Homeಅಂಕಣಗಳುಸಿನಿಮಾ, ಮಿಥ್ ಮತ್ತು ರಾಜಕೀಯ; ಕಾಂತಾರ ಮತ್ತದರ ಯಶಸ್ಸಿನ ಸುತ್ತ...

ಸಿನಿಮಾ, ಮಿಥ್ ಮತ್ತು ರಾಜಕೀಯ; ಕಾಂತಾರ ಮತ್ತದರ ಯಶಸ್ಸಿನ ಸುತ್ತ…

- Advertisement -
- Advertisement -

ಸಿನಿಮಾವೊಂದರ ಕಥಾವಸ್ತು ಮತ್ತು ನಿರೂಪಣೆಯಲ್ಲಿ ರಾಜಕೀಯ ಹುಡುಕಬಹುದೇ? ಸಿನಿಮಾದ ಹೂರಣದ ಆಚೆಗೆ, ಸಿನಿಮಾ ಮಾಡುವವರ ರಾಜಕೀಯ ಧೋರಣೆ, ಸಿನಿಮಾವನ್ನು ಯಾವ ಕಾರಣಕ್ಕಾಗಿ ಮತ್ತು ಯಾರು ಹೆಚ್ಚು ಸಂಭ್ರಮಿಸುತ್ತಿದ್ದಾರೆ, ಸಿನಿಮಾ ಯಾವ ಕಾಲಘಟ್ಟದಲ್ಲಿ ಚಿತ್ರಣಗೊಂಡು ರಿಲೀಸ್ ಆಗುತ್ತದೆ ಇವೆಲ್ಲವನ್ನೂ ವಿಮರ್ಶೆಯ ಭಾಗವಾಗಿ ಚರ್ಚಿಸಬಹುದೇ? ಅಯ್ಯೋ, ಇವೆಲ್ಲ ವಿಮರ್ಶೆಯಲ್ಲಿ ನಿಷಿದ್ಧ ಅನ್ನುವವರು ಮುಂದೆ ಓದಿದರೆ ಅಷ್ಟು ಉಪಯೋಗವಾಗಲಾರದು. ಇತ್ತೀಚಿಗೆ, ಹೊಗಳಿಕೆಗೆ ಎಲ್ಲೆಯೇ ಇಲ್ಲ ಎಂಬಂತೆ ಪ್ರಚಾರ ಪಡೆಯುತ್ತಿರುವ ’ಕಾಂತಾರ’ ಕನ್ನಡ ಸಿನಿಮಾದಿಂದಲೇ ಈ ಚರ್ಚೆಯನ್ನು ಆರಂಭಿಸಬೇಕಾಗಿದೆ.

ಕಾಂತಾರ ಸಿನಿಮಾದ ಕಥೆಯನ್ನು ಸ್ಥೂಲವಾಗಿ ಸಂಕ್ಷಿಪ್ತಗೊಳಿಸಬಹುದಾದರೆ: ತಳಸಮುದಾಯದ ಯುವಕ ಶಿವ ಅತೀವ ಬಲಶಾಲಿ ಮತ್ತು ಭಾರತೀಯ ಸಿನಿಮಾಗಳಲ್ಲಿ ಎಂದಿನಂತೆ ಕಟ್ಟಿಕೊಡುವ ಮ್ಯಾಸ್ಕುಲೈನ್ ಹೀರೋ. ತಳ ಸಮುದಾಯದ ಜನ ಕಾಡಂಚಿನಲ್ಲಿ ಹೊಂದಿರುವ ಜಮೀನನ್ನು ತೆರವುಗೊಳಿಸಲು ಅರಣ್ಯಾಧಿಕಾರಿ ನಡೆಸುವ ಜಟಾಪಟಿಯ ಸಂಘರ್ಷವನ್ನು ಸಿನಿಮಾದ ಮುಕ್ಕಾಲು ಭಾಗ ಕಟ್ಟಿಕೊಟ್ಟು, ಉಳಿದ ಭಾಗದಲ್ಲಿ ಆ ಸಂಘರ್ಷವನ್ನೇ ಮ್ಯಾನಿಪುಲೇಟ್ ಮಾಡಿಬಿಡುತ್ತಾರೆ ನಿರ್ದೇಶಕ ರಿಷಭ್ ಶೆಟ್ಟಿ. ಆ ಪ್ರದೇಶದ ಫ್ಯೂಡಲ್ ಸಮುದಾಯದ ವ್ಯಕ್ತಿ ಮತ್ತು ತಳಸಮುದಾಯದವರ ಜಮೀನಿನ ಸಂಘರ್ಷವಾಗಿ ಅದು ತಿರುಗಿಬಿಡುತ್ತದೆ. ’ಶಿವ’ತಾಂಡವದ ಮೂಲಕ ಕಥೆ ಮುಂದುವರಿಯುತ್ತದೆ.

ಪ್ರಸ್ತುತದಲ್ಲಿರುವ ರಾಜಕೀಯಕ್ಕೆ ವಿಭಿನ್ನವಾದ ಕಾಲಘಟ್ಟದಲ್ಲಿ ಅಂದರೆ ಬಲಪಂಥೀಯ ಪಕ್ಷಗಳು ರಾಜಕೀಯ ಮೇಲುಗೈ ಪಡೆಯದ ಸಮಯದಲ್ಲಿ ಸಂಘ ಪರಿವಾರದ ಬ್ಲೂ ಅಯ್ಡ್ ಬಾಯ್, ಈ ಸಿನಿಮಾವನ್ನು ಯಾವ ರೀತಿ ತೆಗೆದಿರುತ್ತಿದ್ದರು ಎಂದು ಒಮ್ಮೆ ಊಹಿಸಿಕೊಳ್ಳಿ; ಬಹುಶಃ ಆಗ ಪೊಲೀಸ್, ಅರಣ್ಯ ಅಧಿಕಾರಿ ಮತ್ತು ಸರ್ಕಾರಿ ವ್ಯವಸ್ಥೆ ಕಡು ಭ್ರಷ್ಟವಾಗಿರುತ್ತಿದ್ದರು; ಬಡಜನರ ಮೇಲಿನ ಅವರ ದೌರ್ಜನ್ಯ ಎಲ್ಲೆ ಮೀರಿರುತ್ತಿತ್ತು. ಆಗ ಹೀರೋ ಫ್ಯೂಡಲ್ ಸಮುದಾಯದ ವ್ಯಕ್ತಿಯಾಗಿರುತ್ತಿದ್ದ. ಅವನು ತಳ ಸಮುದಾಯದವರ ಜೊತೆಗೂಡಿ, ಏಕಾಂಗಿಯಾಗಿ ಪೊಲೀಸರು, ಅರಣ್ಯ ಅಧಿಕಾರಿಗಳು ಮತ್ತು ವ್ಯವಸ್ಥೆಯ ವಿರುದ್ಧ ಹೋರಾಡಿ ಜನರ ಹಕ್ಕುಗಳನ್ನು ರಕ್ಷಿಸಿ ವಿಜೃಂಭಿಸಲ್ಪಡುತ್ತಿದ್ದ. 80-90ರ ದಶಕದಲ್ಲಿ ಧಾರಾಳವೆಂಬಂತೆ ಮೂಡಿಬರುತ್ತಿದ್ದ ’ಸಮರ ಸಿಂಹಾರೆಡ್ಡಿ’ಗಳ ಕಥೆಯಂತೆಯೇ ಇದೂ ಮೂಡಿಬರುತ್ತಿದ್ದ ಸಂಭವವೇ ಹೆಚ್ಚು!

ಇಂದು ರಾಜಕೀಯದ ದೆಸೆ ಬದಲಾಗಿದೆ. ತೀವ್ರ ಬಲಪಂಥೀಯ ಪಕ್ಷ ಅಧಿಕಾರ ಹಿಡಿದಿದೆ. ಹಿಂದೆಂದಿಗಿಂತಲೂ ಎಲ್ಲ ವಲಯಗಳಲ್ಲಿ ತನ್ನ ನಿಯಂತ್ರಣದ ಬಿಗಿಮುಷ್ಠಿಯನ್ನು ಸಾಧಿಸಿದೆ. ಮಂಡಲ್ ಕಮಿಷನ್ ವರದಿ ನಿಗದಿಪಡಿಸಿದ ಮೀಸಲಾತಿಯನ್ನು ಅನುಷ್ಠಾನಗೊಳಿಸುವಾಗ ಬೀದಿಯಲ್ಲಿ ದೊಂಬಿಯೆಬ್ಬಿಸಿದ ಸಂಘಪರಿವಾರದ ಮಂದಿ ಇಂದು ತಳ ಸಮುದಾಯವನ್ನು ಸೆಳೆಯುವ ತಂತ್ರವನ್ನು ನಾಜೂಕಾಗಿ ಮಾಡುತ್ತಿದ್ದಾರೆ. (ಕರ್ನಾಟಕದಲ್ಲಿಯೇ ಇತ್ತೀಚೆಗೆ ಬಿಜೆಪಿ ಸರ್ಕಾರ ಎಸ್‌ಸಿ-ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸಿತು ಮತ್ತು ಒಳಮೀಸಲಾತಿಯನ್ನು ಜಾರಿಗೆ ತರುವ ಮಾತನಾಡುತ್ತಿದೆ.) ಈ ಸಮಯದಲ್ಲಿ ತಳ ಸಮುದಾಯದ ವ್ಯಕ್ತಿಯನ್ನು ಹೀರೋ ಮಾಡಿ, ಆ ಸಮುದಾಯದ ಆಚರಣೆಗಳನ್ನು ಅಪ್ರಾಪ್ರಿಯೇಟ್ ಮಾಡಿಕೊಳ್ಳುವ ಸಿನಿಮಾಗಳು ಹೇಗೆ ರಾಜಕೀಯ ಪ್ರೇರಿತವಾಗಿವೆ ಎನ್ನುವುದನ್ನು ಗುರುತಿಸುವುದು ಕಷ್ಟವೇನಲ್ಲ. ಆದರೆ ಸಿನಿಮಾದ ನಿರೂಪಣೆ ಮಾತ್ರ ಎಂದಿಗೂ, ಎಂದೆಂದಿಗೂ ಬಲಪಂಥೀಯತೆಯ ರಾಜಕಾರಣಕ್ಕೆ ಸಹಾಯ ಮಾಡುವ ಶೈಲಿಯಲ್ಲಿಯೇ ಇರುತ್ತದೆ. 90ರ ದಶಕದಲ್ಲಿ ನಡೆಯುತ್ತಿರುವ ಈ ಸಿನಿಮಾ ಕತೆಯಲ್ಲಿ ಸಾಮುದಾಯಿಕವಾಗಿ ಹೋರಾಡುವಂತೆ ಕಥೆಯನ್ನು ಬೆಳೆಸುವ ಅವಕಾಶವಿತ್ತಾದರೂ, ಒಬ್ಬ ಬಲಶಾಲಿ ಯುವಕ ಎಲ್ಲರ ರಕ್ಷಕನಾಗುವ ನಿರೂಪಣೆ, ಸರ್ವಾಧಿಕಾರ ಬಲಗೊಳ್ಳುತ್ತಿರುವ 21ನೇ ಶತಮಾನದಲ್ಲಿ ಏಕೆ ಮೂಡಿ ಬರುತ್ತಿದೆ ಎಂಬುದನ್ನು ಪ್ರಶ್ನಿಸಿಕೊಳ್ಳಬಹುದು. ಅಷ್ಟೂ ಸಾಲದೆಂಬಂತೆ, ಆ ’ಸರ್ವಶಕ್ತ’ ನಾಯಕನಿಗೆ ಅಗೋಚರ ಶಕ್ತಿಯೊಂದು ಮೈಮೇಲೆ ಬರುವಂತೆ ಕಟ್ಟಿಕೊಡುವ ರೀತಿ, ಮಿಥ್ ಒಂದನ್ನು ಎಷ್ಟು ಸಾಧ್ಯವೋ ಅಷ್ಟು ಸರಳೀಕರಿಸಿ ಲಿಟರಲ್ ಆಗಿ ಅದನ್ನು ಅನ್ವಯಿಸುವುದನ್ನು ತೋರಿಸುತ್ತದೆ; ಮೌಢ್ಯಕ್ಕೆ ಜಾರುವ ಈ ಸಂಗತಿ ಕೂಡ ಬಲಪಂಥೀಯ ರಾಜಕಾರಣದ ಪಠ್ಯಪುಸ್ತಕದ ಒಂದು ಅಧ್ಯಾಯದಂತಿದೆ. ಮಿಥ್‌ಗಳು ದೇಶಕಾಲಗಳನ್ನು ದಾಟಿ ಬರುವ ಬಗ್ಗೆ ಕೆಲವು ಉದಾಹರಣೆಗಳನ್ನು ಮುಂದೆ ಚರ್ಚಿಸೋಣ.

ಆದರೆ ಯಾವುದೇ ಕಲೆಯನ್ನು ಅಂದಿನ ರಾಜಕೀಯ ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಕೆಲವೇ ಉದಾಹರಣೆಗಳ ಮೇಲ್ನೋಟದ ವಿಶ್ಲೇಷಣೆಯ ಮೂಲಕವೇ ಒಂದು ಸಣ್ಣ ಮಟ್ಟದಲ್ಲಿ ಗ್ರಹಿಸಬಹುದು. (ಇದರ ಬಗ್ಗೆ ಆಳವಾದ ಅಧ್ಯಯನಗಳು ಇದ್ದಾವು ಕೂಡ..) 1977ರಲ್ಲಿ ಕನ್ನಡ ಚಲನಚಿತ್ರರಂಗದಲ್ಲಿ ತಳಸಮುದಾಯಕ್ಕೆ ಸೇರಿದ ಪಾತ್ರ ಹೀರೋ (ನಟ ಕೂಡ ತಳಸಮುದಾಯದವರೇ) ಆಗಿ ’ಸನಾದಿ ಅಪ್ಪಣ್ಣ’ ಸಿನಿಮಾ ಬರುತ್ತದೆ. ಆಗ ರಾಜ್ಯದಲ್ಲಿ ಮುಖ್ಯಮಂತ್ರಿ ದೇವರಾಜ ಅರಸ್ ಅವರ ಸರ್ಕಾರವಿದ್ದ ಕಾಲ. ಬಸವಲಿಂಗಪ್ಪನಂತಹವರು ಮಂತ್ರಿಗಳಾಗಿ ಒಬಿಸಿ ಮತ್ತು ದಲಿತರ ಪ್ರಾತಿನಿಧ್ಯದ ಬಗ್ಗೆ ಚರ್ಚೆ ತೀವ್ರವಾಗಿದ್ದ ಕಾಲ. ಆ ಸಮಯದಲ್ಲಿ ಮೂಡಿದ ಸಿನಿಮಾದಲ್ಲಿ, ’ಮಂಗಳ ಕಾರ್ಯಗಳಿಗೆ ನಮ್ಮ ಕೈಲಿ ವಾದ್ಯ ನುಡಿಸಿ ಮಂಗಳಾರತಿಯನ್ನು ಕೊಡದೆ ನಡೆದುಕೊಳ್ಳುವ ಸಮಾಜ ಇದು’ ಎಂಬಂತಹ ಸಂಭಾಷಣೆಯನ್ನು ಬರೆಯಲು ಅಂದಿನ ರಾಜಕೀಯ ಅನುವುಮಾಡಿಕೊಟ್ಟಿತ್ತು. ಕರ್ನಾಟಕದಲ್ಲಿ ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿಯಂತಹ ತಳ ಸಮುದಾಯದ ನಾಯಕರೇ ಅಧಿಕಾರದ ಚುಕ್ಕಾಣಿ ಹಿಡಿದಾಗ ಸಾಂಸ್ಕೃತಿಕ ವಾತಾವರಣದಲ್ಲಿ ಇಂತಹ ಬೆಳವಣಿಗೆಗಳು ಏನಾದರೂ ಆದವೇ ಎಂಬುದು ಅಧ್ಯಯನದ ವಸ್ತುವಾಗಬಹುದು.

ಇದನ್ನೂ ಓದಿ : ‘ಕಾಂತಾರ’-ಒಳಗಿನದು, ಹೊರಗಿನದು – ಕೆ.ಫಣಿರಾಜ್

ರಾಜಕೀಯ ಕಲೆಯನ್ನು ಹೇಗೆ ಪ್ರಭಾವಿಸುತ್ತದೆ ಎಂಬುದಕ್ಕೆ ಇನ್ನೊಂದು ನಿಚ್ಚಳ ಉದಾಹರಣೆ ತಮಿಳುನಾಡು ಚಿತ್ರರಂಗ. ಬೇರೆಲ್ಲಾ ಚಿತ್ರರಂಗಗಳಿಗೆ ಹೋಲಿಸಿದಾಗ ಜಾತಿ ದೌರ್ಜನ್ಯಗಳನ್ನು ಪ್ರಶ್ನಿಸಿ ಮೂಡಿಬರುವ ಸಿನಿಮಾಗಳು ಇಲ್ಲಿ ಒಂದು ತೊಲ ಹೆಚ್ಚು. ಜಾತಿ ಪ್ರಶ್ನೆಯನ್ನು ಮುನ್ನಲೆಯಲ್ಲಿಟ್ಟುಕೊಂಡು ನಡೆದ ಚಳವಳಿಗಳು, ಅದರ ಜೊತೆಗೆ ತಳಕು ಹಾಕಿಕೊಂಡ ಭಾಷಾ ಚಳವಳಿ, ಆ ಚಳವಳಿಯಲ್ಲಿ ಭಾಗವಹಿಸಿದವರು ಅಧಿಕಾರ ಹಿಡಿದು ಸುದೀರ್ಘ ಕಾಲದವರೆಗೆ ಆಡಳಿತ ನಡೆಸಿದ್ದು, ವಿರೋಧ ಪಕ್ಷಗಳು ಕೂಡ ಅಂತಹ ರಾಜಕೀಯವನ್ನು ಮುಂದುವರಿಸಿದ್ದು, ಸಿನಿಮಾದಂತಹ ಕಲಾಪ್ರಕಾರದಲ್ಲಿ ಪ್ರಗತಿಪರ ಕಥಾವಸ್ತಗಳು ಮೂಡಲು ಕಾರಣವಾಯಿತು. ವಿವಿಧ ಕಾಲಘಟ್ಟಗಳ ಪಕ್ಷ ಮತ್ತು ಸಾಂಸ್ಕೃತಿಕ ರಾಜಕಾರಣಗಳು ಕಲೆಗಳ ಮೇಲೆ ಬೀರುವ ಪ್ರಭಾವವನ್ನು ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಮೂಡಿಬರುವ ಸಿನಿಮಾಗಳ ಪ್ಯಾಟರ್ನ್ ಮೂಲಕ ಖಂಡಿತಾ ಗುರುತಿಸಬಹುದಾಗಿದೆ. ಇತ್ತೀಚೆಗೆ ಸಾಲುಸಾಲಾಗಿ ಮೂಡಿಬರುತ್ತಿರುವ ಬಾಲಿವುಡ್ ಪ್ರೊಪೊಗಾಂಡ ಫಿಲ್ಮ್ ಗಳನ್ನು (ಕಾಶ್ಮೀರಿ ಫೈಲ್ಸ್, ರಾಮ್ ಸೇತು ಹೀಗೆ..) ಕೂಡ ಗಮನಿಸಿ. ಇವುಗಳಿಗೆ ವಿರುದ್ಧ ಎಂಬಂತೆ, ಡಾಮಿನೆಂಟ್ ಆದ ರಾಜಕಾರಣವನ್ನು ಪ್ರಶ್ನಿಸಿ ಬರುವ ಸಿನಿಮಾಗಳಿಗೆ ಪ್ರೇರಣೆಯಾಗುವ ರಾಜಕೀಯವನ್ನೂ ಅಂತಹ ಸಿನಿಮಾಗಳನ್ನು ನಿರ್ದೇಶಿಸುವವವರ, ನಿರ್ಮಿಸುವವರ ಹಿನ್ನೆಲೆಯಲ್ಲಿ ತಿಳಿಯುವ ಸಾಧ್ಯತೆಯಿದೆ. ಅವು ಸಾಮಾನ್ಯವಾಗಿ ಆಲ್ಟರ್ನೇಟ್ ಎಂಬಂತೆ ಸಣ್ಣಮಟ್ಟದಲ್ಲಿಯೇ ಉಳಿದುಕೊಂಡುಬಿಡುವ ಸಾಧ್ಯತೆ ಹೆಚ್ಚು.

ಕಾಂತಾರ ಸಿನಿಮಾವನ್ನು ತೀವ್ರ ಬಲಪಂಥೀಯ ಧೋರಣೆಯ ನಟರಿಂದ (ಉದಾ: ಕಂಗನಾ ರನಾವತ್) ಹಿಡಿದು, ಬಲಪಂಥೀಯ ರಾಜಕಾರಣಿಗಳ ತನಕ ಏಕೆ ಸೆಲೆಬ್ರೇಟ್ ಮಾಡುತ್ತಿದ್ದಾರೆ ಎಂಬುದನ್ನು ಇಂದು ವ್ಯಾಪಿಸಿರುವ ರಾಜಕೀಯ, ನಿರ್ದೇಶಕನ ರಾಜಕೀಯ ಧೋರಣೆ, ನಿರ್ಮಾಪಕರ ಚರಿತ್ರೆಯ ಮೂಲಕ ಅವಲೋಕಿಸುವುದು ಖಂಡಿತಾ ಮುಖ್ಯ.

ಇನ್ನು ಮಿಥ್ ಪ್ರಶ್ನೆ..

ಸಿನಿಮಾ ಅನ್ನೋದೇ ಒಂದು ಮಿಥ್ ಆಗಿರುತ್ತದೆ ಎಂಬ ಕಲ್ಪನೆ ಈ ಮಾಧ್ಯಮದ ಮಾಂತ್ರಿಕತೆಯ ಸೊಬಗನ್ನು ಹೇಳುತ್ತದೆ. ಅಂದರೆ ಯಾವುದೇ ಕಥೆಯನ್ನು ತನ್ನ ನಿರೂಪಣೆಯ ಮೂಲಕ ಅಷ್ಟು ಸಶಕ್ತವಾಗಿ ಜನರಲ್ಲಿ ನಂಬಿಸುವ ಮಾಧ್ಯಮ ಇದು; ಆದುದರಿಂದಲೇ ರಾಜಕೀಯ ವ್ಯವಸ್ಥೆ ಈ ಮಾಧ್ಯಮವನ್ನು ಯಾವಾಗಲೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹವಣಿಸುವುದು. ಆದರೆ ಇಲ್ಲಿ ಚರ್ಚಿಸಹೊರಟಿರುವ ಸಂಗತಿ ಒಂದು ಪ್ರದೇಶದ ಮಿಥ್‌ಅನ್ನು ಸಿನಿಮಾ ಒಳಗೊಳ್ಳುವ ಬಗೆ ಹೇಗಿರಬೇಕೆಂಬ ಬಗ್ಗೆ..

ದೇಶ ಕಾಲಗಳು ಚಲಿಸಿದಂತೆ ಮಿಥ್ ಒಂದರ ಅರ್ಥವೂ ಚಲಿಸುತ್ತಾ ಸಾಗುತ್ತದೆ. ಸಾವಿರಾರು ವರ್ಷಗಳ ಹಿಂದೆ ಯಾವುದೋ ಕಾವ್ಯದ ಮೂಲಕವೋ, ಕಥೆಯ ಮೂಲಕವೋ, ಉಳಿದುಕೊಂಡಿರುವ ಆಚರಣೆಯೊಂದರ ಮೂಲಕವೋ ಸಿಕ್ಕುವ ಮಿಥ್ ಅಥವಾ ಪುರಾಣ 21ನೆಯ ಶತಮಾನದಲ್ಲಿ ಅದೇ ಅರ್ಥವನ್ನು ಅಥವಾ ಅದೇ ಬಗೆಯ ನಂಬಿಕೆಯನ್ನು ಸಾಮಾನ್ಯವಾಗಿ ಉಳಿಸಿಕೊಳ್ಳುವುದಿಲ್ಲ. ಉಳಿಸಿಕೊಳ್ಳುವ ಅವಶ್ಯಕತೆ ಅಥವಾ ಅಗತ್ಯವೂ ಇಲ್ಲ. ಕುವೆಂಪು ಅಂತಹ ಮಹಾನ್ ವೈಚಾರಿಕ ಸಾಹಿತಿಗಳು ಒಂದು ಹೆಜ್ಜೆ ಮುಂದೆ ಹೋಗಿ 20ನೆಯ ಶತಮಾನಕ್ಕೆ ಕಟ್ಟಿಕೊಡುವ ರಾಮಾಯಣದಲ್ಲಿನ ಹಲವು ಕಥೆಗಳನ್ನು ಬದಲಿಸುತ್ತಾರೆ. ಅಲ್ಲಿ ಬರುವ ಶೂದ್ರ ತಪಸ್ವಿಯ ಕಥೆಯಲ್ಲಿ ಹೊಸ ವಿವೇಕವನ್ನೇ ಕಟ್ಟಿಕೊಡುತ್ತಾರೆ. ಬ್ರಾಹ್ಮಣ್ಯದ ಯಜಮಾನಿಕೆಯ ನಂಬಿಕೆಯನ್ನು ಬುಡಮೇಲು ಮಾಡುತ್ತಾರೆ. ಮತ್ತೊಂದು ಉದಾಹರಣೆ ನೋಡುವುದಾದರೆ, ಬುಡಕಟ್ಟೊಂದರಲ್ಲಿ ಹುಲಿಯನ್ನು ಪೂಜೆ ಮಾಡುವ ಸಂಪ್ರದಾಯವಿದೆ ಎಂದಿಟ್ಟುಕೊಳ್ಳಿ; ಅದನ್ನು ಇಂದಿಗೆ ಯಾರೂ ಲಿಟರಲ್ ಆಗಿ ಸಮೀಕರಿಸಿ ನೋಡುವುದಿಲ್ಲ. ಆ ಸಮುದಾಯದ ಆ ನಂಬಿಕೆ ಇಂದಿನ ಕಾಡಂಚಿನ ಸಮುದಾಯಗಳಲ್ಲಿ ಹುಲಿ ಸಂರಕ್ಷಣೆಗೆ ಅಥವಾ ಪರಿಸರ ಸಮತೋಲನಕ್ಕೆ ಹೇಗೆ ಸಹಾಯವಾಗಬಲ್ಲದು ಎಂಬಂತೆ (ಹಿಂದೆಯೂ ಅದು ಅದೇ ತರಹದ ನಂಬಿಕೆಗಳಾಗಿ ಬೆಳೆದಿರಬಹುದೇ ಎಂಬ ಪ್ರಶ್ನೆಗಳೊಂದಿಗೆ) ಅದನ್ನು ಅನ್ವಯಿಸಿ ನೋಡುವ ಕೆಲಸ ಪ್ರಗತಿಪರವಾದದ್ದು.

ಕಾಂತಾರ ಸಿನಿಮಾದಲ್ಲಿ ಅಂತಹುದೊಂದು ಮಿಥ್‌ಅನ್ನು ದೈವದ ಕುಣಿತದ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ. ರಾಜನೊಬ್ಬ ದೈವದ ನಂಬಿಕೆಯ ಮೇರೆಗೆ ತನ್ನ ಜಮೀನನ್ನು ತಳಸಮುದಾಯದ ಬಡಬಗ್ಗರಿಗೆ ದಾನಮಾಡಿರುವ ಪುರಾಣದ ಕಥೆಯದು. ಈ ಮಿಥ್ 1970ರ ದಶಕದಲ್ಲಿ ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನು ಸಿನಿಮಾ ನಿರ್ದೇಶಕ ಬಹಳ ಹಿಮ್ಮುಖ-ಪ್ರತಿಗಾಮಿ ರಾಜಕಾರಣದ ಹಿನ್ನೆಲೆಯಲ್ಲಿ ಕಟ್ಟಿಕೊಡುತ್ತಾರೆ. ಆ ರಾಜನ ವಂಶಸ್ಥನೊಬ್ಬ ತನ್ನ ಜಮೀನನ್ನು ವಾಪಸ್ ಕೇಳಿದಾಗ ಆತ ಕೋರ್ಟ್ ಮೆಟ್ಟಿಲ ಮೇಲೆ ರಕ್ತ ಕಾರಿ ಸಾಯುವಂತೆಯೂ, ಕೋಲ ಕಟ್ಟಿ ಕುಣಿಯುವ ವ್ಯಕ್ತಿ ದೈವ ಮೈಮೇಲೆ ಬಂದಾಗ, ಆ ಧನಿಕನಿಗೆ ಸವಾಲೆಸೆದು ಕಾಡಿನಲ್ಲಿ ಮಾಯವಾದ ಎಂಬಂತೆಯೂ ಕಟ್ಟಿಕೊಡಲಾಗಿದೆ. ವಿಚಾರವಂತ ನಿರ್ದೇಶಕ ಆಗಿದ್ದರೆ ಆ ಮಿಥ್‌ಅನ್ನು ರೂಪಕವಾಗಿ ಬಳಸಿ, ಇಡೀ ಸಮುದಾಯಕ್ಕೆ ಅದು ಸ್ಪೂರ್ತಿ ನೀಡಿರುವಂತೆ ಚಿತ್ರಿಸಿ, ಒಂದು ಕಾನೂನು ಹೋರಾಟದ ಮೂಲಕವೋ ಅಥವಾ ಮತ್ತಿನ್ಯಾವುದೇ ರೀತಿಯ ಚಳವಳಿಯ ಮೂಲಕವೋ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವ ಚಲನೆಯನ್ನು ಹಿಡಿದಿರುತ್ತಿದ್ದ. ಆ ಮೂಲಕ ಆ ರಾಜಮನೆತನದ ಧನಿಕ ಕುಳ ಸೋಲುಕಾಣುವಂತೆ ಮಾಡಬಹುದಿತ್ತು. 70ರ ದಶಕದ ಕಾಲಘಟ್ಟ ಅಂತಹ ಚಳವಳಿಗಳ ಕಾಲವಾಗಿತ್ತು ಕೂಡ. ಭೂಮಿ ಹಂಚಿಕೆ ಮತ್ತು ಒಡೆತನದ ಬಗ್ಗೆ ಸುಧಾರಣೆ ಕಂಡ ಮತ್ತು ಪ್ರಭುತ್ವ ಅದಕ್ಕೆ ಪ್ರತಿಕ್ರಿಯಿಸಿದ್ದ ರಾಜಕೀಯ ಕಾಲಘಟ್ಟವದು. ಆದರೆ ನಿರ್ದೇಶಕ, ಇದೇ ಅವೈಚಾರಿಕತೆಯನ್ನು ಸಿನಿಮಾದಲ್ಲಿ ಮುಂದುವರಿಯುವ ಮತ್ತು ಮುಖ್ಯವಾಗಿ ಬರುವ 90ರ ದಶಕದ ಕಥೆಗೂ ವಿಸ್ತರಿಸುತ್ತಾರೆ.

ಏಕೆಂದರೆ, ನಿರ್ದೇಶಕ ಕಥೆ ಹೇಳುತ್ತಿರುವುದು ಸರ್ವಾಧಿಕಾರ ಧೋರಣೆಯ ಸರ್ಕಾರವೊಂದು ಅಧಿಕಾರ ನಡೆಸುತ್ತಿರುವ ಸಮಯದಲ್ಲಿ; ಅಂತಹ ಸರ್ಕಾರದ ಮತ್ತು ಆಡಳಿತವನ್ನು ಏಕವ್ಯಕ್ತಿ ಪ್ರದರ್ಶನ ಮಾಡಿಕೊಂಡಿರುವ ಮುಖಂಡನ ಸಮರ್ಥಕನಾಗಿ; ಆದುದರಿಂದ ಕಾಂತಾರದ ಮುಖ್ಯ ಕಥೆಯಾದ – 90ರ ದಶಕದಲ್ಲಿ ನಡೆಯುವ ತಳಸಮುದಾಯದ ಭೂಸಂಘರ್ಷಕ್ಕೂ – ಅದೇ ಮಿಥ್‌ಅನ್ನು ಹಸಿಹಸಿಯಾಗಿ ಅನ್ವಯಿಸುತ್ತಾರೆ; ಏಕವ್ಯಕ್ತಿ ತೆಗೆದುಕೊಳ್ಳುವ ಪ್ರತೀಕಾರಕ್ಕೆ ದೈವ ಮೈಮೇಲೆ ಬರುವಂತೆ ತೋರಿಸುವುದು ಮೌಢ್ಯಕ್ಕೆ ಜಾರುತ್ತದೆ. ಆ ಮಿಥ್ ಸಮುದಾಯಕ್ಕೆ ಕಟ್ಟಿಕೊಡಬಹುದಿದ್ದ ತಿಳಿವನ್ನು, ಆ ಮೂಲಕ ಸಾಮುದಾಯಿಕವಾಗಿ ಕಟ್ಟಬಹುದಾಗಿದ್ದ ಹೋರಾಟವನ್ನು ಚಿತ್ರಿಸಿದ್ದರೆ ಇದು ಅತ್ಯುತ್ತಮ ಸಿನಿಮಾವಾಗುವ ಜಾಡು ಹಿಡಿಯುತ್ತಿತ್ತು. ಆದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಇಂದಿನ ಪ್ರಭುತ್ವ ಅದನ್ನು ನೀರೀಕ್ಷಿಸುವುದಿಲ್ಲ. ಅಂತಹ ಕಥೆಯನ್ನು ಸಂಭ್ರಮಿಸುವುದಿಲ್ಲ. ಬದಲಿಗೆ, ಏಕವ್ಯಕ್ತಿಯೊಬ್ಬ ಶೌರ್ಯ ಪ್ರದರ್ಶಿಸುವ, ಕುರುಡು ನಂಬಿಕೆಯ ಮೇಲೆ, ದೈವ ಹೇಳುವಂತೆ ನಡೆದುಕೊಳ್ಳಬೇಕೆಂಬುವ ಹಿಮ್ಮುಖ ಚಲನೆಯ ರಾಜಕಾರಣಕ್ಕೆ ಜೋತುಬೀಳುವಂತಹ ’ರೆಸೊಲ್ಯೂಷನ್’ ಕ್ಲೈಮ್ಯಾಕ್ಸ್‌ನಲ್ಲಿದೆ. ಹಿಂದುಳಿದ ಮತ್ತು ತಳಸಮುದಾಯದವರನ್ನು ಸೆಳೆಯುವ ’ಹೊಸ’ ಬಲಪಂಥೀಯ ರಾಜಕಾರಣದ ಜೊತೆಗೆ, ಕುರುಡುನಂಬಿಕೆಯನ್ನು ಕೂಡಿಸಿ ಹೆಣೆದ ಸಿನಿಮಾ, ಒಂದು ಸಮುದಾಯದ ಘನತೆಯ ಕಥೆಯಾಗುವುದಕ್ಕಿಂತಲೂ, ಸದ್ಯದ ರಾಜಕಾರಣಕ್ಕೆ ತಕ್ಕಂತೆ ಸ್ಪಂದಿಸುವ ಸಿನಿಮಾವಾಗಿ ಮೂಡಿಬಂದು ಅತಿ ದೊಡ್ಡ ಪ್ರಚಾರ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ : ’ಕಾಂತಾರ’: ಅವೈಚಾರಿಕ-ಪ್ರತಿಗಾಮಿತನದ ಸಮರ್ಥನೆ ಮತ್ತು ಸಂಸ್ಕೃತಿ-ರಾಜಕಾರಣದ ತಪ್ಪು ಅನ್ವಯಿಕೆ

ಜನಪದೀಯ ಮತ್ತು ತಳಸಮುದಾಯಗಳ ನಂಬಿಕೆ ಹಾಗೂ ಆಚರಣೆಗಳ ಬಗ್ಗೆ ಯಜಮಾನಿಕೆಯ ಬ್ರಾಹ್ಮಣ್ಯ ಹಲವು ಕಾಲಘಟ್ಟಗಳಲ್ಲಿ ತಳೆದ ಮತ್ತು ಅದನ್ನು ಬಿಂಬಿಸಿದ ಬಗೆಯನ್ನು ನೋಡಿದರೆ ಕಾಂತಾರ ಸಿನಿಮಾದಲ್ಲಿಯೂ ಅಡಗಿರುವ ಅಪಾಯವನ್ನು ಇನ್ನೂ ಸ್ಪಷ್ಟವಾಗಿ ಕಾಣಬಹುದಾಗಿದೆ. ಶಿಕ್ಷಣ ವ್ಯಾಪಿಸುತ್ತಿದ್ದ ಮೊದಲ ಘಟ್ಟದಲ್ಲಿ ಬ್ರಾಹ್ಮಣ್ಯ-ವೈದಿಕದ ಆಚರಣೆ ಮತ್ತು ನಂಬಿಕೆಗಳು ಶ್ರೇಷ್ಠವೆಂದೂ, ತಳಸಮುದಾಯಗಳ ಹಾಗೂ ಅವೈದಿಕ ಆಚರಣೆಗಳು ಮೌಢ್ಯವೆಂದೂ ನಂಬಿಸುವ ಕೆಲಸ ವ್ಯಾಪಕವಾಗಿ ನಡೆಯಿತು. ಸತ್ಯನಾರಾಯಣ ಪೂಜೆಯಲ್ಲಿರುವಷ್ಟೇ ಮೌಢ್ಯ ಮಾಟಮಂತ್ರ ಮೊದಲಾದ ಅವೈದಿಕ ಆಚರಣೆಗಳಲ್ಲಿದ್ದರೂ ಮೊದಲನೆಯದು ವ್ಯಾಪಕ ಮನ್ನಣೆ ಪಡೆದುಕೊಂಡಿತು. ಆದರೆ ಯಾವಾಗ ತಳಸಮುದಾಯಗಳು ತಮ್ಮ ಅನನ್ಯತೆಯನ್ನು ಕಂಡುಕೊಂಡು ವೈದಿಕ ನಂಬಿಕೆಗಳು ಮತ್ತು ಆಚರಣೆಗಳ ವಿರುದ್ಧ ಸಿಡಿದೆದ್ದು ತಮ್ಮ ನಂಬಿಕೆಗಳನ್ನು ಗಟ್ಟಿಯಾಗಿ ಪ್ರತಿಪಾದಿಸಲು ಪ್ರಾರಂಭಿಸಿದವೋ, ಆಗ ಎಲ್ಲವನ್ನೂ ತನ್ನ ಚೌಕಟ್ಟಿನೊಳಗೆ ತಂದುಕೊಳ್ಳುವ ವೈದಿಕ ಹುನ್ನಾರ ಚುರುಕು ಪಡೆಯಿತು. ವೈದಿಕದ ವಿರುದ್ಧ ಸಿಡಿದೆದ್ದ ಲಿಂಗಾಯತ-ಶರಣ ಚಳವಳಿ ಹಿಂದೂ ಧರ್ಮದ ಭಾಗವಾದಂತೆಯೇ ಮತ್ತು ಬುದ್ಧನನ್ನು ದಶಾವತಾರದ ಭಾಗ ಮಾಡಿಕೊಂಡಂತೆಯೇ; ಇದು ಹಲವು ಬುಡಕಟ್ಟು ಮತ್ತು ಹಿಂದುಳಿದ ಸಮುದಾಯಗಳ ಆಚರಣೆ, ನಂಬಿಕೆ, ಮಿಥ್‌ಗಳನ್ನು ಅಪ್ರಾಪ್ರಿಯೇಟ್ ಮಾಡಿಕೊಳ್ಳುವ ಕಡೆಗೂ ಮುಂದುವರಿಯಿತು. ಕಾಂತಾರ ಸಿನಿಮಾದಲ್ಲಿ ದಲಿತ ಸಮುದಾಯದ ಆಚರಣೆಯನ್ನು ಅಪ್ರಾಪ್ರಿಯೇಟ್ ಮಾಡಿಕೊಳ್ಳುವ ಭಾಗವಾಗಿಯೇ ಕಥಾಚೌಕಟ್ಟಿದೆ ಎಂಬ ಹಲವು ಚರ್ಚೆಗಳು ಮೂಡಿಬಂದಿವೆ.

ತಳಸಮುದಾಯಗಳು ತಮ್ಮ ನಂಬಿಕೆಗಳನ್ನು ಅಸರ್ಟ್ ಮಾಡುವಾಗ ಒಂದು ಎಚ್ಚರಿಕೆಯನ್ನು ಕಾಯ್ದುಕೊಂಡಿದ್ದವು. ಅವು ವೈದಿಕ ವ್ಯವಸ್ಥೆಯ ಭಾಗವಾಗಿರದ ತಮ್ಮ ಸಾಮುದಾಯಿಕ ನಂಬಿಕೆಗಳನ್ನು ಎಚ್ಚರದಲ್ಲಿ ಮುನ್ನೆಲೆಗೆ ತರುತ್ತಿದ್ದವು. ತಮ್ಮ ಐಡೆಂಟಿಟಿಗಳನ್ನು ಕಟ್ಟಿಕೊಳ್ಳುವುದಕ್ಕೆ ಅವು ಬಳಕೆಯಾಗುತ್ತಿದ್ದವೇ ಹೊರತು, ಮೌಢ್ಯಕ್ಕೆ ಜಾರದಂತೆ ಸಾಂವಿಧಾನಿಕತೆ, ವೈಚಾರಿಕತೆ, ವಿಜ್ಞಾನ ಮತ್ತು ಆಧುನಿಕತೆಗಳು ಅವರನ್ನು ಕಾಪಾಡುತ್ತಿದ್ದವು. ಆದರೆ ವೈದಿಕತೆ ತನ್ನೊಳಗೆ ಎಳೆದುಕೊಳ್ಳುವ ಎಲ್ಲ ಆಚರಣೆಗಳು ವಿಜ್ಞಾನ, ವೈಚಾರಿಕತೆ ಮತ್ತು ಸಂವಿಧಾನವನ್ನು ಧಿಕ್ಕರಿಸುವ ಮೌಢ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಇದನ್ನೇ ಕಾಂತಾರ ಬಿಂಬಿಸುತ್ತಿರುವಂತೆ ಭಾಸವಾಗುತ್ತದೆ.

ಈ ಚರ್ಚೆಗಳು ಒಂದೆಡೆಯಾದರೆ, ಚಲನಚಿತ್ರದಲ್ಲಿ ಮಹಿಳಾ ಪ್ರಧಾನ ಪಾತ್ರವನ್ನು ಚಿತ್ರಿಸಿರುವ ರೀತಿ ಸಿನಿಮಾ ನಿರ್ದೇಶಕರ ಪ್ರತಿಗಾಮಿತ್ವಕ್ಕೆ ಹಿಡಿದ ಕನ್ನಡಿ. ಮಹಿಳೆಯರನ್ನು ಹೀಗಳೆಯುವ ಸೆಕ್ಸಿಸ್ಟ್ ಜೋಕುಗಳು, ಮೊದಲ ಬಾರಿಗೆ ಕಂಡಾಗಲೇ ಸೊಂಟಕ್ಕೆ ಕೈಹಾಕಿ ದೌರ್ಜನ್ಯವೆಸಗುವ ಹೀರೋ, ಉಬ್ಬಲ್ಲು ತೋರಿಸಿ ಅವಮಾನಿಸುವ ಬಾಡಿ ಶೇಮಿಂಗ್ – ಈ ಎಲ್ಲವುಗಳನ್ನೂ ಸಾಮಾನ್ಯ ಎಂಬಂತೆ ಕಟ್ಟಿಕೊಡಲಾಗಿದೆ. ಅರಣ್ಯ ಇಲಾಖೆಯಲ್ಲಿ ನೌಕರಿ ಪಡೆಯುವ ಆ ಮಹಿಳಾ ಮುಖ್ಯ ಪಾತ್ರಕ್ಕೆ ಸ್ವಂತ ವ್ಯಕ್ತಿತ್ವವೇ ಇಲ್ಲವೇನೋ ಎಂಬಂತೆ ಅರಣ್ಯಾಧಿಕಾರಿಯೂ ದೂಷಿಸುವುದು, ಇತ್ತ ಪುರುಷ ಮುಖ್ಯ ಪಾತ್ರಧಾರಿಯೂ ಸೇರಿದಂತೆ ತನ್ನ ಸಮುದಾಯದವರೇ ನಿಂದಿಸುವಂತೆ ಕಟ್ಟಿಕೊಟ್ಟಿರುವ ರೀತಿ ಪಿಚ್ಚೆನಿಸುತ್ತದೆ. ಇಂತಹ ಎಲ್ಲಾ ಸಮಸ್ಯೆಗಳಿದ್ದರೂ, ತಳ ಸಮುದಾಯವನ್ನು ಸಿನಿಮಾ ಪ್ರತಿನಿಧಿಸಿದೆ ಎಂಬ ಕಾರಣಕ್ಕೆ ಕೆಲವರು ಮುಗ್ಧತೆಯಿಂದ ಸಿನಿಮಾವನ್ನು ಒಪ್ಪಿ ಪ್ರಚಾರ ಮಾಡುತ್ತಿದ್ದಾರೆ. ಇನ್ನು, ಒಂದು ಪ್ರದೇಶದ ಆಚರಣೆಗಳು ಸಿನಿಮಾದಲ್ಲಿ ಜಾಗ ಪಡೆದುರುವುದಕ್ಕೆ ಉತ್ಸುಕರಾಗಿ, ಪ್ರಾದೇಶಿಕತೆಯ ಉನ್ಮಾದದಿಂದ ಬಹುತೇಕರು ಸಿನಿಮಾವನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದರೆ, ನಿರ್ಮಾಪಕರು ಮತ್ತು ಈ ಸಿನಿಮಾದ ’ನಿಜ’ವಾದ ಆರಾಧಕರಾದ ಸಂಘ ಪರಿವಾರದವರು ರಾತ್ರಿ ಹಗಲು ಎಂಬಂತೆ ದುಡಿದು ಸಿನಿಮಾಕ್ಕೆ ಪ್ರಚಾರ ನೀಡುತ್ತಿದ್ದಾರೆ.

ಸಿನಿಮಾದ ಹಿಂದಿನ ರಾಜಕೀಯವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಮ್ಮ ಮೈಮೇಲೆ ವೈಚಾರಿಕ ಪ್ರಜ್ಞೆ ಬರಬೇಕೆಂದಿನಿಸುತ್ತೆ! ಅದು ದೈವ ಬಂದ ರೀತಿಯಲ್ಲಂತೂ ಬರುವುದಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇದು ಬಹಳ ಉತ್ತಮ ಮತ್ತು ವಿಮರ್ಶ ಕಾತ್ಮಕ ಬರಹವಾದರೂ ಬಲಪಂಥೀಯರ ವಿಜ್ರಂಭಿತ ಪ್ರಚಾರ ಅಬ್ಬರದಿಂದಾಗಿ ತಳ ಸಮುದಾಯದ ಅಘಾದ ಜನಸಂಖ್ಯೆಯು ಇದರ ರಾಜಕೀಯ ಒಳ ಮರ್ಮವನ್ನು ಅರ್ಥೈಸುವುದರಲ್ಲಿ ವಿಫಲಾಗಿದ್ದಾರೆ ಎಂದೆನಿಸುತ್ತದೆ …..ಬಹುಶಃ ನಮ್ಮಲ್ಲಿ ವಿವೇಕತ್ವದ ಕೊರತೆಯೂ ಕಾರಣವಾಗಿರಬಹುದೋ.. ಏನೋ…

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...