ʼದಿ ವೈರ್ʼ ಜಾಲತಾಣದಲ್ಲಿ 17 ಡಿಸೆಂಬರ್ 2021ರಂದು ಪ್ರಸಾರವಾದ ಸಂದರ್ಶನದ ಪಠ್ಯರೂಪ. ಸಂದರ್ಶಕರು ಕರಣ್ ಥಾಪರ್
ಪ್ರ: ಮೆಹತಾರವರೇ, ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿರುವ ಏಳು ವರ್ಷಗಳಲ್ಲಿ ಭಾರತ ಸಾಮಾಜಿಕವಾಗಿ, ಉದಾರವಾದಕ್ಕೆ ವಿರೋಧಿಯಾದ, ಬಹುಸಂಖ್ಯಾತರ ಪ್ರಾಬಲ್ಯದ ಮತ್ತು ಅಸಹಿಷ್ಣುತೆಯ ದೇಶವಾಗಿದೆ; ರಾಜಕೀಯವಾಗಿ ಅದು ಸರ್ವಾಧಿಕಾರಿಯಾಗಿದೆ ಎಂದು ಕೆಲವರು ಹೇಳುತ್ತಾರೆ. ಪ್ರಧಾನ ಮಂತ್ರಿಯನ್ನು ಬಹುತೇಕ ದೇವರಿಗೆ ಹೋಲಿಸಲಾಗುತ್ತಿದೆ, ಸಂಸ್ಥೆಗಳು ದುರ್ಬಲಗೊಳ್ಳುತ್ತಿವೆ, ಸ್ವಘೋಷಿತ ಧರ್ಮರಕ್ಷಕ ಗುಂಪುಗಳ ಪುಂಡಾಟಿಕೆ ಹೆಚ್ಚುತ್ತಿದೆ. ಮಾಧ್ಯಮಗಳು ದಮನಕ್ಕೊಳಗಾಗಿವೆ ಇಲ್ಲವೆ ಆರಾಧಿಸುವಂತಹವಾಗಿವೆ. ಇನ್ನು ಕೆಲವರು ಇದು ನಿಜವಲ್ಲ, ಪ್ರಧಾನ ಮಂತ್ರಿಗಳನ್ನು, ಸರ್ಕಾರವನ್ನು ಮತ್ತು ದೇಶವನ್ನೂ ತೆಗಳುವ ಉದ್ದೇಶದಿಂದ ತಯಾರಿಸಲಾದ ಅಭಿಪ್ರಾಯ ಎಂದು ಹೇಳುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉ: ನೀವು ನೀಡಿದ ವರ್ಣನೆ ನಿಖರವಾಗಿದೆ ಎಂದು ನನಗನ್ನಿಸುತ್ತದೆ. ಭಾರತ ಇನ್ನೂ ಹೆಚ್ಚು ಕೋಮುವಾದಿಯಾಗಿದೆ; ಹೆಚ್ಚು ಸರ್ವಾಧಿಕಾರಿಯಾಗಿದೆ – ಇದನ್ನು ಯಾರೂ ಪ್ರಶ್ನಿಸಲಾರರು. ಅಂದರೆ, ಪ್ರಧಾನ ಮಂತ್ರಿಗಳ ಉದ್ದೇಶವೇನು ಎನ್ನುವುದರ ಬಗ್ಗೆ ನಾವು ಮಾತಾಡಬೇಕಾಗಿಲ್ಲ, ಆದರೆ, ಸಂಸ್ಥೆಗಳ ನಡವಳಿಕೆಯ ಗುಣಗಳನ್ನು ಗಮನಿಸಬೇಕು – ಸರ್ವೋಚ್ಛ ನ್ಯಾಯಾಲಯ ಹೇಬಸ್ ಕಾರ್ಪಸ್ (ಕಾಣೆಯಾದವರನ್ನು ಹಾಜರುಪಡಿಸುವಂತೆ ನ್ಯಾಯಾಲಯ ನಿರ್ದೇಶಿಸುವ) ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ; ಬಹುತೇಕ ಎಲ್ಲ ಮಾಧ್ಯಮಗಳು ಅಥವ ಕನಿಷ್ಠ ದೂರದರ್ಶನ (ಟಿವಿ) ಮಾಧ್ಯಮಗಳು ಸಂವಿಧಾನದ ನಾಲ್ಕನೆಯ ಸ್ತಂಭವಾಗಿ ತಮ್ಮ ಪಾತ್ರವನ್ನು ವಹಿಸದೆ ಹೋಗಿವೆ (ನಿಮಗೆ ಎಲ್ಲರಿಗಿಂತ ಹೆಚ್ಚಾಗಿ ಇದರ ಬಗ್ಗೆ ತಿಳಿದಿರುತ್ತದೆ) ಒಂದೊಂದು ಸಂಸ್ಥೆಯನ್ನು ತೆಗೆದುಕೊಂಡರೂ ಹೀಗಾಗುತ್ತಿರುವುದನ್ನು ಗಮನಿಸಬಹುದಲ್ಲವೆ?
ಇತ್ತೀಚೆಗೆ ನೀವು ನೋಡಿದಂತೆ, ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರಧಾನ ಮಂತ್ರಿಯವರನ್ನು ಶಂಕರಾಚಾರ್ಯ ಮತ್ತು ಶಿವಾಜಿಯ ಜೋಡಿಯಾಗಿ ಬಿಂಬಿಸಲಾಯಿತು. ಅಂದರೆ, ಇಡೀ ಪೂಜಾವಿಧಾನವನ್ನು ಅವರ ಸುತ್ತ ರೂಪಿಸಲಾಗಿತ್ತು. ಇದರಿಂದ ಬರೀ ಭಾರತದ ಪ್ರಜಾಪ್ರಭುತ್ವಕ್ಕೆ ಹೊಸ ರೂಪಕೊಡಲಾಗುತ್ತಿಲ್ಲ, ಬದಲಾಗಿ ಬುಡಮೇಲು ಮಾಡುವ ರೀತಿಯಲ್ಲಿ ಹಿಂದೂ ಧರ್ಮದ ಧಾರ್ಮಿಕತೆ ಮತ್ತು ಧಾರ್ಮಿಕ ಪ್ರಕಾರಗಳನ್ನು ಒಂದು ರೀತಿಯಲ್ಲಿ ಮರುನಿರ್ಮಿಸಲಾಗುತ್ತಿದೆ. ಯಾವುದೇ ಗುಣವನ್ನು ತೆಗೆದುಕೊಂಡರೂ, ಭಾರತ ಹೆಚ್ಚು ಕೋಮುವಾದಿ ಮತ್ತು ಸರ್ವಾಧಿಕಾರಿಯಾಗಿದೆ.
ಇದಕ್ಕೆ ನಾನು ಒಂದೇ ಒಂದು ವಿಶೇಷಣವನ್ನು ಕೊಡುತ್ತೇನೆ. ಈ ವಿಚಾರದಲ್ಲೇ ಬಿಜೆಪಿಯ ಬೆಂಬಲಿಗರು ಟೀಕೆಯನ್ನು ಹಿಂದಕ್ಕೆ ನೂಕುತ್ತಾರೆ, ಅದೇನೆಂದರೆ ಈ ಸರ್ವಾಧಿಕಾರಕ್ಕೆ ಒಂದು ನಿಜವಾದ ಪ್ರಜಾಪ್ರಭುತ್ವದ ಶಕ್ತಿಯಿದೆ, ಅಂದರೆ ಅದಕ್ಕೆ ಜನಪ್ರಿಯವಾದ ಬೇರುಗಳಿವೆ. ಆದ್ದರಿಂದಲೇ, ಅದು ಕೆಲವು ರೀತಿಗಳಲ್ಲಿ ಹೆಚ್ಚು ಕಳವಳಕಾರಿಯಾಗಿದೆ. ಮೋದಿ ಜನಪ್ರಿಯ ವ್ಯಕ್ತಿ. ಒಂದರ್ಥದಲ್ಲಿ ಚುನಾವಣೆಗಳನ್ನು ಗೆಲ್ಲುವುದರಿಂದ ಭಾರತದ ಸಾಂಸ್ಥಿಕ ಭೂಮಿಕೆಯನ್ನು ಬದಲಾಯಿಸಲು ಸಮರ್ಥರಾಗಿದ್ದಾರೆ. ಈ ಕಾರಣಕ್ಕಾಗಿಯೇ ಈ ಕಾಲದ ಬಗ್ಗೆ ಚಿಂತಿಸುವುದು ಹೆಚ್ಚು ಜಟಿಲವಾಗಿದೆ.

ಪ್ರ: ಈ ಕೋಮುವಾದ ಮತ್ತು ಈ ಸರ್ವಾಧಿಕಾರಗಳಿಗೆ ಪ್ರಜಾಪ್ರಭುತ್ವದ ಬೇರುಗಳಿವೆ ಎಂದು ನೀವು ಹೇಳಿದಾಗ, ಈ ಸರ್ಕಾರದ ಮತ್ತು ಅದರ ನೀತಿಗಳ, ಬಹುಸಂಖ್ಯಾತರು ಎಸಗುವ ದಬ್ಬಾಳಿಕೆಯ, ಸ್ವರೂಪವನ್ನು ಭಾರತದ ಜನರು ಬೆಂಬಲಿಸುತ್ತಾರೆ ಎಂದು ಸೂಚಿಸುತ್ತಿದ್ದೀರಾ? ಜೊತೆಗೆ, ಮೋದಿ ಸರ್ವಾಧಿಕಾರಿ ಎನ್ನುವ ಹಾಗೆ ಆಳುವುದನ್ನೂ ಜನ ಬೆಂಬಲಿಸುತ್ತಾರೆ ಎಂದು ಹೇಳುತ್ತಿರುವಿರಾ? ಇದು ಜನರು ತಮ್ಮನ್ನು ಹೇಗೆ ಆಳಿಸಿಕೊಳ್ಳಬೇಕೆಂದು ಬಯಸುತ್ತಾರೆ ಎನ್ನುವುದನ್ನು ಬಂಬಿಸುತ್ತದೆಯೆ?
ಉ: ಇದು ಮೂರು ವಿಷಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ನನಗೆ ತೋರುತ್ತದೆ. ಸಮಾಜದ ಉತ್ಕೃಷ್ಠರ(ಎಲೀಟ್ಸ್) ಅಭಿಪ್ರಾಯದ ಮಟ್ಟದಲ್ಲಿ ಖಂಡಿತವಾಗಿ ಮೋದಿಯವರಿಗೆ ಮತ್ತು ಕೋಮುವಾದಿ ಹಾಗು ಸರ್ವಾಧಿಕಾರಿ ಕಾರ್ಯಸೂಚಿಗೆ (ಅಜೆಂಡ) ಆಳವಾದ ಮತ್ತು ವ್ಯಾಪಕ ಬೆಂಬಲವಿದೆ. ಇದು ಭಾರತದ ಬಂಡವಾಳದ ಸಹಾಯವಿಲ್ಲದೆ ಮತ್ತು ಮಾಹಿತಿ ವ್ಯವಸ್ಥೆಯನ್ನು (ಇನ್ಫರ್ಮೇಷನ್ ಆರ್ಡರ್) ಹೇಗೆ ಹುಟ್ಟುಹಾಕಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ ಎನ್ನುವ ಸಂಗತಿಗಳ ಸಹಾಯವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ.
ಭಾರತದ ವೃತ್ತಿಪರರು ಮತ್ತು ಮಧ್ಯಮ ವರ್ಗ ಶಾಮೀಲಾಗದೆ ಇದು ಸಾಧ್ಯವಾಗುತ್ತಿರಲಿಲ್ಲ. ಮತದಾರರನ್ನು ಕುರಿತು ಹೇಳುವುದಾದರೆ, ಅವರು ಈ ಕಾರಣಕ್ಕಾಗಿ ಮೋದಿಯವರನ್ನು ಶಿಕ್ಷಿಸುತ್ತಿಲ್ಲ. ಇನ್ನೊಂದು ರೀತಿ ಹೇಳುವುದಾದರೆ – ನಾಗರಿಕ ಸಮಾಜದ ವ್ಯಾಖ್ಯಾನವನ್ನು (ಡಿಸ್ಕೋರ್ಸ್) ಗಮನಿಸಿದರೆ – ಉದಾಹರಣೆಗೆ, ಶುಕ್ರವಾರದ ಪ್ರಾರ್ಥನೆಗಳನ್ನು ಪ್ರತಿ ವಾರವೂ ತಡೆಯಲಾಗುತ್ತಿದ್ದರೂ ಯಾವುದೇ ಗಂಭೀರವಾದ ನಾಗರಿಕ ಸಮಾಜದ ಪ್ರತಿಭಟನೆಯಿಲ್ಲದಿರುವುದು – ಇದರಲ್ಲಿ ನಾಗರೀಕ ಸಮಾಜ ಸಕ್ರಿಯವಾಗಿ ಭಾಗವಹಿಸದಿದ್ದರೂ – ಅದು ಇನ್ನೂ ಹೆಚ್ಚು ಶಾಮೀಲಾಗಿದೆ ಎಂದು ಸೂಚಿಸುತ್ತದೆ.
ಪ್ರ: ಸ್ವಲ್ಪ ಹೊತ್ತಿನಲ್ಲೇ ವಿವರಗಳಿಗೆ ಬರುತ್ತೇನೆ. ಅದಕ್ಕೆ ಮುಂಚೆ ಇನ್ನೊಂದು ಸಾಮಾನ್ಯ ಪ್ರಶ್ನೆಯನ್ನು ಕೇಳುತ್ತೇನೆ. ಈ ಎಲ್ಲ ಸಂಗತಿಗಳು ಕಳೆದ ಏಳು ವರ್ಷಗಳಲ್ಲಿ ಕಾಕತಾಳೀಯವಾಗಿ ನಡೆದಿವೆಯೆ, ಅಥವ ಸರ್ಕಾರ ಮತ್ತು ಮೋದಿ ಈಗ ಆಗಿರುವ ಈ ರೂಪಾಂತರಕ್ಕೆ ಜವಾಬ್ದಾರರೇ?
ಉ: ಈ ಪ್ರಶ್ನೆಯನ್ನು ಎರಡು ಮಟ್ಟಗಳಲ್ಲಿ ಸ್ವೀಕರಿಸಬಹುದು. ಒಂದು, ಈಗ ನಡೆದಿರುವ ಸಂಗತಿಗಳು ಒಂದು ದೀರ್ಘವಾದ ಇತಿಹಾಸದ ಉತ್ಪನ್ನಗಳು. ಹಾಗೂ, ನಾವು ಹಿಂದೂ ರಾಷ್ಟ್ರೀಯತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಕಳೆದ ನೂರು ವರ್ಷಗಳಲ್ಲಿ ಭಾರತೀಯ ನಾಗರಿಕತೆಯ ಸ್ವರೂಪ ಮತ್ತು ಅಸ್ಮಿತೆಯ (ಐಡೆಂಟಿಟಿ) ಬಗ್ಗೆ ನಡೆದಿರುವ ಸಂವಾದವನ್ನು ಗಮನಿಸಬೇಕು. ಅದರಲ್ಲೂ ನಿರ್ದಿಷ್ಟವಾಗಿ ಭಾರತೀಯ ನಾಗರಿಕತೆಯಲ್ಲಿ ಮುಸಲ್ಮಾನರ ಸ್ಥಾನದ ಬಗ್ಗೆ ಸಂವಾದವನ್ನು ಗಮನಿಸಬೇಕು. ಆದ್ದರಿಂದ, ಒಂದು ಮಟ್ಟದಲ್ಲಿ, ಇದಕ್ಕೆ ಆಳವಾದ ಬೇರುಗಳಿವೆ. ಒಂದು ಊಹೆಯ ಪ್ರಶ್ನೆಯನ್ನು ಕೇಳುವುದಾದರೆ, ಅಂದರೆ “ಹೀಗಾಗದಿದ್ದರೆ ಏನಾಗುತ್ತಿತ್ತು” ಎಂದು (ಕೌಂಟರ್ ಫಾಕ್ಚುಯಲ್) ಕೇಳುವುದಾದರೆ, ಗಾಂಧಿಯ ಹತ್ಯೆ ನಡೆಯದೆ ಹೋಗಿದ್ದರೆ 1950ರ ದಶಕದಲ್ಲಿ ನಾವು ನೋಡಿದುದಕ್ಕಿಂತ ಹೆಚ್ಚು ವೇದ್ಯವಾಗಿ ಈ ರೀತಿಯ ಸಂಗತಿಯನ್ನು ಕಾಣಲು ಅವಕಾಶವಿರತ್ತಿತ್ತೆ?
ಮೋದಿ ಮತ್ತು ಬಿಜೆಪಿ ಯಾವ ರೀತಿಯಲ್ಲಿ ಇದಕ್ಕೆ ಜವಾಬ್ದಾರರೆಂದರೆ, ಅವರು ಇದನ್ನು ಕೇವಲ ಔಚಿತ್ಯಪೂರ್ಣಗೊಳಿಸಿಲ್ಲ, ಬದಲಾಗಿ ಪ್ರತಿಯೊಂದು ವೇದಿಕೆಯಲ್ಲೂ ಉತ್ತೇಜಿಸಿದ್ದಾರೆ. ಸಮಾಜದಲ್ಲಿ ಇವು ಹುದುಗಿರುವ ಪ್ರವೃತ್ತಿಗಳು ಎಂದು ಹೇಳುವುದು, ಅಂದರೆ ಯಾವಾಗಲೂ 15ರಿಂದ 20 ಪ್ರತಿಶತ ಜನ ಇಂತಹ ವಿಷಯಗಳನ್ನು ನಂಬಿರುವವರಿರುತ್ತಾರೆ, ಅವರು ನಮ್ಮ ಸಂವಿಧಾನಬದ್ಧ ಪ್ರಜಾಪ್ರಭುತ್ವವನ್ನು ಉರುಳಿಸುವ ಕೃತ್ಯಗಳಲ್ಲಿ ಭಾಗವಹಿಸಲು ಸಿದ್ಧವಾಗಿದ್ದಾರೆ ಎಂದು ಹೇಳುವುದು ಒಂದು ರೀತಿಯ ಮಾತು. ಆದರೆ, ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿರುವವರು ಇದನ್ನು ನಿರಂತರವಾಗಿ ಸಮರ್ಥಿಸುತ್ತ, ಅದಕ್ಕೆ “ಡಾಗ್ ವಿಸಲ್”೧ ಕೊಡುತ್ತಾರೆ; ಅದು ಆ ಜನರಿಗೆ ಎಷ್ಟು ಆಕರ್ಷಕವಾಗಿರುತ್ತದೆಯೆಂದರೆ ಅದನ್ನು ತಡೆಯಲು ಅಸಾಧ್ಯವಾಗುವಂತೆ ಮಾಡುತ್ತಾರೆ ಎಂದು ಹೇಳುವುದು ಇನ್ನೊಂದು ರೀತಿಯ ಮಾತು..
ಪ್ರ: ಈ ಘಟ್ಟದಲ್ಲಿ ನಾವು ವಿವರಗಳಿಗೆ ಬರೋಣ. ನನ್ನ ಮೊದಲನೆಯ ಪ್ರಶ್ನೆಯಲ್ಲಿ ಉಲ್ಲೇಖಿಸಿದ ಎಲ್ಲ ಅಂಶಗಳನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ, ಆದರೆ ಅವುಗಳಲ್ಲಿ ಬಹಳ ಮುಖ್ಯವಾದ ಮೊದಲನೆಯ ನಾಲ್ಕನ್ನು ಆರಿಸಿಕೊಳ್ಳುತ್ತೇನೆ. ಭಾರತದಲ್ಲಿ ಮುಕ್ತವಾದ ಮತ್ತು ನಿಷ್ಪಕ್ಷಪಾತವಾದ ಚುನಾವಣೆಗಳು ನಡೆಯುತ್ತಿವೆ ಮತ್ತು ಆಗಾಗ ಸರ್ಕಾರಗಳು ಬದಲಾಗುತ್ತಿರುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ, ಅತಿಮುಖ್ಯವಾದ ಸಂಸ್ಥೆಗಳಾದ ಸಂಸತ್ತು, ಮಂತ್ರಿ ಮಂಡಲ, ಚುನಾವಣಾ ಆಯೋಗಗಳು ತುರ್ತುಪರಿಸ್ಥಿತಿಯಿಂದ ಈಗಿನವರೆಗೆ ತೆಗೆದುಕೊಂಡರೆ ಎಂದೆಗಿಂತಲೂ ದುರ್ಬಲವಾಗಿವೆ ಎನ್ನುವುದನ್ನು ನೀವು ಒಪ್ಪಿತ್ತೀರಾ? ಭಾರತದ ಪ್ರಜಾಪ್ರಭುತ್ವದ ಸ್ಥಿತಿಯನ್ನು ಹೇಗೆ ಕಾಣುತ್ತೀರಿ?
ಉ: ಭಾರತದ ಪ್ರಜಾಪ್ರಭುತ್ವದ ಸ್ಥಿತಿ ಅಪಾಯಕಾರಿಯಾಗಿದೆ. ಸಂಸತ್ತು ಹೆಚ್ಚುಕಮ್ಮಿ ಹೆಸರಿನಲ್ಲಿ ಮಾತ್ರ ಉಳಿದುಕೊಂಡಿದೆ (ರಬ್ಬರ್ ಸ್ಟ್ಯಾಂಪ್), ಏಕೆಂದರೆ ಮಸೂದೆಗಳನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗುತ್ತದೆ; ಸರ್ವೋಚ್ಛ ನ್ಯಾಯಾಲಯ ತನ್ನ ಜವಾಬ್ದಾರಿಯಿಂದ ಕೈತೊಳೆದುಕೊಂಡಿರುವುದು ಎಲ್ಲಕ್ಕಿಂತ ಕಣ್ಣಿಗೆ ರಾಚುವಂತಹದ್ದು ಹಾಗು ನಿರಾಸೆಗೊಳಿಸುವಂತದ್ದು. ಕೆಲವು ರೀತಿಗಳಲ್ಲಿ, ಇದು ತುರ್ತು ಪರಿಸ್ಥಿತಿಗಿಂತಲೂ ಕೆಟ್ಟದ್ದು ಏಕೆಂದರೆ ವ್ಯಾಪಕವಾದ ನ್ಯಾಯಪ್ರದಾನದ ವಿಷಯಗಳಿಗೆ ಸಂಬಂಧಪಟ್ಟಂತೆ ಸರ್ವೋಚ್ಛ ನ್ಯಾಯಾಲಯ ಸರ್ಕಾರವನ್ನು ಸಂವಿಧಾನದ ತಳಹದಿಯ ಆಧಾರದ ಮೇಲೆ ಪ್ರಶ್ನಿಸುತ್ತಿಲ್ಲ. ಪತ್ರಿಕೆಗಳ ಬಗ್ಗೆ ಒಂದು ರೀತಿಯಲ್ಲಿ ನೀವು ಈಗಾಗಲೇ ಮಾತನಾಡಿದ್ದೀರಿ; ಪತ್ರಿಕೆಗಳು ಮತ್ತು ಚುನಾವಣಾ ಆಯೋಗ ಅಂಚಿನಲ್ಲಿ ಉಳಿದುಕೊಂಡಿವೆ.

ಹೌದು, ಜನರು ಚುನಾವಣೆಗಳ ನ್ಯಾಯಬದ್ಧತೆಯನ್ನು ಪ್ರಶ್ನಿಸುವ ಮಟ್ಟಿಗೆ ಪರಿಸ್ಥಿತಿ ಹೋಗಿಲ್ಲ ಎಂದು ತಿಳಿದಿದ್ದೇನೆ. ಆದರೆ, ಚಿಂತೆಯಾಗುವಂತಹ ಸಂಕೇತಗಳು ಇವೆ.
ಪ್ರ: ಸರ್ವೋಚ್ಛ ನ್ಯಾಯಾಲಯದ ವಿಷಯಕ್ಕೆ ಸ್ವಲ್ಪದರಲ್ಲೇ ಬರುತ್ತೇನೆ. ನಮ್ಮ ರಾಜಕೀಯದ ಸ್ಥಿತಿಯ ಬಗ್ಗೆ ಇನ್ನಷ್ಟು ಆಳವಾಗಿ ಅಗೆದು ನೋಡಲು ಬಯಸುತ್ತೇನೆ. ಏನಾಗುತ್ತಿದೆ ಅಂದರೆ, ಒಂದು ಕಡೆ ಅಂಕೆಯಲ್ಲಿಡುವ ನಿರ್ಬಂಧಗಳು (ಚೆಕ್ಸ್ ಅಂಡ್ ಬ್ಯಾಲೆನ್ಸಸ್) ಕುಗ್ಗುತ್ತಿವೆ, ಮತ್ತೊಂದೆಡೆ ಪ್ರಧಾನ ಮಂತ್ರಿ ಎಲ್ಲದರಲ್ಲೂ ಮೇಲ್ಗೈ ಪಡೆಯುತ್ತಿರುವುದು (ಡಾಮಿನೆನ್ಸ್) ಹೆಚ್ಚುತ್ತಿದೆ – ನಾನು ಹೇಳುತ್ತಿರುವುದು ಪ್ರಧಾನ ಮಂತ್ರಿಗಳ ಕಚೇರಿಯ ಪ್ರಾಬಲ್ಯದ ಬಗ್ಗೆ. ಅದು ನಮ್ಮ ಸರ್ಕಾರದ ಅತ್ಯಂತ ಶಕ್ತಿಶಾಲಿಯಾದ ಸಂಸ್ಥೆ. ಅದು ಹಿಂದೆಂದಿಗಿಂತಲೂ ಹೆಚ್ಚು ಪ್ರಬಲವಾಗಿರುವುದಲ್ಲದೆ ನರೇಂದ್ರ ಮೋದಿಯವರ ಸುತ್ತ ವ್ಯಕ್ತಿತ್ವದ ಆರಾಧನೆಯೂ ಹೊಮ್ಮಿದೆ. ಈ ಎರಡರ ಜೋಡಣೆ – ಅಂದರೆ, ವ್ಯಕ್ತಿ ಮತ್ತು ಪ್ರಧಾನ ಮಂತ್ರಿ – ಅವರನ್ನು ಇಷ್ಟು ಪ್ರಬಲವನ್ನಾಗಿಸಿರುವುದು ಎಷ್ಟು ಚಿಂತಾಜನಕವಾಗಿದೆ?
ಉ: ಹಿಂದೆಯೂ ವ್ಯಕ್ತಿ ಆರಾಧನೆಗಳು ನಡೆದಿದ್ದವು, ಅವರಲ್ಲಿ ಅತ್ಯಂತ ಪ್ರಮುಖವಾದವರು ಇಂದಿರಾ ಗಾಂಧಿ. ಅದಕ್ಕೆ ಒಂದು ದೀರ್ಘವಾದ ಸಂಪ್ರದಾಯವಿದೆ, ಮತ್ತು ಸ್ವಲ್ಪ ಮಟ್ಟಿಗೆ ಪ್ರಜಾಪ್ರಭುತ್ವ ತನ್ನನ್ನು ವ್ಯಕ್ತಪಡಿಸಿಕೊಳ್ಳುವುದು (ಸೆಲ್ಫ್-ಎಕ್ಸ್‌ಪ್ರೆಶನ್) ವ್ಯಕ್ತಿತ್ವದ ಜೊತೆಗೆ ಬರುತ್ತದೆ.
ಮೋದಿಯವರು ಈ ಅಸಾಧಾರಣ ಜನಪ್ರಿಯತೆ ಮತ್ತು ಅಧಿಕಾರವನ್ನು ಯಾವುದಕ್ಕೆ ಬಳಸುತ್ತಾರೆ ಎನ್ನವುದು ನಮಗೆ ಚಿಂತಾಜನಕ ವಿಷಯ. ಅವರು ಈ ಎರಡನ್ನೂ, ಸಂಸ್ಥೆಗಳನ್ನು ದುರ್ಬಲಗೊಳಿಸುವುದಕ್ಕೆ ಬಳಸಿದರೆ ಅದು ಭಾರತಕ್ಕೆ ಒಳ್ಳೆಯ ಮುನ್ಸೂಚನೆಯಲ್ಲ. ಪ್ರತಿ ಹೆಜ್ಜೆಗೂ ಈಗ ಹಾಗೆಯೇ ಮಾಡುತ್ತಿದ್ದಾರೆ. ಅವರು ಸ್ವಾಭಾವಿಕವಾದ ಪ್ರಜಾಪ್ರಭುತ್ವವಾದಿಯಲ್ಲ. ಅವರ ಒಲವುಗಳು ನಾಶಮಾಡುವುದರಲ್ಲಿವೆ, ಬೆಳೆಸುವುದರಲ್ಲಿಲ್ಲ. ಬಹಳ ಮುಖ್ಯವಾಗಿ, ಅವರು ತಮ್ಮ ಅನುಯಾಯಿಗಳಲ್ಲಿ ಕೋಮುವಾದಕ್ಕೆ ಉತ್ತೇಜನ ನೀಡುತ್ತಿರುವುದು [“ಡಾಗ್ ವಿಜ಼ಲ್”] ನಮ್ಮ ನಾಗರಿಕ ಸಮಾಜದಲ್ಲಿ ಒಂದು ರೀತಿಯ ವಿಷವನ್ನು ಹರಡುತ್ತಿದೆ. ಈಚಿನ ವರ್ಷಗಳಲ್ಲಿ ಹಿಂದೆಂದೂ ನಡೆಯದ ರೀತಿಯಲ್ಲಿ ಅದು ಹರಡುತ್ತಿದೆ.
ಇದಕ್ಕೆ ಇನ್ನೊಂದು ಗೌಣವಾದ ಮಗ್ಗುಲೂ ಇದೆ. ಅದನ್ನು ಈ ಹೊತ್ತಿನಲ್ಲಿ ಗಮನಿಸಬೇಕು. ವ್ಯಕ್ತಿ ಆರಾಧನೆಯ ಪಂಥಗಳು ದೀರ್ಘಾವಧಿಯಲ್ಲಿ ಆಡಳಿತ ನಡೆಸಲು ಕಷ್ಟಪಡುತ್ತವೆ ಎನ್ನುವ ಸಂಗತಿ ನಮಗೆ ಇತಿಹಾಸದಿಂದ ತಿಳಿದಿದೆ.
ಭಾರತದ ನಾಗರಿಕ ಸಮಾಜದಲ್ಲಿ ನಾವು ನೋಡುತ್ತಿರುವ ಹಲವು ಸಂಗತಿಗಳಲ್ಲಿ ಒಂದು ಮುಖ್ಯವಾದುದೆಂದರೆ ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಮತ್ತು ಸಂಸ್ಥೆಗಳ ಮೂಲಕ ನಡೆಯಬಹುದಾಗಿದ್ದ ರಾಜಕೀಯ ಈಗ ಬೀದಿಗಳಿಗೆ ಬರುತ್ತಿದೆ. ಇದನ್ನು ನಾವು ರೈತರ ಚಳವಳಿಯಲ್ಲಿ ಮತ್ತು ಸಿಎಎ ಚಳವಳಿಯಲ್ಲಿ ನೋಡಿದೆವು. ಮತ್ತೊಂದು ರೀತಿಯಲ್ಲಿ ನೋಡುವುದಾದರೆ, ಕೇವಲ ಪಿಎಂಒ ಅವರ ಕಚೇರಿಯ ಸುತ್ತ ನಡೆಯುವ ರಾಜಕೀಯ – ಅಂದರೆ ಪ್ರಜಾಪ್ರಭುತ್ವದ ಸಮಾಲೋಚನೆಯ ಪ್ರಕ್ರಿಯೆಗಳಿಲ್ಲದೆ ನಡೆಯುವಂತಹವು – ದೀರ್ಘಾವಧಿಯಲ್ಲಿ ನಮಗೆ ಬೇಕಾದ ಮಾದರಿಯ ಆಡಳಿತವನ್ನು ನೀಡಲಾರವು ಎನ್ನುವುದನ್ನು ಪ್ರಧಾನ ಮಂತ್ರಿಗಳು ಒಪ್ಪಿಕೊಳ್ಳಬೇಕಾಯಿತು.
ಪ್ರ: ಅವರ ಪ್ರಭೆಗೆ ಸ್ವಲ್ಪವಾದರೂ ಧಕ್ಕೆಯುಂಟಾಗಿದೆಯೆ? ಇದಕ್ಕಿಂತ ತೀವ್ರವಾಗಿ ನಾನು ಈ ವಿಷಯವನ್ನು ಬಣ್ಣಿಸುವುದಿಲ್ಲ. ಅವರು ರೈತರ ಮುಂದೆ ಕುಸಿಯಬೇಕಾಯಿತಲ್ಲವೇ?
ಉ: ಆಸಕ್ತಿಕರವಾಗಿ, ಅವರಿಗಿರುವ ಅನುಯಾಯಿಗಳೆಂಬ ಆಧಾರದಲ್ಲೇ (ಬೇಸ್) ಅವರ ಪ್ರಭೆಗೆ ಹಾನಿಯಿಂಟಾಗಿದೆ. ಮೊದಲ ಬಾರಿಗೆ ಅವರ ಆಧಾರ ನಿರಾಸೆಗೊಂಡಿದೆ, ಏಕೆಂದರೆ ಇಂತಹ ಚಳವಳಿಗಳನ್ನು ಹತ್ತಿಕ್ಕುವುದಕ್ಕೋಸ್ಕರವೇ ಅನುಯಾಯಿಗಳು ಅವರನ್ನು ಚುನಾಯಿಸಿದರು. ಆದರೆ, ಇದು ದೀರ್ಘಾವಧಿಯ ರಾಜಕೀಯ ಮಹತ್ವವನ್ನು ಹೊಂದಿದೆ ಎಂದು ನನಗನ್ನಿಸುವುದಿಲ್ಲ, ಯಾಕೆಂದರೆ ಅವರ ಆಧಾರ ಬೇರೆ ದಿಕ್ಕಿಗೆ ಬದಲಾಗುವುದಿಲ್ಲ.

ಪ್ರ: ಆದರೆ, ಅವರನ್ನು ಮೆಚ್ಚುವವರ ಕಣ್ಣುಗಳಲ್ಲಿ ಅವರ ಅಜೇಯತ್ವ ತನ್ನ ಹೊಳಪನ್ನು ಸ್ವಲ್ಪವೂ ಕಳೆದುಕೊಂಡಿಲ್ಲವೇ?
ಉ: ಖಂಡಿತ ಹೌದು. ಆದರೆ, ಇದೊಂದು ಅಪಾಯಕಾರಿ ಸಂಗತಿ ಕೂಡ, ಏಕೆಂದರೆ ಅವರು ತಮ್ಮ ಪ್ರಯತ್ನದಿಂದ ಇದನ್ನು ಬೇರೆ ಕಡೆ ಸರಿದೂಗಿಸಿಕೊಳ್ಳುತ್ತಾರೆ. ಆ ತಂತ್ರೋಪಾಯ ಏನಿರಬಹುದೆಂದು ನನಗೆ ಗೊತ್ತಿಲ್ಲ.
ಪ್ರ: ಒಂದು ಪ್ರಜಾಪ್ರಭುತ್ವದಲ್ಲಿ, ಸರ್ಕಾರ ಹಾಗು ಪ್ರಧಾನ ಮಂತ್ರಿಗಳ ಅಧಿಕಾರ ಮತ್ತು ಪ್ರಭಾವಗಳಿಗೆ ಪರಿಮಿತಿ ಹಾಕುವುದರಲ್ಲಿ ವಿರೋಧ ಪಕ್ಷಗಳಿಗೆ ಮೂಲ ಪಾತ್ರವಿದೆ. ಎರಡನೆಯದಾಗಿ, ಆಳುವ ಪಕ್ಷದ ಒಳಗೇ ಇರುವ ಸಂಸತ್ ಸದಸ್ಯರೂ ಈ ಜವಾಬ್ದಾರಿಯನ್ನು ವಹಿಸಬಲ್ಲರು. ಅವರಿಗೆ ಎದ್ದು ನಿಂತು “ನಾವು ಒಪ್ಪುವುದಿಲ್ಲ … ಇದನ್ನು ಮಾಡಲು ನಮಗೆ ಬೇಕಾಗಿಲ್ಲ” ಎಂದು ಹೇಳುವ ಸಾಮರ್ಥ್ಯವಿದ್ದರೆ ಇದು ಸಾಧ್ಯ. ಬ್ರಿಟನ್ನಲ್ಲಿ, ಈ ವಾರವಷ್ಟೆ ಹೇಗೆ ಕೈರ್ ಸ್ಟಾರ್ಮರ್ ಮತ್ತು ಇನ್ನೂ ಕೆಲವು ಆಳುವ ಟೋರಿ ಪಕ್ಷದ ಸಂಸತ್ ಸದಸ್ಯರು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಕಾರ್ಯಕ್ಷಮತೆಯನ್ನು ಪ್ರಶ್ನಿಸಿದ್ದನ್ನು ನೋಡಿದೆವು – ಇದು ಜಾನ್ಸನ್ರ ಪ್ರಧಾನ ಮಂತ್ರಿಯ ಸ್ಥಾನವನ್ನೇ ಗೌಣವಾಗಿಸುವ ಮಟ್ಟಕ್ಕೆ ಹೋಗಿತ್ತು. ಅಂತಹ ಸವಾಲುಗಳು ಭಾರತದಲ್ಲಿ ಕಣ್ಮರೆಯಾಗಿವೆ. ಅದರ ಪರಿಣಾಮವಾಗಿ ಮೋದಿ ತಮ್ಮ ಪಕ್ಷ ಮತ್ತು ವಿರೋಧ ಪಕ್ಷಗಳ ಮೇಲೆ ಅಂಕೆಯಿಲ್ಲದೆ ಸವಾರಿಮಾಡುತ್ತಿದ್ದಾರೆ.
ಇ: ಈ ಪ್ರಶ್ನೆ ಇನ್ನೂ ಹೆಚ್ಚು ಚಿಂತನೆಯನ್ನು ಬಯಸುತ್ತದೆ. ಏಕೆಂದರೆ, ಭಾರತದಲ್ಲಿ ಇರುವ ಸಮಸ್ಯೆ ಪಕ್ಷಾಂತರ ನಿಷೇಧ ಕಾನೂನು. ಪ್ರಮಾಣಿಕವಾಗಿ ಹೇಳುವುದಾದರೆ, ಅದು ವ್ಯಕ್ತಿಗಳಾಗಿ ಅಥವ ಸಣ್ಣ ಗುಂಪುಗಳಾಗಿ ಸಂಸತ್ ಸದಸ್ಯರಿಗಿದ್ದ ಶಕ್ತಿಯನ್ನು ಕುಗ್ಗಿಸಿತು.
ಪ್ರ: ಅದು ಪಕ್ಷದ ನಾಯಕರನ್ನು ಸರ್ವಾಧಿಕಾರಿಗಳನ್ನಾಗಿ ಮಾಡುತ್ತದೆ.
ಉ: ಖಂಡಿತ ಹೌದು. ಸಂಸತ್ ಸದಸ್ಯರು ಅವರ ಜೊತೆಗೆ ಇನ್ನೂ ಅನೇಕ ಸದಸ್ಯರ ಸಾಕಷ್ಟು ಸಂಖ್ಯಾಬಲ ಹೊಂದಿಲ್ಲವಾದರೆ ಪ್ರತಿಭಟಿಸಲು ಸಾಧ್ಯವೇ ಇಲ್ಲ. ಅಂದರೆ, ಪಕ್ಷದ ಅರ್ಧದಷ್ಟು ಸದಸ್ಯರು ಪ್ರತಿಭಟಿಸಿದರೆ ಮಾತ್ರ ಸಾಮೂಹಿಕ ಕಾರ್ಯಾಚರಣೆ ಸಾಧ್ಯ. ಹೀಗಾಗುವುದು ಬಹಳ ಕಷ್ಟ. ಇದು ಒಂದು ರಚನಾತ್ಮಕ ಸಮಸ್ಯೆ (ಸ್ಟ್ರಕ್ಚರಲ್ ಪ್ರಾಬ್ಲಮ್).
ಮತ್ತೊಂದು ಸಮಸ್ಯೆಯಿದೆ. ಭಾರತದ ಪ್ರಜಾಪ್ರಭುತ್ವ ತನ್ನ ಉಳಿವಿಗೇ ಕಂಟಕ ಎದುರಿಸುತ್ತಿರುವಾಗ (ಎಗ್ಸಿಸ್ಟೆನ್ಶಿಯಲ್ ಕ್ರೈಸಿಸ್) ವಿರೋಧ ಪಕ್ಷಗಳು ಬೇಕಾಗಿರುವ ಮಟ್ಟಿಗೆ ಒಗ್ಗಟ್ಟಾಗುತ್ತಿಲ್ಲ. ಇಂತಹ ಒಂದು ಕಾಲಘಟ್ಟದಲ್ಲಿ, ಭಿನ್ನಮತಗಳನ್ನು ಬದಿಗೆ ಸರಿಸಿ ಒಟ್ಟಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದರೆ ಭಾರತದ ಪ್ರಜಾಪ್ರಭುತ್ವವನ್ನು ಉಳಿಸುವ ಮಹಾ ಯುದ್ಧದಲ್ಲಿ ವಿರೋಧ ಪಕ್ಷಗಳ ಬಗ್ಗೆ ಒಳ್ಳೆಯ ಮಾತನ್ನಾಡಲು ಸಾಧ್ಯವಿಲ್ಲ ಎಂದೇ ಅರ್ಥ.
ಪ್ರ: ಈ ಭಾಗದ ಸಂದರ್ಶದ ಸಾರಾಂಶವನ್ನು ಹೀಗೆ ಹೇಳಲು ಬಯಸುತ್ತೇನೆ. ಕಳೆದ ಏಳು ವರ್ಷಗಳಲ್ಲಿ ಮೋದಿಯವರ ಅಡಿಯಲ್ಲಿ ಭಾರತದ ಪ್ರಜಾಪ್ರಭುತ್ವ ಕುಗ್ಗಿದೆ ಎಂದು ನೀವು ಒಪ್ಪಿಕೊಳ್ಳುವಿರೇನು? – ಪ್ರಧಾನ ಮಂತ್ರಿ ಸರ್ವಾಧಿಕಾರಿಯಾಗಿ ಹೊಮ್ಮಿದ್ದಾರೆ, ಚರ್ಚೆಗಳು ಕೊನೆಗೊಂಡಿವೆ, ಸಂಸತ್ತು ಭಾಗಶಹ ಕೆಲಸಮಾಡುತ್ತಿದೆ, ಸಂಸತ್ ಸದಸ್ಯರ ಸಮಿತಿಗಳು ರಚನೆಯೇ ಆಗುವುದಿಲ್ಲ. ಆದ್ದರಿಂದ, ಭಾರತದ ಪ್ರಜಾಪ್ರಭುತ್ವ ಕುಗ್ಗಿದೆ ಮತ್ತು ಕ್ಷೀಣವಾಗಿದೆ.
ಉ: ನೀವು ಬಹಳ ಮನೋಜ್ಞವಾಗಿ ವಿವರಿಸಿದ್ದೀರಿ. ನಾನು ಸಂಪೂರ್ಣವಾಗಿ ಒಪ್ಪುತ್ತೇನೆ.
ಪ್ರ: ಅಂದರೆ, ಮೋದಿಯವರ ರಾಜಕೀಯ ಅಂಕಪಟ್ಟಿಯಲ್ಲಿ ಒಂದು ಅಂಕ ಕಮ್ಮಿಯಾದ ಹಾಗಾಯಿತು.
ಉ: ಹೌದು.
ಪ್ರ: ಎರಡನೆಯದಾಗಿ, ಅಸಮ್ಮತಿ ಮತ್ತು ಭಿನ್ನಾಭಿಪ್ರಾಯಗಳ ಸ್ಥಿತಿ ಹೇಗಿದೆ ಎಂದು ನಿಮ್ಮ ಜೊತೆ ಮಾತಾಡಲು ಬಯಸುತ್ತೇನೆ. ಮೊದಲು ಮಾಧ್ಯಮಗಳ ಮೇಲೆ ಗಮನ ಹರಿಸೋಣ. ಅವುಗಳು ಪ್ರಧಾನ ಮಂತ್ರಿಗಳನ್ನು ಎದುರಿಸಲು ಮತ್ತು ಪ್ರಶ್ನಿಸಲು ಸಾಕಾಗುವಷ್ಟು ಏನ್ನಾದರೂ ಮಾಡುತ್ತಿವೆಂದು ನಿಮಗೆ ತೋರುತ್ತದೆಯೆ? ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಕೆಲವು ದಿನಗಳ ಹಿಂದೆ ತನಿಖಾ ಪತ್ರಿಕೋದ್ಯಮ (ಇನ್ವೆಸ್ಟಿಗೇಟಿವ್ ಜರ್ನಲಿನಮ್) ಭಾರತದಲ್ಲಿ ನಿಂತೇ ಹೋಗಿದೆ ಎಂದರು. ಅವರ ಮಾತು ಹೀಗಿದೆ, “ನಮ್ಮ ತೋಟದಲ್ಲಿ ಎಲ್ಲವೂ ಅಂದವಾಗಿರುವಂತೆ ತೋರುತ್ತಿದೆ”.
ಉ: ಸ್ವಲ್ಪ ಮಟ್ಟಿಗೆ ತನಿಖಾ ಪತ್ರಿಕೋದ್ಯಮ ನಿಂತುಹೋಗಿರುವುದಕ್ಕೆ, ಸರ್ವೋಚ್ಛ ನ್ಯಾಯಾಲಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಕಷ್ಟು ಕಾನೂನಿನ ರಕ್ಷಣೆಯನ್ನು ಕೊಡದೆ ಇರುವುದೂ ಕಾರಣ. ನಾನು ಹೇಳುತ್ತಿರುವುದೇನೆಂದರೆ, ಸರ್ವೋಚ್ಛ ನ್ಯಾಯಾಲಯವೂ ಇದರಲ್ಲಿ ಶಾಮೀಲಾಗಿದೆ. ಆದರೆ, ಭಾರತದ ಮಾಧ್ಯಮದ ಸಮಸ್ಯೆ ಇನ್ನೂ ಗಂಭೀರವಾದದ್ದು.
ಅದು ಹೆಚ್ಚು ಗಂಭೀರವಾದದ್ದು. ಯಾವ ಅರ್ಥದಲ್ಲಿ ಅಂದರೆ, ಬೇರೆಬೇರೆ ಕಾರಣಗಳಿಗೆ ಪತ್ರಿಕೋದ್ಯಮ ಸರ್ಕಾರವನ್ನು ತೀವ್ರವಾಗಿ ಎದುರುಹಾಕಿಕೊಳ್ಳದೆ ಇರುವ ಐತಿಹಾಸಿಕ ಸಂದರ್ಭಗಳು ಇವೆ. ಭಾಗಶಹ ಇದಕ್ಕೆ ಕಾರಣ ಅವು ತಮ್ಮ ಆದಾಯಕ್ಕಾಗಿ ಸರ್ಕಾರವನ್ನು ಅವಲಂಬಿಸಿರುತ್ತವೆ. ಭಾರತದ ಮಾಧ್ಯಮಗಳು ಯಾವಾಗಲೂ ಹೀಗೇ ಇದ್ದಿವೆ. ಆದರೆ, ಅವು ಬಹಿರಂಗವಾಗಿ ದ್ವೇಷ ಮತ್ತು ಪೂರ್ವಗ್ರಹವನ್ನು ಬಿತ್ತರಿಸುತ್ತಿರುವುದು ಹೆಚ್ಚು ಮನಕಲಕುವಂತದ್ದು ಮತ್ತು ಕಪಟತನದಿಂದ ಕೂಡಿರುವಂಥದ್ದು.
ಯಾವುದೆ ಹಿಂದಿ ದಿನಪತ್ರಿಕೆಯನ್ನು ಓದಿದರೆ ಪ್ರತಿಯೊಂದು ಪುಟವೂ ಕೋಮುವಾದಿ “ಡಾಗ್ ವಿಜ಼ಲ್ಸ್”*ನಿಂದ ತುಂಬಿರುತ್ತದೆ. ಒಂದೆರಡು ಗೌರವಾನ್ವಿತ ಅಪವಾದಗಳನ್ನು ಬಿಟ್ಟರೆ, ಬಹುತೇಕ ಹಿಂದಿ ದಿನಪತ್ರಿಕೆಗಳು ಹೀಗಿವೆ. ದೂರದರ್ಶನ (ಟಿವಿ) ವಾಹಿನಿಗಳನ್ನು ನೋಡಿದರೆ – ಅಂದರೆ, ಅವುಗಳಲ್ಲಿ ಅಧಿಕೃತವಾಗಿ ಹೆಚ್ಚು ವೀಕ್ಷಕರನ್ನು ಸೆಳೆಯುವ ವಾಹಿನಿಗಳನ್ನಾದರೂ ನೋಡಿದರೆ – ಅವುಗಳಲ್ಲಿ ಬಹುತೇಕ ವಾಹಿನಿಗಳು ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಬಹಿರಂಗವಾಗಿ ಅಥವ ಮರೆಮಾಚಿ ಪ್ರಚಾರಮಾಡುತ್ತಿರುತ್ತವೆ. ಇದು ಭಾರತದ ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ವಿನಾಶಕಾರಿ ಪಾತ್ರ ತುತ್ತತುದಿಯನ್ನು ಮುಟ್ಟಿರುವುದಕ್ಕೆ ಸೂಚಕವಾಗಿದೆ. ಇದು ಕೇವಲ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಅಥವ ಸರ್ಕಾರವನ್ನು ಪ್ರಶ್ನಿಸದೆ ಇರುವುದಕ್ಕಿಂತ ಬಹಳ ಅಪಾಯಕಾರಿಯಾದದ್ದು.
ಪ್ರ: ಹಾಗಾದರೆ, ಈ ಮಾಧ್ಯಮಗಳು ಮೋದಿಯವರನ್ನು ಬೆಂಬಲಿಸುವುದು, ಅವರನ್ನು ವಿಮರ್ಶೆಮಾಡದೆ ಇರುವುದಷ್ಟೆ ಅಲ್ಲದೆ, ಇನ್ನೂ ಮುಂದೆ ಸಾಗಿ ಮೋದಿ ಸಂಕೇತಿಸುವ ಕೋಮುವಾದ ಮತ್ತು ಸರ್ವಾಧಿಕಾರಗಳನ್ನು ಪ್ರಚಾರಮಾಡುತ್ತಿವೆ ಎಂದು ನೀವು ಹೇಳುತ್ತಿರುವಿರಾ?.
ಉ: ಖಂಡಿತವಾಗಿ. ನೋಡಿ, ಮುಂದೆ ಯಾವುದೊ ಒಂದು ಕಾಲದಲ್ಲಿ ಮೋದಿ ತಮ್ಮ ಸ್ಥಾನವನ್ನು ತ್ಯಾಗ ಮಾಡುತ್ತಾರೆ. ಆದರೆ, ಕೋಮುವಾದ ಎಲ್ಲ ಕಡೆ ಹರಡುತ್ತಿರುವುದರಿಂದ ಮತ್ತು ಬಹಿರಂಗವಾಗಿ ಮಾಧ್ಯಮಗಳಲ್ಲಿ ಅದಕ್ಕೆ ಮನ್ನಣೆ ಸಿಗುತ್ತಿರುವುದರಿಂದ ಇಡೀ ಭಾರತದ ಪ್ರಜಾಪ್ರಭುತ್ವಕ್ಕೆ ಮತ್ತು ಭಾರತದ ನಾಗರಿಕ ಸಮಾಜಕ್ಕೆ ಹಾನಿಯಾಗುತ್ತಿದೆ. ಇದು ಹಿಂದೆಂದೂ ನಡೆದಿರಲಿಲ್ಲ.

ಪ್ರ: ಆದರೆ, ಈಗಲೂ ವಿಮರ್ಶೆಮಾಡುವ ಕೆಲವು ಸಣ್ಣ, ಬಹುಶಃ ಕುಗ್ಗಿರುವ, ಮಾಧ್ಯಮಗಳಿಗೆ ಏನಾಗುತ್ತದೆ ಎಂದು ಗಮನಿಸಿ. ಬರೀ ಮೋದಿಯವರನ್ನಲ್ಲ, ಸರ್ಕಾರವನ್ನು ಟೀಕೆಮಾಡಿದರೂ ಅಂತಹವರ ಮೇಲೆ ಆಕ್ರಮಣಕಾರಿ ಟೀಕೆಗಳ ಮಳೆಯೇ ಸುರಿಯುತ್ತದೆ. ರಾಜ್ಯ ಸರ್ಕಾರಗಳೂ ಸಹ ದೇಶದ್ರೋಹ (ಸೆಡಿಶನ್) ಕಾನೂನಿನ ಬಳಸುತ್ತಿವೆ. 2016ರಿಂದ 2019ರವರೆಗೆ 165% ರಷ್ಟು ಸೆಡಿಶನ್ ಕೇಸುಗಳು ಹೆಚ್ಚಾಗಿಸಿವೆ. ಈಗ ಅದನ್ನು ಪತ್ರಕರ್ತರು, ವ್ಯಂಗ್ಯಚಿತ್ರಕಾರರು, ಇತಿಹಾಸಜ್ಞರು, ವಿದ್ಯಾರ್ಥಿಗಳು, ನಟರನ್ನೂ ಸೇರಿಸಿ, ಕೆಲವೊಮ್ಮೆ ನಿರ್ದೇಶಕರು ಮತ್ತು ಸಣ್ಣ ಮಕ್ಕಳ ಮೇಲೂ ಬಳಸಲಾಗುತ್ತಿದೆ.
ತಮಾಷೆಯಾಗಿ ಜನರು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ – ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶ್ನೆಯಾಗಿಲ್ಲ, ಆದರೆ ಮಾತನಾಡಿದ ಮೇಲೆ ಸ್ವಾತಂತ್ರ್ಯವಿರುತ್ತದೆಯೆ ಎನ್ನುವುದು ಈಗ ಮುಖ್ಯವಾಗಿದೆ. ಯಾಕೆಂದರೆ, ನೀವು ವಿಮರ್ಶೆ ಮಾಡುವಂತಹ ಯಾವುದಾದರೂ ಮಾತನ್ನು ಆಡಿದರೆ, ಯಾರಾದರೂ ನಿಮ್ಮನ್ನು ಕೈದು ಮಾಡಿಸುತ್ತಾರೆ ಮತ್ತು ನೀವು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತೀರಿ.
ಉ: ಈ ಸರ್ಕಾರ ಕೆಲವು ರೀತಿಗಳಲ್ಲಿ ಜಾಣತನ ಹೊಂದಿದೆ. ಅದು ಔಪಚಾರಿಕವಾಗಿ ತುರ್ತುಪರಿಸ್ಥಿತಿಯನ್ನು ಘೋಷಿಸಿಲ್ಲ. ಏಕಕಾಲಕ್ಕೆ ಬಹಳ ಜನರನ್ನೇನೂ ಕೈದುಮಾಡುತ್ತಿಲ್ಲ, ಆದರೆ ನೀವು ಸೂಚಿಸುತ್ತಿರುವ ಉದಾಹರಣೆಗಳು ಸರ್ಕಾರ ಬಳಸುವ ವಿಧಾನವನ್ನು ಬಹಳ ಸಮರ್ಥವಾಗಿ ಸೂಚಿಸುತ್ತದೆ. ಪತ್ರಕರ್ತರು, ಚಿಂತಕರು, ನಾಗರಿಕ ಸಮಾಜಕ್ಕೆ ಸೇರಿದ ಕಾರ್ಯಕರ್ತರು ಮುಂತಾದವರಿಗೆ ಸರ್ಕಾರ ಆಗಾಗ ಬೆದರಿಸುವ ಸನ್ನೆಗಳನ್ನು ಕಳುಹಿಸುತ್ತಿರುತ್ತದೆ.
ಆದರೆ, ನಾನು ಸರ್ವೋಚ್ಛ ನ್ಯಾಯಾಲಯವನ್ನು ಸರ್ಕಾರ ಹೇಗೆ ಬಳಸಿಕೊಳ್ಳುತ್ತಿದೆ ಎನ್ನುವ ವಿಷಯಕ್ಕೆ ಹಿಂತಿರುಗುತ್ತೇನೆ. ಇದು ಯಾಕೆ ಮುಖ್ಯ ಅಂದರೆ ಮಾಧ್ಯಮಗಳಿಗೆ ಮತ್ತು ಖಾಸಗಿಯಾಗಿ ಕ್ರಿಯಾಶೀಲರಾಗಿರುವವರಿಗೆ, ತಮಗೆ ಬೇರೆ ಸಂಸ್ಥೆಗಳಿಂದ ಸ್ವಲ್ಪ ಮಟ್ಟದಲ್ಲಾದರೂ, ನಿಷ್ಪಕ್ಷಪಾತವಾದ ನ್ಯಾಯ ಯಾವ ಹಂತದಲ್ಲಾದರೂ ಸಿಗುತ್ತದೆ ಎಂದು ತಿಳಿದಿದ್ದರೆ ಅವರು ತಮಗೆ ಹಾನಿಯಾಗಬಹುದಾದ (ರಿಸ್ಕಿ) ಕೆಲಸಗಳಲ್ಲಿ ತೊಡಗಲು ಸಾಧ್ಯವಿರುತ್ತದೆ.
ಪ್ರ: ಅಂದರೆ, ಸರ್ವೋಚ್ಛ ನ್ಯಾಯಾಲಯವು ಪತ್ರಕರ್ತರ ಹಕ್ಕುಗಳನ್ನು ಕಾಯಲು ವಿಫಲವಾದರೆ ಅಥವ ನಿರಾಕರಿಸಿದರೆ ಪತ್ರಕರ್ತರು ಸರ್ವಾಧಿಕಾರಿ ನಾಯಕರಿಂದ ಅಪಾಯಕ್ಕೆ ಗುರಿಯಾಗುತ್ತಾರೆ ಎಂಬ ತೀರ್ಮಾನಕ್ಕೆ ಬರಹಬುದಲ್ಲವೇ?
ಉ: ನಿಮಗೆ ಜಾಮೀನು ಸಿಕ್ಕೇಸಿಗುತ್ತದೆ ಎನ್ನುವ ಖಾತರಿಯಿಲ್ಲ. ನಿಮಗೆ ಹೇಬಸ್ ಕಾರ್ಪಸ್ ಪ್ರಕರಣದಲ್ಲಿ ನ್ಯಾಯಾಲಯ ಅಹವಾಲು ಕೇಳಿಸಿಕೊಳ್ಳುತ್ತದೆ ಎನ್ನುವುದು ಖಚಿತವಿಲ್ಲ. ಕಾಶ್ಮೀರದಲ್ಲಿ ಭಾರತದ ರಾಜ್ಯಾಡಳಿತವು (ಪಾಲಿಟಿ) ನಡೆಸಿರುವ ಮಾದರಿಯ ಆಡಳಿತದಿಂದಾಗಿ ಪತ್ರಕರ್ತರ ವಿರುದ್ಧದ ಅತಿ ಹೆಚ್ಚು ಸಂಖ್ಯೆಯ ಯುಎಪಿಎ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೇ ಮಾದರಿಯನ್ನು ದೇಶದ ಉದ್ದಗಲಕ್ಕೂ ಇನ್ನೂ ಹೆಚ್ಚಾಗಿ ನಕಲು ಮಾಡಲಾಗುತ್ತದೆ. ಸರ್ವೋಚ್ಛ ನ್ಯಾಯಾಲಯ ಈ ಎಲ್ಲ ಪ್ರಕರಣಗಳನ್ನು ವಿಚಾರಣೆ ನಡೆಸಿ ಈ ವಿಷಯವನ್ನು ಬೇಗನೆ ಮುಕ್ತಾಯಗೊಳಿಸಬಹುದು. ಈಗಲೂ ನಮ್ಮಲ್ಲಿ ಇಂತಹ ನ್ಯಾಯಾಂಗ ವ್ಯವಸ್ಥೆ ಇದೆ ಎಂದು ಪ್ರಪಂಚಕ್ಕೆ ಸಾಬೀತುಪಡಿಸಿ ತೋರಿಸಬಹುದು. ಸರ್ಕಾರ ನಿಮ್ಮ ಮೇಲೆ ದಬ್ಬಾಳಿಕೆ ನಡೆಸಿದರೂ, ಅದು ಬಹುಶಹ ನಿಮಗೆ ಒಂದೆರಡು ವರ್ಷಗಳ ಕಾಲ ನೋವು ಕೊಡಬಹುದು, ಆದರೆ ಯಾವುದೊ ಹಂತದಲ್ಲಿ ನಿಮಗೆ ನ್ಯಾಯ ಸಿಗುತ್ತದೆ ಎಂದು ನಿರೀಕ್ಷಿಸಬಹುದು.

ಪ್ರ: ಸರ್ವೋಚ್ಛ ನ್ಯಾಯಾಲಯ ಮಧ್ಯಪ್ರವೇಶಿಸದೆ ಇರುವುದರ ಪರಿಣಾಮವಾಗಿ ಅಜಿತ್ ದೋವಲ್ ತರಹದವರು (ರಾಷ್ಟ್ರೀಯ ಭದ್ರತಾ ಸಲಹೆಗಾರರು) ಪೊಲೀಸರಿಗೆ ಬಹಿರಂಗವಾಗಿ “ಈಗ ನಾಗರೀಕ ಸಮಾಜವು ಯುದ್ಧದ ಹೊಸ ಸೀಮಾರೇಖೆಯಲ್ಲಿದೆ”ಎಂದು ಹೇಳಲು ಸಾಧ್ಯವಾಗಿದೆ. ನನ್ನ ಪ್ರಕಾರ ಈ ಮನೋಭಾವನೆಯಿಂದಾಗಿ ಸರ್ಕಾರ ಮತ್ತು ಅದನ್ನು ಬೆಂಬಲಿಸುವ ಕೆಲವು ಚಿಂತಕರು ನಾಗರಿಕ ಸಮಾಜ, ಪ್ರತಿಪಕ್ಷದವರು ಮತ್ತು ಭಿನ್ನಮತೀಯರನ್ನು (ಡಿಸ್ಸೆಂಟರ್ಸ್), ಅಂದರೆ ಬೇರೆ ರೀತಿಯಲ್ಲಿ ಯೋಚಿಸುವವರನ್ನು, ಶತ್ರುಗಳೆಂದು ಪರಿಗಣಿಸಲು ಆರಂಭಿಸಿದ್ದಾರೆ.
ಉ: ಇದು ಅಕಸ್ಮಾತ್ತಾಗಿ ಬಂದ ಮಾತಲ್ಲ. ಇದು ಅವರ ಸಿದ್ಧಾಂತದ ನಡುವೆಯೇ ಇದೆ. ಜನರು ಏಕೈಕ ನಿಶ್ಚಯದಿಂದ (ಸಿಂಗ್ಯುಲರ್ ವಿಲ್) ಮಾತಾಡಬೇಕೆಂಬುದು ಆ ಸಿದ್ಧಾಂತದ ಮೂಲ ತತ್ತ್ವ. ಬದಲಾಗಿ, ಜನರಿಗೆ ನಿಜವಾದ ಭಿನ್ನಾಭಿಪ್ರಾಯಗಳಿರುತ್ತವೆ, ಬದುಕು ಸಂಕೀರ್ಣವಾದ್ದರಿಂದ ವಿಭಿನ್ನ ದೃಷ್ಟಿಕೋನಗಳಿಂದ ನೋಡಬಹುದು ಎನ್ನಲು ಅವಕಾಶವಿಲ್ಲದಂತಾಗಿದೆ.
ಇದರಿಂದಾಗಿಯೇ ಕಣ್ಗಾವಲಿಗೆ (ಸರ್ವೆಲೆನ್ಸ್) ವ್ಯಾಪಕವಾದ ಒಪ್ಪಿಗೆ ದೊರೆಯುತ್ತಿದೆ. ಪೆಗಸಸ್ ಹಗರಣವನ್ನು ಇನ್ನೂ ಬೇಗನೆ ನಿಭಾಯಿಸಬಹುದಾಗಿತ್ತು. ಸರ್ವೋಚ್ಛ ನ್ಯಾಯಾಲಯ ಒಂದು ಸಮಿತಿ ರಚಿಸುವಲ್ಲಿ ಬಹಳ ಸಮಯವನ್ನು ವ್ಯರ್ಥಮಾಡಿತು. ಭಾರತದ ನಾಗರಿಕ ಸಮಾಜದ ಮೇಲಿನ ಸಮೆಯಿಸುವ ಯುದ್ಧ೨ ಈಗ ಆಡಳಿತ ಪಕ್ಷದ ಪ್ರಧಾನ ಸಿದ್ಧಾಂತವಾಗಿದೆ.
ಪ್ರ: ಹಾಗಾದರೆ, ಈ ಆಳ್ವಿಕೆಯು ಪ್ರತಿಪಕ್ಷದವರು, ಭಿನ್ನಮತೀಯರು ಮತ್ತು ಬೇರೆ ದೃಷ್ಟಿಕೋನ ಹೊಂದಿರುವವರನ್ನು ಶತ್ರುಗಳೆಂದು ನೋಡುತ್ತದೆ ಎಂದು ನೀವು ಹೇಳುತ್ತಿದ್ದೀರಲ್ಲವೆ?
ಉ: ಖಂಡಿತವಾಗಿ. ಇದರಿಂದಾಗಿಯೇ ಈ ಸರ್ಕಾರ ಒಂದು ಆಳವಾದ ಅರ್ಥದಲ್ಲಿ ಪ್ರಜಾಪ್ರಭುತ್ವ-ವಿರೋಧಿಯಾದದ್ದು. ನಮ್ಮ ಜೊತೆ ಭಿನ್ನಾಭಿಪ್ರಾಯ ಹೊಂದಿರುವವರೂ ದೇಶದ ಪ್ರಜೆಗಳಾಗಿದ್ದು ದೇಶಕ್ಕೆ ಯಾವುದು ಒಳ್ಳೆಯದು ಎಂದು ತಿಳಿದುಕೊಳ್ಳುವ ಸಮಾನ ಉದ್ದೇಶದಲ್ಲಿ ತೊಡಗಿರುತ್ತಾರೆ ಎನ್ನುವ ಅನಿಸಿಕೆಯಿಂದ ಪ್ರಜಾಪ್ರಭುತ್ವ ಮುಂದೆ ಸಾಗುತ್ತಿರುತ್ತದೆ.
ಪ್ರ: ಆದರೆ, ಮೋದಿಯವರ ಆಳ್ವಿಕೆ ಅಂತಹವರನ್ನು ಬೇರೆಯಾಗಿ ಯೋಚಿಸುವ ಹಕ್ಕಿರುವವರು ಎಂದು ಒಪ್ಪಿಕೊಳ್ಳುವುದಿಲ್ಲ. ಈಗ ಅಧಿಕೃತವಾಗಿ ತುರ್ತುಪರಿಸ್ಥಿತಿ ಇಲ್ಲ ಎಂದು ನೀವು ಹೇಳಿದಾಗ ಪ್ರತಿಪಕ್ಷಗಳನ್ನು ಗಡಿಯಾಚೆಗೆ ತಳ್ಳಬೇಕಾದ ಶತ್ರುಗಳು ಎಂಬಂತೆ ನಡೆಸಿಕೊಳ್ಳುವ ಕಪಟದ ತುರ್ತುಪರಿಸ್ಥಿತಿ ಇದೆ ಎನ್ನುವುದು ಆ ಮಾತಿನ ತಾತ್ಪರ್ಯವಲ್ಲವೆ?
ಉ: ಇನ್ನೊಂದು ರೀತಿಯಲ್ಲೂ ಇದು ಕಪಟದ ತುರ್ತುಪರಿಸ್ಥಿತಿ. ಇದು ಸಂಸ್ಥೆಗಳ ಅಧಿಕಾರವನ್ನು ಬಳಸಲು ಹಿಂಜರಿಯುವುದಿಲ್ಲ. ತುರ್ತುಪರಿಸ್ಥಿತಿಯಲ್ಲಿ ಸಂಸ್ಥೆಗಳ ಅಧಿಕಾರವನ್ನು ಬಳಸಿದ ಅರ್ಥದಲ್ಲಿ ಈಗ ಬಳಸುತ್ತಿಲ್ಲ. ಈಗಿನ ಮಾದರಿ ಹೇಗೆಂದರೆ ನೂರಾರು ಜನರನ್ನು ಬಂಧಿಸುವುದು, ಮತ್ತು ಅಗತ್ಯಬಿದ್ದಾಗ ಅವರಿಗೆ ಜಾಮೀನು ಸಿಗದಂತೆ ನೋಡಿಕೊಳ್ಳುವುದು. ಪ್ರಭುತ್ವವು ಜನರನ್ನು ಬೆದರಿಸುವುದಕ್ಕೋಸ್ಕರ ಅಧಿಕಾರವನ್ನು ಬಳಸಲು ಹಿಂಜರಿಯುವುದಿಲ್ಲ ಎಂದು ತೋರಿಸಲು ಜನರನ್ನು ಬಂಧನದಲ್ಲಿಡುತ್ತದೆ.
ಪ್ರ: ಇಂತಹ ಸಂದರ್ಭದಲ್ಲಿ, ಪೆಗಸಸ್ ಹಗರಣದಲ್ಲಿ ಆಚೆಗೆ ಬಂದ ವಿಷಯಗಳು ಎಷ್ಟು ಚಿಂತಾಕ್ರಾಂತವಾದವು? ಸರ್ಕಾರ ಈ ವಿಷಯದ ಬಗ್ಗೆ ನುಣುಚಿಕೊಳ್ಳುವಂತಹ ಪ್ರತಿಕ್ರಿಯೆ ನೀಡಿತು. ಇದರ ಬಗ್ಗೆ ನೀವು ಎಷ್ಟರ ಮಟ್ಟಿಗೆ ಚಿಂತೆಗೊಂಡಿದ್ದೀರಿ?
ಉ: ಪೆಗಸಸ್ ಹಗರಣದಿಂದ ಆಚೆಗೆ ಬಂದ ವಿಷಯಗಳು ನಮ್ಮನ್ನು ಯೋಚನೆಗೀಡು ಮಾಡುತ್ತವೆ, ಆದರೆ ನಾವು ಆಶ್ವರ್ಯಪಡಬೇಕಾಗಿಲ್ಲ. ಇದು ಕೇವಲ ಈ ಸರ್ಕಾರಕ್ಕೆ ಮಾತ್ರ ಒಪ್ಪುವ ಮಾತಲ್ಲ; ಇಡೀ ಜಗತ್ತಿನಲ್ಲಿ ಕಣ್ಗಾವಲು ಮತ್ತು ಪ್ರಜಾಪ್ರಭುತ್ವದ ನಡುವಿನ ಘರ್ಷಣೆಯಲ್ಲಿ ಪ್ರಜಾಪ್ರಭುತ್ವಗಳು ಸೋಲುತ್ತಿವೆ. ಅಂದರೆ, ಬ್ರಿಟನ್, ಅಮೆರಿಕ ಮುಂತಾದ ದೇಶಗಳ ಸರ್ಕಾರಗಳೂ ತಮ್ಮ ಪ್ರಜೆಗಳ ಮೇಲೆ ಬೇಹುಗಾರಿಕೆಯ ತಂತ್ರಾಂಶ ಬಳಸುತ್ತಿದ್ದರೆ ನನಗೇನೂ ಆಶ್ಚರ್ಯವಾಗುವುದಿಲ್ಲ.
ಪ್ರ: ನಾನು ಹೇಳಿದ್ದೇನೆಂದರೆ ಈ ಸರ್ಕಾರ ಸಿಕ್ಕಿಬಿತ್ತು, ಅಷ್ಟೆ. ಆದರೆ, ಯಾರೆಲ್ಲರ ಮೇಲೆ ಕಣ್ಗಾವಲು ಇಡಲಾಯಿತು ಎನ್ನುವುದರಲ್ಲಿ ರಾಹುಲ್ ಗಾಂಧಿಯವರ ಸ್ನೇಹಿತರು – ಅವರು ಒಂದು ರೀತಿಯಲ್ಲಿ ಸರ್ಕಾರಕ್ಕೆ ರಾಜಕೀಯ ಎದುರಾಳಿಗಳಾಗಿರಬಹುದು – ಪತ್ರಕರ್ತರು, ವಕೀಲರು, ಆಗಿನ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲೆ ಆಪಾದನೆ ಮಾಡಿದ, ಸರ್ವೋಚ್ಛ ನ್ಯಾಯಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮತ್ತು ಅನೇಕ ರೀತಿಯ ಸಾಮಾನ್ಯ ಜನರು ಸೇರಿದ್ದಾರೆ. ಇದರ ಬಗ್ಗೆ ನಿಮಗೆ ಚಿಂತೆಯಾಗುವುದಿಲ್ಲವೇ?
ಉ: ನೋಡಿ, ಈಗ ನಡೆದಿರುವ ಕಣ್ಗಾವಲು ಬಹಳ ಚಿಂತಾಕ್ರಾಂತವಾದದ್ದು. ಇದರ ಸ್ವಭಾವವೇ ಯೋಚನೆಗೀಡು ಮಾಡುವಂಥಾದ್ದು ಮತ್ತು ಕೆಲವು ರೀತಿಗಳಲ್ಲಿ ಅವಮಾನಕರವಾದದ್ದು. ಇದು ನಾಗರಿಕರಾಗಿ ನಮಗಿರುವ ಸ್ಥಾನವನ್ನು ಕುಗ್ಗಿಸುತ್ತದೆ. ಖಾಸಗಿತನ ಎಂದರೆ ಏನೋ ಮುಚ್ಚಿಡಬೇಕಾದದ್ದು ನನ್ನ ಬಳಿಯಿದೆ ಎಂಬುದಲ್ಲ. ಅದೊಂದು ಮೂಲಭೂತ ಹಕ್ಕು. ಆದರೆ, ಈ ಕಣ್ಗಾವಲು ಎಷ್ಟೆಲ್ಲ ಹರಡಿಕೊಂಡಿದೆ ಎನ್ನುವುದು ಆಶ್ಚರ್ಯ ಹುಟ್ಟುಸುತ್ತದೆ. ನಾನು ಈಗಾಗಲೆ ಹೇಳಿದಂತೆ, ಪ್ರಜಾಪ್ರಭುತ್ವಗಳ ಇತಿಹಾಸವನ್ನು ನೋಡಿದರೆ ಇಂತಹ ಪ್ರಕರಣಗಳು ಹಿಂದೆಯೂ ನಡೆದಿವೆ. ಉದಾಹರಣೆಗೆ, 1960ರ ದಶಕದಲ್ಲಿ ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಯ ಮೇಲೆ ಎಫ್.ಬಿ.ಐ ನಡೆಸಿದ ಕಣ್ಗಾವಲಿನ ಒಂದು ರೀತಿಯ ಪಡಿಯಚ್ಚು ಇದು. ಇಂದು ಪ್ರಜಾಪ್ರಭುತ್ವದ ಸರ್ಕಾರಗಳು ವ್ಯಾಪಕವಾದ ಕಣ್ಗಾವಲು ನಡೆಸುವುಕ್ಕೆ ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯನ್ನು ಕೊಡುತ್ತದೆ ಇದು. ಅವರು ಎಷ್ಟು ಜಾಣರಾಗಿ ಅದನ್ನು ನಡೆಸುತ್ತಾರೆ ಎನ್ನುವುದಷ್ಟೆ ಇರುವ ಪ್ರಶ್ನೆ.
ಪ್ರ: ಭಾರತದಲ್ಲಿ ಕಣ್ಗಾವಲು ನಡೆಯುವ ಸಾಧ್ಯತೆಯಿದೆ ಎಂದು ನಾವು ಊಹಿಸಿರಲಿಲ್ಲ. ಆದ್ದರಿಂದ ಇದು ನಡೆದಾಗ ನಾವು ನಡುಗಿಹೋದೆವು. ಇದು ನಡೆಯುತ್ತಿದೆ ಎಂದು ನಮಗೆ ತಿಳಿದಿರಬೇಕಿತ್ತು, ಅಲ್ಲವೆ?
ಉ: ನನಗೆ ಆಶ್ವರ್ಯವಾಗಲಿಲ್ಲ. ಕಣ್ಗಾವಲು ನಡೆಯುತ್ತಿರುವುದಕ್ಕೆ ಯಾರಾದರೂ ಆಶ್ಚರ್ಯಪಟ್ಟರೆ ಅದರ ಬಗ್ಗೆ ನನಗೆ ಆಶ್ಚರ್ಯವಾಗುತ್ತದೆ. ಆದರೆ, ಇದನ್ನು ಮಾಡುತ್ತ ಸಿಕ್ಕಿಬಿದ್ದರಲ್ಲ ಅದು ಆಶ್ಚರ್ಯಕರವಾದ ವಿಷಯ.
(ಮುಂದುವರೆಯುವುದು)
ಟಿಪ್ಪಣಿಗಳು
೧. ಡಾಗ್ ವಿಜ಼ಲ್ – ರಾಜ್ಯಶಾಸ್ತ್ರದಲ್ಲಿ “ಡಾಗ್ ವಿಸಲ್” ಎಂಬ ಪರಿಭಾಷೆಯ ಅರ್ಥ ಒಂದು ಸಂದೇಶನ್ನು ಒಂದು ನಿರ್ದಿಷ್ಟ ಗುಂಪಿನವರನ್ನು ಗುರಿಯಾಗಿಟ್ಟುಕೊಂಡು ಕೊಡಲಾಗುತ್ತದೆ ಮತ್ತು ಅದು ಆ ಗುಂಪಿನವರಿಗೆ ಮಾತ್ರ ಅರ್ಥವಾಗುತ್ತದೆ.
೨. ವಾರ್ ಆಫ್ ಅಟ್ರಿಷನ್ (ಸಮೆಯಿಸುವ ಯುದ್ಧ)– ಎದುರು ಪಕ್ಷದವರ ಮೇಲೆ ನಿರಂತರವಾಗಿ ಧಾಳಿಮಾಡುವುದರಿಂದ ಅಥವ ಕಾಟಕೊಡುವುದರಿಂದ ಅವರನ್ನು ದುರ್ಬಲಗೊಳಿಸುವುದು.
(ಕೃಪೆ): ದ ವೈರ್
ಕನ್ನಡ ಅನುವಾದ ಮತ್ತು ಅಕ್ಷರ ರೂಪ: ಎಂ. ಆರ್. ರಕ್ಷಿತ್


