Homeಮುಖಪುಟಕೇಂದ್ರ ಸರ್ಕಾರ ಮತ್ತು ಗೋದಿ ಮಿಡಿಯಾಗಳಿಗೆ ಛೀಮಾರಿ ಹಾಕುತ್ತಿರುವ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು

ಕೇಂದ್ರ ಸರ್ಕಾರ ಮತ್ತು ಗೋದಿ ಮಿಡಿಯಾಗಳಿಗೆ ಛೀಮಾರಿ ಹಾಕುತ್ತಿರುವ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು

ಮೋದಿಜಿಯವರೆ ನೀವೆಲ್ಲಿದ್ದೀರಿ? ಒಂದು ತಿಂಗಳಿನಿಂದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬ್ಯುಸಿ ಆಗಿದ್ದೀರಿ. ಇಂದು ಉಕ್ರೇನ್‌ನಲ್ಲಿ ಯಾವುದೇ ಅಮೆರಿಕ ವಿದ್ಯಾರ್ಥಿಗಳು ಸಿಕ್ಕಿಕೊಂಡು ತೊಂದರೆಯಲ್ಲಿಲ್ಲ. ಬೈಡನ್‌ಗೆ ಗೊತ್ತಾಗಿದ್ದು, ನಿಮಗೇಕೆ ಗೊತ್ತಾಗಲಿಲ್ಲ?

- Advertisement -
- Advertisement -

ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟು ತಾರಕಕ್ಕೇರಿದ್ದು, ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದೆ. ರಾಜಧಾನಿ ಕೀವ್‌ವರೆಗೂ ತಲುಪಿರುವ ರಷ್ಯನ್ ಸೇನೆ ಅಟ್ಟಹಾಸ ಮೆರೆಯುತ್ತಿದೆ. ಈ ಸಂದರ್ಭದಲ್ಲಿ ಉಕ್ರೇನ್ ಪ್ರಜೆಗಳಷ್ಟೆ ಆತಂಕ, ಅನಿಶ್ಚಿತತೆ ಮತ್ತು ಸಂಕಷ್ಟವನ್ನು ಅಲ್ಲಿ ಶಿಕ್ಷಣಕ್ಕೆಂದು ಹೋಗಿರುವ ಭಾರತೀಯ ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ. ಕರ್ನಾಟಕದ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ ಅತ್ಯಂತ ನೋವಿನ ಸುದ್ದಿ ಬಂದಿದೆ. 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತಕ್ಕೆ ಸುರಕ್ಷಿತವಾಗಿ ಮರಳುವ ತವಕದಲ್ಲಿದ್ದಾರೆ. ಪೂರ್ವ ಉಕ್ರೇನ್ ಮತ್ತು ರಾಜಧಾನಿ ಕೀವ್‌ನಲ್ಲಿರುವವರು ಯುದ್ಧದ ನಡುವೆಯೆ ಒದ್ದಾಡುತ್ತಿದ್ದಾರೆ. ಮನೆಯಿಂದ ಹೊರಬರಲಾಗದೆ ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ಯುದ್ಧದ ತೀವ್ರತೆಯಿರದ ಪಶ್ಚಿಮ ಉಕ್ರೇನ್‌ನಲ್ಲಿನ ವಿದ್ಯಾರ್ಥಿಗಳು ಉಕ್ರೇನ್ ಗಡಿ ದಾಟಲು ಒದ್ದಾಡಿ ಅನ್ನ-ನೀರಿಲ್ಲದೆ, ಶೌಚಾಲಯವಿಲ್ಲದೆ ಬಳಲಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಅಲ್ಲಿನ ಸೇನೆಯಿಂದ ಪೆಟ್ಟು ತಿಂದಿದ್ದಾರೆ. ಎಲ್ಲರೂ ಆಸೆಗಣ್ಣಿನಿಂದ ತಮ್ಮತ್ತ ಬರುವ ವಿಮಾನಗಳನ್ನು ನೋಡುತ್ತಿದ್ದಾರೆ. ಯುದ್ಧ ಎಂಬ ವಿಷವರ್ತುಲ ಸೃಷ್ಟಿಸುವ ಸಂಕಷ್ಟಗಳಿಗೆ ಬಲಿಪಶುವಾಗಿರುವ ಈ ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ನೋವು, ಆತಂಕ, ಯಾತನೆಗಳನ್ನು ವಿವರಿಸುವುದು ಸುಲಭವಲ್ಲ.

ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಉಕ್ರೇನ್‌ಗೆ ಹೋಗುವುದೇಕೆ?

“ನನ್ನ ಮಗಳು ದ್ವಿತೀಯ ಪಿಯುಸಿ ಜೀವಶಾಸ್ತ್ರದಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾಳೆ. ಇಂಗ್ಲಿಷ್ ಸೇರಿದಂತೆ ಇತರ ವಿಷಯಗಳಲ್ಲಿ 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾಳೆ. ಆದರೆ ಆಕೆಗೆ ನೀಟ್ ಪರೀಕ್ಷೆ ಸರಿ ಹೊಂದುತ್ತಿಲ್ಲ.. ಇಷ್ಟೇ ಕಾಲೇಜು, ಇಷ್ಟೇ ಸೀಟುಗಳಂತಿದ್ದು, ಅವುಗಳಿಗೆ ನೀವು ಸ್ಪರ್ಧಿಸಿ ಎನ್ನುವುದು ಮ್ಯೂಸಿಕಲ್ ಚೇರ್ ಆಟವಿದ್ದಂತೆ. ಅಲ್ಲಿ ಗೆಲ್ಲುವವರು ಕೆಲವರು ಮಾತ್ರ. ನಾವು ಮಧ್ಯಮ ವರ್ಗವಾಗಿದ್ದು ಹೆಚ್ಚಿನ ಹಣ ಕೊಟ್ಟು ಖಾಸಗಿ ಮೆಡಿಕಲ್ ಸೀಟು ಪಡೆಯಲು ಸಾಧ್ಯವಿಲ್ಲ. ಹಾಗಾಗಿ ನನ್ನ ಮಗಳನ್ನು ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಕಳುಹಿಸಲು ತೀರ್ಮಾನ ಮಾಡಿದೆ”. – ಇದು ಉಕ್ರೇನ್‌ನ ಚರ್ನಿವಿಟ್ಸಿಯ ಬುಕೋವಿಯನ್ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ತಮ್ಮ ಮಗಳನ್ನು ಓದಿಸುತ್ತಿರುವ ಕನಕಪುರದ ನಿವಾಸಿ ಶಿವರಾಜುರವರ ಅಭಿಮತ.

“ನನ್ನ ಮಗಳ ಮೊದಲ ವರ್ಷದ ವೈದ್ಯಕೀಯ ಶಿಕ್ಷಣಕ್ಕಾಗಿ ಫೀಸ್, ಹಾಸ್ಟೆಲ್, ವಿಮಾನ ಟಿಕೆಟ್ ಎಲ್ಲಾ ಸೇರಿ 9 ಲಕ್ಷ ಖರ್ಚಾಗಿದೆ. ಎರಡನೇ ವರ್ಷ ಕೇವಲ 3.5 ಲಕ್ಷದಲ್ಲಿ ಮುಗಿಯುತ್ತದೆ. ಅಲ್ಲದೆ ಒಂದೊಂದು ತರಗತಿಯಲ್ಲಿ 13 ಜನರ ಬ್ಯಾಚ್ ಮಾಡಿ ವೈಯಕ್ತಿಕ ಗಮನ ನೀಡಿ ಅಲ್ಲಿ ಉತ್ತಮ ಶಿಕ್ಷಣ ನೀಡುತ್ತಾರೆ. ಇದನ್ನು ಭಾರತದಲ್ಲಿ ಕೊಡಲು ಏಕೆ ಸಾಧ್ಯವಿಲ್ಲ? ಇಲ್ಲಿ ಹೆಚ್ಚಿನ ಸರ್ಕಾರಿ ಕಾಲೇಜಿಗಳು ಏಕಿಲ್ಲ? 60%ಕ್ಕಿಂತ ಹೆಚ್ಚು ಖಾಸಗಿ ಕಾಲೇಜುಗಳಿರುವುದು ಏಕೆ?” ಎಂದು ಅವರು ಪ್ರಶ್ನಿಸುತ್ತಾರೆ.

“ಕರ್ನಾಟಕ ಸರ್ಕಾರವು ದೀರ್ಘಾವಧಿಯಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚವನ್ನು ಕಡಿಮೆ ಮಾಡಬೇಕು. ಕರ್ನಾಟಕದಲ್ಲಿ ಶ್ರೀಮಂತರು ಮಾತ್ರ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿದೆ. ಆದರೆ ಮಧ್ಯಮ ವರ್ಗದ ಕುಟುಂಬಗಳು ಇಲ್ಲಿನ ಭಾರೀ ವೆಚ್ಚವನ್ನು ಭರಿಸಲಾಗದೇ, ತಮ್ಮ ಮಕ್ಕಳನ್ನು ಕಡಿಮೆ ವೆಚ್ಚದ ವಿದೇಶಿ ವಿವಿಗಳಿಗೆ ಕಳುಹಿಸಿ ಶಿಕ್ಷಣ ಕೊಡಿಸುವಂತಾಗಿದೆ. ಇದೇ ಕಾರಣದಿಂದಾಗಿ ನಾವು ನಮ್ಮ ಮಗನನ್ನು ಉಕ್ರೇನ್‌ಗೆ ಕಳಿಸಬೇಕಾಯಿತು” ಎನ್ನುತ್ತಾರೆ ಉಕ್ರೇನ್‌ನ ಟೌನ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ತಮ್ಮ ಮಗನನ್ನು ಓದಿಸುತ್ತಿರುವ ಉಡುಪಿಯ ಫೆರ್ನಾಂಡಿಸ್.

ಈ ಇಬ್ಬರ ಮಾತು ಕೇಳಿದಾಗ ನಮ್ಮ ರಾಜ್ಯ ಮತ್ತು ದೇಶದಲ್ಲಿ ಶಿಕ್ಷಣವೆನ್ನುವುದು ಎಷ್ಟು ದುಬಾರಿ, ಅದು ಹೇಗೆ ಖಾಸಗೀಕರಣಗೊಂಡು ವ್ಯಾಪಾರವಾಗುತ್ತಿದೆ ಎಂಬ ಕಟುಸತ್ಯ ಅರ್ಥವಾಗುತ್ತದೆ. ಶಿಕ್ಷಣ ಕ್ಷೇತ್ರ ಅದರಲ್ಲೂ ಮೆಡಿಕಲ್, ಇಂಜಿನಿಯರ್ ನಂತಹ ಉನ್ನತ ಶಿಕ್ಷಣ ಇಂದು ಸೇವೆಯಾಗಿ ಅಥವಾ ಸರ್ಕಾರದ ಜವಾಬ್ದಾರಿಯಾಗಿ ಉಳಿದಿಲ್ಲ. ಬದಲಿಗೆ ದೊಡ್ಡ ಉದ್ಯಮಪತಿಗಳ, ರಾಜಕಾರಣಿಗಳ ದುಡ್ಡು ಮಾಡುವ ದಂಧೆಯಾಗಿ ಪರಿವರ್ತನೆಗೊಂಡಿದೆ. ಮಧ್ಯಮವರ್ಗವಾದರೂ ಒಂದಷ್ಟು ಕಷ್ಟಪಟ್ಟು, ಸಾಲ ಮಾಡಿ ತಮ್ಮ ಮಕ್ಕಳನ್ನು ರಷ್ಯಾ-ಉಕ್ರೇನ್‌ನಂತಹ ಕಡಿಮೆ ವೆಚ್ಚದ ವಿದೇಶಗಳಿಗೆ ಕಳಿಸಿ ಓದಿಸುತ್ತಾರೆ. ಆದರೆ ಶೇ.60ರಷ್ಟಿರುವ ಬಡವರ ಕಥೆಯೇನು? ಅವರಿಗೆ ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ ಬೇಡವೇ ಎಂಬ ಪ್ರಶ್ನೆ ಎದುರಾಗುತ್ತದೆ.

ಇನ್ನು ಈ ಸಮಯದಲ್ಲಿ ಪ್ರಧಾನಿ ಮೋದಿಯವರು ಖಾಸಗಿಯವರು ವೈದ್ಯಕೀಯ ಶಿಕ್ಷಣದ ಮೇಲೆ ಹೂಡಿಕೆ ಮಾಡಿ ಎಂದು ಮನವಿ ಮಾಡುತ್ತಾರೆ. ಈಗಾಗಲೇ ಖಾಸಗೀಕರಣದಿಂದ ಬಡವರಿಗೆ ಶಿಕ್ಷಣ ಕೈಗೆಟುಕದಿರುವಾಗ ಸರ್ಕಾರ ಮಾಡಬೇಕಾದ ಕೆಲಸವನ್ನು ಖಾಸಗಿಯವರಿಗೆ ವರ್ಗಾಯಿಸಲು ಮೋದಿ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಉಕ್ರೇನ್ ಮೇಲೆ ರಷ್ಯಾ ನಡಸಿರುವ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಗೊತ್ತಿಲ್ಲ. ಹಾಗಾದರೆ ಈಗ ಅಲ್ಲಿ ಅರ್ಧ ಕಲಿತಿರುವ ವಿದ್ಯಾರ್ಥಿಗಳ ಮುಂದಿನ ಭವಿಷ್ಯವೇನು? ವಿದ್ಯಾರ್ಥಿಗಳು ಅಲ್ಲಿ ಖರ್ಚು ಮಾಡಿರುವ ಹಣ ವಾಪಸ್ ಬರಲಿದೆಯೇ ಎಂಬುದಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ. ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಯೋಜನೆಯ ಬಗ್ಗೆಯೂ ಸರ್ಕಾರ ಖಚಿತಪಡಿಸಿಲ್ಲ.

ವಿದ್ಯಾರ್ಥಿಗಳ ರಕ್ಷಣೆಗೆ ಭಾರತ ಮಾಡಿದ್ದೇನು?

ಪ್ರಪಂಚದ 80,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಅದರಲ್ಲಿ ನಾಲ್ಕನೇ ಒಂದು ಭಾಗದಷ್ಟು ಭಾರತದವರಿದ್ದಾರೆ ಎಂದು ಉಕ್ರೇನ್‌ನ ಶಿಕ್ಷಣ ಮತ್ತು ವಿಜ್ಞಾನ ಸಚಿವಾಲಯದಿಂದ ಡೇಟಾ ಹೇಳುತ್ತದೆ. ಭಾರತದ ನಂತರದ ಸ್ಥಾನಗಳಲ್ಲಿ ಮೊರಾಕೊ, ಅಜೆರ್ಬೈಜಾನ್, ತುರ್ಕಮೆನಿಸ್ತಾನ್ ಮತ್ತು ನೈಜೀರಿಯಾದ ವಿದ್ಯಾರ್ಥಿಗಳಿದ್ದಾರೆ.

ರಷ್ಯಾ ಏಕಾಏಕಿ ಉಕ್ರೇನ್ ಮೇಲೆ ದಾಳಿ ನಡೆಸಲಿಲ್ಲ. ಅದು ಹಲವು ದಿನಗಳ ಮುಂಚೆಯೇ ಪೂರ್ವ ಉಕ್ರೇನ್ ಗಡಿಯಲ್ಲಿ ತನ್ನ ಸೈನ್ಯವನ್ನು ಅಣಿನೆರೆಸಿತು. ಇದು ಪ್ರಪಂಚಾದ್ಯಂತ ಚರ್ಚೆ ಹುಟ್ಟುಹಾಕಿತು. ಅದುವರೆಗೂ ಭಾರತ ಸರ್ಕಾರ ಭಾರತದ ವಿದ್ಯಾರ್ಥಿಗಳಿಗೆ ಬೇಕಾದರೆ ನೀವು ಉಕ್ರೇನ್‌ನಿಂದ ಹೊರಡಬಹುದು ಎಂಬ ಸಂದೇಶ ಮಾತ್ರ ನೀಡಲಾಗಿತ್ತು. ಫೆಬ್ರವರಿ 20ರ ನಂತರ ಇಲ್ಲಿಂದ ಹೊರಡಿ ಎಂದು ಭಾರತ ಸರ್ಕಾರ ವಿದ್ಯಾರ್ಥಿಗಳಿಗೆ ತಿಳಿಸಿತು. ಆದರೆ ಆಗ ವಿದ್ಯಾರ್ಥಿಗಳು ವಿಮಾನ ಟಿಕೆಟ್ ಬುಕ್ ಮಾಡಲು ಮುಂದಾದರೆ ತಕ್ಷಣಕ್ಕೆ ಟಿಕೆಟ್‌ಗಳು ಲಭ್ಯವಿರಲಿಲ್ಲ. ಅಷ್ಟು ಮಾತ್ರವಲ್ಲ ಟಿಕೆಟ್ ಬೆಲೆ ಲಕ್ಷಾಂತರ ರೂಗಳಿಗೆ ಏರಿದ್ದವು. ತೆಲಂಗಾಣದ ಮೆಹಬೂಬ್‌ನಗರದ ವಿದ್ಯಾರ್ಥಿನಿ ಯೋಗಿತಾ ಉಕ್ರೇನ್‌ನ ಜಾಪ್ರಜಿಯ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದು, ’ದೇಶಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ವಿಮಾನ ಟಿಕೆಟ್ ದರಗಳನ್ನು 1 ಲಕ್ಷ ರೂಗಳಿಗಿಂತ ಹೆಚ್ಚು ಮಾಡಿದ್ದಾರೆ. ಇಲ್ಲಿನ ಸ್ಥಿತಿ ಬಗ್ಗೆ ಏನು ಗೊತ್ತಾಗುತ್ತಿಲ್ಲ. ಭಾರತ ಸರ್ಕಾರ ನಾವು ಸುರಕ್ಷಿತವಾಗಿ ಮರಳಲು ಕ್ರಮ ಕೈಗೊಳ್ಳಬೇಕು’ ಎಂದು ಅಳಲು ತೋಡಿಕೊಂಡರು. ಈ ಮೊದಲು ಉಕ್ರೇನ್‌ನಿಂದ ಭಾರತದ ಹಲವು ನಗರಗಳಿಗೆ 20,000 ರೂನಿಂದ 30,000 ರೂವರೆಗೆ ವಿಮಾನ ಟಿಕೆಟ್‌ಗಳು ದರವಿರುತ್ತಿತ್ತು. ಯುದ್ಧದ ವಾತಾವರಣ ಕವಿಯುತ್ತಿದ್ದಂತೆ ಅದು 1 ಲಕ್ಷದಿಂದ 2 ಲಕ್ಷದವರೆಗೆ ಏರಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಕಡೆಗೆ ಫೆಬ್ರವರಿ 24ರಂದು ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತು. ಭಾರತದ ವಿದ್ಯಾರ್ಥಿಗಳು ಉಕ್ರೇನ್ ರಾಜಧಾನಿ ಕೀವ್‌ನತ್ತ ನುಗ್ಗಿ ಬಂದರು. ಆದರೆ ವಿಮಾನ ನಿಲ್ದಾಣ ಮುಚ್ಚಿತ್ತು. 10-15 ಗಂಟೆ ಪ್ರಯಾಣಿಸಿ ಬಂದವರನ್ನು ಮತ್ತೆ ವಾಪಸ್ ಕಳಿಸಲಾಯಿತು. ರೊಮೇನಿಯ, ಪೋಲೆಂಡ್ ಗಡಿಗಳಿಗೆ ತೆರಳಿ ಅಲ್ಲಿಂದ ಉಕ್ರೇನ್ ಗಡಿ ದಾಟಿ ಭಾರತಕ್ಕೆ ತೆರಳಲು ಸೂಚಿಸಲಾಯಿತು. ಈ ಕಾರ್ಯಾಚರಣೆ ಆಪರೇಷನ್ ಗಂಗಾ ಎಂದು ಹೆಸರಿಡಲಾಯಿತು. ಫೆಬ್ರವರಿ 26-27ರಂದು ಎರಡು ವಿಮಾನಗಳು ಮುಂಬೈಗೆ ಬಂದಿಳಿದವು. ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ವಿಮಾನದೊಳಕ್ಕೆ ನುಗ್ಗಿ ’ನಿಮ್ಮನ್ನು ಕರೆಸಿಕೊಂಡಿದ್ದಕ್ಕೆ ಸಂತೋಷವಾಗಿದೆ. ನಾನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ನಿಮ್ಮನ್ನು ಸ್ವಾಗತಿಸುತ್ತೇನೆ’ ಎಂದು ಹರ್ಷ ವ್ಯಕ್ತಪಡಿಸಿದರು. ಇನ್ನು 15,000 ಹೆಚ್ಚು ವಿದ್ಯಾರ್ಥಗಳು ಅಲ್ಲಿ ಸಿಕ್ಕಿಹಾಕಿಕೊಂಡಿದ್ದರೆ, ಇಲ್ಲಿ ಕೇಂದ್ರ ಸಚಿವರು 400 ಜನರನ್ನು ಕರೆಸಿಕೊಂಡು ಸಂಭ್ರಮದಲ್ಲಿದ್ದರು ಮತ್ತು ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದರು!

ಕೆಲವೇ ಕೆಲವು ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಂಡಿದ್ದನ್ನು ಸಹ ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹಲವರು ದೂರಿದ್ದಾರೆ. ಉತ್ತರ ಪ್ರದೇಶ ಚುನಾವಣೆ ನಡೆಯುತ್ತಿರುವಾಗ ಇದಕ್ಕೆ ಆಪರೇಷನ್ ಗಂಗಾ ಎಂದು ಹೆಸರಿಟ್ಟಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಲಿಬಿಯಾ ಅಂತರ್ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್‌ರವರು ಸದ್ದು ಗದ್ದಲವಿಲ್ಲದೆ ’ಆಪರೇಷನ್ ಸೇಫ್ ಹೋಮ್‌ಕಮಿಂಗ್’ ಎಂಬ ಹೆಸರಿನಲ್ಲಿ ಅಲ್ಲಿಂದ 15000ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಕರೆಸಿಕೊಂಡಿದ್ದರು. ಅದು ಸರ್ಕಾರದ ಜವಾಬ್ದಾರಿ. ಅದರಲ್ಲಿ ಹೆಚ್ಚುಗಾರಿಕೆ ಏನಿದೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಗೋದಿ ಮಿಡಿಯಾಗಳಿಗೆ ಛೀಮಾರಿ ಹಾಕುತ್ತಿರುವ ವಿದ್ಯಾರ್ಥಿಗಳು

ವಿದ್ಯಾರ್ಥಿಗಳನ್ನು ವಾಪಸ್ ಕರೆತರುವಲ್ಲಿ ಅಮೆರಿಕ, ಚೀನಾ, ಇಂಗ್ಲೆಂಡ್ ಕೈ ಚೆಲ್ಲಿ ಕುಳಿತರೆ ಭಾರತ ದೇಶ ಮುಂದಿದೆ ಎಂದು ಕೇಂದ್ರ ಸರ್ಕಾರ ತನ್ನನ್ನು ತಾನೇ ಹೊಗಳಿಕೊಂಡಿದೆ. ಗೋದಿ ಮೀಡಿಯಾಗಳು ಅದನ್ನು ಪ್ರತಿದಿನ ಪ್ರಸಾರ ಮಾಡುತ್ತಿವೆ. ಹೀಗಿರುವಾಗ ಮೀಡಿಯಾ ಎದುರೆ ಉಕ್ರೇನ್‌ನಲ್ಲಿ ಸಿಕ್ಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಮಾತು ಕೇಳಿದರೆ ವಾಸ್ತವ ಅರ್ಥವಾಗುತ್ತದೆ.

“ಮೋದಿಜಿಯವರೆ ನೀವೆಲ್ಲಿದ್ದೀರಿ? ಒಂದು ತಿಂಗಳಿನಿಂದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬ್ಯುಸಿ ಆಗಿದ್ದೀರಿ. ಇಂದು ಉಕ್ರೇನ್‌ನಲ್ಲಿ ಯಾವುದೇ ಅಮೆರಿಕ ವಿದ್ಯಾರ್ಥಿಗಳು ಸಿಕ್ಕಿಕೊಂಡು ತೊಂದರೆಯಲ್ಲಿಲ್ಲ. ಬೈಡನ್‌ಗೆ ಗೊತ್ತಾಗಿದ್ದು, ನಿಮಗೇಕೆ ಗೊತ್ತಾಗಲಿಲ್ಲ? ನಾವು ನಿಮಗೆ ಎಷ್ಟೊಂದು ಮೇಲ್ ಮಾಡಿದ್ದೇವೆ” ಎಂದು ವಿದ್ಯಾರ್ಥಿನಿಯೊಬ್ಬರು ಆಜ್‌ತಕ್ ವಾಹಿನಿಯ ಲೈವ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

“ನಮಗೆ ಸಹಾಯ ಮಾಡಲು ಯಾರೂ ಬಂದಿಲ್ಲ. ಯಾವುದೇ ಪ್ರತಿನಿಧಿಗಳು ನಮ್ಮನ್ನು ಭೇಟಿಯಾಗಿಲ್ಲ. ನಮಗಾಗಿ ಯಾವುದೇ ರೈಲುಗಳನ್ನು ಬಿಟ್ಟಿಲ್ಲ” – ಆಜ್ ತಕ್ ವರದಿಗಾರನಿಗೆ ವಿದ್ಯಾರ್ಥಿಯ ಪ್ರತಿಕ್ರಿಯೆ ಇದಾಗಿದೆ.

“ಎಲ್ಲಾ ದೇಶಗಳು ಬಹಳ ಗೌರವಪೂರ್ವಕವಾಗಿ ತಮ್ಮ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದರೆ ನಮ್ಮ ಸರ್ಕಾರ ಮಾತ್ರ ಹೀಗೇಕೆ ಮಾಡುತ್ತಿದೆ? ಇಲ್ಲಿ ಬಹಳ ಚಳಿ ಇದೆ. ಶೌಚಾಲಯವಿಲ್ಲ, ಊಟ ಇಲ್ಲ. ನಮಗೆ ಯಾವುದೇ ಗೌರವವಿಲ್ಲ. ಬಹಳ ಕೆಟ್ಟ ವ್ಯವಹಾರ ನಡೆಯುತ್ತಿದೆ. ನಮ್ಮ ಸರ್ಕಾರ ತಮ್ಮದೆ ಜನರಿಗೆ ಈ ರೀತಿ ದೋಖಾ ಮಾಡುತ್ತದೆ ಅಂದುಕೊಂಡಿರಲಿಲ್ಲ” ಎಂದು ವಿದ್ಯಾರ್ಥಿಯೊಬ್ಬ ನೋವು ತೋಡಿಕೊಂಡಿದ್ದಾರೆ.

ಶಿಕ್ಷಣದ ಬಗೆಗಿನ ಸರ್ಕಾರದ ಕೆಟ್ಟ ನೀತಿಗಳಿಂದ ಅವಕಾಶ ವಂಚಿತ ವಿದ್ಯಾರ್ಥಿಗಳು ವಿದೇಶಕ್ಕೆ ಶಿಕ್ಷಣಕ್ಕೆ ಹೋಗಿದ್ದಾರೆ. ಅಲ್ಲಿ ಯುದ್ಧ ಆರಂಭವಾಗಿದೆ. ಅವರು ವಾಪಸ್ ಬರಲು ಹಾತೊರೆಯುತ್ತಿದ್ದಾರೆ. ಆದರೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮುಳುಗಿರುವ ಸರ್ಕಾರ ಯುದ್ಧದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರಲು ವೈಜ್ಞಾನಿಕವಾಗಿ ಕಾರ್ಯಸಾಧುವಾದ ಯೋಜನೆ ಮಾಡಿಕೊಂಡಿಲ್ಲ. ಕೆಲವರನ್ನಷ್ಟೆ ಕರೆಸಿಕೊಳ್ಳಲು ಸಾಧ್ಯವಾಗಿದ್ದರೂ ಅದನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಮುಂದಾಗಿದೆ. ಅಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿ ಪ್ರಾಣತೆತ್ತಿದ್ದಾನೆ. ಎಲ್ಲಾ ಭಾರತೀಯರು ವಾಪಸ್ ಬರುವುದರೊಳಗೆ ಏನೇನು ಅನಾಹುತ ಕಾದಿದೆಯೊ ಗೊತ್ತಿಲ್ಲ. ಈ ನೋವಿನ ಪ್ರಕರಣಗಳು ಶಿಕ್ಷಣದ ಖಾಸಗೀಕರಣದ ವಿರುದ್ಧ ಹೋರಾಡಲು, ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಒತ್ತಾಯಿಸಲು ಮುಂದೆ ಕಾರಣವಾಗಬಹುದೆ? ಈ ಸದ್ಯದಲ್ಲಿ ಯುದ್ಧದಲ್ಲಿ ಸಿಲುಕಿರುವ ಆ ಎಲ್ಲ ವಿದ್ಯಾರ್ಥಿಗಳನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಸರ್ಕಾರವನ್ನು ಆಗ್ರಹಿಸಬೇಕಿದೆ.


ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಬಿಕ್ಕಟ್ಟು: ಕ್ಷಿಪಣಿ ದಾಳಿ; ಕರ್ನಾಟಕ ಮೂಲದ ವಿದ್ಯಾರ್ಥಿ ಬಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...