ಇತ್ತೀಚಗೆ ಬಿಡುಗಡೆಯಾಗಿರುವ ಕಾಂತಾರ ಎಂಬ ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಚಿತ್ರವು ಬಹಳ ಸದ್ದು ಮಾಡುತ್ತಿದೆ. ಕರಾವಳಿ ಪ್ರದೇಶದ ಜಾನಪದ ಪಂಜುರ್ಲಿ ಕಥನವನ್ನು ಕಮರ್ಷಿಯಲ್ ಕತೆಯ ರೂಪದಲ್ಲಿ ಬಹಳ ಆಕರ್ಷಕವಾಗಿ ಮತ್ತು ಅದ್ದೂರಿಯಾಗಿ ಕಟ್ಟಿಕೊಟ್ಟಿರುವುದರಿಂದ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆದು ಎಲ್ಲಾ ಭಾಷೆಗೂ ಡಬ್ ಆಗಿ ಕೋಟಿಕೋಟಿ ವ್ಯವಹಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಕನ್ನಡ ಸಿನಿಮಾಗಳು ಇತ್ತೀಚಗೆ ಈತರ ಕೋಟಿಗಟ್ಟಲೆ ವ್ಯವಹಾರ ಮಾಡುತ್ತಿರುವುದನ್ನು ಮೆಚ್ಚಲೇಬೇಕು.
ಕಾಂತಾರ ಸಿನಿಮಾದಲ್ಲಿ ಮಲಯಾಳಂ, ತಮಿಳು ಸಿನಿಮಾಗಳಂತೆ ಪ್ರಾದೇಶಿಕತೆಯ ಸೊಗಡಿದೆ. ಮಾಮೂಲಿ ಕಮರ್ಷಿಯಲ್ ಜಾಡಿಗಿಂತ ಕೊಂಚ ಭಿನ್ನವಾಗಿರುವುದರಿಂದ ಈ ಸಿನಿಮಾ ಸಾಮಾನ್ಯ ಪ್ರೇಕ್ಷರಿಂದಿಡಿದು ಬುದ್ದಿ ಜೀವಿ ವರ್ಗವನ್ನೂ ಸೆಳೆದಿದೆ.
ಅದರೊಡನೆ ಒಂದಷ್ಟು ಪ್ರಗತಿಪರರು ಈ ಸಿನಿಮಾದ ಪಂಜುರ್ಲಿ, ಅದನ್ನು ನಿರ್ದೇಶಕ ನಿಭಾಯಿಸಿರುವ ರೀತಿ ಮತ್ತು ಅದರೊಡನೆ ತಳುಕು ಹಾಕಿಕೊಂಡಿರುವ ದೈವ ಮತ್ತು ಭಕ್ತಿ ಅದರೊಡನಿರುವ ಮೂಲಜನರ ಚರಿತ್ರೆ ಇತ್ಯಾದಿಗಳ ಕುರಿತು ತಮ್ಮದೇ ಆದ ವಿರೋಧಗಳನ್ನು ಜಾಲತಾಣದಲ್ಲಿ ಮಂಡಿಸುತ್ತಿದ್ದಾರೆ.
ನಟ ಚೇತನ್ ರವರು ರಿಶಬ್ ಶೆಟ್ಟಿಯವರು ಪಂಜುರ್ಲಿ ಹಿಂದೂ ಸಂಸ್ಕೃತಿ ಎಂದ ಮಾತನ್ನು ಅಲ್ಲಗೆಳೆದು ಅದು ಮೂಲನಿವಾಸಿ ಬಹುಜನರ ಆದಿಮ ಸಂಸ್ಕೃತಿ ಎಂದ ಮೇಲೆ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಬಹುಜನ ಚಳವಳಿಯ ಗೆಳೆಯರು ಚೇತನ್ ಬೆಂಬಲಕ್ಕೆ ನಿಂತಿದ್ದಾರೆ.
ನನಗೆ ಈ ಪ್ರಶ್ನೆಗಳು ಯಾಕೆ ಕಾಡಿದವು ಎಂದರೆ;
ನಮ್ಮ ನಡುವಿನ ಬಹುಜನ ಚಳವಳಿಯ ಚಿಂತಕ, ಬರಹಗಾರ ಮತ್ತು ಸಾಮಾಜಿಕ ಹೋರಾಟದ ಸಂಗಾತಿಯಾಗಿರುವ ನನ್ನ ಸನ್ಮಿತ್ರ ಡಾ.ಚಮರಂ ಸಹ ಆಗಾಗ ಸಿನಿಮಾಗಳನ್ನೂ ಮಾಡುತ್ತಿರುತ್ತಾರೆ. ಅವರ ಕಾದಂಬರಿ ಆಧರಿಸಿ ತೆರೆಗೆ ಬಂದ ‘ಊಟಿ’ ಸಿನಿಮಾ ತಳಸಮುದಾಯಗಳ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಟ್ಟಿತ್ತು. ಆದರೆ ಅದನ್ನು ನಾವು ಬೆಂಬಲಿಸಲಿಲ್ಲ! ಅದರ ಕುರಿತು ಇಷ್ಟು ಚರ್ಚೆಗಳನ್ನೂ ನಾವು ಮಾಡಲಿಲ್ಲ. ನಂತರ ಅವರು ತೆಲಂಗಾಣದ ಮರ್ಯಾದೆ ಹತ್ಯೆ ಆಧರಿಸಿ ಒಂದು ಕಿರುಚಿತ್ರ “ಪ್ರೇಮಂ ಶರಣಂ ಗಚ್ಚಾಮಿ” ತೆಗೆದರು. ಅದು ಸಹ ಕೆಲವು ಚಿತ್ರೋತ್ಸವಗಳಲ್ಲಿ ಮೆಚ್ಚುಗೆಗೆ ಪಾತ್ರವಾಯಿತು. ಅದು ಯೂಟ್ಯೂಬ್ ನಲ್ಲಿದೆ. ಅದರ ಕುರಿತು ಚಮರಂ ಸಾಕಷ್ಟು ಬರೆದರೂ ನಾವು ಅದರ ಬಗ್ಗೆ ಮಾತಾಡಲಿಲ್ಲ. ಆ ಕಿರುಚಿತ್ರದ ವೀಕ್ಷಣೆ ಸಾವಿರವನ್ನೂ ದಾಟಿಲ್ಲ! ಇದು ಖೇದಕರ ಸಂಗತಿ ಅಲ್ಲವೇ?
ಅದೂ ಇರಲಿ ಈಗ ಅವರು “ಭಾರತದ ಪ್ರಜೆಗಳಾದ ನಾವು” ಎಂಬ ಸಂವಿಧಾನದ ಆಶಯದ ಚಿತ್ರ ಮಾಡಿದ್ದಾರೆ. ಆ ಚಿತ್ರವು ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೂವತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ವಿವಿಧ ವಿಭಾಗಗಳಲ್ಲಿ ಗಳಿಸಿದೆ. ಈ ಚಿತ್ರದ ವಿಶೇಷ ವಿವರಗಳನ್ನು ಸಹ ಅವರು ನೀಡಿದ್ದಾರೆ. ಈ ಚಿತ್ರದ ಟೀಸರ್, ಟ್ರೈಲರ್, ಹಾಡು ಹಾಗೂ ಪ್ರಮೊಷನಲ್ ಗೀತೆ ಎಲ್ಲವೂ ಯೂಟ್ಯೂಬ್ ನಲ್ಲಿ ಲಭ್ಯವಿದೆ. ಅವುಗಳ ನೋಡುಗರ ಸಂಖ್ಯೆ ಸಹ ಸಾವಿರ ಮುಟ್ಟಿಲ್ಲ! ಆದರೆ ಯಾವ್ಯಾವುದೋ ಹೆಸರೇ ಗೊತ್ತಿರದ ಸಿನಿಮಾಗಳು ಮಿಲಿಯನ್ ವೀವ್ಸ್ ಆಗಿದೆ!! ಇದು ನಮ್ಮ ದುರಂತವಲ್ಲವೇ?
“ಭಾರತದ ಪ್ರಜೆಗಳಾದ ನಾವು” ಚಿತ್ರವಿನ್ನೂ ಬಿಡುಗಡೆಯಾಗಿಲ್ಲ. ಬಿಡುಗಡೆ ಮಾಡುವ ಶಕ್ತಿ ಅವರಲ್ಲಿಲ್ಲ. ಆದರೆ ಬಿಡುಗಡೆಗೂ ಮುನ್ನ ಚಿತ್ರವನ್ನು ನಾನು ನೋಡಿದ್ದೇನೆ. ಸೋದರ ಅಂತರಾಷ್ಟ್ರೀಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿಯವರು ಚಾಮರಾಜನಗರದಲ್ಲಿ ಈ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಿದ್ದರು. ಅಲ್ಲಿ ನನಗೂ ಸಿನಿಮಾ ನೋಡುವ ಅವಕಾಶ ಸಿಕ್ಕಿತು. ಇಡೀ ಜೆ.ಎಚ್.ಪಟೇಲ್ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಚಿತ್ರತಂಡದವರೆಲ್ಲರೂ ಇದ್ದರು. ಹಿರಿಯರು, ಹೋರಾಟಗಾರರು ಮತ್ತು ಬುದ್ದಿಜೀವಿಗಳು ಸಹ ಅಂದು ಚಿತ್ರ ವೀಕ್ಷಿಸಿದರು. ಬಹುಜನ ಚಳವಳಿಯ ಹ.ರಾ.ಮಹೇಶ್ ಅವರೂ ಸಹ ಪೂರ್ತಿ ಚಿತ್ರವನ್ನು ವೀಕ್ಷಿಸಿ ನಂತರ ಬಹಳ ಮೆಚ್ಚುಗೆಯ ಮಾತುಗಳನ್ನೂ ವೇದಿಕೆಯಲ್ಲಿ ಹಂಚಿಕೊಂಡರು.
ಅಲ್ಲಿ ಚಿತ್ರವೀಕ್ಷಣೆಯ ವ್ಯವಸ್ಥೆ ಸರಿಯಿರಲಿಲ್ಲವಾದ್ದರಿಂದ ಚಿತ್ರದ ಸೌಂಡ್ ಮತ್ತು ದೃಶ್ಯದ ಕ್ಲಾರಿಟಿ ಇರಲಿಲ್ಲ. ಅದರಿಂದ ಚಿತ್ರಮಂದಿರದ ಫೀಲ್ ಸಿಗಲಿಲ್ಲ. ಆದರೆ ಅದರ ಆಶಯ ಅರ್ಥವಾಯ್ತು.

ಚಮರಂ ಅವರು ತಮ್ಮ ಹೋರಾಟದ ಆಶಯವನ್ನು ಬಹಳ ಸರಳವಾಗಿ ಮತ್ತು ನೇರವಾಗಿ ಹೇಳಿದ್ದಾರೆ. ಚಿತ್ರದಲ್ಲಿ ಅದ್ದೂರಿತನವಿಲ್ಲ. ದೊಡ್ಡ ದೊಡ್ಡ ನಟರಿಲ್ಲ. ಅದಕ್ಕೆ ಬಜೆಟ್ ಮಿತಿ ಇದ್ದೀತು.
ಇದೆಲ್ಲದರ ನಡುವೆಯೂ ಚಿತ್ರ ಬಹಳವೇ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಬಹುಜನ ಸಮುದಾಯದ ಚಿಂತನೆಗಳನ್ನು ಒಂದು ಸುಂದರ ಪ್ರೇಮಕತೆಯ ಮೂಲಕ ಪ್ರಸ್ತುತ ಪಡಿಸಲಾಗಿದೆ. ಇದು ಒಂದು ಊರಿನ ಕತೆಯಂತೆ ಕಂಡರೂ ಈ ಊರೇ ದೇಶವೆಂದು ನಾವು ಭಾವಿಸಬೇಕು. ಭಾರತದ ಪ್ರಜೆಗಳಾದ ನಾವು ಸಂವಿಧಾನ ಸಾರುವ ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವವನ್ನು ಆಚರಣೆಯಲ್ಲಿ ಅನುಷ್ಟಾನಗೊಳಿಸಿಕೊಳ್ಳಬೇಕು ಎಂಬ ಆಶಯವನ್ನು ಅತ್ಯಂತ ಸೂಕ್ಷ್ಮವಾಗಿ ಅಷ್ಟೇ ಗಟ್ಟಿಧ್ವನಿಯಲ್ಲಿ ಪ್ರತಿಪಾದಿಸಿದ್ದಾರೆ. ಯಾವುದೆ ಸಿದ್ದಮಾದರಿಯ ಸೂತ್ರಗಳಿಗೆ ಸಿಲುಕದೆ ತುಂಬಾ ವಿಭಿನ್ನವಾಗಿ ಚಿತ್ರವನ್ನು ನಿರೂಪಿಸಿದ್ದಾರೆ. ಪರಿಣಾಮಕಾರಿ ಸಂಭಾಷಣೆಯ ಮೂಲಕ ನೋಡುಗರನ್ನು ಚಿಂತನೆಗೆ ಹಚ್ಚುತ್ತಾರೆ.
ಹೊಸಬರ ತಂಡದೊಡನೆ ಅನುಭವಿ ರಂಗಕಲಾವಿದರು ಅಭಿನಯಿಸಿದ್ದಾರೆ. ಪ್ರತಿಯೊಬ್ಬರೂ ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದಾರೆ. ಹಿರಿಯರೂ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಹಾಗೂ ನಟರೂ ಆದ ಬಿ.ಸುರೇಶ್ ಅವರು ಸಹ ಅತಿಥಿ ಪಾತ್ರದಲ್ಲಿ ಅದ್ಬುತ ಸಂದೇಶ ನೀಡಿದ್ದಾರೆ. ಜೊತೆಗೆ ಹಿರಿಯ ನಟ ಬಲ ರಾಜವಾಡಿ ಗಮನ ಸೆಳೆಯುತ್ತಾರೆ.
ಇಡೀ ಚಿತ್ರವನ್ನು ಆವರಿಸಿಕೊಂಡಿರುವ ಮತ್ತು ಬಹಳ ತೂಕದ ಪಾತ್ರವನ್ನು ನಿಭಾಯಿಸಿರುವವರು ರಂಗಕರ್ಮಿ ಬರ್ಟಿ ಓಲಿವೇರಾ ಅವರು. ಚಿತ್ರದ ನಿಜವಾದ ನಾಯಕ ಅವರೇ ಎನಿಸದಿರದು. ಇವರೊಡನೆ ಯುವ ರಂಗನಟಿ ಪುಷ್ಪಲತ, ಯುವರಂಗನಟ ಸತೀಶ್ ಪೊನ್ನಾಚಿ, ಹಿರಿಯ ರಂಗನಟರಾದ ಗೋಪಾಲಕೃಷ್ಣ, ಮಹದೇವಮೂರ್ತಿ, ಆಲೂರು ದೊಡ್ಡನಿಂಗಪ್ಪ ಇವರುಗಳ ಅಭಿನಯವೂ ಪರಿಪಕ್ವವಾಗಿದೆ.

ಅದಲ್ಲದೆ ತೆರೆಯಲ್ಲಿ ಹಿರಿಯ ಹೋರಾಟಗಾರರಾದ ಪ.ಮಲ್ಲೇಶ್ ಅವರೂ ಇದ್ದಾರೆ. ಅದರೊಡನೆ ನಮ್ಮ ಜನಪರ/ದಲಿತಪರ/ಮಾನವ ಬಂಧುತ್ವ ಚಳವಳಿಯ ಹಾರೋಹಳ್ಳಿ ನಟರಾಜ್, ಮುರುಡಗಳ್ಳಿ ಮಹದೇವ, ಪ್ರೇಮಬೋಧಿ, ಗಿರೀಶ ಲಕ್ಕೂರು, ಛಲವಾದಿ ಸೋಮಣ್ಣ, ಮಕ್ಕಳ ಹಕ್ಕುಗಳ ಧನಂಜಯ, ಜೀವಿಕ ಉಮೇಶ್, ಶೇಷಣ್ಣ, ಧನಗಳ್ಳಿ ಕುಮಾರ್, ನಟರಾಜ್ ಇವರುಗಳನ್ನು ಸಂಧರ್ಬಾನುಸಾರವಾಗಿ ಬಳಸಿಕೊಳ್ಳಲಾಗಿದೆ. ನಾನೂ ಸಹ ತೆರೆಯಲ್ಲಿ ಕಾಣಿಸಿಕೊಂಡಿರುವೆ ಎಂಬುದು ಹೆಮ್ಮೆಯ ವಿಷಯ. ಅದಲ್ಲದೆ ಸಾಹಿತಿಗಳಾದ ಕಾಳೇಗೌಡ ನಾಗವಾರ, ನಾ.ದಿವಾಕರ, ಗುಬ್ಬಿಗೂಡು ರಮೇಶ್ ಅವರುಗಳೂ ಇದ್ದಾರೆ.
ಪ್ರಮುಖವಾಗಿ ಬಹುಜನ ಚಳವಳಿಯ ಹನಸೋಗೆ ಸೋಮಶೇಖರ್ ಅವರ ಬಹುಜನ ಗೀತೆಗಳನ್ನು ಬಹಳ ಸಂದರ್ಭೋಚಿತವಾಗಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದ ಆಶಯವನ್ನು ಈ ಗೀತೆಗಳು ಹೆಚ್ಚಿಸಿವೆ. ಜಾತಿದೌರ್ಜನ್ಯದ ಹಲವು ನೈಜಘಟನೆಗಳನ್ನು ಈ ಚಿತ್ರದಲ್ಲಿ ಯಾವುದೇ ಅಬ್ಬರವಿಲ್ಲ ಸಾಧ್ಯವಾದಷ್ಟು ಸಹನೀಯವಾಗಿ ಕಟ್ಟಿಕೊಡಲಾಗಿದೆ. ನಾಯಕ ಮನ್ವಿತ್ ಹಾಗೂ ನಾಯಕಿ ಶ್ರಾವಣಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇವರೊಡನೆ ಮಂಜುನಾಥ ಮಿರ್ಲೆ, ಶಿವಾಜಿರಾವ್, ನವನಟರಾದ ಪುಟ್ಟಸ್ವಾಮಿ ಬಹುಜನ್, ಪ್ರದೀಪ್ ಬಹುಜನ್, ನೋಯಲ್ ಮುಂತಾದವರೆಲ್ಲರೂ ತಮ್ಮ ಪಾತ್ರಗಳಲ್ಲಿ ಸಹಜವಾಗಿ ಜೀವಿಸಿದ್ದಾರೆ.
ಈ ಚಿತ್ರ ಚಮರಂ ಅವರು ಬರೆದಿರುವ ಅವರದೇ ನಾಟಕ ಕೃತಿ “ಸಂವಿಧಾನ” ಆಧಾರಿತ. ನಾನು ಚಿತ್ರತಂಡದಲ್ಲಿ ಆರಂಭದಿಂದಲೂ ಭಾಗವಾಗಿದ್ದೆ. ಮೊದಲಿಗೆ ಈ ಚಿತ್ರದ ಟೈಟಲ್ “ಜೈಭೀಮ್” ಎಂದಿತ್ತು. ಆದರೆ ನಮ್ಮ ಕೆಲವು ಸ್ನೇಹಿತರು ಇದು ಒಂದು ಜಾತಿಯನ್ನು ಪ್ರತಿನಿಧಿಸಿದಂತಾಗುತ್ತದೆ ಎಂದು ವಿರೋಧಿಸಿದರು. ಅದಲ್ಲದೆ ಈ ಟೈಟಲ್ ಆದರೆ ನಾನು ನಟಿಸುವುದಿಲ್ಲ ಎಂದು ಮೊದಲು ಗೊತ್ತುಮಾಡಿದ್ದ ನಾಯಕ ನಟ ಚಿತ್ರದಿಂದ ಹೊರಹೋದರು. ನಂತರ ಸಂವಿಧಾನ ಎಂದು ಇಟ್ಟರು. ಅದನ್ನು ಚಲನಚಿತ್ರ ವಾಣಿಜ್ಯ ಮಂಡಳಿ ನಿರಾಕರಿಸಿತು. ಕೊನೆಗೆ ಅದನ್ನು “ಭಾರತದ ಪ್ರಜೆಗಳಾದ ನಾವು” ಎಂದು ಮಾರ್ಪಡಿಸಿದರು. ಆನಂತರ ತಮಿಳಲ್ಲಿ ಜೈಭೀಮ್ ಚಿತ್ರ ಬಂತು ಅದ್ದೂರಿಯಾಗಿ ಹಿಟ್ ಆಯಿತು!
ಇದನ್ನೂ ಓದಿ: ಸಂವಿಧಾನದ ಆಶಯಗಳೊಂದಿಗೆ ತೆರೆಗೆ ಬರಲು ಸಿದ್ಧವಾಗಿದೆ ’ಭಾರತದ ಪ್ರಜೆಗಳಾದ ನಾವು’
ಈ ಚಿತ್ರದ ವಿಶೇಷವನ್ನು ಒಮ್ಮೆ ಚಮರಂ ಬರೆದಿದ್ದರು. ಅದನ್ನು ನಾನು ಸಿನಿಮಾದಲ್ಲು ಸಹ ನೋಡಿದ್ದರಿಂದ ಹೇಳುವೆ: ಎಲ್ಲಾ ಚಿತ್ರಗಳಲ್ಲಿಯೂ ಜನರ ದೇಹಕ್ಕೆ ಹಾನಿಮಾಡುವ ಸಿಗರೇಟ್ ಸೇವನೆ, ಮದ್ಯ ಸೇವನೆಗಳನ್ನು ನಿಷೇಧಿಸಿದ ಎಚ್ಚರಿಕೆ ತೋರುತ್ತಾರೆ. ಆದರೆ ಈ ಚಿತ್ರದಲ್ಲಿ ದೇಶಕ್ಕೆ ಅಪಾಯವಾಗುವ “ಜಾತೀಯತೆ” ನಿಷೇಧಿಸಬೇಕೆಂಬ ಎಚ್ಚರಿಕೆ ತೋರುತ್ತಾರೆ. ಇಂತಹ ಸೂಕ್ಷ್ಮಗಳನ್ನು ನಾವು ಗಮನಿಸಬೇಕು ಮತ್ತು ಯಾವುದೇ ಮುಜುಗರವಿಲ್ಲದೆ ಇದರ ಕುರಿತು ಮಾತಾಡಬೇಕು. ಇದಲ್ಲವೇ ಕಟ್ಟುವ ಕ್ರಿಯೆ?
ಸಕಲ ಸೌಕರ್ಯದವರ ಮಕ್ಕಳು ನೂರಕ್ಕೆ ನೂರು ತೆಗೆದರೆ ಸಾಧನೆ ಮತ್ತು ಅದನ್ನು ನಾವೆಲ್ಲರೂ ಹೊಗಳುತ್ತೇವೆ. ಆದರೆ ಯಾವುದೇ ಸೌಲಭ್ಯವಿಲ್ಲದ ಮಕ್ಕಳು ಜಸ್ಟ್ ಪಾಸ್ ಆದರೆ ಅದನ್ನು ನಾವು ನೂರು ತೆಗೆದವರೊಡನೆ ಹೋಲಿಸಿ ಸಾಧನೆ ಅಲ್ಲವೆಂದು ತಳ್ಳಿಹಾಕುತ್ತೇವೆ. ಆದರೆ ಯಾವುದೇ ಸೌಲಭ್ಯವಿಲ್ಲದೆ ಸೀಮಿತ ಅವಕಾಶ ಬಳಸಿ ಪಾಸ್ ಆಗುವುದೇ ಒಂದು ಸಾಧನೆ. ಈ ಸಾಧನೆಯನ್ನು ಗುರುತಿಸಿ ಪ್ರೊತ್ಸಾಹ ನೀಡಿದರೆ ಮುಂದಿನ ಪೀಳಿಗೆ ನೂರಕ್ಕೆ ನೂರು ತೆಗೆಯುತ್ತದೆ ಎಂಬುದನ್ನು ನಾವು ಪರಿಗಣಿಸಿದರೆ ನಾವು ನಮ್ಮತನಗಳನ್ನು ಎತ್ತರಕ್ಕೇರಿಸಿಕೊಳ್ಳಬಹುದು.
ಭಾರತದ ಪ್ರಜೆಗಳಾದ ನಾವು ತಾಂತ್ರಿಕವಾಗಿ ಅದ್ದೂರಿತನ ಹೊಂದಿಲ್ಲದೆಯೂ ಸೀಮಿತ ಅವಕಾಶದಲ್ಲಿ ಒಳ್ಳೆಯ ಕಂಟೆಂಟ್ ನೀಡಿದೆ. ಮನರಂಜನೆಯನ್ನು ಕಡಿತಗೊಳಿಸಿ ಮನೋಧೋರಣೆಯನ್ನು ಗಟ್ಟಿಯಾಗಿ ಸಾರುತ್ತದೆ.
ನನಗನ್ನಿಸಿದಂತೆ “ಭಾರತದ ಪ್ರಜೆಗಳಾದ ನಾವು” ಕನ್ನಡದ ಮೊದಲ ಬಹುಜನ ಚಿತ್ರ. ಚಿತ್ರದ ಪ್ರೀಮಿಯರ್ ಶೋ ನಲ್ಲಿ ಸಹೋದರ ಹ.ರಾ.ಮಹೇಶ್ ಮಾತನಾಡುತ್ತಾ “ಚಿತ್ರ ಬಹುಜನ ಚಳವಳಿಯ ಮುಖವಾಣಿಯಾಗಿ ಬಹಳ ಮನೋಜ್ಞವಾಗಿ ಮೂಡಿಬಂದಿದೆ. ಕನ್ನಡ ಚಿತ್ರರಂಗದಲ್ಲಿ ಅನೇಕ ದಲಿತ ಕೇಂದ್ರಿತ ಚಿತ್ರಗಳು ಬಂದಿವೆ, ಅನೇಕ ದಲಿತ ನಿರ್ದೇಶಕರೂ ಇದ್ದಾರೆ. ಆದರೆ ಇದು ಪ್ರಪ್ರಥಮ ಬಹುಜನ ಚಿತ್ರ ಮತ್ತು ಚಮರಂ ಮೊದಲ ಅಂಬೇಡ್ಕರ್ ವಾದಿ ನಿರ್ದೇಶಕ. ಈ ಪರಂಪರೆಯನ್ನು ನಾವು ಉಳಿಸಬೇಕು” ಎಂದು ಹೇಳಿದರು. ಅವರ ಮಾತು ಖಂಡಿತಾ ಸತ್ಯ. “ಭಾರತದ ಪ್ರಜೆಗಳಾದ ನಾವು” ಗೆಲ್ಲಬೇಕು.
ಈ ಅಬ್ಬರದಲ್ಲಿ ಚಿತ್ರವನ್ನು ಎಲ್ಲೆಡೆ ಬಿಡುಗಡೆಗೊಳಿಸಲು ತುಂಬಾ ಹಣ ಖರ್ಚಾಗುತ್ತದೆ ಹಾಗಾಗಿ ಕಷ್ಟ. ಒಂದಷ್ಟು ಕಡೆ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಗೊಳಿಸುವ ಆಲೋಚನೆ ಇದೆ ಎನ್ನುವ ಚಮರಂ ಅವರ ಬೆಂಬಲಕ್ಕೆ ನಾವು ನೀವು ನಿಲ್ಲಬೇಕು.
ನಾವು ಪ್ರತೀ ಜಿಲ್ಲೆಯಲ್ಲಿ ಇದರ ಒಂದೊಂದು ಶೋ ಏರ್ಪಡಿಸಿ ಒಂದೊಂದು ಸಾವಿರ ಜನ ನೋಡಿಸಿದರೂ ಜನರಿಗೆ ತಲುಪಬಹುದು. ಇದು ಮುಂದಿನ ಬಹುಜನ ಚಿತ್ರ ನಿರ್ದೇಶಕರಿಗೆ ಪ್ರೇರಣೆಯಾಗಬಹುದು. ಈ ಪರಂಪರೆ ಮುಂದೆ ತಮಿಳು ಚಿತ್ರಗಳಂತೆ ದೊಡ್ಡದೂ ಆದೀತು! ಕಾಂತಾರ ಮೀರಿಸುವ ವಹಿವಾಟನ್ನೂ ಮಾಡಬಹುದು ಯಾರಿಗೆ ಗೊತ್ತು ಅಲ್ಲವೇ? ಕಾಂತಾರಕ್ಕಿಂತ ಮುಂಚೆ ರಿಷಬ್ ಶೆಟ್ಟಿ ಸಹ ಬಹಳ ಮಣ್ಣುಹೊತ್ತಿದ್ದಾರೆ, ಕಷ್ಟ ನಷ್ಟ ಅನುಭವಿಸಿದ್ದಾರೆ ಎಂಬುದನ್ನು ನಾವು ಮರೆಯಬಾರದು.
ಕತೆ-ಚಿತ್ರಕತೆ-ಸಂಭಾಷಣೆ- ಸಾಹಿತ್ಯ ನಿರ್ದೇಶನದ ಜೊತೆಯಲ್ಲಿ ಚಮರಂ ನಿರ್ಮಿಸಿರುವ ಈ ಚಿತ್ರ ಖಂಡಿತವಾಗಿ ಒಳ್ಳೆಯ ಸಂದೇಶದ ಚಿತ್ರ. ನೋಡಬಹುದಾದ ಚಿತ್ರ. ಕಾಡುವ ಚಿತ್ರ ಎಂಬುದು ನನ್ನ ಪಕ್ಷಪಾತರಹಿತ ಅಭಿಮತ. ಆದ್ದರಿಂದ ನನ್ನ ಮನವಿ ಇಷ್ಟೇ; ಬಿಂಕವಿಲ್ಲದೆ “ಭಾರತದ ಪ್ರಜೆಗಳಾದ ನಾವು” ಚಿತ್ರದ ಕುರಿತು ನಾವು ಇನ್ನಾದರೂ ಮಾತನಾಡೋಣ… ಪ್ರಮೋಟ್ ಮಾಡೋಣ ಬನ್ನಿ ಸೋದರರೆ…
(ಚಮರಂ ಅವರಿಗೆ ಶುಭಾಶಯ ಹೇಳಿ, ಬೆಂಬಲ ತಿಳಿಸಿ, ಸಾಧ್ಯವಾದ ರೀತಿಯ ನೆರವು ನೀಡಿ. ಸಾಲಿಡಾರಿಟಿ ತೋರಿಸಿ. 9964488055)
- ಸುಭಾಷ್ ಮಾಡ್ರಹಳ್ಳಿ
ಮಾನವ ಬಂಧುತ್ವ ವೇದಿಕೆಯ ಚಾಮರಾಜನಗರ ಜಿಲ್ಲಾ ಸಂಚಾಲಕರು.
ಇದನ್ನೂ ಓದಿ; ಸಿನಿಮಾ, ಮಿಥ್ ಮತ್ತು ರಾಜಕೀಯ; ಕಾಂತಾರ ಮತ್ತದರ ಯಶಸ್ಸಿನ ಸುತ್ತ…



ಯಾರು ಏನೇ ಮಾಡಿದರೂ ಅದು. ಸಂವಿಧಾನದ ಚೌಕಟ್ಟಿನಲ್ಲಿ ಇರಬೇಕು ಅದರ ಮೌಲ್ಯಗಳನ್ನು ಎತ್ತಿ ತೋರಿಸುವ ಮತ್ತು ಗಟ್ಟಿ ಗೊಳಿಸಿ ದೇಶದ ಅಭವೃದ್ಧಿಗಾಗಿ ಪೂರಕಾಗುವಂತಹ ಹಾಗೂ ಜನತೆಯ ಆರ್ಥಿಾಭಿವೃದ್ಧಿ ಜೀವನಮಟ್ಟ ಸುಧಾರಣೆಗೆ ಸಹಕಾರಿ ಯಾಗಿರಾಬೇಕು
ಎತ್ತ್ತು. ಏರ್ಗೆಳೆದರೆ
ಕೋಣ ನೀರಿಗೆಳೀತು ಎಂದು ಮಾಡಿದರೆ
ಪ್ರಪಂಚದ ಯಾವುದೇ ನಾಗರಿಕರು ಜಾಪ್ಪುವುದಿಲ್ಲ