Homeಮುಖಪುಟಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ವಿಡಿಯೋ, ಫೋಟೊ, ವಾಟ್ಸ್​ಆ್ಯಪ್ ಚಾಟ್ ಒದಗಿಸುವಂತೆ ಕುಸ್ತಿಪಟುಗಳಿಗೆ ಸಾಕ್ಷ್ಯ ಕೇಳಿದ ಪೊಲೀಸರು

ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ವಿಡಿಯೋ, ಫೋಟೊ, ವಾಟ್ಸ್​ಆ್ಯಪ್ ಚಾಟ್ ಒದಗಿಸುವಂತೆ ಕುಸ್ತಿಪಟುಗಳಿಗೆ ಸಾಕ್ಷ್ಯ ಕೇಳಿದ ಪೊಲೀಸರು

- Advertisement -
- Advertisement -

ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದ ವಿಡಿಯೋ, ಫೋಟೊಗಳು, ವಾಟ್ಸ್​ಆ್ಯಪ್ ಚಾಟ್​ಗಳನ್ನು ಒದಗಿಸುವಂತೆ ಪೊಲೀಸರು ಕೇಳಿದ್ದಾರೆ.

ಪ್ರತಿಭಟನಾಕಾರರು ಪೊಲೀಸ್​ ತನಿಖೆಯನ್ನು ನಂಬುವುದಿಲ್ಲ, ಬಿಜೆಪಿ ಸಂಸದರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದ್ದು, ಅವರು ಇನ್ನೂ ಜೈಲಿಗೆ ಹೋಗದೆ ಹೊರಗಿರುವುದು ತನಿಖೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದರು.

ತಮ್ಮ ಉಸಿರಾಟವನ್ನು ಪರೀಕ್ಷಿಸುವ ನೆಪದಲ್ಲಿ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಅವರು ತಮ್ಮ ಕೈಯನ್ನು ಹಿಡಿದು ಹೊಟ್ಟೆ ಭಾಗವನ್ನು ಮುಟ್ಟುತ್ತಿದ್ದರು ಎಂದು ಉನ್ನತ ಮಹಿಳಾ ಕುಸ್ತಿಪಟುಗಳು ಆರೋಪಿಸಿದ್ದಾರೆ. ಇದೀಗ ಕುಸ್ತಿಪಟುಗಳಿಗೆ ಸಾಕ್ಷಿಯಾಗಿ ಆಡಿಯೋ, ವಿಡಿಯೋ ಅಥವಾ ಫೋಟೋಗಳನ್ನು ಹಂಚಿಕೊಳ್ಳಲು ದೆಹಲಿ ಪೊಲೀಸರು ಕೇಳಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ನಾವು ಪ್ರಕರಣವನ್ನು ಮುನ್ನಡೆಸಲು ಸಿದ್ಧರಿದ್ದೇವೆ ಆದರೆ ನಿಮ್ಮ ಆರೋಪವನ್ನು ಪುಷ್ಠಿಗೊಳಿಸಲು ಬೇಕಾದ ಸಾಕ್ಷ್ಯಗಳನ್ನು ಒದಗಿಸಿ, ನಿಮ್ಮ ಬಳಿ ಫೋಟೊ, ವಾಟ್ಸಾಪ್​ ಚಾಟ್ ಅಥವಾ ಇನ್ಯಾವುದೇ ವಿಡಿಯೋಗಳು ಇದ್ದರೂ ಅದನ್ನು ನಮಗೆ ನೀಡಿ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬಂಧನವಿಲ್ಲದೆ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದಿಲ್ಲ ಎಂದು ಕುಸ್ತಿಪಟುಗಳು ಹೇಳಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಈ ಹಿಂದೆ ಲೈಂಗಿಕ ದುರ್ವರ್ತನೆಯ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು.

ನನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ, ನಿಮ್ಮ ಬಳಿ (ಕುಸ್ತಿಪಟುಗಳು) ಏನಾದರೂ ಸಾಕ್ಷ್ಯಾಧಾರಗಳಿದ್ದರೆ ಅದನ್ನು ಕೋರ್ಟ್‌ಗೆ ಹಾಜರುಪಡಿಸಿ ಮತ್ತು ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಜೂ.15ರೊಳಗೆ ನ್ಯಾಯ ಸಿಗದಿದ್ದರೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸುತ್ತೇವೆ: ಸರ್ಕಾರಕ್ಕೆ ಕುಸ್ತಿಪಟುಗಳ ಎಚ್ಚರಿಕೆ

ಎಫ್‌ಐಆರ್‌ಗಳ ಪ್ರಕಾರ, 2016 ಮತ್ತು 2019 ರ ನಡುವೆ 21 ಅಶೋಕ್ ರಸ್ತೆಯಲ್ಲಿರುವ ಡಬ್ಲ್ಯುಎಫ್‌ಐ ಕಚೇರಿಯಲ್ಲಿ, ಸಿಂಗ್ ಅವರ ಬಂಗಲೆಯಲ್ಲಿ ಮತ್ತು ವಿದೇಶದಲ್ಲಿ ಪಂದ್ಯಾವಳಿಗಳ ಸಮಯದಲ್ಲಿ ಲೈಂಗಿಕ ಕಿರುಕುಳದ ಘಟನೆಗಳು ನಡೆದಿವೆ.

WFI ಕಚೇರಿಯಲ್ಲಿ ಕಳೆದ ಸಮಯ, ವಿದೇಶದಲ್ಲಿ ನಿಮ್ಮ ರೂಮ್‌ಮೇಟ್‌ಗಳ ಹೆಸರುಗಳು, ಹೋಟೆಲ್‌ಗಳ ವಿವರಗಳು ಮತ್ತು ಸಂಭಾವ್ಯ ಸಾಕ್ಷಿಗಳ ವಿವರಗಳನ್ನು ನೀಡಬೇಕು ಎಂದು ಪೊಲೀಸರು ಕುಸ್ತಿಪಟುಗಳಿಗೆ ಕೇಳಿದ್ದಾರೆ.

ಕುಸ್ತಿಪಟುಗಳಿಗೆ ಬ್ರಿಜ್‌ಭೂ‍ಷಣ್ ಅವರಿಂದ ಬಂದಿರುವ ಬೆದರಿಕೆ ಕರೆಗಳ ವಿವರಗಳನ್ನು ಪೊಲೀಸರು ಕೇಳಿದ್ದಾರೆ.

ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸುತ್ತಿಲ್ಲ ಎಂದು ಕುಸ್ತಿಪಟುಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಆ ಬಳಿಕ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ದೆಹಲಿ ಪೊಲೀಸರು ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲು ಕೋರಿ ದೂರು ನೀಡಿದ ಕುಸ್ತಿಪಟುಗಳ ಹೆಸರನ್ನು ನ್ಯಾಯಾಂಗ ದಾಖಲೆಗಳಿಂದ ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಏಪ್ರಿಲ್ 25ರಂದು ಆದೇಶಿಸಿತ್ತು.

ವೈಯಕ್ತಿಕ ಸಹಾಯಕ್ಕೆ ಬದಲಾಗಿ ”ಲೈಂಗಿಕ ಬೇಡಿಕೆ”ಯಿಟ್ಟಿದ್ದ ಕನಿಷ್ಠ ಎರಡು ನಿದರ್ಶನಗಳನ್ನು ಹೊಂದಿರುವ ಎರಡು ಎಫ್‌ಐಆರ್‌ಗಳನ್ನು ಮಾತ್ರ ಏಪ್ರಿಲ್ 28ರಂದು, ದೆಹಲಿ ಪೊಲೀಸರು ದಾಖಲಿಸಿದ್ದಾರೆ.

ಆಪಾದಿತ ಅಪರಾಧಕ್ಕೆ ಕಾರಣವಾದ ಘಟನೆಗಳ ಅನುಕ್ರಮವನ್ನು ಮರುಸೃಷ್ಟಿಸಲು ನಿನ್ನೆ ದೆಹಲಿ ಪೊಲೀಸರು ಮಹಿಳಾ ಕುಸ್ತಿಪಟುವನ್ನು ಇಲ್ಲಿನ ಬ್ರಿಜ್ ಭೂಷಣ್ ಅವರ ಕಚೇರಿಗೆ ಕರೆದೊಯ್ದಿದ್ದರು. ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಕುಸ್ತಿಪಟುವನ್ನು ಮಧ್ಯಾಹ್ನ 1.30 ಕ್ಕೆ WFI ಕಚೇರಿಗೆ ಕರೆದೊಯ್ಯಲಾಯಿತು ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಅವರು ಅರ್ಧ ಗಂಟೆ ಅಲ್ಲಿದ್ದರು. ದೃಶ್ಯವನ್ನು ಮರುಸೃಷ್ಟಿಸಲು ಮತ್ತು ಕಿರುಕುಳವನ್ನು ಎದುರಿಸಿದ ಸ್ಥಳಗಳನ್ನು ನೆನಪಿಸಿಕೊಳ್ಳುವಂತೆ ಅವರನ್ನು ಕೇಳಲಾಯಿತು” ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಕೇಂದ್ರ ಕ್ರೀಡಾ ಸಚಿವಾಲಯವು ಜೂನ್ 15ರೊಳಗೆ ಲೈಂಗಿಕ ಕಿರುಕುಳದ ಪ್ರಕರಣವನ್ನುತ್ವರಿತವಾಗಿ ತನಿಖೆ ಮಾಡುವಂತೆ ದೆಹಲಿ ಪೋಯ್ಸ್‌ಗೆ ಕೇಳಿದೆ. ಆದರೆ ಒಲಿಂಪಿಕ್ ಕುಸ್ತಿ ಚಾಂಪಿಯನ್‌ಗಳಾದ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್, ತಮಗೆ ನ್ಯಾಯ ಸಿಗದಿದ್ದರೆ ರಾಜಧಾನಿ ದೆಹಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಪುನರಾರಂಭಿಸುವುದಾಗಿ ಕೇಂದ್ರಕ್ಕೆ ಕುಸ್ತಿಪಟುಗಳು ಎಚ್ಚರಿಕೆ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read