ಕರ್ನಾಟಕದ ಕರಾವಳಿಯ ಕಾಲೇಜುಗಳಲ್ಲಿ ಕಾಣಿಸಿಕೊಂಡಿರುವ ಹಿಜಾಬ್ ವಿವಾದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಕೋಮುವಿಭಜನೆಯ ಭಾವನೆ ಸೃಷ್ಟಿಯಾಗುವುದಕ್ಕೆ ಕಾರಣವಾಗುತ್ತಿರುವ ಈ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಸರ್ಕಾರದ ತಳೆದಿರುವ ನಿಲುವಿಗೆ ತೀವ್ರ ಟೀಕೆ ವ್ಯಕ್ತವಾಗಿದೆ.
ಉಡುಪಿ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ಹಿಜಾಬ್ ತೊಡುವ ವಿಷಯದಲ್ಲಿ ಆರಂಭವಾದ ವಿವಾದ ಈಗ ಇನ್ನಷ್ಟು ಹರಡಿ, ಕುಂದಾಪುರದ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ವಿರೋಧಿಸಿ ಹಿಂದೂ ಯುವಕರು ಕೇಸರಿ ಶಾಲು ಧರಿಸಿ ಪ್ರತಿಭಟಿಸಿದ್ದಾರೆ. ಹಿಜಾಬ್ ಧರಿಸದಂತೆ ಆ ಕಾಲೇಜಿನ ಆಡಳಿತ ಮಂಡಳಿಯೂ ವಿದ್ಯಾರ್ಥಿನಿಯರಿಗೆ ಹೇಳಿದ್ದಾರೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಕಾಲೇಜಿಗೆ ಬರುವುದು ಸಾಧ್ಯವಿಲ್ಲದ ಸ್ಥಿತಿ ಎದುರಿಸುತ್ತಿದ್ದಾರೆ. ಅದಾದ ಮೇಲೆ ಕುಂದಾಪುರದ ಬಂಡಾರ್ಕರ್ ಕಾಲೇಜು, ಶಿವಮೊಗ್ಗದ ಭದ್ರಾವತಿಯ ಸರ್ ಎಂ.ವಿಶ್ವೇಶ್ವರಯ್ಯ ಸರ್ಕಾರಿ ಕಾಲೇಜಿಗೂ ಈ ಬೆಳವಣಿಗೆ ಹರಡಿದೆ.
ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರ್ಕಾರದ ನಿಲುವನ್ನು ಪ್ರಶ್ನಿಸಿದಾಗ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್, “ಸರ್ಕಾರ ಸಮವಸ್ತ್ರ ಧರಿಸಿಯೇ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು ಎಂದು ಹೇಳಿದೆ. ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಅದನ್ನು ಅನುಸರಿಸಬೇಕಾಗುತ್ತದೆ. ಪ್ರಜಾಸತ್ತಾತ್ಮಕ ದೇಶದಲ್ಲಿ ಎಲ್ಲರೂ ನಿಯಮಗಳನ್ನು ಅನುಸರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಉಡುಪಿಯ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ಹಿಜಾಬ್ ಒಂದು ವಿವಾದವಾದಾಗ ಆಡಳಿತ ಮಂಡಳಿ ತಕ್ಷಣವೇ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ರಘುಪತಿ ಭಟ್‌ರನ್ನು ಕರೆಸಿ ಸಭೆ ನಡೆಸಿತ್ತು. ಶಿಕ್ಷಣ ಅಧಿಕಾರಿಗಳು, ಶಾಲಾ ಆಡಳಿತ ಮಂಡಳಿ ಮತ್ತು ಸರ್ಕಾರದ ಪ್ರತಿನಿಧಿಗಳು ಸಮಸ್ಯೆಗೆ ಸಂಬಂಧಿಸಿದವರ ಜೊತೆಗೆ ಹಲವು ಸುತ್ತಿನ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಗೇಟ್ ಮುಚ್ಚಿದ ಕುಂದಾಪುರ ಕಾಲೇಜ್: ಧ್ವನಿ ಎತ್ತಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ
ವಿವಾದ ತೀವ್ರಸ್ವರೂಪ ಪಡೆಯುತ್ತಾ ಹೋದಂತೆ ನಾಡಿನ ರಾಜಕೀಯ ನಾಯಕರು ಸ್ಪಂದಿಸಲು ಆರಂಭಿಸಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ”ಶಾಲೆ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರದ ವಿಷಯದಲ್ಲಿ ಗೊಂದಲಗಳು ಉಂಟಾಗಬಾರದು. ಉಡುಪಿಯ ಕಾಲೇಜುಗಳಲ್ಲಿ ಆಗಿರುವುದು ರಾಜ್ಯಾದ್ಯಂತ ವಿಸ್ತರಿಸಿದರೆ ಬಹಳಷ್ಟು ದೊಡ್ಡ ಸಮಸ್ಯೆಗಳಾಗುತ್ತವೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕರಾವಳಿಯ ಇತರ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಕೋಮುವಾದಿ ನೆಲೆಯಲ್ಲಿ ವಿಭಜನೆಯಾಗುವ ಸಾಧ್ಯತೆಯ ಆತಂಕ ಸೃಷ್ಟಿಯಾಗಿದೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಗೃಹಸಚಿವ ಅರಗ ಜ್ಞಾನೇಂದ್ರ, “ಶೈಕ್ಷಣಿಕ ಸಂಸ್ಥೆಗಳು ರಾಜಕೀಯೇತರವಾಗಿ ಧಾರ್ಮಿಕವಾಗಿ ತಟಸ್ಥವಾಗಿರಬೇಕು. ಶಾಲೆಗಳ ನಿಯಮಗಳನ್ನು ಪಾಲಿಸುವಂತೆ ಹೆತ್ತವರನ್ನು ಕೋರಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ಹಿಜಾಬ್ ವಿವಾದದ ಹಿಂದಿನ ಕೋಮುವಾದಿ ಶಕ್ತಿಗಳ ಪತ್ತೆಗೆ ಸೂಚಿಸಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಆದರೆ ಅಂತಹ ತನಿಖೆಗೆ ತಂಡ ರಚನೆಯಾಗಿರುವ ಬಗ್ಗೆ ಮಾಹಿತಿಯಿಲ್ಲ. ಪ್ರಸ್ತುತ ಶಿಕ್ಷಣ ಅಧಿಕಾರಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದ್ದು, ಅದು ತನ್ನ ವರದಿಯನ್ನು ಈ ಶೈಕ್ಷಣಿಕ ಅವಧಿಯ ಅಂತ್ಯದೊಳಗೆ ಸಲ್ಲಿಸಲಿದೆ ಮತ್ತು ಅದಕ್ಕೆ ತಕ್ಕಂತೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ವಿಚಾರಧಾರೆಯೇ ಪ್ರೇರಣೆ: ಮೈಸೂರು ವಿವಿಯಲ್ಲಿ ಪಿಎಚ್.ಡಿ ಮಾಡುತ್ತಿರುವ ಟ್ರಾನ್ಸ್‌ಜೆಂಡರ್ ಮಹಿಳೆಯ ಮನದಾಳ
ಹೀಗಾಗಿ ಈ ಶೈಕ್ಷಣಿಕ ಸಾಲಿನಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಭವಿಷ್ಯವೇನು ಎನ್ನುವುದು ಅಸ್ಪಷ್ಟವಾಗಿದೆ. ಪ್ರೌಢಶಿಕ್ಷಣ ಸಚಿವರೇ ತಿಳಿಸಿರುವಂತೆ, ಪ್ರೌಢ ಶಿಕ್ಷಣ ಮಂಡಳಿ ಅಥವಾ ಸರ್ಕಾರ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸೂಚಿಸುವುದಿಲ್ಲ. ಬದಲಾಗಿ ಶಿಕ್ಷಣ ಕಾಯ್ದೆಯ 11ನೇ ನಿಯಮದ ಪ್ರಕಾರ ಆಯಾ ಶಿಕ್ಷಣ ಸಂಸ್ಥೆಗಳಿಗೆ ಸಮವಸ್ತ್ರ ಸೂಚಿಸುವ ಅಧಿಕಾರ ನೀಡಿದೆ. ವಿದ್ಯಾರ್ಥಿಗಳೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿವರಗಳ ಪ್ರಕಾರ ಬಂಡಾರ್ಕರ್ಸ್ ಕಾಲೇಜಿನ ನಿಯಮ ಪುಸ್ತಕದಲ್ಲಿ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸುವ ಅವಕಾಶವಿದೆ. ಆದರೆ ಇದೀಗ ಸರ್ಕಾರದ ಸೂಚನೆ ಮೇರೆಗೆ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸದಂತೆ ಹೇಳಲಾಗಿದೆ.
Students at #Kundapura #Udupi expose the lie of #Bhandaskar pvt college.Their rule book clearly shows girls can wear #Hijab if the color matches that of uniform.They allege- buckling under pressure from #Hindutva groups the mangement is banning #Hijabi students #Karnataka pic.twitter.com/hkkVvaHihV
— Imran Khan (@KeypadGuerilla) February 4, 2022
ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ “ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಸಮುದಾಯವೊಂದನ್ನು ಗುರಿಯಾಗಿಸಲು ಪ್ರಯತ್ನಿಸಿದಾಗ ಅವರು, ಯಾರೇ ಆದರೂ ಕೆಲವು ಪ್ರತ್ಯೇಕ ಪ್ರಕರಣಕ್ಕೆ ಸಂಪೂರ್ಣ ಮುಸ್ಲಿಂ ಸಮುದಾಯವನ್ನು ದೂಷಿಸಿದಲ್ಲಿ ಎರಡನೇ ಆಲೋಚನೆಯಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ” ಎಂದು ಹೇಳಿದ್ದರು.
ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದರು ಹಿಜಾಬ್ ಪ್ರಕರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಯಾವುದೇ ಸ್ಪಷ್ಟ ನಿಲುವು ತಳೆಯದೆ ಸಮಾಜದ ಸಾಮರಸ್ಯ ಕದಡುವ ಘಟನೆಗೆ ಪರೋಕ್ಷವಾಗಿ ಅವಕಾಶ ನೀಡಿದರೇ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂಬ ಟೀಕೆ ವ್ಯಕ್ತವಾಗಿದೆ.
–ಸುಪ್ರಭ ಎನ್. ಕೆ
ಇದನ್ನೂ ಓದಿ: ಹಿಜಾಬ್ ವಿವಾದ: ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರ- ಸಿದ್ದರಾಮಯ್ಯ


