ಕರ್ನಾಟಕದಲ್ಲಿ ಇದೆ ಎಂದಿದ್ದರು. ನಾವು ಅದನ್ನೂ ನಂಬಿದ್ದೆವು. ಆದರೆ ಬಿಜೆಪಿಯವರು ಶೇ. ೪೦ರಷ್ಟು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಗುತ್ತಿಗೆದಾರರೇ ಮೋದಿಯವರಿಗೆ ಲಿಖಿತವಾಗಿ ದೂರು ನೀಡಿದರು. ಈ ದೂರಿನ ಬಗ್ಗೆ ಯಾವುದೇ ವಿಚಾರಣೆಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹಿಜಾಬ್ ವಿವಾದ: ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರ- ಸಿದ್ದರಾಮಯ್ಯ

ಹಿಜಾಬ್ ಮತ್ತು ಕೇಸರಿ ಶಾಲು ಎರಡನ್ನೂ ಬಿಟ್ಟುಬಿಡಿ. ಮಕ್ಕಳಿಗೆ ವಿದ್ಯಾಭ್ಯಾಸ ಮುಖ್ಯ. ನೀವು ಗಲ್ಫ್ ದೇಶಗಳಿಗೆ ಹೋದರೆ ನೋಡಬಹುದು. ಒಂದು ಮಸೀದಿ ಇದ್ದರೆ ಪಕ್ಕದಲ್ಲಿ ಹತ್ತು ಲೈವ್‌ಬ್ಯಾಂಡ್‌ಗಳು ಇರುತ್ತವೆ. ಡ್ಯಾನ್ಸ್ ಮಾಡುತ್ತಾರೆ, ಕುಡಿಯುತ್ತಾರೆ. ಆ ದೇಶಗಳು ಮುಂದುವರಿದಿವೆ. ಧರ್ಮಗಳ ಗೊಂದಲಗಳ ಅಗತ್ಯ ಅವರಿಗಿಲ್ಲ ಎಂದರು.

ಕರಾವಳಿಯ ಪ್ರತಿಯೊಂದು ಮನೆಯವರು (ಹಿಂದೂ ಇರಲಿ, ಮುಸ್ಲಿಂ ಇರಲಿ) ಗಲ್ಫ್ ರಾಷ್ಟ್ರಗಳಲ್ಲಿ ಇದ್ದಾರೆ. ಆ ದೇಶಗಳಲ್ಲಿ ಇಂಥವುಗಳನ್ನೆಲ್ಲ ಮಾಡಿದರೆ ನಾವು ನಿರುದ್ಯೋಗಿಗಳಾಗಿ ಇಲ್ಲಿ ಸಾಯಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೀರುವ ಪರಿಣಾಮಗಳನ್ನು ನಾವು ಯೋಚಿಸಬೇಕಲ್ಲ. ಕರಾವಳಿಯಲ್ಲಿ ಆಗುತ್ತಿರುವ ಬೆಳವಣಿಗೆಗಳು ಗಲ್ಪ್ ರಾಷ್ಟ್ರಗಳಲ್ಲಿ ಆದರೆ ನಮ್ಮಲ್ಲಿ ನಿರುದ್ಯೋಗ ಹೆಚ್ಚಾಗುತ್ತದೆ. ಅಲ್ಲಿ ಡ್ರೈವರ್ ಆಗಿರುವವರಿಗೆ, ಸೇಲ್ಸ್‌ಮನ್ ಆಗಿರುವವರಿಗೆ ಕೆಲಸ ಇಲ್ಲದಾಗುತ್ತದೆ. ಇಲ್ಲಿ ಉದ್ಯೋಗ ಸೃಷ್ಟಿ ಮಾಡಲು ಇವರಿಂದ ಆಗುತ್ತಿಲ್ಲ. ದುಬೈನಲ್ಲಿ ಇರುವವರು ನೆಮ್ಮದಿಯಾಗಿ ಕೆಲಸ ಮಾಡದ ಹಾಗೆ ಕರಾವಳಿಯಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಹೆಸರಲ್ಲಿ ರಾಜಕಾರಣ ಮಾಡುತ್ತಿರುವುದು ನಿಲ್ಲಬೇಕಾದರೆ ಒಂದು ಸುಲಭವಾದ ಮಾರ್ಗವಿದೆ. ೨೧ ವರ್ಷಗಳ ನಂತರವೇ ಮತದಾನದ ಹಕ್ಕನ್ನು ನೀಡಬೇಕು. ಶಾಲಾ ಮಕ್ಕಳನ್ನು ಛೂ ಬಿಟ್ಟು ರಾಜಕಾರಣ ಮಾಡುವುದನ್ನು ಆಗ ನಿಲ್ಲಿಸುವ ಸಾಧ್ಯತೆ ಇದೆ.


ಇದನ್ನೂ ಓದಿರಿ:  ಹಿಜಾಬ್ ವಿವಾದ: ಕಾಲೇಜುಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯಗೊಳಿಸಿಲ್ಲ ಎಂದ ಶಿಕ್ಷಣ ಇಲಾಖೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

0
ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ...