ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿಗ್ಗಾಂವಿಯಲ್ಲಿ ಮಾತನಾಡಿದ್ದ ಜೆ.ಪಿ ನಡ್ಡಾ, ‘ರಾಜ್ಯದ ಜನತೆ ಪ್ರಧಾನಿ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಬಸವಣ್ಣನ ಆಶೀರ್ವಾದವಿರುವಾಗ ಕನ್ನಡಿಗರಿಗೆ ಮೋದಿ ಆಶೀರ್ವಾದ ಬೇಕಿಲ್ಲ ಎಂದು ಗುಡುಗಿದ್ದಾರೆ.
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಹೆಳವರ ಹುಂಡಿಯಲ್ಲಿ ಮಂಗಳವಾರ ನಡೆದ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ”ಮತ ಹಾಕದಿದ್ದರೆ ನರೇಂದ್ರ ಮೋದಿಯವರ ಆಶೀರ್ವಾದ ಸಿಗುವುದಿಲ್ಲವೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅಹಂಕಾರದಿಂದ ಹೇಳಿದ್ದಾರೆ. ಇದು ಬಸವಣ್ಣ, ಕುವೆಂಪು ಅವರ ನಾಡು. ಅವರ ಆಶೀರ್ವಾದವಿರುವಾಗ ಮೋದಿ ಆಶೀರ್ವಾದ ಬೇಕಾಗಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
”ಈ ಚುನಾವಣೆಯಲ್ಲಿ ಮೋದಿ ಸೇರಿದಂತೆ ಯಾವ ನಾಯಕರೂ ಮುಖ್ಯರಲ್ಲ. ಕರ್ನಾಟಕದ ಜನರಷ್ಟೇ ಮುಖ್ಯ. ನಿಮ್ಮ ಅನುಭವದ ಮೇಲೆ, ಯೋಚಿಸಿ ಮತ ಚಲಾಯಿಸಿ. ಲೂಟಿಕೋರ ಸರ್ಕಾರವನ್ನು ತೆಗೆದು ಹಾಕಿ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ” ಎಂದರು.
ನಂದಿನಿ ವರ್ಸಸ್ ಅಮೂಲ್ ಕುರಿತು ಪ್ರಸ್ತಾಪಿಸಿದ ಅವರು, ”ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ನಂದಿನಿ’ ಬ್ರ್ಯಾಂಡ್‌ಗೆ ಬಲ ತುಂಬುವ ಕೆಲಸ ಮಾಡಲಾಗುವುದು. ಹೊರರಾಜ್ಯದ ಹಾಲು ಉತ್ಪಾದಕ ಸಹಕಾರಿ ಸಂಘಕ್ಕೆ ರಾಜ್ಯದಲ್ಲಿ ಹಾಲು ಮಾರಲು ಅವಕಾಶ ನೀಡುವುದಿಲ್ಲ” ಎಂದೂ ಹೇಳಿದರು.
”ರಾಜ್ಯದಲ್ಲಿ ಈ ಹಿಂದೆ ಹೆಚ್ಚುವರಿ ಹಾಲು ಉತ್ಪಾದನೆಯಾಗುತ್ತಿತ್ತು. ಕೆಎಂಎಫ್ ಅನ್ನು ದುರ್ಬಲಗೊಳಿಸಲು ಬೇಕಂತಲೇ ಹಾಲು ಉತ್ಪಾದನೆ ಕುಂಠಿತವಾಗುವಂತೆ ನೋಡಿಕೊಳ್ಳಲಾಗಿದೆ” ಎಂದು ಪ್ರಿಯಾಂಕಾ ದೂರಿದರು.
ಇದನ್ನೂ ಓದಿ: “ರಾಜ್ಯದ ಜನತೆ ಪ್ರಧಾನಿ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು”: ಜೆ.ಪಿ ನಡ್ಡಾ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು
ಮೋದಿ ಆಶೀರ್ವಾದದ ಹೇಳಿಕೆಗೆ ಅಂದು ಕಾಂಗ್ರೆಸ್ ಕೆಂಡವಾಗಿತ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಿದ್ದರೆ ಕೇಂದ್ರದಿಂದ ಅನುದಾನ ನೀಡುವುದಿಲ್ಲ ಎಂಬ ಅರ್ಥವೇ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.
”ಮೋದಿಯ ಆಶೀರ್ವಾದ ಬೇಕೆಂದರೆ ಬಿಜೆಪಿಗೆ ಮತ ಹಾಕಿ” ಇದು ಜೆ.ಪಿ ನಡ್ಡಾ ಅವರು ಕನ್ನಡಿಗರಿಗೆ ಹಾಕುತ್ತಿರುವ ಬೆದರಿಕೆ. ಬಿಜೆಪಿ ಸರ್ವಾಧಿಕಾರವನ್ನು ಜಾರಿಗೊಳಿಸುತ್ತಿರುವುದಕ್ಕೆ ಈ ಮಾತುಗಳೇ ನಿದರ್ಶನ. ಆಶೀರ್ವಾದ ಮಾಡಬೇಕಿರುವುದು ಜನರೇ ಹೊರತು, ಮೋದಿಯಲ್ಲ. ಒಕ್ಕೂಟ ವ್ಯವಸ್ಥೆ & ಪ್ರಜಾಪ್ರಭುತ್ವದ ಮೇಲೆ ಬಿಜೆಪಿಗೆ ಕಿಂಚಿತ್ ಗೌರವವಿಲ್ಲ” ಎಂದು ಕಾಂಗ್ರೆಸ್ ಟೀಕಿಸಿತ್ತು.


