Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-7; ಕೊನೆಯ ಭಾಗ)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-7; ಕೊನೆಯ ಭಾಗ)

- Advertisement -
- Advertisement -

“ನಾನು ನನ್ನ ಗಂಟನ್ನ ತೆಗೆದುಕೊಂಡು ಈಗಲೇ ಬರುತ್ತೇನೆ, ನಂತರ ನಾವು ಹೋಗೋಣ,” ಗಾನಿಯ ಇದ್ದ ಕೋಣೆಗೆ ವಾಪಸ್ಸು ಬಂದ ನಂತರ ಪ್ರಿನ್ಸ್ ಅವನಿಗೆ ಹೇಳಿದ. ಗಾನಿಯ ಅಸಹನೆಯಿಂದ ತನ್ನ ಪಾದವನ್ನ ನೆಲಕ್ಕೆ ಅಪ್ಪಳಿಸುತ್ತಿದ್ದ. ಅವನ ಮುಖ ಕ್ರೋಧದಿಂದ ಕಪ್ಪಿಟ್ಟುಕೊಂಡು ಮಂಕಾಗಿತ್ತು.

ಕೊನೆಗೂ ಅವರು ಮನೆಯಿಂದ ಹೊರಟರು, ಅವನು ಮುಂದೆ ಮತ್ತು ಅವನ ಹಿಂದುಗಡೆ ಪ್ರಿನ್ಸ್ ತನ್ನ ಗಂಟನ್ನು ಕೈಲಿಟ್ಟುಕೊಂಡು ನಡೆಯುತ್ತಿದ್ದ.

“ಉತ್ತರ-ಬೇಗ-ಅವಳ ಉತ್ತರ!” ಅವರು ಆಚೆಗೆ ಕಾಲಿಟ್ಟ ತಕ್ಷಣ ಗಾನಿಯಾ ಕೇಳಿದ. “ಅವಳೇನನ್ನು ಹೇಳಿದಳು? ನೀನು ನನ್ನ ಕಾಗದವನ್ನ ಕೊಟ್ಟೆಯಾ?” ಪ್ರಿನ್ಸ್ ಮೌನದಿಂದಲೇ ಅವನ ಕಾಗದವನ್ನ ಅವನ ಮುಂದೆ ಹಿಡಿದ. ಗಾನಿಯ ಹಾಗೇ ಅಳ್ಳಾಡದೇ ಬೆರಗುಗೊಂಡು ಸ್ತಬ್ಧನಾಗಿ ಅಲ್ಲಿಯೇ ನಿಂತುಕೊಂಡ.

“ಅದು ಹೇಗೆ, ಏನು? ನನ್ನದೇ ಕಾಗದ?” ಅವನು ಕಿರುಚಿಕೊಂಡ. “ಅವನು ಅವಳಿಗೆ ಕೊಟ್ಟೇ ಇಲ್ಲ. ನಾನದನ್ನ ಊಹಿಸಬೇಕಾಗಿತ್ತು, ಓ! ಅವನು ಹಾಳಾಗಿ ಹೋಗಲಿ! ಅದಕ್ಕೇ ನಾನು ಹೇಳಿದ್ದನ್ನ ಅವಳು ಅರ್ಥಮಾಡಿಕೊಳ್ಳಲೇ ಇಲ್ಲ! ಯಾಕೆ-ಯಾಕೆ-ನೀನು ಆ ಸಂದೇಶವನ್ನ ಅವಳಿಗೆ ಕೊಡಲಿಲ್ಲ?”

“ದಯವಿಟ್ಟು ಕ್ಷಮಿಸು; ನೀನು ನನಗೆ ಈ ಕೆಲಸವನ್ನ ವಹಿಸಿದ ತಕ್ಷಣ ಅವಳಿಗೆ ಅದನ್ನ ರವಾನಿಸಿದೆ, ನೀನು ನನಗೆ ಕೇಳಿಕೊಂಡಂತೆಯೇ ಅವಳಿಗೆ ಕೊಟ್ಟೆ. ಅದು ನನ್ನ ಕೈಗೆ ಈಗ ವಾಪಸ್ಸು ಬಂದಿದ್ದು, ಅಗ್ಲಾಯ ಇವನೊವ್ನಳೇ ನನಗೆ ವಾಪಸ್ಸು ಕೊಟ್ಟಿದ್ದರಿಂದ.”

“ಅದು ಹೇಗೆ? ಯಾವಾಗ?”

“ನಾನು ಅವಳ ಆಲ್ಬಮ್ಮಿನಲ್ಲಿ ಬರೆದುಕೊಟ್ಟ ತಕ್ಷಣ; ಅವಳು ನನ್ನನ್ನು ತನ್ನ ಜೊತೆ ಹೊರಗೆ ಬಾ ಎಂದು ಕರೆದಾಗ (ನೀನೂ ಕೇಳಿಸಿಕೊಂಡೆಯಲ್ಲಾ?), ನಾವು ಡೈನಿಂಗ್ ರೂಮಿನೊಳಗಡೆಗೆ ಹೋದೆವು, ಅವಳು ನಿನ್ನ ಕಾಗದವನ್ನ ನನಗೆ ಓದಲು ಕೊಟ್ಟಳು, ನಂತರ ಹಿಂತಿರುಗಿಸಿದಳು.”

“ಓದುವುದಕ್ಕಾ?” ಗಾನಿಯ ಕೂಗಿದ, ಬಹುತೇಕ ಏರ ಧ್ವನಿಯಲ್ಲಿ, “ಓದುವುದಕ್ಕೆ ಕೊಟ್ಟಳು, ನೀನು ಓದಿದೆಯಾ?”

ಮತ್ತು ಪುನಃ ಅವನು ಪಾದಚಾರಿ ರಸ್ತೆಯ ಮಧ್ಯದಲ್ಲಿ ಬಂಡೆಯಂತೆ ನಿಂತುಕೊಂಡ. ಎಷ್ಟು ಸ್ತಬ್ಧನಾಗಿದ್ದ ಅಂದರೆ ಅವನ ಬಾಯಿಂದ ಕೊನೆಯ ಪದ ಹೊರಟ ಮೇಲೆ ತನ್ನ ಬಾಯನ್ನು ತೆರೆದೇ ಇದ್ದ.

“ಹೌದು, ನಾನು ಈಗತಾನೆ ಓದಿದೆ.”

“ಮತ್ತು ಅವಳೇ ನಿನಗೆ ಓದಲು ಕೊಟ್ಟಳೆ?”

“ಹೌದು ಅವಳೇ ಕೊಟ್ಟಿದ್ದು; ಅವಳ ಅನುಮತಿಯಿಲ್ಲದೇ ನಾನದನ್ನು ಯಾವುದೇ ಕಾರಣಕ್ಕೂ ಓದುತ್ತಿರಲಿಲ್ಲ; ನನ್ನ ಮಾತನ್ನು ನೀನು ನಂಬಬೇಕು.”

ಗಾನಿಯ ಒಂದೆರಡು ನಿಮಿಷ ಮೌನದಿಂದಿದ್ದ, ಯಾವುದೋ ಒಂದು ಸಮಸ್ಯೆಯ ಬಗ್ಗೆ ಆಲೋಚಿಸುವವನಂತೆ. ಇದ್ದಕ್ಕಿದ್ದಂತೆ ಅವನು ಕೂಗಿದ:

“ಅದು ಸಾಧ್ಯವೇ ಇಲ್ಲ, ಅವಳು ನಿನಗೆ ಓದಲು ಕೊಟ್ಟಿರುವುದಕ್ಕಂತೂ ಸಾಧ್ಯವೇ ಇಲ್ಲ! ನೀನು ಸುಳ್ಳು ಹೇಳುತ್ತಿದ್ದೀಯ. ನೀನೇ ಖುದ್ದಾಗಿ ಓದಿದ್ದೀಯ!”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-3)

“ನಾನು ನಿನಗೆ ಸತ್ಯವನ್ನ ಹೇಳುತ್ತಿದ್ದೇನೆ,” ಪ್ರಿನ್ಸ್ ತನ್ನ ಹಿಂದಿನ ನಿರ್ಭಾವುಕ ಧ್ವನಿಯಲ್ಲಿಯೇ ಹೇಳಿದ; “ನನ್ನನ್ನು ನಂಬು, ಈ ರೀತಿಯ ಪರಿಸ್ಥಿತಿ ನಿನ್ನನ್ನು ಇಷ್ಟೊಂದು ಅಸಂತೋಷಗೊಳಿಸಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ!”

“ಆದರೆ, ಏ ನೀನು, ಕ್ಷುದ್ರ ಮನುಷ್ಯನೇ, ಕಡೇ ಪಕ್ಷ ಅವಳು ಏನನ್ನಾದರೂ ಹೇಳಿದ್ದಿರಬಹುದು? ಅವಳಿಂದ ಯಾವುದೋ ಒಂದು ರೀತಿಯ ಉತ್ತರ ಬಂದಿದ್ದಿರಬಹುದು!”

“ಹೌದು, ಅವಳು ಇನ್ನೂ ಏನನ್ನೋ ಹೇಳಿದಳು ಕೂಡ!”

“ತಕ್ಷಣ ಅದನ್ನ ನಿನ್ನ ಬಾಯಿಂದ ಹೊರಹಾಕು, ಈಗಲೇ ಬೊಗಳು!” ಎಂದು ಗಾನಿಯ ತನ್ನ ಕಾಲುಗಳನ್ನು ನೆಲದ ಮೇಲೆ ಎರಡು ಬಾರಿ ಅಪ್ಪಳಿಸಿದ.

“ನಾನು ಅದನ್ನು ಓದುವುದನ್ನ ಮುಗಿಸಿದ ತಕ್ಷಣ, ನೀನು ಅವಳಿಗೆ ಗಾಳ ಹಾಕುತ್ತಿದ್ದೀಯ ಎಂದು ಅವಳು ನನಗೆ ಹೇಳಿದಳು; ಅವಳೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಅವಳಿಂದ ಹೇಗಾದರೂ ಭರವಸೆ ಪಡೆದುಕೊಳ್ಳುವುದಕ್ಕೆ ನೀನು ಕಾಯುತ್ತಿದ್ದೀಯ ಮತ್ತು ಈ ಭರವಸೆಯ ಮೇಲೆ ಅವಲಂಬಿತನಾಗಿ ಒಂದು ಲಕ್ಷ ರೂಬಲ್ಲು ಬರುವುದನ್ನು ತ್ಯಾಗ ಮಾಡುವ ಧೈರ್ಯ ಮಾಡಬಹುದೆಂದು ಕೂಡ ಮತ್ತು ಇದೇ ತ್ಯಾಗವನ್ನ ಅವಳ ಭರವಸೆಗಾಗಿ ಕಾಯದೇ ನೀನು ಮಾಡಿದ್ದಿದ್ದರೆ ಅವಳು ಬಹುಶಃ ನಿನ್ನ ಸ್ನೇಹಿತೆಯಾಗೇ ಇರುತ್ತಿದ್ದಳು ಎಂದು ಹೇಳಿದಳು. ನನ್ನ ಪ್ರಕಾರ ಅಷ್ಟೇ ವಿಷಯ. ಓ, ನಾನೇನು ಹೇಳಲಿ ಎಂದು ಅವಳನ್ನು ಕೇಳಿದಾಗ ಅವಳು ಹೇಳಿದ್ದು, ’ಯಾವುದೇ ಉತ್ತರವೂ ಕೂಡ ಅತ್ಯುತ್ತಮ ಉತ್ತರವಾಗುವುದಿಲ್ಲ’ ಎಂದು. ಅವಳ ಪ್ರತಿಕ್ರಿಯೆಯನ್ನ ಯಥಾವತ್ತಾಗಿ ನನಗೆ ಹೇಳಲಾಗದೇ ಇದ್ದುದರ ಬಗ್ಗೆ ನನ್ನನ್ನು ಕ್ಷಮಿಸು. ನಾನು ಅವಳ ಪ್ರತಿಕ್ರಿಯೆಯ ಭಾವಾರ್ಥವನ್ನ ಮಾತ್ರ ನನಗೆ ಅರ್ಥವಾದ ರೀತಿಯಲ್ಲಿ ಹೇಳಿದ್ದೇನೆ.”

ತಡೆಹಿಡಿಯಲಾಗದಂತಹ ಕ್ರೋಧ ಮತ್ತು ಹುಚ್ಚುತನ ಗಾನಿಯನನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿತು ಮತ್ತು ಅವನಲ್ಲಿ ಇತಿ ಮಿತಿಯಿಲ್ಲದಷ್ಟು ಕೋಪ ಒಡನೆಯೇ ಕಟ್ಟೆಯೊಡೆಯಿತು.

“ಓ! ಅದೇ, ಅದೇನ!” ಅವನು ಕೂಗಾಡತೊಡಗಿದ. “ಅವಳು ನನ್ನ ಕಾಗದಗಳನ್ನ ಕಿಟಕಿಯಿಂದ ಆಚೆಗೆ ಎಸೆಯುತ್ತಾಳೆ, ಹೌದಲ್ಲವಾ! ಮತ್ತು ಅವಳು ಚೌಕಾಸಿ ಮಾಡುವ ಮಟ್ಟಕ್ಕೆ ಇಳಿಯುವುದಿಲ್ಲ, ಆದರೆ ನಾನು ಇಳಿಯುತ್ತೇನೆ, ಹೌದಾ? ನೋಡೇಬಿಡೋಣ! ಇದಕ್ಕೆ ಅವಳು ಬೆಲೆತೆರುವ ಹಾಗೆ ಮಾಡುತ್ತೇನೆ.”

ಅವನು ಕ್ರೋಧದಿಂದ ತನ್ನ ಮೈಯ್ಯನ್ನೆಲ್ಲಾ ತಿರುಚುತ್ತಿದ್ದ, ಹೆಚ್ಚುಹೆಚ್ಚು ಬಿಳಿಚಿಕೊಳ್ಳಲು ಶುರುಮಾಡಿದ; ಅವನು ತನ್ನ ಮುಷ್ಟಿಯನ್ನ ಬಿಗಿಮಾಡಿದ. ನಂತರ ಈ ಜೋಡಿ ಕೆಲವು ಹೆಜ್ಜೆಗಳನ್ನ ಮುಂದಕ್ಕೆ ಹಾಕಿತು. ಗಾನಿಯ ಪ್ರಿನ್ಸ್ ಬಗ್ಗೆ ಯಾವುದೇ ರೀತಿಯ ಮರ್ಯಾದೆಯನ್ನೂ ತೋರಿಸಲಿಲ್ಲ; ಅವನೊಬ್ಬನೇ ರೂಮಿನಲ್ಲಿ ಇದ್ದಾನೇನೋ ಎಂಬಂತೆ ನಡೆದುಕೊಂಡ. ಅವನು ಸ್ಪಷ್ಟವಾಗಿ ಪ್ರಿನ್ಸ್‌ನನ್ನು ಒಬ್ಬ ಲೆಕ್ಕಕ್ಕೆ ಬಾರದವನು ಅನ್ನುವ ರೀತಿ ಪರಿಗಣಿಸಿದ. ಆದರೆ ಇದ್ದಕ್ಕಿದ್ದಂತೆ ಅವನಿಗೇನೋ ಹೊಳೆದಂತಾಯಿತು ಮತ್ತು ಪುನಃ ಸಾಮಾನ್ಯ ಸ್ಥಿತಿಗೆ ಮರಳಿದ.

“ಆದರೆ ಅದು ಹೇಗೆ?” ಅವನು ಕೇಳಿದ, “ಅದು ಹೇಗೆ (ನಿನ್ನಂತಹ ಒಬ್ಬ ಮೂರ್ಖ),” ಇದನ್ನ ತನ್ನಲ್ಲಿಯೇ ಹೇಳಿಕೊಂಡ, “ನಿನ್ನ ಮೊದಲ ಭೇಟಿಯ ಎರಡು ಗಂಟೆಗಳ ಅವಧಿಯಲ್ಲಿಯೇ ನೀನು ಅವರಿಗೆ ಅಷ್ಟೊಂದು ವಿಶ್ವಾಸಾರ್ಹನಾದೆ? ಅದು ಹೇಗೆ? ಹೇಳು.”

ಇಲ್ಲಿಯವರೆಗೂ ಈರ್ಷ್ಯೆ ಮಾತ್ರ ಅವನಲ್ಲಿನ ಉಂಟಾಗುತ್ತಿದ್ದ ಹಿಂಸೆಗಳಿಗೆ ಕಾರಣವಾಗಿರಲಿಲ್ಲ; ಆದರೆ ಈಗ ಅದು ಅವನ ಹೃದಯವನ್ನ ಬಗೆಯಲು ಶುರುಮಾಡಿತು.

“ಅದರ ಬಗ್ಗೆ ಮಾತ್ರ ನನಗೆ ವಿವರಿಸಲು ಸಾಧ್ಯವಿಲ್ಲ,” ಪ್ರಿನ್ಸ್ ಉತ್ತರಿಸಿದ. ಗಾನಿಯ ಅವನ ಕಡೆಗೆ ಕೋಪೋದ್ರಿಕ್ತನಾಗಿ ತಿರಸ್ಕಾರದಿಂದ ನೋಡಿದ.

“ಓ! ಅವಳು ನಿನ್ನನ್ನು ಡೈನಿಂಗ್ ರೂಮಿನ ಒಳಗಡೆಗೆ ಕರೆದುಕೊಂಡು ಹೋದಾಗ ಕೊಡಬೇಕೆಂದುಕೊಂಡಿದ್ದ ಉಡುಗೊರೆಯೆಂದರೆ ಅದು ನಿನ್ನ ಬಗ್ಗೆ ಅವಳಲ್ಲಿ ಮೂಡಿದ ವಿಶ್ವಾಸವೇ ಇರಬೇಕು ಅಂದುಕೊಳ್ಳುತ್ತೇನೆ, ಹೌದಲ್ಲವೇ?”

“ಹೌದು, ನಾನೂ ತಿಳಿದಿದ್ದು ಅದನ್ನೇ; ನನಗದನ್ನು ಬೇರೇ ರೀತಿಯಲ್ಲಿ ವಿವರಿಸಲು ಸಾಧ್ಯವಿಲ್ಲ.”

“ಆದರೆ ಏಕೆ? ನೀನಲ್ಲಿ ಏನನ್ನು ಮಾಡಿದೆ? ಅವರು ಯಾಕೆ ನಿನ್ನನ್ನು ಅಷ್ಟೊಂದು ಇಷ್ಟ ಪಟ್ಟರು? ಇಲ್ಲಿ ನೋಡು, ಅವರಿಗೆ ನೀನು ಏನನ್ನು ಹೇಳಿದೆಯೆನ್ನುವುದು ಯಥಾವತ್ತಾಗಿ ನಿನ್ನ ನೆನಪಿನಲ್ಲಿದೆಯೇ?”

“ಓ, ನಾವು ಅನೇಕ ವಿಷಯಗಳ ಬಗ್ಗೆ ಮಾತನಾಡಿದೆವು. ನಾನು ಮೊದಲು ಒಳಗೆ ಹೋದಾಗ ಮಾತನಾಡಿದ್ದು ಸ್ವಿಟ್ಜರ್‌ಲ್ಯಾಂಡಿನ ಬಗ್ಗೆ.”

“ಓ ಸ್ವಿಟ್ಜರ್‌ಲ್ಯಾಂಡ್‌ನ ವಿಷಯ ಹಾಳಾಗಿ ಹೋಗಲಿ!”

“ನಂತರ ಮರಣದಂಡನೆಯ ಬಗ್ಗೆ.”

“ಮರಣದಂಡನೆ?”

“ಹೌದು… ಅದೂ ಒಂದೇ ಒಂದು ಮರಣದಂಡನೆಯ ಬಗ್ಗೆ ಮಾತ್ರ, ನಂತರ ನನ್ನ ಜೀವನದ ಮೂರು ವರ್ಷಗಳ ವೃತ್ತಾಂತಗಳನ್ನೆಲ್ಲಾ ಹೇಳಿದೆ ಮತ್ತು ಒಬ್ಬಳು ಬಡ ರೈತ ಹುಡುಗಿಯ ಚರಿತ್ರೆಯ ಬಗ್ಗೆ…”

“ಓ ಆ ರೈತ ಹುಡುಗಿಯ ಬಗ್ಗೆ ಬಿಟ್ಟಾಕು! ಮುಂದುವರಿಸು, ಮುಂದುವರಿಸು!” ಗಾನಿಯ ತಾಳ್ಮೆಕಳೆದುಕೊಂಡು ಕೇಳುತ್ತಲೇ ಇದ್ದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-1)

“ನಂತರ ಹೇಗೆ ಸ್ಕ್ನೀಡರ್ ನನ್ನಲ್ಲಿರುವ ಬಾಲಿಶ ಸ್ವಭಾವದ ಬಗ್ಗೆ ಹೇಳಿದ, ಮತ್ತು…”

“ಓ ಆ ಸ್ಕ್ನೀಡರ್ ಮತ್ತು ಅವನ ಕೆಟ್ಟ ಅಭಿಪ್ರಾಯದ ವಿಷಯಗಳು ನನಗೆ ಬೇಕಾಗಿಲ್ಲ! ಮುಂದಕ್ಕೆ ಹೇಳು.”

“ನಂತರ ನಾನು ಮುಖಗಳ ಬಗ್ಗೆ ಮಾತನಾಡಲು ಶುರುಮಾಡಿದೆ, ಕಡೇ ಪಕ್ಷ ಮುಖಗಳಲ್ಲಿನ ಭಾವಗಳ ಬಗ್ಗೆ, ಮತ್ತು ಅಗ್ಲಾಯ ಇವನೊವ್ನಳು ನಸ್ಟಾಸಿಯ ಫಿಲಿಪೊವ್ನಳಷ್ಟೇ ಸುಂದರವಾಗಿದ್ದಾಳೆ ಎಂದು ಹೇಳಿದೆ. ಆಗಲೇ ನಾನು ಭಾವಚಿತ್ರದ ಬಗ್ಗೆ ಬಡಬಡಾಯಿಸಿದ್ದು.”

“ಆದರೆ ನೀನು ಓದುವ ಕೋಣೆಯಲ್ಲಿ ಏನನ್ನು ಕೇಳಿಸಿಕೊಂಡೆ ಅನ್ನುವುದನ್ನ ಪುನರಚ್ಚರಿಸಲಿಲ್ಲವೇ? ಅದನ್ನೆಲ್ಲಾ ಹೇಳಲಿಲ್ಲವೇ?”

“ಇಲ್ಲ ಖಂಡಿತ ಇಲ್ಲ, ನನ್ನ ಮಾತು ತಿಳಿದುಕೋ.”

“ಅಂದರೆ ಅದು ಹೇಗೆ?…. ಇಲ್ಲಿ ನೋಡು! ಅಗ್ಲಾಯ ನನ್ನ ಕಾಗದವನ್ನು ಅವಳ ತಾಯಿಗೆ ತೋರಿಸಲಿಲ್ಲ ತಾನೆ?”

“ಅದರ ಬಗ್ಗೆ ನಿನಗೆ ಸಂಪೂರ್ಣವಾದ ಭರವಸೆಯನ್ನ ಕೊಡುತ್ತೇನೆ, ತೋರಿಸಲಿಲ್ಲ ಎಂದು. ಇಡೀ ಸಮಯ ನಾನು ಅಲ್ಲಿಯೇ ಇದ್ದೆ, ಅವಳಿಗೆ ಅದನ್ನ ತೋರಿಸುವ ಅವಕಾಶವೇ ಸಿಗಲಿಲ್ಲ!”

“ಆದರೆ ನೀನದನ್ನು ಗಮನಿಸದೇ ಇದ್ದಿರಬಹುದು, ಓ ಶತಮೂರ್ಖನೇ!” ತನ್ನ ಬಗ್ಗೆಯೇ ತಾನು ಕೋಪಗೊಂಡು ಅವನು ಕಿರುಚಿದ. “ಅಲ್ಲಿ ಏನು ನಡೆಯಿತು ಅನ್ನುವುದನ್ನೂ ಕೂಡ ನಿನಗೆ ವಿವರಿಸಲಾಗುತ್ತಿಲ್ಲ.”

ಗಾನಿಯ ಒಮ್ಮೆ ನಿಂದಿಸುವ ಮಟ್ಟಕ್ಕೆ ಕೆಳಗಿಳಿದ ನಂತರ, ಯಾವುದೇ ಹಿಡಿತವಿಲ್ಲದೇ ನಿಂದಿಸಲು ಶುರುಮಾಡಿದ ಮತ್ತು ಅವನಿಗೆ ಯಾವುದೇ ಇತಿಮಿತಿಯಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಮಾಮೂಲಿಯಾಗಿ ನಡೆಯುವಂತೆಯೇ, ಅವನ ಆಕ್ರೋಶ ಅವನನ್ನು ಕುರುಡಾಗಿಸಿತು, ಮತ್ತು ಅವನಿಗೆ ಗೋಚರಿಸದೇ ಇದ್ದದ್ದು “ಈ ಶತಮೂರ್ಖ” ಎಂದು ಬೈದು ಯಾರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡನೋ, ಅವನೊಬ್ಬ ವಿಷಯಗಳನ್ನ ಅರ್ಥಮಾಡಿಕೊಳ್ಳುವುದರಲ್ಲಿ ಶೀಘ್ರ ಮತಿಯುಳ್ಳವನು ಮತ್ತು ಸೂಕ್ಷ್ಮತೆಯಿಂದ ಇರುವವನು ಮತ್ತು ಅದರ ಸಂಪೂರ್ಣವಾದ ತೃಪ್ತಿದಾಯಕವಾದ ವಿವರಣೆಯನ್ನ ಕೊಡಬಲ್ಲವನು ಎನ್ನುವುದು. ಆದರೆ ಈಗ ಏನೋ ಅನಿರೀಕ್ಷಿತವಾದದ್ದು ನಡೆದುಹೋಯಿತು.

“ನಾನಿದನ್ನು ನಿನಗೆ ಹೇಳಲೇಬೇಕೆಂದು ಯೋಚಿಸುತ್ತಿದ್ದೇನೆ ಗವ್ರಿಲ ಅರ್ಡಲಿಯೊನೊವಿಚ್,” ಪ್ರಿನ್ಸ್ ಇದ್ದಕ್ಕಿದ್ದಂತೆ ಹೇಳಿದ, “ನಾನು ಒಮ್ಮೆ ಬಹಳ ಕಾಯಿಲೆಯಿಂದ ನರಳುತ್ತಿದ್ದೆ ಮತ್ತು ನಾನೊಬ್ಬ ಮೂರ್ಖನಿಗಿಂತ ಸ್ವಲ್ಪವೇ ಸ್ವಲ್ಪ ಉತ್ತಮನಾಗಿದ್ದೆ, ಆದರೂ ಈಗ ನಾನು ಬಹಳಷ್ಟು ಚೇತರಿಸಿಕೊಂಡಿದ್ದೇನೆ, ಆದ್ದರಿಂದ ನನ್ನ ಮುಖಕ್ಕೆ ಹೊಡೆದ ಹಾಗೆ ಮೂರ್ಖ ಎಂದು ನನ್ನ ಕರೆಯುವುದು ನನಗೆ ಹಿತಕರ ಎನಿಸುವುದಿಲ್ಲ. ಖಂಡಿತವಾಗಿಯೂ ನಿನ್ನ ಕೋಪವು ಕ್ಷಮಾರ್ಹವಾಗಿರಬಹುದು, ಈಗ ತಾನೆ ನೀನು ಅನುಭವಿಸಿದ್ದನ್ನು ನೋಡಿದ ಮೇಲೆ; ಆದರೆ, ನೀನಾಗಲೇ ನನ್ನನ್ನು ಎರಡು ಬಾರಿ ಅಸಭ್ಯತೆಯಿಂದ ನಿಂದಿಸಿದ್ದೀಯ ಎಂದು ನಿನಗೆ ನೆನಪಿಸಲೇಬೇಕಿದೆ, ನಾನು ಈ ರೀತಿಯ ನಡವಳಿಕೆಯನ್ನ ಇಷ್ಟ ಪಡುವುದಿಲ್ಲ, ಅದರಲ್ಲೂ ಒಬ್ಬ ಮನುಷ್ಯನನ್ನು ಮೊದಲ ಭೇಟಿಯಲ್ಲಿ. ಈಗ ನಾವು ಒಂದು ಅಡ್ಡ ರಸ್ತೆಯಲ್ಲಿ ನಿಂತಿರುವಂತಹ ಸಂದರ್ಭ ಒದಗಿಬಂದಿರುವ ಕಾರಣ, ನಾವು ಈಗ ಬೇರೆಯಾಗುವುದೇ ಒಳ್ಳೆಯದೆಂದು ನೀನು ಯೊಚಿಸುವುದಿಲ್ಲವೇ, ನೀನು ಎಡಗಡೆಗೆ, ಎಲ್ಲಿ ನಿನ್ನ ಮನೆ ಇರುವುದೋ ಆ ಕಡೆಗೆ, ನಾನು ಬಲಗಡೆಗೆ ಅಂದರೆ ಇಲ್ಲೇ? ನನ್ನ ಬಳಿ ಇಪ್ಪತ್ತೈದು ರೂಬಲ್ಲುಗಳಿವೆ, ನಾನು ಸುಲಭವಾಗಿ ಒಂದು ವಸತಿಗೃಹವನ್ನ ಹುಡುಕಿಕೊಳ್ಳುತ್ತೀನಿ.”

ಗಾನಿಯಾ ಈಗ ಅತ್ಯಂತ ಗೊಂದಲಕ್ಕೀಡಾದ ಮತ್ತು ಮರ್ಯಾದೆಯನ್ನ ಕಳೆದುಕೊಂಡಿದ್ದರಿಂದ ನಾಚಿಕೆಯಿಂದ ಕೆಂಪಗಾದ, “ನನ್ನನ್ನು ಖಂಡಿತ ಕ್ಷಮಿಸು ಪ್ರಿನ್ಸ್,” ಅವನು ಕೇಳಿಕೊಂಡ, ಇದ್ದಕ್ಕಿದ್ದಂತೆ ತನ್ನ ನಿಂದನೆಯ ಧ್ವನಿಯನ್ನ ಬದಲಾಯಿಸಿ ಅತ್ಯಂತ ವಿನಯಪೂರ್ವಕವಾಗಿ, “ಎಲ್ಲವನ್ನೂ ಮರೆತು ನನ್ನನ್ನು ಕ್ಷಮಿಸು! ನೀನೆ ನೋಡು ನಾನೆಂತಹ ಹೀನಾಯ ಪರಿಸ್ಥಿತಿಯಲ್ಲಿ ಇದ್ದೀನೆಂದು, ಆದರೆ ಈ ವಿಷಯದ ಬಗ್ಗೆಗಿನ ನಿಜವಾದ ಅಂಶಗಳೇನು ಅನ್ನುವುದು ನಿನಗಿನ್ನೂ ತಿಳಿದಿಲ್ಲ. ನಿನಗದು ತಿಳಿದರೆ ಬಹುಶಃ ನನ್ನನ್ನು ಕ್ಷಮಿಸುತ್ತೀಯ ಅನ್ನುವ ಭರವಸೆ ನನಗಿದೆ, ಸದ್ಯಕ್ಕೆ ಅದರಲ್ಲಿನ ಅರ್ಧದಷ್ಟು ತಿಳಿದರೂ ಕೂಡ. ಖಂಡಿತವಾಗಿ ನನ್ನದು ಮನ್ನಿಸಲಾಗದಂತಹ ನಡವಳಿಕೆ, ಅದು ನನಗೆ ತಿಳಿದಿದೆ, ಆದರೆ…..”

“ಓ, ನನ್ನ ಪ್ರೀತಿಪಾತ್ರನೇ, ನನಗೆ ಇಷ್ಟೊಂದು ಕ್ಷಮೆ ಯಾಚನೆಯ ಅಗತ್ಯವಿಲ್ಲ,” ಪ್ರಿನ್ಸ್ ತರಾತುರಿಯಿಂದ ಉತ್ತರಿಸಿದ, “ನನಗೂ ನಿನ್ನ ಪರಿಸ್ಥಿತಿ ಎಷ್ಟು ಅಹಿತಕರವಾಗಿದೆ ಅನ್ನುವುದರ ಬಗ್ಗೆ ಸಾಕಷ್ಟು ಅರ್ಥವಾಗುತ್ತದೆ ಮತ್ತು ಆ ಒತ್ತಡದಲ್ಲೇ ನೀನು ನನ್ನನ್ನು ನಿಂದಿಸಿದ್ದು ಅನ್ನುವುದೂ ನನಗೆ ಗೊತ್ತು, ಆದ್ದರಿಂದ ಬಾ ನಿನ್ನ ಮನೆಗೆ ಜೊತೆಯಲ್ಲಿಯೇ ಹೋಗೋಣ, ನನಗೆ ಅದರಿಂದ ಬಹಳ ಸಂತೋಷವಾಗುತ್ತದೆ ಕೂಡ.”

“ನಾನವನನ್ನು ಸುಮ್ಮನೆ ಹೊರಟುಹೋಗಲು ಬಿಡುವುದಿಲ್ಲ,” ಎಂದು ಅವರಿಬ್ಬರೂ ನಡೆದು ಹೋಗುತ್ತಿದ್ದಾಗ ಗಾನಿಯ ಕೋಪದಿಂದ ಪ್ರಿನ್ಸ್‌ನನ್ನು ದುರುಗುಟ್ಟಿಕೊಂಡು ನೋಡುತ್ತಾ ಮನಸ್ಸಿನಲ್ಲಿಯೇ ಅಂದುಕೊಂಡ. “ಈ ವ್ಯಕ್ತಿ ನನ್ನ ಎಲ್ಲ ಅವಕಾಶಗಳನ್ನೂ ಹಾಳುಮಾಡಿಬಿಟ್ಟ, ಈಗ ತನ್ನ ಮುಖವಾಡವನ್ನ ಕಳಚುತ್ತಿದ್ದಾನೆ, ಅವನು ಕಾಣುವುದಕ್ಕಿಂತ ಇನ್ನೂ ಹೆಚ್ಚಿನದು ಅವನಲ್ಲಿ ಏನೋ ಇದೆ. ಈಗ ಸುಮ್ಮನೆ ಇದ್ದು ನೋಡುತ್ತೇನೆ. ಇವತ್ತಿನ ರಾತ್ರಿಯ ಹೊತ್ತಿಗೆ ಎಲ್ಲವೂ ನೀರಿನಷ್ಟೇ ಸ್ಪಷ್ಟವಾಗುತ್ತದೆ!”

ಆದರೆ ಈ ಸಮಯದ ಹೊತ್ತಿಗೆ ಅವರಿಬ್ಬರೂ ಗಾನಿಯ ಮನೆಯನ್ನ ತಲುಪಿದ್ದರು.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...