Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-6; ಭಾಗ-1)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-6; ಭಾಗ-1)

- Advertisement -
- Advertisement -

“ನೀವೆಲ್ಲರೂ” ಪ್ರಿನ್ಸ್ ಪ್ರಾರಂಭಿಸಿದ, “ನನ್ನನ್ನು ಕೇಳಲು ಸಿದ್ಧರಾಗಿ ಕುತೂಹಲದಿಂದ ಕುಳಿತುಕೊಂಡಾಗ, ಅಂದರೆ ನಾನೀಗ ನಿಮ್ಮನ್ನು ತೃಪ್ತಿಗೊಳಿಸದೇ ಇದ್ದರೆ ಬಹುಶಃ ನನ್ನ ಬಗ್ಗೆ ಕೋಪಗೊಳ್ಳುತ್ತೀರಿ. ಇಲ್ಲ, ಇಲ್ಲ, ನಾನು ಸುಮ್ಮನೆ ತಮಾಷೆ ಮಾಡುತ್ತಿದ್ದೇನೆ!” ಅವನು ನಸುನಗುತ್ತಾ ತಕ್ಷಣ ಈ ಮಾತನ್ನು ಸೇರಿಸಿದ.

“ಸರಿ ಹಾಗಾದರೆ- ಅಲ್ಲಿದ್ದವರೆಲ್ಲಾ ಮಕ್ಕಳು, ನಾನಿದ್ದದ್ದು ಮಕ್ಕಳ ಜೊತೆ, ಬರೀ ಮಕ್ಕಳ ಜೊತೆ. ಅವರೆಲ್ಲಾ ನಾನು ಬದುಕುತ್ತಿದ್ದ ಹಳ್ಳಿಯಲ್ಲಿನ ಮಕ್ಕಳು, ಅಲ್ಲಿದ್ದ ಶಾಲೆಗೆ ಅವರು ಹೋಗುತ್ತಿದ್ದರು- ಅವರೆಲ್ಲರೂ ಕೂಡ. ನಾನವರಿಗೇನನ್ನೂ ಬೋಧಿಸುತ್ತಿರಲಿಲ್ಲ, ಓ ಇಲ್ಲ; ಅದಕ್ಕೋಸ್ಕರವೇ ಅಲ್ಲೊಬ್ಬ ಪ್ರಾಧ್ಯಾಪಕ ಇದ್ದ, ಜೂಲಸ್ ಥಿಬೌಟ್ ಅವನ ಹೆಸರು. ನಾನವರಿಗೆ ಸ್ವಲ್ಪ ಏನನ್ನಾದರೂ ಹೇಳಿಕೊಡಬಹುದಿತ್ತು, ಆದರೆ ನಾನವರ ಮಧ್ಯದಲ್ಲಿ ಒಬ್ಬ ಪರಕೀಯ, ನಾನು ನನ್ನ ಇಡೀ ನಾಲ್ಕು ವರ್ಷಗಳನ್ನ ಅವರ ನಡುವೆಯೇ ಕಳೆದೆ. ನಾನು ಅದಕ್ಕಿಂತ ಉತ್ತಮವಾದದ್ದೇನನ್ನೂ ಅಪೇಕ್ಷಿಸಿರಲಿಲ್ಲ; ನಾನು ಅವರಿಂದ ಯಾವುದನ್ನೂ ಮುಚ್ಚುಮರೆ ಮಾಡದೇ ಎಲ್ಲವನ್ನೂ ಹೇಳುತ್ತಿದ್ದೆ. ಅವರ ತಂದೆಯಂದಿರು ಮತ್ತು ಸಂಬಂಧಿಕರಿಗೆಲ್ಲಾ ನನ್ನನ್ನು ಕಂಡರೆ ಬಲು ಕೋಪ, ಕಾರಣ ಸ್ವಲ್ಪ ಸಮಯದ ನಂತರ ನಾನು ಆ ಮಕ್ಕಳ ಅವಿಭಾಜ್ಯ ಅಂಗವಾಗಿಬಿಟ್ಟಿದ್ದೆ ಮತ್ತು ನಾನಿಲ್ಲದೇ ಅವರು ಏನನ್ನೂ ಮಾಡುತ್ತಿರಲಿಲ್ಲ, ಅವರೆಲ್ಲಾ ನನ್ನನ್ನು ಸದಾಕಾಲ ಸುತ್ತುಗಟ್ಟಿಬಿಡುತ್ತಿದ್ದರು. ಶಾಲಾ ಉಪಾಧ್ಯಾಯ ಕೊನೆಗೆ ನನ್ನ ದೊಡ್ಡ ಶತ್ರುವಾಗಿಬಿಟ್ಟ! ನನಗೆ ಅನೇಕ ಶತ್ರುಗಳಿದ್ದರು, ಅದಕ್ಕೆಲ್ಲಾ ಕಾರಣ ಮಕ್ಕಳು. ಪ್ರೊ ಸ್ಕ್ನೀಡರ್ ಕೂಡ ಈ ವಿಷಯಕ್ಕೆ ನನ್ನ ವಿರುದ್ಧ ಅಸಮಾಧಾನಗೊಂಡಿದ್ದ. ಅವರಿಗೆಲ್ಲಾ ಯಾವುದರ ಬಗ್ಗೆ ಹೆದರಿಕೆ? ಮಗುವೊಂದರ ಜೊತೆ ಎಲ್ಲವನ್ನೂ ಹೇಳಿಕೊಳ್ಳಬಹುದು, ಏನನ್ನು ಬೇಕಾದರೂ. ನನ್ನನ್ನು ಸದಾಕಾಲ ಆವರಿಸಿದ ಪ್ರಶ್ನೆಯೆಂದರೆ ತಂದೆ ತಾಯಿಯಂದಿರು ತಮ್ಮ ಮಕ್ಕಳ ಬಗ್ಗೆ ಬಹಳಷ್ಟು ಕಡಿಮೆ ತಿಳಿದುಕೊಂಡಿರುತ್ತಾರೆ ಎನ್ನುವುದು. ಅವರುಗಳು ಮಕ್ಕಳಿಂದ ಅಷ್ಟೊಂದು ಮುಚ್ಚಿಡುವ ಅವಶ್ಯಕತೆಯೇ ಇರುವುದಿಲ್ಲ. ಕೇವಲ ಅವರು ಆ ಚಿಕ್ಕ ವಯಸ್ಸಿನಲ್ಲಿ ಅರ್ಥಮಾಡಿಕೊಳ್ಳುವುದು ಅಸಾಧ್ಯ ಎನ್ನುವ ಕಾರಣಕ್ಕೋಸ್ಕರ! ಆದರೆ ಮಕ್ಕಳಿಗೆ ಬಹಳ ಪ್ರಾಮುಖ್ಯತೆಯನ್ನ ಪಡೆದ ವಿಷಯಗಳಲ್ಲಿ ಒಳ್ಳೆಯ ಸಲಹೆ ಕೊಡುವ ಸಾಮರ್ಥ್ಯ ಇರುತ್ತದೆ. ಅದು ಹೇಗೆ ಈ ರೀತಿಯ ಪುಟ್ಟ ಹಕ್ಕಿಗಳನ್ನ ಮೋಸಗೊಳಿಸಲು ಸಾಧ್ಯ, ಅವರು ಇನ್ನೊಬ್ಬರನ್ನು ಮಧುರವಾಗಿ ಅತ್ಯಂತ ನಂಬಿಕೆಯಿಂದ ಕಾಣುವಾಗ? ನಾನವರನ್ನ ಹಕ್ಕಿಗಳು ಎಂದು ಕರೆಯುವುದಕ್ಕೆ ಕಾರಣ ಈ ಪ್ರಪಂಚದಲ್ಲಿ ಹಕ್ಕಿಗಳಿಗಿಂತ ಉತ್ತಮವಾದದ್ದು ಏನೂ ಇಲ್ಲ ಎನ್ನುವ ಕಾರಣದಿಂದ!

“ಆದರೂ ಕೂಡ, ಎಲ್ಲಾ ಜನಗಳೂ ನನ್ನ ಬಗ್ಗೆ ಕೋಪಗೊಂಡಿದ್ದು ಒಂದೇ ವಿಷಯಕ್ಕೆ; ಆದರೆ ಥಿಬೌಟ್‌ಗೆ ನನ್ನ ಬಗ್ಗೆ ಹೊಟ್ಟೆಕಿಚ್ಚಿತ್ತು. ಮೊದಮೊದಲಿಗೆ ನಾನು ಅಷ್ಟೊಂದು ಚೆನ್ನಾಗಿ ಹೇಳಿಕೊಡುವುದನ್ನ ಮಕ್ಕಳು ಹೇಗೆ ಅರ್ಥ ಮಾಡಿಕೊಳ್ಳುತ್ತಿದ್ದರು ಅನ್ನುವುದರ ಬಗ್ಗೆ ಅಚ್ಚರಿ ಅನ್ನುವ ರೀತಿಯಲ್ಲಿ ತಲೆಯಲ್ಲಾಡಿಸುತ್ತಿದ್ದ, ಅದಲ್ಲದೇ ಅವನಿಂದ ಮಕ್ಕಳಿಗೆ ಕಲಿಯಲು ಕಷ್ಟವಾಗುತ್ತಿತ್ತು; ನಾನಾಗಲಿ ಅಥವ ನೀನೇ ಆಗಲಿ ಮಕ್ಕಳಿಗೆ ಹೆಚ್ಚು ಕಲಿಸಲು ಸಾಧ್ಯವಿಲ್ಲ, ಅದಕ್ಕೆ ತದ್ವಿರುದ್ಧವಾಗಿ ಅವರೇ ನಮಗೆ ಹೇಳಿಕೊಡುವುದು ಬಹಳಷ್ಟಿದೆ ಅಂತ ನಾನವನಿಗೆ ಹೇಳಿದಾಗ ಅವನು ಗಹಗಹಿಸಿ ನಕ್ಕಿದ್ದ.

“ಅದೂ ಪುಟ್ಟ ಮಕ್ಕಳ ನಡುವೆ ಬದುಕುತ್ತಾ, ಅವನು ಅದು ಹೇಗೆ ನನ್ನನ್ನು ದ್ವೇಷಿಸುತ್ತಿದ್ದ ಮತ್ತು ನನ್ನ ಬಗ್ಗೆ ಅಪನಿಂದೆಯ ಕಥೆಗಳನ್ನು ಹಬ್ಬಿಸುತ್ತಿದ್ದ ಅನ್ನುವುದನ್ನ ನನಗೆ ಅರ್ಥಮಾಡಿಕೊಳ್ಳಲು ಆಗಲೇ ಇಲ್ಲ. ಮಕ್ಕಳು ಹೃದಯದಲ್ಲಿ ಉಂಟಾದ ಗಾಯವನ್ನ ಶಮನಗೊಳಿಸುತ್ತಾರೆ ಮತ್ತು ವಾಸಿಯಾಗಲು ಕಾರಣರಾಗುತ್ತಾರೆ. ನಾನು ನೆನಸಿಕೊಳ್ಳುವುದು, ನಮ್ಮ ಪ್ರೊಫೆಸರ್ ಬಳಿ ಒಬ್ಬ ಬಡ ಮನುಷ್ಯನಿದ್ದ, ಮತ್ತು ಅಲ್ಲಿ ಅವನಿಗೆ ಹುಚ್ಚಿಗೆ ಚಿಕಿತ್ಸೆ ನೀಡಲಾಗುತ್ತಿತ್ತು; ಈ ಮಕ್ಕಳು ಕೊನೆಯದಾಗಿ ಅವನಿಗೆ ಏನು ಮಾಡಿದರು ಎನ್ನುವುದನ್ನ ನಿಮಗೆ ಊಹಿಸಲೂ ಅಸಾಧ್ಯ. ನನ್ನ ಅಭಿಪ್ರಾಯದ ಪ್ರಕಾರ ಅವನು ನಿಜವಾಗಲೂ ಹುಚ್ಚನಾಗಿರಲಿಲ್ಲ, ಆದರೆ ಭಯಂಕರ ಅಸಂತೋಷದಿಂದ ಇದ್ದ. ನಾನು ಅವನ ಬಗ್ಗೆ ವಿಸ್ತಾರವಾಗಿ ಇನ್ನೊಂದು ದಿನ ಹೇಳುತ್ತೇನೆ. ನಾನೀಗ ಈ ಕಥೆಯನ್ನ ಮುಂದುವರಿಸ ಬೇಕು.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-4)

“ಮಕ್ಕಳು ಮೊದಮೊದಲಿಗೆ ನನ್ನನ್ನು ಪ್ರೀತಿಸುತ್ತಿರಲಿಲ್ಲ; ನಾನವಾಗ ಒಬ್ಬ ರೋಗಗ್ರಸ್ಥ ವಕ್ರ ಮನುಷ್ಯನಂತೆ ಕಾಣುತ್ತಿದ್ದೆ, ಮತ್ತು ನಾನೊಬ್ಬ ಕೊಳಕು ಮನುಷ್ಯನಂತೆ ಕಾಣುತ್ತಿದ್ದೆ ಅನ್ನುವುದು ನನಗೆ ತಿಳಿದಿತ್ತು. ಅದಲ್ಲದೇ ನಾನೊಬ್ಬ ವಿದೇಶಿ ಬೇರೆ. ಮೊದಮೊದಲು ಮಕ್ಕಳು ನನ್ನನ್ನು ನೋಡಿ ನಗುತ್ತಿದ್ದರು; ಅವರು ನನ್ನ ಕಡೆಗೆ ಕಲ್ಲೆಸೆಯುವ ಮಟ್ಟಕ್ಕೂ ಹೋಗಿದ್ದರು, ಅದೂ ಅವರು ನಾನು ಮೇರಿಯನ್ನ ಚುಂಬಿಸುತ್ತಿರುವುದನ್ನ ನೋಡಿದಾಗ. ಇಡೀ ನನ್ನ ಜೀವನದಲ್ಲಿ ಅವಳನ್ನು ನಾನು ಒಂದೇಒಂದು ಸಲ ಮಾತ್ರ ಚುಂಬಿಸಿದ್ದು, ಬೇಡಬೇಡ ಇದರ ಬಗ್ಗೆ ನಗಬೇಡಿ!” ಪ್ರಿನ್ಸ್ ಅವನ ಕೇಳುಗರಿಗೆ ನಗು ಉಕ್ಕಿಬರುತಿದ್ದುದನ್ನ ಈ ಘಟ್ಟದಲ್ಲಿ ನಿಗ್ರಹಿಸಲು ಪ್ರಯತ್ನಿಸಿದ. “ಇದು ಪ್ರೇಮಕ್ಕೆ ಸಂಬಂಧಪಟ್ಟಿದ್ದು ಅಲ್ಲವೇ ಅಲ್ಲ! ಆ ಜೀವ ಎಂತಹ ಶೋಚನೀಯ ಪರಿಸ್ಥಿತಿಯಲ್ಲಿತ್ತು ಎನ್ನುವುದು ನಿಮಗೆ ತಿಳಿದಿದ್ದರೆ, ನೀವೂ ನನ್ನಂತೆಯೇ ಅವಳ ಬಗ್ಗೆ ಕನಿಕರ ತೋರಿಸುತ್ತಿದ್ದಿರಿ. ಅವಳು ನಮ್ಮ ಹಳ್ಳಿಯವಳಾಗಿದ್ದಳು. ಅವಳ ತಾಯಿ ಮುದುಕಿ. ಅವರು ತಮ್ಮ ಪುಟ್ಟ ಮನೆಯ ಕಿಟಕಿಯಿಂದ ದಾರ ಮತ್ತು ತಂತಿಯನ್ನ ಸೋಪು ಮತ್ತು ಹೊಗೆಸೊಪ್ಪನ್ನು ಮಾರುತ್ತಿದ್ದರು, ಮತ್ತು ಆ ವ್ಯಾಪಾರದಿಂದ ಸಿಗುತ್ತಿದ್ದ ಅತ್ಯಲ್ಪ ಲಾಭದಿಂದ ಬದುಕುತ್ತಿದ್ದರು. ಆ ಹೆಂಗಸು ಅನಾರೋಗ್ಯದಿಂದ ಬಳಲುತ್ತಿದ್ದಳು ಮತ್ತು ಅವಳಿಗೆ ಬಹಳಷ್ಟು ವಯಸ್ಸಾಗಿತ್ತು; ಅವಳಿಗೆ ಚಲಿಸುವುದೂ ಕೂಡ ಕಷ್ಟಕರವಾಗಿತ್ತು. ಮೇರಿ ಅವಳ ಮಗಳು, ಇಪ್ಪತ್ತು ವರ್ಷ ವಯಸ್ಸಿನ ಹುಡುಗಿ, ಬಹಳ ದುರ್ಬಲಳಾಗಿದ್ದಳು, ತೆಳ್ಳಗಿದ್ದಳು ಮತ್ತು ಕ್ಷಯ ರೋಗಿ ಬೇರೆ; ಆದರೂ ಸುತ್ತಮುತ್ತಲ ಮನೆಗಳಲ್ಲಿ ಕಷ್ಟಕರವಾದ ಕೆಲಸಗಳನ್ನು ಪ್ರತಿ ದಿನವೂ ಮಾಡುತಿದ್ದಳು. ಸರಿ, ಒಂದು ದಿನ ಊರೂರು ತಿರುಗಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಯೊಬ್ಬ ಅವಳನ್ನು ಮೋಸಗೊಳಿಸಿ ಎತ್ತಿಕೊಂಡು ಹೋಗಿಬಿಟ್ಟ; ಮತ್ತು ಒಂದು ವಾರದ ನಂತರ ಅವಳನ್ನ ಪರಿತ್ಯಜಿಸಿಬಿಟ್ಟ. ಅವಳು ಸಂಪೂರ್ಣ ಕೊಳಕಾಗಿ, ತನ್ನ ಬಟ್ಟೆ ಬರೆಯನ್ನೆಲ್ಲಾ ಕೊಚ್ಚೆಮಾಡಿಕೊಂಡು, ಪಾದರಕ್ಷೆಯಿಲ್ಲದೇ ಮನೆಗೆ ವಾಪಸ್ಸು ಬಂದಳು; ಅವಳು ಸುಮಾರು ಒಂದು ವಾರಕಾಲ ಬರಿಗಾಲಿನಲ್ಲಿ ನಡೆದುಕೊಂಡೇ ಬಂದಳು; ಅವಳು ಅಲ್ಲಲ್ಲಿಯೇ ಹೊಲಗದ್ದೆಗಳಲ್ಲಿ ಮಲಗುತ್ತಿದ್ದಳು ಮತ್ತು ಅತೀವವಾದ ಶೀತ ಅವಳನ್ನ ಆವರಿಸಿಕೊಂಡಿತ್ತು; ಅವಳ ಪಾದಗಳು ಗಾಯಗೊಂಡಿದ್ದವು ಮತ್ತು ಊದಿಕೊಂಡಿದ್ದವು, ಮತ್ತು ಅವಳ ಕೈಗಳ ಮೇಲೆಲ್ಲಾ ತರಚಿದ ಗಾಯಗಳಾಗಿದ್ದವು. ಅವಳು ಮುಂಚೆಯೂ ಕೂಡ ಚೆಲುವೆಯಲ್ಲ; ಆದರೆ ಅವಳ ಕಣ್ಣುಗಳು ಪ್ರಶಾಂತತೆ, ಕರುಣೆ ಮತ್ತು ಮುಗ್ಧತೆಯಿಂದ ಕೂಡಿದ್ದವು.

“ಅವಳು ಸದಾಕಾಲ ಮೌನವಾಗಿ ಇರುತ್ತಿದ್ದಳು; ನನಗೀಗ ನೆನಪಾಗುತ್ತಿರುವಂತೆ, ವಾಪಸ್ಸು ಬಂದಮೇಲೆ ಒಮ್ಮೆ ಅವಳು ತನ್ನ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಹಾಡಲು ಶುರುಮಾಡಿದಳು ಮತ್ತು ಪ್ರತಿಯೊಬ್ಬರೂ ’ಈ ದಿನ ಮೇರಿ ಹಾಡಲು ಪ್ರಯತ್ನಿಸಿದಳು!’ ಎಂದು ಹೇಳಿದರು. ಅವಳನ್ನು ಅಂದು ಎಷ್ಟು ಅವಮಾನಿಸಿ ಕಡೆಗಣಿಸಿದರೆಂದರೆ ಅವಳು ಶಾಶ್ವತವಾಗಿ ಅಂದಿನಿಂದ ಮೌನವಾಗಿಯೇ ಇದ್ದುಬಿಟ್ಟಳು. ಮುಂಚೆಲ್ಲಾ ಈ ಜಾಗದಲ್ಲಿ ಅವಳನ್ನು ಎಲ್ಲರೂ ಕರುಣೆಯಿಂದ ಕಾಣುತ್ತಿದ್ದರು; ಆದರೆ ಅವಳು ರೋಗಗ್ರಸ್ತಳಾಗಿ ಮತ್ತು ಅಸ್ಪೃಶ್ಯಳಾಗಿ ಮತ್ತು ಶೋಚನೀಯ ಸ್ಥಿತಿಯಲ್ಲಿ ವಾಪಸ್ಸು ಬಂದಾಗ, ಒಬ್ಬರಾದರೂ ಅವಳ ಕಡೆಗೆ ಸ್ವಲ್ಪವೂ ದಯೆ ತೋರಲಿಲ್ಲ. ಕ್ರೂರ ಜನ! ಇಂತಹ ವಿಷಯಗಳಲ್ಲಿ ಜನ ಅದೆಷ್ಟು ಕಠಿಣವಾಗಿಬಿಡುತ್ತಾರೆ ಮತ್ತು ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳುವುದರಲ್ಲಿ ಎಷ್ಟು ಗೊಂದಲಮಯವಾಗಿಬಿಡುತ್ತಾರೆ! ಈ ರೀತಿಯ ನಡವಳಿಕೆಯಲ್ಲಿ ಅವಳ ತಾಯಿಯೇ ಮೊದಲಿಗಳಾದಳು. ಮಗಳನ್ನು ಅವಳು ಕ್ರೋಧದಿಂದ, ನಿರ್ದಯವಾಗಿ ಮತ್ತು ತಿರಸ್ಕಾರದಿಂದ ಬರಮಾಡಿಕೊಂಡಳು. ’ನೀನು ನನ್ನನ್ನು ಅವಮಾನಿಸಿದ್ದೀಯ,’ ಎಂದಳು. ಅವಳನ್ನು ಕಳಂಕಿತೆಯನ್ನಾಗಿ ಮಾಡುವಲ್ಲಿ ಅವಳೇ ಮುಂದಾಳತ್ವ ವಹಿಸಿದಳು; ಆದರೆ ಮೇರಿ ವಾಪಸ್ಸಾಗಿದ್ದರ ಸುದ್ದಿ ಹಳ್ಳಿಯವರನ್ನೆಲ್ಲಾ ತಲುಪಿದಾಗ, ಎಲ್ಲರೂ ಅವಳ ಗುಡಿಸಲಿಗೆ ಬಂದು ತುಂಬಿಕೊಂಡರು. ವಯಸ್ಸಾದವರು, ಮಕ್ಕಳುಗಳು, ಹೆಂಗಸರು ಮತ್ತು ಹುಡುಗಿಯರು. ಆತುರದಿಂದ ನುಗ್ಗುತ್ತಿದ್ದ ಮನೋವಿಕಾರದಿಂದ ಕೂಡಿದ ಜನ ಜಂಗುಳಿ ಅದು. ಮೇರಿ ನೆಲದ ಮೇಲೆ ವೃದ್ಧ ತಾಯಿಯ ಪಾದದ ಬಳಿ ಹಸಿವಿನಿಂದ, ಜರ್ಜರಿತಳಾಗಿ, ಕೊಳಕು ದೇಹದಿಂದ ಅಳುತ್ತಾ ಶೋಚನೀಯವಾಗಿ ಬಿದ್ದುಕೊಂಡಿದ್ದಳು.

“ಪ್ರತಿಯೊಬ್ಬರೂ ರೂಮಿನೊಳಗಡೆಗೆ ನುಗ್ಗಿದಾಗ ಅವಳು ತನ್ನ ಮುಖವನ್ನ ತನ್ನ ಕೆದರಿದ ಕೂದಲಿನಿಂದ ಮುಚ್ಚಿಕೊಂಡಳು ಮತ್ತು ನೆಲದ ಮೇಲೆ ಮುದುರಿಕೊಂಡು ಬಿದ್ದುಕೊಂಡಿದ್ದಳು. ರಸ್ತೆಯಲ್ಲಿ ಬಿಸಾಕಿದ್ದ ಕೊಳೆತ ವಸ್ತುವನ್ನ ನೋಡುವ ರೀತಿಯಲ್ಲಿ ಪ್ರತಿಯೊಬ್ಬರೂ ಅವಳ ಕಡೆಗೆ ನೋಡುತ್ತಿದ್ದರು. ವಯಸ್ಸಾದವರು ಅವಳನ್ನ ಗದರಿಸುತ್ತಾ ಖಂಡಿಸುತ್ತಿದ್ದರು ಮತ್ತು ಚಿಕ್ಕವರೆಲ್ಲಾ ಅವಳನ್ನ ಅಪಹಾಸ್ಯ ಮಾಡುತ್ತಿದ್ದರು. ಹೆಂಗಸರು ಕೂಡ ಅವಳನ್ನ ನಿಂದಿಸುತ್ತಿದ್ದರು ಮತ್ತು ಅವಳ ಕಡೆಗೆ ತಿರಸ್ಕಾರದಿಂದ ನೋಡುತ್ತಿದ್ದರು, ಅವಳು ಯಾವುದೊ ಒಂದು ಅಸಹ್ಯಕರವಾದ ಕೀಟ ಅನ್ನುವ ರೀತಿಯಲ್ಲಿ.

“ಇವೆಲ್ಲವೂ ಮುಂದುವರಿಯಲು ಅವಳ ತಾಯಿ ಅವಕಾಶ ಮಾಡಿಕೊಟ್ಟಿದ್ದಳು ಮತ್ತು ತನ್ನ ತಲೆಯನ್ನ ಅಲ್ಲಾಡಿಸುತ್ತಾ ಎಲ್ಲರನ್ನೂ ಉತ್ತೇಜಿಸುತ್ತಿದ್ದಳು. ಈ ವೃದ್ಧ ಹೆಂಗಸು ಆ ಸಮಯದಲ್ಲಿ ತೀವ್ರವಾದ ರೋಗದಿಂದ ಬಳಲುತ್ತಿದ್ದಳು, ತಾನು ಸಾಯುತ್ತಿದ್ದೇನೆ ಎನ್ನುವುದು ಅವಳಿಗೆ ತಿಳಿದಿತ್ತು. (ಅವಳು ನಿಜವಾಗಲೂ ಎರಡು ತಿಂಗಳ ನಂತರ ಸತ್ತು ಹೋದಳು.) ತನ್ನ ಕೊನೆಗಾಲ ಹತ್ತಿರ ಬರುತ್ತಿದೆ ಎಂದು ತಿಳಿದಿದ್ದರೂ ಕೂಡ ತನ್ನ ಮಗಳನ್ನ ಸಾಯುವ ದಿನದವರೆವಿಗೂ ಕ್ಷಮಿಸಲೇ ಇಲ್ಲ. ಅವಳ ಜೊತೆಯಲ್ಲಿ ಮಾತನ್ನೂ ಆಡುತ್ತಿರಲಿಲ್ಲ. ಅವಳನ್ನು ಶೆಡ್ಡಿನಲ್ಲಿ ಹುಲ್ಲಿನ ಮೇಲೆ ಮಲಗಿಸುತ್ತಿದ್ದಳು, ಅವಳ ಜೀವಕ್ಕೆ ಸಾಕಾಗುವಷ್ಟು ಆಹಾರವನ್ನೂ ಕೊಡುತ್ತಿರಲಿಲ್ಲ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-2)

“ಮೇರಿ ತನ್ನ ತಾಯಿಯ ಜೊತೆಯಲ್ಲಿ ಬಹಳ ಮೃದುವಾಗಿ ನಡೆದುಕೊಳ್ಳುತ್ತಿದ್ದಳು, ಮತ್ತು ಅವಳನ್ನ ಪೋಷಿಸುತ್ತಿದ್ದಳು; ಅವಳನ್ನು ಎಲ್ಲಾ ರೀತಿಯಲ್ಲಿಯೂ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ಆದರೆ, ಮಗಳು ಮಾಡಿದ ಸೇವೆಯನ್ನೆಲ್ಲಾ ಒಂದು ಮಾತನ್ನೂ ಆಡದೆ ಮಾಡಿಸಿಕೊಳ್ಳುತ್ತಿದ್ದ ಆ ಮುದುಕಿ, ಮಗಳ ಬಗ್ಗೆ ಸ್ವಲ್ಪವೂ ಕರುಣೆಯಿಂದ ವರ್ತಿಸುತ್ತಿರಲಿಲ್ಲ. ಮೇರಿ ಇದನ್ನೆಲ್ಲಾ ಸಹಿಸಿಕೊಳ್ಳುತ್ತಿದ್ದಳು ಮತ್ತು ನನಗೆ ಅವಳ ಪರಿಚಯವಾದಾಗ, ಅವಳನ್ನು ತನ್ನ ತಾಯಿ ನಡೆಸಿಕೊಳ್ಳುತ್ತಿರುವ ರೀತಿ ಸರಿಯಾಗಿಯೇ ಇದೆ ಮತ್ತು ತಾನು ಅದಕ್ಕೆ ಅರ್ಹಳು; ಕಾರಣ ಈಗ ಜೀವಿಗಳಲ್ಲೇ ಅತ್ಯಂತ ಕೀಳುಮಟ್ಟದ ಜೀವಿ ತಾನೆಂದು ಹೇಳುತ್ತಿದ್ದಳು.

“ಮುದುಕಿ ಕೊನೆಗೂ ಹಾಸಿಗೆ ಹಿಡಿದು ಮಲಗಿದಾಗ, ಹಳ್ಳಿಯಲ್ಲಿನ ಬೇರೆ ವೃದ್ಧ ಹೆಂಗಸರು ಸರದಿ ಪ್ರಕಾರ ಅವಳ ಪಕ್ಕದಲ್ಲಿ ಕುಳಿತಿರುತ್ತಿದ್ದರು, ಇದು ಅಲ್ಲಿನ ಪದ್ದತಿ; ನಂತರ ಮೇರಿಯನ್ನು ಮನೆಯಿಂದ ಹೊರಗೆ ಓಡಿಸಲಾಯಿತು. ಅವರು ಅವಳಿಗೆ ಸ್ವಲ್ಪವೂ ಆಹಾರವನ್ನು ನೀಡುತ್ತಿರಲಿಲ್ಲ ಮತ್ತು ಹಳ್ಳಿಯಲ್ಲಿ ಯಾವುದೇ ಉದ್ಯೋಗ ಅವಳಿಗೆ ಸಿಗುತ್ತಿರಲಿಲ್ಲ; ಕಾರಣ ಯಾರೂ ಕೂಡ ಅವಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಗಂಡಸರು ಅವಳನ್ನು ಒಬ್ಬಳು ಮಹಿಳೆಯೆಂದೂ ಪರಿಗಣಿಸುತ್ತಿರಲಿಲ್ಲ ಮತ್ತು ಅವಳಿಗೆ ಘೋರವಾಗಿ ಬೈಯ್ಯುತ್ತಿದ್ದರು. ಕೆಲವು ಬಾರಿ ಭಾನುವಾರದಂದು, ಊರಿನ ಜನಗಳೇನಾದರೂ ಸಾಕಷ್ಟು ಕುಡಿದುಬಿಟ್ಟಿದ್ದಾಗ, ಅವಳಿಗೆ ಒಂದೋ ಎರಡೋ ಕಾಸನ್ನು ಮಣ್ಣಿನ ಮೇಲೆ ಬಿಸಾಕುತ್ತಿದ್ದರು, ಮತ್ತು ಮೇರಿ ನಿಶ್ಯಬ್ದವಾಗಿ ಬಗ್ಗಿ ಆ ಕಾಸನ್ನು ತೆಗೆದುಕೊಳ್ಳುತ್ತಿದ್ದಳು.

“ಕೊನೆಗೂ ಅವಳು ಉಟ್ಟಿದ್ದ ಬಟ್ಟೆ ಬರೆ ಹರಿದು ಎಷ್ಟು ಚಿಂದಿಯಾಯಿತೆಂದರೆ ಅವಳು ಈಗ ಹಳ್ಳಿಯಲ್ಲಿ ಯಾರ ಎದುರಿಗೂ ಕಾಣಿಸಿಕೊಳ್ಳಲು ನಾಚುತ್ತಿದ್ದಳು. ಮಕ್ಕಳು ಅವಳ ಮೇಲೆ ಮಣ್ಣನ್ನು ಎಸೆಯುತ್ತಿದ್ದರು; ಅವಳು ತನ್ನನ್ನು ಸಹಾಯಕಿಯಾಗಿ ಸೇರಿಸಿಕೊಳ್ಳುವಂತೆ ದನ ಕಾಯುವವನೊಬ್ಬನನ್ನ ಬೇಡಿಕೊಂಡಳು; ಆದರೆ ದನ ಕಾಯುವವನು ಅವಳ ಬೇಡಿಕೆಯನ್ನು ನಿರಾಕರಿಸಿದ. ನಂತರ ಯಾವುದೇ ಪ್ರತಿಫಲವಿಲ್ಲದೆ ಅವನಿಗೆ ಸಹಾಯ ಮಾಡತೊಡಗಿದಳು; ಅವಳ ಸಹಾಯ ಎಷ್ಟೊಂದು ಮೌಲ್ಯಯುತವಾದದ್ದು ಎಂಬುದನ್ನ ಅವನು ಅರಿತುಕೊಂಡ ಮತ್ತು ಪುನಃ ಅವಳನ್ನು ಓಡಿಸಲಿಲ್ಲ; ತದ್ವಿರುದ್ಧವಾಗಿ ಅವನು ತನ್ನ ಊಟದ ನಂತರ ಒಮ್ಮೊಮ್ಮೆ ಉಳಿದುಪಳಿದಿದ್ದನ್ನು ಅವಳಿಗೆ ತಿನ್ನಲು ಕೊಡುತ್ತಿದ್ದ, ಬ್ರೆಡ್ ಮತ್ತು ಚೀಸನ್ನು. ಅವನು ತಿಳಿದುಕೊಂಡಿದ್ದು ತಾನು ತುಂಬಾ ಕರುಣಾಮಯಿಯೆಂದು. ತಾಯಿ ಕೊನೆಗೂ ಸತ್ತು ಹೋದಾಗ, ಆ ಸಾವಿಗೆ ಇವಳೇ ಕಾರಣಕರ್ತಳು ಅಂತ ಮೇರಿಯನ್ನು ಸಾರ್ವಜನಿಕವಾಗಿ ಅವಮಾನಿಸುವಷ್ಟು ಕೀಳು ಮಟ್ಟಕ್ಕೆ ಇಳಿಯಲೂ ಹಳ್ಳಿಯ ಮುಖ್ಯ ಪಾದ್ರಿ ಹೇಸಲಿಲ್ಲ. ಮೇರಿ ಶವಪೆಟ್ಟಿಗೆಯ ತಲೆಯ ಭಾಗದಲ್ಲಿ, ತನ್ನ ಚಿಂದಿಯಾದ ಬಟ್ಟೆಯಲ್ಲಿಯೇ ನಿಂತು ಅಳುತ್ತಾ ದುಃಖಿಸುತ್ತಿದ್ದಳು.

“ಆ ಸ್ಥಳದಲ್ಲಿ ದೊಡ್ಡ ಗುಂಪೊಂದು ಮೇರಿ ಯಾವ ರೀತಿ ದುಃಖಿಸುತ್ತಾಳೆ ಮತ್ತು ಅಳುತ್ತಾಳೆ ಅನ್ನುವುದನ್ನ ತಮ್ಮ ಮನರಂಜನೆಗೋಸ್ಕರ ವೀಕ್ಷಿಸಲು ಸೇರಿತ್ತು. ಮುಖ್ಯ ಪಾದ್ರಿ, ಒಬ್ಬ ಯುವಕ ಮತ್ತು ಮುಂದೊಂದು ದಿನ ಭವ್ಯ ಬೋಧಕನಾಗುವ ಆಕಾಂಕ್ಷೆಯನ್ನು ಹೊತ್ತವ, ಈಗ ತನ್ನ ಧರ್ಮೊಪದೇಶವನ್ನು ಪ್ರಾರಂಭಿಸಿದ ಮತ್ತು ಮೇರಿಯ ಕಡೆಗೆ ತನ್ನ ಬೆರಳನ್ನ ತೋರಿಸುತ್ತಾ, ’ಅಲ್ಲಿ ಅವನು ಹೇಳಿದ, ಅಲ್ಲಿದ್ದಾಳೆ ’ಈ ಗೌರವಾನ್ವಿತ ಹೆಂಗಸಿನ ಸಾವಿಗೆ ಕಾರಣಕರ್ತಳು’ (ಅದೊಂದು ಸುಳ್ಳಿನ ವಿಷಯವಾಗಿತ್ತು, ಕಾರಣ ಈ ಮುದುಕಿ ಕಳೆದ ಎರಡು ವರ್ಷಗಳಿಂದ ಕಾಯಿಲೆಯಿಂದ ನರಳುತ್ತಿದ್ದಳು.) ’ಅಲ್ಲಿ, ನಿಮ್ಮೆಲ್ಲರ ಮುಂದೆ ನಿಂತಿದ್ದಾಳೆ, ಮತ್ತು ತನ್ನ ನೆಲದ ಕಡೆಗೆ ದೃಷ್ಟಿಸುತ್ತಿರುವ ಕಣ್ಣುಗಳನ್ನು ಮೇಲಕ್ಕೆತ್ತುವ ಧೈರ್ಯ ಮಾಡದೆ ನಿಂತಿದ್ದಾಳೆ ಕಾರಣ ದೇವರ ಬೆರಳುಗಳು ತನ್ನ ಕಡೆಗೆ ತೋರಿಸುತ್ತಿವೆ ಎಂದು ಅವಳಿಗೆ ತಿಳಿದಿದೆ. ಅವಳ ಹರಕು ಚಿಂದಿ ಉಡುಪನ್ನು ನೋಡಿ, ಅದು ಯಾರು ತಮ್ಮ ಸದ್ಗುಣಗಳನ್ನ ಕಳೆದುಕೊಳ್ಳುತ್ತಾರೊ ಅದರ ಚಿಹ್ನೆ. ಇವಳು ಯಾರು? ಅವಳ ಸ್ವಂತ ತಾಯಿ!’ ಹೀಗೆ ಇತ್ಯಾದಿಯಾಗಿ ಸುಳ್ಳುಪಳ್ಳು ಹೇಳಿ ಮುಗಿಸಿದ.

“ಮತ್ತು ನೀವೇ ಕಲ್ಪಿಸಿಕೊಳ್ಳಿ, ಅವಳ ಮೇಲೆ ಹೊರಿಸಿದ ಈ ಅಪಖ್ಯಾತಿಯು ಎಲ್ಲರನ್ನೂ ಸಂತಸಗೊಳಿಸಿತು, ಹತ್ತಿರ ಹತ್ತಿರ ಅಲ್ಲಿದ್ದ ಎಲ್ಲರನ್ನೂ. ಆದರೆ ಮಕ್ಕಳು ಮಾತ್ರ ಹೊರತಾಗಿದ್ದರು. ಕಾರಣ ಆ ವೇಳೆಗೆ ಅವರೆಲ್ಲರೂ ನನ್ನ ಪಕ್ಷದಲ್ಲಿದ್ದರು ಮತ್ತು ಮೇರಿಯನ್ನ ಪ್ರೀತಿಸುವುದನ್ನು ಕಲಿತಿದ್ದರು.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...