Homeಕವನಅನುವಾದ; ಕೆಲವು ರೂಮಿ ಪದ್ಯಗಳು

ಅನುವಾದ; ಕೆಲವು ರೂಮಿ ಪದ್ಯಗಳು

- Advertisement -
- Advertisement -

ದೀವಿ ಸುಬ್ಬರಾವ್ ಅವರು ತೆಲುಗಿಗೆ ಅನುವಾದಿಸಿರುವ ಮೌಲಾನಾ ಜಲಾಲುದ್ದೀನ್ ರೂಮೀಯವರ ಪದ್ಯಗಳನ್ನು ಲಕ್ಕೂರು ಆನಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವುಗಳು ಪ್ರಕಟವಾಗಿಲಿರುವ ’ದೇವ ಕಣಗಿಲೆ ಹೂ’ (ಶತಮಾನದ ಸೂಫೀ ಕಾವ್ಯ) ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಇದರಲ್ಲಿ ರೂಮೀ, ಫರೀವುದ್ದೀನ್ ಅತ್ತಾರ್, ರಬಿಯಾ ಮತ್ತು ಹಾಫೀಜ್ ಅವರ ಸೂಫಿ ಪದ್ಯಗಳಿವೆ.

ಪ್ರೀತಿಯ ಮುಖಗಳು

ಓ ಪ್ರೀತಿಯೇ!
ನಿನ್ನನ್ನು ಸಾವಿರ ಮಂದಿ ಸಾವಿರ ಹೆಸರಿಟ್ಟು ಕರೆಯುತ್ತಾರೆ.
ದೇಹವೆಂಬ ಪಾನಪಾತ್ರೆಯಲ್ಲಿ ಮಧುವನ್ನು ಹೇಗೆ ತುಂಬಬೇಕೋ
ನಿನಗೆ ಚೆನ್ನಾಗಿ ಗೊತ್ತು.
ಸಾವಿರದಷ್ಟು ನಾಗರಿಕತೆಗಳಿಗೆ
ನಾಗರಿಕತೆ ಏನೆಂದು ಕಲಿಸಿದವಳು.
ನಿನಗೆ ಪ್ರತ್ಯೇಕವಾಗಿ ಒಂದು ರೂಪವೆಂಬುದು ಇಲ್ಲವೇ ಹೊರತು
ಸಾವಿರ ರೂಪಗಳ ಸಮೂಹಾರವು ನೀನು.

ಪ್ರೀತಿ!

ತುರ್ಕಿಯವರನ್ನು, ಐರೋಪಿಯನ್ನರನ್ನುಜಾಂಜಿಬಾರು ದ್ವೀಪದಲ್ಲಿ ಇರುವ ಆದಿವಾಸಿಗಳನ್ನು.
ಭೂಮಿಯ ಮೇಲೆ ಎಲ್ಲರ ಮುಖಗಳಲ್ಲೂ ನೀನೇ ಚಿಗುರುವೆ.
ಅಂತಹ ನೀನು, ಓ ಪ್ರೇಮವೇ!
ನಿನ್ನ ಸೀಸೆಯಲ್ಲಿನದು ತೆಗೆದು ನನ್ನ ಗ್ಲಾಸಿನಲ್ಲಿ ಸ್ವಲ್ಪ ಮಧುವನ್ನು ಸುರಿ.
ನಿನ್ನ ಕೊಂಬೆಗಿರುವ ಎರಡೂ ರೆಂಬೆಗಳನ್ನು ಮುರಿದು
ಸ್ವಲ್ಪ ಭಂಗಿ ಸೊಪ್ಪನ್ನು ಸೇರಿಸಿಕೊಡು.

ಸೀಸೆಗಿರುವ ಬಿರಡೆಯನ್ನು
ಒಂದು ಸಾರಿ ಕಿತ್ತುಬಿಡು.

ಆಗ ನೋಡೋಣ ನಾವು
ವಿಜೃಂಭಿಸಿದ ಸಾವಿರ ಮಂದಿ ಯೋಧರು (ಅಹಂಕಾರದಿಂದ ಮೆರೆದ)
ಚಾಪೆಯ ಸುತ್ತಲೂ ಸಾಷ್ಟಾಂಗ ಬೀಳುವುದ.
ಅಷ್ಟೇನಾ…
ಸುತ್ತಲೂ ಸೇರಿ ಪರವಶದಿಂದ
ಗಾಯಕರು ಘನವಾಗಿ ಹಾಡುಗಳನ್ನು ಹಾಡುವುದ.

ಆಗ
ಮರುಳಾದವನು ಅವುಗಳಿಂದ ಮನಸು ಮರಳಿಸಿಕೊಳ್ಳುತ್ತಾನೆ.
ಅವನು ಆಗ ಪುನರುಜ್ಜೀವಿತನಾಗಿ ಆ ಕೊನೆಯ ದಿನಕ್ಕಾಗಿ
ನಿರ್ಭಯವಾಗಿ ಎದುರು ನೋಡುತ್ತಿರುತ್ತಾನೆ.

*******

ರಾತ್ರಿ ಪಯಣಿಗರು

ಸ್ನೇಹಿತರೊಂದಿಗೆ ಸೇರಿ ಕುಳಿತುಕೋ; ಮತ್ತೆ ನಿದ್ದೆಯೊಳಗೆ ಜಾರಬೇಡ.
ಮೀನಿನಂತೆ ಮುಳುಗಿ ಕಡಲಿನ ಅಡಿಗೆ ಸೇರಬೇಡ.

ಸಮುದ್ರದಂತೆ ಪೂರ್ತಿಯಾಗಿ ಏಳು
ತುಫಾನಿನಂತೆ ದಿಢೀರನೆ ಬಿದ್ದು ಚೆಲ್ಲಾಪಿಲ್ಲಿಯಾಗಬೇಡ.

ಜೀವಜಲ ಭೂಮಿಯ ಕತ್ತಲ ಗರ್ಭದಿಂದ ಚಿಮ್ಮಿಬರುತ್ತದೆ.
ಕತ್ತಲನ್ನು ಶೋಧಿಸು; ಅದರಿಂದ ದೂರಕ್ಕೆ ಸರಿದು ಹೋಗಬೇಡ.

ರಾತ್ರಿ ಪ್ರಯಾಣಿಕರು ಬೆಳಕಿಗೆ ಪ್ರತೀಕಗಳು
ಅವರ ಸಹವಾಸವನ್ನು ಯಾವಾಗಲೂ ಬಿಡಬೇಡ.
ಬಂಗಾರದ ಹಣತೆಯಲ್ಲಿ ಎಚ್ಚರವಾಗಿರುವ ಬೆಳಕಾಗು
ಪಾದರಸದಂತೆ ಜಾರಿ ಕೆಸರಿನಲ್ಲಿ ಬೀಳಬೇಡ.
ರಾತ್ರಿಯ ಪಯಣಿಗರಿಗಾಗಿಯೇ ಚಂದ್ರನು ಉದಯಿಸುತ್ತಾನೆ
ರಾತ್ರಿ ಯಾವ ವೇಳೆಯಲ್ಲಿ ಬರುತ್ತಾನೋ ಪೂರ್ಣಚಂದ್ರನು!
ಎಚ್ಚರದಿಂದ ಕಾಯುತ್ತಾ ಇರು.

******

ಇವು ಎರಡೇ

ಮೋಡ ಕಣ್ಣೀರು ಸುರಿಸದೇ ಹೋದರೇ
ಹೂದೋಟದ ತುಟಿಯ ಮೇಲೆ ನಗು ಹೇಗೆ ಚಿಗುರುತ್ತದೆ?

ಸೂರ್ಯನು ತನ್ನ ಬಿಸಿಯ ಕಿರಣಗಳ ಚಾಟಿಯನ್ನು ಝಳಪಿಸದೆ ಹೋದರೇ
ಹೀಚುಗಳೊಂದಿಗಿರುವ ಗಿಡ ಹೇಗೆ ಫಸಲಿಗೆ ಬರುತ್ತದೆ?

ಮೋಡದ ದುಃಖ, ಸೂರ್ಯನ ಬಿಸಿಲು.
ಇವು ಎರಡೇ ಲೋಕಗಳನ್ನು ಉಳಿಸುವ ಮೂಲಸ್ತಂಭಗಳು.

ನೀನೂ ಕೂಡಾ ನಿನ್ನ ಜ್ಞಾನ ಸೂರ್ಯನನ್ನು ಜ್ವಾಲಾಮಾನವಾಗಿ ಬೆಳಗಿಸು.
ಕಣ್ಣಿನ ಅಂಚುಗಳನ್ನು ದುಃಖಾಶ್ರವಗಳ ತೇವದೊಂದಿಗೆ ಹೊಳೆಯುವಂತೆ ಮಾಡು.

**********

ಕಣ್ಣೀರು

ಇಳಿಬಾವಿಯಿಂದ ಏತದಲ್ಲಿ ನೀರನ್ನು ಮೇಲಕ್ಕೆ ಸೇದಿದಂತೆ
ಅಳುವಿನಿಂದ ನಿನ್ನ ಕಣ್ಣಾಲಿಗಳಲ್ಲಿ ನೀರು ತುಂಬಿಹೋಗಲಿ.

ನಿನ್ನ ಹೃದಯದ ಗದ್ದೆಯ ಬಯಲಿನಲ್ಲಿ
ಹಚ್ಚ ಹಸುರಿನ ಚಿಗುರುಗಳು ಮೊಳಕೆಯೊಡೆಯಲಿ

ಕಣ್ಣೀರು ಬೇಕಾದರೇ
ಕಣ್ಣಿರು ಸುರಿಸುವವರೊಂದಿಗೆ ಪ್ರೀತಿಯಿಂದ-ದಯೆಯಿಂದ ಇರು.
ದಯೆ ಬೇಕಾದರೇ
ನಿಸ್ಸಹಾಯಕರ ಕುರಿತು ದಯೆ ತೋರಿಸು.

*****

ರಾತ್ರಿಹಾಡು

ನಿದ್ದೆ ಹತ್ತದೇ
ರಾತ್ರಿಯಲ್ಲಿ ಹಾಡುಗಳನ್ನು ಕಟ್ಟಿ ಹಾಡಿಕೊಳ್ಳುತ್ತೇನೆ.
ಅರಳಿದ ಪದ್ಮದಂತಿರುವ ಆಕೆಯ ಮುಖ ನೆನಪಾಗಿ
ತುಂಬಾ ಕಳವಳ ಪಡುತ್ತೇನೆ.
ಕಣ್ಣಿಗೆ ಸ್ವಲ್ಪವೂ ತೂಕಡಿಕೆ ಬರದು.
ಮೈಗೆ ಎಚ್ಚರವಾಗಿರುವಷ್ಟು ಸಹನೆಯಿಲ್ಲ.
ಒಳ್ಳೇಯದು ಕೆಟ್ಟದ್ದೂ ಮರ್ಯಾದಸ್ಥರಿಗೆಯೇ ಹೊರತು
ನನಗಿಲ್ಲ.

ಜ್ಞಾನದ ಬಟ್ಟೆಗಳು ಭಾರವಾಗಿ ಬಿಚ್ಚಿ ಪಕ್ಕದಲ್ಲಿ ಬಿಸಾಡಿದೆ.
ಮೇಲ್ಮೈನ ಹೊಳಪು ವಯ್ಯಾರಗಳು ಇಷ್ಟವಾಗದೆ ಅವುಗಳಿಗೆ ದೂರವಾಗಿ ಸರಿದೆ.

ಹೃದಯಕ್ಕೂ, ಮೆದುಳಿಗೂ
ಸಂಬಂಧ ತುಂಡಾಗಿದೆ.
ತಾರೆಗಳಿಗೆ, ಚಂದ್ರನಿಗೆ
ಪ್ರಪಂಚ ಹೀಗೆ ಕುಗ್ಗಿಹೋಗುವುದಕ್ಕೆ ಕಾರಣ
ಪ್ರತಿಯೊಂದಕ್ಕೂ ನಡುವೆ ದೂರ ಬೆಳೆದದ್ದು.

ಚಂದಮಾಮ ಹೇಳುತ್ತದೆಯಲ್ಲವೆ,
“ಎಷ್ಟು ದಿನ ಹೀಗೆ ಒಂಟಿಯಾಗಿ
ಸೂರ್ಯನಿಲ್ಲದೆ ನೇತಾಡುತ್ತಿರಬೇಕು?” ಎಂದು
ನನ್ನಲ್ಲಿರಬೇಕಾದ ಪ್ರೀತಿಯ ಹಾರ ಇಲ್ಲದೆ ಹೋದ ಮೇಲೆ
ಇನ್ನು ಯಾವುದೊ ನನ್ನನ್ನು ಬಾಧಿಸದು.
ಒಂದೊಂದು ಕಲ್ಲು ಉದುರಿ
ಬದುಕಿನ ಅಂಗಡಿ ಪೂರ್ತಿ ಕುಸಿದು ಬಿದ್ದರೂ
ಚಿಂತೆಯಿಲ್ಲ.

*******

ಪ್ರೀತಿಯ ಪೂರ್ಣಚಂದ್ರನು

ಪ್ರೀತಿ ಬಂದರೆ ಅರೆಕೊರೆಯಾಗಿ ಬರುವುದಿಲ್ಲ
ಎದುರು ಕಿಟಕಿಯಲ್ಲಿ ಪೂರ್ಣ ಚಂದ್ರನಂತೆ ಪೂರ್ತಿಯಾಗಿ ಬರುತ್ತದೆ.

ಪೂರ್ವಕ್ಕೋ, ಪಶ್ಚಿಮಕೋ
ಯಾವ ಒಂದು ದಿಕ್ಕಿಗೋ ತಾವಿಗೋ ಪರಿಮಿತವಾಗದ ಸೂರ್ಯನಂತೆ
ದಢಾರನೆ ಬಾಗಿಲುಗಳನ್ನು ತೆರೆದುಕೊಂಡು ಬರುತ್ತದೆ.
ಆ ಸೂರ್ಯನೊಂದಿಗೆ ಸಹ
ಪೂರ್ವ, ಪಶ್ಚಿಮ ಜೋಡಿಯಾಗಿ ಬರುತ್ತವೆ.
ಯಾವುದರ ಕುರಿತು ಆಸೆ ಹೋಯಿತೋ
ಅದನ್ನೆ ಬಯಸು
ದಾರಿ ಯಾವುದಕ್ಕೆ ಕಾಣಿಸದೋ
ಅದನ್ನು ಹುಡುಕಿಕೋ

ಪ್ರೀತಿಯೆಂದರೆ ಸಣ್ಣಗಾತ್ರದ ನದಿಯಲ್ಲ
ಸ್ವಲ್ಪಮಟ್ಟಿನ ಎತ್ತರವಾದ ಬೆಟ್ಟವಲ್ಲ.
ಅದು ಅವಧಿಯಿಲ್ಲದ ಅಹಂಕಾರವಿಲ್ಲದ ಮಹಾಸಮುದ್ರ
ಅಲ್ಲಿ ಈಜು ಯಾವಾಗಲೂ
ಮುಳುಗುವಿಕೆಯಿಂದ ಮುಗಿಯುತ್ತದೆ.

ಸಮುದ್ರದವರೆಗೂ ಪ್ರಯಾಣವೆಂದರೇ
ಕುದುರೆಗಳು ಬೇಕು, ಅವುಗಳಿಗೆ “ಮೇವು ಇಡಬೇಕು, ಪ್ರಯಾಸ ಪಡಬೇಕು”
ಆದರೆ, ನೆಲದ ಅಂಚಿಗೆ ಬರುವ ಸಮಯಕ್ಕೆ
ಎಲ್ಲಾ ಪಾದಮುದ್ರೆಗಳೂ ಅದೃಶ್ಯವಾಗುತ್ತವೆ.

ತೇವವಾಗದೆ ಇರುವುದಕ್ಕೆ
ಬಟ್ಟೆಯ ಕೊನೆಯನ್ನು ಮೇಲಕ್ಕೆ ಎತ್ತಿ ಹಿಡಿಯುವೆ ಯಾಕೆ?
ಬಾ ಬಂದು ಇಲ್ಲಿ ಸಮುದ್ರದಲ್ಲಿ ತಲೆ ತೇವವಾಗುವಂತೆ
ಮುಳುಗು.

ಅಹಂಕಾರ ಲಯಿಸಿದ ವಿಶಾಲ ಸಮುದ್ರದ ಮೇಲೆ
ತಣ್ಣನೆಯ ಚಂದ್ರನು ದಾಟಿ ಹೋಗುತ್ತಿದ್ದಾನೆ.
ಎದ್ದ ತಂಪೆರಲಗಳು ಮರಳಿ
ಅಲೆಗಳ ನೆತ್ತಿಯ ಮೇಲೆ ಜಾರಿ ಬೀಳುತ್ತಿದೆ.

ಕೊನೆಯಿಲ್ಲದ ಆ ಮಹಾಸಮುದ್ರದ ಮೇಲೆ
ಲಕ್ಷ ನಕ್ಷತ್ರಗಳ ಸಮೂಹಗಳೂ ಕೂಡಾ
ಸಣ್ಣ ಮಣ್ಣಿನ ಹೆಂಟೆಯೊಂದಿಗೆ ಸಮಾನ.

*******

ಸುಂಕುರ್

ಆ ಊರಿನ ಧನಿಕನಿಗೆ ಆಗಾಗ ಆವಿಸ್ನಾನ ಮಾಡುವ ಅಭ್ಯಾಸವಿದೆ.
ಒಂದು ದಿನ ಬೆಳಿಗ್ಗೆ ಸೇವಕ ’ಸುಂಕುರ್’ನನ್ನು ಏಳಿಸಿ
ತೇವದ ಮಣ್ಣು, ಹರಕುಬಟ್ಟೆ, ಅಗಲದ ಪಾತ್ರೆಯನ್ನು ತನ್ನ ಹಿಂದೆ ತರಲೆಂದು
ಆ ತಾವಿಗೆ ಹೊರಟುನಿಂತ. ಸುಂಕುರ್ ಕೂಡಾ ಹೇಳಿರುವುದನ್ನೆಲ್ಲಾ ತೆಗೆದುಕೊಂಡು
ಯಜಮಾನಿಯ ಹಿಂದೆ ಹೊರಟ.
ದಾರಿಯಲ್ಲಿ ಮಸೀದಿಯ ಮುಂದೆಯಿಂದ ಹೋಗುತ್ತೀರಬೇಕಾದರೆ
ನಮಾಜಿಗೆ ಸಮಯವಾಗಿದೆಯೆಂದು ಕರೆ ಕೇಳಿಸಿತು.
ಸುಂಕುರ್‌ಗೆ ಐದು ಸಾರಿ ನಮಾಜ್ ಎಂದರೆ ಪ್ರೀತಿ. “ಅಯ್ಯಾ!”

ಈ ಕುರ್ಚಿಯ ಮೇಲೆ ನೀವು ಸ್ವಲ್ಪಹೊತ್ತು ಕುಳಿತಿದ್ದರೇ
ನಾನು ಒಳಗೆ ಹೋಗಿ
“ನಿನ್ನ ಸೇವಕನನ್ನು ದಯೆಯಿಂದ ನೋಡುವ ನೀನು! ಎಂದು ಇರುವ ಅಮೃತವನ್ನು
ಬಾಯಿಪಾಠ ಮಾಡಿ ಬರುತ್ತೇನೆ” ಎಂದನು ವಿನಯವಾಗಿ.

ಪ್ರಾರ್ಥನೆಗಳು ಮುಗಿದ ಮೇಲೂ ಕೂಡಾ,
ಧರ್ಮದ ಹಿರಿಯರು ಉಳಿದವರು ಹೋದ ಮೇಲೆಯೂ ಕೂಡಾ,
ಸುಂಕುರ್ ಒಳಗಡೆಯೇ ಉಳಿದು ಹೋದ. ಯಜಮಾನಿ ನೋಡಿದ ನೋಡಿದ
ಕೊನೆಗೆ ಬೇಸರವಾಗಿ, ದನಿಯೇರಿಸಿ ಕರೆ
ಸುಂಕುರ್!
“ಈ ಬುದ್ಧಿವಂತ ನನ್ನನ್ನು ಬಿಡುತ್ತಿಲ್ಲ ಸ್ವಲ್ಪ ಸಮಯ ಸಹನೆಯಿಂದ ಇರಿ”
ಅದಕ್ಕೂ ಏಳುಪಟ್ಟು ಸಹನೆ ಹಿಡಿದಿದ್ದ ಯಜಮಾನಿ
ಈ ಸಾರಿ ಗಟ್ಟಿಯಾಗಿ ಕಿರುಚಿದ. ಸುಂಕುರ್

ಸುಂಕುರ್ ಉತ್ತರ ಯಾವಾಗಲೂ ಒಂದೇ “ಈಗಲೇ
ಆಗುವುದಿಲ್ಲ. ಆತ ನನ್ನನ್ನು ಇನ್ನೂ ಬಿಡುತ್ತಿಲ್ಲ ನಿನ್ನ ಹೊರತಾಗಿ
ಒಳಗೆ ಇನ್ನು ಯಾರೂ ಇಲ್ಲವಲ್ಲಾ! ಎಲ್ಲರೂ ಯಾವಾಗಲೋ ಹೊರಟುಹೋದರು.
ನಿನ್ನನ್ನು ಯಾರು ಅಲ್ಲಿಯೇ ನಿಲ್ಲಿಸುತ್ತಿರುವುದು?”
“ಇಲ್ಲ ಯಾರು ನನ್ನನ್ನು ಒಳಗೆ ನಿಲ್ಲಿಸುತ್ತಿದ್ದಾರೋ
ಆತನೇ ನಿನ್ನನ್ನು ಹೊರಗೆ ನಿಲ್ಲಿಸಿಕೊಳ್ಳುತ್ತಿದ್ದಾನೆ.
ಯಾರು ನಿನ್ನನ್ನು ಒಳಗೆ ಬರಲು ಬಿಡುತ್ತಿಲ್ಲವೋ
ಆತನೇ ನನ್ನನ್ನು ಹೊರಗೆ ಬರಲು ಬಿಡುತ್ತಿಲ್ಲ.”
ಎಂದನು ಸುಂಕುರ್ ಆ ಕಡೆಯಿಂದ.

********

ಬಿಳಿಹಸು

ಸುತ್ತಲೂ ಹಸಿರು ಬಯಲಿರುವ ಚೊಕ್ಕವಾದ ಕಾಡಿನ ಪ್ರದೇಶದಲ್ಲಿ
ಸುಂದರವಾದ ಬಿಳಿಹಸು ಒಂದೇ ಇರುತ್ತಿತ್ತು.
ಕತ್ತಲಾಗುವವರೆಗೂ ಚೆನ್ನಾಗಿ ಮೇಯ್ದು ಬಲಿಷ್ಠವಾಗಿದ್ದರೂ,
ರಾತ್ರಿಯಾಗುವ ಹೊತ್ತಿಗೆ ಭಯದಿಂದ ಗಾಬರಿಯಲ್ಲಿ ಕಳೆಯುತ್ತಿತ್ತು.
“ಹುಲ್ಲಿನ ಕಡ್ಡಿ ಉಳಿಯಲಿಲ್ಲ. ನಾಳೆ ಏನಿದೆ ತಿನ್ನುವುದಕ್ಕೆ?” ಎಂದು ನೆನೆದು
ಸೊರಗಿ ಬಡವಾಗಿ ಕಡ್ಡಿಪುಳ್ಳೆಯಂತೆ ಆಗುತ್ತಿತ್ತು.
ಬೆಳಗಾಗುವ ಸಮಯಕ್ಕೆ ಹುಲ್ಲು ಮತ್ತೆ ಮೊದಲಿನಂತೆ
ಸೊಂಟದ ಎತ್ತರ ಸೊಂಪಾಗಿ ಬೆಳೆದಿರುತ್ತಿತ್ತು.
ಹಸು ಮೇಯಲು ಶುರುಮಾಡಿ, ಕತ್ತಲಾಗುವ ವೇಳೆಗೆ
ಮೊದಲಿನಂತೆ ಮತ್ತೆ ಬಯಕೆಯಾಗುತ್ತಿತ್ತು.
ದಷ್ಟಪುಷ್ಟವಾಗಿ ಬಲವಾಗಿ ತಯಾರಾಗುತ್ತಿದ್ದಾದರೂ,
ರಾತ್ರಿಯ ವೇಳೆ ಮೊದಲಿನಂತೆ ಭಯ, ಗಾಬರಿಪಟ್ಟು,
ಮತ್ತೆ ಸೊರಗಿ ಬಡವಾಗಿ ಕಡ್ಡಿಪುಳ್ಳೆಯಂತೆ ಆಗುತ್ತಿತ್ತು.

ಹೀಗೆ ಮಾತುಮಾತಿಗೆ ಗಾಬರಿಯಾಗುವುದು,
ಅದಕ್ಕೆ ಯಾವಾಗಲೂ ಹೊಳೆಯಲಿಲ್ಲ-
“ಹಸಿರು ಬಯಲು ಮತ್ತೆ ಬೆಳೆಯದೆ
ಯಾವಾಗಲೂ ಇರಲಿಲ್ಲ. ಪ್ರತಿ ರಾತ್ರಿಯೇಕೆ ಭಯಗೊಳ್ಳುವುದು ನಾನು?” ಎಂದು.

ಈ ಹಸು ದೇಹಾತ್ಮ
ಹಸಿರು ಬಯಲು ಹೊರಗಿನ ಪ್ರಪಂಚ.
ಭಯಗಳಿಂದ ಸೊರಗಿ ಬರಡಾಗುತ್ತಾ,
ವರಗಳಿಂದ ಉಬ್ಬಿಹೋಗುತ್ತಿರುವುದು ದೇಹಾತ್ಮದ ಲಕ್ಷಣ.
ಓ ಬಿಳಿ ಹಸುವೇ!
ಏನು ನಡೆಯುತ್ತದೆಯೋ, ಏನು ನಡೆಯದೋ ಎಂಬ
ಕೊರಗಿನಿಂದ ಬದುಕನ್ನು ಭಾರ ಮಾಡಿಕೊಳ್ಳಬೇಡ.

****

ಮೌಲಾನಾ ಜಲಾಲುದ್ದೀನ್ ರೂಮೀ
13ನೇ ಶತಮಾನದ ಸೂಫಿ ಕವಿ. ಟರ್ಕಿ ದೇಶದಲ್ಲಿ ನೆಲೆಸಿದ್ದ ರೂಮೀಯ ಬೆಡಗಿನ ಪದ್ಯಗಳು ಆಧ್ಯಾತ್ಮವನ್ನು ಮತ್ತು ವಿವೇಕವನ್ನು ಒಳಗೊಂಡಿರುವಂತಹವು.

ದೀವಿ ಸುಬ್ಬಾರಾವ್
ತೆಲುಗಿನ ಖ್ಯಾತ ಕವಿ ಮತ್ತು ಸಾಹಿತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಸುಬ್ಬಾರಾವ್ ಅವರು 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಲಕ್ಕೂರು ಆನಂದ
ಕೇಂದ್ರ ಸಾಹಿತ್ಯ ಯುವ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕವಿ. ತೆಲುಗಿನಿಂದ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ’ಊರಿಂದ ಊರಿಗೆ’, ’ಇಪ್ಪತ್ತರ ಕಲ್ಲಿನ ಮೇಲೆ’, ’ಬಟವಾಡೆಯಾಗದ ರಸೀತಿ’ ಇವರ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ಕವನ: ಅವಳು ಸಂಪೂರ್ಣವಾಗಿ ಪ್ರಕಟವಾಗದ ಕವಿತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...